ದೈವಿಕ ಮನುಷ್ಯರು ಬೇಕಾಗಿದ್ದಾರೆ

    Download Formats:

ಅಧ್ಯಾಯ 1
ಆತ್ಮೀಕ ಯೋಗ್ಯತೆಯುಳ್ಳ ಮನುಷ್ಯರು.

ಅನಾದಿಕಾಲದಿಂದ, ಅಂಧಕಾರದ ಶಕ್ತಿಗಳನ್ನು ಸೋಲಿಸಿ ಸಂಹರಿಸುವದಕ್ಕಾಗಿ ಮತ್ತು ಅನ್ಯಜನರ ಮುಂದೆ ದೇವರ ಹೆಸರನ್ನು ಪ್ರಭಾವಿತಗೊಳಿಸಿ, ಸಾಕ್ಷಿಯ ಮೂಲಕ ಅವರ ಮಹಿಮೆಯನ್ನು ಹೆಚ್ಚಿಸಲಿಕ್ಕಾಗಿ ದೇವರಿಗೆ ಉಪಯೋಗವಾಗಿರುವ ಸ್ತ್ರೀ-ಪುರುಷರು ಕೆಲವರೇ ಆಗಿದ್ದಾರೆ. ಅನೇಕರು ದೇವರಿಂದ ಆಶೀರ್ವಾದಗಳನ್ನು ಸ್ವೀಕರಿಸಿದ್ದಾರೆ, ಆದರೆ ದೇವರ ಜೊತೆಗೂಡಿ ಶ್ರಮಿಸಿ ಕೆಲಸ ಮಾಡಲು ಉಳಿದಿರುವಂಥವರು ಒಂದು ಚಿಕ್ಕ ಗುಂಪು ಮಾತ್ರ. ಗಿದ್ಯೋನನ 32,000 ಸೈನಿಕರಲ್ಲಿ ದೇವರಿಂದ ಉಪಯೋಗಿಸಲ್ಪಟ್ಟವರು 300 ಸೈನಿಕರು ಮಾತ್ರ. ದೇವಸಭೆಯ ಇತಿಹಾಸದ ಉದ್ದಕ್ಕೂ ಇಂತಹ ಜನರ ಪ್ರಮಾಣ ಬದಲಾಗಿಲ್ಲ. ಹೀಗೆ ಉಳಿದುಕೊಳ್ಳುವ ಅಂಶವೆಂದು ಹೇಳಲ್ಪಡಲು ತೆರಬೇಕಾದ ಬೆಲೆಯನ್ನು ಕೆಲವರು ಮಾತ್ರ ಕೊಡಲು ಇಚ್ಚಿಸುವರು.

ಇಂದು ಕರ್ತನ ದೃಷ್ಟಿಯು ನಮ್ಮ ನಾಡಿನ ಉದ್ದಗಲಕ್ಕೂ ಸಂಚರಿಸುತ್ತಾ, ಇಲ್ಲಿ ತನ್ನ ಮಹಾನಾಮವು ನಿಂದೆಗೆ ಒಳಗಾಗಿರುವಾಗ ಅದನ್ನು ಮಹಿಮೆಪಡಿಸಲು ತನಗೆ ಉಪಯೋಗವಾಗುವ ಮನುಷ್ಯರನ್ನು - ಆತ್ಮಿಕ ಸಾಮರ್ಥ್ಯ ಹೊಂದಿರುವವರನ್ನು - ಹುಡುಕುತ್ತಿವೆ ಎಂದು ನಾನು ನಂಬುತ್ತೇನೆ.

ಇಸ್ರಾಯೇಲಿನಲ್ಲಿ 2500 ವರ್ಷಗಳ ಹಿಂದೆ ಯೆಹೋವನ ನಾಮವು ಇದೇ ರೀತಿಯಾಗಿ ಅಪಕೀರ್ತಿಗೊಳ್ಳುತ್ತಿದ್ದಾಗ, ದೇವರು ತನ್ನ ಜನರಿಗೆ ಒಂದು ಸಂದೇಶವನ್ನು ಕಳುಹಿಸಿ, “ನಿನ್ನ ಮೂಲಕವಾಗಿ ಅನ್ಯಜನರಿಗೆ ನನ್ನ ಪವಿತ್ರತೆಯು ಕಂಡುಬರುವಾಗ, ನಾನೇ ಯೆಹೋವನು ಎಂದು ಅವರು ತಿಳಿದುಕೊಳ್ಳುವರು” (ಯೆಹೆಜ್ಕೆಲ 36:23) ಎಂದು ಹೇಳಿದ್ದನು. ಆ ಸಂದೇಶದಲ್ಲಿ ಒಂದು ವಾಗ್ದಾನ ಸೂಚಿತವಾಗಿತ್ತು. ಆದರೆ ಆ ವಾಗ್ದಾನವು ಒಂದು ಷರತ್ತನ್ನು ಅವಲಂಬಿಸಿದೆ. ಕರ್ತನು ತನ್ನ ಜನರ ಜೀವನದ ಮೂಲಕ ಪವಿತ್ರಗೊಳಿಸಲ್ಪಟ್ಟಾಗ ಮಾತ್ರ, ಅನ್ಯರು ಯೆಹೋವನೇ ನಿಜವಾದ ದೇವರಾಗಿದ್ದಾನೆಂದು ತಿಳಕೊಳ್ಳುವರು.

ಇಂದು ದೇವರಿಗೆ ಬೇಕಾಗಿರುವ ಸ್ತ್ರೀ-ಪುರುಷರು ಆತನನ್ನು ತಮ್ಮಲ್ಲಿ ಪವಿತ್ರಗೊಳಿಸಲು ಅನುಮತಿಸುವರು, ಮತ್ತು ಇದನ್ನು ಸುತ್ತಮುತ್ತಲಿನ ಜನರು ಗಮನಿಸಿದಾಗ ಆತನ ಹೆಸರು ಅವರ ಮೇಲೆ ಆಳವಾದ ಪರಿಣಾಮವನ್ನು ಬೀರುವದು. ಇದರ ಉದಾಹರಣೆಯನ್ನು ನಾವು ಕ್ರಿ.ಪೂ 9 ನೇ ಶತಮಾನದಲ್ಲಿ ಜೀವಿಸಿದ್ದ ಒಬ್ಬ ದೇವಭಕ್ತನಲ್ಲಿ ಕಾಣಬಹುದಾಗಿದೆ. ನಾವು ಆತನ ಜೀವಿತವನ್ನು ನೋಡುವಾಗ, 20ನೆಯ ಶತಮಾನದ ದೇವರ ಸೇವಕನಲ್ಲಿ ಇರಬೇಕಾದ ಮೂರು ವಿಷಯಗಳನ್ನಾದರೂ ಕಾಣಬಹುದಾಗಿದೆ. ಎಲೀಷನು ನಮ್ಮಂತೆಯೇ ಆಶಾಭಿಲಾಷೆಗಳನ್ನು ಹೊಂದಿರುವಂತಹ ಮನುಷ್ಯನೇ ಆಗಿದ್ದರೂ, ದೇವರಿಗಾಗಿ ತನ್ನ ಕಾಲದ ಜನರ ಮೇಲೆ ಬಹಳ ಪರಿಣಾಮಕಾರಿಯಾಗಿದ್ದನು. ನಮಗೆ ಸತ್ಯವೇದದಲ್ಲಿ ಕೊಟ್ಟಿರುವ ಅವನ ಜೀವಿತದ ಉಲ್ಲೇಖದ ಪ್ರಕಾರ, ಮೂರು ಸಂದರ್ಭಗಳಲ್ಲಿ ಅನ್ಯರ ಮೇಲೆ ಆತನು ಬೀರಿದ ಪ್ರಭಾವಗಳ ಕುರಿತು ಓದುತ್ತೇವೆ. ಅವುಗಳನ್ನು ಒಂದೊಂದಾಗಿ ನೋಡೋಣ.

ಅಧ್ಯಾಯ 2
ದೇವರ ಒಬ್ಬ ಪರಿಶುದ್ಧ ಮನುಷ್ಯನು

ಒಂದು ಬಾರಿ ಎಲೀಷನು ಶೂನೇಮಿಗೆ ಹೋದನು. ಅಲ್ಲಿನ ಒಬ್ಬ ಕುಲೀನ ಸ್ತ್ರೀಯು ಅವನನ್ನು ತನ್ನ ಮನೆಯಲ್ಲಿ ಊಟ ಮಾಡಬೇಕೆಂದು ಒತ್ತಾಯಪಡಿಸಿದಳು.

ಅಂದಿನಿಂದ ಅವನು ಆ ಮಾರ್ಗದಿಂದ ಹೋಗುವಾಗೆಲ್ಲಾ ಆ ಮನೆಯಲ್ಲೇ ಊಟ ಮಾಡುತ್ತಿದ್ದನು. ಆ ಸ್ತ್ರೀಯು ತನ್ನ ಗಂಡನಿಗೆ, “ಯಾವಾಗಲೂ ಈ ದಾರಿಯಿಂದ ಹೋಗುತ್ತಾ ಬರುತ್ತಾ ಇರುವ ಆ ಮನುಷ್ಯನು ಪರಿಶುದ್ಧನೂ ದೇವರ ಮನುಷ್ಯನೂ ಆಗಿರುತ್ತಾನೆಂದು ನನಗೆ ಗೊತ್ತಾಯಿತು,” ಎಂದು ಹೇಳಿದಳು (2 ಅರಸು 4:8,9).

ಅತನನ್ನು ಈ ರೀತಿಯಾಗಿ ವಿವರಿಸಿದ ಆ ಸ್ತ್ರೀಯು “ಒಬ್ಬ ಸಿರಿವಂತ ಮತ್ತು ಪ್ರತಿಷ್ಠಿತ ಸ್ತ್ರೀ ಆಗಿದ್ದಳು” (Amplified Bible). ಆಕೆಯು ಹೊರತೋರಿಕೆಯಿಂದ ಸುಲಭವಾಗಿ ಮೋಸಹೋಗುವವಳು ಆಗಿರಲಿಲ್ಲ. ಎಲೀಷನು ಹಲವು ಬಾರಿ ಆಕೆಯ ಮನೆಗೆ ಹೋಗಿದ್ದನು ಮತ್ತು ನಮ್ಮನ್ನು ಅನ್ಯಜನರು ವೀಕ್ಷಿಸುವಂತೆ, ಆಕೆಯು ಆತನನ್ನು ಚೆನ್ನಾಗಿ ಪರೀಕ್ಷಿಸಿದ್ದಳು. ಇವೆಲ್ಲವುಗಳ ನಂತರ ಆಕೆಯು ಎಲೀಷನು ದೇವರ ಒಬ್ಬ ಪರಿಶುದ್ಧ ಮನುಷ್ಯ ಎಂಬ ಖಚಿತ ತೀರ್ಮಾನಕ್ಕೆ ಬಂದಳು.

ಸಹೋದರ - ಸಹೋದರಿಯರೇ, ಇತರರು ನಮ್ಮನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ ನಮ್ಮ ಕುರಿತಾಗಿ ಇದೇ ತೀರ್ಮಾನಕ್ಕೆ ಬರಲು ಸಾಧ್ಯವಾಗದಿದ್ದರೆ, ನಾವು ನುಡಿಯುವ ಮಾತುಗಳು ಮತ್ತು ಮಾಡುವ ಕಾರ್ಯಗಳು ನಿಷ್ಫಲವಾದಂತೆಯೇ. ನಾನು ನಮ್ಮನ್ನು ಅಪರೂಪವಾಗಿ ಭೇಟಿಯಾಗುವ ಜನರ ಕುರಿತಾಗಿ ಹೇಳುತ್ತಿಲ್ಲ, ಆದರೆ ನಮ್ಮನ್ನು ಆಗಾಗ ಭೇಟಿಯಾಗುವವರು, ನಮ್ಮೊಂದಿಗೆ ವಾಸಿಸುವವರು ಮತ್ತು ನಮ್ಮನ್ನು ಕೂಲಂಕುಷವಾಗಿ ತಿಳಿದಿರುವ ಜನ ನಮ್ಮ ಬಗ್ಗೆ ಹೊಂದುವ ಅಭಿಪ್ರಾಯ ಎಂಥದ್ದು, ಎನ್ನುವದನ್ನು ನಾನು ಉಲ್ಲೆಖಿಸುತ್ತಿದ್ದೇನೆ.

ನಾವು ಇತರರ ಮೇಲೆ ಎಂತಹ ಪರಿಣಾಮವನ್ನು ಬೀರುತ್ತೇವೆ? ಅವರು ನಮ್ಮನ್ನು ಚುರುಕಾದವನು ಅಥವಾ ಬುದ್ಧಿವಂತ ಮತ್ತು ಒಳ್ಳೆಯ ಮಾತುಗಾರ ಅಥವಾ ಲವಲವಿಕೆಯ ವ್ಯಕ್ತಿತ್ವದವನು ಎಂದು ಮಾತ್ರ ತಿಳಿಯುವರೋ? ಈ ಗುಣಗಳು ಒಬ್ಬ ಮಾರಾಟಗಾರನಲ್ಲಿ ಅವಶ್ಯಕ ಮತ್ತು ಸೂಕ್ತ ಎನ್ನಿಸಿಕೊಳ್ಳುತ್ತವೆ, ಆದರೆ ನಾವು ಮಾರಾಟಗಾರರಾಗಿ ಕರೆಯಲ್ಪಟ್ಟಿಲ್ಲ. ನಮ್ಮ ಕರೆ ಮುಖ್ಯವಾಗಿ ದೇವರ ನೀತಿವಂತ ಸ್ತ್ರೀ-ಪುರುಷರಾಗಿ ಇರುವದಾಗಿದೆ.

ನಮ್ಮ ಸಭೆಗಳಲ್ಲಿ, ಕ್ರೈಸ್ತ ಸಂಘ-ಸಂಸ್ಥೆಗಳಲ್ಲಿ ಅನೇಕರು ಬೋಧಕರು, ಹಾಡುಗಾರರು, ವೇದಾಂತಿಗಳು ಮತ್ತು ಆಡಳಿತಗಾರರು ಇದ್ದಾರೆ. ಅವರೆಲ್ಲರಿಗಾಗಿ ದೇವರಿಗೆ ಸ್ತೋತ್ರ. ಆದರೆ ನಮ್ಮಲ್ಲಿ ದೇವರ ನೀತಿವಂತರು ಇದ್ದಾರೊ? ಇದೇ ಮುಖ್ಯವಾದ ಪ್ರಶ್ನೆಯಾಗಿದೆ. ಪವಿತ್ರ ಸ್ತ್ರೀ-ಪುರುಷರು ನಮ್ಮಲ್ಲಿದ್ದಾಗ ಮಾತ್ರವೇ ನಿಜವಾದ ಉಜ್ಜೀವನ ಸಾಧ್ಯವಾಗುತ್ತದೆ.

ಸಾಮಾನ್ಯವಾಗಿ ನಾವು ನಮ್ಮ ಹೃದಯದ ಅಂತರಾಳದಲ್ಲಿ ಎಂತಹ ಜನರಾಗುವ ನಿರೀಕ್ಷೆ ಇರಿಸಿದ್ದೇವೋ ಅಂಥವರೇ ಆಗುತ್ತೇವೆ, ಎನ್ನುವದು ನಿಜವೆಂದು ನಾನು ಯೋಚಿಸುತ್ತೇನೆ. ದೇವರ ಪರಿಶುದ್ಧ ಪುರುಷರು ಮತ್ತು ಸ್ತ್ರೀಯರು ಆಗುವ ಬಲವಾದ ಹಂಬಲ ನಮ್ಮಲ್ಲಿ ಇದ್ದಿದ್ದರೆ - ದೇವರು ನಮ್ಮ ಹೃದಯದ ದಾಹವನ್ನು ನೋಡಿ, ಅದಕ್ಕೆ ಸೂಕ್ತವಾಗಿ ಕಾರ್ಯ ಮಾಡುತ್ತಾರೆ ಎಂಬುದನ್ನು ಮರೆಯದಿರಿ - ನಾವು ನಿಶ್ಚಯವಾಗಿ ಅಂಥವರೇ ಆಗುತ್ತಿದ್ದೆವು.

ಹಾಗಾಗಿ ನಾವು ಇಂದು ಪರಿಶುದ್ಧರು ಆಗಿರದಿದ್ದರೆ, ಅದಕ್ಕೆ ಕಾರಣ ಬಹುಶಃ ನಮ್ಮ ಹೆಬ್ಬಯಕೆಗಳು ಬೇರೆ ಆಗಿರಬಹುದು. ಒಂದು ವೇಳೆ ನಮ್ಮಲ್ಲಿ ಚುರುಕುತನ ಹಾಗೂ ಬುದ್ಧಿ ಚಾತುರ್ಯ ಮತ್ತು ಆಡಳಿತ ಸಾಮರ್ಥ್ಯವೂ ಇವೆಯೆಂದು ನಾವು ತೃಪ್ತಿ ಹೊಂದಿರಬಹುದು. ಎಲ್ಲಕ್ಕೂ ಹೆಚ್ಚಾಗಿ ನಾವು ಪರಿಶುದ್ಧತೆಯನ್ನು ಬಯಸುತ್ತೇವೆ ಎನ್ನುವ ಮಾತು ಒಳ್ಳೆಯದೇ, ಮತ್ತು ಹಾಗೆ ಹೇಳಿಕೊಳ್ಳುವದು ಸುಲಭ. ಆದರೆ ಯೆಶಾಯ ಹಾಗೂ ಯೆಹೆಜ್ಕೇಲರ ದಿನದ ದೇವಭಕ್ತರಂತೆ, ನಮ್ಮ ಹೃದಯದ ಬಯಕೆ ಮತ್ತು ನಮ್ಮ ತುಟಿಯ ಮಾತುಗಳ ನಡುವೆ ಭೂಮ್ಯಾಕಾಶಗಳಷ್ಟು ಅಂತರ ಇರಬಹುದು (ಯೆಶಾಯ 29:13; ಯೆಹೆಜ್ಕೇಲ 33:31).

ನಮ್ಮ ಬೋಧನೆ ಇತರರಿಗೆ ಒಂದೆರಡು ಆಶೀರ್ವಾದಗಳನ್ನು ತರಬಹುದು. ಆದರೆ ಪರಿಶುದ್ಧತೆಯ ಸೂತ್ರಗಳು ಮತ್ತು ವಿಶೇಷ ಅನುಭವದ ಸಾಕ್ಷಿಯು, ನಿಷ್ಕಪಟ ಪರಿಶುದ್ಧ ಜೀವಿತದ ಸ್ಥಾನದಲ್ಲಿ ಕಾರ್ಯವನ್ನು ಎಂದಿಗೂ ಮಾಡಲಾರದು - ಅಪ್ಪಟ ಪರಿಶುದ್ಧ ಜೀವನ ಎನ್ನುವಂಥದ್ದು ಹೊರತೋರಿಕೆಯ ಒಳ್ಳೆಯತನವಲ್ಲ (ಎಫೆಸ 4:24 - ಜೆ.ಬಿ.ಫಿಲಿಪ್ಸ ಭಾಷಾಂತರ).

ನಮಗೆ ಗೊತ್ತಿರುವಂತೆ, ಭಾರತದಲ್ಲಿ ನಮ್ಮ ಕೆಲವು ಸ್ನೇಹಿತರು ಕ್ರೈಸ್ತರಲ್ಲದಿದ್ದರೂ ಬಹಳ ಉನ್ನತ ನೈತಿಕ ಮಟ್ಟವನ್ನು ಹೊಂದಿದ್ದಾರೆ. ಅವರ ಧರ್ಮವು ಬೋಧಿಸುವ ನೀತಿಯ ಮಟ್ಟಕ್ಕಿಂತಲೂ ನಮ್ಮ ಪರಿಶುದ್ಧತೆಯು ಕೆಳಮಟ್ಟದ್ದು ಆಗಿದ್ದರೆ, ಅವರು ಕರ್ತನಾದ ಯೇಸು ಕ್ರಿಸ್ತನ ಬಳಿಗೆ ಸೆಳೆಯಲ್ಪಡಲು ಸಾಧ್ಯವಿದೆಯೇ? ಕ್ರೈಸ್ತರಲ್ಲದ ಕೆಲವು ಧಾರ್ಮಿಕ ಜನರು ತಮ್ಮಲ್ಲಿ ಹಲವು ಲೋಪ-ದೋಷಗಳು ಮತ್ತು ತಪ್ಪು ನಂಬಿಕೆಗಳಿದ್ದರೂ, ಅನೇಕ ವೇಳೆ ಕ್ರೈಸ್ತರಿಗಿಂತ ಹೆಚ್ಚಿನ ಪ್ರಾಮಾಣಿಕತೆ ಮತ್ತು ನೀತಿವಂತಿಕೆಯನ್ನು ರುಜುವಾತು ಪಡಿಸುವದು, ಬಹಳ ವಿಷಾದಕರ ಆದರೆ ನಿಜವಾದ ಸಂಗತಿಯಾಗಿದೆ. ನಾವು ಈ ನಿಜಸ್ಥಿತಿಗಾಗಿ ನಾಚಿಕೆ ಪಡತಕ್ಕದ್ದು ಮತ್ತು ದೇವರ ಮುಂದೆ ಅಡ್ಡ ಬಿದ್ದು ಕ್ಷಮೆ ಯಾಚಿಸಬೇಕು.

ನಮಗೆ ನಮ್ಮ ಸಭೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ನಮ್ಮ ಕ್ರೈಸ್ತ ನಾಯಕರುಗಳಲ್ಲಿ, ಪರಿಶುದ್ಧ ಸ್ತ್ರೀ-ಪುರುಷರು ಬೇಕಾಗಿದ್ದಾರೆ. ಇಂಥವರು ಇಲ್ಲದಿದ್ದರೆ, ನಾವು ನಮ್ಮ ದೇಶದಲ್ಲಿ ಕ್ರಿಸ್ತನಿಗಾಗಿ ಸುವಾರ್ತೆಯನ್ನು ಹರಡಲು ಮಾಡುವ ಎಲ್ಲಾ ಪ್ರಯಾಸಗಳು ವ್ಯರ್ಥವಾಗುವವು.

ಕ್ರೈಸ್ತರಾದ ನಾವು ನಮ್ಮೊಳಗೆ ದೇವರಾತ್ಮನು ವಾಸಿಸುತ್ತಾನೆಂದು ಹೇಳಿಕೊಳ್ಳುತ್ತೇವೆ. ಆದರೆ ನಮ್ಮೊಳಗೆ ವಾಸಿಸುವಾತನ ಹೆಸರು ಪರಿಶುದ್ಧ ಆತ್ಮನು, ಮತ್ತು ಆತನ ಪ್ರಮುಖ ಕಾರ್ಯ ನಮಗೆ ವರಗಳನ್ನು ನೀಡುವದು ಅಲ್ಲ, ಬದಲಾಗಿ ನಮ್ಮನ್ನು ಪರಿಶುದ್ಧರನ್ನಾಗಿ ಮಾಡುವುದಾಗಿದೆ ಎಂಬುದನ್ನು ನಾವು ನೆನಪಿರಿಸಿಕೊಳ್ಳಬೇಕು.

ಯೆಶಾಯನು ಕಂಡ ದೇವದರ್ಶನದಲ್ಲಿ, ಸಿಂಹಾಸನದ ಸುತ್ತಲೂ ನಿಂತಿದ್ದ ಸೆರಾಫಿಯರು "ಸರ್ವಶಕ್ತನು, ಸರ್ವಶಕ್ತನು, ಸರ್ವಶಕ್ತನು" ಅಥವಾ "ದಯಾಳು, ದಯಾಳು, ದಯಾಳು" ಎಂದು ಕೂಗಲಿಲ್ಲ; ಆದರೆ ಅವರು "ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು" ಎನ್ನುವದನ್ನು ಆತನು ಕೇಳಿಸಿಕೊಂಡನು. ಇಂತಹ ದೃಶ್ಯವನ್ನು ನೋಡಿದ ಯಾರಾದರೂ ಇಂತಹ ದೇವರ ಸೇವಕನಾಗುವದು ಅಷ್ಟು ಸರಳವಾದ ಸಂಗತಿಯಲ್ಲವೆಂಬುದನ್ನು ಸ್ಪಷ್ಟವಾಗಿ ಗ್ರಹಿಸಿಕೊಳ್ಳುವರು. ಪರಿಶುದ್ಧನು ಎಂಬ ಹೆಸರುಳ್ಳ ಇಂತಹ ಉನ್ನತೋನ್ನತನನ್ನು ಪ್ರತಿನಿಧಿಸಲು ಕರೆಯಲ್ಪಟ್ಟ ಪ್ರತಿಯೊಬ್ಬನ ಜೀವನ ಪರಿಶುದ್ಧವಾಗಿರುವದು ಅನಿವಾರ್ಯವಾಗಿದೆ.

ನಮ್ಮ ಜೀವನವನ್ನು ಪವಿತ್ರಗೊಳಿಸಲು ಅತಿ ದೊಡ್ಡ ಪ್ರೇರಣೆ ನಮ್ಮ ದೇವರು ಅಪರಿಮಿತ ಪರಿಶುದ್ಧನಾಗಿದ್ದಾನೆ ಎಂಬದು ಆಗಿರಬೇಕು. “ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು,” ಎಂದು ಕರ್ತನು ಹೇಳುತ್ತಾನೆ. ನಾವು ಪರಿಶುದ್ಧತೆಗಾಗಿ ಶ್ರಮಿಸುವದಕ್ಕೆ ಪ್ರೇರಣೆ, ನಮ್ಮನ್ನು ದೇವರು ಉಪಯೋಗಿಸಿಕೊಳ್ಳಲಿ ಎಂಬ ಉದ್ದೇಶವೊಂದೇ ಆಗಿದ್ದರೆ ನಾವು ಸ್ವಾರ್ಥಿಗಳು. ದೇವರು ನಮ್ಮನ್ನು ಉಪಯೋಗಿಸಲಿ ಅಥವಾ ಬಿಡಲಿ, ನಮ್ಮ ದೇವರು ಪರಿಶುದ್ಧನು, ಹಾಗಾಗಿ ನಾವು ಪರಿಶುದ್ಧರಾಗಿರುವ ಇಚ್ಛೆಯುಳ್ಳವರು ಆಗಿರಬೇಕು.

ಎಲೀಷನು ಬೇರೆ ಬೇರೆ ಜಾಗಗಳಿಗೆ ಹೋದಾಗ, ’ಈತನು ದೇವರ ಪರಿಶುದ್ಧ ಮನುಷ್ಯನು’ ಎಂಬ ಅಭಿಪ್ರಾಯ ಜನರಲ್ಲಿ ಮೂಡುತ್ತಿತ್ತು. ಜನರು ಅವನ ಸಂದೇಶಗಳನ್ನೂ ಮತ್ತು ಅವನ ಬೋಧನೆಯ ಮೂರು ಅಂಶಗಳನ್ನು ಮರೆತಿರಬಹುದು, ಆದರೆ ಅವನ ಜೀವನ ಅವರ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವ ಬೀರುತ್ತಿತ್ತು. ನಾವೂ ಸಹ ಇದನ್ನು ಒಂದು ದೊಡ್ಡ ಸವಾಲಾಗಿ ಸ್ವೀಕರಿಸಬೇಕು! ನಮ್ಮ ಪ್ರಸಂಗಗಳಲ್ಲಿ ಹೆಚ್ಚಿನ ವಾಕ್ಚಾತುರ್ಯ, ಸತ್ಯವೇದದ ಸತ್ಯಗಳನ್ನು ನಾವು ವಿಸ್ಮಯಕರವಾಗಿ ವಿವರಿಸುವ ರೀತಿ ಮತ್ತು ನಮ್ಮ ಕಾರ್ಯಕಲಾಪಗಳ ನಿರ್ವಹಣೆಯಲ್ಲಿ ದಕ್ಷತೆ, ಇವೆಲ್ಲವುಗಳಿಗಿಂತ ಹೆಚ್ಚಾಗಿ ನಮ್ಮಲ್ಲಿ ದೇವರ ಪರಿಶುದ್ದ ಮನುಷ್ಯರಾಗಿ ಇರುವ ಅತೀವ ಹಂಬಲ ಬೇಕು. ಇಂತಹ ಮನುಷ್ಯರು ಜನರ ಮೇಲೆ ಬೀರುವ ಪ್ರಭಾವ ಅವರ ಮನಸ್ಸಿನಿಂದ ಸುಲಭವಾಗಿ ಅಳಿದು ಹೋಗಲಾರದು.

