ನಾನು ಕಲಿತಿರುವ ಕೆಲವು ಮುಖ್ಯವಾದ ಸತ್ಯಾಂಶಗಳು

ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಶಿಷ್ಯಂದಿರಿಗೆ
Article Body: 

ನಾನು ಒಬ್ಬ ಕ್ರೈಸ್ತನಾಗಿ ಹೊಸದಾಗಿ ಹುಟ್ಟಿದ ನಂತರದ 47 ವರ್ಷಗಳ ಅವಧಿಯಲ್ಲಿ, ನನ್ನನ್ನು ಪ್ರೋತ್ಸಾಹಿಸಿ, ನನ್ನ ಬಾಳಿಗೆ ಸರಿಯಾದ ಮಾರ್ಗದರ್ಶನ ಮತ್ತು ಉದ್ದೇಶವನ್ನು ನೀಡಿರುವ ಕೆಲವು ಮುಖ್ಯವಾದ ಸತ್ಯಾಂಶಗಳನ್ನು ಕಲಿತಿದ್ದೇನೆ. ಅವುಗಳು ನಿಮ್ಮನ್ನೂ ಪ್ರೋತ್ಸಾಹಿಸಲಿ ಎಂಬ ನಿರೀಕ್ಷೆಯಿಂದ ಅವುಗಳನ್ನು ನಾನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

1. ದೇವರು ನಮ್ಮನ್ನೂ ಸಹ ಯೇಸುವನ್ನು ಪ್ರೀತಿಸಿದ ಹಾಗೆ ಪ್ರೀತಿಸುತ್ತಾನೆ

”ನೀನು ನನ್ನನ್ನು ಪ್ರೀತಿಸಿದಂತೆ ಅವರನ್ನೂ ಪ್ರೀತಿಸಿದ್ದೀ” (ಯೋಹಾನ 17:23) ಇದು ನಾನು ಸತ್ಯವೇದದಲ್ಲಿ ಕಂಡುಕೊಂಡಿರುವ ಅತೀ ದೊಡ್ಡ ಸತ್ಯವಾಗಿದೆ. ಇದು ಒಬ್ಬ ಭರವಸೆಯಿಲ್ಲದ, ನಿರುತ್ಸಾಹಿ ವಿಶ್ವಾಸಿಯಾಗಿದ್ದ ನನ್ನನ್ನು, ಯಾವಾಗಲೂ ದೇವರಲ್ಲಿ ಸಂಪೂರ್ಣ ಭರವಸೆ ಹೊಂದಿರುವ ಮತ್ತು ಕರ್ತನ ಆನಂದದಿಂದ ತುಂಬಿರುವ ವಿಶ್ವಾಸಿಯನ್ನಾಗಿ ಮಾರ್ಪಡಿಸಿದೆ.

ಸತ್ಯವೇದದಲ್ಲಿ ದೇವರು ನಮ್ಮನ್ನು ಪ್ರೀತಿಸುತ್ತಾನೆಂದು ತಿಳಿಸುವ ಅನೇಕ ವಚನಗಳಿವೆ, ಆದರೆ ಆ ಪ್ರೀತಿಯ ಪ್ರಮಾಣ ಎಷ್ಟಿದೆಯೆಂದು ನಮಗೆ ತೋರಿಸುವದು ಇದೊಂದೇ ವಚನ - ಆತನು ಯೇಸುವನ್ನು ಪ್ರೀತಿಸಿದ ಹಾಗೆಯೇ ನಮ್ಮನ್ನು ಪ್ರೀತಿಸುತ್ತಾನೆ.

ನಮ್ಮ ಪರಲೋಕದ ತಂದೆಯು ತನ್ನ ಮಕ್ಕಳನ್ನು ಪಕ್ಷಪಾತವಿಲ್ಲದೇ ಪ್ರೀತಿಸುವದರಿಂದ, ಆತನು ತನ್ನ ಚೊಚ್ಚಲು ಮಗನಾದ ಯೇಸುವಿಗೆ ಮಾಡಿದ ಎಲ್ಲವನ್ನೂ ತನ್ನ ಮಕ್ಕಳಾದ ನಮಗೆ ಮಾಡಲು ಖಂಡಿತವಾಗಿ ಸಿದ್ಧನಿದ್ದಾನೆ. ಆತನು ಯೇಸುವಿಗೆ ಒದಗಿಸಿದ ಸಹಾಯವನ್ನು ನಮಗೂ ಒದಗಿಸುತ್ತಾನೆ. ಆತನಲ್ಲಿ ಯೇಸುವಿಗಾಗಿ ಇದ್ದ ಕಾಳಜಿ ನಮಗಾಗಿಯೂ ಇದೆ. ಆತನು ಯೇಸುವಿನ ದೈನಂದಿನದ ವಿವರಗಳನ್ನು ಯೋಜಿಸಿದಂತೆಯೇ ನಮ್ಮ ಜೀವನಕ್ಕಾಗಿಯೂ ಯೋಜಿಸುತ್ತಾನೆ. ದೇವರಿಗೆ ತಿಳಿಯದಂತೆ ಯಾವ ಘಟನೆಯೂ ನಮಗೆ ಸಂಭವಿಸುವದಿಲ್ಲ. ಮುಂದೆ ನಡೆಯಲಿರುವ ಪ್ರತಿಯೊಂದು ಆಗು-ಹೋಗುವಿಗೂ ಬೇಕಾದ ಸಮಾಧಾನ ಆತನಲ್ಲಿದೆ.

ಹಾಗಾಗಿ ಇನ್ನೆಂದಿಗೂ ನಾವು ಭರವಸೆಯಿಲ್ಲದವರಾಗಿ ಇರುವ ಅಗತ್ಯವಿಲ್ಲ. ನಾವೂ ಸಹ ಭೂಲೋಕಕ್ಕೆ ಯೇಸುವು ಹೊಂದಿದ್ದಂತಹ ಖಚಿತವಾದ ಉದ್ದೇಶದೊಂದಿಗೆ ಕಳುಹಿಸಲ್ಪಟ್ಟಿದ್ದೇವೆ.

ಇವೆಲ್ಲಾ ನಿಮಗೂ ಸಹ ಅನ್ವಯಿಸುತ್ತವೆ - ಆದರೆ ನೀವು ಇದನ್ನು ನಂಬುವದಾದರೆ ಮಾತ್ರ.

ದೇವರ ವಾಕ್ಯವನ್ನು ನಂಬದಿರುವವನಿಗೆ ಯಾವ ಕಾರ್ಯವೂ ಜರಗಲಾರದು.

2. ದೇವರು ಪ್ರಾಮಾಣಿಕ ಜನರಲ್ಲಿ ಹರ್ಷಿಸುತ್ತಾರೆ

”ಆತನು ಬೆಳಕಿನಲ್ಲಿ ಇರುವಂತೆಯೇ ನಾವು ಬೆಳಕಿನಲ್ಲಿ ನಡೆದರೆ, ನಾವು ಒಬ್ಬರ ಸಂಗಡಲೊಬ್ಬರು ಅನ್ಯೋನ್ಯತೆಯಲ್ಲಿ ಇದ್ದೇವೆ” (1 ಯೋಹಾನ 1:7).

ಬೆಳಕಿನಲ್ಲಿ ನಡೆಯುವದು ಎಂದರೆ, ಮೊಟ್ಟಮೊದಲನೆಯದಾಗಿ ನಾವು ದೇವರಿಂದ ಏನನ್ನೂ ಮುಚ್ಚಿಡದೆ ಇರುವದು. ಇರುವದನ್ನು ಇರುವಂತೆಯೇ ಸಂಪೂರ್ಣವಾಗಿ ಆತನಿಗೆ ಹೇಳಬೇಕು. ಪ್ರಾಮಾಣಿಕತೆಯು ದೇವರ ಕಡೆಗೆ ನಾವು ಇಡಬೇಕಾದ ಮೊದಲ ಹೆಜ್ಜೆಯಾಗಿದೆ ಎಂದು ನಾನು ನಂಬಿದ್ದೇನೆ. ಅಪ್ರಾಮಾಣಿಕ ಜನರನ್ನು ದೇವರು ದ್ವೇಷಿಸುತ್ತಾನೆ. ಯೇಸುವು ಇತರ ಎಲ್ಲರಿಗಿಂತ ಹೆಚ್ಚಾಗಿ, ಕಪಟಿಗಳ ವಿರುದ್ಧವಾಗಿ ನುಡಿದಿದ್ದಾನೆ.

ವರು ನಮ್ಮಿಂದ ಮೊದಲು ಬಯಸುವದು ಪವಿತ್ರತೆ ಅಥವಾ ಪರಿಪೂರ್ಣತೆಯನ್ನು ಅಲ್ಲ, ಆದರೆ ಪ್ರಾಮಾಣಿಕತೆಯನ್ನು. ನಿಜವಾದ ಪವಿತ್ರತೆಯು ಇಲ್ಲಿಂದ ಆರಂಭವಾಗುತ್ತದೆ. ಈ ನೀರಿನ ಬುಗ್ಗೆಯಿಂದಲೇ ಬೇರೆಲ್ಲವೂ ಹರಿದು ಬರುತ್ತವೆ. ನಾವೆಲ್ಲರೂ ಬಹಳ ಸುಲಭವಾಗಿ ಮಾಡಬಹುದಾದ ಒಂದು ಕೆಲಸ ಯಾವುದೆಂದರೆ, ಕಪಟತನವನ್ನು ಬಿಟ್ಟುಬಿಡುವದು.

ಆದುದರಿಂದ ಪಾಪವನ್ನು ತಕ್ಷಣವೇ ದೇವರಿಗೆ ಅರಿಕೆ ಮಾಡಿರಿ. ಪಾಪ ತುಂಬಿದ ಆಲೋಚನೆಗಳಿಗೆ ಯಾವುದೇ ”ಸಭ್ಯವಾದ” ಹೆಸರನ್ನು ನೀಡಬೇಡಿರಿ. ನಿಜವಾಗಿ ವ್ಯಭಿಚಾರದಿಂದ ತುಂಬಿರುವ ನಿಮ್ಮ ಕಣ್ನೋಟವನ್ನು, ”ನಾನು ದೇವರ ಸೃಷ್ಟಿಯ ಸೌಂದರ್ಯವನ್ನು ಆನಂದಿಸುತ್ತಿದ್ದೆ, ಅಷ್ಟೇ” ಎಂದು ವಿವರಿಸಬೇಡಿರಿ. ”ಕೋಪ”ವನ್ನು ”ನೀತಿಯುತ ಕೋಪ” ಎಂದು ಕರೆಯಬೇಡಿರಿ.

ನಿಮ್ಮಲ್ಲಿ ಯಥಾರ್ಥತೆ ಇಲ್ಲವಾದರೆ, ನೀವು ಪಾಪದ ಮೇಲೆ ಜಯವನ್ನು ಎಂದಿಗೂ ಸಾಧಿಸಲಾರಿರಿ.

”ಪಾಪ”ವನ್ನು ”ತಪ್ಪು ಕೆಲಸ” ಎಂದು ಯಾವತ್ತೂ ಕರೆಯಬೇಡಿರಿ, ಏಕೆಂದರೆ ಯೇಸುವಿನ ರಕ್ತವು ನಿಮ್ಮ ಎಲ್ಲಾ ಪಾಪಗಳನ್ನು ತೊಳೆಯುತ್ತದೆ, ಆದರೆ ನಿಮ್ಮ ತಪ್ಪುಗಳನ್ನಲ್ಲ!! ಆತನು ಯಥಾರ್ಥರಲ್ಲದ ಜನರನ್ನು ಶುದ್ಧಿಗೊಳಿಸುವದಿಲ್ಲ.

