ಅನ್ಯ ಭಾಷೆಗಳ ಕುರಿತಾಗಿರುವ ಸತ್ಯ

Article Body: 

"ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ ಸಕಲವಿಧವಾದ ಬೆಳಕಿಗೂ ಮೂಲಕಾರಣನಾದವನಿಂದ ಇಳಿದುಬರುತ್ತವೆ. ಆತನಲ್ಲಿ ಚಂಚಲತ್ವವೇನೂ ಇಲ್ಲ. ವ್ಯತ್ಯಾಸದ ಸೂಚನೆಯೂ ಇಲ್ಲ." (ಯಾಕೋಬ 1:17)

ದೇವರು ಎಂದಿಗೂ ತಪ್ಪು ಮಾಡನು, ಆತನು ಎಂದಿಗೂ ಬದಲಾಗನು ಮತ್ತು ಯಾವಾಗಲೂ ಅತ್ಯುತ್ತಮವಾದ ಶ್ರೇಷ್ಟ ವರಗಳನ್ನೇ ಕೊಡುವಾತನು. ಆದ್ದರಿಂದ ಪಂಚಾಶತ್ತಮ ದಿನದಲ್ಲಿ "ಅನ್ಯ ಭಾಷೆಯ" ವರವನ್ನು ಆತನು ಸಭೆಗೆ ಕೊಟ್ಟಾಗ, ತಾನು ಏನು ಮಾಡುತ್ತಿದ್ದೇನೆಂದು ಆತನಿಗೆ ಚೆನ್ನಾಗಿ ಗೊತ್ತಿತ್ತು. "ಅನ್ಯ ಭಾಷೆಯ" ವರವು ಶ್ರೇಷ್ಟವಾದ ವರವಾಗಿದೆ. ದೇವರು ಆ ವರದ ವಿಷಯದಲ್ಲಿ ತನ್ನ ಮನಸ್ಸನ್ನು ಬದಲಾಯಿಸಿಲ್ಲ ಮತ್ತು ಬದಲಾಯಿಸುವುದೂ ಇಲ್ಲ.

20ನೇ ಶತಮಾನದಲ್ಲಿ ಈ ವರದ ಬಗ್ಗೆ ಬರಲ್ಲಿಕ್ಕಿರುವ ತರ್ಕಗಳ ಬಗ್ಗೆ ಆತನು ಚೆನ್ನಾಗಿ ಅರಿತವನಾಗಿದ್ದನು. ಆದರೂ ಸಭೆಯು ತನ್ನ ಸೇವೆಯನ್ನು ಪೂರ್ತಿಗೊಳಿಸಲು ಈ ವರವು ಬೇಕೆಂದು ಆತನು ತಿಳಿದಿದ್ದನು.

ಕ್ರೈಸ್ತತ್ವದ ಇತಿಹಾಸದಲ್ಲಿ ಪ್ರಮುಖ ಸತ್ಯಗಳಾದ ತ್ರಿತ್ವ, ಕ್ರಿಸ್ತನ ದೇವತ್ವ, ಆತನ ಪವಿತ್ರಾತ್ಮನ ವ್ಯಕ್ತಿತ್ವ ಇವುಗಳು ಎದುರಿಸಲ್ಪಟ್ಟು ತರ್ಕಕ್ಕೆ ಒಳಗಾಗಿವೆ. ಆದ್ದರಿಂದ "ಅನ್ಯ ಭಾಷೆಗಳು" ವಾಗ್ವಾದಕ್ಕೆ ಒಳಗಾಗಿರುವುದಕ್ಕೆ ನಾವು ಅಚ್ಚರಿಪಡಬೇಕಾಗಿಲ್ಲ.

ಧರ್ಮೋಪದೇಶಗಳ ಬಗ್ಗೆ ದೇವರ ವಾಕ್ಯವು ಹೇಳುವುದನ್ನೇ ನಾವು ಅನುಸರಿಸುವುದು ಉತ್ತಮವಾಗಿದೆ. ಆದ್ದರಿಂದ "ಅನ್ಯಭಾಷೆ"ಯ ಕುರಿತು ಬೈಬಲ್ ಏನು ಹೇಳುತ್ತದೆ ಎಂದು ನಿಷ್ಪಕ್ಷ ಮನಸ್ಸಿನಿಂದ ಪ್ರತಿಯೋಂದು ವಾಕ್ಯವನ್ನು ಗಮನಿಸೋಣ.

ಸತ್ಯ 1

ಮಾರ್ಕ 16:17: "ನಂಬುವವರಿಂದ ಈ ಸೂಚಕ ಕಾರ್ಯಗಳು ಉಂಟಾಗುವುವು. ನನ್ನ ಹೆಸರನ್ನು ಹೇಳಿ ದೆವ್ವಗಳನ್ನು ಬಿಡಿಸುವರು, ಹೊಸ ಭಾಷೆಗಳಿಂದ ಮಾತಾಡುವರು...ರೋಗಿಗಳ ಮೇಲೆ ಕೈಯಿಟ್ಟರೆ ಇವರಿಗೆ ಗುಣವಾಗುವರು."

"ನಂಬಿದವರಿಂದ" ಆಗುವ ಕೆಲವು ಸಂಗತಿಗಳನ್ನು ಕುರಿತು ಯೇಸು ಹೇಳಿದ್ದೇನೆಂದರೆ ಅವರು ಅನ್ಯ ಭಾಷೆಯಿಂದ ಮಾತಡುವರು, ದೆವ್ವಗಳನ್ನು ಬಿಡಿಸುವರು, ರೋಗಿಗಳನ್ನು ಸ್ವಸ್ಥಮಾಡುವರು. ಈ ಎಲ್ಲಾ ಸಂಗತಿಗಳು ಪ್ರತಿ ವಿಶ್ವಾಸಿಯಿಂದ ಆಗುವುದೆಂದು ಆತನು ಹೇಳಲಿಲ್ಲ. ಆದರೆ "ನಂಬಿದ ಜನರ ಗುಂಪಿನಲ್ಲಿ" ಈ ಎಲ್ಲಾ ಸಂಗತಿಗಳನ್ನು ಕಾಣಬಹುದೆಂದು ಹೇಳಿದನು.

ಆದ್ದರಿಂದ ಪ್ರತಿಯೊಬ್ಬ ವಿಶ್ವಾಸಿಯು ಈ ಎಲ್ಲಾ ವರಗಳನ್ನು ಹೊಂದಬೇಕಾಗಿಲ್ಲ. ಪತಿಯೊಂದು ಸಭೆಯಲ್ಲಿ ಇವೆಲ್ಲವುಗಳು ಇರುವುದೆಂದಲ್ಲ. ಆದರೆ ಲೋಕಾದ್ಯಂತ ಸಭೆಯಲ್ಲಿ ಇವುಗಳನ್ನು ನಾವು ನೋಡಬಹುದು. ಪವಿತ್ರಾತ್ಮನು ಈ ವರಗಳನ್ನು ಯಾರಿಗೆ ಅನುಗ್ರಹಿಸಬೇಕೆಂದು ಆತನು ಮುಖ್ಯವಾಗಿ ತೀರ್ಮಾನಿಸುತ್ತಾನೆ.

ಸತ್ಯ 2

ಅ.ಕೃ 2: 4,7,11: "ಅವರೆಲ್ಲರೂ ಪವಿತ್ರಾತ್ಮಭರಿತರಾಗಿ ಆ ಆತ್ಮ ತಮತಮಗೆ ನುಡಿಯುವ ಶಕ್ತಿಯನ್ನು ಕೊಡುವ ಪ್ರಕಾರ ಬೇರೆ ಬೇರೆ ಭಾಷೆಗಳಿಂದ ಮಾತಾಡುವುದಕ್ಕೆ ಪ್ರಾರಂಭಿಸಿದರು... ಯೆಹೂದ್ಯರು ಇಗೋ ಇವರು ನಮ್ಮ ನಮ್ಮ ಭಾಷೆಗಳಲ್ಲಿ ದೇವರ ಮಹತ್ತುಗಳ ವಿಷಯವಾಗಿ ಹೇಳುವುದನ್ನು ಕೇಳುತ್ತೇವೆ ಅಂದುಕೊಂಡರು."

ಮೊದಲಬಾರಿಗೆ ವಿಶ್ವಾಸಿಗಳು ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಾಗ ಅವರೆಲ್ಲರೂ ಅನ್ಯ ಭಾಷೆಯಿಂದ ಮಾತಾಡಿದರು. "ಅನ್ಯ ಭಾಷೆ"ಗಳನ್ನು ಆಗ ಜನರು ಕೂಡಲೇ ಅರ್ಥಮಾಡಿಕೊಂಡರು. ಆದ್ದರಿಂದ ಅದರ ಅರ್ಥವನ್ನು ವಿವರಿಸುವ ವರದ ಅಗತ್ಯವಿರಲಿಲ್ಲ.

4ನೇ ವಚನದಲ್ಲಿ ನಾವು ನೋಡುವಹಾಗೆ ಆ ಜನರ‍ೇ ಮಾತಾಡಿದರು ಹೊರತು ಪವಿತ್ರಾತ್ಮನು ಮಾತಾಡಲಿಲ್ಲ. ಪವಿತ್ರಾತ್ಮನು ಅವರ ನಾಲಿಗೆಯನ್ನು ಚಲಿಸಲಿಲ್ಲ. ಪವಿತ್ರಾತ್ಮನು ಅವರಿಗೆ ಭಾಷೆಯನ್ನು ಕೊಟ್ಟನು. ಅವರು ತಾವೇ ಮಾತಾಡಿದರು.

ನಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ಪವಿತ್ರಾತ್ಮನು ನಮ್ಮಿಂದ ಎಂದಿಗೂ ತೆಗೆದುಕೊಳ್ಳುವುದಿಲ್ಲ. ನಿಜ ಹೇಳಬೇಕೆಂದರೆ, " ಸ್ವ ನಿಯಂತ್ರಣ"ವು ಆತ್ಮನ ಫಲ (ಗಲಾತ್ಯ 5:23). ದುರಾತ್ಮನಿಂದ ತುಂಬಿಸಲ್ಪಟ್ಟವರು ಮಾತ್ರ ತಮ್ಮ ಮೇಲಿನ ಸ್ವಾಧೀನ/ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ಪವಿತ್ರಾತ್ಮನಿಂದ ತುಂಬಿಸಲ್ಪಟ್ಟವರು ಇತರರಿಗಿಂತ ಹೆಚ್ಚಾಗಿ ತಮ್ಮ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾರೆ. "ಪ್ರವಾದಿಗಳ ಆತ್ಮಗಳು ಪ್ರವಾದಿಗಳ ಸ್ವಾಧೀನದಲ್ಲಿ ಅವೆ." (1 ಕೊರಿಂಥ 14:32)

ಸತ್ಯ 3

ಅ. ಕೃ. 11:46: "ಅವರು ನಾನಾ ಭಾಷೆಗಳನ್ನಾಡುತ್ತಾ ದೇವರನ್ನು ಕೊಂಡಾಡುತ್ತಾ ಇರುವುದನ್ನು ಕೇಳಿದರು."

ಕ್ರಿಸ್ತನ ಬಳಿಗೆ ತಿರುಗಿಕೊಂಡಾಗಲೇ ಕೊರ್ನೇಲ್ಯನ ಮನೆಯಲ್ಲಿದ್ದವರೆಲ್ಲರೂ ಪವಿತ್ರಾತ್ಮನಿಂದ ತುಂಬಿಸಲ್ಪಟ್ಟರು. ಅವರು "ಅನ್ಯ ಭಾಷೆಯಲ್ಲಿ" ದೇವರನ್ನು ಕೊಂಡಾಡಲು/ಸ್ತುತಿಸಲು ಪ್ರಾರಂಭಿಸಿದರು ಪಂಚಾಶತ್ತಮ ದಿನದಲ್ಲಿ ಆಗಿನ ಜನರು ಇತರರೊಂದಿಗೆ ಮಾತನಾಡಿದರು.

ಸತ್ಯ 4

ಅ. ಕೃ. 19:6:"ಪೌಲನು ಅವರ ಮೇಲೆ ಕೈಗಳನ್ನಿಡಲು ಪವಿತ್ರಾತ್ಮ ವರವು ಅವರ ಮೇಲೆ ಬಂತು, ಅವರು ನಾನಾ ಭಾಷೆಗಳನ್ನಾಡಿದರು, ಪ್ರವಾದಿಸಿದರು"

ಎಫೆಸದ ವಿಶ್ವಾಸಿಗಳ ಮೇಲೆ ಪವಿತ್ರಾತ್ಮ ವರವು ಪೌಲನು ಅವರ ಮೇಲೆ ಕೈಗಳನ್ನಿಟ್ಟಾಗ ಬಂತು. ಇಲ್ಲಿ "ಭಾಷೆಗಳು" ಪ್ರವಾದನೆಗಳಾಗಿದ್ದವು.

"ಅಪೊಸ್ತಲರ ಕೃತ್ಯ"ಗಳಲ್ಲಿ ಈ ಕೆಳಗಿನ ಸತ್ಯಗಳನ್ನು ಗಮನಿಸಿರಿ<:

1. ಅ.ಕೃ 2ರಲ್ಲಿ ನೀರಿನ ದೀಕ್ಷಾಸ್ನಾನದ ನಂತರ ಪವಿತ್ರಾತ್ಮನನ್ನು ಪಡೆದುಕೊಂಡರು. ೧೦ನೇ ಅಧ್ಯಾಯದಲ್ಲಿ ದೀಕ್ಷಾಸ್ನಾನಕ್ಕಿಂತ ಮೊದಲೇ ಪಡೆದುಕೊಂಡರು.

2. ಅ. ಕೃ. 2 ಮತ್ತು ಹತ್ತರಲ್ಲಿ ಯಾರೂ ಅವರ ಮೇಲೆ ಕೈ ಇಡದೆ ಪವಿತ್ರಾತ್ಮನನ್ನು ಪಡೆದುಕೊಂಡರು. 19ನೇ ಅಧ್ಯಾಯದಲ್ಲಿ ಪೌಲನು ಅವರ ಮೇಲೆ ಕೈಗಳನ್ನಿಟ್ಟ ನಂತರ ಅವರು ಪವಿತ್ರಾತ್ಮನನ್ನು ಪಡೆದರು. (ಇದರಿಂದ ನಾವು ತಿಳಿಯುವುದೇನೆಂದರೆ ಪವಿತ್ರಾತ್ಮನನ್ನು ಪಡೆಯಲು ಯಾವುದೇ ನಿಗದಿಯಾದ ಕ್ರಮವಿಲ್ಲ. ಅದು ದೀಕ್ಷಾಸ್ನಾನದ ನಂತರ ಅಥವಾ ಮೊದಲಾಗಿರಬಹುದು ಇಲ್ಲವೆ ಕೈಗಳನಿಟ್ಟು ಅಥವಾ ಇಡದೆಯೂ ಆಗಬಹುದು.)

3. ಅ. ಕೃ. 8: 14 18ರಲ್ಲಿ ಸಮಾರ್ಯದಲ್ಲಿನ ಶಿಷ್ಯರು ಪವಿತ್ರಾತ್ಮವರವನ್ನು ಪಡೆದಾಗ ಅವರು ಅನ್ಯ ಭಾಷೆಗಳಲ್ಲಿ ಮಾತಾಡಿದರೆಂದು ಬರೆದಿಲ್ಲ. ಆದರೆ ಮಂತ್ರವಾದಿಯಾದ ಸಿಮೋನನು ನೋಡಿದನೆಂದು ಬರೆದಿದೆ. (ಅವನು ಏನು ನೋಡಿದನೆಂದು ಬರೆದಿಲ್ಲ.) ಅವನು ಪೇತ್ರನಲ್ಲಿದ್ದ ವರವನ್ನು ಆಶಿಸಿದನು.

ಸತ್ಯ 5

1 ಕೊರಿಂಥ 12:7, 8, 10: "ಆದರೆ ಪ್ರತಿಯೊಬ್ಬನಲ್ಲಿ ತೋರಿ ಬರುವ ದೇವರಾತ್ಮನ ವರಗಳು ಸರ್ವರ ಪ್ರಯೋಜನಾರ್ಥವಾಗಿ ಕೊಡಲ್ಪಟ್ಟಿವೆ. ಒಬ್ಬನಿಗೆ ಆ ಆತ್ಮನಿಗೆ ಅನುಗುಣವಾಗಿ ವಿಧ್ಯಾ ವಾಕ್ಯವು... ಒಬ್ಬನಿಗೆ ವಿವಿಧ ವಾಣಿಗಳನ್ನಾಡುವ ವರವು ಒಬ್ಬನಿಗೆ ವಾಣಿಗಳ ಅರ್ಥವನ್ನು ಹೇಳುವ ವರವು ಕೊಡಲ್ಪಡುತ್ತವೆ."

ಅನ್ಯ ಭಾಷೆಯ ವರವು "ಸರ್ವರ ಪ್ರಯೋಜನಾರ್ಥವಾಗಿ" (ಸರ್ವರ ಪ್ರಯೋಜನಕ್ಕೆ) ಕೊಡಲ್ಪಟ್ಟಿವೆ. ಇದು ಪಂಚಾಶತ್ತಮ ದಿನದ 25 ವರ್ಷಗಳ ನಂತರ ಬರೆದಿದೆ.

ಸತ್ಯ 6

1 ಕೊರಿಂಥ 12:11: "ಈವರಗಳನ್ನೆಲ್ಲ ಆ ಒಬ್ಬ ಆತ್ಮನೇ ತನ್ನ ಚಿತ್ತಕ್ಕೆ ಬಂದ ಹಾಗೆ ಒಬ್ಬೊಬ್ಬನಿಗೆ ಹಂಚಿಕೊಟ್ಟು ನಡೆಸುತ್ತಾನೆ."

ಈ ವಾಕ್ಯವು ಬಹುಶ: ಎಲ್ಲಾ ವಾಕ್ಯಗಳಿಗಿಂತ ಬಹಳ ಸ್ಪಷ್ಟವಾಗಿ ಕಲಿಸುತ್ತದೇನಂದರೆ ಪವಿತ್ರಾತ್ಮನು ತಾನೇ ಯಾರಿಗೆ ಯಾವ ವರವನ್ನು (ಅನ್ಯ ಭಾಷೆಯ ವರವನ್ನು ಒಳಗೊಂಡು) ಕೊಡಬೇಕೆಂದು ನಿಶ್ಚಯಿಸುತ್ತಾನೆ. ಯಾರಿಗೆ ಯಾವ ವರವನ್ನು ಅನುಗ್ರಹಿಸಬೇಕೆಂದು ನಾವು ಆತನಿಗೆ ಹೇಳಬೇಕಾಗಿಲ್ಲ.

ಸತ್ಯ 7

1 ಕೊರಿಂಥ 12:28: "ದೇವರು ತನ್ನ ಸಭೆಯಲ್ಲಿ ಮೊದಲನೇದಾಗಿ ಅಪೊಸ್ತಲರನ್ನು, ಎರಡನೇದಾಗಿ ಪ್ರವಾದಿಗಳನ್ನು, ಮೂರನೇದಾಗಿ ಉಪದೇಶಕರನ್ನು ... ವಿವಿಧ ವಾಣಿಗಳನ್ನಾಡುವ ವರವನ್ನು ಅವರವರಿಗೆ ಕೊಟ್ಟಿದ್ದಾನೆ."