ನಾನು ನಮ್ಮ ನಾಡಿನ ಪರ್ಯಂತ ಓಡಾಡುವಾಗ, ಅದ್ಭುತ ವರಗಳನ್ನು ಹಾಗೂ ಸಾಮರ್ಥ್ಯಗಳನ್ನು ಹೊಂದಿರುವ ಕ್ರೈಸ್ತನಾಯಕರನ್ನೂ, ಸೌವಾರ್ತಿಕರನ್ನೂ ಸಂಧಿಸಿದ್ದೇನೆ. ಆಡಂಬರದ ಪ್ರದರ್ಶಕರನ್ನು ಹಾಗೂ ಹೆಚ್ಚಿನ ಚಟುವಟಿಕೆಯ ಜನರನ್ನು ಭೇಟಿಯಾಗಿದ್ದೇನೆ. ಆದರೆ ಅವರಲ್ಲಿ ದೇವರ ಪರಿಶುದ್ಧ ಮನುಷ್ಯರೆಂದು ನಾನು ಗೌರವಿಸ ಬಹುದಾದವರು ನನಗೆ ಬಹಳ ಕಡಿಮೆ ಮಂದಿ ಸಿಕ್ಕಿದ್ದಾರೆ. ಬಹುಶ: ನನ್ನ ಅಂದಾಜು ತಪ್ಪಾಗಿರಬಹುದು, ಆದರೆ ಅದು ಸರಿಯಾಗಿದೆಯೇನೋ ಎಂಬ ಭಯ ನನ್ನಲ್ಲಿ ಇದೆ.

ದೇವರು ಒಬ್ಬ ಮನುಷ್ಯನಿಗೆ ತನ್ನ ಸೇವೆಯ ಅವಕಾಶವನ್ನು ನೀಡುವದು, ಆತನ ಜೀವನ ಪರಿಶುದ್ಧವಾಗಿದೆ ಅಥವಾ ಅದು ದೇವರಿಗೆ ಬಹಳ ಮೆಚ್ಚುಗೆಯಾಗಿದೆ ಎಂಬುದರ ಸೂಚನೆಯಲ್ಲ. ದೇವರು ಒಂದು ಸಲ ತನ್ನ ಸಂದೇಶವನ್ನು ಒಂದು ಕತ್ತೆಯ ಮೂಲಕ ಪ್ರಕಟ ಪಡಿಸಿದನು, ಮತ್ತು ಕತ್ತೆಯ ಯಜಮಾನನಾದ ಬೀಳಾಮನು ಸ್ವತಃ ಭ್ರಷ್ಟನಾಗಿದ್ದರೂ ಅವನನ್ನು ಸಹ ಪ್ರವಾದಿಸುವದಕ್ಕೆ ಉಪಯೋಗಿಸಿದನು. ಅನೇಕ ವೇಳೆ ದೇವರು ತನ್ನ ವಾಕ್ಯವನ್ನು ಜನರಿಗೆ ತಲುಪಿಸಲು ಒಬ್ಬ ಮನುಷ್ಯನನ್ನು ಉಪಯೋಗಿಸಿದರೆ, ಅದಕ್ಕೆ ಕಾರಣ ಆತನ ಕರುಣೆ ಮತ್ತು ಆ ಜನರಿಗಾಗಿ ಆತನಲ್ಲಿರುವ ಪ್ರೀತಿಯೇ ಹೊರತು, ಆತನು ಆ ಮನುಷ್ಯನನ್ನು ಮೆಚ್ಚಿರುವದು ಅವಶ್ಯವಲ್ಲ. ಇಲ್ಲ, ದೇವರ ವಾಕ್ಯವನ್ನು ಜನ ಮೆಚ್ಚುವಂತೆ ಸಾರುವದಕ್ಕೆ ನಾವು ಪರಿಶುದ್ಧರಾಗುವ ಅವಶ್ಯಕತೆ ಇಲ್ಲ! ಆದರೆ ಕಣ್ಣುಗಳಿಗೆ ತೋರದ ರೀತಿಯಲ್ಲಿ ಸಾಗುತ್ತಿರುವ ದೇವರ ಯುದ್ಧಗಳನ್ನು ಮುಂದುವರಿಸಲು ಮತ್ತು ಕದಲದೆ, ನಾಶವಾಗದೆ ನಿತ್ಯತ್ವಕ್ಕೂ ಉಳಿಯುವಂಥದ್ದನ್ನು ಕಟ್ಟವದರಲ್ಲಿ ದೇವರೊಂದಿಗೆ ಸಹಕರಿಸಲು ಅರ್ಹರೆನಿಸಿದ ಆ ಜನಶೇಷದ ಒಂದು ಅಂಶವಾಗುವದಕ್ಕೆ, ನಾವು ಪರಿಶುದ್ಧ ಮನುಷ್ಯರು ಆಗುವದು ಬಹಳ ಅವಶ್ಯ.

ನಮ್ಮ ಸಭೆಗಳಲ್ಲಿ ಪರಿಶುದ್ಧ ಸ್ತ್ರೀ-ಪುರುಷರು ಇಷ್ಟು ಕಡಿಮೆ ಸಂಖ್ಯೆಯಲ್ಲಿ ಏಕೆ ಇದ್ದಾರೆಂದು ನಾನು ನನ್ನನ್ನೇ ಪ್ರಶ್ನಿಸಿಕೊಂಡಿದ್ದೇನೆ ಮತ್ತು ಇದಕ್ಕೆ ಕಡಿಮೆಯೆಂದರೆ ಮೂರು ಕಾರಣಗಳನ್ನು ನಾನು ಕಂಡುಕೊಂಡಿದ್ದೇನೆ. ಇವುಗಳಿಗಿಂತ ಹೆಚ್ಚಾಗಿಯೂ ಕಾರಣಗಳು ಇರಬಹುದು.

ವಂಚನೆ

ಎಲ್ಲೆಡೆ ಹರಡಿರುವ ವಂಚನೆಯು ಇದಕ್ಕೆ ಮೊದಲನೆಯ ಕಾರಣವೆಂದು ನನಗೆ ಖಚಿತವಾಗಿದೆ. ಪರಿಣಾಮಕಾರಿಯಾದ ಪರಿಶುದ್ಧತೆ ಹೊಂದುವದಕ್ಕೆ ಮೊದಲ ಹೆಜ್ಜೆ ಯಾವುದೆಂದರೆ, ಯಾವಾಗಲೂ ಎಲ್ಲಾ ವಂಚನೆ ಮತ್ತು ಕಪಟತನದಿಂದ ಬಿಡುಗಡೆಗೊಳ್ಳುವದು.

ಯಾವ ವ್ಯಕ್ತಿಯೂ ತನ್ನ ಜೀವನದಿಂದ ವಂಚನೆಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಹೃತ್ಪೂರ್ವಕ ಹೋರಾಟ ಮಾಡದೇ ದೇವರ ಪರಿಶುದ್ಧ ಮನುಷ್ಯ ಆಗಲಾರನು. ಪ್ರಕಟನೆ 14:1-5 ರಲ್ಲಿ ವರ್ಣಿಸಲ್ಪಟ್ಟಿರುವ ದೇವರ ಶೇಷಭಾಗಕ್ಕೆ ಸೇರಿದ ಜನರಲ್ಲಿ ಕಿಂಚಿತ್ತೂ ಸುಳ್ಳು ಇರಲಿಲ್ಲ. ಅನೇಕ ವೇಳೆ, ನಾವು ತಿಳಿದಿರುವದಕ್ಕಿಂತ ಹೆಚ್ಚಿನ ವಂಚನೆ ನಮ್ಮಲ್ಲಿ ಇರುತ್ತದೆ. ನಾವು ಯಥಾರ್ಥರಾಗಿದ್ದರೆ ನಮ್ಮಲ್ಲಿ ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕಾದ ವಿಷಯವೆಂದರೆ, ನಾವು ಹಲವು ಬಾರಿ ನಮ್ಮ ನಿಜಸ್ಥಿತಿಯನ್ನು ಇತರರಿಗೆ ತೋರಿಸಿಕೊಳ್ಳದೆ ನಮ್ಮ ಕುರಿತು ಒಳ್ಳೆಯ ಅಭಿಪ್ರಾಯ ಮೂಡಿಸಲು ನೋಡುತ್ತೇವೆ. ಈ ಅಭ್ಯಾಸವನ್ನು ನಾವು ಬಿಟ್ಟುಬಿಡುವದು ಅವಶ್ಯ. ನಾವು ನಿಜವಾಗಿ ಪರಿಶುದ್ಧರಾಗಲು ಇದನ್ನು ಸತತ ಹೋರಾಟದ ಮೂಲಕ ಸಾಯಿಸಬೇಕು.

ನಾವು ಹೆಚ್ಚಿನ ಪ್ರಯತ್ನದ ಮೂಲಕ ಪಾರದರ್ಶಕರಾಗಬೇಕು ಮತ್ತು ಇತರರಿಗೆ ನಮ್ಮ ನಿಜಸ್ಥಿತಿಯನ್ನು ಇದ್ದಂತೆಯೇ ತಿಳಿಸಬೇಕು. ಇದು ಸುಲಭವಲ್ಲವೆಂದು ನನಗೆ ಗೊತ್ತು. ಎಲ್ಲಾ ಮೋಸ, ವಂಚನೆಗಳಿಂದ ಶಾಶ್ವತವಾಗಿ ಬಿಡುಗಡೆ ಹೊಂದಲು ಜೀವಿತವಿಡೀ ಹೋರಾಡ ಬೇಕಾಗುತ್ತದೆ. ಆದರೆ ಇದು ಮುಖ್ಯವಾದ ಮೊದಲನೆಯ ಹೆಜ್ಜೆಯಾಗಿದೆ, ಮತ್ತು ಇದರ ಹೊರತಾಗಿ ಯಾವ ಭಕ್ತಿ ಸಂಜೀವನವೂ ಅಸಾಧ್ಯ. ನಮ್ಮ ಜೀವಿತದಿಂದ ವಂಚನೆಯನ್ನು ತೊಲಗಿಸುವ ದೃಢ ಪ್ರಯತ್ನದ ಹೊರತಾಗಿ, ಪುನರುಜ್ಜೀವನಕ್ಕಾಗಿ ನಮ್ಮ ಪ್ರಾರ್ಥನೆಗಳಿಗೆ ದೇವರ ಉತ್ತರಕ್ಕಾಗಿ ವರ್ಷಗಟ್ಟಳೆ ನಿರೀಕ್ಷಿಸುವದು ನಮ್ಮ ಮೂರ್ಖತನವಾಗಿದೆ.

ವಂಚನೆಯೇ ನಿಜವಾದ ಕ್ರೈಸ್ತ ಅನ್ಯೋನ್ಯತೆಗೂ ಅಡ್ಡಿಯಾಗುತ್ತದೆ. ಎಷ್ಟೋ ವೇಳೆ ಕ್ರೈಸ್ತ ನಾಯಕರು ಮತ್ತು ಸುವಾರ್ತಾ ಸೇವಕರ ಹೃದಯಗಳಲ್ಲಿ ಕ್ಷಮಿಸದ ಆತ್ಮ ಮತ್ತು ಗುಪ್ತ ದ್ವೇಷಗಳು ಅಡಗಿರುತ್ತವೆ. ಉಲ್ಲಾಸಭರಿತ ಆತ್ಮಿಕತೆ ಹೊರತೋರಿಕೆಯ ಮುಖವಾಡವಾಗಿದ್ದು, ಹಿನ್ನೆಲೆಯಲ್ಲಿ ಸುಲಭವಾಗಿ ಬಿಡದಂತಹ ಪಾತಾಳದ ದುಷ್ಟತನಗಳು ಅಂಟಿಕೊಂಡಿವೆ. ನಾವು ದೇವರ ಪರಿಶುದ್ಧ ಮನುಷ್ಯರು ಆಗಲು ಬಯಸಿದರೆ, ಮೊದಲು ಇವುಗಳು ಬಯಲುಗೊಂಡು ತೊರೆಯಲ್ಪಡಬೇಕು.

ಯೇಸುವು ವಂಚನೆ ಮತ್ತು ಕಪಟತನವನ್ನು ಇತರ ಯಾವುದೇ ಪಾಪಗಳಿಗಿಂತ ಹೆಚ್ಚಾಗಿ ಖಂಡಿಸಿದನು. ಆತನು ತನ್ನ ಶಿಷ್ಯರಿಗೆ, “ಫರಿಸಾಯರ ಕಪಟವೆಂಬ ಹುಳಿಹಿಟ್ಟಿನ ವಿಷಯದಲ್ಲಿ ಎಚ್ಚರವಾಗಿರ್ರಿ,” ಎಂದು ಎಚ್ಚರಿಸಿದನು. ಆದಿಸಭೆಯಲ್ಲಿ ಈ ಪಾಪವು ತೋರಿಬಂದಾಗ, ದೇವರು ಅದನ್ನು ಉಗ್ರವಾಗಿ ಶಿಕ್ಷಿಸಿದನು. ಸ್ವಲ್ಪ ಹುಳಿಯಿಂದ ಕಣಕವೆಲ್ಲಾ ಹುಳಿಯಾಗದಂತೆ, ದೇವರು ಅದರಲ್ಲಿ ತೊಡಗಿದ್ದ ದಂಪತಿಗಳನ್ನು ಒಡನೆಯೇ ವಧಿಸಿದನು (ಅಪೊ.ಕೃ. 5).

ಯೇಸುಕ್ರಿಸ್ತನು ನತಾನಯೇಲನ ಕುರಿತು, “ಇಗೋ, ಕಪಟವಿಲ್ಲದ ಒಬ್ಬ ಮನುಷ್ಯನು,” ಎಂದು ನುಡಿದ ಸಾಕ್ಷಿಯನ್ನು ನಾನು ಅನೇಕ ಬಾರಿ ಧ್ಯಾನಿಸಿದ್ದೇನೆ ಮತ್ತು ಇದಕ್ಕಿಂತಲೂ ಹೆಚ್ಚಾಗಿ ನಾವು ಬಯಸ ಬಹುದಾದ ಪ್ರಶಂಸೆ ಯಾವದಾದರೂ ಉಂಟೋ ಎಂದು ಯೋಚಿಸಿ ಬೆರಗಾಗಿದ್ದೇನೆ. ದೇವರು ನಮ್ಮ ಕುರಿತು ಹೀಗೆ ಹೇಳಬಹುದೋ ಎಂದು ನಾವು ನಮ್ಮನ್ನು ಪ್ರಶ್ನಿಸಿಕೊಳ್ಳುವದು ಅವಶ್ಯ. ಅಕಟಾ, ಹಲವು ಬಾರಿ ಆತನು ಹಾಗೆ ಹೇಳಲಾರನು - ಇದಕ್ಕೆ ಕಾರಣ ನಾವು ಹುಷಾರಾಗಿ ನಮ್ಮ ಜೊತೆಯವರ ಕಣ್ಣು ತಪ್ಪಿಸಿ ಮಾಡಿರುವ ಪಾಪಗಳನ್ನು ದೇವರು ನಮ್ಮಲ್ಲಿ ನೋಡುತ್ತಾನೆ.

ಕಪಟವಿಲ್ಲದ ಮನುಷ್ಯನು ನಿಜವಾಗಿಯೂ ಧನ್ಯನು.

ಶಿಸ್ತಿನ ಕೊರತೆ

ಇಂದು ಪರಿಶುದ್ಧತೆ ಇಲ್ಲದಿರುವದಕ್ಕೆ ಎರಡನೆಯ ಕಾರಣ, ನಾವು ನಮ್ಮನ್ನು ನಿಷ್ಠೆಯಿಂದ ಶಿಸ್ತಿಗೆ ಒಳಪಡಿಸಿಕೊಳ್ಳುವದಿಲ್ಲ.

ಹೊಸ ಒಡಂಬಡಿಕೆಯು ನಮ್ಮ ಶಾರೀರಿಕ ಅಂಗಗಳನ್ನು - ಮುಖ್ಯವಾಗಿ ಕಿವಿ, ಕಣ್ಣು ಮತ್ತು ನಾಲಿಗೆಗಳನ್ನು - ಶಿಸ್ತಿಗೆ ಒಳಪಡಿಸುವದಕ್ಕೆ ಬಹಳ ಹೆಚ್ಚಿನ ಮಹತ್ವ ನೀಡುತ್ತದೆ. ಪೌಲನು ರೋಮಾ. 8:13 ರಲ್ಲಿ, ನಾವು ನಮ್ಮ ಸ್ವಾಭಾವಿಕ ದುರಭ್ಯಾಸಗಳನ್ನು ಪವಿತ್ರಾತ್ಮನ ಬಲದಿಂದ ನಾಶಗೊಳಿಸದಿದ್ದರೆ, ಆತ್ಮಿಕ ಜೀವನದಲ್ಲಿ ಸಫಲರಾಗಲು ಸಾಧ್ಯವಿಲ್ಲವೆಂದು ಹೇಳುತ್ತಾನೆ. 1 ಕೊರಿಂಥ 9:27 ರಲ್ಲಿ, ಅವನು ತನ್ನ ಸ್ವಂತ ದೇಹವನ್ನು ಕಠಿಣ ಶಿಸ್ತಿಗೆ ಒಳಪಡಿಸಿದ್ದಾಗಿ ನಮಗೆ ತೋರಿಸುತ್ತಾನೆ. ನಾವು ಎಂತಹ ಶ್ರೇಷ್ಠವಾದ ಶುದ್ಧೀಕರಣದ ಅನುಭವವನ್ನು ಹೊಂದಿದ್ದರೂ, ಪರಿಶುದ್ಧತೆಯನ್ನು ಹೊಂದಬೇಕಾದರೆ ಪೌಲನು ಮಾಡಿದಂತೆ, ನಮ್ಮ ಜೀವಿತದ ಕೊನೆಯ ವರೆಗೂ ನಮ್ಮ ದೇಹದ ಅಂಗಗಳ ಚಟುವಟಿಕೆಗಳನ್ನು ಶಿಸ್ತಿಗೆ ಒಳಪಡಿಸುವದು ಅವಶ್ಯವಾಗಿದೆ.

ನಾವು ಸಂಭಾಷಣೆಯನ್ನು ಆಲಿಸುವದರಲ್ಲಿ ಶಿಸ್ತಿಗೆ ಒಳಪಡಬೇಕು. ನಮ್ಮ ಸಮಯವನ್ನು ಹರಟೆ, ದೂಷಣೆಯ ಮಾತುಗಳನ್ನು ಕೇಳುವದರಲ್ಲಿ ವ್ಯರ್ಥಪಡಿಸಿ, ನಂತರ ನಮ್ಮ ಕಿವಿಗಳು ದೇವರ ಧ್ವನಿಯನ್ನು ಕೇಳಲಿ ಎಂದು ಎದುರು ನೋಡುವದು ಸಾಧ್ಯವಾಗದ ಸಂಗತಿ.

ಇಂದಿನ ದಿನಗಳಲ್ಲಿ ನಾವು ವಿಶೇಷವಾಗಿ ಗಮನಿಸಬೇಕಾದ ಇನ್ನೊಂದು ಕಾರ್ಯ - ನಮ್ಮ ಕಣ್ಣುಗಳು ದೃಷ್ಟಿಸುವದನ್ನು ಮತ್ತು ಓದುವದನ್ನು ನಿಯಂತ್ರಿಸುವ ಶಿಸ್ತು ಅವಶ್ಯವಾಗಿದೆ. ಸೌವಾರ್ತಿಕರು ಮತ್ತು ದೇವ ಸೇವಕರಲ್ಲಿ ಕೆಲವರು ಲೈಂಗಿಕ ಪಾಪಗಳಿಗೆ ಸಿಲುಕಲು ಕಾರಣ, ಅವರು ದೈನಂದಿನ ತಮ್ಮ ಕಣ್ಣುಗಳನ್ನು ಅಂಕೆಯಲ್ಲಿ ಇರಿಸದೇ ಇರುವದು. ಹಾಗೆಯೇ ಇನ್ನೂ ಹಲವರು ಈ ಕ್ಷೇತ್ರದಲ್ಲಿ ತಮ್ಮಲ್ಲಿರುವ ಅಶಿಸ್ತಿನಿಂದಾಗಿ, ತಮ್ಮ ಆಲೋಚನಾ-ಪ್ರಪಂಚದಲ್ಲಿ ಮತ್ತೆ ಮತ್ತೆ ಎಡವಿ ಬೀಳುತ್ತಾರೆ.

“ವ್ಯರ್ಥ ಕಾರ್ಯಗಳಲ್ಲಿ ದೃಷ್ಟಿಯಿಡದಂತೆ ನನ್ನನ್ನು ಕಾಪಾಡು,” ಎಂಬುದು ನಮ್ಮ ಎಡೆಬಿಡದ ಪ್ರಾರ್ಥನೆಯಾಗಿರಬೇಕು (ಕೀರ್ತನೆಗಳು 119:37).

ನಮ್ಮ ನಾಲಿಗೆಗಳು ಕೂಡ ಪವಿತ್ರಾತ್ಮನ ಹತೋಟಿಯಲ್ಲಿರುವದು ಅವಶ್ಯ. ಕ್ರೈಸ್ತಸಭೆಗಳಲ್ಲಿ ಆತ್ಮಿಕ ಮರಣ ಹರಡುವದರಲ್ಲಿ, ಮನುಷ್ಯನ ನಾಲಿಗೆಯ ಪಾತ್ರದಷ್ಟು ದೊಡ್ಡ ಪಾತ್ರವನ್ನು ಬಹುಶಃ ಬೇರೆ ಯಾವದೂ ವಹಿಸುವದಿಲ್ಲ. ಯೆಶಾಯನು ದೇವರ ಪರಿಶುದ್ಧತೆಯನ್ನು ಕಂಡಾಗ, ಮುಖ್ಯವಾಗಿ ತಾನು ನಾಲಿಗೆಯನ್ನು ತಪ್ಪಾಗಿ ಉಪಯೋಗಿಸಿದ ಕುರಿತು ಆತನ ಹೃದಯದಲ್ಲಿ ಅರಿವು ಉಂಟಾಯಿತು. ಆತನು ತನ್ನನ್ನು ದೇವರ ಬೆಳಕಿನಲ್ಲಿ ನೋಡುವ ವರೆಗೆ ಇದರ ಅರಿವು ಆತನಿಗೆ ಉಂಟಾಗಿರಲಿಲ್ಲ.

ಯೆರೆಮೀಯನಿಗೆ ದೇವರ ಸಂದೇಶಕನಾಗುವ ('mouthpiece') ಅವಕಾಶ ದೊರಕುವ ಮೊದಲು, ಆತನು ತನ್ನ ನಾಲಿಗೆಯ ಪ್ರಯೋಗದಲ್ಲಿ ಸರಿಯಾದ ಎಚ್ಚರಿಕೆ ವಹಿಸಬೇಕೆಂದು - ತುಚ್ಛ ಮಾತುಗಳನ್ನು ನಿರಾಕರಿಸಿ ಅಮೂಲ್ಯವಾದದ್ದನ್ನು ಮಾತ್ರ ಪ್ರಕಾಶ ಪಡಿಸುವದು ಅವಶ್ಯವೆಂದು - ಕರ್ತನು ಆತನಿಗೆ ತಿಳಿಸಿದನು (ಯೆರೆ. 15:19).

ಈ ಪ್ರವಾದಿಗಳಿಗೆ ತಮ್ಮ ನಾಲಿಗೆಯ ಪ್ರಯೋಗದಲ್ಲಿ ಅಲಕ್ಯ್ಷತೆಗೆ ಅವಕಾಶ ಇರಲಿಲ್ಲ, ಏಕೆಂದರೆ ಅವರು ತಪ್ಪಿಹೋದಲ್ಲಿ ದೇವರ ಸಂದೇಶಕರಾಗುವ (ಬಾಯಂತಿರುವ) ಭಾಗ್ಯವನ್ನು ಕಳಕೊಳ್ಳುತ್ತಿದ್ದರು. ಅವರು ಕಳಪೆ ಮಾತುಕತೆಗಳಲ್ಲಾಗಲೀ, ವ್ಯರ್ಥವಾಗಿ ವಟಗುಟ್ಟವದಾಗಲೀ, ಮತ್ತು ಹರಟೆ, ದೂಷಣೆ ಹಾಗೂ ಟೀಕೆಯಲ್ಲಿ ಪಾಲ್ಗೊಳ್ಳುವಂತೆ ಇರಲಿಲ್ಲ. ಹಾಗೆ ಮಾಡಿದಲ್ಲಿ, ಅವರು ಆ ಮೂಲಕ ದೇವರ ಕರೆಯನ್ನು ಕಳೆದುಕೊಳ್ಳುತ್ತಿದ್ದರು. ಈ ದಿನಗಳಲ್ಲಿ ನಮ್ಮಲ್ಲಿ ಒಬ್ಬ ಪ್ರವಾದಿಯಾದರೂ ಸಿಗುವದು ಕಠಿಣವಾಗಿರುವದಕ್ಕೆ ಇದೂ ಒಂದು ಕಾರಣ ಆಗಿರಬಹುದು.

ವಾಚಮನ್ ನೀ ಅವರು ತಮ್ಮ "ಒಬ್ಬ ಸಾಮಾನ್ಯ ಕ್ರಿಸ್ತೀಯ ಕಾರ್ಯಕರ್ತ" (The Normal Christian Worker) ಎಂಬ ಪುಸ್ತಕದಲ್ಲಿ ಹೀಗೆ ಹೇಳಿದ್ದಾರೆ:

“ಒಬ್ಬ ಕ್ರೈಸ್ತ ಸೇವಕನು ಹಲವಾರು ಅನವಶ್ಯಕ ಸಂಗತಿಗಳನ್ನು ಮಾತಾಡುವದಾದರೆ, ಕರ್ತನಿಂದ ಆತನ ವಾಕ್ಯದ ಪ್ರಸಾರಕ್ಕೆ ಉಪಯೋಗಿಸಲ್ಪಡುವ ನಿರೀಕ್ಷೆಯನ್ನು ಹೊಂದಲು ಹೇಗೆ ಸಾಧ್ಯ? ಒಂದು ವೇಳೆ ದೇವರು ಯಾವುದೇ ಸಂದರ್ಭದಲ್ಲಿ ತನ್ನ ವಾಕ್ಯವನ್ನು ನಮ್ಮ ಬಾಯಲ್ಲಿ ಇರಿಸಿದ್ದರೆ, ಈ ತುಟಿಗಳನ್ನು ಆತನ ಸೇವೆಗೆ ಮಾತ್ರ ಮೀಸಲಾಗಿಡುವ ಗಂಭೀರ ಹಂಗು ನಮ್ಮ ಮೇಲೆ ಇರುತ್ತದೆ. ಒಂದು ದಿನ ನಮ್ಮ ದೇಹದ ಒಂದು ಅಂಗವನ್ನು ಆತನ ಸೇವೆಗೆ ಮೀಸಲಾಗಿಟ್ಟು, ಮರುದಿನ ಅದನ್ನು ಹಿಂತೆಗೆದುಕೊಂಡು ನಮ್ಮ ಸ್ವಂತ ವಿವೇಚನೆಯಿಂದ ಉಪಯೋಗಿಸಲು ಸಾಧ್ಯವಿಲ್ಲ. ಯಾವುದನ್ನಾಗಲೀ ಆತನಿಗೆ ಸಮರ್ಪಿಸಿದ ಮೇಲೆ ಅದು ಶಾಶ್ವತವಾಗಿ ಆತನ ಸ್ವತ್ತು ಆಗುತ್ತದೆ.”

ಶರೀರ ವಿಜ್ಞಾನದ ದೈಹಿಕ ಪರೀಕ್ಷಣೆಯ ವಿಧಾನದ ಪ್ರಕಾರ, ಒಬ್ಬ ವೈದ್ಯನು ನಮ್ಮ ನಾಲಿಗೆಯನ್ನು ಪರೀಕ್ಷಿಸಿ ನಮ್ಮ ದೈಹಿಕ ಆರೋಗ್ಯ ಮಟ್ಟವನ್ನು ಕಂಡುಕೊಳ್ಳಲು ಸಾಧ್ಯವಿರುವ ಹಾಗೆ, ಆತ್ಮಿಕ ಕ್ಷೇತ್ರದಲ್ಲೂ ಒಬ್ಬ ಮನುಷ್ಯನ ನಾಲಿಗೆಯ ಉಪಯೋಗ ಆತನ ಆತ್ಮಿಕತೆಯ ತಪಾಸಣೆಯ ಒಂದು ವಿಧಾನವಾಗಿದೆ, ಎಂದು ಯಾಕೋಬನು ನಮಗೆ ತಿಳಿಸುತ್ತಾನೆ (ಯಾಕೋಬ 1:26). ಅವನು ಮುಂದುವರಿದು, "ಮಾತಿನಲ್ಲಿ ತಪ್ಪದವನು ಪರಿಪೂರ್ಣನು," ಎನ್ನಲೂ ಹಿಂಜರಿಯುವದಿಲ್ಲ (ಯಾಕೋಬ 3:2).