ಕೇವಲ ಯಥಾರ್ಥ ಜನರಿಗೆ ನಿರೀಕ್ಷೆ ಇದೆ. ”ತನ್ನ ಪಾಪಗಳನ್ನು ಮುಚ್ಚಿಕೊಳ್ಳುವವನು ವೃದ್ಧಿಯಾಗನು” (ಜ್ಞಾನೋಕ್ತಿಗಳು 28:13).

ದೇವರ ರಾಜ್ಯವನ್ನು ಪ್ರವೇಶಿಸಲು ಧಾರ್ಮಿಕ ನಾಯಕರಿಗಿಂತ ವೇಶ್ಯೆಯರು ಮತ್ತು ಭ್ರಷ್ಟರಿಗೆ ಹೆಚ್ಚು ನಿರೀಕ್ಷೆ ಇದೆಯೆಂದು ಯೇಸುವು ಹೇಳಲು ಏನು ಕಾರಣ (ಮತ್ತಾಯ 21:31)? ಏಕೆಂದರೆ ವೇಶ್ಯೆಯರು ಮತ್ತು ಭ್ರಷ್ಟರು ಪವಿತ್ರತೆಯ ತೋರಿಕೆ ಮಾಡುವದಿಲ್ಲ.

ಸಭಾ ಸದಸ್ಯರು ತಮ್ಮಲ್ಲಿ ಯಾವುದೇ ಸಮಸ್ಯೆಗಳಿಲ್ಲವೆಂದು ಯೌವನಸ್ಥರಿಗೆ ತೋರಿಸಿಕೊಳ್ಳುವದು ಎಷ್ಟೋ ಯೌವನಸ್ಥರು ಸಭೆಗಳಿಂದ ಹೊರಹೋಗುವದಕ್ಕೆ ಕಾರಣವಾಗುತ್ತದೆ. ಆ ಯೌವನಸ್ಥರು, ”ಈ ಪವಿತ್ರ ಗುಂಪಿನ ಜನ ನಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವದಿಲ್ಲ!!” ಎಂದು ತಿಳಿಯುತ್ತಾರೆ. ಒಂದು ವೇಳೆ ಇದು ನಮ್ಮಲ್ಲಿ ನಿಜವಾಗಿದ್ದರೆ, ನಮ್ಮಲ್ಲಿ ಪಾಪಿಗಳನ್ನು ತನ್ನೆಡೆಗೆ ಸೆಳೆದ ಕ್ರಿಸ್ತನ ಪ್ರತಿರೂಪವಿಲ್ಲ.

3. ಸಂತೋಷವಾಗಿ ಕೊಡುವವನಲ್ಲಿ ದೇವರು ಹರ್ಷಿಸುತ್ತಾನೆ

”ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿಸುತ್ತಾನೆ” (2 ಕೊರಿಂಥ. 9:7)

ದೇವರು ಈ ಕಾರಣಕ್ಕಾಗಿ ಮನುಷ್ಯನಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟಿದ್ದಾರೆ - ಪರಿವರ್ತನೆ ಹೊಂದುವದಕ್ಕೆ ಮೊದಲು ಮತ್ತು ಹೊಂದಿದ ನಂತರ, ಮತ್ತು ಪವಿತ್ರಾತ್ಮನಿಂದ ತುಂಬಿಸಲ್ಪಟ್ಟ ನಂತರವೂ ಸಹ.

ನಾವು ದೇವರಂತೆ ಇದ್ದರೆ, ನಾವೂ ಸಹ ಇತರರನ್ನು ನಿಯಂತ್ರಿಸಲು ಅಥವಾ ಅವರ ಮೇಲೆ ಒತ್ತಡ ಹೇರಲು ಬಯಸುವದಿಲ್ಲ. ಅವರು ನಮಗಿಂತ ಭಿನ್ನರಾಗಿದ್ದು, ನಮಗಿಂತ ವಿಭಿನ್ನವಾದ ಅಭಿಪ್ರಾಯವನ್ನು ಇರಿಸಿಕೊಂಡು, ತಮ್ಮದೇ ಆದ ಗತಿಯಲ್ಲಿ ಆತ್ಮಿಕವಾಗಿ ಬೆಳೆಯುವ ಸ್ವಾತಂತ್ರ್ಯವನ್ನು ನಾವು ಅವರಿಗೆ ನೀಡುವೆವು.

ಎಲ್ಲಾ ರೀತಿಯ ಕಡ್ಡಾಯವೂ ಸೈತಾನನಿಂದ ಬರುವಂಥದ್ದು ಆಗಿದೆ.

ಪವಿತ್ರಾತ್ಮನು ಜನರನ್ನು ತುಂಬುತ್ತಾನೆ, ಆದರೆ ದೆವ್ವಗಳು ಜನರನ್ನು ತಮ್ಮ ಅಧೀನದಲ್ಲಿ ಇರಿಸಿಕೊಳ್ಳುತ್ತವೆ. ಇವೆರಡರಲ್ಲಿ ಇರುವ ವ್ಯತ್ಯಾಸ ಇಷ್ಟೇ: ಪವಿತ್ರಾತ್ಮನು ಯಾರನ್ನಾದರೂ ತುಂಬಿದಾಗ, ಆತನು ಆ ವ್ಯಕ್ತಿಗೆ ಇಷ್ಟವಿದ್ದಂತೆ ನಡೆಯುವ ಸ್ವಾತಂತ್ರ್ಯವನ್ನು ಕೊಡುತ್ತಾನೆ. ಆದರೆ ದೆವ್ವ ಹಿಡಿದ ಜನರು ತಮ್ಮ ಸ್ವಾತಂತ್ರ್ಯವನ್ನು ಕಳಕೊಂಡು, ಅವುಗಳ ಹಿಡಿತಕ್ಕೆ ಒಳಗಾಗುತ್ತಾರೆ. ಪವಿತ್ರಾತ್ಮನ ತುಂಬಿಸುವಿಕೆಯ ಫಲ ಶಮೆ ದಮೆ (ಆತ್ಮ-ಸಂಯಮ) ಆಗಿದೆ (ಗಲಾತ್ಯ. 5:22, 23). ಆದರೆ ದೆವ್ವದ ಹಿಡಿತದ ಫಲ, ಮನಸ್ಸಿನ ಹತೋಟಿ ಇಲ್ಲದಿರುವದು ಆಗಿದೆ.

ನಾವು ನೆನಪಿನಲ್ಲಿ ಇಡಬೇಕಾದದ್ದು ಏನೆಂದರೆ, ನಾವು ದೇವರಿಗಾಗಿ ಮಾಡುವ ಯಾವುದೇ ಕೆಲಸವನ್ನು ಇಷ್ಟಪಟ್ಟು, ಸಂತೋಷವಾಗಿ, ಉಚಿತವಾಗಿ ಮತ್ತು ಒತ್ತಾಯವಿಲ್ಲದೆ ಮಾಡದಿದ್ದಲ್ಲಿ, ಅದು ನಿರ್ಜೀವ ಕಾರ್ಯವಾಗಿದೆ. ನಾವು ಪ್ರತಿಫಲಕ್ಕಾಗಿ ಅಥವಾ ವೇತನಕ್ಕಾಗಿ ಮಾಡಿದ ದೇವರ ಯಾವದೇ ಕೆಲಸ ಸತ್ತಿರುವ (ಗಣನೆಗೆ ಬಾರದ) ಕಾರ್ಯ ಆಗಿರುತ್ತದೆ. ನಾವು ಬೇರೆಯವರ ಒತ್ತಡದಿಂದ ದೇವರಿಗೆ ಕೊಡುವ ಹಣಕ್ಕೆ ದೇವರ ದೃಷ್ಟಿಯಲ್ಲಿ ಯಾವ ಬೆಲೆಯೂ ಇಲ್ಲ!!

ಹರ್ಷದಿಂದ ದೇವರಿಗಾಗಿ ಮಾಡಿದ ಒಂದು ಚಿಕ್ಕ ಕಾರ್ಯಕ್ಕೆ, ಒತ್ತಾಯಕ್ಕಾಗಿ ಅಥವಾ ಮನಃಸಾಕ್ಷಿಯ ಸಮಾಧಾನಕ್ಕಾಗಿ ಮಾತ್ರ ಮಾಡಿದ ಒಂದು ಮಹತ್ಕಾರ್ಯಕ್ಕಿಂತ ಹೆಚ್ಚಿನ ಬೆಲೆಯನ್ನು ದೇವರು ನೀಡುತ್ತಾರೆ.

4. ಯೇಸುವನ್ನು ದೃಷ್ಟಿಸುವುದರ ಮೂಲಕ ಪವಿತ್ರತೆ ಉಂಟಾಗುತ್ತದೆ

”ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮ್ಮ ಮುಂದೆ ಇಟ್ಟಿರುವ ಓಟವನ್ನು .... ಓಡೋಣ”(ಇಬ್ರಿಯ 12:1, 2)

ದೈವಿಕ ಜೀವನದ ರಹಸ್ಯವು ಶರೀರಧಾರಿಯಾಗಿ ಬಂದ ಕ್ರಿಸ್ತನ ವ್ಯಕ್ತಿತ್ವದಲ್ಲಿ ಕಂಡುಬರುತ್ತದೆ (1 ತಿಮೋಥೆ 3:16 ಸ್ಪಷ್ಟವಾಗಿ ತಿಳಿಸುವಂತೆ) - ಮತ್ತು ಕ್ರಿಸ್ತನು ನಮ್ಮಂತೆ ಮಾಂಸಧಾರಿಯಾಗಿ ಬಂದನು ಎಂಬ ಸಿದ್ದಾಂತದಲ್ಲಿ ಅಲ್ಲ. ನಾವು ಪವಿತ್ರರಾಗುವದು ಆತನ ವ್ಯಕ್ತಿತ್ವದ ಮುಖಾಂತರವಾಗಿಯೇ ಹೊರತು, ಆತನು ಶರೀರಧಾರಿಯಾಗಿ ಬಂದನು ಎಂಬ ಸಿದ್ದಾಂತವನ್ನು ವಿಶ್ಲೇಷಿಸುವದರಿಂದ ಅಲ್ಲ.

ಸ್ವಂತ ಶ್ರಮದಿಂದ ಎಷ್ಟೇ ಪ್ರಯಾಸಪಟ್ಟರೂ ಪಾಪಪೂರಿತ ಹೃದಯವನ್ನು ಪವಿತ್ರಗೊಳಿಸಲು ಸಾಧ್ಯವಿಲ್ಲ. ಅದು ಆಗಬೇಕಾದರೆ, ದೇವರು ನಮ್ಮೊಳಗೆ ಕಾರ್ಯ ಮಾಡಬೇಕು.

ಪವಿತ್ರತೆ (ನಿತ್ಯಜೀವ) ದೇವರ ಒಂದು ವರವಾಗಿದೆ ಮತ್ತು ಇದನ್ನು ನೇಮನಿಷ್ಠೆಗಳನ್ನು ಅನುಸರಿಸುವದರಿಂದ ಹೊಂದಲು ಸಾಧ್ಯವಿಲ್ಲ (ರೋಮಾ. 6:23). ಸ್ವತಃ ದೇವರೇ ನಮ್ಮನ್ನು ಸಂಪೂರ್ಣವಾಗಿ ಶುದ್ಧೀಕರಿಸುತ್ತಾನೆ (ಪವಿತ್ರರನ್ನಾಗಿ ಮಾಡುತ್ತಾನೆ) ಎಂದು ಸತ್ಯವೇದವು ತಿಳಿಸುತ್ತದೆ - (1 ಥೆಸಲೋನಿಕ. 5:23ರಲ್ಲಿ ಇದನ್ನು ಬಹಳ ಸರಳವಾಗಿ, ಯಾರಿಗೂ ತಪ್ಪು ಗ್ರಹಿಕೆ ಆಗದಂತೆ ತಿಳಿಸಲಾಗಿದೆ). ಆದಾಗ್ಯೂ ಪವಿತ್ರರಾಗುವ ಸಲುವಾಗಿ ಅಸಂಖ್ಯಾತ ವಿಶ್ವಾಸಿಗಳು ತಮ್ಮನ್ನು ತಾವು ನಿರಾಕರಿಸುತ್ತಾ ಒದ್ದಾಡುತ್ತಿದ್ದಾರೆ. ವ್ಯತಿರಿಕ್ತವಾಗಿ ಅವರು ಫರಿಸಾಯರಾಗುತ್ತಿದ್ದಾರೆ.