ನಾನಾ ಭಾಷೆಗಳನ್ನಾಡುವ ವರವನ್ನು ದೇವರು ತಾನೇ ಸಭೆಗೆ ಒಂದು ಉದ್ದೇಶಕ್ಕಾಗಿ ಕೊಟ್ಟಿದ್ದಾನೆ. ಆದ್ದರಿಂದ ನಾವು ಇವನ್ನು ಎದುರಿಸಿದರೆ ದೇವರನ್ನು ಎದುರಿಸುತ್ತೇವೆ. ನಮಗಿಂತ ದೇವರು ಜ್ಞಾನಿಯೆಂಬುದನ್ನು ಮರೆಯದಿರಿ.

ಸತ್ಯ 8

1 ಕೊರಿಂಥ 12:30: "ರೋಗ ವಾಸಿಮಾಡುವ ವರಗಳು ಎಲ್ಲರಿಗೂ ಇವೆಯೇ? ಎಲ್ಲರೂ ವಾಣಿಗಳನ್ನಾಡುವರೋ? ವಾಣಿಗಳ ಅರ್ಥವನ್ನು ಹೇಳುವುದಕ್ಕೆ ಎಲ್ಲರಿಗೂ ಶಕ್ತಿಯುಂಟೋ?"

ಪ್ರತಿಯೊಬ್ಬ ವಿಶ್ವಾಸಿಯು ಅನ್ಯ ಭಾಷೆಗಳನ್ನಾಡುವುದಿಲ್ಲ, ಅಥವಾ ರೋಗ ವಾಸಿ ಮಾಡುವ ವರ ಹೊಂದಿರುವುದಿಲ್ಲ. ಆದ್ದರಿಂದ ಪರಿಶುದ್ಧರಾಗುವುದಕ್ಕಾದರೂ ಅಥವಾ ಪರಿಣಾಮಕಾರಿಯಾಗಿ ಸೇವೆಮಾಡುವುದಕ್ಕಾದರೂ "ಅನ್ಯ ಭಾಷೆಯಾಡುವ" ವರವು ಅವಶ್ಯವೆಂದು ದೇವರು ಭಾವಿಸುವುದಿಲ್ಲ. ಅದು ನಿಜವಾಗಿದ್ದರೆ ದೇವರು ಆ ವರವನ್ನು ಎಲ್ಲರಿಗೂ ಅನುಗ್ರಹಿಸುತ್ತಿದ್ದರು.

ಸತ್ಯ 9

1 ಕೊರಿಂಥ 13:1: "ನಾನು ಮನುಷ್ಯರ ಭಾಷೆಗಳನ್ನೂ ದೇವದೂತರ ಭಾಷೆಗಳನ್ನೂ ಆಡುವವನಾದರೂ ಪ್ರೀತಿಯಿಲ್ಲದವನಾಗಿದ್ದರೆ ನಾದ ಕೊಡುವ ಕಂಚೂ ಗಣಿಗಣಿಸುವ ತಾಳವೂ ಆಗಿದ್ದೇನೆ."

ಪ್ರೀತಿ ಇಲ್ಲದೇ ಅನ್ಯ ಭಾಷೆ ಮಾತಾಡುವುದು ಅಪ್ರಯೋಜನಕಾರಿಯಾಗಿದೆ. ಪ್ರೀತಿಯಿಲ್ಲದಿರುವುದರಿಂದಲೇ ಇತರರಿಗಿಂತ ನಾನು ಹೆಚ್ಚಿನವನೆಂಬ ಅಹಂಕಾರ ಅನ್ಯ ಭಾಷೆಗಳನ್ನಾಡುವವರಿಗೆ ಬರುತ್ತದೆ. ಪ್ರೀತಿ ಇಲ್ಲದ ವಿಶ್ವಾಸಿಗಳು ಗಣಗಣಿಸುವ ತಾಳವು ಹೇಗೆ ನಮ್ಮ ಕಿವಿಗೆ ಕರ್ಕಶವಾಗಿರುತ್ತದೆಯೋ ಹಾಗೆ ದೇವರಿಗೆ ಅಸಹ್ಯವಾಗಿದ್ದಾರೆ.

ಸತ್ಯ 10

1 ಕೊರಿಂಥ 13:8: "ಪ್ರೀತಿಯು ಎಂದಿಗೂ ಬಿದ್ದು ಹೋಗುವುದಿಲ್ಲ; ಪ್ರವಾದನೆಗಳಾದರೋ ಇಲ್ಲದಂತಾಗುವುವು; ವಾಣಿಗಳೋ ನಿಂತುಹೋಗುವುವು; ವಿದ್ಯೆಯೋ ಇಲ್ಲದಂತಾಗುವುದು. ನಾವು ಅಪೂರ್ಣವಾಗಿ ತಿಳಿದುಕೊಳ್ಳುತ್ತೇವೆ ಹಾಗೂ ಅಪೂರ್ಣವಾಗಿ ಪ್ರವಾದಿಸುತ್ತೇವೆ. ಆದರೆ ಸಂಪೂರ್ಣವಾದದ್ದು ಬಂದಾಗ ಅಪೂರ್ಣವಾದದ್ದು ಇಲ್ಲದಂತಾಗುವುದು."

ಕ್ರಿಸ್ತನ ಬರುವಿಕೆಯಲ್ಲಿ ಸಂಪೂರ್ಣವಾದದ್ದು ಬರುವಾಗ ಅನ್ಯ ಭಾಷೆಯಲ್ಲಿ ಮಾತಾಡುವ ಅವಶ್ಯಕತೆ ಇರುವುದಿಲ್ಲ. ಯಾವ ರೀತಿಯಾಗಿ ಪರಲೋಕದಲ್ಲಿ ಬೈಬಲ್ ಅಧ್ಯಯನ ಅಥವಾ ಪ್ರವಾದನೆಯ ಅವಶ್ಯಕತೆ ಇರುವುದಿಲ್ಲವೋ ಹಾಗೆಯೇ ಪರಲೋಕದಲ್ಲಿ "ಅನ್ಯ ಭಾಷೆಗಳ" ಅಗತ್ಯವಿರುವುದಿಲ್ಲ.

One Para missing

ಸತ್ಯ 11

1 ಕೊರಿಂಥ 14:2: "ವಾಣಿಯನ್ನಾಡುವವನು ಅಂದರೆ ಅನ್ಯಭಾಷೆಗಳಲ್ಲಿ ಮಾತಾಡುವವನು ದೇವರ ಸಂಗಡ ಮಾತಾಡುತ್ತಾನೆ ಹೊರತು ಮನುಷ್ಯರ ಸಂಗಡ ಮಾತನಾಡುವುದಿಲ್ಲ. ಅವನು ಆತ್ಮಪ್ರೇರಿತನಾಗಿ ರಹಸ್ಯಾರ್ಥಗಳನ್ನು ನುಡಿಯುತ್ತಿದ್ದರೂ, ಅದನ್ನು ಯಾರೂ ತಿಳಿದುಕೊಳ್ಳುವುದಿಲ್ಲ."

ಇಲ್ಲಿ ಹೇಳಿರುವ ಅನ್ಯ ಭಾಷೆಯ ವರವು ಪಂಚಾಶತ್ತಮ ದಿನದಲ್ಲಿ ಪ್ರಕಟವಾದ ಭಾಷೆಗಿಂತ ವಿಭಿನ್ನವಾಗಿದೆ ಈ ವರವು "ಮನುಷ್ಯರೊಂದಿಗೆ ಅಲ್ಲ, ದೇವರೊಂದಿಗೆ ಮಾತಾಡುವುದಾಗಿದೆ". ಮಾತಡುವವನನ್ನು ಯಾರೂ ಅರ್ಥಮಾಡಿಕೊಳ್ಳರು.

ಸತ್ಯ 12

1 ಕೊರಿಂಥ 14:4: "ವಾಣಿಯನ್ನಾಡುವವನು ತನಗೆ ಮಾತ್ರ ಭಕ್ತಿವೃದ್ಧಿಯನ್ನುಂಟುಮಾಡುತ್ತಾನೆ."

ಅನ್ಯ ಭಾಷೆಯ ವರವು ವಿಶ್ವಾಸಿಯು ತನ್ನ ಭಕ್ತಿವೃದ್ಧಿಯನ್ನುಂಟುಮಾಡಲು ಅನುಕೂಲವಾಗಿದೆ.

ಸತ್ಯ 13

1 ಕೊರಿಂಥ 14:5,6: "ನೀವೆಲ್ಲರೂ ವಾಣಿಗಳನ್ನಾಡಬೇಕೆಂದು ಅಪೇಕ್ಷಿಸಿದರೂ ಅದಕ್ಕಿಂತಲೂ ನೀವು ಪ್ರವಾದಿಸಬೇಕೆಂಬುದೇ ನನ್ನಿಷ್ಟ. ವಾಣಿಗಳನ್ನಾಡುವವನು ಸಭೆಗೆ ಭಕ್ತಿವೃದ್ಧಿಯಾಗುವುದಕ್ಕಾಗಿ ಆ ವಾಣಿಯ ಅರ್ಥವನ್ನು ಹೇಳದೆ ಹೋದರೆ ಅವನಿಗಿಂತ ಪ್ರವಾದಿಸುವವನು ಶ್ರೇಷ್ಟ. ಹೀಗಿರುವುದರಿಂದ ಸಹೋದರರೇ, ನಾನು ನಿಮ್ಮ ಬಳಿಗೆ ಬಂದು ದೇವರು ತಿಳಿಸಿದ್ದಿನ್ನು ಪ್ರಕಟಿಸದೆ ಜ್ಞಾನವಾಕ್ಯವನ್ನಾಡದೆ, ಪ್ರವಾದಿಸದೆ, ಉಪದೇಶಮಾಡದೆ ವಾಣಿಗಳನ್ನು ಮಾತ್ರ ಆಡುವವನಾಗಿದ್ದರೆ ನನ್ನಿಂದ ನಿಮಗೇನು ಪ್ರಯೋಜನವಾದೀತು?"