ದೇವರಿಗಾಗಿ ಸಮಯವಿಲ್ಲ

ಇಂದಿನ ದಿನಗಳಲ್ಲಿ ಎಲ್ಲೆಡೆಯೂ ಪರಿಶುದ್ಧತೆಯು ವಿರಳವಾಗಿರುವದಕ್ಕೆ ಮೂರನೆಯ ಕಾರಣ, ನಾವು ದೇವರೊಂದಿಗೆ ಏಕಾಂತದಲ್ಲಿ ಸಾಕಷ್ಟು ಸಮಯವನ್ನು ಕಳೆಯುವದಿಲ್ಲ ಎನ್ನುವ ಸತ್ಯಾಂಶ. ಒಬ್ಬ ಮನುಷ್ಯ ತನ್ನ ಜೀವನದಲ್ಲಿ, ಅತೀ ಪರಿಶುದ್ಧ ಸ್ಥಾನದಲ್ಲಿ ದೇವರೊಂದಿಗೆ ಸಾಕಷ್ಟು ಸಮಯವನ್ನು ಕಳೆಯುವದು ಬಹಳ ಮುಖ್ಯವಾದ ಅಂಶವೆಂದು ನಿರ್ಧರಿಸದಿದ್ದರೆ, ಅವನು ಪರಿಶುದ್ಧನು ಆಗಲಾರನು. ಇದು ನಮ್ಮ ಅತ್ಯುನ್ನತ ಆದ್ಯತೆ ಆಗಿರುತ್ತದೆ.

ಮೋಶೆಯ ಬೆಟ್ಟದ ಮೇಲೆ ದೇವರೊಂದಿಗೆ ಏಕಾಂತದಲ್ಲಿ ನಲ್ವತ್ತು ದಿನಗಳನ್ನು ಕಳೆದ ನಂತರವೇ ಆತನ ಮುಖವು ಪ್ರಕಾಶಿಸಿತು. ಅವನು ತನ್ನ ದೇವರನ್ನು ಮುಖಾಮುಖಿಯಾಗಿ ಅರಿತಿದ್ದರಿಂದ, ದೇವರ ಒಬ್ಬ ಪರಿಶುದ್ಧ ಮನುಷ್ಯನಾದನು. ಎಲೀಷನು ಸಹ ಇಂಥವನಾಗಿದ್ದನು. ಆತನು ದೇವರ ಕುರಿತಾಗಿ, “ನಾನು ಮುಖಮುಖಿಯಾಗಿ ನೋಡುವ ಯೆಹೋವನು” ಎಂದು ಹೇಳಲು ಸಾಧ್ಯವಾಯಿತು (2 ಅರಸು 3:14; 5:16). ಆತನಿಗೆ ದೇವರ ಮುಖಾಮುಖಿ ಭೇಟಿಯ ಅನುಭವವಿತ್ತು; ಇದೇ ಆತನನ್ನು ಪರಿಶುದ್ಧನನ್ನಾಗಿ ಮಾಡಿತು.

ಇಂದಿನ ದಿನದ ಆಗು-ಹೋಗುಗಳು ಅದ್ಭುತ ವೇಗದಲ್ಲಿ ಸಂಭವಿಸುತ್ತವೆ, ಮತ್ತು ನಮ್ಮ ಜೀವನ ಶೈಲಿಯು ಹಲವಾರು ಚಟುವಟಿಕೆಗಳಿಂದ ತುಂಬಿದ್ದರೆ, ಸಮಯ ಅತಿ ಶೀಘ್ರವಾಗಿ ಸಾಗಿ, ನಮಗೆ ದೇವರೊಂದಿಗೆ ಏಕಾಂತದ ಸಮಯವೇ ಇಲ್ಲದಂತೆ ಆಗುತ್ತದೆ. ಹೀಗೆ ಸೈತಾನನು ನಮ್ಮ ಆತ್ಮಿಕ ಬಲವನ್ನು ಕುಂದಿಸಿ ಬಿಡುವನು. ಚಟುವಟಿಕೆಗಳಿಗೆ ಹಾಗೂ ಕಾರ್ಯಸಮಿತಿಗಳಲ್ಲಿ ಪಾಲ್ಗೊಳ್ಳುವದಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಅತನು ನಮ್ಮನ್ನು ಪ್ರೇರೇಪಿಸಿ, ಅತೀ ಪರಿಶುದ್ಧ ಸ್ಥಳವನ್ನು ಕಡೆಗಣಿಸುವಂತೆ ಮಾಡುತ್ತಾನೆ.

ಯೇಸುವು ತನ್ನ ತಂದೆಯೊಡನೆ ಏಕಾಂತದಲ್ಲಿ ಇರುವದಕ್ಕಾಗಿ ಜನಸಮೂಹದಿಂದ ದೂರ ಸರಿದ ಸಂದರ್ಭಗಳ ಕುರಿತಾಗಿ ನಾನು ಓದುವಾಗ, ಯಾವಾಗಲೂ ನನಗೆ ಅದೊಂದು ಸವಾಲಾಗಿ ಇರುತ್ತದೆ. ಒಂದು ಸನ್ನಿವೇಷದಲ್ಲಿ, ಆತನು ಸಾವಿರಾರು ಜನರಿಗೆ ಬೋಧಿಸುತ್ತಾ ಮತ್ತು ಅವರ ಶಾರೀರಿಕ ಅವಶ್ಯಕತೆಗಳನ್ನು ಪೂರೈಸುತ್ತಾ ಇಡೀ ದಿನವನ್ನು ಕಳೆದ ನಂತರ, ತನ್ನ ತಂದೆಯೊಡನೆ ಏಕಾಂತವನ್ನು ಕಂಡುಕೊಳ್ಳಲು ಒಂದು ಬೆಟ್ಟವನ್ನು ಏರಿ ಹೋದನು (ಮತ್ತಾಯ. 14:23). ಇನ್ನೊಂದು ಸಂದರ್ಭದಲ್ಲಿ, ಆತನು ಅಸ್ವಸ್ಥ ಜನರನ್ನು ಗುಣಪಡಿಸುತ್ತಾ ರಾತ್ರಿ ಬಹಳ ಹೊತ್ತಿನ ವರೆಗೆ ಸೇವೆ ಮಾಡಿದ್ದರೂ, ಮರುದಿನ ನಸುಕಿನಲ್ಲೇ ಎದ್ದು ಪ್ರಾರ್ಥನೆಗಾಗಿ ಒಂದು ನಿರ್ಜನ ಪ್ರದೇಶಕ್ಕೆ ಹೋದನು (ಮಾರ್ಕ 1:35). ಸ್ವತಃ ದೇವರ ಮಗನಾಗಿದ್ದರೂ, ಆತನು ಇತರ ಎಲ್ಲರಿಗಿಂತ ಹೆಚ್ಚು ಶ್ರಮಿಸಿ ದುಡಿದು, ನಮಗೆ ನೀಡಿರುವ ಮಾದರಿ ಇದಾಗಿದೆ. ಈ ಜ್ಞಾನದ ಬೆಳಕಿನಲ್ಲಿ, ನಾವು ದೇವರ ಮುಂದೆ ಸಾಕಷ್ಟು ಹೆಚ್ಚಿನ ಸಮಯ ಕಳೆಯದೆ ಜೀವಿಸುತ್ತೇವೆ, ಎಂದು ನುಡಿಯುವ ಧೈರ್ಯ ನಮ್ಮಲ್ಲಿ ಯಾರಿಗಾದರೂ ಇದೆಯೇ?

ಎಲೀಷನು ಆಗಾಗ ತನ್ನ ದೇವರ ಮುಂದೆ ನಿಲ್ಲುವ ಅನುಭವವನ್ನು ಪಡೆದಿದ್ದನು, ಹಾಗಾಗಿ ಪಾಪವನ್ನು ಭಯವಿಲ್ಲದೆ ಗದರಿಸುವದು ಹೇಗೆಂದೂ ಸಹ ಅವನು ತಿಳಿದಿದ್ದನು. ಇಸ್ರಾಯೇಲರ ಅರಸನಿಗೆ ಭಯಪಡದೆ ಅಥವಾ ಅವನನ್ನು ಮೆಚ್ಚಿಸದೇ, ದೇವರು ಆತನ ಬಗ್ಗೆ ಹೇಳಬಯಸಿದ್ದನ್ನು ಹಾಗೆಯೇ ಹೇಳಿದನು. ಇದು ಮಾತ್ರವಲ್ಲ, ತನ್ನ ಸಹ ಕಾರ್ಯಕರ್ತ ಗೆಹಜಿಯು ದುರಾಶೆಗೆ ಒಳಗಾಗಿ ಪಾಪ ಮಾಡಿದಾಗ, ಅವನನ್ನೂ ಸಹ ಎದುರಿಸಿದನು. ಇದನ್ನು ಎಲೀಷನು ಸುತ್ತಿ ಬಳಸಿ ಹೇಳಲಿಲ್ಲ, ಅಥವಾ ಚತುರತೆ ಅಥವಾ ನಿಪುಣತೆಯಿಂದ ಮಾಡಲು ಪ್ರಯತ್ನಿಸಲಿಲ್ಲ.

ನಿಸ್ಸಂದೇಹವಾಗಿ ಕೆಲವು ಸೂಕ್ತ ಸಂದರ್ಭಗಳಲ್ಲಿ ನಿಪುಣತೆ ಮತ್ತು ಯಾರನ್ನೂ ನೋಯಿಸದಂತಹ ಮಾತು ಅವಶ್ಯವಿರುತ್ತವೆ, ಆದರೆ ಪಾಪವು ಎದುರಾದಾಗ, ಯಥಾರ್ಥವಾದ, ನಿರ್ಭಯದ ಗದರಿಕೆಯೂ ಅವಶ್ಯಕವು. ಇಂದಿನ ದಿನದ ಕ್ರೈಸ್ತ ಸಮುದಾಯದಲ್ಲಿ ವಿಶಾಲವಾಗಿ ಹರಡಿರುವ ಪಾಪ, ಲೌಕಿಕತೆ ಮತ್ತು ಇವೆರಡರನ್ನು ಕುರಿತಾಗಿ ಇರುವ ಹಗುರ ಮನೋಭಾವವನ್ನು ವಿರೋಧಿಸಿ ನಮ್ಮಲ್ಲಿ ಕೆಲವರಷ್ಟೇ ಮಾತಾಡುವದು ಏಕೆ? ನನ್ನಲ್ಲಿರುವ ಭಯವೆಂದರೆ, ಇದಕ್ಕೆ ಕಾರಣ ನಮಗೆ ಜನರ ಹೊಗಳಿಕೆ ಬೇಕಾಗಿದೆ, ಹಾಗಾಗಿ ನಾವು ಯಾರನ್ನೂ ನೋಯಿಸಲು ಇಚ್ಛಿಸುವದಿಲ್ಲ. ಇಂತಹ ಲೌಕಿಕ ಇಚ್ಛೆ ಉಂಟಾಗುವದರ ಹಿನ್ನೆಲೆಯ ಸತ್ಯಾಂಶವೆಂದರೆ, ನಿಸ್ಸಂದೇಹವಾಗಿ ನಾವು ಸಾಕಷ್ಟು ಸಮಯ ದೇವರ ಸನ್ನಿಧಿಯಲ್ಲಿ ಇದ್ದುಕೊಂಡು, ದೇವ ಭಯವನ್ನು ತಿಳಕೊಳ್ಳುತ್ತಿಲ್ಲ.

ನಾವು ದೇವರ ಪ್ರವಾದಿಗಳು ಆಗಬೇಕಾದರೆ, ದೇವರು ತನ್ನ ವಾಕ್ಯದಲ್ಲಿ ತೋರಿಸಿಕೊಟ್ಟಿರುವ ನೀತಿಮಟ್ಟವನ್ನು ಕ್ಷೀಣಗೊಳಿಸುವ ಎಲ್ಲಾ ವಿಧಾನಗಳನ್ನು ಖಂಡಿಸಿ ನಮ್ಮ ಧ್ವನಿಯನ್ನಿ ಎತ್ತುವದು ಅಲ್ಲದೆ, ದೇವರು ವಿರೋಧಿಸುವ ಎಲ್ಲವನ್ನೂ ವಿರೋಧಿಸಿ ನಿಲ್ಲುವದು ಅವಶ್ಯ. ನಾವು ಈ ನಿಲುವನ್ನು ವ್ಯಕ್ತಿಗತವಾಗಿ ಮಾತ್ರವಲ್ಲದೆ, ಒಂದೇ ದೇಹವಾದ ವಿಶ್ವಾಸಿಗಳ ಸಭೆಯಾಗಿಯೂ ಪ್ರಕಟಿಸಬೇಕು. ಈ ದಿನಗಳಲ್ಲಿ ಸೌವಾರ್ತಿಕರಾದ ನಾವು ಒಂದು ದೇಹವೆನಿಸಿಕೊಂಡು, ಒಂದೇ ಧ್ವನಿಯಿಂದ ಈ ಪ್ರವಾದನೆಯನ್ನು ಭಾರತದ ಕ್ರೈಸ್ತ ಸಭೆಗಳಿಗೆ ತಲುಪಿಸದೆ ಹೋದರೆ, ದೇವರ ಮುಂದೆ ನಮ್ಮ ಹೊಣೆಗಾರಿಕೆಯಲ್ಲಿ ವಿಫಲರಾದಂತೆ ಆಗುತ್ತದೆ.

ದೇವರ ಸಭೆಯ ಅತ್ಯುನ್ನತ ಉದ್ದೇಶಕ್ಕೆ ಹೊಂದಿಕೊಳ್ಳದ ಎಲ್ಲವುಗಳ ವಿರೋಧವಾಗಿ ಪ್ರವಾದನಾ ಧ್ವನಿಯನ್ನು ಎತ್ತಿದಾಗ, ಒಂದು ವೇಳೆ ನಮ್ಮ ಸಭೆಗಳಲ್ಲಿ ಸಂಖ್ಯೆಯು ಕುಗ್ಗಬಹುದು, ಆದರೆ ದೇವರು ಯಾವಾಗಲೂ ಗುಣಮಟ್ಟದಲ್ಲಿ ಆಸಕ್ತರಾಗಿದ್ದಾರೆಯೇ ಹೊರತು ಅಂಕೆ-ಸಂಖ್ಯೆಗಳಲ್ಲಿ ಅಲ್ಲ. ಇಕ್ಕಟ್ಟಾದ ಮಾರ್ಗವನ್ನು ದೇವರು ಸಿದ್ಧಪಡಿಸಿರುವಾಗ, ನಾವು ಅದನ್ನು ವಿಸ್ತರಿಸುವದು ಬೇಕಾಗಿಲ್ಲ.

ಜನರು ಅನಾದಿಕಾಲದಿಂದಲೂ ತಮ್ಮ ಮಧ್ಯೆ ಇದ್ದ ಪ್ರವಾದಿಗಳನ್ನು ಅರ್ಥಮಾಡಿಕೊಳ್ಳದೆ ತಿರಸ್ಕರಿಸಿದರು, ಮತ್ತು ಇಂದಿನ ಎಲ್ಲಾ ಪ್ರವಾದಿಗಳೂ ಅದನ್ನೇ ನಿರೀಕ್ಷಿಸಬಹುದು. ಆದರೆ ನಾವು ಎ.ಬಿ. ಸಿಂಪ್ಸನ್ ಎಂಬ ದೇವರ ಶ್ರೇಷ್ಠ ಭಕ್ತರು ಬರೆದಿರುವ, ’ಕ್ರೈಸ್ತನು ಮತ್ತು ಸುವಾರ್ತಾ ಪ್ರಸಾರಕ ಸಂಘ’ ('The Christian and Missionary Alliance') ಎಂಬ ಪುಸ್ತಕದ ಈ ಕೆಳಗಿನ ವಿವೇಕದ ಮಾತಿನಿಂದ ಧೈರ್ಯಗೊಳ್ಳಬಹುದು: “ಒಬ್ಬ ಮನುಷ್ಯನ ನಿಜವಾದ ಮೌಲ್ಯ ಗೊತ್ತಾಗುವದು ಅವನು ಹೊಂದಿರುವ ಸ್ನೇಹಿತರ ಸಂಖ್ಯೆಯಿಂದ ಅಷ್ಟೇ ಅಲ್ಲ, ಕೆಲವೊಮ್ಮೆ ಅವನು ಹೊಂದಿರುವ ವೈರಿಗಳ ಸಂಖ್ಯೆಯಿಂದ ಗೊತ್ತಾಗುತ್ತದೆ. ತನ್ನ ಕಾಲಕ್ಕಿಂತ ಹೆಚ್ಚು ಮುಂದುವರಿದಿರುವ ಪ್ರತಿಯೊಬ್ಬ ಮನುಷ್ಯನು ನಿಶ್ಚಯವಾಗಿ ಅಪಾರ್ಥಕ್ಕೆ ಗುರಿಯಾಗುವನು ಮತ್ತು ಅನೇಕ ಬಾರಿ ಹಿಂಸೆಗೂ ತುತ್ತಾಗುವನು. ಆದ್ದರಿಂದ ನಾವು ಎದುರಿಸ ಬಹುದಾದ ಸಂದರ್ಭಗಳು ಯಾವುವೆಂದರೆ ಅಪ್ರಿಯತೆ, ಹೆಚ್ಚಿನ ಒಂಟಿತನ ಮತ್ತು ಅದರೊಂದಿಗೆ ದೂಷಣೆಯೂ ಸಹ, ಬಹುಶಃ ಕಟುವಾದ ಸುಳ್ಳು ಆರೋಪ, ಸಹೋದರರ ಅನ್ಯೋನ್ಯತೆಯ ನಿರಾಕರಣೆಯೂ ಅಲ್ಲದೆ, ಎಲ್ಲಾ ಧಾರ್ಮಿಕ ಚಟುವಟಿಕೆಗಳಿಂದ ನಿಷೇಧಿಸಲ್ಪಡುವದು.”

ದೇವರು ಇಂದು ಹುಡುಕುತ್ತಿರುವದು ಕೇವಲ ಬೋಧಕರನ್ನಲ್ಲ; ಆದರೆ ಎಲೀಷನ ಬಗ್ಗೆ ಹೇಳಲ್ಪಟ್ಟಂತೆ “ಅವನು ಹೇಗೂ ಯೆಹೋವನ ಉತ್ತರವನ್ನು ತಿಳಿಸುವನು” (2 ಅರಸು 3:12) ಎಂದು ಹೇಳಿಸಿಕೊಳ್ಳುವ ಮತ್ತು ನಂಬಿಗಸ್ತರಾಗಿ ತನ್ನ ವಾಕ್ಯವನ್ನು ಸಾರುತ್ತಿದ್ದ ಹಿಂದಿನ ಕಾಲದ ಪ್ರವಾದಿಗಳಂತೆ, ಯಥಾರ್ಥರಾಗಿ ಈ ದಿನ ಪ್ರವಾದಿಸುವವರನ್ನು ಆತನು ಹುಡುಕುತ್ತಿದ್ದಾನೆ.

ಆದರೆ ಇಂತಹ ಸೇವೆ ಮಾಡಲು ಸುಲಭವಾದ ಒಳದಾರಿ ಇಲ್ಲ. ಒಂದೇ ನಿಮಿಷದಲ್ಲಿ ದಿಢೀರ್ವ ಕಾಫಿ (instant coffee) ತಯಾರಾಗುವಂತೆ ಪ್ರವಾದಿಗಳು ತಯಾರಾಗುವದಿಲ್ಲ. ಅವರು ಕೇವಲ ಸತ್ಯವೇದ ಶಿಕ್ಷಣ ಸಂಸ್ಥೆಗಳಿಗೆ ಸೇರುವದರ ಮೂಲಕ ಸಿದ್ಧಗೊಳ್ಳುವದಿಲ್ಲ. ದೀರ್ಘ ಕಾಲದ ವರೆಗೆ ದೇವರ ಮಹಿಮೆಯನ್ನು ನೋಡುತ್ತಾ, ಆತನ ಸ್ವರವನ್ನು ಆಲಿಸುತ್ತಾ, ಆತನ ಸಮ್ಮುಖದಲ್ಲಿ ಆತನ ಸ್ವರೂಪಕ್ಕೆ ರೂಪಾಂತರಗೊಳ್ಳುವ ಅನುಭವದ ಮೂಲಕ ಅದು ಸಾಧ್ಯವಾಗುತ್ತದೆ.

ಹೌದು, ನಾವು ಪ್ರವಾದಿಗಳಾಗುವ ಮೊದಲು ನೀತಿವಂತರಾಗಬೇಕು.

ಭಕ್ತಿ ಸಂಜೀವನಕ್ಕಾಗಿ ಪ್ರಾರ್ಥಿಸುವದು

ಸಹೊದರ ಸಹೋದರಿಯರೇ, ನಾವು ಭಕ್ತಿ ಸಂಜೀವನಕ್ಕಾಗಿ ಪ್ರಾರ್ಥಿಸಲು ಮುಂದಾಗುವ ಮೊದಲು, ದೇವರ ಪರಿಶುದ್ಧ ಸ್ತ್ರೀ-ಪುರುಷರಾಗಲು ತೆರಬೇಕಾದ ಬೆಲೆಯನ್ನು ಕೊಡಲು ಸಿದ್ಧರಿದ್ದೇವೋ ಎಂದು ನಮ್ಮನ್ನೇ ಪ್ರಶ್ನಿಸಿಕೊಳ್ಳುವದು ಅವಶ್ಯ.

ನಾವು ಪ್ರಾರ್ಥಿಸುವಾಗ, ಹಲವು ಬಾರಿ ದೇವರು ನಮ್ಮ ಪ್ರಾರ್ಥನೆಯನ್ನು ತಡೆಯಬೇಕಾಗುತ್ತದೆ, ಎಂಬ ಭಯ ನನಗುಂಟು. ಹೌದು, ದೇವರು ತನ್ನ ಮಕ್ಕಳು ಪ್ರಾರ್ಥಿಸದಿರಲಿ ಎನ್ನುವ ಸಂದರ್ಭಗಳಿವೆ. ಆತನು ಒಂದು ಸಾರಿ ಯೆಹೋಶುವನಿಗೆ, “ಯೆಹೋಶುವನೇ, ನೀನು ಪ್ರಾರ್ಥಿಸಬೇಡ. ನೀನು ನಿನ್ನ ಸಮಯವನ್ನು ವ್ಯರ್ಥ ಮಾಡುತ್ತಿದ್ದಿ,” ಎಂದನು. ಯೆಹೋಶುವನು ಎದ್ದು ಆಕಾನನ ಪಾಪವನ್ನು ಬಹಿರಂಗ ಪಡಿಸಿ, ಅವನನ್ನು ಇಸ್ರಾಯೇಲ್ಯರ ಶಿಬಿರದಿಂದ ತೆಗೆದುಹಾಕಿ ಎಲ್ಲವನ್ನು ಸರಿಪಡಿಸುವ ವರೆಗೆ, ದೇವರು ಅವನ ಪ್ರಾರ್ಥನೆಗಳನ್ನು ಕೇಳಲು ನಿರಾಕರಿಸಿದನು (ಯೆಹೋಶುವ 7:10-13).

ಆದ್ದರಿಂದ, ನಾವು ದೇವರ ಕೃಪಾಸನದ ಮುಂದೆ ಬರುವಾಗ, ದೇವರು ಅಲಿಸುತ್ತಿದ್ದಾನೋ ಎಂದು ನಮ್ಮನ್ನೇ ಪ್ರಶ್ನಿಸಿಕೊಳ್ಳುವದು ಅವಶ್ಯ. ಒಂದು ವೇಳೆ ಆತನು ಕೇಳದಿರಬಹುದು. ಅನೋನ್ಯತೆ ಮುರಿದು ಹೋಗಿರುವ ಆ ಸಹೋದರನೊಂದಿಗೆ ಸಂಬಂಧವನ್ನು ನಾವು ಇನ್ನೂ ಸರಿಪಡಿಸಿಲ್ಲದೆ ಇರಬಹುದು. ನಾವು ನಮ್ಮ ಸಭೆಗಳಲ್ಲಿ ಶ್ರೀಮಂತರು ಮತ್ತು ಪ್ರಭಾವಶಾಲಿ ಜನರ ಕಡೆಗೆ ಪಕ್ಷಪಾತಿಗಳಾಗಿಯೇ ಮುಂದುವರಿದು, ಅವರ ಪಾಪಗಳನ್ನು ಎತ್ತಿ ತೋರಿಸಲು ಹಿಂಜರಿಯುತ್ತಿದ್ದೇವೆ. ನಾವು ನಮ್ಮನ್ನು ಇನ್ನೂ ತಗ್ಗಿಸಿಕೊಂಡಿಲ್ಲ, ಮತ್ತು ನಮ್ಮ ಜೀವನದ ಅವಮಾನಕರ ವಿಷಯಗಳು ಮತ್ತು ಕಪಟತನವನ್ನು ಒಪ್ಪಿಕೊಂಡು ಪಶ್ಚಾತ್ತಾಪ ಪಟ್ಟಿಲ್ಲ. ನಮ್ಮ ನಾಲಿಗೆಗಳು ಇನ್ನೂ ಹತೋಟಿಯಲ್ಲಿಲ್ಲ.

ಅತೀ ಪರಿಶುದ್ಧ ಸ್ಥಳಕ್ಕೆ ನಾವು ಹೋಗುವದೇ ಇಲ್ಲ. ದೇವರ ಪರಿಶುದ್ಧ ಸ್ತ್ರೀ, ಪುರುಷರಾಗಲು ನಮ್ಮ ಹೃದಯಗಳು ಹಂಬಲಿಸಿ, ಅದಕ್ಕಾಗಿ ಯಾವ ಬೆಲೆಯನ್ನಾದರೂ ಕೊಡುವೆನು ಎನ್ನುವ ದಾಹ ನಮ್ಮಲ್ಲಿ ಇನ್ನೂ ಊಂಟಾಗಿಲ್ಲ. ಹೀಗಿದ್ದ ಮೇಲೆ, ನಮ್ಮ ಪ್ರಾರ್ಥನೆಗಳಿಗೆ ಯಾವ ಬೆಲೆ ಇದೆ? ಏಕೆಂದರೆ ದೇವರ ಮುಂದೆ, ಒಬ್ಬ ನೀತಿವಂತನ ಅತ್ಯಾಸಕ್ತಿಯುಳ್ಳ ವಿಜ್ಞಾಪನೆಯು ಮಾತ್ರ ಬಹು ಬಲವಾಗಿದೆ (ಯಾಕೋಬ 5:16).

ದೇವರು ನಮ್ಮ ಹೃದಯಗಳನ್ನು ಪರಿಶೋಧಿಸಲಿ.

ಅಧ್ಯಾಯ 3
ಒಬ್ಬ ಸೇವಕನು

ಯೆಹೋಷಫಾಟನು, “ಯೆಹೋವನ ಸನ್ನಿಧಿಯಲ್ಲಿ ನಮಗೋಸ್ಕರ ವಿಚಾರಿಸಬಲ್ಲವನಾದ ಒಬ್ಬ ಪ್ರವಾದಿಯು ಇಲ್ಲಿರುವದಿಲ್ಲವೋ?” ಎಂದು ಕೇಳಿದನು. ಆಗ ಇಸ್ರಾಯೇಲ್ಯರ ಅರಸನ ಸೇವಕರಲ್ಲೊಬ್ಬನು ಅವನಿಗೆ, “ಶಾಫಾಟನ ಮಗನೂ ಎಲೀಯನ ಕೈಗೆ ನೀರು ಕೊಡುತ್ತಿದ್ದವನೂ ಆದ ಎಲೀಷನೆಂಬ ಪ್ರವಾದಿಯು ಇಲ್ಲಿರುತ್ತಾನೆ” ಎಂದು ಉತ್ತರ ಕೊಟ್ಟನು (2 ಅರಸು 3:11).

ಇಲ್ಲಿ ಎಲೀಷನು, ಎಲೀಯನ ಕೈ ತೊಳೆದುಕೊಳ್ಳಲು ನೀರು ಹಾಕುತ್ತಿದ್ದವನೆಂದು ಉಲ್ಲೆಖಿಸಲ್ಪಟ್ಟಿದೆ - ಅಥವಾ ಇನ್ನೊಂದು ರೀತಿಯಲ್ಲಿ ಹೇಳುವದಾದರೆ, ಸೇವಕನ ಕೆಲಸ ಮಾಡುತ್ತಿದ್ದವನು.

20ನೇ ಶತಮಾನದ ವಾಡಿಕೆಯ ಪ್ರಕಾರ, ಖಂಡಿತವಾಗಿಯೂ ಇದು ದೇವರ ಒಬ್ಬ ಪ್ರವಾದಿಯನ್ನು ಗೌರವಾನ್ವಿತವಾಗಿ ಪರಿಚಯಿಸುವ ವಿಧಾನವಲ್ಲ. ಈಗಿನ ಕಾಲದ ಬೋಧಕರು ತಮ್ಮನ್ನು ಪ್ರೇಕ್ಷರ ಮುಂದೆ ಈ ರೀತಿಯಾಗಿ ಪರಿಚಯಿಸಿದರೆ ಅಸಂತೋಷಗೊಳ್ಳಬಹುದು.