”ನಿಜವಾದ ಪವಿತ್ರತೆ”ಯನ್ನು (ಎಫೆಸ. 4:24) ಯೇಸುವಿನಲ್ಲಿ ನಂಬಿಕೆ ಇರಿಸುವದರಿಂದ ಹೊಂದಬಹುದು - ಬೇರೆ ಮಾತುಗಳಲ್ಲಿ ಹೇಳುವದಾದರೆ, ”ಯೇಸುವಿನ ಮೇಲೆ ದೃಷ್ಟಿ ಇಡುವದರಿಂದ”.

ಒಂದು ವೇಳೆ ನಾವು ನಮ್ಮ ದೃಷ್ಟಿಯನ್ನು ಒಂದು ಸಿದ್ದಾಂತದ ಕಡೆಗೆ ಮಾತ್ರ ಹರಿಸುತ್ತಾ ಇದ್ದರೆ, ನಾವು ಫರಿಸಾಯರಾಗುತ್ತೇವೆ. ನಮ್ಮ ಸಿದ್ದಾಂತವು ಶುದ್ದವಾದಷ್ಟು, ನಾವು ದೊಡ್ಡ ಫರಿಸಾಯರಾಗುತ್ತೇವೆ.

ನಾನು ಈ ಲೋಕದಲ್ಲಿ ಭೇಟಿಯಾಗಿರುವ ಅತಿದೊಡ್ಡ ಫರಿಸಾಯರು, ಸ್ವ-ಪ್ರಯತ್ನದಿಂದ ಪವಿತ್ರತೆಯ ಅತೀ ಉನ್ನತ ಮಟ್ಟವನ್ನು ತಲಪುವ ಬಗ್ಗೆ ಭೋದಿಸುವವರೇ ಆಗಿದ್ದಾರೆ!! ಕೊನೆಗೆ ನಾವೂ ಅವರಂತೆ ಆಗದಂತೆ ನಾವು ಎಚ್ಚರ ವಹಿಸಬೇಕು!

ಯೇಸುವನ್ನು ದೃಷ್ಟಿಸಿ ನೋಡುವುದರ ಅರ್ಥವನ್ನು ಇಬ್ರಿಯ 12:2ರಲ್ಲಿ ಬಹಳ ಚೆನ್ನಾಗಿ ವಿವರಿಸಲಾಗಿದೆ. ಮೊದಲನೆಯದಾಗಿ, ಪ್ರತಿನಿತ್ಯ ”ಶಿಲುಬೆಯನ್ನು ತಾಳ್ಮೆಯಿಂದ ಸಹಿಸಿಕೊಂಡು” ಈ ಲೋಕದಲ್ಲಿ ಜೀವಿಸಿದವನನ್ನು - ”ಸರ್ವ ವಿಷಯಗಳಲ್ಲಿ ನಮ್ಮ ಹಾಗೇ ಶೋಧನೆಗೆ ಗುರಿಯಾದರೂ ಪಾಪರಹಿತನಾಗಿದ್ದವನನ್ನು” - ನಾವು ನೋಡಬೇಕು (ಇಬ್ರಿಯ 4:15). ಆತನು ನಮ್ಮ ಮುಂದಾಗಿ ಹೋಗಿರುವಾತನು (ಇಬ್ರಿಯ 6:20), ಮತ್ತು ನಾವು ಅವನ ಹೆಜ್ಜೆಯಲ್ಲಿ ಓಡಬೇಕು. ಎರಡನೆಯದಾಗಿ, ಈಗ ಆತನು ”ತಂದೆಯ ಬಲಗಡೆ ಇರುವಾತನು”, ನಮಗೋಸ್ಕರ ಬೇಡಿಕೊಳ್ಳುವಾತನು ಮತ್ತು ನಮ್ಮನ್ನು ಎಲ್ಲಾ ಕಷ್ಟ ಶೋಧನೆಗಳಿಂದ ಬಿಡಿಸಲು ಆತನು ಸಿದ್ಧನಾಗಿದ್ದಾನೆ, ಎಂದು ನಾವು ತಿಳಿಯಬೇಕು.

5. ನಾವು ನಿರಂತರವಾಗಿ ಪವಿತ್ರಾತ್ಮನಿಂದ ತುಂಬಿಸಲ್ಪಡಬೇಕು

”ಪವಿತ್ರಾತ್ಮನಿಂದ ತುಂಬಿಸಲ್ಪಡುತ್ತಾ ಇರ್ರಿ” (ಎಫೆಸ. 5:18 ಭಾವಾನುವಾದ).

ಒಂದು ವೇಳೆ ನಾವು ನಿರಂತರವಾಗಿ ಪವಿತ್ರಾತ್ಮನಿಂದ ತುಂಬಿಸಲ್ಪಡದೇ ಹೊದರೆ, ನಾವು ದೇವರು ಬಯಸುವ ಹಾಗೆ ಕ್ರಿಸ್ತೀಯ ಜೀವನವನ್ನು ಜೀವಿಸಲು ಸಾಧ್ಯವಿಲ್ಲ. ನಾವು ಆತ್ಮನಿಂದ ಅಭಿಷೇಕಿಸಲ್ಪಡದೇ ಮತ್ತು ಆತನ ಪರಮ ವರಗಳನ್ನು ಸ್ವೀಕರಿಸದೇ ದೇವರ ಸೇವೆಯನ್ನು ಮಾಡಬೇಕಾದ ರೀತಿಯಲ್ಲಿ ಮಾಡಲು ಸಾಧ್ಯವಿಲ್ಲ. ಸ್ವತಃ ಯೇಸುವಿಗೂ ಅಭಿಷೇಕದ ಅವಶ್ಯಕತೆ ಇತ್ತು.

ಪವಿತ್ರಾತ್ಮನು ಬಂದಿರುವದು ನಮ್ಮ ವೈಯುಕ್ತಿಕ ಜೀವಿತದಲ್ಲಿ ಹಾಗೂ ನಮ್ಮ ಸೇವೆಯಲ್ಲಿ ನಮ್ಮನ್ನು ಯೇಸುವಿನ ಸಾರೂಪ್ಯಕ್ಕೆ ಬದಲಾಯಿಸಲಿಕ್ಕಾಗಿ (2 ಕೋರಿಂಥ. 3:18 ನೋಡಿರಿ).

ನಮ್ಮ ನಡತೆಯಲ್ಲಿ ನಾವು ಕ್ರಿಸ್ತನ ಸಾರೂಪ್ಯವನ್ನು ಹೊಂದುವ ಸಲುವಾಗಿ ಮತ್ತು ಯೇಸುವು ಸೇವೆ ಮಾಡಿದ ಹಾಗೆ ನಾವೂ ಸಹ ಸೇವೆ ಮಾಡಲು ನಮ್ಮನ್ನು ಸಜ್ಜುಗೊಳಿಸಲಿಕ್ಕಾಗಿ ದೇವರು ನಮ್ಮನ್ನು ಪವಿತ್ರಾತ್ಮನಿಂದ ತುಂಬಿಸುತ್ತಾರೆ.

ನಾವು ಯೇಸುವು ಹೊಂದಿದ್ದ ಸೇವೆಯನ್ನು ಹೊಂದಿಲ್ಲ, ಹಾಗಾಗಿ ಯೇಸುವು ತನ್ನ ಸೇವೆಯಲ್ಲಿ ಮಾಡಿದ್ದನ್ನು ನಾವು ಮಾಡಲು ಅಶಕ್ತರಾಗಿದ್ದೇವೆ. ಆದರೆ ಯೇಸುವು ದೇವರ ಸೇವೆಗಾಗಿ ಸಿದ್ದನಾದ ಹಾಗೆ ನಾವು ಸಹ - ನಮ್ಮ ಸ್ವಂತ ಸೇವೆಯ ಪೂರೈಕೆಗಾಗಿ - ಸಂಪೂರ್ಣವಾಗಿ ಸಜ್ಜುಗೊಳ್ಳಬಹುದು.

ನಮ್ಮ ಮೂಲಕ ಜೀವಕರವಾದ ನೀರಿನ ಹೊಳೆಗಳು ಹರಿಯಲು ನಾವು ಒದಗಿಸುವ ಅಂಶ, ಕೇವಲ ತೀವ್ರವಾದ ಹಂಬಲ ಮತ್ತು ಅದರ ಜೊತೆಗೆ ನಂಬಿಕೆ (ಯೋಹಾನ 7:37-39).

ನಾವು ಆತ್ಮನ ವರಗಳನ್ನು ಹೊಂದಬೇಕಾದರೆ, ಅವುಗಳಿಗಾಗಿ ನಾವು ಯಥಾರ್ಥವಾಗಿ ಹಂಬಲಿಸಬೇಕು (1 ಕೋರಿಂಥ. 14:1). ಇಲ್ಲವಾದರೆ ನಾವು ಅವುಗಳನ್ನು ಎಂದಿಗೂ ಹೊಂದಲಾರೆವು.

ಪವಿತ್ರಾತ್ಮನ ವರವಿಲ್ಲದ ಒಂದು ಸಭೆಯು ಜೀವವಿದ್ದರೂ ಕಿವುಡ, ಕುರುಡ, ಮೂಕ ಮತ್ತು ಕುಂಟನಾಗಿರುವ ಒಬ್ಬ ವ್ಯಕ್ತಿಯಂತೆ - ಯಾವ ಉಪಯೋಗಕ್ಕೂ ಬಾರದ್ದು ಆಗಿರುತ್ತದೆ.

6. ಶಿಲುಬೆಯ ಹಾದಿಯೇ ಜೀವನದ ದಾರಿಯು

”ನಾವು ಆತನೊಡನೆ ಸತ್ತಿದ್ದರೆ, ಆತನೊಡನೆ ಜೀವಿಸುವೆವು” (2 ತಿಮೊಥೆಯ. 2:11).

ದೇವರು ನಮಗಾಗಿ ಸಿದ್ಧಗೊಳಿಸಿರುವ ಮತ್ತು ಅನುಮತಿಸಿರುವ ಪ್ರತಿಯೊಂದು ಪರಿಸ್ಥಿತಿಯಲ್ಲಿ ನಾವು ನಮ್ಮ ಸ್ವಾರ್ಥ ಜೀವಿತದ ಸಾವನ್ನು ಸ್ವೀಕರಿಸದೇ, ನಮ್ಮ ದೇಹದಲ್ಲಿ ಯೇಸುವಿನ ಜೀವವು ಪ್ರಕಟಗೊಳ್ಳಲು ಸಾಧ್ಯವಿಲ್ಲ (2 ಕೊರಿಂಥ. 4:10,11).