ಎಲ್ಲರೂ ವಾಣಿಗಳನ್ನಾಡಬೇಕೆಂದು ಪೌಲನು ಅಪೇಕ್ಷಿಸಿದನು. ಆದರೆ ಎಲ್ಲರೂ ವಾಣಿಗಳನ್ನಾಡುವುದಿಲ್ಲ ಅಥವಾ ಅನ್ಯ ಭಾಷೆಗಳನ್ನಾಡುವುದಿಲ್ಲವೆಂದು ಇದು ತಿಳಿಸುವ ಇನ್ನೊಂದು ವಾಕ್ಯವಾಗಿದೆ.

ಪೌಲನ ಹಾಗೆ ವಿವಾಹವಾಗದೇ ಒಂಟಿಯಾಗಿರಬೇಕೆಂಬ ಅಪೇಕ್ಷೆಯಂತೆ ಇದೂ ಕೂಡ ಆತನ ಅಪೇಕ್ಷೆಯಲ್ಲಿ ಒಂದಾಗಿತ್ತು (1 ಕೊರಿಂಥ 7:7). ಒಂಟಿಯಾಗಿರುವುದರಲ್ಲಿ ಕೆಲವು ಲಾಭವನ್ನು ಪೌಲನು ಅರಿತಿದ್ದನು. ನಾನಾ ಭಾಷೆಗಳನ್ನಾಡುವವರಲ್ಲಿಯೂ ಪ್ರಯೋಜನವಿದೆಯೆಂದು ಆತನು ಅರಿತಿದ್ದನು. ದೇವರು ಕೆಲವರಿಗೆ ಮಾತ್ರ ಒಂಟಿಯಾಗಿರುವ ವರವನ್ನು ಕೊಡುವ ಹಾಗೆ ಕೆಲವರಿಗೆ ಮಾತ್ರ ನಾನಾ ಭಾಷೆಗಳ ವರವನ್ನು ಕೊಡಲು ಆತನು ನಿರ್ಣಯಿಸುತ್ತಾನೆ.

ಆದ್ದರಿಂದ ಎಲ್ಲರೂ ವಿವಾಹವಾಗದೆ ಒಂಟಿ ಜೀವನ ಜೀವಿಸಬೇಕೆಂದು ಹೇಳುವ ಮೂರ್ಖತನದಂತೆ ಎಲ್ಲರೂ ಅನ್ಯಭಾಷೆಯಲ್ಲಿ ಮಾತಾಡಬೇಕು ಎಂದು ಹೇಳುವುದು ಮೂರ್ಖತನವಾಗಿದೆ!!

ಸಭೆಯ ಕೂಟಗಳಲ್ಲಿ ಇತರರನ್ನು "ಉತ್ತೇಜಿಸಿ, ಪ್ರೋತ್ಸಾಹಿಸಿ, ಸಾಂತ್ವನದ" ಮಾತುಗಳನ್ನಾಡುವುದು ಒಳ್ಳೆಯದು (1 ಕೊರಿಂಥ 14:3). ಆದರೆ "ವಾಣಿಗಳ" ಅರ್ಥವನ್ನು ಹೇಳುವುದೂ ಅಷ್ಟೇ ಪ್ರಯೋಜನಕಾರಿಯಾಗಿದೆ.

ಸತ್ಯ14

1 ಕೊರಿಂಥ 14:9,13:"ಹಾಗೆಯೇ ನೀವೂ ತಿಳಿಯಬಹುದಾದ ಭಾಷೆಯನ್ನು ಬಾಯಿಂದ ಆಡದೆ ಹೋದರೆ ನಿಮ್ಮ ಮಾತಿನ ಅರ್ಥವನ್ನು ಹೇಗೆ ತಿಳಿಯುವುದು? ಅದು, ನೀವು ಗಾಳಿಯಲ್ಲಿ ಮಾತಾಡಿದಂತಾಯಿತಷ್ಟೆ. ಆದ್ದರಿಂದ ವಾಣಿಯನ್ನಾಡುವವನು ತನಗೆ ಅದರ ಅರ್ಥವನ್ನು ಹೇಳುವ ಶಕ್ತಿಯೂ ಉಂಟಾಗಬೇಕೆಂದು ದೇವರನ್ನು ಪ್ರಾರ್ಥಿಸಲಿ."

ಸಭೆಯ ಕೂಟಗಳಲ್ಲಿ "ಅನ್ಯ ಭಾಷೆಗಳ (ವಾಣಿಗಳ)" ಅರ್ಥವನ್ನು ವಿವರಿಸುವುದು ಅಗತ್ಯ.

ಸತ್ಯ 15

1 ಕೊರಿಂಥ 14:14:"ಏಕೆಂದರೆ ನಾನು ವಾಣಿಯನ್ನಾಡುತ್ತಾ ದೇವರನ್ನು ಪ್ರಾರ್ಥಿಸಿದರೆ ನನ್ನಾತ್ಮವು ಪ್ರಾರ್ಥಿಸುವುದೇ ಹೊರತು ನನ್ನ ಬುದ್ಧಿ ನಿಷ್ಫಲವಾಗುವುದು."

ಅನ್ಯ ಭಾಷೆಗಳಲ್ಲಿ ಮಾತನಾಡುವಾಗ ತಾನು ಏನು ಪ್ರಾರ್ಥಿಸುತ್ತಿದ್ದಾನೆ ಎಂದು ಅವನಿಗೆ ಗೊತ್ತಿರುವುದಿಲ್ಲ. ಆದರೂ ಪೌಲನು ತಾನು ಅನ್ಯ ಭಾಷೆಯಲ್ಲೂ ಪ್ರಾರ್ಥಿಸಿ, ಹಾಡಲು ಅಪೇಕ್ಷಿಸಿದನು.

ಸತ್ಯ 16

1 ಕೊರಿಂಥ 14:18 :"ನಾನು ನಿಮ್ಮೆಲ್ಲರಿಗಿಂತಲೂ ಹೆಚ್ಚಾಗಿ ವಾಣಿಗಳನ್ನಾಡುತ್ತೇನೆಂದು ದೇವರನ್ನು ಕೊಂಡಾಡುತ್ತೇನೆ."

ಈ ವರಕ್ಕಾಗಿ ಪೌಲನು ದೇವರಿಗೆ ಕೃತಜ್ಞತೆಯುಳ್ಳವನಾಗಿದ್ದನು. ಖಂಡಿತವಾಗಿಯೂ ಇದು ಆತನಿಗೆ ಸಹಾಯಕಾರಿಯಾಗಿತ್ತು.

ಸತ್ಯ 17

1 ಕೊರಿಂಥ 14:19:"ಆದರೂ ಸಭೆಯಲ್ಲಿ ವಾಣಿಯಿಂದ ಹತ್ತು ಸಾವಿರ ಮಾತುಗಳನ್ನಾಡುವುದಕ್ಕಿಂತ ನನ್ನ ಬುದ್ಧಿಯಿಂದ ಐದೇ ಮಾತುಗಳನ್ನಾಡಿ ಇತರರಿಗೆ ಉಪದೇಶಮಾಡುವುದು ನನಗೆ ಇಷ್ಟವಾದದ್ದು."

ಸಭೆಯ ಕೂಟಗಳಲ್ಲಿ ಸ್ವಭಾಷೆಯಲ್ಲಿ ಮಾತನಾಡುವುದು ಅತ್ಯುತ್ತಮ.

ಸತ್ಯ 18

1 ಕೊರಿಂಥ 14:22:"ಆದ್ದರಿಂದ ವಾಣಿಗಳನ್ನಾಡುವದು ನಂಬದವರಿಗೆ ಸಂಕೇತವಾಗಿದೆಯೇ ಹೊರತು ನಂಬುವವರಿಗಲ್ಲವೆಂದು ನಾವು ತಿಳಿದುಕೊಳ್ಳಬೇಕು."

ಪಂಚಾಶತ್ತಮ ದಿನದಂತೆಯೇ ಅನ್ಯ ಭಾಷೆಯು ಅವಿಶ್ವಾಸಿಗಳಿಗೆ ಒಂದು ಸಂಕೇತವಾಗಿದೆ.

ಸತ್ಯ 19

1 ಕೊರಿಂಥ 14:26:"ಹೀಗಿರುವಲ್ಲಿ ಸಭೆಯೆಲ್ಲಾ ಒಂದೇ ಸ್ಥಳದಲ್ಲಿ ಒಟ್ಟು ಸೇರಿದಾಗ ಎಲ್ಲರೂ ವಾಣಿಗಳನ್ನಾಡಿದರೆ ಈ ವರವನ್ನು ಹೊಂದದಿರುವ ಸಭೆಯವರು ಅಥವಾ ಕ್ರಿಸ್ತನಂಬಿಕೆಯಿಲ್ಲದವರು ನಿಮ್ಮನ್ನು ನೋಡಿ ನಿಮಗೆ ಹುಚ್ಚು ಹಿಡಿದಿದೆಯೆಂದು ಹೇಳುವುದಿಲ್ಲವೋ?"