ಎಲೀಷನು ಜನರಿಗೆ ಕೈ ತೊಳೆಯಲು ನೀರು ಹಾಕುವದು ಅಲ್ಲದೆ ಇತರ ಹಲವಾರು ಕೆಲಸಗಳನ್ನು ಮಾಡಿದ್ದನು. ಅವನು ಯೊರ್ದನ್ ಹೊಳೆಯನ್ನು ಇಬ್ಭಾಗವಾಗಿ ಮಾಡಿದ್ದನು. ಅಷ್ಟೇ ಅಲ್ಲದೆ, ಯೆರಿಕೋವಿನ ನೀರಿನಲ್ಲಿದ್ದ ದೋಷವನ್ನು ಸಹ ಪರಿಹರಿಸಿದ್ದನು. ಇವು ನಿಜವಾಗಿ ಅಸಾಧರಣವಾದ ಅದ್ಭುತಕಾರ್ಯಗಳೇ ಆಗಿದ್ದವು. ಆದರೂ ಆತನು ಇಲ್ಲಿ ಒಬ್ಬ ಸೇವಕನು ಎಂಬುದಾಗಿ ಪರಿಚಯಿಸಲ್ಪಟ್ಟನು. ಅವನು ಇಂತಹ ಬಿರುದು ತನಗೆ ಸಿಕ್ಕಿದ್ದಕ್ಕಾಗಿ ಬೇಸರ ಪಡಲಿಲ್ಲವೆಂದು ನಾನು ಭಾವಿಸುತ್ತೇನೆ. ಎಲೀಯನ ಸೇವಕನಾಗಿ ಅವನ ಸೇವೆ ಎಷ್ಟು ಗಮನಾರ್ಹವಾಗಿತ್ತು ಎಂದರೆ, ಅದರ ಮೂಲಕ ಇತರರು ಆತನನ್ನು ಗುರುತಿಸುವಂತಾಯಿತು. ಹಾಗಾಗಿ ಇಲ್ಲಿ ಅರಸನ ಸೇವಕನು ಎಲೀಷನನ್ನು ನೀರು ಕೊಡುತ್ತಿದ್ದವನೆಂದು ಗುರುತಿಸುತ್ತಾನೆ.

ಸಹೋದರ ಸಹೋದರಿಯರೇ, ನಮ್ಮ ಕರೆಯೂ ಸಹ ಇದೇ ಆಗಿದೆ - ಜನರ ಸೇವಕರು ಆಗುವದು. ಸ್ವತಃ ಯೇಸುವೇ ತನ್ನ ಶಿಷ್ಯರ ಕಾಲನ್ನು ನೀರಿನಿಂದ ತೊಳೆದನು. ಆತನು ಹೀಗೆ ಹೇಳಿದ್ದಾನೆ, “ನಾನು ಸೇವೆ ಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆ ಮಾಡುವದಕ್ಕೆ ಬಂದೆನು” (ಮತ್ತಾಯ 20:28).

ಆತನು ಭೂಲೋಕ ಮತ್ತು ಪರಲೋಕದಲ್ಲಿ ನಾಯಕತ್ವದ ಪದವಿಗಳಿಗಾಗಿ ಹೆಣಗುತ್ತಿದ್ದ ಜನರಿಗೆ, ಈ ಲೋಕದ ರಾಜ್ಯಗಳಿಗಿಂತ ತನ್ನ ರಾಜ್ಯವು ವಿಭಿನ್ನವಾಗಿದ್ದು, ತನ್ನ ರಾಜ್ಯದಲ್ಲಿ ಮುಖ್ಯಸ್ಥರಾಗಲು ಇಚ್ಛಿಸುವವರು ಇತರರ ಸೇವಕರಾಗಿರಬೇಕು, ಎಂದು ವಿವರಿಸಿದನು.

ಕರ್ತನ ಪ್ರತಿಯೊಬ್ಬ ಸೇವಕನು ಒಬ್ಬ ಜನಸೇವಕನೂ ಆಗಿರಬೇಕು, ಇಲ್ಲವಾದರೆ ಆತನು ದೇವರ ಸೇವಕನೆಂಬ ಮಾನ್ಯತೆಯನ್ನು ಬಿಟ್ಟುಕೊಡಬೇಕಾಗುತ್ತದೆ.

ಒಬ್ಬ ಸೇವಕನ ಸ್ವಭಾವಕ್ಕೆ ಪ್ರತಿಕೂಲವಾದ ಎರಡು ಸಂಗತಿಗಳನ್ನು ನಾನು ಗಮನಿಸಿದ್ದೇನೆ. ಅವುಗಳಲ್ಲಿ ಮೊದಲನೆಯದು, ಒಳ್ಳೆಯ ಹೆಸರು ಮತ್ತು ಪ್ರಖ್ಯಾತಿಯನ್ನು ಇಚ್ಛಿಸುವದು. ಎರಡನೆಯದು, ಬೇರೆಯವರ ಮೇಲೆ ಅಧಿಕಾರ ಚಲಾಯಿಸುವ ಇಚ್ಛೆ. ಆದರೆ ನಮ್ಮ ಕರ್ತ ಯೇಸುವಿನಲ್ಲಿ ಇವೆರಡಕ್ಕೆ ವಿರೋಧವಾದದ್ದನ್ನು ಕಾಣಬಹುದು:

ತನ್ನನ್ನು ಬರಿದು ಮಾಡಿಕೊಂಡು ... ಆತನು ದಾಸನ ರೂಪವನ್ನು ಧರಿಸಿಕೊಂಡನು (ಫಿಲಿಪ್ಪಿ 2:7) ಇವೆರಡು ಸಂಗತಿಗಳ ಬಗ್ಗೆ ನಾವು ಆಲೋಚಿಸೋಣ.

ಗುರುತಿಸಲ್ಪಡುವ ಬಯಕೆ

ನಾವು ಜಗತ್ತಿನಲ್ಲಿ ಪ್ರಮುಖ ವ್ಯಕ್ತಿಗಳು ಅಥವಾ ಗಣ್ಯರು ಎನ್ನಿಸಿಕೊಳ್ಳುವ ಆಸೆಯನ್ನು ತ್ಯಜಿಸಿರಬಹುದು, ಆದರೆ ಸೌವಾರ್ತಿಕ ವರ್ತುಲಗಳಲ್ಲಿ ಚಿರಪರಿಚಿತನು ಮತ್ತು ಎಲ್ಲರಿಗೆ ಬೇಕಾದವನು ಎನ್ನಿಸಿಕೊಳ್ಳುವ ರಹಸ್ಯವಾದ ಆಸೆ ನಮ್ಮಲ್ಲಿ ಇರಬಹುದು. ಬಹುಶಃ ಇನ್ನೊಂದು ಆಸೆ, ಉತ್ತಮ ಪುನರುಜ್ಜೀವಕನೋ ಅಥವಾ ಉತ್ತಮ ಸತ್ಯವೇದ ಉಪದೇಶಕನೋ ಆಗಬೇಕೆಂಬದು ಇರಬಹುದು. ಅಥವಾ ನಮ್ಮ ಉಪದೇಶದಿಂದ ಜನರು ಯಾವಾಗಲೂ ಆಶಿರ್ವಾದ ಹೊಂದುತ್ತಾರೆಂದು ಇತರರು ತಿಳಿಯಬೇಕೆಂಬ ಆಸೆಯೂ ಇರಬಹುದು. ಅಥವಾ ಒಂದು ವೇಳೆ ಒಂದು ಪ್ರಗತಿಪರ ಧಾರ್ಮಿಕ ಪಂಗಡ ಅಥವಾ ಸೇವಾಸಂಸ್ಥೆಯ ಮೇಲ್ವಿಚಾರಕ ಎನ್ನಿಸಿಕೊಳ್ಳಬೇಕು ಎಂಬ ಬಯಕೆ ಇರಬಹುದು. ಆಸೆ ಏನೇ ಆಗಿದ್ದರೂ ಇಂತಹ ಎಲ್ಲಾ ಆಸೆಗಳೂ ಕ್ರಿಸ್ತನ ಆತ್ಮಕ್ಕೆ ವಿರೋಧವಾದವುಗಳು. ಇಂತಹ ಶರೀರಭಾವದ ಅಭಿಲಾಷೆಗಳು ಹೃದಯದ ಮೂಲೆಗಳಲ್ಲಿ ಅಡಗಿರುವದರಿಂದ, ಹಲವು ಬಾರಿ ದೇವರು ತನ್ನ ಸರ್ವ ಸಂಪೂರ್ಣತೆಯನ್ನು ನಮಗೂ ಮತ್ತು ನಮ್ಮಿಂದ ಇತರರಿಗೂ ಹರಿದು ಬರುವಂತೆ ಮಾಡಲು ಅಡ್ಡಿಯಾಗುತ್ತದೆ. ಈ ದಿನಗಳಲ್ಲಿ ಕ್ರೈಸ್ತ ಸಮುದಾಯದಲ್ಲಿ, ಜನಪ್ರಿಯತೆಗೆ ಪಾತ್ರರಾಗಬೇಕೆಂಬ ಅನಾರೋಗ್ಯಕರ ಭ್ರಾಂತಿಯಿರುವದು ನಿಜವಾಗಿ ದುಖಃಕರವಾದ ಸತ್ಯಾಂಶವಾಗಿದೆ. ಇದು ನಮ್ಮಲ್ಲಿದ್ದ ಅತ್ಯಲ್ಪ ಆತ್ಮಿಕತೆಗೆ ಒಂದು ಪ್ರಾಣಾಂತಿಕ ಪೆಟ್ಟನ್ನು ಕೊಟ್ಟಿದೆ. ಈ ಪಿಡುಗು ಎಷ್ಟಾಗಿ ಹರಡಿದೆ ಎಂದರೆ, ನಾವು ಸತತವಾಗಿ ಎಚ್ಚರವಾಗಿದ್ದು ಇದರೊಂದಿಗೆ ಹೋರಾಡದೇ ಹೋದರೆ, ನಾವು ನಮಗೆ ಅರಿವಿಲ್ಲದೆಯೇ ಇದಕ್ಕೆ ಬಲಿಯಾಗುವೆವು.

ಇಂದಿನ ಕ್ರೈಸ್ತ ನಾಯಕರು ಮತ್ತು ಉಪದೇಶಕರು ಎಷ್ಟು ಮಾತ್ರಕ್ಕೂ, ಪೌಲನು ತನ್ನನ್ನು ಲೋಕದ ಕಸವೋ ವಿಶ್ವದ ಹೊಲಸೋ ಎಂದು ಹೇಳಿಕೊಂಡಂತೆ (1 ಕೊರಿಂಥ 4:13) ಹೇಳಲಾರರು. ಅವರು ಹೆಚ್ಚಿನ ಮಟ್ಟಿಗೆ ಸಿನಿಮಾ ನಟರು ಮತ್ತು ಬಹಳ ಪ್ರಮುಖ ವ್ಯಕ್ತಿಗಳನ್ನು (V.I.P.) ಹೋಲುತ್ತಾರೆ. ಅವರು ತಮ್ಮ ಬಗ್ಗೆ ಬಹಳಷ್ಟು ಬರೆಯಿಸಿಕೊಂಡು, ಛಾಯಾಚಿತ್ರಗಳನ್ನು ತೆಗೆಸಿಕೊಂಡು, ತಮ್ಮ ಮಹಿಮೆಯನ್ನು ಆಕಾಶದೆತ್ತರಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಇದಕ್ಕೂ ಕೆಡುಕಾದ ವಿಷಯ, ಇವರಲ್ಲಿ ಅನೇಕರು (ಪ್ರತಿಯೊಂದನ್ನೂ ಕೃಪೆಯಿಂದಲೇ ಪಡೆದಿದ್ದರೂ ಸಹ) ಇವುಗಳಿಗಾಗಿ ಹಿಗ್ಗುತ್ತಾರೆ! ಕ್ರೈಸ್ತ ಪ್ರಪಂಚವು ತಮ್ಮನ್ನು ನಾಯಕರೆಂದು ಗುರುತಿಸಿಕೊಳ್ಳುವುದನ್ನು ಪ್ರೀತಿಸುತ್ತಾರೆ. ಬೇರೆಯವರು ನಮ್ಮನ್ನು ಮತ್ತು ನಮ್ಮ ಕೆಲಸವನ್ನು ಪ್ರಚಾರ ಪಡಿಸುವುದನ್ನು ತಡೆಗಟ್ಟುವದು ಕಷ್ಟಕರವೇ ಸರಿ. ಆದರೆ ಇಂತಹ ಪ್ರಸಿದ್ಧಿಗಾಗಿ ನಮ್ಮೊಳಗೇ ತವಕ ಪಡುವದರಿಂದ ದೇವರು ನಮ್ಮನ್ನು ಬಿಡಿಸಲಿ. ಸೇವಕರು, ಇತರರಿಗೆ ನೀರು ಹಾಕುವವರು, ಎಂಬ ಪರಿಚಯದ ಹೊರತಾಗಿ ಬೇರೆ ಯಾವ ರೀತಿಯಲ್ಲಿ ಪರಿಚಯಿಸಲ್ಪಡುವ ಆಸೆ ಹೊಂದಿದ್ದರೂ ಅದರಿಂದ ಬಿಡುಗಡೆ ಹೊಂದೋಣ.

ಸ್ವತಃ ಯೇಸುವು ಜನಪ್ರೀಯತೆಯಿಂದ ದೂರವಿದ್ದನು. ಆತನ ದಿನದ ಜನರು ಆತನನ್ನು ಅರಸನನ್ನಾಗಿ ಮಾಡಲು ಬಯಸಿದಾಗ, ಆತನು ಅವರಿಂದ ತಪ್ಪಿಸಿಕೊಂಡು ತಂದೆಯೊಂದಿಗೆ ಏಕಾಂತವಾಗಿರಲು ಬಯಸಿದನು. ಆತನಿಗೆ ಜನರ ಜಯಘೋಷ ಬೇಕಿರಲಿಲ್ಲ. ಆತನು ಈ ಲೋಕದಲ್ಲಿ ಒಬ್ಬ ಪ್ರಮುಖ ವ್ಯಕ್ತಿಯಾಗಿರಲು ಬಯಸಲಿಲ್ಲ (ಯೋಹಾನ 6:15). ಈ ಲೋಕದಲ್ಲಿ ಪರಲೋಕದ ತಂದೆಯ ಮಹಿಮೆಯ ಸಂಪೂರ್ಣ ಸಾರೂಪ್ಯ ಆತನಲ್ಲಿದ್ದರೂ, ಆತನು ಲೌಕಿಕ ಕೀರ್ತಿ, ಗೌರವಗಳಿಂದ ತಪ್ಪಿಸಿಕೊಂಡು ತನ್ನನ್ನು ತಾನೆ ಮರೆ ಮಾಡಿಕೊಂಡನು. ಇದನ್ನೇ ಮರ್ತ್ಯ ಮಾನವರಾದ ನಾವು ಇನ್ನೂ ಎಷ್ಟೋ ಹೆಚ್ಚಾಗಿ ಮಾಡಬೇಕು! ಇದರಲ್ಲಿ ಕರ್ತನ ನಿಜವಾದ ಸೇವಕನು ತನ್ನ ದಣಿಯ ಹೆಜ್ಜೆ ಜಾಡನ್ನು ಅನುಸರಿಸುವನು.

ಜನಪ್ರೀಯತೆಯ ಹುಚ್ಚು ಆಸೆಯಷ್ಟೇ ಅಲ್ಲ, ಇಂದಿನ ಕ್ರೈಸ್ತಲೋಕದಲ್ಲಿ ಅಂಕೆ-ಸಂಖ್ಯೆಗಳ ಮೋಹವೂ ಇದೆಯೆಂದು ನಾನು ಕಂಡುಕೊಂಡಿದ್ದೇನೆ. ಹಿಂದಿನ ಕಾಲದ ನರಭಕ್ಷಕರು ತಲೆಬುರುಡೆಗಳನ್ನು ಲೆಕ್ಕ ಮಾಡುತ್ತಿದ್ದಂತೆ, ಶರೀರಭಾವದ ಗುಲಾಮರಾದ ಇಂದಿನ ಅನೇಕ ಸೌವಾರ್ತಿಕರು, ಸುವಾರ್ತಾ ಕೂಟಗಳಲ್ಲಿ ಮೇಲೆತ್ತಲ್ಪಟ್ಟ ಕೈಗಳನ್ನು ಹಾಗೂ ಆಸಕ್ತಿ ತೋರಿಸಿದ ಜನರನ್ನು ಮತ್ತು ಅವರ ತೀರ್ಮಾನ ಚೀಟುಗಳನ್ನು ಎಣಿಸುತ್ತಾ, ಆ ಸಂಖ್ಯೆಗಳ ಕುರಿತು (ಬಹಳ ಚಾಣಾಕ್ಷತನದಿಂದ) ಬಡಾಯಿ ಕೊಚ್ಚಿಕೊಳ್ಳುವವರಾಗಿದ್ದಾರೆ. ಪಿಶಾಚನು ನಮ್ಮಲ್ಲಿರುವ ಈ ಆಸೆಯನ್ನು ತಿಳಕೊಂಡು, ನಮ್ಮನ್ನು ಮರಳುಗೊಳಿಸಿ ಸನ್ಮಾರ್ಗ ತಪ್ಪಿಸುವ ಕೆಲಸಮಾಡುತ್ತಾನೆ.

ನಾನು ಹೇಳುತ್ತಿರುವದನ್ನು ಒಂದು ದೃಷ್ಟಾಂತದ ಮೂಲಕ ವಿವರಿಸುತ್ತೇನೆ. ಭಾರತದ ಒಂದು ಭಾಗದಲ್ಲಿ ಸುವಾರ್ತಾ ಕೂಟಗಳು ಜರುಗಿದವು ಮತ್ತು ಒಬ್ಬ ಸುಪ್ರಸಿದ್ಧ ಸೌವಾರ್ತಿಕನು ಪ್ರಸಂಗಿಸಲು ಆಮಂತ್ರಿಸಲ್ಪಟ್ಟನು. ಅನೇಕರು ತಮ್ಮ ಕೈಗಳನ್ನು ಎತ್ತಿದರು ಮತ್ತು ತೀರ್ಮಾನ ಚೀಟುಗಳನ್ನು ಸಹಿ ಮಾಡಿದರು. ದೇಶದ ಅನೇಕ ಭಾಗಗಳಲ್ಲಿ ಈ ಅಂಕಿ ಅಂಶಗಳು ಹೆಚ್ಚಾಗಿ ಪ್ರಕಟಿಸಲ್ಪಟ್ಟವು, ಮತ್ತು ಜನರು ಅಲ್ಲಿ ಸಂಭವಿಸಿದ “ಭಕ್ತಿ ಉಜ್ಜೀವನಕ್ಕಾಗಿ” ದೇವರನ್ನು ಸ್ತುತಿಸಿದರು.

ಒಂದು ವರ್ಷದ ತರುವಾಯ ಈ “ಮಾರ್ಪಟ್ಟವರನ್ನು” ಪ್ರೋತ್ಸಾಹಿಸಿ ಮುನ್ನಡೆಸುವ ಜವಾಬ್ದಾರಿ ಹೊಂದಿದ್ದವನನ್ನು ಸಂಧಿಸುವ ಅವಕಾಶ ನನಗೆ ಒದಗಿ ಬಂತು, ಮತ್ತು ನಾನು ಅವನನ್ನು ಈ ಕಾರ್ಯಗಳು ಹೇಗೆ ನಡೆದಿವೆ ಎಂದು ಕೇಳಿದೆನು. ಅವನು ಹೇಳಿದ್ದೇನೆಂದರೆ, “ಸಭೆಗಳ ಸಾಮಾನ್ಯ ಸ್ಥಿತಿಗತಿಯಲ್ಲಿ ಬಹಳ ಅಪೂರ್ವವಾದ ಬದಲಾವಣೆಗಳೇನೂ ಇಲ್ಲ. ಮತ್ತು ಅವರು ಸಂಧಿಸಿದ ಜನರೆಲ್ಲಾ ಮೊದಲಿದ್ದ ಸ್ಥಿತಿಯಲ್ಲೇ ಇದ್ದಾರೆ,” ಎಂದು. ಕೂಟಗಳ ಸಮಯದಲ್ಲಿ ಅವರು ಉದ್ವೇಗಭರಿತರಾಗಿದ್ದದು ನಿಸ್ಸಂದೇಹ, ಆದರೆ ಇದು ಯಾವ ಸ್ಥಿರವಾದ ಬದಲಾವಣೆಯನ್ನು ತರಲಿಲ್ಲ. ಆ ಪ್ರಸಂಗಿಯು ತಮಗೆ ಬೋಧಿಸಲಿಕ್ಕಾಗಿ ಬಹು ದೂರದಿಂದ ಬಂದಿದ್ದರಿಂದ, ಅವನನ್ನು ನಿರಾಶೆಗೊಳಿಸಬಾರದು ಎಂದು ಕೆಲವರು ತೋರಿಕೆಗಾಗಿ ಕೈ ಎತ್ತಿದ್ದರು! ಬೇರೆ ಕೆಲವರು ಮುಂದೆ ಆ ‘ಸುಪ್ರಸಿದ್ಧ’ ಪ್ರಸಂಗಿಯೊಡನೆ ಸಂಬಂಧವನ್ನು ಬೆಳೆಸಿಕೊಳ್ಳುವ ನಿರೀಕ್ಷೆಯಿಂದ, ಅವನ ಕೂಟಗಳಲ್ಲಿ ತಾವು ರಕ್ಷಿಸಲ್ಪಟ್ಟೆವೆಂದು ಹೇಳಿದರು! ಇನ್ನೂ ಕೆಲವರು ಪ್ರಸಂಗಿಯನ್ನು ಕೇವಲ ಹತ್ತಿರದಿಂದ ನೋಡಬೇಕೆಂದು ಮುಂದೆ ಬಂದರು! ಈ ಅದ್ಭುತವಾದ “ಭಕ್ತಿ ಸಂಜೀವನ”ದ ನಿಜಸ್ಥಿತಿ ಇದಾಗಿತ್ತು. ಇಲ್ಲಿ ಹೇಳಿರುವದು ಸತ್ಯಾಂಶವಾಗಿದೆ, ಕಾಲ್ಪನಿಕ ಕಥೆಯಲ್ಲ.

ಸಹೋದರ ಸಹೋದರಿಯರೇ, ನಾನು ಹೇಳುವುದಾದರೆ, “ತೋರಿಕೆಯ ಯಶಸ್ಸಿಗೆ” ಇದೊಂದು ಉತ್ತಮ ಉದಾಹರಣೆಯಾಗಿದೆ. ಇದರ ಮೂಲಕ ಪಿಶಾಚನು ಅನೇಕರನ್ನು ಮೂರ್ಖರನ್ನಾಗಿಸಿದನು. ಒಬ್ಬರೂ ನಿಜವಾಗಿ ರಕ್ಷಿಸಲ್ಪಡಲಿಲ್ಲ, ಯಾರೂ ಪರಿಶುದ್ಧರಾಗಲಿಲ್ಲ, ಆದರೂ ಸಹ ಆ ಪ್ರಸಂಗಿ ಮತ್ತು ಆ ಕೂಟದ ಸಂಘಟನಾ ಮಂಡಲಿಯವರೆಲ್ಲರೂ ಆ ಕೂಟವು ಆ ಪ್ರದೇಶದಲ್ಲಿ “ದೇವರಿಗಾಗಿ ಅತ್ಯಾಶ್ಚರ್ಯವಾದ ಸದವಕಾಶ ಉಂಟುಮಾಡಿತು” ಎಂದು ಸಂತೋಷಪಟ್ಟರು!

ಈ ಕೂಟಗಳ ಸರಣಿಯಲ್ಲಿ ಯಾರೂ ಕೈ ಎತ್ತದೇ ಇರುತ್ತಿದ್ದರೆ ಅಥವಾ ತೀರ್ಮಾನ ಚೀಟುಗಳಿಗೆ ಸಹಿ ಹಾಕದೇ ಇರುತ್ತಿದ್ದರೆ, ಆ ಪ್ರಸಂಗಿಯೂ ಮತ್ತು ಅದರ ಸಂಘಟನಾ ಮಂಡಳಿಯವರೂ ಬಹುಶಃ ತಮ್ಮನ್ನು ತಾವು ತಗ್ಗಿಸಿಕೊಂಡು, ಉಪವಾಸದೊಂದಿಗೆ ದೇವರ ಮುಖವನ್ನು ಅರಸುತ್ತಿದ್ದರು, ಮತ್ತು ಆಗ ನಿಜವಾದ ಆತ್ಮಿಕ ಪ್ರಯೋಜನ ದೊರಕುವ ಸಾಧ್ಯತೆ ಇತ್ತು. ಆದರೆ ಅದು ಪರಿಣಾಮಕಾರಿಯಾಗಿ ನೆರವೇರುವದನ್ನು ತಡೆಯಲು, ಪಿಶಾಚ ಈ ತೋರಿಕೆಯ ಯಶಸ್ಸಿನಲ್ಲಿಯೇ ಪ್ರತಿಯೊಬ್ಬನು ಸಂತೋಷಿಸುವಂತೆ ಮಾಡಿದನು. ನೂರಾರು ಆತ್ಮಗಳು ಸೈತಾನನ ಹಿಡಿತದಿಂದ ಪಾರಾದವು ಎಂದು ಎಲ್ಲರೂ ಯೋಚಿಸುವಂತೆ ಮಾಡಿದನೇ ಹೊರತು, ನಿಜವಾದ ಬಿಡುಗಡೆ ದೊರೆಯಲಿಲ್ಲ.

ವಿಶ್ವಾಸಿಗಳ ನಡುವೆಯೂ, ಸೈತಾನನು ತೋರಿಕೆಯ ಭಕ್ತಿ ಸಂಜೀವನದ ಮೂಲಕ ಅನೇಕರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾನೆ. ಜನರು ವೇದಿಕೆಯ ಸಮೀಪಕ್ಕೆ ಬಂದು ಅತ್ತು ಗೊಳಾಡುವರು, ಆದರೆ ತಮ್ಮ ಸ್ವೇಚ್ಛಾಕಾರ್ಯಗಳು ಮತ್ತು ಜೀವನಗಳನ್ನು ದೇವರ ನಿಯಂತ್ರಣಕ್ಕೆ ಒಳಪಡಿಸುವುದಿಲ್ಲ. ಇನ್ನು ಕೆಲವರು ಪ್ರಸಂಗಿಯ ಬಳಿಗೆ ಹೋಗಿ ಆತನ ಉಪದೇಶಗಳು ಬಹಳ ಆಶೀರ್ವಾದಕರ ಆಗಿದ್ದವು ಎನ್ನುವರು. ಇದರಿಂದ ಆ ಪ್ರಸಂಗಿಯು ತನ್ನೊಳಗೆ ಸಂತೋಷಿಸಿ, ತಾನೂ ಸಹ ಭಕ್ತರಾದ ಜಾನ್ ವೆಸ್ಲಿ ಮತ್ತು ಚಾರ್ಲ್ಸ್ ಫಿನ್ನಿಯವರಂತೆ ಒಬ್ಬ ಭಕ್ತಿ ಸಂಜೀವನಕಾರನು ಎಂದು ಭಾವಿಸಿಕೊಳ್ಳುತ್ತಾನೆ! ಆತನು ಇತರರ ಮುಂದೆ ಈ ಭಕ್ತಿ ಸಂಜೀವನದ ಬಗ್ಗೆ ಹಂಚಿಕೊಳ್ಳುವದು ಜನರು ದೇವರನ್ನು ಸ್ತುತಿಸುವದಕ್ಕಾಗಿ, ಎಂದು ನೆಪಮಾತ್ರಕ್ಕೆ ಹೇಳುತ್ತಾನೆ. ಆದರೆ ಅವನು ನಿಜವಾಗಿ ಉತ್ಸುಕನಾಗಿ ಇರುವದು, ದೇವರು ಅವನನ್ನು ಹೇಗೆ ಉಪಯೋಗಿಸಿದನು ಎಂಬುದನ್ನು ಇತರರು ತಿಳಿಯಲಿ ಎಂಬುದೇ. ಆತನು ಗುಪ್ತವಾಗಿ ದೇವರ ಬಳಿಯಲ್ಲಿ ತಾನು ಉಪದೇಶಿಸಿದ ಆತ್ಮಗಳ ವಿಮೋಚನೆಗಾಗಿ ಕೇಳುವನೋ? ಇಲ್ಲ, ಬದಲಾಗಿ ಅವರೆಲ್ಲರೂ ವಿಮೋಚನೆ ಹೊಂದಿದ್ದಾರೆಂದು ಯೋಚಿಸುತ್ತಾನೆ. ಆದ್ದರಿಂದ ಅವನು ಕೂಟ ಮುಕ್ತಾಯವಾದ ಬಳಿಕ ಪ್ರಾರ್ಥಿಸುವುದನ್ನು ಅಲಕ್ಷ್ಯ ಮಾಡುತ್ತಾನೆ. ಅವನು “ಭಕ್ತಿ ಸಂಜೀವನ” ಬಗ್ಗೆ ಪ್ರಚಾರ ಮಾಡುವುದರಲ್ಲಿಯೇ ಹೆಚ್ಚಾಗಿ ತೊಡಗಿರುತ್ತಾನೆ.