ನಾವು ಪಾಪವನ್ನು ಜಯಿಸಬೇಕಾದರೆ, ಪ್ರತಿಯೊಂದು ಸಂದರ್ಭದಲ್ಲಿ ನಾವು ”ಪಾಪದ ಪಾಲಿಗೆ ಸತ್ತವರಾಗಿದ್ದೇವೆ,” ಎಂದು ಪರಿಗಣಿಸಬೇಕು (ರೋಮಾ. 6:11). ನಾವು ಜೀವಿಸಬೇಕಾದರೆ, ”ಪವಿತ್ರಾತ್ಮನ ಮೂಲಕ ದೇಹದ ದುರಭ್ಯಾಸಗಳನ್ನು ನಾಶಮಾಡಬೇಕು” (ರೋಮಾ. 8:13). ಪ್ರತಿದಿನದ ಬಾಳ್ವೆಯಲ್ಲಿ ಪವಿತ್ರಾತ್ಮನು ನಮ್ಮನ್ನು ಯಾವಾಗಲೂ ಶಿಲುಬೆಯ ಕಡೆಗೆ ನಡೆಸುವನು.

ದೇವರು ನಮ್ಮೆಡೆಗೆ ”ದಿನವೆಲ್ಲಾ ಕೊಲೆಗೆ ಗುರಿಯಾಗುವ”(ರೋಮಾ. 8:36) ಮತ್ತು ”ಯೇಸುವಿನ ನಿಮಿತ್ತ ಯಾವಾಗಲೂ ಮರಣಕ್ಕೆ ಒಪ್ಪಿಸಲ್ಪಡುವ” (2 ಕೊರಿಂಥ. 4:11) ಅನೇಕ ಸನ್ನಿವೇಷಗಳನ್ನು ಕಳುಹಿಸುತ್ತಾನೆ. ಜೀವನದಲ್ಲಿ ಇಂತಹ ಸಂದರ್ಭಗಳು ಬಂದಾಗ ನಾವು ”ಯೇಸುವು ಅನುಭವಿಸಿದ ಮರಣವನ್ನು” ಒಪ್ಪಿಕೊಳ್ಳಲೇ ಬೇಕು ಮತ್ತು ಆ ಮೂಲಕ ನಮ್ಮಲ್ಲಿ ಯೇಸುವಿನ ಜೀವವು ಕಾಣಿಸಲು ಸಾಧ್ಯವಾಗುತ್ತದೆ.

7. ಮನುಷ್ಯನ ಅಭಿಪ್ರಾಯಗಳು ಕಸದ ಬುಟ್ಟಿಗೆ ತಕ್ಕವು

”ಉಸಿರು ಮೂಗಿನಲ್ಲಿರುವ ತನಕ ಬದುಕುವ ನರಮನುಷ್ಯನನ್ನು ಬಿಟ್ಟು ಬಿಡಿರಿ; ಅವನು ಯಾವ ಗಣನೆಗೆ ಬಂದಾನು?” (ಯೆಶಾಯ 2:22)

ಒಬ್ಬ ಮನುಷ್ಯನ ಮೂಗಿನ ಸೊಳ್ಳೆಯಿಂದ ಉಸಿರು ಹೊರಟುಹೋದರೆ, ಆತನು ನೆಲದಲ್ಲಿ ಹರಡುವ ಧೂಳಿನ ಸಮನಾಗುತ್ತಾನೆ. ಹಾಗಿರುವಾಗ ನಾವು ಮಾನವನ ಅಭಿಪ್ರಾಯಗಳಿಗೆ ಏಕೆ ಪ್ರಾಮುಖ್ಯತೆ ನೀಡಬೇಕು?

ಮಾನವರ ಎಲ್ಲಾ ಅಭಿಪ್ರಾಯಗಳು ಸಂಪೂರ್ಣವಾಗಿ ಕಸದ ಬುಟ್ಟಿಗೆ ತಕ್ಕವು ಎಂದು ನಮಗೆ ಚೆನ್ನಾಗಿ ಮನವರಿಕೆಯಾಗದಿದ್ದರೆ, ನಾವು ಕರ್ತನ ಸೇವೆಯನ್ನು ಪರಿಣಾಮಕಾರಿಯಾಗಿ ಮಾಡಲಾಗದು. ಕೇವಲ ಒಬ್ಬ ವ್ಯಕ್ತಿಯನ್ನು ಒಲಿಸುವ ತವಕ ನಮ್ಮಲ್ಲಿದ್ದರೂ, ನಾವು ಕ್ರಿಸ್ತನ ದಾಸರಾಗಲು ಸಾಧ್ಯವಿಲ್ಲ (ಗಲಾತ್ಯ. 1:10).

ದೇವರ ಅಭಿಪ್ರಾಯಗಳಿಗೆ ಹೋಲಿಸುವದಾದರೆ ಮನುಷ್ಯನ ಎಲ್ಲಾ ಅಭಿಪ್ರಾಯಗಳು ನಿಷ್ಪ್ರಯೋಜಕವಾಗಿವೆ. ಇದನ್ನು ಮನವರಿಕೆ ಮಾಡಿಕೊಂಡ ವ್ಯಕ್ತಿಯು ತನ್ನ ಜೀವನ ಮತ್ತು ಸೇವೆಯಲ್ಲಿ ದೇವರನ್ನು ಮಾತ್ರ ಮೆಚ್ಚಿಸಲು ಪ್ರಯತ್ನಿಸುತ್ತಾನೆ. ಆತನು ಎಂದಿಗೂ ಜನರ ಒಳ್ಳೆಯ ಅಭಿಪ್ರಾಯ ಅಥವಾ ಸಮರ್ಥನೆಯನ್ನು ಪಡೆಯಲು ಪ್ರಯತ್ನಿಸುವದಿಲ್ಲ.

8. ಈ ಲೋಕವು ಶ್ರೇಷ್ಠವೆಂದು ಪರಿಗಣಿಸುವ ಎಲ್ಲವೂ ದೇವರಿಗೆ ಅಸಹ್ಯಕರವಾಗಿದೆ

”ಮನುಷ್ಯರಲ್ಲಿ ಶ್ರೇಷ್ಠವೆನಿಸಿಕೊಳ್ಳುವಂಥದು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿದೆ” (ಲೂಕ 16:15)

ಲೋಕದಲ್ಲಿ ಶ್ರೇಷ್ಠವೆಂದು ಪರಿಗಣಿಸಲಾಗುವಂಥದ್ದು ದೇವರ ದೃಷ್ಟಿಯಲ್ಲಿ ಬೆಲೆ ಇಲ್ಲದ್ದಾಗಿರುವದು ಮಾತ್ರವಲ್ಲ, ಅದು ಆತನಿಗೆ ನಿಜವಾಗಿ ಅಸಹ್ಯವಾಗಿದೆ.

ಜಗತ್ತಿನ ಎಲ್ಲಾ ರೀತಿಯ ಗೌರವವು, ದೇವರಿಗೆ ಅಸಹ್ಯಕರವಾಗಿ ಇರುವದರಿಂದ, ಇದು ನಮಗೂ ಸಹ ಅಸಹ್ಯಕರವಾಗಿ ಇರಬೇಕು.

ಹಣವನ್ನು ಲೋಕದ ಎಲ್ಲಾ ಜನರು ಬಹಳ ಉಪಯುಕ್ತವೆಂದು ತಿಳಿಯುತ್ತಾರೆ. ದೇವರು ತಿಳಿಸುವದು ಏನೆಂದರೆ, ಹಣವನ್ನು ಪ್ರೀತಿಸುವವರು ಮತ್ತು ಐಶ್ವರ್ಯಕ್ಕಾಗಿ ತವಕಿಸುವವರು ಒಂದಲ್ಲ ಒಂದು ದಿನ ಈ ಕೆಳಗಿನ ಪರಿಣಾಮಗಳಿಗೆ ಗುರಿಯಾಗುವರು, ಎಂದು (1 ತಿಮೋಥೆ 6:9,10).

  • ಅ) ಅವರು ಶೋಧನೆಗೆ ಗುರಿಯಾಗುವರು;
  • ಆ) ಅವರು ಕುತಂತ್ರಕ್ಕೆ ಸಿಲುಕುವರು;
  • ಇ) ಅವರು ಹುಚ್ಚು ಆಸೆಗಳಿಗೆ ಬಲಿಯಾಗುವರು;
  • ಈ) ಅವರು ಹಾನಿಕರ ದುರಾಶೆಗಳಿಗೆ ಸಿಕ್ಕಿಬೀಳುವರು;
  • ಉ) ಅವರು ನಷ್ಟಕ್ಕೆ ಗುರಿಯಾಗುವರು;
  • ಊ) ಅವರು ವಿನಾಶದ ಕಡೆಗೆ ನುಗ್ಗುವರು;
  • ಋ) ಅವರು ನಂಬಿಕೆಯಿಂದ ತಪ್ಪಿಹೋಗುವರು;
  • ಋ) ಅವರು ಅನೇಕ ವೇದನೆಗಳಿಗೆ ತುತ್ತಾಗುವರು.
  • ನಾನು ವಿಶ್ವಾಸಿಗಳಿಗೆ ಈ ಸ್ಥಿತಿ ಬರುವದನ್ನು ಎಲ್ಲಾ ಕಡೆ ಮತ್ತೆ ಮತ್ತೆ ಕಂಡಿದ್ದೇನೆ.

    ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಕರ್ತನ ಪ್ರವಾದನಾ ವಾಕ್ಯವು ಬಹಳ ಅಪರೂಪವಾಗಿ ಕೇಳಿಬರುವದಕ್ಕೆ ಕಾರಣಗಳಲ್ಲಿ ಒಂದು ಮುಖ್ಯವಾದುದು, ಅಧಿಕಾಂಶ ಬೋಧಕರು ಹಣದ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ಯೇಸುವು ತಿಳಿಸಿದಂತೆ, ಹಣದ ವಿಷಯದಲ್ಲಿ ಅಪನಂಬಿಗಸ್ಥರಾಗಿ ಇರುವವರಿಗೆ ದೇವರ ನಿಜವಾದ ಐಶ್ವರ್ಯ (ಅವುಗಳಲ್ಲಿ ಪ್ರವಾದನಾ ವಾಕ್ಯವು ಒಂದಾಗಿದೆ) ಕೊಡಲ್ಪಡುವದಿಲ್ಲ (ಲೂಕ 16:11). ಹೀಗಾಗಿ ಸಭಾಕೂಟಗಳಲ್ಲಿ ಮತ್ತು ಸಮ್ಮೇಳನಗಳಲ್ಲಿ ತುಂಬಾ ಬೇಸರಿಕೆ ನೀಡುವ ಬೋಧನೆಗಳನ್ನು ಮತ್ತು ಸಾಕ್ಷಿಗಳನ್ನು ಕೇಳುತ್ತೇವೆ.

    9. ನಮಗೆ ಕೇಡನ್ನು ಸ್ವತಃ ನಾವೇ ಮಾಡದ ಹೊರತು ಇನ್ಯಾರೂ ಮಾಡಲು ಸಾಧ್ಯವಿಲ್ಲ

    ”ನೀವು ಒಳ್ಳೇದನ್ನೇ ಮಾಡುವುದರಲ್ಲಿ ಆಸಕ್ತರಾಗಿದ್ದರೆ ನಿಮಗೆ ಕೇಡು ಮಾಡುವವರು ಯಾರಿದ್ದಾರೆ?” (1 ಪೇತ್ರ 3:13).