ಎಲ್ಲರೂ ಸಭೆಯ ಕೂಟಗಳಲ್ಲಿ ಅನ್ಯ ಭಾಷೆಗಳನ್ನಾಡುವುದು ಹುಚ್ಚುತನ. ಏಕೆಂದರೆ ಅದು ಯಾರಿಗೂ ಅರ್ಥವಾಗುವುದಿಲ್ಲ. (ಇದು ಖಂಡಿತವಾಗಿಯೂ ವೈಯಕ್ತಿಕ ಪ್ರಾರ್ಥನೆಯ ಕೂಟದ ಉಲ್ಲೇಖ, ಪ್ರಾರ್ಥನೆಯ ಸಮಯದಲ್ಲಿ ಎಲ್ಲರೂ ಒಟ್ಟಾಗಿ ಪ್ರಾರ್ಥಿಸುವಾಗ ನಮಗೆ ತಿಳಿದಿರುವ ಭಾಷೆಯಲ್ಲೇ ಇನ್ನೊಬ್ಬರು ಪ್ರಾರ್ಥಿಸಿದರೂ, ನಾವು ಅದನ್ನು ಕೇಳಿಸಿಕೋಳ್ಳುವದಿಲ್ಲ.)

ಸತ್ಯ 20

1 ಕೊರಿಂಥ 14:26,27: "ನೀವು ಒಟ್ಟುಸೇರಿದಾಗ ಒಬ್ಬನು ಹಾಡುವುದೂ, ಇನ್ನೊಬ್ಬನು ಉಪದೇಶ ಮಾಡುವುದೂ, ಮತ್ತೊಬ್ಬನು ತನಗೆ ಪ್ರಕಟವಾದದ್ದನ್ನು ತಿಳಿಸುವುದೂ, ಮತ್ತೂ ಒಬ್ಬನು ವಾಣಿಯನ್ನಾಡುವುದು ಹಾಗೂ ಇನ್ನೂ ಒಬ್ಬನು ಅದರ ಅರ್ಥವನ್ನು ಹೇಳುವುದೂ ಉಂಟಷ್ಟೆ. ನೀವು ಏನನ್ನು ನಡೆಸಿದರೂ ಅದನ್ನು ಭಕ್ತಿವೃದ್ಧಿಗಾಗಿ ನಡೆಸಿರಿ. ವಾಣಿಯನ್ನಾಡುವುದಾದರೆ ಇಬ್ಬರು ಅಥವಾ ಅವಶ್ಯವಿದ್ದರೆ ಮೂವರಿಗಿಂತ ಹೆಚ್ಚಿಲ್ಲದೆ ಒಬ್ಬೊಬ್ಬರಾಗಿ ಮಾತಡಬೇಕು."

ಸಭೆಯ ಕೂಟಗಳಲ್ಲಿ ಇಬ್ಬರು ಅಥವಾ ಮೂವರಿಗಿಂತ ಹೆಚ್ಚಿಗೆ ಜನರು ಅನ್ಯ ಭಾಷೆಗಳಲ್ಲಿ ಮಾತಾಡಬಾರದು. ಆದರೆ ಪ್ರತಿಯೊಬ್ಬನ ವಾಣಿಯ ಅರ್ಥವನ್ನು ವಿವರಿಸಬೇಕು. ಅರ್ಥ ಹೇಳುವುದು ಭಾಷಾಂತರವಲ್ಲ. ಭಾಷಾಂತರವು ಪ್ರತಿಯೊಂದು ಶಬ್ದದ ಅರ್ಥ ಕೊಡುವುದಾಗಿದೆ. ಆದರೆ "ಅರ್ಥವಿವರಣೆಯು ತನ್ನ ಸ್ವಂತ ಮಾತುಗಳಲ್ಲಿ ಮುಖ್ಯ ವಿಚಾರಗಳನ್ನು ಹೇಳುವುದಾಗಿದೆ."

ಸತ್ಯ 21

1 ಕೊರಿಂಥ 14:39 :"ಆದಕಾರಣ ನನ್ನ ಸಹೋದರರೆ, ಪ್ರವಾದಿಸುವುದನ್ನು ಆಸಕ್ತಿಯಿಂದ ಅಪೇಕ್ಷಿಸಿರಿ ಮತ್ತು ವಾಣಿಯನ್ನಾಡುವುದನ್ನು ಬೇಡವೆನ್ನದಿರಿ."

ಅಂತಿಮವಾಗಿ ನಾನು ಹೇಳುವುದೇನೆಂದರೆ, ಅನ್ಯ ಭಾಷೆಯಾಡುವವರನ್ನು ತಡೆಯಬೇಡಿರಿ. ಆದರೆ ನೀವು ಯಾವುದೇ ವರವನ್ನು, ಅಪೇಕ್ಷಿಸುವುದಾಗಿದ್ದಲ್ಲಿ ಅನ್ಯ ಭಾಷೆಯ ವರಕ್ಕಿಂತ ಪ್ರವಾದನೆಯ ವರವನ್ನು ಅಪೇಕ್ಷಿಸಿರಿ.

ನಿಜವಾದ ಹಾಗೂ ನಿಜವಲ್ಲದ ಅನ್ಯ ಭಾಷಾ ವರ:

ಅನ್ಯ ಭಾಷೆಗಳನ್ನಾಡುವುದರಲ್ಲಿ ಸ್ವಲ್ಪದರ ಮಟ್ಟಿಗೆ ರಹಸ್ಯ ಅಡಕವಾಗಿದೆಯೆಂದು ಅನ್ಯ ಭಾಷೆಯನ್ನಾಡುವ ಪ್ರಾಮಾಣಿಕರೆಲ್ಲರು ಒಪ್ಪಿಕೊಳ್ಳುವರು. ಇದರ ಬಗ್ಗೆ ನಮಗೆ ಎಲ್ಲವೂ ತಿಳಿದಿಲ್ಲ. ನಾವು ಸ್ವಲ್ಪ ಮಟ್ಟಿಗೆ ಇದನ್ನು ತಿಳಿದಿದ್ದೇವೆ. (1 ಕೊರಿಂಥ 13:12)

ಕಳೆದ 26 ವರ್ಷಗಳಿಂದ ಅನ್ಯ ಭಾಷೆಯಲ್ಲಿ ಮಾತಾಡಿದ ಅನುಭವದಿಂದ ಈ ವಿಷಯದ ಬಗ್ಗೆ ನಾನು ಅರ್ಥಮಾಡಿಕೊಂಡದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಒಬ್ಬ ವ್ಯಕ್ತಿಯು ಅನ್ಯ ಭಾಷೆ ಮಾತನಾಡುವಾಗ ಅವನ ಆತ್ಮವು ಮನಸ್ಸನ್ನು ಬದಿಗಿಟ್ಟು ನೇರವಾಗಿ ಹೃದಯದಿಂದ ಬಾಯಿಯ ಮೂಲಕ ಅಕ್ಷರಗಳನ್ನು ನುಡಿಯುತ್ತದೆ. ಹೀಗೆ ಅಂತರಾಳದಲ್ಲಿರುದೆಲ್ಲವನ್ನು ಅವನು ದೇವರ ಮುಂದೆ ಸುರಿಯುತ್ತಾನೆ. ಅದು ಆನಂದ ದುಖಃ ಅಥವಾ ನಿರಾಶೆಯ ಭಾರವಾಗಿರಬಹುದು. ಹೀಗೆ ಆತನ ಹೃದಯದಲ್ಲಿದ್ದ ಒತ್ತಡವು ಬಿಡುಗಡೆಯಾಗಿ ಆತನು 'ಸಂತೈಸಲ್ಪಡುತ್ತಾನೆ.'

ಅ. ಕೃ. 2:4 ರಲ್ಲಿ ನಾವು ಈ ಮೊದಲೇ ನೋಡಿದಂತೆ ಆ ವ್ಯಕ್ತಿ ತಾನೇ ಮಾತಾಡುತ್ತಾನೆಯೇ ಹೊರತು ಪವಿತ್ರಾತ್ಮನು ಮಾತಾಡುವುದಿಲ್ಲ. ಮಾತಾಡುವ ಮನುಷ್ಯನು ತಾನು ತನ್ನ ಭಾಷೆಯನ್ನು ಕಲಿಯುವಾಗ ಅಕ್ಷರಗಳನ್ನು ಅಥವಾ ಶಬ್ದಗಳನ್ನು ಹೇಗೆ ಕಲಿಯುತ್ತಾನೋ ಹಾಗೆಯೇ ಇಲ್ಲಿಯೂ ಸಹ. ಆದರೆ ಒಂದೇ ವ್ಯತ್ಯಾಸವೇನೆಂದರೆ ಆತನು ಈಗ ತನಗೆ ಗೊತ್ತಿರುವ ಭಾಷೆಯನ್ನು ಮಾತಾಡುವುದಿಲ್ಲ. ಆದರೆ ದೇವರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಹೃದಯದಿಂದ ನೇರವಾಗಿ ಬಾಯಿಗೆ ಬರುವ ಶಬ್ದಗಳನ್ನು ಮಾತಾಡುತ್ತಾನೆ. ತಾನು ಏನು ಹೇಳುತ್ತಿದ್ದಾನೆಂದು ಅವನಿಗೆ ತಿಳಿಯದಿದ್ದರೂ, ದೇವರು ತನ್ನ ಹೃದಯದ ಆಶೆ, ಆಕಾಂಕ್ಷೆ, ಭಾರವನ್ನು ಬಲ್ಲನೆಂದು ಆತನಿಗೆ ಗೊತ್ತು.

ಆತನ ಮನಸ್ಸು ತನಗೆ ತಿಳಿದಿರುವ ಭಾಷೆಯಲ್ಲಿ ಮಾತನಾಡದಷ್ಟು ಆಯಾಸವಾಗಿದ್ದಾಗ, ಈ ರೀತಿಯಾಗಿ ಪ್ರಾರ್ಥಿಸುವುದರಿಂದ ಅವನ ಮನಸ್ಸು ಹಗುರವಾಗುವುದು. ಇದು ಹೇಗೆ ಆಗುತ್ತದೆಂದು ನಮಗೆ ವಿವರಿಸಲಾಗದಿದ್ದರೂ ಇದು ಕಾರ್ಯ ನಿರ್ವಹಿಸುತ್ತದೆ.