ಹೀಗೆ ಇಂದಿನ ಅನೇಕ ಕ್ರೈಸ್ತ ಕಾರ್ಯಕರ್ತರು ವಿರೋಧಿಯಿಂದ ವಂಚಿಸಲ್ಪಡುತ್ತಾರೆ - ಇದು ಅವರು ಸಿದ್ಧಾಂತಗಳನ್ನು ಸಡಿಲವಾಗಿ ಬೋಧಿಸುವುದರಿಂದಲ್ಲ, ಬದಲಾಗಿ ಅವರು ಪ್ರಸಿದ್ಧಿ ಮತ್ತು ಅಂಕಿ ಅಂಶಗಳನ್ನು ಪ್ರೀತಿಸುವದರಿಂದ ಆಗುತ್ತದೆ. ಪಿಶಾಚನು ಇಂತಹ ಸಂದರ್ಭಗಳಲ್ಲಿ ಜಯ ಹೊಂದಲು ಕಾರಣ, ಅವನು ಈ ಪ್ರಸಂಗಿಗಳು ಹಾಗೂ ಸಂಸ್ಥೆಯ ಸದಸ್ಯರ ಹೃದಯಗಳಲ್ಲಿ ಕೀರ್ತಿ ಮತ್ತು ಸುಪ್ರಸಿದ್ಧಿಯ ಬಗ್ಗೆ ಇರುವ ಒಂದೇ ರೀತಿಯ ಲಾಲಸೆಯನ್ನು ನೋಡುತ್ತಾನೆ. ಸೌವಾರ್ತಿಕರು ಹಲವಾರು ಆತ್ಮಗಳನ್ನು ಗೆಲ್ಲುವವರೆಂಬ ಪ್ರತಿಷ್ಠೆಯನ್ನು ಇತರರ ಮುಂದೆ ಉಳಿಸಿಕೊಳ್ಳಲು ಬಯಸುವದನ್ನೂ, ಆಡಳಿತ ಮಂಡಳಿಯ ಸದಸ್ಯರು ತಮ್ಮ ಯೋಜನೆಗಳು ಒಳ್ಳೆಯ ಫಲಿತಾಂಶ ಕೊಡುವದನ್ನು ಜನರಿಗೆ ತೋರಿಸಲು ಬಯಸುವದದನ್ನೂ ಅವನು ತಿಳಿದಿರುತ್ತಾನೆ. ಆದ್ದರಿಂದ ಆತನು ತನ್ನ ಪೈಶಾಚಿಕ ಉದ್ದೇಶವನ್ನು ಸಾಧಿಸುವದರಲ್ಲಿ ಸಫಲನಾಗುತ್ತಾನೆ.

ಮೇಲಿನ ಸಂಗತಿಗಳು ಅಂಕಿ ಅಂಶಗಳಲ್ಲಿ ಹೆಚ್ಚಳಪಡುವ ಧರ್ಮ ಪ್ರಚಾರಕ ಮಂಡಳಿಗಳು ಮತ್ತು ಧಾರ್ಮಿಕ ಪಂಗಡಗಳಿಗೆ ಸಮನಾಗಿ ಅನ್ವಯಿಸುತ್ತವೆ.

ದಾವೀದನು ಒಮ್ಮೆ ಅಂಕಿಅಂಶಗಳನ್ನು ಲೆಕ್ಕಹಾಕಿ ಮಹಿಮೆಪಟ್ಟಾಗ (2 ಸಮು. 24), ಆತನಿಗೆ ತನ್ನ ತಪ್ಪಿನ ಮನವರಿಕೆ ಆದಂತೆ, ನಾವೂ ಸಹ ಎಸಗುವ ಇಂತಹ ಕಾರ್ಯಗಳು ನಮ್ಮ ಶರೀರಭಾವದ ಫಲಿತಾಂಶವೆಂದು ತಪ್ಪಿನ ಮನವರಿಕೆ ನಮಗೆ ಉಂಟಾಗಲಿ! ದೇವರು ನಮಗೆ ಇಂತಹ ಪೊಳ್ಳು ಕಾರ್ಯಗಳ ಹಿಂದೆ ಅಡಕವಾಗಿರುವ ಸತ್ಯಾಂಶವನ್ನು ಗ್ರಹಿಸುವ ದೃಷ್ಟಿಯನ್ನು ಅನುಗ್ರಹಿಸಲಿ! ದೇವರು ನಮ್ಮನ್ನು ಇಂತಹ ಪ್ರಚಾರ-ಜಾಹೀರಾತುಗಳ ಆತ್ಮದಿಂದ ಬಿಡುಗಡೆ ಗೊಳಿಸಲಿ, ಏಕೆಂದರೆ ಯಾವಾಗಲೂ ಇದು ದೇವರ ಕಾರ್ಯಗಳನ್ನು ಹಾಳು ಮಾಡುತ್ತವೆ. ಇಂತಹ ಶರೀರದಾಶೆ ಮತ್ತು ಮೋಹಗಳಿಂದ ನಾವು ಮುಕ್ತಿ ಹೊಂದದಿದ್ದರೆ, ಪಿಶಾಚನು ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ಮೂರ್ಖರನ್ನಾಗಿಸುವಲ್ಲಿ ಸಫಲನಾಗುತ್ತಾನೆಂದು ನಾವು ಕಾಣಬಹುದಾಗಿದೆ.

ನಾನು ನನ್ನ ಜೀವನದಲ್ಲಿ ಅನುಭವಿಸಿರುವ ಬಹಳ ಕಷ್ಟಕರವಾದ ಒಂದು ಸಂಗತಿಯೆಂದರೆ, ಬಹಿರಂಗವಾಗಿ ಸಾಕ್ಷಿ ಕೊಡುವದು. ಬಹಿರಂಗವಾಗಿ ಸಾಕ್ಷಿಕೊಡುವುದು ಒಂದು ಸಂದೇಶವನ್ನು ಉಪದೇಶಿಸುವುದಕ್ಕಿಂತಲೂ ಹೆಚ್ಚು ಕಠಿಣವಾಗಿ ನನಗೆ ತೋರುತ್ತದೆ. ಏಕೆಂದರೆ ಒಬ್ಬಾತನು ತನ್ನ ಜೀವನದ ಬಗ್ಗೆ ಅಥವಾ ತನ್ನ ಕಾರ್ಯಸಾಧನೆಗಳ ಬಗ್ಗೆ ಸಾಕ್ಷಿಯನ್ನು ಕೊಡುವಾಗ, ಸ್ವಲ್ಪ ಮಟ್ಟಿಗೆ ತನ್ನನ್ನು ಹೆಚ್ಚಿಸಿಕೊಂಡು ಮಹಿಮೆಪಡದೇ ಇರುವುದು ಬಹಳ ಕಷ್ಟಕರವಾಗುತ್ತದೆ.

ಆ ಗೌರವ, ಪ್ರಶಂಸೆಗಳನ್ನು ಸಂಪೂರ್ಣವಾಗಿ ಅಥವಾ ಅದರ ಹೆಚ್ಚಿನ ಭಾಗವನ್ನು ನಮಗೆ ಗಿಟ್ಟಿಸಿಕೊಳ್ಳುವ ಧೈರ್ಯ ನಮ್ಮಲ್ಲಿ ಯಾರಿಗೂ ಇಲ್ಲವೆಂದು ನನಗೆ ನಿಶ್ಚಯವಾಗಿ ತಿಳಿದಿದೆ. ಬಹುಶಃ ನಮಗೆ ಬೇಕಾಗಿರುವದು ಅದರಲ್ಲಿ ಶೇಕಡಾ 5 ಅಥವಾ ಶೇಕಡಾ 10 ಭಾಗ ಮಾತ್ರ. ಖಂಡಿತವಾಗಿ, ನಾವು ಪಟ್ಟಿರುವ ಶ್ರಮದ ಪ್ರತಿಫಲವಾಗಿ ಅಷ್ಟು ಚಿಕ್ಕ ಕಮಿಷನ್ ಹೆಚ್ಚೇನೂ ಅಲ್ಲವೆಂದು ನಾವು ಯೋಚಿಸಬಹುದು!

ಹೀಗೆ ಮಾಡುವದರಿಂದ ದೇವರ ಮಹಿಮೆಯು ಹೊರಟುಹೋಗಿ, ನಮ್ಮ ಸಭೆಗಳ ದ್ವಾರದ ಮೇಲೆ ’ಈಕಾಬೋದ್ - ದೇವರ ಮಹಿಮೆಯಿಲ್ಲದ ಸಭೆಗಳು’ ಎಂದು ಬರೆದಿರುವುದನ್ನು ನೋಡಿ, ನಾವು ಅತ್ಯಾಶ್ಚರ್ಯ ಪಡುವದು ಸರಿಯೇ?

ದೇವರ ಮಹಿಮೆಯನ್ನು ಸ್ಪರ್ಶಿಸುವ ಯೋಚನೆಯೂ ಸಹ ನಮ್ಮಲ್ಲಿ ನಡುಕವನ್ನು ಉಂಟುಮಾಡಬೇಕು. ಮಹಿಮಾಭರಿತನಾದ ನಮ್ಮ ದೇವರು ತನ್ನ ಮಹಿಮೆಯನ್ನು ಕಾದಿರಿಸಿಕೊಳ್ಳುತ್ತಾನೆ ಮತ್ತು ಅದರ ಒಂದಂಶವನ್ನೂ - ಕೇವಲ ಚಿಕ್ಕ ಭಾಗವನ್ನೂ - ಮತ್ತೊಬ್ಬನಿಗೆ ಸಲ್ಲಿಸನು (ಯೆಶಾಯ 42:8).

PLEASE VERIFY THE FOLLOWING PARA - FROM THE ORIGINAL TEXT!! (next para only)

ಇದರಿಂದ ನಾವೆಂದೂ ಸಾಕ್ಷಿ ಹೇಳಬಾರದೆಂದು ನಾನು ಹೇಳಲು ಪ್ರಯತ್ನಿಸುತ್ತಿಲ್ಲ. ನಮ್ಮ ಶ್ರಮ ಹಾಗೂ ನಮ್ಮ ಜೀವನದಲ್ಲಿ ದೇವರು ಮಾಡಿರುವ ಕಾರ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಕೆಲವು ಸಮಯಗಳಲ್ಲಿ ಉಚಿತವಾಗಿರುತ್ತದೆ. ಆದರೆ ನಾವು ದೇವರ ಸಮಯಕ್ಕೆ ಕಾಯುವದನ್ನು ಕಲಿಯಬೇಕು, ಮತ್ತು ಆತನ ಸಮಯ ಬಂದಾಗ ನಮ್ಮ ಸ್ವಾರ್ಥವನ್ನು ಬಿಟ್ಟು ಮಾತನಾಡಬೇಕು - ಹೌದು ಸಂಪೂರ್ಣವಾಗಿ ನಮ್ಮನ್ನು ಮರೆತು ಬಿಡಬೇಕು.

ಪೌಲನು ಒಮ್ಮೆ ಮೂರನೆಯ ಆಕಾಶಕ್ಕೆ ಒಯ್ಯಲ್ಪಟ್ಟನು, ಆದರೆ 14 ವರ್ಷಗಳ ವರೆಗೆ ಇದನ್ನು ಯಾರಿಗೂ ತಿಳಿಸಲಿಲ್ಲ. ಮತ್ತು ತನ್ನ ಅಪೊಸ್ತಲತನವನ್ನು ಕಾಪಾಡುವುದಕ್ಕಾಗಿ ಕರೆ ಬಂದಾಗ ಮಾತ್ರ ಅದನ್ನು ಪ್ರಸ್ತಾಪಿಸಿದನು - ಆದಾಗ್ಯೂ ಪೂರ್ಣ ವಿವರಗಳನ್ನು ಕೊಡಲಿಲ್ಲ (2 ಕೊರಿಂಥ 12:2).

ದೇವರ ಮಹಿಮೆಯನ್ನು ನೋಡಿದ ಪ್ರತಿಯೊಬ್ಬನೂ, ಸೆರಾಫಿಯರು ದೇವರ ಸಿಂಹಾಸನದ ಬಳಿ ಮಾಡುವಂತೆ ಮತ್ತು ಮೋಶೆಯು ಉರಿಯುವ ಪೊದೆಯ ಬಳಿ ಮಾಡಿದಂತೆ, ತನ್ನ ಮುಖವನ್ನು ಅಡಗಿಸುತ್ತಾನೆ (ಯೆಶಾಯ 6:2; ವಿಮೋ 3:6). ಆತನು ಜನರು ತನ್ನನ್ನು ನೋಡಲಿ, ಅರಿಯಲಿ ಎಂದು ಬಯಸುವದಿಲ್ಲ. ದೇವರ ಮಹಾ ಮಹಿಮೆಯನ್ನು ನೋಡಿರುವ ಆತನು, ಆ ಮಹಿಮೆಯನ್ನು ಸ್ಪರ್ಶಿಸಲು ಭಯ ಪಡುವನು. ಅವನು ತನ್ನ ಮುಖವನ್ನು ನಿರಂತರವಾಗಿ ಮುಚ್ಚಿಕೊಳ್ಳುವನು. ಅತೀ ಅವಶ್ಯವಿದ್ದ ಹೊರತು, ಅವನು ತನ್ನ ಕುರಿತಾಗಲೀ ಅಥವಾ ತನ್ನ ಕಾರ್ಯಗಳ ಕುರಿತಾಗಲೀ ಮಾತನಾಡುವದಿಲ್ಲ; ಮತ್ತು ಮಾತನಾಡಿದಾಗ, ಮೆಲು ಧ್ವನಿಯಲ್ಲಿ ತನಗೆ ಯಾವುದೇ ಗೌರವ ಸಲ್ಲದ ರೀತಿಯಲ್ಲಿ ಜಾಗರೂಕತೆಯಿಂದ ಮಾಡುತ್ತಾನೆ. ಅವನು ಕ್ರೈಸ್ತ ಪತ್ರಿಕೆಗಳಲ್ಲಾಗಲೀ, ಬಹಿರಂಗ ಕೂಟಗಳಲ್ಲಾಗಲೀ, ತನ್ನ ಶ್ರೇಷ್ಠ ತ್ಯಾಗಗಳು, ಅದ್ಭುತ ಅನುಭವಗಳು ಮತ್ತು ದೇವರಿಗೆ ತನ್ನ ಸಮರ್ಪಣೆಯ ಬಗ್ಗೆ (ಆನೇಕರು ಸಾಕ್ಷಿಯ ಹೆಸರಿನಲ್ಲಿ ಮಾಡುವಂತೆ) ಮಾತನಾಡುವಂಥ ಶರೀರಭಾವದ ಚಪಲತೆಯಿಂದ ದೂರವಿರುತ್ತಾನೆ.

ಕ್ರೈಸ್ತ ವರ್ತುಲಗಳಲ್ಲಿ ನಾನು ನೋಡಿರುವ ಇನ್ನೊಂದು ಕಾಯಿಲೆ, ನಾಯಕತ್ವಕ್ಕಾಗಿ ಅಸಹ್ಯಕರವಾದ ದುರಾಶೆಯಾಗಿದೆ. ನಾನು ನೌಕಾಪಡೆಯ ನೌಕರಿಯಲ್ಲಿದ್ದಾಗ ಕೆಲವರು ಇತರರನ್ನು ತುಳಿದು, ಅವರ ಮೇಲೇರಿ, ತಾವು ಮೇಲಿನ ಹಂತವನ್ನು ತಲುಪಿದರೆ ಸಾಕೆಂದು ಯೋಚಿಸುವದನ್ನು ಕಂಡಿದ್ದೆನು. ನಾನು ಆ ಕೆಲಸದಿಂದ ಹೊರಬಂದಾಗ, ಇಂತಹ ನಡತೆ ಅಲ್ಲೇ ಕೊನೆಗೊಂಡಿತು ಎಂದು ಯೋಚಿಸಿದ್ದೆನು. ಆದರೆ ನಾನು ನಮ್ಮ ದೇಶದಲ್ಲಿ ಕ್ರೈಸ್ತ ಸಮುದಾಯಗಳೊಂದಿಗೆ ಒಡನಾಟದಲ್ಲಿ, ಕ್ರೈಸ್ತ ಸೌವಾರ್ತಿಕರಲ್ಲೂ ಇದೇ ಸಂಗತಿಯನ್ನು - ಸ್ಥಾನಮಾನದ ದುರಾಶೆ ಮತ್ತು ಅದಕ್ಕಾಗಿ ಸೆಳೆದಾಟ - ನೋಡಿದಾಗ ಆಶ್ಚರ್ಯ, ದುಃಖಗಳನ್ನು ಅನುಭವಿಸಿದ್ದೇನೆ. ಕೈಸ್ತ ಮೇಲ್ವಿಚಾರಕ, ಸಭಾಹಿರಿಯ ಅಥವಾ ಖಜಾಂಚಿಯ ಸ್ಥಾನಕ್ಕಾಗಿ ಮತ್ತು ಕಾರ್ಯ ನಿರ್ವಾಹಕ ಮಂಡಳಿಯ ಸದಸ್ಯತ್ವಕ್ಕಾಗಿ, ಸಂಚು ಹೂಡುವದು, ಆಂದೋಲನ ಮಾಡುವದನ್ನು ನಾನು ನೋಡಿದೆನು.

ಇವೆಲ್ಲವೂ ಯೇಸುವಿನ ಆತ್ಮಕ್ಕೆ ವಿರೋಧವಾದವುಗಳು. ದೇವರ ಮಹಿಮೆಯನ್ನು ಕಂಡಿರುವ ಮನುಷ್ಯ ಪ್ರಖ್ಯಾತಿಗಾಗಿ - ಈ ಲೋಕದಲ್ಲಿ ಅಥವಾ ಸೌವಾರ್ತಿಕ ಸಮುದಾಯಗಳಲ್ಲಿ - ನಡೆಯುವ ಪರದಾಟದಲ್ಲಿ ಪಾಲ್ಗೊಳ್ಳುವದಿಲ್ಲ. ಆತನು ದೇವರ ಉನ್ನತ ಧ್ಯೇಯದತ್ತ ಸಾಗುವ ಕರೆಗೆ ಓಗೊಟ್ಟು, ಕ್ರಿಸ್ತ ಯೇಸುವನ್ನು ಹಿಂಬಾಲಿಸುವದರಲ್ಲಿ ಪೂರ್ಣ ಹೃದಯದಿಂದ ಕಾರ್ಯನಿರತನಾಗಿ, ಇತರ ಕಾರ್ಯಗಳ ಕಡೆಗೆ ಗಮನ ಹರಿಸುವದಿಲ್ಲ. ಈ ಲೋಕದ ಜೀವಿತದಲ್ಲಿ ಕೇವಲ ಇತರರಿಗೆ ನೀರು ಹಾಕುತ್ತಾ, ನೆಲ ಗುಡಿಸುತ್ತಾ, ದೇವರನ್ನು ಮಹಿಮೆ ಪಡಿಸುವದೊಂದೇ ಅವನ ಆಶೆಯಾಗಿದೆ.

ನಾವು ತಿಳಕೊಳ್ಳಬೇಕಾದ ಸಂಗತಿ, ಮಾನವನ ದೃಷ್ಟಿಯಲ್ಲಿ ಶ್ರೇಷ್ಠವಾದದ್ದು ಕೆಲವು ಸಲ ದೇವರ ದೃಷ್ಟಿಯಲ್ಲಿ ಶ್ರೇಷ್ಠವಾಗಿರುವದಿಲ್ಲ, ಎಂಬುದನ್ನು. ಡಾ||ಎ.ಡಬ್ಲ್ಯೂ. ಟೋಝರ್ ಎಂಬ ಭಕ್ತರು ಮೂವತ್ತು ವರ್ಷಗಳ ಪರ್ಯಂತ ಧಾರ್ಮಿಕ ರಂಗವನ್ನು ಗಮನಿಸಿದಾಗ, ಅವರಿಗೆ ಚೆನ್ನಾಗಿ ಮನದಟ್ಟಾದ ವಿಷಯ, ಅನೇಕ ಸಂದರ್ಭಗಳಲ್ಲಿ ಸಭೆಯ ನಾಯಕತ್ವ ಮತ್ತು ಪವಿತ್ರತೆ ಇವು ಒಂದಕ್ಕೊಂದು ಹೋಲುವದಿಲ್ಲ, ಎಂದು. ಈ ಮಾತು ಭಾರತದಲ್ಲಿಯೂ ನಿಜವಾಗಿದೆ. ನಮ್ಮ ದೇಶದಲ್ಲಿ ಉನ್ನತ ವೇದಿಕೆಗಳ ಮೇಲೆ ನಿಲ್ಲುವವರು ಮತ್ತು ಕ್ರೈಸ್ತ ಸಮುದಾಯದಲ್ಲಿ ಅಗ್ರಸ್ಥಾನ ಹೊಂದಿರುವವರು ಬಹಳಷ್ಟು ಸಲ ದೇವರ ಅತಿ ಶ್ರೇಷ್ಠ ಭಕ್ತರು ಆಗಿರುವದಿಲ್ಲ. ನಮ್ಮ ಸಭೆಗಳಲ್ಲಿ ದೇವರ ಅಪೂರ್ವ ರತ್ನಗಳು ಕಂಡುಬರುವದು ಅಪರಿಚಿತರು ಮತ್ತು ಬಡವರ ನಡುವೆ.

ನಾವು ದೇವರ ದೃಷ್ಟಿಯಲ್ಲಿ ಸ್ನಾನಿಕನಾದ ಯೋಹಾನನಂತಹ ಮಹಾಪುರುಷರು (ಲೂಕ 1:15) ಆಗಬೇಕೆನ್ನುವ ಹಾರೈಕೆ ನಮ್ಮ ಹೃದಯದ ಉಂಟಾಗುವಂತೆ ಆತನು ಅನುಗ್ರಹಿಸಲಿ. ಯೋಹಾನನು ದೇವರ ದೃಷ್ಟಿಯಲ್ಲಿ ಮಹಾಪುರುಷನಾಗುವದಕ್ಕೆ ಒಂದು ಕಾರಣವಿತ್ತು. ಸ್ವತಃ ಯೋಹಾನನೇ ತಿಳಿಸಿದಂತೆ, ಆತನ ಆಕಾಂಕ್ಷೆ ‘ಕ್ರಿಸ್ತನು ವೃದ್ದಿಯಾಗಬೇಕು ಮತ್ತು ನಾನು ಕಡಿಮೆಯಾಗಬೇಕೆಂಬುದು’ ಆಗಿತ್ತು (ಯೋಹಾನ 3:30). ಆದ್ದರಿಂದ ಯೇಸು ಕ್ರಿಸ್ತನಿಗೆ ಪ್ರಾಮುಖ್ಯತೆ ಸಿಗುವಂತೆ, ಆತನು ನಿರಂತರವಾಗಿ ಹಿಂಭಾಗದಲ್ಲಿ ಮರೆಯಾಗಿರಲು ಪ್ರಯತ್ನಿಸುತ್ತಿದ್ದನು.

ದೇವರ ಹೃದಯದ ಸ್ಥಿರವಾದ ಇಚ್ಛೆ, ಕ್ರಿಸ್ತನಿಗೇ ಎಲ್ಲದರಲ್ಲಿಯೂ ಪ್ರಥಮ ಸ್ಥಾನ ದೊರಕಬೇಕು, ಎಂದಾಗಿದೆ (ಕೊಲೊಸ್ಸೆ 1:18). ಹಾಗೆಯೇ ನಮ್ಮ ಹೃದಯಗಳಲ್ಲೂ, ನಾವು ಹಿಂದಕ್ಕೆ ಸರಿದು ಹಿನ್ನೆಲೆಯಲ್ಲಿ ನಿಂತು, ಕ್ರಿಸ್ತನು ಮಾತ್ರವೇ ಮಹಿಮೆ ಹೊಂದಬೇಕು ಎಂಬ ಸಂಗತಿಯೊಂದೇ ನೆಲೆಗೊಂಡಿದ್ದರೆ, ಖಂಡಿತವಾಗಿ ದೇವರ ಶಕ್ತಿ ಮತ್ತು ಅಧಿಕಾರಗಳು ಹಗಲಿರುಳು ನಮ್ಮ ಹಿಂಬಲವಾಗುತ್ತವೆ.

ಆದರೆ ನಮ್ಮಲ್ಲಿ ಸ್ವಾರ್ಥದಿಂದ ಉಂಟಾಗುವ ಇತರ ಧ್ಯೇಯಗಳೂ, ಉದ್ದೇಶಗಳೂ ಇರುವಾಗ, ಅದು ಇತರರಿಗೆ ಗೊತ್ತಾಗದಿದ್ದರೂ ದೇವರಿಗೆ ಮಾತ್ರ ಗೊತ್ತಿದ್ದು, ದೇವರು ತನ್ನ ಪವಿತ್ರ ನಾಮಕ್ಕೆ ನಂಬಿಗಸ್ತನಾಗಿದ್ದು, ತನ್ನ ಶಕ್ತಿಯನ್ನು ನಮ್ಮ ವಶಕ್ಕೆ ಒಪ್ಪಿಸಲಾರನು.

ಸಹೋದರ ಸಹೋದರಿಯರೇ, ಸ್ನಾನಿಕನಾದ ಯೋಹಾನನಲ್ಲಿದ್ದ ಆತ್ಮವು ಯಾವ ಸ್ತ್ರೀ-ಪುರುಷರಲ್ಲಿ ಇರುತ್ತದೋ, ದೇವರು ಅವರ ಮೂಲಕ ಮಾತ್ರವೇ ತನ್ನ ನಿಜವಾದ ಸಭೆಯನ್ನು ಕಟ್ಟಲು ಸಾಧ್ಯವಾಗುತ್ತದೆ. ಪ್ರಕಟನೆ ಪುಸ್ತಕವು ಧಾರಾಳವಾಗಿ ಸ್ಪಷ್ಟಪಡಿಸುವಂತೆ, ಒಂದು ನಿಜವಾದ ಸಭೆಯಿದೆ, ಹಾಗೆಯೇ ಒಂದು ಸುಳ್ಳು ಸಭೆಯಿದೆ - ಒಂದು ಯೆರೂಸಲೇಮ್ ಮತ್ತೊಂದು ಬಾಬೆಲ್. ಯೆರೂಸಲೇಮ್ ಸಭೆಯು ಯಾರು ತಮ್ಮನ್ನು ತಾವು ಮರೆಮಾಡಿಕೊಂಡು, ಒಬ್ಬ ಸೇವಕನ ಆತ್ಮ ಉಳ್ಳವರಾಗಿರುತ್ತಾರೋ, ಅವರಿಂದ ಮಾತ್ರವೇ ಕಟ್ಟಲ್ಪಡುತ್ತದೆ, ಆದರೆ ಬಾಬೇಲ್ ಯಾರಿಂದಲಾದರೂ ಕಟ್ಟಲ್ಪಡಬಹುದು. ಯೆರೂಸಲೇಮ್ ನಿತ್ಯ ನಿರಂತರಕ್ಕೂ ಉಳಿಯುವಂಥದ್ದು, ಆದರೆ ಬಾಬೇಲ್ ಶೀಘ್ರವಾಗಿ ದೇವರಿಂದ ಕೆಡವಲ್ಪಡುವಂಥದ್ದು (ಪ್ರಕಟನೆ 18:21)

ಬಾಬೇಲ ಗೋಪುರವು (ಬಾಬೇಲಿನ ಪ್ರಾರಂಭವು) ಹೇಗೆ ಕಟ್ಟಲ್ಪಟ್ಟಿತೆಂದು ನಿಮಗೆ ಜ್ಞಾಪಕದಲ್ಲಿರಬಹುದು. ಮನುಷ್ಯರೆಲ್ಲಾ ಸೇರಿಕೊಂಡು, “ನಾವು ದೊಡ್ಡ ಹೆಸರನ್ನು ಪಡೆಯೋಣ” (ಆದಿ. 11:4) ಎಂದರು. ಅನೇಕ ವರ್ಷಗಳ ನಂತರ ಬಾಬೇಲಿನ ಅರಸನು ಅದೇ ಮನೋಭಾವದಿಂದ, “ನನ್ನ ಮಹಿಮೆಯು ಪ್ರಸಿದ್ಧಿಗೆ ಬರುವಂತೆ ನನ್ನ ಸಾಮರ್ಥ್ಯ ಬಲದಿಂದ ನಾನು ಕಟ್ಟಿಸಿಕೊಂಡಿರುವದು, ಇಗೋ, ಮಹಾ ಪಟ್ಟಣವಾದ ಈ ಬಾಬೆಲ್,” ಎಂದು ಕೊಚ್ಚಿಕೊಂಡನು (ದಾನಿ. 4:30).