    ದೇವರು ಎಷ್ಟು ಬಲಶಾಲಿಯೆಂದರೆ, ಆತನು ತನ್ನ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ತನ್ನನ್ನು ಪ್ರೀತಿಸುವವರ ಹಿತಕ್ಕಾಗಿ - ಅಂದರೆ, ಈ ಲೋಕದ ತಮ್ಮ ಜೀವಿತದಲ್ಲಿ ಆತನ ಚಿತ್ತದ ಹೊರತಾಗಿ ಯಾವುದೇ ಆಕಾಂಕ್ಷೆಯನ್ನೂ ಹೊಂದಿರದವರಿಗಾಗಿ - ಪ್ರತಿಯೊಂದು ಕಾರ್ಯವನ್ನು ಅನುಕೂಲ ಮಾಡುತ್ತಾನೆ (ರೋಮ. 8:28). ಈ ವಾಗ್ದಾನವು ಸ್ವಾರ್ಥದ ಮಹತ್ವಕಾಂಕ್ಷೆಗಳನ್ನು ಹೊಂದಿರುವ ವ್ಯಕ್ತಿಗೆ ಅನ್ವಯಿಸುವದಿಲ್ಲ. ಆದರೆ ನಾವು ದೇವರ ಚಿತ್ತವನ್ನು ಸಂಪೂರ್ಣವಾಗಿ ಸ್ವೀಕರಿಸಿದರೆ, ನಾವು ನಮ್ಮ ಭೂಲೋಕದ ಜೀವಿತದ ಪ್ರತೀ ಕ್ಷಣವೂ ಈ ವಾಗ್ದಾನದ ಹಕ್ಕನ್ನು ಹೊಂದಬಹುದು. ನಮಗೆ ಯಾವ ಕೇಡೂ ಬರಲಾರದು.

    ಇತರರು ನಮಗೆ ಮಾಡುವ ಎಲ್ಲಾ ಕಾರ್ಯಗಳು - ಒಳ್ಳೆಯದೋ ಅಥವಾ ಕೆಟ್ಟದ್ದೋ, ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವಾದದ್ದೋ - ರೋಮ. 8:28ರ ಮೂಲಕ ಸಾಗಿಬರುವಾಗ ಪರೀಕ್ಷಿಸಲ್ಪಟ್ಟು ನಮ್ಮಲ್ಲಿ ಅತ್ಯುತ್ತಮವಾದ ಕ್ರಿಯೆಯನ್ನು ಮಾಡುತ್ತವೆ - ಹಂತ ಹಂತವಾಗಿ ನಮ್ಮಲ್ಲಿ ಕ್ರಿಸ್ತನ ಸ್ವಾರೂಪ್ಯವನ್ನು ಹೆಚ್ಚಿಸುತ್ತವೆ (ರೋಮ. 8:29) - ಇದು ದೇವರು ನಮಗಾಗಿ ಮಾಡಿರುವ ಒಳ್ಳೆಯ ಯೋಜನೆಯಾಗಿದೆ. ಈ ವಚನದಲ್ಲಿ ಹೇಳಲಾಗಿರುವ ಷರತ್ತುಗಳಿಗೆ ವಿಧೇಯರಾಗುವ ಎಲ್ಲರಲ್ಲೂ ಈ ಜಾಲಿಯು (’ಫಿಲ್ಟರ್’) ತಪ್ಪದೆ ಅತ್ಯುತ್ತಮ ಕಾರ್ಯವನ್ನು ಮಾಡುತ್ತದೆ.

    ಮುಂದೆ, 1 ಪೇತ್ರ 3:13 ಹೀಗೆ ಹೇಳುತ್ತದೆ, ನೀವು ”ಒಳ್ಳೇದನ್ನೇ ಮಾಡುವುದರಲ್ಲಿ ಆಸಕ್ತರಾಗಿದ್ದರೆ” ನಿಮಗೆ ಕೇಡು ಮಾಡುವವರು ಯಾರಿದ್ದಾರೆ? ದೌರ್ಬಗ್ಯವೇನೆಂದರೆ, ಈ ವಾಕ್ಯವು ರೋಮಾ. 8:28ರಷ್ಟು ಚೆನ್ನಾಗಿ ಪ್ರಚಾರವಾಗಿಲ್ಲ. ಈಗ ನಾವು ಇದನ್ನು ಜನಪ್ರಿಯಗೊಳಿಸಬೇಕು.

    ಅಷ್ಟೇ ಅಲ್ಲ, ಈ ವಾಗ್ದಾನವು ಎಲ್ಲಾ ಜನರನ್ನು ಒಳ್ಳೆಯ ಹೃದಯದಿಂದ ನೋಡಲು ಪ್ರಯಾಸಪಡುವವರಿಗೆ ಮಾತ್ರ ಅನ್ವಯಿಸುತ್ತದೆ. ಇಂಥಹ ವಿಶ್ವಾಸಿಗಳಿಗೆ ಯಾವ ದೆವ್ವಗಳಿಂದಲೂ, ಮಾನವರಿಂದಲೂ ಕೇಡು ಉಂಟಾಗದು.

    ಹಾಗಾದರೆ, ಒಬ್ಬ ವಿಶ್ವಾಸಿಯು ತನಗೆ ಇತರರು ಕೇಡು ಮಾಡಿದ್ದಾರೆಂದು ದೂರುವಾಗ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿರುವದು ಏನೆಂದರೆ, ತಾನು ದೇವರನ್ನು ಪ್ರೀತಿಸುತ್ತಿಲ್ಲ ಮತ್ತು ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟಿಲ್ಲ ಮತ್ತು ಇತರರಿಗೆ ಒಳ್ಳೆಯದನ್ನು ಮಾಡುವುದರಲ್ಲಿ ತನಗೆ ವಿಶೇಷ ಆಸಕ್ತಿ ಇಲ್ಲವೆಂದು. ಇಲ್ಲವಾದಲ್ಲಿ, ಮತ್ತೊಬ್ಬರು ಆತನಿಗೆ ಏನೇ ಮಾಡಿದರೂ, ಅದರಿಂದ ಆತನಿಗೆ ಒಳ್ಳೆಯದು ಮಾತ್ರ ಆಗುತ್ತಿತ್ತು, ಮತ್ತು ಆತನಲ್ಲಿ ಯಾವ ದೂರುಗಳೂ ಇರುತ್ತಿರಲಿಲ್ಲ.

    ನಿಜವಾಗಿ, ನಿಮಗೆ ಕೇಡು ಉಂಟುಮಾಡಲು ಒಬ್ಬನಿಂದ ಮಾತ್ರ ಸಾಧ್ಯವಿದೆ, ಅದು ಸ್ವತಃ ನಿಮ್ಮಿಂದಲೇ - ಇತರರೊಡನೆ ನಿಮ್ಮ ಅಪನಂಬಿಗಸ್ಥಿಕೆ ಮತ್ತು ತಪ್ಪು ಮನೋಭಾವಗಳ ಮೂಲಕ.

    ನನಗೆ ಈಗ 66 ವರ್ಷ ವಯಸ್ಸಾಗಿದೆ ಮತ್ತು ನನ್ನ ಇಡೀ ಜೀವನದಲ್ಲಿ ನನಗೆ ಕೇಡು ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ ಎಂದು ನಾನು ನಿಜವಾಗಿ ಹೇಳಬಲ್ಲೆ. ಅನೇಕರು ಹಾಗೆ ಮಾಡಲು ಪ್ರಯತ್ನಿಸಿದ್ದಾರೆ, ಆದರೆ ಅವರು ಮಾಡಿದ ಎಲ್ಲವೂ ನನ್ನ ಒಳ್ಳೇದಕ್ಕಾಗಿ ಮತ್ತು ನನ್ನ ಸೇವೆಯ ಒಳಿತಿಗಾಗಿ ನಡೆದವು. ನಾನು ಅಂಥಹ ಜನರಿಗಾಗಿಯೂ ಸಹ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ನನ್ನನ್ನು ವಿರೋಧಿಸಿದ ಹೆಚ್ಚಿನವರು ”ವಿಶ್ವಾಸಿಗಳು” ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ, ಆದರೆ ಅವರು ದೇವರ ಮಾರ್ಗವನ್ನು ಅರ್ಥ ಮಾಡಿಕೊಂಡಿಲ್ಲ. ನಾನು ನನ್ನ ಈ ಸಾಕ್ಷಿಯನ್ನು ನಿಮಗೆ ಕೊಡುತ್ತಿರುವದು ನಿಮ್ಮ ಸಾಕ್ಷಿಯೂ ಸಹ - ಯಾವಾಗಲೂ - ಇದೇ ಆಗಿರಲಿ ಎಂದು ನಿಮ್ಮನ್ನು ಪ್ರೋತ್ಸಾಹಿಸಲಿಕ್ಕಾಗಿ.

    10. ನಮ್ಮಲ್ಲಿ ಪ್ರತಿಯೊಬ್ಬನಿಗಾಗಿ ದೇವರ ಒಂದು ಪರಿಪೂರ್ಣ ಯೋಜನೆ ಇದೆ

    ”ನಾವು ಆತನ ನಿರ್ಮಾಣ; ಸತ್ಕಾರ್ಯಗಳನ್ನು ಮಾಡುವುದಕ್ಕಾಗಿಯೇ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟೆವು. ನಾವು ಸತ್ಕಾರ್ಯಗಳನ್ನು ನಡಿಸುವವರಾಗಿ ಬದುಕಬೇಕೆಂದು ದೇವರು ನಮ್ಮನ್ನು ಮೊದಲೇ ನೇಮಿಸಿದನು” (ಎಫೆಸ. 2:10).

    ಬಹಳ ಹಿಂದೆ ದೇವರು ನಮ್ಮನ್ನು ಕ್ರಿಸ್ತನಲ್ಲಿ ಆರಿಸಿಕೊಂಡಾಗ, ನಾವು ನಮ್ಮ ಇಹಲೋಕದ ಜೀವಿತದಲ್ಲಿ ಏನು ಮಾಡಬೇಕೆಂಬುದನ್ನು ಸಹ ಯೋಜಿಸಿದನು. ಈಗ ಆ ಯೋಜನೆ ಏನೆಂದು ತಿಳಕೊಂಡು, ದಿನದಿಂದ ದಿನಕ್ಕೆ ಅದನ್ನು ಪಾಲಿಸುವದು ನಮ್ಮ ಕರ್ತವ್ಯವಾಗಿದೆ. ದೇವರ ಯೋಜನೆಗಿಂತ ಉತ್ತಮವಾದುದನ್ನು ಸ್ವತಃ ನಾವೇ ಸಿದ್ಧಪಡಿಸಲು ಎಂದಿಗೂ ಸಾಧ್ಯವಾಗದು.

    ನಾವು ಬೇರೊಬ್ಬರು ಮಾಡುವದರ ಅನುಕರಣೆ ಮಾಡಬಾರದು, ಏಕೆಂದರೆ ದೇವರ ಯೋಜನೆಯು ಆತನ ಪ್ರತಿಯೊಬ್ಬ ಮಗನಿಗೂ (ಅಥವಾ ಮಗಳಿಗೂ) ಬೇರೆ ಬೇರೆಯಾಗಿದೆ. ಉದಾಹರಣೆಗೆ, ಯೋಸೆಫನಿಗಾಗಿ ದೇವರ ಯೋಜನೆ ಆತನು ಐಗುಪ್ತದ ಅರಮನೆಯಲ್ಲಿ ತನ್ನ ಜೀವಿತದ ಕೊನೆಯ 80 ವರ್ಷಗಳನ್ನು ಬಹು ನೆಮ್ಮದಿಯಲ್ಲಿ ಜೀವಿಸುವದು ಆಗಿತ್ತು. ಆದರೆ ಇನ್ನೊಂದೆಡೆ, ಮೋಶೆಗಾಗಿದ್ದ ದೇವರ ಯೋಜನೆ, ಆತನು ಐಗುಪ್ತದ ಅರಮನೆಯನ್ನು ಬಿಟ್ಟು, ತನ್ನ ಕೊನೆಯ 80 ವರ್ಷಗಳನ್ನು ಬಹಳ ಕಷ್ಟಗಳ ನಡುವೆ - ಕಾಡು ಪ್ರದೇಶದಲ್ಲಿ - ಜೀವಿಸುವದಾಗಿತ್ತು. ಮೋಶೆಯು ಸುಖ ಭೋಗಗಳನ್ನು ಪ್ರೀತಿಸಿ ಯೋಸೆಫನ ಮಾದರಿಯನ್ನು ಅನುಸರಿಸಿದ್ದರೆ, ತನ್ನ ಜೀವಿತಕ್ಕಾಗಿದ್ದ ದೇವರ ಚಿತ್ತವನ್ನು ಕಳಕೊಳ್ಳುತ್ತಿದ್ದನು.