ಅರ್ಥ ವಿವರಣೆಯ ವರದ ಕುರಿತು ಈಗ ತಿಳಿಯುವ. ನಾವು ಈಗಾಗಲೇ ನೋಡಿದಂತೆ ವಾಣಿಗಳ ವಿವರಣೆ ಕೊಡುವುದು ಪ್ರವಾದನೆಯ ವರಕ್ಕೆ ಸಮಾನವಾಗಿದೆ. ಆದ್ದರಿಂದ ಪ್ರವಾದನೆಯ ವರವಿರುವವನಿಗೆ ಈ ವರವು ಸಾಮಾನ್ಯವಾಗಿ ದೊರಕುತ್ತದೆ.

ಸಭಾಕೂಟದಲ್ಲಿ ಒಬ್ಬರು ನಿಜವಾದ ಅನ್ಯಭಾಷೆಯಲ್ಲಿ ಮಾತಾಡಿದರೆ, ಪ್ರವಾದನೆ ವರವಿರುವವರು (ಸಾಮಾನ್ಯವಾಗಿ ಹಿರಿಯರಲ್ಲೊಬ್ಬರು), ಅವರು ದೇವರ ಬೆಳಕಿನಲ್ಲಿ ನಡೆಯುವವರಾಗಿದ್ದಲ್ಲಿ ಒಂದು ವಿಚಾರವು ಅವರ ಮನಸ್ಸಿನಲ್ಲಿ ಅಚ್ಚಾಗುವುದರ ಮೂಲಕ ಅವರು ಆ ವಿಚಾರದ ಅರ್ಥ ವಿವರಿಸುತ್ತಾರೆಯೇ ಹೊರತು ಅದನ್ನು ಭಾಷಾಂತರಿಸುವುದಿಲ್ಲ.

ವಾಣಿಗಳ ಅರ್ಥಹೇಳುವ ವರವಿರುವ ಇನ್ನೊಬ್ಬ ಹಿರಿಯರು ಅದನ್ನು ವಿವರಿಸಬೇಕಾಗಿದ್ದಲ್ಲಿ ಅರ್ಥವು ಒಂದೇ ಅಗಿದ್ದರೂ ಶಬ್ದಗಳು ಬೇರೆಯಾಗಬಹುದು. ಆ ಇಬ್ಬರು ಹಿರಿಯರು ಕರ್ತನೊಂದಿಗೆ ಸಂಪೂರ್ಣ ಬೆಳಕಿನಲ್ಲಿ ನಡೆಯುವವರಾದರೆ ಇದು ಸಾಧ್ಯ. ಹೇಗೆ ದೇವರಿಂದ ಬರುವ ಪ್ರಕಟನೆಯು ಸತ್ಯವೇದಕ್ಕೆ ವಿರೋಧವಾಗಿರುವುದಿಲ್ಲವೋ ಹಾಗೆಯೇ ವಾಣಿಗಳ ಅರ್ಥವೂ ಎಲ್ಲಾ ನಿಜವಾದ ಪ್ರವಾದನೆಯಂತೆ ದೇವರ ವಾಕ್ಯಕ್ಕೆ ಅನುಗುಣವಾಗಿರುತ್ತದೆ.

ಆತ್ಮಿಕ ವರಗಳಲ್ಲಿ ನಂಬಿಕೆಯಿಲ್ಲದ ಕೆಲವರು ಈ ಪ್ರಶ್ನೆಯನ್ನು ಕೇಳಿದ್ದಾರೆ. "ಸಭಾಕೂಟದಲ್ಲಿ ಒಬ್ಬರು ತಿಳಿಸಿದ ಅನ್ಯ ಭಾಷಾ ವರದ ಅರ್ಥವನ್ನು ರೆಕಾರ್ಡ್ ಮಾಡಿ ಪ್ರವಾದನೆಯ ವರವಿರುವ ಇನ್ನೊಬ್ಬರ ಬಳಿ ಹೋಗಿ ಅದರ ಅರ್ಥ ಕೇಳಿದರೆ ಅವೆರಡೂ ಒಂದೇ ಅಗಿರುತ್ತವೆಯೇ?" ಈ ಪ್ರಶ್ನೆಯನ್ನು ಈ ರೀತಿಯಾಗಿ ಉತ್ತರಿಸಬಹುದು: ಈ ಈರ್ವರು ದೇವರ ಮನಸ್ಸನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರೆ ಅದು ಒಂದೇ ತೆರನಾಗಿರಬೇಕು. ಆದರೆ ಅರ್ಥವು ವಿಭಿನ್ನವಾಗಿದ್ದಲ್ಲಿ ಅವರಲ್ಲೊಬ್ಬರು ಅಥವಾ ಅವರಿಬ್ಬರೂ ದೇವರ ಮನಸ್ಸನ್ನು ಚೆನ್ನಾಗಿ ಅರಿತುಕೊಂಡಿಲ್ಲವೆಂದು ನಾವು ಹೇಳಬಹುದು. ಅದು ತಪ್ಪೇನಲ್ಲ. ಏಕೆಂದರೆ ಈ ಪ್ರಪಂಚದಲ್ಲಿ ಯಾವ ವಿಶ್ವಾಸಿಯೂ ದೇವರ ಮನಸ್ಸನ್ನು ಸಂಪೂರ್ಣವಾಗಿ ಅರಿತುಕೊಂಡಿಲ್ಲ.

ಈ ಉದಾಹರಣೆಯು ಸಂಶಯವಿಲ್ಲದೆ ಈ ಸತ್ಯವನ್ನು ಪ್ರತಿಪಾದಿಸುತ್ತದೆ. ಯಾರೊಬ್ಬರಿಗೆ ಕೂಟದಲ್ಲಿ ಒಂದು ಪ್ರತ್ಯೇಕ ವಿಶಯದ ಬಗ್ಗೆ ಮಾತನಾಡಬೇಕೆಂದು ಕರ್ತನಿಂದ ಬಂದ ಭಾರವಿದ್ದು ಆತನಿಗೆ ಅ ಕೂಟದಲ್ಲಿ ಭಾಗವಹಿಸಲು ಅಸಾಧ್ಯವಾದ ಸಂದರ್ಭದಲ್ಲಿ, ಅದೇ ಮಾತನ್ನು ಇನ್ನೊಬ್ಬರು ನಿಮ್ಮ ಬದಲಾಗಿ ಮಾತಾಡಿದಾಗ, ನಿಜವಾಗಿ ಹೇಳುವುದಾದರೆ ಆ ವ್ಯಕ್ತಿಯು ನಿಮ್ಮ ಹೃದಯದಲ್ಲಿದ್ದ ಸಂದೇಶವನ್ನೇ ನೀಡಬೇಕು. ಆ ಸಹೋದರನು ನೀವು ನೀಡಬಯಸಿದ್ದ ಸಂದೇಶವನ್ನು ನೀಡಲಿಲ್ಲವಾದರೆ, ನಿಮ್ಮಲ್ಲೊಬ್ಬರಿಗೆ ಕೂಟಕ್ಕೆ ಕರ್ತನಿಗಿದ್ದ ಚಿತ್ತದ ಬಗ್ಗೆ ಸರಿಯಾದ ಅರಿವಿರಲಿಲ್ಲ ಎಂಬುದನ್ನು ಅದು ಸೂಚಿಸುತ್ತದೆ. ಆದ ಕಾರಣ, ವಿಶ್ವಾಸಿಗಳು ತಮ್ಮದೇ ಭಾಷೆಯಲ್ಲಿ ಕೊಡುವ ಸಂದೇಶದಲ್ಲಿ ತಪ್ಪು ಮಾಡ ಬಹುದು ಎಂಬುದು ನಮಗೆ ತೋರುತ್ತದೆ.

ಆದಕ್ಕಾಗಿಯೇ, ನಾವು ಒಬ್ಬ ಪ್ರವಾದಿಯ ಸಂದೇಶವನ್ನು ಕೂಡ ಪರಿಶೀಲಿಸಬೇಕೆಂಬುದನ್ನು ಸತ್ಯವೇದವು ನಮಗೆ ತಿಳಿಸುತ್ತದೆ (1 ಕೊರಿಂಥ 14:29)......

ಎಲ್ಲಾ ಅತ್ಮಗಳನ್ನು ನಂಬಬೇಡಿರಿ ಎಂದು ಯೋಹಾನನು 1 ಯೋಹಾನ 4:1 ರಲ್ಲಿ ನಮಗೆ ಎಚ್ಚರಿಸುತ್ತಾನೆ. ಅವುಗಳು ದೇವರಿಂದ ಬಂದವುಗಳೋ ಅಲ್ಲವೋ ಎಂದು ಪರೀಕ್ಷಿಸಿ ಎಂದು ತಿಳಿಸುತ್ತಾನೆ. ಅನೇಕ "ಅದ್ಭುತ ಪ್ರವಾದನೆಗಳು" ದೇವರಿಂದ ಬಂದಿರಲಾರವು. ನಮ್ಮ ಆತ್ಮದಲ್ಲಿ ಗೊಂದಲವುಂಟಾದಲ್ಲಿ ನಾವು ಅನ್ಯ ಭಾಷೆ ಅಥವಾ ಅದರ ಅರ್ಥ, ಪ್ರವಾದನೆ ತಳ್ಳಿಹಾಕ ಬೇಕು ಎನ್ನುತ್ತಾನೆ ಯೋಹಾನ.