ಒಬ್ಬ ವಿಶ್ವಾಸಿಯಲ್ಲಿ ಇಂತಹ ಇಚ್ಛೆ ಇದ್ದರೆ - ದೊಡ್ಡ ಹೆಸರನ್ನು ಪಡೆಯುವದು ಮತ್ತು ಮನುಷ್ಯರ ದೃಷ್ಟಿಯಲ್ಲಿ ತನ್ನನ್ನು ಮಹಿಮೆ ಪಡಿಸಿಕೊಳ್ಳುವದು - ಆತನಲ್ಲಿ ಬಾಬೇಲಿನ ಆತ್ಮವಿದೆ, ಮತ್ತು ಆತನು ತನ್ನ ಶ್ರಮದಿಂದ ಕಟ್ಟುವವುಗಳು ನಿತ್ಯತ್ವಕ್ಕೆ ಎಂದೂ ಉಳಿಯುವುದಿಲ್ಲ. ಸಹೋದರರೇ, ಅಯ್ಯೋ, ಇಷ್ಟೇ ಅಲ್ಲದೆ ಈ ಆತ್ಮವು ಅತ್ಯುನ್ನತ ಕ್ರೈಸ್ತ ಧರ್ಮ ಪ್ರಚಾರಕರಲ್ಲಿಯೂ ಸಹ ಕಂಡುಬರುತ್ತದೆ.

ಲೂಸಿಫರನು ಸಹ ಇದೇ ಆತ್ಮವನ್ನು ಹೊಂದಿದ್ದನು. ಅವನಿಗೆ ದೇವರು ಕೊಟ್ಟಿದ್ದ ಸ್ಥಾನದಲ್ಲಿ ತೃಪ್ತಿ ಇರಲಿಲ್ಲ. ಅವನು ಇನ್ನೂ ಉನ್ನತ ಸ್ಥಾನಕ್ಕೆ ಹೋಗಲು ಬಯಸಿದ್ದರಿಂದಲೇ ತನ್ನ ಅಭಿಷೇಕವನ್ನು ಕಳೆದುಕೊಂಡನು. ಒಮ್ಮೆ ಅವನು ಅಭಿಷಿಕ್ತನಾದ ಕೆರೂಬಿಯಾಗಿದ್ದನು, ಆದರೆ ಪಿಶಾಚನಾಗುವುದರಲ್ಲಿ ಅವನ ಕೊನೆಯಾಯಿತು. ಹೀಗೆ ಅಭಿಷೇಕವನ್ನು ಕಳೆದುಕೊಂಡಿರುವವನು ಅವನೊಬ್ಬನೇ ಅಲ್ಲ.

ಕ್ರಿಸ್ತನ ಆತ್ಮ ಇವೆಲ್ಲವುಗಳಿಗೆ ವಿರೋಧವಾದದ್ದು ಆಗಿದೆ. ಆತನು ದೇವರೇ ಆಗಿದ್ದರೂ, ನಮಗೋಸ್ಕರ ತನ್ನನ್ನು ತಾನು ತಗ್ಗಿಸಿಕೊಂಡನು ಮತ್ತು ಯಾವ ಪ್ರಸಿದ್ಧಿಯನ್ನೂ ಹೊಂದಲಿಲ್ಲ. ಮತ್ತು ಸತ್ಯವೇದವು ಹೀಗೆ ಹೇಳುತ್ತದೆ, “ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ...! (ಫಿಲಿಪ್ಪಿ 2:5-8).

ಪ್ರಖ್ಯಾತಿ ಮತ್ತು ಮನುಷ್ಯರ ಮೆಚ್ಚುಗೆಯನ್ನು ಅಪೇಕ್ಷಿಸುವ ಎಲ್ಲಾ ಆಶೆ-ಆಕಾಂಕ್ಷೆಗಳನ್ನು ದೇವರು ನಮ್ಮ ಹೃದಯಗಳಿಂದ ಬೇರು ಸಹಿತ ಕಿತ್ತು ಹೊರಗೆ ಹಾಕಲಿ. ನಾವು ನಮ್ಮ ಪ್ರಭಾವವನ್ನು ಹೆಚ್ಚಿಸುವದಕ್ಕಾಗಿ ಸಂಪರ್ಕಗಳನ್ನು ಬೆಳೆಸಲು, ಇಲ್ಲವೇ ಸೌವಾರ್ತಿಕ ಸಮುದಾಯಗಳಲ್ಲಿ ಚಿರಪರಿಚಿತರಾಗಲು ಪ್ರಯತ್ನಿಸುತ್ತಾ ಸುತ್ತಾಡುವದು ಬೇಡ. “ಭಾರತದ ಅನ್ಯಜನರ ನಡುವೆ ಇರುವ ಆತ್ಮಿಕ ಮಹಾ ಪ್ರತಿಭಾವಂತನು” ಎನ್ನಿಸಿಕೊಂಡು, ನಾವು ಪರದೇಶಗಳಿಂದ ಆಮಂತ್ರಿಸಲ್ಪಡಲು ಪ್ರಯತ್ನಿಸುವದು ಬೇಡ.

ನಾವು ಯೇಸುವಿನಂತೆ ಆಗಬೇಕಾದರೆ, ಯೇಸುವಿನಂತೆ ನಮ್ಮ ಸಮಯವನ್ನು ಸಾಧಾರಣ ಜನರೊಂದಿಗೆ, ಅಂದರೆ ಸಾಮಾನ್ಯ ಸ್ತ್ರೀ-ಪುರುಷರೊಂದಿಗೆ ಕಳೆಯೋಣ, ಮತ್ತು ಸೌವಾರ್ತಿಕ ಮುಖಂಡರ ಸ್ನೇಹವನ್ನು ಮಾತ್ರ ಬೆಳೆಸಲು ಪ್ರಯತ್ನಿಸುತ್ತಾ ಎಲ್ಲಾ ಸಮಯವನ್ನು ವ್ಯರ್ಥ ಮಾಡದಿರೋಣ. ಸತ್ಯವೇದವು ಹೇಳುವ ಮಾತು, “ದೊಡ್ಡವರಂತೆ ನಟಿಸಲು ಪ್ರಯತ್ನಿಸದಿರಿ, ದೊಡ್ಡಸ್ತಿಕೆಯ ಜನರ ಕಟಾಕ್ಷಕ್ಕೆ ಒಳಗಾಗಲು ಪ್ರಯತ್ನಿಸದಿರಿ, ದೀನರ ಸಂಗಡ ಗೆಳೆತನದಲ್ಲಿ ಸಂತೋಷಿಸಿರಿ” (ರೋಮ 12:16 'TLB' ಅನುವಾದ).

ದೇವರು ನಮ್ಮನ್ನು ಕೆಳಸ್ಥಾನದಲ್ಲಿ ಇರಿಸಲಿ. ಶಿಲುಬೆಯ ಅಡಿಯೇ ಅತೀ ಸುರಕ್ಷಿತವಾದ ಸ್ಥಳ.

ಒತ್ತಡ ಹೇರುವ ಮನೋಭಾವ

ನಮ್ಮ ಕರ್ತನು ಒಬ್ಬ ಸೇವಕನಾಗಿದ್ದನು, ಆದರೆ ಅಕಟಾ, ಇಂದಿನ ಕ್ರೈಸ್ತ ನಾಯಕರು ಮತ್ತು ಸುವಾರ್ತಾ ಪ್ರಸಾರಕರು ಅನೇಕ ಸಲ ಯಜಮಾನರಂತೆ - ’ಬಾಸ್‍’ ಮತ್ತು ಸಾಹೇಬರಂತೆ ಇರುತ್ತಾರೆ. ಇತರರು ನಮ್ಮನ್ನು “ಸಾಹೇಬರೇ” ಎಂದು ಕರೆಯುವದನ್ನು ಒಂದು ವೇಳೆ ನಾವು ನಿಯಂತ್ರಿಸಲಾರೆವು, ಆದರೆ ಸಾಹೇಬನೆಂದು ಕರೆಸಿಕೊಳ್ಳುವದು ನಮ್ಮ ಹೃದಯದ ಆಶೆಯಾಗಿದೆಯೋ, ಎನ್ನುವದು ಸೂಕ್ತ ಪ್ರಶ್ನೆಯಾಗಿದೆ!

ಅಂದು ಯೇಸುವು ಬಹು ತಾಳ್ಮೆಯಿಂದ ತನ್ನ ಶಿಷ್ಯರಿಗೆ ಕಲಿಸಲು ಬಯಸಿದ ಪಾಠ, ಇಂದು ನಮಗೂ ಬೇಕಾದಂಥದ್ದು. ಅವರ ಪಾದಗಳನ್ನು ತೊಳೆದ ನಂತರ ಆತನು ಹೇಳಿದ್ದೇನೆಂದರೆ, “ಈ ಲೋಕದ ಅರಸರೂ, ದೊಡ್ಡ ಮನುಷ್ಯರೂ ತಮ್ಮ ಗುಲಾಮರ ಮೇಲೆ ಅಧಿಕಾರ ಚಲಾಯಿಸುತ್ತಾರೆ..... ಆದರೆ ನಿಮ್ಮೊಳಗೆ ಯಾರು ಹೆಚ್ಚಿನ ಸೇವೆ ಮಾಡುವನೋ, ಅವನು ನಿಮ್ಮ ಮುಖ್ಯಸ್ತನಾಗುವನು. ಈ ಲೋಕದಲ್ಲಿ ಧಣಿಯು ಮೇಜಿನ ಮೇಲೆ ಕುಳಿತುಕೊಂಡು, ತನ್ನ ಸೇವಕರಿಂದ ಸೇವೆ ಮಾಡಿಸಿಕೊಳ್ಳುತ್ತಾನೆ. ಆದರೆ ಇಲ್ಲಿ ಹಾಗಲ್ಲ! ಏಕೆಂದರೆ, ನಾನು ನಿಮ್ಮ ಸೇವಕನಾಗಿದ್ದೇನೆ” (ಲೂಕ 22:25-27 'TLB' ಅನುವಾದ).

ಹೌದು, ಈ ಮಾತುಗಳು ನಮ್ಮ ಕೈಕೆಳಗೆ ಇರುವವರೊಂದಿಗೆ ನಮ್ಮ ದೊರೆತನದ ವರ್ತನೆಯ ಬಗ್ಗೆ ನಮ್ಮಲ್ಲಿ ಪಶ್ಚಾತ್ತಾಪವನ್ನು ತರಲಿ! ನಮ್ಮ ಕರ್ತನ ಮಾದರಿಯು ನಮ್ಮಲ್ಲಿ ಎಂತಹ ದೀನತೆಯನ್ನು ತರಬೇಕು! ನಮ್ಮಲ್ಲಿ ಇನ್ನೂ ಅಡಗಿರುವ ಇಹಲೋಕದ ಗುಣಗಳಾದ ಹೊರತೋರಿಕೆಯ ಆತ್ಮಗೌರವ, ಪ್ರತಿಷ್ಠೆ ಮತ್ತು ಜಾತಿ-ನಿಷ್ಠೆಗಳನ್ನು ಕರ್ತನು ನಮ್ಮಿಂದ ಸಂಪೂರ್ಣವಾಗಿ ತೆಗೆದುಹಾಕಲಿ. ಯೇಸುವಿನಂತೆ ಒಬ್ಬ ಸೇವಕನಾಗುವದು, ಇತರರಿಗೆ ನೀರು ಹಾಕುವಂಥವನು ಆಗುವದು, ಇವು ದೇವರ ರಾಜ್ಯದಲ್ಲಿ ನಿಜವಾದ ಶ್ರೇಷ್ಠತೆಯ ಗುರುತುಗಳಾಗಿವೆ ಎನ್ನುವದನ್ನು ಕರ್ತನು ನಮಗೆ ಮತ್ತೊಮ್ಮೆ ಹೊಸದಾಗಿ ತೋರಿಸಲಿ.

ನಾವು ಈಗ ತಗ್ಗಿಸಿಕೊಳ್ಳಲು ಸಿದ್ಧರಾಗಿ, ನಮ್ಮ ಕೊನೆಯ ಉಸಿರಿನ ವರೆಗೂ ಹಾಗೆಯೇ ಮುಂದುವರಿಯುವಂತೆ ದೇವರು ನಮಗೆ ಸಹಾಯ ಮಾಡಲಿ. ನಾವು ಕರ್ತನ ದ್ರಾಕ್ಷಾತೋಟದ ಕೆಲಸಗಾರರಲ್ಲಿ ಹಿರಿಯರು ಎಂಬ ಭಾವನೆ ನಮಗೆ ಬಂದರೂ, ನಮ್ಮ ಜೊತೆಯ ಸಹೋದರರಿಂದ ಗೌರವ, ಮರ್ಯಾದೆ ಮತ್ತು ವಿಧೇಯತೆಗಳನ್ನು ಪಡೆಯುವ ಪ್ರಯತ್ನವನ್ನು ಯಾವತ್ತೂ ಮಾಡದಿರೋಣ. ಸಭೆಯಲ್ಲಿ ನಮ್ಮ ಅಧಿಕಾರ ಸ್ಥಾನವು ಹೆಚ್ಚಿನದಾಗಿದ್ದರೂ, ವಯಸ್ಸಿನಲ್ಲಿ, ಅನುಭವದಲ್ಲಿ ನಾವು ಇತರರಿಗಿಂತ ಹಿರಿಯರಾಗಿದ್ದರೂ ಸಹ, ನಾವು ನಮ್ಮ ಮನೋಭಾವದಲ್ಲಿ, ಅವರು ಒಡೆಯರು ಮತ್ತು ನಾವು ಸೇವಕರು ಎನ್ನುವದನ್ನು ನಾವು ಯಾವಾಗಲೂ ಅರಿತುಕೊಳ್ಳೋಣ. ನಾವು ಹೆಚ್ಚು ಉನ್ನತ ಮಟ್ಟಕ್ಕೆ ಹೋಗುತ್ತಿರುವಾಗ, ಇತರರ ಸೇವೆ ಮಾಡುವಂತಹ ನಮ್ಮ ಜವಾಬ್ದಾರಿಯೂ ಹೆಚ್ಚುತ್ತಾ ಹೋಗುತ್ತದೆ.

ಇದಕ್ಕೆ ಸಂಬಂಧಿಸಿದಂತೆ, 2 ಕೊರಿಂಥ 4:5 ನಮಗೆ ಒಂದು ದೊಡ್ಡ ಸವಾಲಾಗಿದೆ. ಅಲ್ಲಿ ಪೌಲನು ಹೇಳಿರುವದು (ಮಾತಿನ ತಾತ್ಪರ್ಯ) ಇದು: “ನಾವು ಎರಡು ಸಂಗತಿಗಳನ್ನು ತೋರಿಸಿ ಕೊಡುತ್ತೇವೆ: ನಮ್ಮ ಬೋಧನೆಯ ಮೂಲಕ ಯೇಸು ಕ್ರಿಸ್ತನನ್ನು ಕರ್ತನೆಂದು ಪ್ರಸಿದ್ಧಿ ಪಡಿಸುತ್ತೇವೆ. ಹಾಗೂ ನಮ್ಮ ಜೀವನದ ಮೂಲಕ ನಾವು ಯೇಸುವಿಗೋಸ್ಕರ ನಿಮ್ಮ ಸೇವಕರಾಗಿದ್ದೇವೆಂದು ತೋರಿಸಿ ಕೊಡುತ್ತೇವೆ.”

ಸಹೋದರ ಸಹೋದರಿಯರೇ, ಇದು ನಮ್ಮ ಎರಡು ಎಳೆಯ ಸಂದೇಶವಾಗಿದೆ; ಮತ್ತು ದೇವರು ಕೂಡಿಸಿರುವದನ್ನು ಯಾವ ಮನುಷ್ಯನೂ ವಿಂಗಡಿಸದಿರಲಿ. ಇದು ಸಂಪೂರ್ಣ ಸುವಾರ್ತೆಯಾಗಿದೆ. ಇದರ ಅರ್ಧ ಭಾಗವನ್ನು ಮಾತ್ರ ಪ್ರಚಾರ ಪಡಿಸುವ ತಪ್ಪನ್ನು ನಾವು ಎಂದಿಗೂ ಮಾಡುವದು ಬೇಡ, ಏಕೆಂದರೆ ಈ ಸಂಪೂರ್ಣ ಸಂದೇಶ ಸಾರಲ್ಪಟ್ಟಾಗ ಮಾತ್ರ, ಕ್ರಿಸ್ತನ ಮೂಲಕ ನಾವು ನಿಧಾನವಾಗಿ ಪವಿತ್ರಗೊಳ್ಳುವದನ್ನು ಅನ್ಯಜನರು ನೋಡುತ್ತಾರೆ. ಈ ರೀತಿಯಾಗಿ ಆಗದಿರುವದೇ ನಮ್ಮ ದೇಶದಲ್ಲಿ ಇಂದು ಕರ್ತನ ಕಾರ್ಯಕ್ಕೆ ಉಂಟಾಗಿರುವ ಮೂಲ ಅಡಚಣೆಯಾಗಿದೆ.

ನಾವು ಸೇವಕರು ಆಗಬೇಕಾದರೆ, ನಮ್ಮಲ್ಲಿ ಯಥಾರ್ಥವಾದ ದೀನತೆ ಇರಬೇಕು. ದೀನತೆಯೆಂದರೆ ಕೆಳಗಿನ ಜನರಿಗೆ ದಯೆ ತೋರುವದು ಎಂದು ತಪ್ಪಾಗಿ ಅರ್ಥಮಾಡಿಕೊಳ್ಳಬಾರದು. ಇಂತಹ ತೋರಿಕೆಯ ವಿನಯಶೀಲತೆಯನ್ನು ಹೊಂದುವದು ಬಹಳ ಸುಲಭ. ಸ್ವಾರ್ಥಿಗಳಾದ ರಾಜಕಾರಣಿಗಳೂ ಅದನ್ನು ಹೊಂದಿರುತ್ತಾರೆ. ನಾವು ದೊಡ್ಡ ಮನುಷ್ಯರು ಎಂಬ ಅಹಂಕಾರದ ಭಾವನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಕೆಳದರ್ಜೆಯ ಜನರೊಂದಿಗೆ ಅನ್ಯೋನ್ಯತೆ ಬೆಳೆಸಿಕೊಳ್ಳಲು ಬಯಸುವ ತೋರಿಕೆಯ ನಮ್ರತೆಯನ್ನು ದೀನತೆಯೆಂದು ನಾವು ತಪ್ಪಾಗಿ ಭಾವಿಸಬಾರದು. ಇಲ್ಲ, ಇದು ದೀನತೆ ಅಲ್ಲವೇ ಅಲ್ಲ.

”ನಿಜ ದೀನತೆಯೆಂದರೆ, ದೇವರ ದೃಷ್ಟಿಯಲ್ಲಿ ನನ್ನ ಮತ್ತು ಬೇರೊಬ್ಬನ ನಡುವೆ ಯಾವ ವ್ಯತ್ಯಾಸವೂ ಇಲ್ಲವೆಂಬುದನ್ನು ಗುರುತಿಸುವುದು. ನಾನು ಮತು ಇನ್ನೊಬ್ಬ ಮನುಷ್ಯನ ನಡುವಿನ ಎಲ್ಲಾ ಸ್ವಾಭಾವಿಕ ವ್ಯತ್ಯಾಸಗಳು ಉಂಟಾಗಲು ಕಾರಣ ಸಂದರ್ಭಗಳು, ಪರಿಸರದ ವಿಶೇಷತೆಗಳು, ಇತ್ಯಾದಿಗಳಾಗಿವೆ, ಮತ್ತು ಇವೆಲ್ಲವೂ ಶಿಲುಬೆಯಲ್ಲಿ ಬೇರು ಸಹಿತ ಕಿತ್ತು ಹಾಕಲ್ಪಟ್ಟಿವೆ. ಯೇಸುವಿನ ಶಿಲುಬೆಯು ನಮ್ಮೆಲ್ಲರನ್ನೂ ಶೂನ್ಯದ ಹಂತಕ್ಕೆ ತಲುಪಿಸುತ್ತದೆ. ನನ್ನ ಜೀವನದಲ್ಲಿ ಇದು ಆಗಿರದಿದ್ದರೆ, ಫಿಲಿಪ್ಪಿ. 2:3ರಲ್ಲಿ ಆಜ್ಞಾಪಿಸಿರುವಂತೆ, ನಾನು ಇತರರನ್ನು ನನಗಿಂತ ಹೆಚ್ಚು ಮುಖ್ಯವಾದವರು ಎಂದು ತಿಳಿದು ಗೌರವಿಸುವದನ್ನು ಇನ್ನೂ ಕಲಿತಿಲ್ಲವೆಂದು ಅದು ಸ್ಪಷ್ಟವಾಗಿ ಸೂಚಿಸುತ್ತದೆ. ನಾವು ಆ ಶೂನ್ಯ ಸ್ಥಿತಿಗೆ ತಲುಪಿದಾಗ, ಆ ಕೆಳಗಿನ ಸ್ಥಾನವನ್ನು ಸುಲಭವಾಗಿ, ಸ್ವೇಚ್ಚೆಯಿಂದ, ಸಂತೋಷದಿಂದ ಸ್ವೀಕರಿಸಲು ಸಾಧ್ಯವಾಗುತ್ತದೆ. ಆಗ ದೇವರು ನಮ್ಮ ಮೂಲಕ ತನ್ನ ಪೂರ್ಣ ಸಂಕಲ್ಪವನ್ನೂ ಸಹ ಸುಲಭವಾಗಿ ಪೂರೈಸುತ್ತಾನೆ.”

ಎಲ್ಲಿಯ ವರೆಗೆ ಮೋಶೆಯು (ತನ್ನ 40ನೇ ವಯಸ್ಸಿನಲ್ಲಿ) ತಾನು ದೇವಜನರ ನಾಯಕನೆಂದು ತಿಳಿದಿದ್ದನೋ, ಅಲ್ಲಿಯ ವರೆಗೆ ದೇವರು ಆತನನ್ನು ಉಪಯೋಗಿಸಲು ಆಗಲಿಲ್ಲ (ಅಪೊ. ಕೃ. 7:25). ದೇವರು ಅವನನ್ನು ಅಡವಿಗೆ ಒಯ್ದು, ಅಲ್ಲಿ ಇನ್ನೂ 40 ವರ್ಷಗಳ ವರೆಗೆ ಅವನನ್ನು ಮುರಿಯಬೇಕಾಯಿತು. ಕೊನೆಗೆ ಮೋಶೆಯು, “ಕರ್ತನೇ, ಈ ಕೆಲಸಕ್ಕೆ ನಾನು ಯೋಗ್ಯನಲ್ಲ, ನಾನು ಅಯೋಗ್ಯನು. ನನ್ನ ಮಾತೂ ನಾಲಿಗೆಯೂ ಮಂದವಾಗಿವೆ,” ಎಂದನು (ಮತ್ತು ಅವನು ಈ ಮಾತನ್ನು ನಿಜವಾಗಿ ನಂಬಿದ್ದನು; ಇತರ ಕೆಲವರು ಇಂತಹ ಮಾತುಗಳನ್ನು ತೋರಿಕೆಯ ದೀನತೆಯಿಂದ ಹೇಳುವಂತೆ ಆತನು ಹೇಳಲಿಲ್ಲ). ಇದರ ನಂತರವೇ ದೇವರು ಆತನನ್ನು ಉಪಯೋಗಿಸಲು ಸಾಧ್ಯವಾಯಿತು, ಏಕೆಂದರೆ ಮೋಶೆಯು ಇಷ್ಟರಲ್ಲಿ ಮುರಿಯಲ್ಪಟ್ಟಿದ್ದನು. ಆತನು ತನ್ನ 40ನೆಯ ವಯಸ್ಸಿನಲ್ಲಿ, ತನ್ನ ಸ್ವಂತ ಭುಜಬಲದಿಂದ ಕೇವಲ ಒಬ್ಬ ಐಗುಪ್ತ್ಯನನ್ನು ಮರಳಿನಲ್ಲಿ ಹೂತು ಹಾಕಲು ಸಾಧ್ಯವಾಯಿತು. ಆದರೆ ದೇವರು ಆತನನ್ನು ಮುರಿದ ಮೇಲೆ, ಅವನು ಇಡೀ ಐಗುಪ್ತ್ಯ ಸೇನೆಯನ್ನೇ ಕೆಂಪು ಸಮುದ್ರದಲ್ಲಿ ಹುಗಿದುಬಿಟ್ಟನು. ಮುರಿಯಲ್ಪಡುವಿಕೆಯ ಫಲ ಇಂಥದ್ದೇ ಆಗಿದೆ.

ಐದು ರೊಟ್ಟಿಗಳನ್ನು ಕರ್ತನು ತೆಗೆದುಕೊಂಡು ಆಶೀರ್ವದಿಸಿದರೆ ಮಾತ್ರ ಸಾಲದು. ಅದನ್ನು ಜನ ಸಮುದಾಯಕ್ಕೆ ಬಡಿಸುವ ಮೊದಲು ಮುರಿಯಬೇಕಾಗುತ್ತದೆ. ಹಾಗೆಯೇ ನಮ್ಮ ಜೀವನದಲ್ಲೂ ಈ ಮುರಿಯುವಿಕೆಯು ನಿರಂತರವಾಗಿ ನಡೆಯುತ್ತಿರಬೇಕು. ದೇವರು ನಮ್ಮನ್ನು ತೆಗೆದುಕೊಂಡು, ಆಶೀರ್ವದಿಸಿ, ಮುರಿಯುತ್ತಾನೆ, ನಂತರ ನಮ್ಮನ್ನು ಉಪಯೋಗಿಸುತ್ತಾನೆ. ಆ ಸಂದರ್ಭದಲ್ಲಿ ನಮ್ಮ ಮೂಲಕ ಅನೇಕರಿಗೆ ಆಹಾರ ಸಿಗುವದರಿಂದ, ನಾವು ಉಬ್ಬಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆತನು ನಮ್ಮನ್ನು ಮತ್ತೊಮ್ಮೆ ಕೈಗೆತ್ತಿಕೊಂಡು ಮುರಿಯಬೇಕು. ಹೀಗೆ ನಮ್ಮ ಜೀವನ ಪರ್ಯಂತ ಈ ಕಾರ್ಯವು ನಡೆಯುತ್ತಿರುತ್ತದೆ.

ಇಂತಹ ಮುರಿಯುವಿಕೆಗಾಗಿ ನಮ್ಮಲ್ಲಿ ಎಂತಹ ಹಾತೊರೆಯುವಿಕೆ ಇರಬೇಕು. ಒಂದು ಚಿಕ್ಕ ಪರಮಾಣು (atom) ವಿಭಜಿಸಲ್ಪಟ್ಟಾಗ, ಎಂತಹ ಮಹಾ ಶಕ್ತಿ ಬಿಡುಗಡೆಯಾಗುತ್ತದೆ! ಹಾಗೆಯೇ, ನಮ್ಮ ಸಭಾ ಮುಖಂಡರುಗಳು ಮತ್ತು ಅದರ ನಂತರ ಎಲ್ಲಾ ಸಭೆಗಳ ಜನರು ಒಬ್ಬೊಬ್ಬರಾಗಿ ದೇವರಿಂದ ಮುರಿಯಲ್ಪಡುವದಾದರೆ, ನಮ್ಮ ನಾಡಿನಲ್ಲಿ ಎಂತಹ ಶಕ್ತಿ ಉಕ್ಕಿ ಹರಿಯಬಹುದು.

ವಿಶಿಷ್ಟವಾದ ಗುರುತು

ನಕಲಿಯಾದದ್ದು ಉತ್ತಮವಾದದ್ದನ್ನು ಬಹಳವಾಗಿ ಹೋಲುವ ವಂಚನೆಯ ಈ ದಿನಗಳಲ್ಲಿ, ದೇವರ ಯಥಾರ್ಥ ಸೇವಕನ ತಪ್ಪಲಾರದ ಒಂದು ವಿಶಿಷ್ಟ ಗುರುತು ಯಾವದೆಂದು ನಾನು ಸ್ವತಃ ನನ್ನನ್ನೇ ಎಷ್ಟೋ ಸಲ ಕೇಳಿದ್ದೇನೆ.