    ಹಾಗೆಯೇ ಇಂದು, ಒಬ್ಬ ಸಹೋದರನು ತನ್ನ ಪೂರ್ಣ ಜೀವಿತವನ್ನು ಅಮೇರಿಕಾ ದೇಶದಲ್ಲಿ ಸುಖವಾಗಿ ಕಳೆಯುವದನ್ನು ದೇವರು ಬಯಸಬಹುದು, ಮತ್ತು ಹಾಗೆಯೇ ಇನ್ನೊಬ್ಬ ಸಹೋದರನು ಉತ್ತರ ಭಾರತದ ಬಿಸಿಲು-ಧೂಳಿನ ನಡುವೆ ತನ್ನ ಇಡೀ ಜೀವಿತವನ್ನು ಶ್ರಮಿಸುತ್ತಾ ಕಳೆಯುವದನ್ನು ದೇವರು ಬಯಸಬಹುದು. ಆ ಇನ್ನೊಬ್ಬ ಸಹೋದರನೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುವದು ಮತ್ತು ಆತನಲ್ಲಿ ಅಸೂಯೆ ಪಡುವದು ಮತ್ತು ಆತನನ್ನು ಟೀಕಿಸುವುದರ ಬದಲಾಗಿ ದೇವರು ಪ್ರತಿಯೊಬ್ಬನಿಗಾಗಿ ಒಂದು ಯೋಜನೆ ಇರಿಸಿದ್ದಾನೆಂದು ನಮಗೆ ಮನದಟ್ಟಾಗಬೇಕು.

    ದೇವರು ಭಾರತದಲ್ಲಿ ತನ್ನ ಸೇವೆಗಾಗಿ ನನ್ನನ್ನು ಕರೆದಿದ್ದಾನೆಂದು ನನಗೆ ಗೊತ್ತಿದೆ. ಆದರೆ ಇದೇ ಕರೆ ಇತರರಿಗೆ ಬರಲಿ ಎಂದು ನಾನು ಯಾವತ್ತೂ ಬೇಡಿಕೊಂಡಿಲ್ಲ.

    ನಾವು ನಮ್ಮ ಸ್ವಂತ ಗೌರವವನ್ನು ಹುಡುಕುವದಾದರೆ ಅಥವಾ ಹಣ ಇಲ್ಲವೇ ನೆಮ್ಮದಿಯನ್ನು ಪ್ರೀತಿಸುವದಾದರೆ ಅಥವಾ ಮನುಷ್ಯನ ಒಪ್ಪಿಗೆಯನ್ನು ಬಯಸುವುದಾದರೆ, ನಾವು ದೇವರ ಚಿತ್ತವನ್ನು ತಿಳಿಯಲು ಎಂದಿಗೂ ಸಾಧ್ಯವಾಗದು.

    11. ದೇವರನ್ನು ಚೆನ್ನಾಗಿ ಅರಿಯುವದೇ ಬಲದ ರಹಸ್ಯವಾಗಿದೆ

    ”ತಮ್ಮ ದೇವರನ್ನು ಅರಿತವರೋ ದೃಢಚಿತ್ತರಾಗಿ ಕೃತಾರ್ಥರಾಗುವರು” (ದಾನಿಯೇಲ. 11:32).

    ಇಂದು ನಾವು ದೇವರನ್ನು ಮತ್ತೊಬ್ಬರ ಮೂಲಕ ಅರಿಯುವದು ಆತನಿಗೆ ಇಷ್ಟವಿಲ್ಲ. ದೇವರು ಒಬ್ಬ ಎಳೆಯ ವಿಶ್ವಾಸಿಯೂ ಸಹ ತನ್ನನ್ನು ವೈಯಕ್ತಿಕವಾಗಿ ಅರಿಯಲಿ ಎಂದು ಆಹ್ವಾನಿಸುತ್ತಾನೆ (ಇಬ್ರಿಯ. 8:11). ದೇವರನ್ನು ಮತ್ತು ಯೇಸು ಕ್ರಿಸ್ತನನ್ನು ವೈಯಕ್ತಿಕವಾಗಿ ತಿಳಿಯುವದೇ ನಿತ್ಯ ಜೀವವು ಎಂದು ಯೇಸುವು ವಿವರಿಸಿದನು (ಯೋಹಾನ 17:3). ಇದು ಪೌಲನ ಜೀವನದ ಅತಿ ದೊಡ್ಡ ಅಭಿಲಾಷೆಯಾಗಿತ್ತು ಮತ್ತು ನಮ್ಮ ಶ್ರೇಷ್ಠ ಅಭಿಲಾಷೆಯೂ ಇದೇ ಆಗಿರಬೇಕು (ಫಿಲಿಪ್ಪಿ. 3:10).

    ದೇವರನ್ನು ನಿಕಟವಾಗಿ ತಿಳಿಯಲು ಬಯಸುವವರು, ಯಾವಾಗಲೂ ಆತನ ಮಾತನ್ನು ಆಲಿಸಬೇಕು. ಯೇಸುವು ಹೇಳಿದಂತೆ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತನ್ನು ಕೇಳುವದು ಮನುಷ್ಯನು ಆತ್ಮಿಕವಾಗಿ ಬದುಕಲು ಇರುವ ಒಂದೇ ದಾರಿಯಾಗಿದೆ (ಮತ್ತಾಯ 4:4). ದೇವರ ಪಾದದ ಬಳಿಯಲ್ಲಿ ಕುಳಿತು ಆತನ ಮಾತನ್ನು ಕೇಳುವದು ಕ್ರಿಸ್ತೀಯ ಜೀವಿತದಲ್ಲಿ ಬಹು ಮುಖ್ಯವೆಂದು ಸಹ ಆತನು ಹೇಳಿದನು (ಲೂಕ 10:42).

    ನಾವೂ ಸಹ ಯೇಸುವಿನ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು - ಅದು ಪ್ರತಿನಿತ್ಯ ಮುಂಜಾನೆಯಿಂದ ದಿನವಿಡೀ ತಂದೆಯ ಮಾತನ್ನು ಕೇಳುವದಾಗಿದೆ (ಯೆಶಾಯ 50:4); ಮತ್ತು ರಾತ್ರಿ ಮಲಗಿದ್ದಾಗಲೂ ಗಮನವಿಟ್ಟು ಕೇಳಲು ಜಾಗರೂಕರಾಗಿ ಇರಬೇಕು - ಆಗ ಒಂದು ವೇಳೆ ನಾವು ರಾತ್ರಿಯಲ್ಲಿ ಎಚ್ಚರಗೊಂಡರೆ, ”ಕರ್ತನೇ, ಅಪ್ಪಣೆಯಾಗಲಿ, ನಿನ್ನ ದಾಸನು ಕಾದಿದ್ದಾನೆ” ಎಂದು ಹೇಳಬಹುದು (1 ಸಮುವೇಲ. 3:10).

    ನಾವು ದೇವರನ್ನು ಅರಿತಾಗ ಎಲ್ಲಾ ಪರಿಸ್ಥಿತಿಗಳಲ್ಲೂ ಜಯ ಹೊಂದುತ್ತೇವೆ - ಏಕೆಂದರೆ ನಮ್ಮನ್ನು ಎದುರಿಸುವ ಒಂದೊಂದು ತೊಂದರೆಗೂ ಪರಿಹಾರ ದೇವರಲ್ಲಿ ಇದೆ - ಮತ್ತು ನಾವು ಆತನ ಮಾತನ್ನು ಗಮನವಿಟ್ಟು ಕೇಳಿದರೆ, ಆ ಪರಿಹಾರವೇನೆಂದು ಆತನು ತಿಳಿಸುತ್ತಾನೆ.

    12. ಹೊಸ ಒಡಂಬಡಿಕೆಯು ಹಳೆಯ ಒಡಂಬಡಿಕೆಗಿಂತ ಬಹಳ ಶ್ರೇಷ್ಠವಾದದ್ದು

    ”ಯೇಸುವು ಉತ್ತಮವಾದ ಒಡಂಬಡಿಕೆಗೆ ಮಧ್ಯಸ್ಥನಾಗಿದ್ದಾನೆ” (ಇಬ್ರಿಯ 8:6).

    ಹಲವು ಕ್ರೈಸ್ತರಿಗೆ ಹಳೆಯ ಮತ್ತು ಹೊಸ ಒಡಂಬಡಿಕೆಗಳ ನಡುವೆ ಬಹಳ ಮಹತ್ವದ ಒಂದು ವ್ಯತ್ಯಾಸ ಇದೆಯೆಂದು ತಿಳಿದಿಲ್ಲ (ಇಬ್ರಿಯ 8:8-12). ಯೇಸುವು ಮೋಶೆಗಿಂತ ಎಷ್ಟು ಅಧಿಕ ಉತ್ತಮನೋ, ಹೊಸ ಒಡಂಬಡಿಕೆಯು ಹಳೆಯ ಒಡಂಬಡಿಕೆಗಿಂತ ಅಷ್ಟೇ ಮೇಲ್ಮಟ್ಟದ್ದಾಗಿದೆ (2 ಕೊರಿಂಥ. 3 ಮತ್ತು ಇಬ್ರಿಯ 3).

    ಹಳೆ ಒಡಂಬಡಿಕೆಯು ನ್ಯಾಯ ತೀರ್ಪಿನ ಭಯ ಮತ್ತು ಪ್ರತಿಫಲದ ವಾಗ್ದಾನಗಳ ಮೂಲಕ ಒಬ್ಬ ಮನುಷ್ಯನ ಹೊರಗಿನ ಜೀವನವನ್ನು ಮಾತ್ರ ಶುದ್ಧೀಕರಿಸುತ್ತಿದ್ದರೆ, ಹೊಸ ಒಡಂಬಡಿಕೆಯು ಬೆದರಿಕೆ ಮತ್ತು ವಾಗ್ದಾನಗಳ ಮೂಲಕವಲ್ಲ, ಆದರೆ ಪವಿತ್ರಾತ್ಮನು ನಮಗೆ ಕ್ರಿಸ್ತನ ಸ್ವಭಾವವನ್ನು ನೀಡುವದರ ಮೂಲಕ - ಅದು ಸಂಪೂರ್ಣ ಪರಿಶುದ್ಧತೆ ಮತ್ತು ಪ್ರೀತಿಯ ಸ್ವಭಾವವಾಗಿದೆ - ನಮ್ಮನ್ನು ಒಳಗಿನಿಂದ ಬದಲಾಯಿಸುತ್ತದೆ.

    ಒಂದು ಹಂದಿಯು ಸರಪಳಿಗಳಿಂದ ಬಂಧಿಸಲ್ಪಟ್ಟು ಶುಚಿಯಾಗಿ ಇರುವದು (ಕಾನೂನು ವಿಧಿಸುವ ಶಿಕ್ಷೆಯ ಭಯ) ಮತ್ತು ಒಂದು ಬೆಕ್ಕು ತನ್ನ ಒಳಸ್ವಭಾವದಿಂದ ತನ್ನನ್ನು ಶುಚಿಯಾಗಿ ಇರಿಸಿಕೊಳ್ಳುವದು, ಈ ಎರಡರ ನಡುವೆ ಬಹು ದೊಡ್ಡ ಅಂತರವಿದೆ. ಈ ಉದಾಹರಣೆಯು ಎರಡು ಒಡಂಬಡಿಕೆಗಳ ನಡುವಿನ ವ್ಯತ್ಯಾಸವನ್ನು ತೋರಿಸುತ್ತದೆ.