ಯಾವುದನ್ನೂ ಪ್ರಶ್ನಿಸದೆ ಎಲ್ಲಾ ಅಲೌಖಿಕ ಅದ್ಭುತಗಳನ್ನು ನಾವು ಸ್ವೀಕರಿಸುವುದರಿಂದಲೇ ಕ್ರೈಸ್ತತ್ವದಲ್ಲಿ ಇಂದು ಬಹಳ ಗೊಂದಲ ಉಂಟಾಗಿರುವುದಲ್ಲದೆ ಕರ್ತನ ನಾಮಕ್ಕೆ ಅದು ಕಳಂಕವನ್ನು ಕೂಡ ತಂದಿದೆ.

ಅಪೊಸ್ತಲರ ಕೃತ್ಯಗಳಲ್ಲಿ ಅನ್ಯ ಭಾಷೆಗಳ ಪ್ರತಿಯೊಂದು ಉಲ್ಲೇಖಗಳಲ್ಲಿ ಈ ಕೆಳಗಿನ ಸತ್ಯಗಳನ್ನು ಗಮನಿಸಿರಿ:

1. ಪ್ರತಿಯೊಂದು ಸನ್ನಿ ವೇಷದಲ್ಲಿ ಅವರು ಸ್ವಯಂಪ್ರೇರಿತರಾಗಿ ಮಾತಾಡಿದರು.

2. ಎಲ್ಲರೂ ಮಾತಾಡಿದರು.

3. ಹೇಗೆ ಮಾತಾಡಬೇಕೆಂದು ಯಾರೂ ಅವರಿಗೆ ಕಲಿಸಲಿಲ್ಲ.

ಆದರೆ ಇಂದು ಅನೇಕ ಸಂದರ್ಭಗಳಲ್ಲಿ ಮೇಲಿನ ಯಾವುಗಳನ್ನೂ ನಾವು ಕಾಣುವುದಿಲ್ಲ. ಯಾರೂ ಕಲಿಸದೆ ಎಲ್ಲಿ ಜನರು ಸ್ವಯಂಪ್ರೇರಿತರಾಗಿ ಮಾತನಾಡುತ್ತಾರೋ ಅದು ನಿಜವಾದ ಅನ್ಯ ಭಾಷಾ ವರ.

ನನ್ನ ಅನುಭವದಲ್ಲಿ "ಅನ್ಯ ಭಾಷೆ ಮಾತಾಡಿದವರಲ್ಲಿ" ಸ್ವಲ್ಪ ಜನ ಮಾತ್ರ ನಿಜವಾಗಿಯೂ ಅತ್ಮದಿಂದ ಪ್ರೇರಿತರಾಗಿ ಮಾತಾಡಿದನ್ನು ನಾನು ಕೇಳಿದ್ದೇನೆ. ಇನ್ನುಳಿದವರು ಇತರರನ್ನು ಮೆಚ್ಚಿಸಲೋ ಅಥವಾ ಅಂಥಹ ಪಂಗಡಗಳಲ್ಲಿ ಸೇರುವ ಉದ್ದೇಶದಿಂದ ಅನುಕರಣೆ ಮಾಡುವವರಾಗಿದ್ದಾರೆ. ಇನ್ನೂ ಕೆಲವರ ಭಾಷಾ ವರವು ದೇವರಿಂದ ಬಂದದ್ದಲ್ಲ, ಅನೇಕ ಸ್ಥಳಗಳಲ್ಲಿ, ದೇಶಗಳಲ್ಲಿ ನಾನು ವೀಕ್ಷಿಸಿದ್ದೇನಂದರೆ ಅವರ ಫಲಗಳು ಮತ್ತು ಫಲತಾಂಶಗಳು ಅನೇಕ ಸಭೆಗಳಲ್ಲಿ ಅನ್ಯ ಭಾಷೆಗಳಲ್ಲಿ ಮಾತಾಡುವುದು ಮತ್ತು ಹಾಡುವುದು ಒಂದು ವಿಧವಾದ "ಪ್ರದರ್ಶನ"ವಾಗಿದೆ. ಪ್ರದರ್ಶನವು ಚಿಕ್ಕ ಮಕ್ಕಳ ಸ್ವಭಾವ.

ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವ ವಾಸ್ತವಿಕತೆಯೇನೆಂದರೆ ಅನ್ಯ ಭಾಷೆಯಲ್ಲಿ ಮಾತಾಡುವ ಗುಂಪಿನಲ್ಲಿರುವ ವಿಶ್ವಾಸಿಗಳನ್ನು ಅಲ್ಲಿನ ಬೋಧಕರು, ಸಭಾಪಾಲಕರು ಹಣದಾಶೆಗಾಗಿ ಅವರನ್ನು ಶೋಷಿಸುತ್ತಿದ್ದಾರೆ. 20ನೇ ಶತಮಾನದಲ್ಲಿ ತಲೆ ಎತ್ತಿರುವ ವಿವಿಧ ಸುಳ್ಳಾದ ಕ್ರೈಸ್ತ ಸಭೆಗಳು "ಅನ್ಯ ಭಾಷೆ ಮಾತಾಡುವ" ಪಂಗಡಗಳಿಂದ ಬಂದಿವೆ.

ಅದ್ದರಿಂದ ಎಲ್ಲಾ ವಿಶ್ವಾಸಿಗಳಿಗೆ ನನ್ನ ಉಪದೇಶವೇನೆಂದರೆ: "ಅನ್ಯ ಭಾಷಾ ವರ ಮತ್ತು ರೋಗ ಸ್ವಸ್ಥತೆಯೇ ಅತೀ ಪ್ರಾಮುಖ್ಯವೆಂದು ಬೋಧಿಸುವ ಸಭೆಗಳಿಂದ ದೂರವಾಗಿರಿ. ಏಕೆಂದರೆ ಇವರಲ್ಲಿ ಆತ್ಮಿಕ ನಾಯಕರಿಲ್ಲದೆ ನೀವು ವಿಪರೀತಕ್ಕೆ ನಡೆಸಲ್ಪಡುವಿರಿ. ಅದರ ಬದಲಾಗಿ ಯಾವ ಸಭೆಯು ಪರಿಶುದ್ಧ ಜೀವಿತವನ್ನು ಮತ್ತು ಶಿಶ್ಯತ್ವವನ್ನು ಬೋಧಿಸುತ್ತದೋ, ನಿಜವಾದ ಅನ್ಯ ಭಾಷಾ ವರವನ್ನು ಸ್ವೀಕರಿಸುತ್ತದೋ ಮತ್ತು ನಿಮ್ಮ ಜೀವನವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳದೇ ನಿಮ್ಮ ಹಣವನ್ನು ಬಯಸುವುದಿಲ್ಲವೋ, ಅಂಥಹ ಸಭೆಯೊಂದಿಗೆ ಅನ್ಯೋನ್ಯತೆಯನ್ನು ಬಯಸಿರಿ."

ನಾನು ಹೇಳಬಯಸುವ ಇನ್ನೊಂದು ವಿಶಯವೇನೆಂದರೆ ಪವಿತ್ರಾತ್ಮರಿಂದ ನವೀಕರಿಸಲ್ಪಟ್ಟ ಮನಸ್ಸನ್ನು ನಾವು ಹೊಂದಿದ್ದರೆ ದೇವರ ಚಿತ್ತವನ್ನು ಕಂಡುಹಿಡಿಯಲು ಸುಲಭವಾಗುವುದು (ರೋಮಾ 12:2). ಅನೇಕರು ತಮ್ಮ ಮನಸ್ಸನ್ನು ಕಡೆಗಣಿಸುತ್ತಾರೆ, ನಮ್ಮ ಮನಸ್ಸು ಪತ್ನಿಯಂತಿರಬೇಕು. ಆಕೆ ಯಾವತ್ತೂ ಮನೆಯ ಶಿರಸ್ಸಾಗಿರಬಾರದು. ಹಾಗಂತ ಆಕೆಯನ್ನು ಕೊಲ್ಲಬಾರದು ಕೂಡ!! ಯೇಸು ನಮ್ಮ ಪತಿ ಹಾಗೂ ಶಿರಸ್ಸು. ನಮ್ಮ ಮನಸ್ಸು ಆತನಿಗೆ ಅಧೀನವಾಗಿರಬೇಕು.

ಸಂಕ್ಷಿಪ್ತವಾಗಿ "ಅನ್ಯ ಭಾಷೆಯ" ಬಗ್ಗೆ ಸರಿಯಾದ/ಸ್ವಸ್ಥವಾದ ಸಲಹೆ ಇಲ್ಲಿದೆ:

"ದೇವರು ನಿಮಗೆ ಅನ್ಯ ಭಾಷೆಯ ವರವನ್ನು ಕೊಟ್ಟರೆ, ಅದನ್ನು ಸ್ವೀಕರಿಸಿ ಉಪಯೋಗಿಸಿರಿ.ನಿಮ್ಮ ಹೃದಯದಿಂದ ಬರುವ ಶಬ್ದಗಳಿಂದ ನೀವು ಏಕಾಂತದಲ್ಲಿರುವಾಗ ಅಥವಾ ನಿಮ್ಮ ಹೃದಯವು ನಿರಾಶೆಯಿಂದ ಅಥವ ಸಂತೋಷದಿಂದ ತುಂಬಿರುವಾಗ, ಯಾವ ಸ್ಥಳದಲ್ಲಾದರೂ ದೇವರೊಡನೆ ಮಾತಾಡಿರಿ. ಆ ವರವು ನಿಮಗಿಲ್ಲದಿದ್ದರೆ ಚಿಂತಿಸಬೇಡಿರಿ. ಆದರೆ ಅದನ್ನು ಸ್ವೀಕರಿಸಲು ಯಾವಾಗಲೂ ಸಿದ್ಧವಾಗಿರಿ, ಅದನ್ನು ವಿರೋಧಿಸದಿರಿ. ಅದನ್ನು ಪಡೆಯಲು ಅವಸರ ಪಡಬೇಡಿರಿ. ಅದೇ ಸಮಯದಲ್ಲಿ ಕ್ರೈಸ್ತತ್ವದಲ್ಲಿ ನೀವು ನೋಡುವ, ಕೇಳುವ ಪ್ರತಿಯೊಂದೂ ಪ್ರವಿತ್ರಾತ್ಮನಿಂದ ಬಂದದ್ದೆಂದು ನಂಬಬೇಡಿರಿ. ಎಲ್ಲವನ್ನೂ ಪರಿಶೀಲಿಸಿರಿ. ದೇವರು ನಿಮಗೆ ಕೊಟ್ಟಿರುವ ಮನಸ್ಸನ್ನು, ವಿವೇಚನೆಯನ್ನು ಉಪಯೋಗಿಸಿರಿ. ನಿಮಗೆ ಈ ವರವಿಲ್ಲದಿದ್ದರೆ, ಈ ವರವಿರುವವರಿಗಿಂತ ನೀವು ಕೀಳು ಎಂದೂ, ವರವಿದ್ದರೆ ನೀವು ಶ್ರೇಷ್ಟರೆಂದೂ ಭಾವಿಸದಿರಿ. (ಪೌಲನೂ, ಕೊರಿಂಥದ ಕ್ರೈಸ್ತರೂ ಅನ್ಯ ಭಾಷೆಯಲ್ಲಿ ಮಾತಾಡಿದರು. ಆದರೆ, ಪೌಲನು ಆತ್ಮಿಕ ದೈತ್ಯನಾಗಿದ್ದನು, ಕೊರಿಂಥದವರು ಲೌಕಿಕರಾಗಿದ್ದರು!!)"

ಅತ್ಯಾವಶ್ಶಕವಾದದ್ದೇನು?

ಪವಿತ್ರಾತ್ಮನ ಶಕ್ತಿಯಿಂದ ತುಂಬಿಸಲ್ಪಡುವುದೇ ಅತ್ಯಾವಶ್ಶಕವಾದದ್ದು, ಅನ್ಯ ಭಾಷೆಯಲ್ಲ. ಆದರೆ ಬಲವು ಪವಿತ್ರಾತ್ಮನ ದೀಕ್ಷಾಸ್ನಾನದ ಗುರುತಾಗಿದೆ (ಅ.ಕೃ. 1:8).

ಪವಿತ್ರಾತ್ಮನನ್ನು ವಿಶ್ವಾಸದಿಂದ ಪಡೆಯಬೇಕು. (ಯೋಹಾನ 7:37 39). ನಮ್ಮ ಯೋಗ್ಯತೆಗನುಸಾರವಾಗಿ ಅಲ್ಲ ಆದರೆ ಕ್ರಿಸ್ತನ ಯೋಗ್ಯತೆಯಿಂದ ಮಾತ್ರ ಹೇಗೆ ನಾವು ರಕ್ಷಿಸಲ್ಪಟ್ಟೆವೋ ಹಾಗೆಯೇ ಪವಿತ್ರಾತ್ಮನ ವರವು ಉಪವಾಸ ಪ್ರಾರ್ಥನೆಯಿಂದಾಗಲೀ ಅಥವಾ ಒಳ್ಳೆಯ ಕಾರ್ಯಗಳಿಂದ ನಾವು ಪಡೆದುಕೊಳ್ಳಲಾಗುವುದಿಲ್ಲ. ಅದು ದೇವರ ವರವಾಗಿದೆ (ಅ. ಕೃ. 2:38).

ದೇವರು ತನ್ನಲ್ಲಿ ಕೇಳಿಕೊಳ್ಳುವವರಿಗೆ, ಈ ಲೋಕದ ತಂದೆಗಳು ತಮ್ಮ ಮಕ್ಕಳಿಗೆ ಒಳ್ಳೆಯ ವಸ್ತುಗಳನ್ನು ಕೊಡುವುದಕ್ಕಿಂತಲೂ ಹೆಚ್ಚಾಗಿ ಪವಿತ್ರಾತ್ಮನನ್ನು ಅನುಗ್ರಹಿಸುತ್ತಾನೆಂದು ನಂಬಿಕೆಯಿಂದ ಕೇಳಿ ನಾವು ಆತ್ಮನನ್ನು ಪಡೆಯುತ್ತೇವೆ (ಲೂಕ 11:13). ಆತ್ಮನನ್ನು ಪಡೆದಿದ್ದೇವೆಯೆಂದು ನಮಗೆ ಖಚಿತವಾಗಿಲ್ಲದಿದ್ದರೆ, ದೇವರು ನಮಗೆ ಭರವಸೆ ಕೊಡಲೆಂದು ಕೇಳಿಕೊಳ್ಳುವುದು ಉತ್ತಮ. ಅಂಥಹ ಭರವಸೆಯನ್ನು ಆತನು ನಿರಾಕರಿಸುವುದಿಲ್ಲ.

ಹೇಗೇ ನಾವು ಅನೇಕ ಸಾರಿ ತಿಳಿಯದೇ ಪಾಪಮಾಡಿ ಕ್ಷಮೆ ಯಾಚಿಸುತ್ತೇವೋ (ಮತ್ತಾಯ 6:12) ಹಾಗೆಯೇ ನಾವು ನಿರಂತರವಾಗಿ ಆತ್ಮನಿಂದ ತುಂಬಿಸಲ್ಪಡಬೇಕು. ಏಕೆಂದರೆ ನಾವು ಸೋರುವ ಪಾತ್ರೆಗಳು (ಎಫೆಸ 5:18).

ಅನ್ಯ ಭಾಷೆಯಲ್ಲಿ ಮಾತಾಡುವುದಕ್ಕಿಂತಲೂ ಕ್ರಿಸ್ತನ ಕಡೆಗಿರುವ ನಮ್ಮ ನಿಷ್ಟೆಯು ಹೆಚ್ಚು ಪ್ರಾಮುಖ್ಯವಾಗಿದೆ. ಪೇತ್ರನಿಗೆ ಸೇವೆಯನ್ನು ಕೊಡುವ ಪೂರ್ವದಲ್ಲಿ ಯೇಸು ಆತನಿಗೆ ಕೇಳಿದ್ದೇನೆಂದರೆ "ಇವೆಲ್ಲವುಗಳಿಗಿಂತ ನೀನು ನನ್ನನ್ನು ಹೆಚ್ಚಾಗಿ ಪ್ರೀತಿಸುತ್ತೀಯೊ?" ಆದ್ದರಿಂದ ಅನ್ಯ ಭಾಷೆಯ ವಿರೋಧವಾಗಿ ವಾಗ್ವಾದಮಾಡುವುದು ಸೈತಾನನು ವಿಶ್ವಾಸಿಗಳನ್ನು ಕ್ರಿಸ್ತನ ಕಡೆಗಿರುವ ನಿಷ್ಟೆಯಿಂದ ದೂರ ಮಾಡುವ ಉಪಾಯ.

ಕ್ರೈಸ್ತತ್ವದಲ್ಲಿ ಅತೀ ಶ್ರೇಷ್ಟವಾದ ವ್ಯಕ್ತಿಗಳು ಕ್ರಿಸ್ತನನ್ನು ಹೃದಯಪೂರ್ವಕವಾಗಿ ಪ್ರೀತಿಸಿದವರೇ ಆಗಿದ್ದರು. ಅವರು ಅನ್ಯ ಭಾಷೆಯಲ್ಲಿ ಮಾತಾಡಿದರೋ ಇಲ್ಲವೋ. ಪೇತ್ರ ಯಾಕೋಬ, ಯೋಹಾನ ಮತ್ತು ಪೌಲನು ಅನ್ಯ ಭಾಷೆಗಳಲ್ಲಿ ಮಾತಾಡಿದರು. ಇನ್ನು ಕೆಲವರು, ಅಂದರೆ, ಜಾನ್ ವೆಸ್ಲಿ, ಚಾರ್ಲ್ಸ್ ಫಿನ್ನಿ, ಡಿ. ಎಲ್. ಮೂಡಿ, ಎ.ಬಿ. ಸಿಂಪ್ಸನ್, ವಿಲ್ಲಿಯಮ್ ಬೂಥ್, ಸಿ.ಟಿ. ಸ್ಟಡ್ ಮತ್ತು ವಾಚ್ಮನ್ ನೀ ಮುಂತಾದವರು ನಮಗೆ ಗೊತ್ತಿರುವ ಹಾಗೆ ಅನ್ಯ ಭಾಷೆಯಲ್ಲಿ ಮಾತಾಡಲಿಲ್ಲ. ಆದರೆ. ಅವರೆಲ್ಲರೂ ಪವಿತ್ರಾತ್ಮನ ದೀಕ್ಷಾಸ್ನಾನ ಹೊಂದಿ ಕರ್ತನನ್ನು ಪೂರ್ಣ ಹೃದಯದಿಂದ ಪ್ರೀತಿಸಿ ಶಿಲುಬೆಯ ಮಾರ್ಗದಲ್ಲಿ ನಡೆದರು. ಈ ಸತ್ಯಗಳು ಅವರ ಜೀವಿತದಲ್ಲಿ ಕೇಂದ್ರೀಕರಿಸಲ್ಪಟ್ಟಿದ್ದವು. ಇತರ ಸಂಗತಿಗಳು ಎರಡನೇ ಸ್ಥಾನದಲ್ಲಿದ್ದವು.

ಅವರ ಮಾದರಿಯನ್ನು ಅನುಸರಿಸಿದರೆ ನಾವು ತಪ್ಪು ದಾರಿಯಲ್ಲಿ ನಡೆಯುವುದಿಲ್ಲ.

ಕಿವಿಯುಳ್ಳವನು ಕೇಳಲಿ.