ಅದು ಪವಾಡ ಶಕ್ತಿಯೋ? ಇಲ್ಲ. ದೆವ್ವಗಳೂ ಅದ್ಭುತಗಳನ್ನು ಮಾಡುತ್ತವೆ. ಅನ್ಯಭಾಷೆಗಳನ್ನು ಮಾತಾಡುವ ವರವೋ? ಇಲ್ಲ, ಅದನ್ನೂ ಸಹ ದೆವ್ವಗಳು ಅನುಕರಣೆ ಮಾಡುತ್ತವೆ. ಇವುಗಳಲ್ಲಿ ಯಾವದೂ ದೇವರ ನಿಜವಾದ ಸೇವಕನ ಪ್ರಾಥಮಿಕ ಗುರುತು ಅಲ್ಲ.

ನಾನು ನಿರ್ಧಾರಕ್ಕೆ ಬಂದಿರುವದು ಏನೆಂದರೆ, ಶಿಲುಬೆಯ ಆತ್ಮವು ಯೇಸುವಿನ ಒಬ್ಬ ನಿಜವಾದ ಶಿಷ್ಯನ ಗುರುತಾಗಿದೆ. ಕರ್ತನ ನಿಜವಾದ ಸೇವಕನು ತನ್ನ ಜೀವನದಲ್ಲಿ ಶಿಲುಬೆಯನ್ನು ಅಂಗೀಕರಿಸುತ್ತಾನೆ - ಆ ಶಿಲುಬೆ ಆತನ ಆತ್ಮಪ್ರಶಂಸೆ, ಆತ್ಮವಿಶ್ವಾಸ, ಸ್ವಾರ್ಥ ಮತ್ತು ಆತನಿಗೆ ಸೇರಿದ ಎಲ್ಲವನ್ನೂ ಸಾಯಿಸಿ, ಆತನನ್ನು ಒಬ್ಬ ಗಣನೆಗೆ ಬಾರದ ವ್ಯಕ್ತಿಯನ್ನಾಗಿ ಕುಗ್ಗಿಸಿದೆ. ಕರ್ತನ ಒಬ್ಬ ಸೇವಕನನ್ನು, ಸ್ವಂತ ಸೇವೆಯಲ್ಲಿ ತೊಡಗಿರುವ ಇನ್ನೊಬ್ಬನಿಂದ ಸ್ಪಷ್ಟವಾಗಿ ಬೇರ್ಪಡಿಸುವ ಗುರುತು ಇದೇ ಆಗಿದೆ. ಇತರ ಗುರುತು-ಪುರಾವೆಗಳು ನಮ್ಮನ್ನು ವಂಚಿಸಬಹುದು.

ನಾವು ನಮ್ಮಂತವರನ್ನೇ ಪುನರುತ್ಪತ್ತಿ ಮಾಡುತ್ತೇವೆ ಇಂದು ನಾವು ನಮ್ಮ ಸಭೆಗಳಲ್ಲಿ ತೊಂದರೆ ಉಂಟುಮಾಡುವ ಜನರು, ಅಹಂಕಾರಿ ಹಿರಿಯರು ಮತ್ತು ಅಧಿಕಾರ ಚಲಾಯಿಸುವ ಸಭಾಸೇವಕರಿಂದ ತೊಂದರೆಗೆ ಈಡಾಗಿದ್ದೇವೋ? ನಾವು ಈಗ ಅನುಭವಿಸುತ್ತಿರುವದು ಅನೇಕ ವರ್ಷಗಳಿಂದ ನಾವು ಬಿತ್ತಿರುವ ಬೀಜದ ಫಲವಲ್ಲವೇ ಮತ್ತು ಸಂಪೂರ್ಣವಾಗಿ ನಮ್ಮನ್ನೇ ಹೋಲುವ ಜನರನ್ನು ಉಂಟುಮಾಡಿರುವದು ನಾವೇ ಅಲ್ಲವೇ? ನಮ್ಮ ಹೃದಯದಲ್ಲಿದ್ದ ಅಹಂಕಾರ ಮತ್ತು ಜಂಬಗಳು (ಅವು ಇನ್ನೂ ಹಾಗೆಯೇ ಮುಂದುವರಿದಿವೆ), ಈಗ ನಮ್ಮ ಆತ್ಮಿಕ ಸಂತಾನದ ಮೂಲಕ ತೋರಿಬರುತ್ತಿವೆ. ಇದರಲ್ಲಿ ನಾವು ಆಶ್ಚರ್ಯ ಪಡುವಂಥದ್ದು ಏನಾದರೂ ಇದೆಯೇ?

ಆದ್ದರಿಂದ, ನಾವು “ಕರ್ತನೇ ನಮ್ಮಲ್ಲಿ ಭಕ್ತಿ ಸಂಜೀವನವನ್ನು ಉಂಟುಮಾಡು” ಎಂದು ಪ್ರಾರ್ಥಿಸುವಾಗ, ನಮಗೆ ಕರ್ತನ ಉತ್ತರವೇನೆಂದರೆ,

“ನನ್ನವರೆಂದು ಹೆಸರುಗೊಂಡ ನನ್ನ ಪ್ರಜೆಗಳು ತಮ್ಮನ್ನು ತಗ್ಗಿಸಿಕೊಂಡು ಪ್ರಾರ್ಥಿಸುವದಾದರೆ.... ನಾನು ಪರಲೋಕದಿಂದ ಲಾಲಿಸಿ.... ಅವರ ದೇಶದಲ್ಲಿ ಆರೋಗ್ಯವನ್ನು ದಯಪಾಲಿಸುವೆನು” (2 ಪೂರ್ವಕಾಲ ವೃತ್ತಾಂತ 7:14).

ಓ, ರೋಗನಿವಾರಣೆ ನಮ್ಮ ದೇಶಕ್ಕೆ ಎಷ್ಟು ಅಗತ್ಯವಾಗಿದೆ. ದೇವರು ಭಕ್ತಿ ಸಂಜೀವನವನ್ನು ತಡೆಯುತ್ತಿರುವನೆಂದು ನಾವು ಹೇಳದಿರೋಣ. ಸಹೋದರ ಸಹೋದರಿಯೇ, ನಮ್ಮಿಂದಲೇ ಇದಕ್ಕೆ ಅಡ್ಡಿ ಉಂಟಾಗಿದೆ.

ನಮ್ಮ ನಡುವೆ ಸೇವಕರಾಗಲು ಬಯಸುವವರನ್ನು ಮತ್ತು ನೀರು ಹೊಯ್ಯುವವರನ್ನು ದೇವರು ಕಾಣುವಂತಾಗಲಿ.

ಅಧ್ಯಾಯ 4
ಒಬ್ಬ ಅಭಿಷಿಕ್ತನಾದ ಮನುಷ್ಯನು

ಎಲೀಷನು ಎಲೀಯನಿಂದ ಬಿದ್ದ ಹೊದಿಕೆಯನ್ನು ಎತ್ತಿಕೊಂಡು, ಹಿಂದಕ್ಕೆ ಹೋಗಿ ಯೋರ್ದನಿನ ತೀರದಲ್ಲಿ ನಿಂತನು. ಎಲೀಯನಿಂದ ಬಿದ್ದ ಹೋದಿಕೆಯನ್ನು ತೆಗೆದುಕೊಂಡು ನೀರನ್ನು ಹೊಡೆದು, “ಎಲೀಯನ ದೇವರಾದ ಯೆಹೋವನು ಎಲ್ಲಿ?” ಎಂದನು. ಅವನು ಹಾಗೆ ನೀರನ್ನು ಹೊಡೆದ ತರುವಾಯ, ಅದು ಆಚೆ ಈಚೆ ವಿಭಾಗವಾದದ್ದರಿಂದ ಎಲೀಷನು ದಾಟಿಹೋದನು. ಯೆರಿಕೋವಿನ ಬಳಿಯಲ್ಲಿ ಎದುರಾಗಿದ್ದ ಪ್ರವಾದಿಗಳ ಗುಂಪು ಅವನನ್ನು ಕಂಡಾಗ, “ಎಲೀಯನ ಆತ್ಮವು ಎಲೀಷನ ಮೇಲೆ ನಿಂತಿರುವುದು” ಎಂದು ಹೇಳಿದರು (2 ಅರಸು 2:13-15).

ಈ ಪ್ರವಾದಿಗಳ ಮಂಡಲಿಯವರು ಸುಲಭವಾಗಿ ಮೋಸಹೋಗುವಂಥವರು ಆಗಿರಲಿಲ್ಲ. ಅವರೆಲ್ಲರು ಧರ್ಮಶಾಸ್ತ್ರ ಅಧ್ಯಯನ ಮಾಡುವವರಾಗಿದ್ದು, ಸತ್ಯವೇದವನ್ನು ಚೆನ್ನಾಗಿ ಅರಿತಿದ್ದರು, ಹಾಗಾಗಿ ಅವರಿಗೆ ಅಭಿಷಿಕ್ತ ಮನುಷ್ಯನ ಬಗ್ಗೆ ಚೆನ್ನಾಗಿ ತಿಳಿದಿತ್ತು. ಎಲೀಷನು ನಿಜವಾಗಿಯೂ ಇಂತಹ ಒಬ್ಬ ಮನುಷ್ಯನೆಂದು ಅವರು ಗುರುತಿಸಿದರು - ಆತನಲ್ಲಿ ದೇವರಾತ್ಮನು ನೆಲೆಗೊಂಡಿದ್ದುದನ್ನು ಅವರು ಗುರುತಿಸಿದರು.

ಅವರು ಈ ಸತ್ಯಾಂಶವನ್ನು ಎಲೀಷನ ಯಾವುದೇ ಉತ್ತೇಜಕ ಬೊಧನೆಯನ್ನು ಕೇಳಿ ಅಥವಾ ಅವನ ಅದ್ಭುತ ಅನುಭವಗಳ ಸಾಕ್ಷಿಯ ಮೂಲಕವಾಗಿ ಗುರುತಿಸಲಿಲ್ಲ. ಖಂಡಿತವಾಗಿ ಅಲ್ಲ! ಅವರು ಅವನಲ್ಲಿದ್ದ ಶಕ್ತಿಯನ್ನು ನೋಡಿ, ಅವನೂ ಸಹ ಎಲೀಯನಂತೆ ಯೋರ್ದನ್ ನದಿಯನ್ನು ಇಬ್ಭಾಗ ಮಾಡಿದ್ದನ್ನು ಕಂಡು, ನಿಜವಾಗಿಯೂ ಅವನು ಅಭಿಷಿಕ್ತನಾಗಿದ್ದನು ಎಂಬ ತೀರ್ಮಾನಕ್ಕೆ ಬಂದರು.

ನಾವು ಮಾಡುವ ಸೇವೆಯಲ್ಲಿ, ದೇವರ ಚಿತ್ತವನ್ನು ಸಂಪೂರ್ಣವಾಗಿ ನೆರವೇರಿಸಲು ಪವಿತ್ರಾತ್ಮನ ಅಭಿಷೇಕವು ಅತ್ಯಂತ ಅವಶ್ಯವಿರುತ್ತದೆ. ದೇವರಾತ್ಮನು ನಮ್ಮೊಳಗೆ ವಾಸಿಸುವದಷ್ಟೇ ಸಾಲದು. ಆತನು ನಮ್ಮಲ್ಲಿ ಪೂರ್ಣ ಬಲದೊಂದಿಗೆ ನೆಲೆಗೊಂಡಿರುವದು ನಮಗೆ ಭಾಸವಾಗಬೇಕು. ಯೇಸುವು ಸಹ ಇಹಲೋಕದ ಸೇವೆಯನ್ನು ನೆರವೇರಿಸಲು ಹೊರಡುವ ಮೊದಲು ಅಭಿಷಿಕ್ತನಾಗುವದು ಅವಶ್ಯವಾಗಿತ್ತು (ಮತ್ತಾಯ 3:16; ಅಪೋಸ್ತಲರ ಕೃತ್ಯ 10:38).

ಕರ್ತನಿಗಾಗಿ ನಾವು ಮಾಡುವ ಸುವಾರ್ತಾ ಸೇವೆಯ ಸೌವಾರ್ತಿಕರ ವೆಚ್ಚ ಮತ್ತು ಇತರ ಖರ್ಚುಗಳನ್ನು ಯಾವ ಅಡ್ಡಿಯೂ ಇಲ್ಲದೆ ಪೂರೈಸುತ್ತಿರುವದು ಅಮೇರಿಕದ ನಮ್ಮ ಉತ್ತಮ ಸಂಪರ್ಕಗಳಿಂದ ಬರುವ ಧನ ಸಹಾಯ ಮಾತ್ರವಾಗಿದ್ದರೆ, ನಾವು ನಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದೇವೆ. ನಿಜಾಂಶವೆಂದರೆ, ಯಾವುದೋ ಲೌಕಿಕ ಕಾರಣ ನಮ್ಮ ಸೇವೆಗೆ ಪ್ರೇರಣೆಯಾಗಿದ್ದರೆ, ನಾವು ನಮ್ಮ ಎಲ್ಲಾ ಕ್ರಿಸ್ತೀಯ ಕಾರ್ಯಕ್ರಮಗಳನ್ನು ನಿಲ್ಲಿಸಿ, ಯಾವುದಾದರೂ ಪ್ರಾಪಂಚಿಕ ಉದ್ಯೋಗ ಕೈಗೊಳ್ಳುವದೇ ಉತ್ತಮ - ಏಕೆಂದರೆ, ನಮ್ಮ ಪರಿಶ್ರಮವು ದೇವರ ರಾಜ್ಯಕ್ಕಾಗಿ ಏನನ್ನೂ ಸಾಧಿಸಲಾರದು. ನಮ್ಮ ಸೇವೆಯ ಗುಣ ವಿಶೇಷತೆ ಏನಾಗಿರಬೇಕು ಎಂದರೆ, ಅದು ಮುಂದುವರಿಯುವದಕ್ಕೆ ಕಾರಣ ಪವಿತ್ರಾತ್ಮನ ಶಕ್ತಿಯೇ ಹೊರತು ಇನ್ಯಾವದೂ ಆಗಿರಬಾರದು. ಇದೊಂದೇ ದೇವರು ಒಪ್ಪುವ ಸೇವೆಯಾಗಿರುತ್ತದೆ.

ಪವಿತ್ರಾತ್ಮನ ಅಭಿಷೇಕ ಇರುವುದರ ನಿಜವಾದ ರುಜುವಾತಿನ ಬಗ್ಗೆ ಇಂದಿನ ವಿಶ್ವಾಸಿಗಳಲ್ಲಿ ಬಹಳಷ್ಟು ಗೊಂದಲವಿದೆ. ಆದರೆ ಎಲೀಷನ ಜೀವನದ ಈ ಘಟನೆಯ ಮೂಲಕ, ನಿಜವಾದ ಅಭಿಷೇಕದ ಉತ್ತಮ ರುಜುವಾತು ’ಶಕ್ತಿ’ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಇತರ ಎಲ್ಲಾ ಸೂಚನೆಗಳೂ ತಪ್ಪಾಗಿ ಸೂಚಿಸಬಹುದು, ಆದರೆ ಇದು ಹಾಗಲ್ಲ.

ಅಭಿಷೇಕದ ಗುರುತುಗಳು ವಾಕ್ಚಾತುರ್ಯ, ಆವೇಷ, ಉದ್ವೇಗ, ಕೂಗಾಟ ಅಥವಾ ಸಪ್ಪಳ ಮಾಡುವುದು ಇವುಗಳೆಂದು ನಾವು ತಪ್ಪಾಗಿ ತಿಳಿಯಬಾರದು. ಇಲ್ಲ, ಅಭಿಷೇಕದ ರುಜುವಾತು ಇವು ಯಾವವೂ ಅಲ್ಲ, ಆದರೆ ಶಕ್ತಿಯೊಂದೇ ಆಗಿದೆ. ಯೇಸುವು ಅಭಿಷಿಕ್ತನಾದಾಗ ಬಲವನ್ನು ಹೊಂದಿದನು (ಅಪೋಸ್ತಲರ ಕೃತ್ಯ 10:38). ಮತ್ತು ಯೇಸುವು ತನ್ನ ಶಿಷ್ಯರು ಅಭಿಷೇಕವನ್ನು ಪಡೆದಾಗ ಬಲ ಹೊಂದುವದಾಗಿ ಹೇಳಿದನು: “ಪವಿತ್ರಾತ್ಮನು ನಿಮ್ಮ ಮೇಲೆ ಬರಲು, ನೀವು ಬಲವನ್ನು ಹೊಂದುವಿರಿ” (ಅಪೊಸ್ತಲರ ಕೃತ್ಯಗಳು 1:8). ಇಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಲಾಗಿದೆ, ಅಲ್ಲವೇ? ಅನ್ಯಭಾಷೆ ಮಾತನಾಡುವದು ಅಲ್ಲ, ಆವೇಶಗೊಳ್ಳುವದು ಅಲ್ಲ, ಆದರೆ ‘ಬಲ’.

ಕೊರಿಂಥದ ಕ್ರೈಸ್ತರಲ್ಲಿ ಅನ್ಯಭಾಷೆಗಳಲ್ಲಿ ಮಾತನಾಡುವದೇ ಪವಿತ್ರಾತ್ಮನ ಶಕ್ತಿ ಎಂಬ ತಪ್ಪು ತಿಳಿವಳಿಕೆ ಇದ್ದುದರಿಂದ, ಪೌಲನು ತನ್ನ ಪತ್ರದಲ್ಲಿ ಹೀಗೆ ಹೇಳಿದನು (1 ಕೊರಿಂಥ 4:19:20 - ವಿಸ್ತರಿಸಿದ ಭಾಷಾಂತರ): “ನಾನು ನಿಮ್ಮ ಬಳಿಗೆ ಬಂದು, ನಿಮ್ಮ ಸಾಕ್ಷಿ ಅಥವಾ ನಿಮ್ಮ ಮಾತನ್ನಷ್ಟೇ (ಸಾಮಾನ್ಯ ಭಾಷೆಯಲ್ಲಾಗಲೀ ಅಥವಾ ಅಪರಿಚಿತ ಭಾಷೆಯಲ್ಲಾಗಲೀ) ಕೇಳುವದಿಲ್ಲ. ಬದಲಾಗಿ ನಿಮ್ಮ ಬಾಳಿನಲ್ಲಿ ಎಂತಹ ಶಕ್ತಿ ಇದೆಯೆಂದು ನೋಡುತ್ತೇನೆ. ಪವಿತ್ರಾತ್ಮ ದೇವರ ರಾಜ್ಯವು ವ್ಯಕ್ತವಾಗುವದು ಕೇವಲ ಮಾತಿನಲ್ಲಿ ಅಲ್ಲ, ಆದರೆ ವಿಶೇಷವಾದ ಶಕ್ತಿಯ ಮೂಲಕ.”

ಆದ್ದರಿಂದ, ಸಹೋದರ - ಸಹೋದರಿಯರೇ, ಕೇವಲ ನಮ್ಮ ಭಾಷಾ ಪ್ರವೀಣತೆ ಅಥವಾ ನಮ್ಮ ಅದ್ಭುತ ಸಾಕ್ಷಿಯು ನಮ್ಮನ್ನು ತೃಪ್ತಿಗೊಳಿಸುವದು ಬೇಡ. ನಾವು ನಮ್ಮನ್ನು ಹೀಗೆ ಪ್ರಶ್ನಿಸಿಕೊಳ್ಳಬೇಕು: ನಮ್ಮಲ್ಲಿ ಆತ್ಮನ ಶಕ್ತಿ ಇದೆಯೋ ಅಥವಾ ಇಲ್ಲವೋ? ಕೆಲವು ಪದಗಳನ್ನು ಪದೇ ಪದೇ ಬದಲಾಯಿಸಿ ಬಳಸುವದು ಅಭಿಷೇಕಕ್ಕೆ ಸರಿಸಮನಾಗುವದಿಲ್ಲ, ಹಾಗೆಯೇ ಮಿಂಚಿನ ವ್ಯಕ್ತಿತ್ವ ಅಥವಾ ಬಹಳ ವಿಶೇಷವಾದ ಸಾಕ್ಷಿಯು ಆತ್ಮನ ಶಕ್ತಿಯ ಜಾಗದಲ್ಲಿ ಕೆಲಸ ಮಾಡಲಾರವು.

ವೈಜ್ಞಾನಿಕ ಪ್ರಗತಿಯ ಈ ದಿನಗಳಲ್ಲಿ, ನಾವು ಪವಿತ್ರಾತ್ಮನನ್ನು ಅವಲಂಬಿಸುವದರ ಬದಲಾಗಿ, ಇಲೆಕ್ಟ್ರಾನಿಕ್ ಸಲಕರಣೆಗಳು, ಉಪಕರಣಗಳು ಮತ್ತು ವಿವಿಧ ದೃಶ್ಯ-ಶ್ರಾವ್ಯ ಮಾಧ್ಯಮದ ಬಳಕೆಯನ್ನು ಬಹಳ ಸುಲಭವಾಗಿ ಮಾಡುತ್ತೇವೆ. ಈ ವೈಜ್ಞಾನಿಕ ಶೋಧನೆಗಳನ್ನು ಸುವಾರ್ತಾ ಪ್ರಸಾರಕ್ಕಾಗಿ ಬಳಸಲು ಸಾಧ್ಯವಾದರೆ, ಖಂಡಿತವಾಗಿ ಅವುಗಳನ್ನು ಬಳಸಬೇಕು. ಆದರೆ ನಮ್ಮ ಅರಿವಿಲ್ಲದೆಯೇ ನಮ್ಮ ಮೂಲ ಅವಲಂಬನೆ ದೇವರ ಪವಿತ್ರಾತ್ಮನ ಬದಲಿಗೆ ಈ ಭೌತಿಕ ಸಂಗತಿಗಳು ಆಗದಂತೆ ನಾವು ಎಚ್ಚರಿಕೆ ವಹಿಸುವದು ಅವಶ್ಯ.

ನಿಜವಾಗಿ ನಮ್ಮ ಅವಲಂಬನೆ ಯಾರ ಮೇಲಿದೆ ಎಂದು ಕಂಡು ಹಿಡಿಯುವುದು ಬಹಳ ಸುಲಭವೇ. ನಾವು ನಿಜವಾಗಿ ಪವಿತ್ರಾತ್ಮನನ್ನು ಅವಲಂಬಿಸಿದ್ದರೆ, ದೇವರನ್ನು ಮತ್ತೆ ಮತ್ತೆ ಪ್ರಾರ್ಥಿಸುತ್ತೇವೆ ಮತ್ತು ಆತನ ಹೊರತಾಗಿ ನಾವು ಸಂಪೂರ್ಣ ನಿಸ್ಸಹಾಯಕರೆಂದು ಒಪ್ಪಿಕೊಳ್ಳುತ್ತೇವೆ. ನಾವು ಹೀಗಿದ್ದೇವೆಯೇ? ನಮ್ಮ ಮನಸ್ಸಾಕ್ಷಿಯ ಸಮಾಧಾನಕ್ಕಾಗಿ ನಾವು ‘ಪ್ರಾರ್ಥನೆ’ ಎಂಬ ವಾಡಿಕೆಯನ್ನು ಅನುಸರಿಸುತ್ತೇವೋ, ಎಂದು ನಾನು ಕೇಳುತ್ತಿಲ್ಲ. ನನ್ನ ಪ್ರಶ್ನೆಯ ಅರ್ಥ: ನಾವು ನಮ್ಮನ್ನು ದೇವರಿಗೆ ಒಪ್ಪಿಸಿಕೊಟ್ಟು, ಪೂರ್ಣ ಆಸಕ್ತಿಯಿಂದ (ಅವಶ್ಯವಿದ್ದರೆ ಉಪವಾಸದೊಂದಿಗೆ) ಆತನು ನಮ್ಮನ್ನು ಕರೆದಿರುವ ಸೇವೆಗಾಗಿ ಬೇಕಾದ ಬಲ ನಮಗೆ ಒದಗುವಂತೆ, ನಮ್ಮ ಮೇಲೆ ಆತನ ಆತ್ಮನು ನೆಲೆಗೊಂಡಿರುವದು ಖಚಿತವಾಗುವ ವರೆಗೆ, ನಾವು ಆತನನ್ನು ಹುಡುಕುತ್ತೇವೋ? ಅದಲ್ಲದೆ, ಇದು ಒಂದೇ ಒಂದು ಬಾರಿ ಸಂಭವಿಸುವ ಅನುಭವವಲ್ಲ!

ನಮ್ಮ ಅವಲಂಬನೆ ಉಪಕರಣಗಳ ಮೇಲೆ ಇಲ್ಲದಿದ್ದರೂ, ಬಹುಶಃ ಹಣದ ಮೇಲೆ ಇರಬಹುದು. ನಾನು ಕೇಳಿರುವ ಮಾತು, ನಮ್ಮ ದೇಶದ ಒಂದು ಸುವಾರ್ತಾ ಸಂಘಟನೆಯ ಕಾರ್ಯಕರ್ತರ ನಡುವೆ ಯಾರು ಹೆಚ್ಚಿನ ಹಣ ಶೇಖರಿಸುತ್ತಾರೆ ಎಂಬ ಪೈಪೋಟಿ ಇರುತ್ತದೆ, ಎಂಬುದಾಗಿ. ಒಂದು ಕ್ರೈಸ್ತ ಸಂಘಟನೆಯು ಇಂತಹ ಕೆಳಮಟ್ಟಕ್ಕೆ ಇಳಿಯುವದಾದರೆ, ಅವರ ಕೆಲಸದ ಧ್ಯೇಯಗಳು ಏನೆಂದು ಅರ್ಥವಾಗುತ್ತದೆ. ಅವರು ನಿಜವಾಗಿ ಯಾವುದನ್ನು ಅವಲಂಬಿಸುತ್ತಾರೆಂದು ಇದು ಪ್ರಕಟಿಸುತ್ತದೆ. ಹಣವೇ ಮುಖ್ಯ ಅವಶ್ಯಕತೆಯಾಗಿದೆ, ಹಾಗಾಗಿ ಅವರ ಬಹಿರಂಗ ಕೂಟಗಳಲ್ಲಿ ಸುವಾರ್ತೆಯನ್ನು ಸಾರುವುದಕ್ಕೆ ಮೊದಲು ಅವರು ಜನರಿಂದ ಹಣವನ್ನು ಬೇಡಿ ಯಾಚಿಸುತ್ತಾರೆ. ಎಷ್ಟು ನಾಚಿಕೆಗೇಡು! ಯೇಸುವು ಹೀಗೆ ಮಾಡುವದನ್ನು ಯಾರಾದರೂ ಕಲ್ಪಿಸಲೂ ಸಹ ಸಾಧ್ಯವೇ? ಹೀಗಿದ್ದರೂ ತಾವು ಆತನ ಪ್ರತಿನಿಧಿಗಳೆಂದು ಅವರು ಹೇಳಿಕೊಳ್ಳುತ್ತಾರೆ.

ಇಂಥವರು ಹಣವನ್ನು ಯಾಚಿಸಲು ಉಪಯೋಗಿಸುವ ಸಮಯದ ಅರ್ಧದಷ್ಟನ್ನು, ದೇವರ ಮುಂದೆ ಪವಿತ್ರಾತ್ಮನ ಶಕ್ತಿಯನ್ನು ಕೋರಿ ಪ್ರಾರ್ಥಿಸುತ್ತಾ ಕಳೆದರೆ, ಅವರ ಶ್ರಮದ ಫಲವು ಮಿತಿಯಿಲ್ಲದಷ್ಟು ಹೆಚ್ಚನ್ನು ಸಾಧಿಸುತ್ತಿತ್ತು.

ನಾವು ಪವಿತ್ರಾತ್ಮನ ಅಭಿಷೇಕವನ್ನು ಅವಲಂಬಿಸಿ ಜೀವಿಸುತ್ತಿದ್ದೇವೋ ಅಥವಾ ಹಣವನ್ನೋ ಎಂಬುದನ್ನು ಪರೀಕ್ಷಿಸಿಕೊಳ್ಳಲು, ನಾವು ನಮ್ಮನ್ನೇ ಈ ಕೆಳಗಿನಂತೆ ಪ್ರಶ್ನಿಸಿಕೊಳ್ಳಬಹುದು ಎಂದು ನಾನು ಸೂಚಿಸಲು ಬಯಸುತ್ತೇನೆ: ”ದೇವರು ತನ್ನ ಅಭಿಷೇಕವನ್ನು ಒಂದು ವೇಳೆ ತೆಗೆದುಬಿಟ್ಟರೆ ನಮ್ಮಲ್ಲಿ ಉಂಟಾಗುವ ಅಸಮಾಧಾನ, ನಮ್ಮ ಬೆಂಬಲಿಗರು ಆರ್ಥಿಕ ಸಹಾಯವನ್ನು ನಿಲ್ಲಿಸಿದಾಗ ನಮ್ಮಲ್ಲಿ ಆಗುವ ತಳಮಳದಷ್ಟೇ ತೀವ್ರವಾಗಿ ಇರುತ್ತದೆಯೇ?”