    13. ನಾವು ಮನುಷ್ಯರಿಂದ ತಿರಸ್ಕರಿಸಲ್ಪಟ್ಟು ಹಿಂಸೆಗೆ ಒಳಗಾಗುವದಕ್ಕಾಗಿ ಕರೆಯಲ್ಪಟ್ಟಿದ್ದೇವೆ

    ”ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವುದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು” (2 ತಿಮೊಥೆಯ. 3:12)

    ಯೇಸುವು ತನ್ನ ಶಿಷ್ಯರು ಲೋಕದಲ್ಲಿ ಸಂಕಟವನ್ನು ಎದುರಿಸುವರು ಎಂದು ಅವರಿಗೆ ತಿಳಿಸಿದನು (ಯೋಹಾನ 16:33); ಮತ್ತು ತನ್ನ ಶಿಷ್ಯರನ್ನು ಲೋಕದೊಳಗಿಂದ ತೆಗೆದುಕೊಂಡು ಹೋಗದಿರಲು ಆತನು ತಂದೆಯಲ್ಲಿ ಪ್ರಾರ್ಥಿಸಿದನು (ಯೋಹಾನ 17:15). ವಿಶ್ವಾಸಿಗಳು ಬಹು ಸಂಕಟಗಳನ್ನು ತಾಳಿ, ದೇವರ ರಾಜ್ಯದೊಳಗೆ ಸೇರಬೇಕೆಂದು ಅಪೊಸ್ತಲರು ಕಲಿಸಿಕೊಟ್ಟರು (ಅಪೊ. ಕೃ. 14:22).

    ಒಂದು ವೇಳೆ ಜನರು ಮನೆಯ ಯಜಮಾನನಿಗೆ ಬೆಲ್ಜೆಬೂಲನೆಂದು ಹೆಸರಿಟ್ಟರೆ, ಆತನ ಮನೆಯವರಿಗೆ ಇನ್ನೂ ಕೆಟ್ಟ ಹೆಸರುಗಳನ್ನು ಇಡುವರು ಎಂದು ಯೇಸುವು ವಿವರಿಸಿದನು (ಮತ್ತಾಯ 10:25). ನಾವು ಆತನ ಮನೆಯ ನಂಬಿಗಸ್ಥ ಸದಸ್ಯರು ಎನ್ನುವದನ್ನು ನಾವು ಇದರ ಮೂಲಕ ತಿಳಿಯುತ್ತೇವೆ. ನಾನು ಕೆಲವು ”ವಿಶ್ವಾಸಿ”ಗಳಿಂದ ಕರೆಯಲ್ಪಟ್ಟಿರುವ ಹೆಸರುಗಳು ಹೀಗಿವೆ : ”ಸೈತಾನ”, ”ಸೈತಾನನ ಮಗನು”, ”ದುಷ್ಟತನದ ಆತ್ಮ”, ” ಕ್ರೈಸ್ತವಿರೋಧಿ”, ”ಮೋಸಗಾರ”, ”ಭಯೋತ್ಪಾದಕ”, ”ಕೊಲೆಗಾರ” ಮತ್ತು ”ದಿಯೋತ್ರೇಫ”. ಈ ಮೂಲಕವಾಗಿ ಯೇಸುವಿಗೆ ಸೇರಿದವನೆಂದು ಗುರುತಿಸಲ್ಪಟ್ಟಿರುವದು ಒಂದು ಶ್ರೇಷ್ಠ ಗೌರವವಾಗಿದೆ. ಕರ್ತನ ಯಥಾರ್ಥರಾದ ಎಲ್ಲಾ ಸೇವಕರಿಗೂ ಇಂತಹ ಅನುಭವ ಸಿಗುತ್ತದೆ.

    ಒಬ್ಬ ನಿಜ ಪ್ರವಾದಿಯು ”ತನ್ನ ಸ್ವಂತ ಬಳಗದವರಿಂದ” ಗೌರವವನ್ನು ಪಡೆಯುವದಿಲ್ಲ ಎಂದೂ ಸಹ ಯೇಸುವು ಹೇಳಿದನು (ಮಾರ್ಕ 6:4). ಸ್ವತ: ಯೇಸುವಿನ ಮನೆಯವರು ಆತನನ್ನು ಒಪ್ಪಿಕೊಳ್ಳಲಿಲ್ಲ. ಇಂದೂ ಸಹ, ಕರ್ತನ ಪ್ರತಿಯೊಬ್ಬ ನಿಜ ಪ್ರವಾದಿಯು ತನ್ನ ಬಳಗದವರಿಂದ ತಿರಸ್ಕರಿಸಲ್ಪಟ್ಟು ಅವಮಾನಿಸಲ್ಪಡುವನು. ಹಾಗೆಯೇ, ಒಬ್ಬ ನಿಜವಾದ ಅಪೊಸ್ತಲನೂ ಸಹ ”ಅಪಕೀರ್ತಿ ಹೊಂದಿ, ಲೋಕದ ಕಸವೋ ಎಲ್ಲಾದರ ಹೊಲಸೋ ಎಂಬಂತೆ ಆಗಿರುತ್ತಾನೆ” (1 ಕೊರಿಂಥ. 4:13). ದುಃಖ ಮತ್ತು ತಿರಸ್ಕಾರಗಳು ದೇವರ ಎಲ್ಲಾ ಅತಿ ಶ್ರೇಷ್ಠ ಸೇವಕರ ಸಂಪತ್ತಾಗಿದೆ.

    ಕ್ರೈಸ್ತಸಭೆಯು ”ಮಹಾ ಸಂಕಟಕಾಲ”ದ ಮೊದಲು ಮೇಲೆ ಎತ್ತಲ್ಪಡಲಿದೆ (raptured) ಎಂಬ ಬೋಧನೆಯು ಹೆಚ್ಚಿನ ವಿಶ್ವಾಸಿಗಳ ನಡುವೆ ಜನಪ್ರಿಯವಾದದ್ದು ಏಕೆಂದರೆ, ಆಲಿಸುವವರ ಶರೀರಭಾವಕ್ಕೆ (ಶರೀರ ಹಾಗೂ ಮನಸ್ಸು) ಅದು ನೆಮ್ಮದಿಯನ್ನು ನೀಡುತ್ತದೆ. ಆದರೆ ಯೇಸುವು ಸ್ಪಷ್ಟವಾಗಿ ಹೇಳಿರುವಂತೆ (ಮತ್ತಾಯ 24:29-31 ರಲ್ಲಿ), ಮಹಾ ಸಂಕಟಕಾಲದ ನಂತರವೇ ಆತನು ತಿರುಗಿ ಬರುವನು ಮತ್ತು ತಾನು ಆರಿಸಿರುವವರನ್ನು ಮೇಲಕ್ಕೆ ಒಯ್ಯುವನು.

    ಇಡೀ ಹೊಸ ಒಡಂಬಡಿಕೆಯ ಒಂದು ವಚನವೂ ಕ್ರೈಸ್ತಸಭೆಯು ಮೇಲೆ ಎತ್ತಲ್ಪಟ್ಟು (raptured) ಮಹಾ ಸಂಕಟಕಾಲದಿಂದ ಪಾರಾಗುತ್ತದೆ ಎಂದು ಬೋಧಿಸುವದಿಲ್ಲ. ಈ ಸಿದ್ದಾಂತವು 18ನೇ ಶತಮಾನದ ಮಧ್ಯದಲ್ಲಿ ಇಂಗ್ಲೇಂಡ್‍ ದೇಶದ ಜನರಿಂದ ರಚಿಸಲ್ಪಟ್ಟಿತು.

    ಈಗ ನಾವು ನಮ್ಮ ದೇಶದ ಕ್ರೈಸ್ತಸಭೆಯನ್ನು ಬರಲಿರುವ ಹಿಂಸೆಯ ಸಮಯಕ್ಕೆ ತಯಾರು ಮಾಡಬೇಕಾಗಿದೆ.

    14. ನಾವು ದೇವರು ಸ್ವೀಕರಿಸಿರುವ ಎಲ್ಲರನ್ನೂ ಸ್ವೀಕರಿಸಬೇಕು

    ”ದೇಹದಲ್ಲಿ ಬೇಧವೇನೂ ಇರದಂತೆ... ದೇವರು ಅಂಗಗಳಲ್ಲಿ ಪ್ರತಿಯೊಂದನ್ನು ತನಗೆ ಸರಿಯಾಗಿ ತೋಚಿದ ಪ್ರಕಾರ ದೇಹದೊಳಗೆ ಇಟ್ಟಿದ್ದಾನೆ” (1 ಕೊರಿಂಥ. 12:18,25)

    ದೇವರು ವಿಭಿನ್ನ ಸಮಯ ಮತ್ತು ವಿಭಿನ್ನ ಪ್ರದೇಶಗಳಲ್ಲಿ ತನ್ನ ಶುದ್ಧವಾದ ಸಾಕ್ಷಿಯನ್ನು ಮರುಸ್ಥಾಪನೆ ಗೊಳಿಸಲಿಕ್ಕಾಗಿ ಜನರನ್ನು ಮೇಲಕ್ಕೆ ಎಬ್ಬಿಸಿದ್ದಾನೆ. ಆದರೆ ಈ ದೇವಭಕ್ತರ ಮರಣದ ನಂತರ, ಅವರ ಶಿಷ್ಯರು ತಮ್ಮ ಪಂಗಡಗಳನ್ನು ಇತರರಿಂದ ಪ್ರತ್ಯೇಕಿಸಿ, ಅವನ್ನು ಭ್ರಷ್ಟ ಗುಂಪುಗಳಾಗಿ ಬದಲಾಯಿಸಿದ್ದಾರೆ.

    ಆದರೆ ಕ್ರಿಸ್ತನ ದೇಹವು ಯಾವುದೇ ಒಂದು ಗುಂಪಿಗಿಂತ ಹೆಚ್ಚು ವಿಶಾಲವಾಗಿದೆ. ನಾವು ಈ ಮಾತನ್ನು ಎಂದಿಗೂ ಮರೆಯಬಾರದು. ಈ ದಿನ ಕ್ರಿಸ್ತನ ವಧುವು ಹಲವಾರು ವಿಭಿನ್ನ ಪಂಗಡಗಳಲ್ಲಿ ಕಂಡುಬರುತ್ತಾಳೆ.

    ಇನ್ನೊಂದು ವಿಷಯ, ನಾವು ಸತ್ಯವೇದದ ಅರ್ಥ ವಿವರಣೆಯಲ್ಲಿ ಇರುವ ಮತಭೇದಗಳಿಂದಾಗಿ ಹಲವು ಪಂಗಡಗಳ ಜೊತೆಗೆ ಒಂದಾಗಿ ಕೆಲಸ ಮಾಡಲು ಸಾಧ್ಯವಾಗದೇ ಇದ್ದರೂ, ಕರ್ತನು ಸ್ವೀಕರಿಸಿರುವ ಎಲ್ಲರೊಂದಿಗೆ ನಾವು ಅನ್ಯೋನ್ಯವಾಗಿರಲು ಪ್ರಯತ್ನಿಸುವದು ಅವಶ್ಯವಾಗಿದೆ.

    15. ನಾವು ಎಲ್ಲಾ ಮನುಷ್ಯರೊಂದಿಗೆ ಘನತೆ-ಗೌರವದಿಂದ ವ್ಯವಹರಿಸಬೇಕು

    ”ನಮ್ಮ ನಾಲಿಗೆಯಿಂದ ದೇವರ ಹೋಲಿಕೆಗೆ ಸರಿಯಾಗಿ ಉಂಟುಮಾಡಲ್ಪಟ್ಟ ಮನುಷ್ಯರನ್ನು ಶಪಿಸುತ್ತೇವೆ. ನನ್ನ ಸಹೋದರರೇ, ಹೀಗಿರುವದು ಯೋಗ್ಯವಲ್ಲ” (ಯಾಕೋಬ. 3:9,10)

    ಒಬ್ಬ ಮನುಷ್ಯನನ್ನು ಕೀಳಾಗಿ ನೋಡಿ ಅವಮಾನಗೊಳಿಸುವ ಯಾವುದೇ ಮಾತು ಅಥವಾ ಕಾರ್ಯ ದೇವರಿಂದ ಬರಲು ಸಾಧ್ಯವೇ ಇಲ್ಲ. ಯಾವಾಗಲೂ ಜನರನ್ನು ಅಗೌರವ ಗೊಳಿಸುವ ಮತ್ತು ಕೀಳಾಗಿ ನೋಡುವ ಕಾರ್ಯವನ್ನು ಸೈತಾನನು ಎಡೆಬಿಡದೆ ಮಾಡುತ್ತಾನೆ.

    ಎಲ್ಲಾ ಜನರೊಂದಿಗೆ ”ತಾಳ್ಮೆಯಿಂದ ಮತ್ತು ಗೌರವಯುಕ್ತವಾಗಿ” ಮಾತನಾಡುವಂತೆ ನಮಗೆ ಆಜ್ಞಾಪಿಸಲಾಗಿದೆ (1 ಪೇತ್ರ 3:15, ಸ್ವ. ಅನು.) - ಅದು ನಮ್ಮ ಹೆಂಡತಿ, ನಮ್ಮ ಮಕ್ಕಳು, ನಮಗಿಂತ ಕಡಿಮೆ ವಯಸ್ಸಿನವರು, ಭಿಕ್ಷುಕರು ಅಥವಾ ನಮ್ಮ ಶತ್ರುಗಳು ಆಗಿದ್ದರೂ ಸರಿ.

    ಎಲ್ಲಾ ಜನರನ್ನು ಆದರದಿಂದ ನೋಡುವದು ಅವಶ್ಯ. ಉದಾಹರಣೆಗೆ, ನಮಗಿಂತ ಬಡವನಾದ ಒಬ್ಬ ಸಹೋದರನಿಗೆ ನಾವು ಒಂದು ಕೊಡುಗೆಯನ್ನು ನೀಡುವಾಗ, ಆತನಲ್ಲಿ ಇರುವ ಆತ್ಮ ಗೌರವವು ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ನಾವು ಆತನ ಸೋದರರಾಗಿ ಇರಬೇಕೇ ಹೊರತು, ಪೋಷಕರು ಅಲ್ಲ.

    16. ನಾವು ನಮ್ಮ ಹಣಕಾಸಿನ ಅಗತ್ಯತೆಗಳನ್ನು ದೇವರಿಗೆ ಮಾತ್ರ ತಿಳಿಯಪಡಿಸಬೇಕು

    ”ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು” (ಫಿಲಿಪ್ಪಿ. 4:19)

    ಪೂರ್ಣಾವಧಿಯ ಕ್ರೈಸ್ತ ಸೇವಕರು ತಮ್ಮ ಎಲ್ಲಾ ಹಣಕಾಸಿನ ಅಗತ್ಯತೆಗಳಿಗಾಗಿ ದೇವರನ್ನು ನಂಬಬೇಕು ಮತ್ತು ಆ ಅಗತ್ಯತೆಗಳನ್ನು ಆತನಿಗೆ ಮಾತ್ರ ತಿಳಿಸಬೇಕು. ಇದರ ನಂತರ ದೇವರು ಅವರ ಕೊರತೆಗಳನ್ನು ನೀಗಿಸಲಿಕ್ಕಾಗಿ ತನ್ನ ಮಕ್ಕಳನ್ನು ಪ್ರೇರೇಪಿಸುತ್ತಾನೆ. ಆದರೆ ಅವರು ಜೀವನದಲ್ಲಿ ಇಂದು ಅನೇಕರು ಮಾಡುವ ಹಾಗೆ, ”ದೇವರಲ್ಲಿ ನಂಬಿಕೆ ಮತ್ತು ಇತರ ವಿಶ್ವಾಸಿಗಳಿಗೆ ಕೊರತೆಯ ಸುಳಿವು” ನೀಡುತ್ತಾ ಜೀವಿಸಬಾರದು.

    ”ಕರ್ತನು ಸುವಾರ್ತೆಯನ್ನು ಸಾರುವವರು ಸುವಾರ್ತೆಯಿಂದಲೇ ಜೀವನ ಮಾಡಬೇಕೆಂದು ನೇಮಿಸಿದನು” (1 ಕೊರಿಂಥ. 9:14)

    ಹಾಗಾದರೆ ಕರ್ತನ ಪೂರ್ಣಾವಧಿಯ ಸೇವಕರು ಇತರ ವಿಶ್ವಾಸಿಗಳಿಂದ ಕೊಡುಗೆಗಳನ್ನು ಸ್ವೀಕರಿಸಲು ಅವಕಾಶ ಇದೆ. ಆದರೆ ಅವರು ಒಂದು ಮಾಸಿಕ ವೇತನವನ್ನು ಖಂಡಿತವಾಗಿ ಸ್ವೀಕರಿಸಬಾರದು. ಕೊಡುಗೆಗಳು ಮತ್ತು ಒಂದು ವೇತನದ ನಡುವೆ ಒಂದು ಬಹು ದೊಡ್ಡ ಅಂತರವಿದೆ. ಒಂದು ವೇತನವನ್ನು ಕೇಳಿ ಪಡೆಯುವ ಅಧಿಕಾರ ಇರುತ್ತದೆ, ಆದರೆ ಕೊಡುಗೆಗಳನ್ನು ಹಕ್ಕಾಗಿ ಕೇಳಲು ಸಾಧ್ಯವಿಲ್ಲ. ಇಂದಿನ ಅಧಿಕಾಂಶ ಕ್ರೈಸ್ತ ಸಭೆಗಳು ಮತ್ತು ಸಂಸ್ಥೆಗಳು ದಾರಿತಪ್ಪಿ ಹೋಗಲು ಕಾರಣ ಈ ತತ್ವವನ್ನು ಪಾಲಿಸದೇ ಇರುವದೇ ಆಗಿದೆ.

    ಅಷ್ಟೇ ಅಲ್ಲದೆ, ನಾವು ನಮಗಿಂತ ಬಡವರಾದ ಜನರಿಂದ ನಮ್ಮ ಸ್ವಂತಕ್ಕಾಗಲೀ ಅಥವಾ ಕುಟುಂಬದ ಉಪಯೋಗಕ್ಕಾಗಲೀ ಕೊಡುಗೆಗಳನ್ನು ಸ್ವೀಕರಿಸಬಾರದು. ಒಂದು ವೇಳೆ ಅಂತಹ ಜನರು ನಮಗೆ ಕೊಡುಗೆಗಳನ್ನು ನೀಡಿದರೆ, ನಾವು ಆ ಹಣವನ್ನು ಅವರಿಗಿಂತ ಬಡವರಾದ ಇತರರಿಗೆ ಕೊಡಬೇಕು ಅಥವಾ ಅದನ್ನು ಕರ್ತನ ಕಾರ್ಯಕ್ಕಾಗಿ ಕಾಣಿಕೆಯ ಡಬ್ಬಿಗೆ ಹಾಕಬೇಕು.

    ಹಣಕಾಸಿನ ವಿಷಯದಲ್ಲಿ ಈ ಕೆಳಗಿನ ”ದಶಾಜ್ಞೆಗಳನ್ನು” ಎಲ್ಲಾ ಪೂರ್ಣಾವಧಿಯ ಕೆಲಸಗಾರರು ಗಮನಿಸುವದು ಒಳ್ಳೆಯದು :

  • 1) ನಿಮ್ಮ ಹಣಕಾಸಿನ ಅವಶ್ಯಕತೆಯನ್ನು ದೇವರಿಗೆ ಹೊರತಾಗಿ ಇನ್ಯಾರಿಗೂ ತಿಳಿಸಬಾರದು (ಫಿಲಿಪ್ಪಿ 4:19)
  • 2) ಅವಿಶ್ವಾಸಿಗಳಿಂದ ಯಾವತ್ತೂ ಹಣವನ್ನು ಅಂಗೀಕರಿಸಬೇಡಿ (3 ಯೋಹಾನ 7)
  • 3) ಯಾರಿಂದಲೂ ಯಾವುದೇ ಉಡುಗೊರೆಗಳನ್ನು ನಿರೀಕ್ಷಿಸಬಾರದು (ಕೀರ್ತನೆಗಳು 62:5)
  • 4) ಹಣ ಕೊಡುವದರ ಮೂಲಕ ಯಾರೂ ನಿಮ್ಮನ್ನು ಮತ್ತು ನಿಮ್ಮ ಸೇವೆಯನ್ನು ನಿಯಂತ್ರಿಸಲು ಅವಕಾಶ ಕೊಡಬೇಡಿ.
  • 5) ನಿಮ್ಮ ಸೇವೆಯನ್ನು ಸ್ವೀಕರಿಸದೇ ಇರುವವರಿಂದ ಯಾವತ್ತೂ ಹಣವನ್ನು ಅಂಗೀಕರಿಸಬೇಡಿ.
  • 6) ನಿಮಗಿಂತ ಬಡವರಿಂದ ನಿಮ್ಮ ವೈಯುಕ್ತಿಕ ಅಥವಾ ಕುಟುಂಬದ ಅವಶ್ಯಕತೆಗಳಿಗಾಗಿ ಯಾವತ್ತೂ ಹಣವನ್ನು ಅಂಗೀಕರಿಸಬೇಡಿ.
  • 7) ನಿಮ್ಮ ಹಣಕಾಸಿನ ಅವಶ್ಯಕತೆಗಳಿಗಾಗಿ ಯಾವತ್ತೂ ಮನುಷ್ಯರನ್ನು ಅವಲಂಬಿಸಬೇಡಿ.
  • 8) ದೇವರಿಗೆ ಸೇರಿದ ಹಣವನ್ನು ನಿಭಾಯಿಸುವಾಗ ಒಬ್ಬರೂ ತಪ್ಪು ಹೊರಿಸುವದಕ್ಕೆ ಆಸ್ಪದವಾಗಬಾರದು (2 ಕೊರಿಂಥ 8:20)
  • 9) ನೀವು ಹಣವನ್ನು ಪಡೆದಾಗ ಯಾವತ್ತೂ ಉತ್ತೇಜಿತರಾಗಬೇಡಿ.
  • 10) ನೀವು ಹಣವನ್ನು ಕಳೆದುಕೊಂಡಾಗ ಯಾವತ್ತೂ ನಿರುತ್ಸಾಹಗೊಳ್ಳಬೇಡಿ.
  • ಕೊನೆಯ ಮಾತು:

    ಈ ಸತ್ಯಾಂಶಗಳು ನಿಮ್ಮನ್ನು ಪ್ರೋತ್ಸಾಹಿಸುವದು ಮಾತ್ರವಲ್ಲ, ನಿಮ್ಮನ್ನು ಬಿಡುಗಡೆಗೊಳಿಸಲಿ ಎಂದು ನಾನು ನಿರೀಕ್ಷಿಸುತ್ತೇನೆ. ನೀವು ಕರ್ತನ ಜೊತೆಯಲ್ಲಿ ನಡೆಯುವದು ಮತ್ತು ನಿಮ್ಮ ಸೇವೆಯನ್ನು ಗಂಭೀರವಾಗಿ ನೋಡುವದಾದರೆ, ನೀವು ನಿಮ್ಮ ದಿನನಿತ್ಯ ಜೀವಿತದಲ್ಲಿ ಈ ಸತ್ಯಾಂಶಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.