ಏನು ಹೇಳೋಣ, ಅನೇಕ ಸಲ ದೇವರ ಪವಿತ್ರಾತ್ಮನ ಅಭಿಷೇಕದ ತೈಲ ನಮ್ಮ ಮೇಲಿದೆಯೇ ಎನ್ನುವ ವಿಚಾರಕ್ಕಿಂತ ಹೆಚ್ಚಾಗಿ ನಮ್ಮ ಆಸಕ್ತಿ, ತಿಂಗಳ ಸಂಬಳ ಸರಿಯಾಗಿ ಕೈ ಸೇರಿದೆಯೋ ಎನ್ನುವದರಲ್ಲಿ ಇರುತ್ತದೆ. ಇದು ಹೀಗೇಕೆ? ಕ್ರಿಸ್ತಿಯ ಸೇವೆಯು ಅಭಿಷೇಕವಿಲ್ಲದೆಯೂ ನಡೆಯುತ್ತದೆ, ಆದರೆ ಹಣವಿಲ್ಲದೆ ನಡೆಯುವದಿಲ್ಲ, ಎಂಬ ಭಾವನೆ ನಮ್ಮಲ್ಲಿದೆ. ನಾವು ಇದನ್ನು ಹೇಳಿದರೂ ಅಥವಾ ಹೇಳದೇ ಹೋದರೂ, ನಮ್ಮ ಕಾರ್ಯಗಳು ನಮ್ಮ ಅಂತರಂಗದ ಯೋಚನೆಗಳನ್ನು ಬಯಲುಗೊಳಿಸುತ್ತವೆ.

ನಾವು ಆದಿಸಭೆಗೆ ನಮ್ಮನ್ನು ಹೋಲಿಸಿಕೊಂಡರೆ ಏನನ್ನು ಕಾಣುತ್ತೇವೇ? ಸುವಾರ್ತೆಯನ್ನು ಸಾರಲು ಅವರಲ್ಲಿ ಯಾವುದೇ ಇಲೆಕ್ಟ್ರಾನಿಕ್ ಉಪಕರಣಗಳು ಇರಲಿಲ್ಲ, ಅವರಿಗೆ ಆರ್ಥಿಕ ಬೆಂಬಲ ನೀಡುವ ಯಾವ ಶ್ರೀಮಂತ ವ್ಯಾಪಾರಿಗಳೂ ಇರಲಿಲ್ಲ ಮತ್ತು ಸುತ್ತಲಿನ ಸಮಾಜದಲ್ಲಿ ಅವರು ಯಾರಿಗೂ ಬೇಡವಾದವರು ಆಗಿದ್ದರು. ಪರಿಸ್ಥಿತಿ ಹೀಗಿದ್ದರೂ ಅವರು ದೇವರಿಗೋಸ್ಕರ ಮಹತ್ಕಾರ್ಯಗಳನ್ನು ಮಾಡಿ ಪೂರೈಸಿದರು, ಏಕಂದರೆ ಅವರಲ್ಲಿ ಅತೀ ಅವಶ್ಯವಾದ ಆ ಒಂದು ಸಂಗತಿ ಇತ್ತು - ಅದು ಇಲ್ಲದಿದ್ದಾಗ ಬೇರೆಲ್ಲವೂ ಕೆಲಸಕ್ಕೆ ಬಾರವು. ಅವರು ಪವಿತ್ರಾತ್ಮನ ಅಭಿಷೇಕವನ್ನು ಹೊಂದಿದ್ದರು. ಹಾಗಾಗಿ ಅನೇಕ ವೇಳೆ ನಾವು ಸೋಲುವಂತಹ ಸಂದರ್ಭಗಳಲ್ಲಿ ಅವರು ಜಯಶಾಲಿಗಳಾದರು.

ಇಂದು ಪವಿತ್ರಾತ್ಮನ ಅಭಿಷೇಕವೇ ಕ್ರೈಸ್ತ ಸಭೆ ಮತ್ತು ಕ್ರೈಸ್ತ ನಾಯಕರ ಅತಿ ದೊಡ್ಡ ಅವಶ್ಯಕತೆಯಾಗಿದೆ. ನಾನು ಇಲ್ಲಿ ಪ್ರಸ್ತಾವಿಸುತ್ತಿರುವದು, ಶಕ್ತಿಯನ್ನು ನೀಡುವ ಯಥಾರ್ಥವಾದ ಅಭಿಷೇಕವನ್ನು - ಅನೇಕರು ಹಿಗ್ಗಿ ಹೇಳಿಕೊಳ್ಳುವ ಮತ್ತು ತೃಪ್ತಿಹೊಂದಿರುವಂತಹ ಕಳಪೆ ಅಭಿಷೇಕವನ್ನು ಅಲ್ಲ.

ದೇವರ ಕಾರ್ಯವು - ಆತನ ನಿಜವಾದ ಕಾರ್ಯ - ಹಳೆಯ ಕಾಲದಲ್ಲಿ ನಡೆದಂತೆ ಈಗಲೂ ಸಹ ನಡೆಯುತ್ತಿರುವದು, ಇಲೆಕ್ಟ್ರಾನಿಕ್ ಬಲದಿಂದ ಅಥವಾ ಆರ್ಥಿಕ ಪರಾಕ್ರಮದಿಂದ ಅಲ್ಲ, ಆದರೆ ದೇವರಾದ ಪವಿತ್ರಾತ್ಮನ ಬಲದಿಂದಲೇ (ಜೆಕರ್ಯ 4:6).

ವಿವೇಚನೆ

ಇಂದಿನ ದಿನಗಳಲ್ಲಿ ಕ್ರೈಸ್ತ ಕಾರ್ಯಕರ್ತರನ್ನು ಮರುಳುಗೊಳಿಸುವ ಸೈತಾನನ ಕೆಲವು ಚತುರ ವಿಧಾನಗಳನ್ನು ನಾನು ಈಗಾಗಲೇ ತೋರಿಸಿದ್ದೇನೆ. ಕರ್ತನ ಪುನರಾಗಮನ ಸಮೀಪಿಸುತ್ತಿದ್ದಂತೆ, ಆತನ ಇಂತಹ ಕುತಂತ್ರಗಳು ಹೆಚ್ಚುತ್ತಿರುವಂತೆ ತೋರುತ್ತಿವೆ. ನಾವು - ಅದರಲ್ಲೂ ವಿಶೇಷವಾಗಿ ಕ್ರೈಸ್ತ ಸಭೆಯ ನಾಯಕತ್ವದಲ್ಲಿ ಇರುವವರು - ಇಂತಹ ಸಮಯದಲ್ಲಿ ವಿವೇಚನೆಯ ವರವನ್ನು ಹೊಂದಿ, ಯಾವ ಅಲೋಚನೆ ನಿಜವಾಗಿ ದೇವರಿಂದ ಬಂದದ್ದು, ಯಾವದು ಅಲ್ಲ, ಯಾವದು ಅಸಲಿ ಮತ್ತು ಯಾವದು ನಕಲಿ, ಅಷ್ಟೇ ಅಲ್ಲದೆ, ಪ್ರಸ್ತುತ ದಿನದಲ್ಲಿ ದೇವರ ಸಭೆಗಾಗಿ ಆತನ ಅತ್ಯುನ್ನತ ಉದ್ದೇಶವೇನು ಎಂದು ಅರಿಯುವದು ಬಹಳ ಅವಶ್ಯವಾಗಿದೆ.

ಆದರೆ ವಿವೇಚನೆ ಹಾಗೂ ಆತ್ಮಿಕ ದೃಷ್ಟಿ ಕೇವಲ ಪವಿತ್ರಾತ್ಮನ ಅಭಿಷೇಕದ ಮೂಲಕ ಬರುತ್ತವೆ. ಅವು ಮಾನವ ಪ್ರವೀಣತೆ, ಬುದ್ಧಿಶಕ್ತಿ ಅಥವಾ ಸತ್ಯವೇದ ಪಾಥಶಾಲೆಯ ತರಬೇತಿಯ ಮೂಲಕ ಸಿಗುವದಿಲ್ಲ. ಈ ಮಾತುಗಳನ್ನು ಜ್ಞಾನಿಗಳು ಮತ್ತು ಬುದ್ಧಿವಂತರಿಂದ ಮರೆಮಾಡಿ, ಅವುಗಳನ್ನು ಬಾಲಕರಿಗೆ ಪ್ರಕಟಗೊಳಿಸುವದು - ತಮ್ಮ ನಿಸ್ಸಹಾಯಕತೆಯನ್ನು ಒಪ್ಪಿಕೊಂಡು, ಆತನನ್ನೇ ಅವಲಂಬಿಸಿ, “ಕರ್ತನೇ, ನಾವು ಅನೇಕ ಸಂಗತಿಗಳಲ್ಲಿ ಜಾಣರಾಗಿದ್ದರೂ, ಆತ್ಮಿಕ ಸಂಗತಿಗಳಲ್ಲಿ ಮೂರ್ಖರಾಗಿದ್ದೇವೆ,” ಎಂದು ಒಪ್ಪಿಕೊಳ್ಳುವಂಥವರಿಗೆ - ತಂದೆಯ ಇಷ್ಟಾರ್ಥವಾಗಿದೆ.

ಯೆರೆಮೀಯನು ವಿವೇಚನೆಯನ್ನು ಹೊಂದಿದ್ದರಿಂದ, ತನ್ನ ದಿನದಲ್ಲಿ, ಯೆಹೂದದ ಅರಸನಾದ ಯೋಷೀಯನ ಆಳ್ವಿಕೆಯ ಕಾಲದಲ್ಲಿ ಉಂಟಾದ ಉಜ್ಜೀವನವು ಪೊಳ್ಳಾದದ್ದೆಂದು ಅರಿತು, ದೇವರು ತನ್ನ ಜನರನ್ನು ಬಾಬೇಲಿಗೆ ಕಳುಹಿಸುವನೆಂದು ಪ್ರವಾದಿಸಿದನು. ಇದೇ ರೀತಿಯಾಗಿ ಯೆಹೆಜ್ಕೇಲನು, ದೇವರು ತನ್ನ ಜನರನ್ನು ಬಾಬೆಲಿನ ಸೆರೆಗೆ ಒಪ್ಪಿಸಿಕೊಡುವದಕ್ಕೆ ನಿಜವಾದ ಕಾರಣ ಏನೆಂದು ತಿಳಕೊಂಡನು. ಯೆರೆಮೀಯ ಮತ್ತು ಯೆಹೆಜ್ಕೇಲರ ಮೇಲೆ ದೇವರ ಅಭಿಷೇಕವಿದ್ದ ಕಾರಣ, ಅವರು ತಮ್ಮ ದಿನದ ಇತರ ಧಾರ್ಮಿಕ ಧುರೀಣರು ಕಾಣದಿದ್ದುದನ್ನು ಕಾಣಲು ಸಮರ್ಥರಾಗಿದ್ದರು.

ಇಂದಿನ ಹೆಚ್ಚಿನ ಕ್ರೈಸ್ತಸಭೆಗಳ ಪರಿಸ್ಥಿತಿಯು, ಕೆಲವೇ ಕೆಲವು ಅಪವಾದಗಳ ಹೊರತಾಗಿ, ದೇವಜನರು ಬಾಬೆಲಿಗೆ ಸೆರೆಯಾಗಿ ಹೋದ ದಿನಗಳ ಪರಿಸ್ಥಿತಿಯಂತೆಯೇ ಇದೆ. ಇಂತಹ ಸಮಯದಲ್ಲಿ ನಮಗೆ ಆತ್ಮಿಕ ದೃಷ್ಟಿಯುಳ್ಳ ಮನುಷ್ಯರು ಅವಶ್ಯವಾಗಿದ್ದಾರೆ; ಮತ್ತು ಇಂತಹ ಮಹತ್ವಪೂರ್ಣ ಘಳಿಗೆಯಲ್ಲಿ, ದೇವಜನರ ನಾಯಕರಲ್ಲಿ ಆತ್ಮಿಕ ದೃಷ್ಟಿಯ ಕೊರತೆ ಇದ್ದರೆ, ಜನರು ಖಂಡಿತವಾಗಿ ನಾಶವಾಗುತ್ತಾರೆ (ಜ್ಞಾನೋಕ್ತಿ 29:18).

ಓ! ಎಲ್ಲಕ್ಕಿಂತಲೂ ಹೆಚ್ಚಾಗಿ ನಮಗೆ ಪವಿತ್ರಾತ್ಮನ ಅಭಿಷೇಕವು ಅವಶ್ಯಕವಾಗಿದೆ! ಅದು ಕರ್ತನ ದ್ರಾಕ್ಷಾತೋಟದಲ್ಲಿ ನಮ್ಮ ಕೆಲಸಕ್ಕೆ ನಿಜವಾಗಿಯೂ ಅತ್ಯಂತ ಅವಶ್ಯಕವು.

ಯೇಸುವಿನ ಹೆಸರು

ಎಲೀಷನು, ಎಲೀಯನ ಹೊದಿಕೆಯಿಂದ ಯೊರ್ದನ್ ಹೊಳೆಯ ನೀರನ್ನು ಹೊಡೆದನೆಂದು ನಾವು ಓದುತ್ತೇವೆ. ಎಲೀಯನು ಪರಲೋಕಕ್ಕೆ ಏರಿ ಹೋದ ಕ್ರಿಸ್ತನೆಂದೂ, ಎಲೀಷನು ಈ ಲೋಕದಲ್ಲಿ ಯೇಸುವಿನ ಸೇವೆಯನ್ನು ಮುಂದುವರೆಸಲು ಇರಿಸಲ್ಪಟ್ಟಿರುವ ಸಭೆಯೆಂದೂ ನಾವು ಆಲೋಚಿಸಿದರೆ, ಆಗ ಎಲೀಯನ ಹೊದಿಕೆಯು, ಯೇಸುವು ತನ್ನ ಸಭೆಗೆ ಸಮರ್ಪಿಸಿರುವ ಕರ್ತ ಯೇಸು ಕ್ರಿಸ್ತನೆಂಬ ತನ್ನ ಹೆಸರೆಂದು ಚಿತ್ರಿಸಿಕೊಳ್ಳಬಹುದಾಗಿದೆ. ಎಲೀಷನು ಹೊದಿಕೆಯ ಮೂಲಕ ಯೊರ್ದನ್ ಹೊಳೆಯಲ್ಲಿ ಒಂದು ಮಾರ್ಗವನ್ನು ರಚಿಸಿದ ಹಾಗೆ, ಯೇಸುವು ನಮಗೆ ಉತ್ತಮವಾದ ಮಾರ್ಗವನ್ನು ಒಪ್ಪಿಸಿರುತ್ತಾನೆ.

ಆದರೆ, ಯೇಸುವಿನ ಹೆಸರನ್ನು ಒಂದು ರಹಸ್ಯ ಮಂತ್ರದಂತೆ ಪುನರುಚ್ಚರಿಸಿದ ಮಾತ್ರಕ್ಕೆ ಏನೂ ನಡೆಯುವದಿಲ್ಲ. ಅನೇಕರು ಆತನ ಹೆಸರನ್ನು ಈ ರೀತಿಯಾಗಿ ಉಪಯೋಗಿಸುತ್ತಾರೆ, ಆದರೆ ಯಾವ ಉತ್ತರವೂ ಸಿಗುವದಿಲ್ಲ. ಅಲ್ಲಿ ಶಕ್ತಿಯ ಪ್ರದರ್ಶನವಾಗಲೀ, ಅಥವಾ ಹಾದಿಗೆ ಅಡ್ಡಿಯಾಗಿರುವ ಬೆಟ್ಟಗಳ ಸ್ಥಳಾಂತರವಾಗಲೀ ಆಗುವದಿಲ್ಲ.

ಒಮ್ಮೆ ಎಲೀಷನ ಅಪ್ಪಣೆಯ ಮೇರೆಗೆ ಸೇವಕನಾಗಿದ್ದ ಗೇಹೆಜಿಯು, ಎಲೀಷನ ಕೋಲನ್ನು ತೆಗೆದುಕೊಂಡು ಸತ್ತಿದ್ದ ಒಂದು ಮಗುವಿನ ಮೇಲಿಟ್ಟನು. ಆತನು ಹೀಗೆ ಮಾಡುವಾಗ, ಬಹುಶಃ ಅಧಿಕಾರಯುಕ್ತ ಧ್ವನಿಯೆತ್ತಿ, “ಅಬ್ರಹಾಮ, ಇಸಾಕ ಮತ್ತು ಯಾಕೋಬರ ದೇವರ ಹೆಸರಿನಲ್ಲಿ ಸತ್ತವರನ್ನು ಬಿಟ್ಟು ಏಳು,” ಎಂದು ಕೂಗಿರಲೂ ಬಹುದು. ಆದರೆ ಏನೂ ಸಂಭವಿಸಲಿಲ್ಲ.

ದೇವರು ಗಮನಿಸುವದು ಒಬ್ಬ ಮನುಷ್ಯನ ಬರೀ ಮಾತನ್ನು ಅಲ್ಲ. ಅವನು ಆತನ ಹೃದಯವನ್ನು ದೃಷ್ಟಿಸುತ್ತಾನೆ. ಮಾತಿನ ಬಲವು ಅದನ್ನು ಉಪಯೋಗಿಸುವ ಮನುಷ್ಯನನ್ನು ಅವಲಂಬಿಸಿರುತ್ತದೆ. ಇಲ್ಲಿ ಗೇಹಜಿಯ ಹೃದಯವು ದೇವರ ಮಹಿಮೆಯನ್ನು ಬಯಸದೆ, ಲೋಕದ ಮೇಲೂ, ಸ್ವಂತ ಲಾಭದ ಮೇಲೂ ಇತ್ತೆಂದು ದೇವರಿಗೆ ತಿಳಿದಿತ್ತು.

ಎಲೀಷನ ಹೃದಯವು ಹಾಗಿರಲಿಲ್ಲ. ಅವನು ದೇವರ ಮಹಿಮೆಯನ್ನು ಮಾತ್ರ ಬಯಸುತ್ತಿದ್ದುದರಿಂದ, ದೇವರು ಆತನಿಗೆ ತನ್ನ ಅಧಿಕಾರವನ್ನು ಒಪ್ಪಿಸಲು ಸಾಧ್ಯವಾಯಿತು. ಆದ್ದರಿಂದ ಎಲೀಷನು ಪ್ರಾರ್ಥಿಸಿದಾಗ, ಆ ಸತ್ತಿದ್ದ ಮಗುವು ಒಡನೆಯೇ ಎದ್ದಿತು. ಆತನು ಯೊರ್ದನ್ ನದಿಯ ನೀರನ್ನು ಹೊದಿಕೆಯಿಂದ ಹೊಡೆದಾಗ, ಅದು ಎರಡು ಭಾಗವಾಯಿತು.

ನಾನು ಸಂಧಿಸಿರುವ ಕೆಲವು ಜನರು ಯೇಸುವಿನ ಹೆಸರನ್ನು ಉಪಯೋಗಿಸುವಾಗ, ಅದನ್ನು ಪದೇ ಪದೇ ಉಚ್ಛರಿಸುತ್ತಾರೆ (ಕೆಲವೊಮ್ಮೆ ಏರಿಸಿದ ಧ್ವನಿಯಲ್ಲಿ), ಆದರೆ ಇದರಿಂದ ಯಾವ ಬದಲಾವಣೆಯೂ ಆಗುವದಿಲ್ಲ. ಅವರನ್ನು ನೋಡಿದಾಗ ನನಗೆ ಕರ್ಮೆಲ್ ಬೆಟ್ಟದ ಮೇಲೆ ಗಟ್ಟಿಯಾಗಿ ಕೂಗಿ ಕಿರಿಚುತ್ತಿದ್ದ ಬಾಳನ ಪ್ರವಾದಿಗಳ ನೆನಪಾಯಿತು. ದೇವರ ರಾಜ್ಯವು ಕೇವಲ ಮಾತಿನಲ್ಲಿ ಇಲ್ಲ (ಎಷ್ಟು ಗಟ್ಟಿಯಾದ ಸ್ವರದಿಂದ ಅಥವಾ ಅಧಿಕಾರಯುಕ್ತವಾಗಿ ಕೂಗಿದರೂ ಸಹ), ಆದರೆ ಅದು ಶಕ್ತಿಯಲ್ಲೇ ಆಧಾರಗೊಂಡಿದೆ. ಎಲೀಷನು ಅಭಿಷೇಕ ಹೊಂದಿರದಿದ್ದರೆ, ಆತನು ಆ ಹೊದಿಕೆಯಿಂದ ನೀರನ್ನು ಎಷ್ಟು ಜೋರಾಗಿ ಹೊಡೆದಿದ್ದರೂ ಏನೂ ಸಂಭವಿಸುತ್ತಿರಲಿಲ್ಲ. ಅದು ಕೇವಲ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಿದಂತೆ ಆಗುತ್ತಿತ್ತು! ನಾವು ಯೇಸುವಿನ ಹೆಸರನ್ನು ನಿಜವಾದ ಶಕ್ತಿಯೊಂದಿಗೆ ಉಪಯೋಗಿಸಲು ಆತ್ಮನ ಅಭಿಷೇಕ ನಿಜವಾಗಿ ಬಹಳ ಅವಶ್ಯವಾಗಿದೆ.

ಅಪೋಸ್ತಲರ ಕೃತ್ಯದ 3ನೇ ಅಧ್ಯಾಯದಲ್ಲಿ ಪೇತ್ರನು ಯೇಸುವಿನ ಹೆಸರನ್ನು ಉಪಯೋಗಿಸುವದನ್ನು ನಾವು ನೋಡುತ್ತೇವೆ; ಅಲ್ಲಿ ದೇವರ ಶಕ್ತಿಯು ಪ್ರಕಟಗೊಂಡಿತು. ಒಬ್ಬ ಕುಂಟನು ನಡೆಯಲು ಆರಂಭಿಸಿದನು. ಇದು ಎಷ್ಟು ಸ್ಪಷ್ಟವಾಗಿ ಕಾಣಿಸಿದ ಅದ್ಭುತವಾಗಿತ್ತೆಂದರೆ, ಆ ಕುಂಟನು ನಿಜವಾಗಿ ಸ್ವಸ್ಥವಾದದ್ದನ್ನು ಜನರಿಗೆ ಮನದಟ್ಟು ಮಾಡಲು ಯಾವ ವೈದ್ಯಕೀಯ ಪರೀಕ್ಷೆಯೂ ಬೇಕಾಗಿರಲಿಲ್ಲ. ಆ ಅದ್ಭುತದಲ್ಲಿ ನಂಬಲಾಗದ್ದು ಅಥವಾ ಸಂದೇಹಾಸ್ಪದವಾದದ್ದು ಯಾವದೂ ಇರಲಿಲ್ಲ. ಇಲ್ಲಿ ನಡೆದ ವಿಷಯ ಎಲ್ಲರಿಗೂ ಸ್ಪಷ್ಟವಾಗಿ ಕಾಣಿಸುತ್ತಿತ್ತು - 20ನೇ ಶತಮಾನದ ರೋಗ ಗುಣಪಡಿಸುವ ಕೆಲವರ "ಅದ್ಭುತ"ಗಳು ನಡೆದಾಗ, ಅನೇಕ ವೇಳೆ ಅಲ್ಲಿ ನಿಜವಾದ ಅದ್ಭುತ ನಡೆಯಿತೋ ಎಂಬ ಸಂಶಯ ಕೆಲವರ ಮನಸ್ಸಿನಲ್ಲಿ ಉಂಟಾಗುವ ಹಾಗೆ ಇಲ್ಲಿ ಆಗಲಿಲ್ಲ!

ಅಪೋಸ್ತಲರ ಕೃತ್ಯಗಳ ಗ್ರಂಥದ ಉದ್ದಕ್ಕೂ, ಶಿಷ್ಯರು ದೇವರ ಚಿತ್ತವನ್ನು ಪೂರೈಸಲು ತಡೆಯಾಗಿದ್ದ ಪ್ರತಿಯೊಂದು ಅಡಚಣೆಯನ್ನು ದೂರ ಮಾಡಲು ಯೇಸುವಿನ ಹೆಸರನ್ನು ಪದೇ ಪದೇ ಉಪಯೋಗಿಸುವದನ್ನು ನಾವು ನೋಡುತ್ತೇವೆ. ಅವರಿಗೆ ಅಭಿಷೇಕವೆಂದರೆ ಏನೆಂದು ನಿಜವಾಗಿ ತಿಳಿದಿತ್ತು. ಆದ್ದರಿಂದಲೇ ಅಪೋಸ್ತಲರ ಕೃತ್ಯಗಳ ಗ್ರಂಥವು “ಅಡ್ಡಿಯಿಲ್ಲದೆ” ಎಂಬ ಪದದಿಂದ ಮುಕ್ತಾಯವಾಗುತ್ತದೆ. ಇಂಥಹ ಶಕ್ತಿಯುತ ಸಭೆಯನ್ನು ಪಾತಾಳದ ದ್ವಾರಗಳು ಜಯಿಸಲು ಆಗಲಿಲ್ಲ.

ಪುನರುತ್ಥಾನದ ಶಕ್ತಿ

ಎಲೀಷನು ಯೊರ್ದನನ್ನು ಇಬ್ಭಾಗ ಮಾಡಿದ ಕಾರ್ಯವು, ಆತ್ಮಿಕ ಮರಣವನ್ನು ಸೋಲಿಸಿ ಗೆಲ್ಲುವ ಜೀವನ ಹಾಗೂ ಸೇವೆಯ ಚಿತ್ರಣವಾಗಿದೆ. ಸತ್ಯವೇದದಲ್ಲಿ ಯೊರ್ದನಿನ ನೀರು ಮರಣದ ಸೂಚನೆಯಾಗಿದೆ. ಹಾಗಾಗಿ ಆ ನೀರನ್ನು ಇಬ್ಭಾಗ ಮಾಡಿದ್ದು ಮರಣದ ಮೇಲಿನ ವಿಜಯದ ಸಂಕೇತವಾಗಿದೆ.

ಈ ಘಟನೆಯ ನಂತರ, ಎಲೀಷನ ತನ್ನ ಸೇವೆಯಲ್ಲಿ, ಪದೇ ಪದೇ ಮರಣದಿಂದ ಜೀವವನ್ನು ತರುವದರಲ್ಲಿ ತೊಡಗಿದ್ದನ್ನು ನಾವು ಕಾಣುತ್ತೇವೆ. ಯೆರಿಕೋವಿನಲ್ಲಿ, ಅವನು ಬಂಜರು ಭೂಮಿಗೆ ಜೀವ ನೀಡಿದನು. ಶೂನೇಮಿನಲ್ಲಿ, ಬಂಜೆಯಾಗಿದ್ದ ಸ್ತ್ರೀಯ ಗರ್ಭದಲ್ಲಿ ಜೀವವುಂಟಾಗುವಂತೆ ಮಾಡಿದನು. ಇದಾದ ನಂತರ, ಸತ್ತಿದ್ದ ಮಗುವಿನಲ್ಲಿ ಜೀವವನ್ನು ತಂದನು. ಒಂದು ಬಾರಿ ಪ್ರಾತ್ರೆಯಲ್ಲಿದ್ದ ಮರಣಕರವಾದ ಆಹಾರದ ವಿಷವನ್ನು ತೆಗೆದನು. ಕುಷ್ಠರೋಗಿಯಾಗಿದ್ದ ಒಬ್ಬ ಸೇನಾಪತಿಯ ಸಾಯುತ್ತಿದ್ದ ಶರೀರವನ್ನು ಸಹ ಶುದ್ಧಗೊಳಿಸಿ ಒಂದು ಕೂಸಿನ ದೇಹದಂತೆ ಮಾಡಿದನು.

ಎಲೀಷನ ಶಕ್ತಿಯು ಎಂದೆಂದಿಗೂ ಕುಂದಿ ಹೋಗಲಿಲ್ಲ. ಅವನು ಮರಣಹೊಂದಿ ದೇಹವು ಸಮಾಧಿಯಲ್ಲಿ ಹುಗಿಯಲ್ಪಟ್ಟರೂ, ಅವನ ಸಮಾಧಿಯ ಮೇಲೆ ಯಾರೋ ಒಬ್ಬನ ಮೃತ ದೇಹವು ಎಸೆಯಲ್ಪಟ್ಟಾಗ, ಆ ಸತ್ತ ಮನುಷ್ಯನು ಜೀವಪಡೆದು ಎದ್ದು ನಿಂತನು! ಇದೇ ಎಲೀಷನ ಸೇವೆಯಾಗಿತ್ತು - ಅವನು ಹೋದಲ್ಲೆಲ್ಲಾ ಮರಣದಿಂದ ಜೀವ ಬರುತ್ತಿತ್ತು; ಇದು ಅವನು ಹೊಂದಿದ್ದ ಅಭಿಷೇಕದ ನೇರ ಪರಿಣಾಮವಾಗಿತ್ತು.

ಪವಿತ್ರಾತ್ಮನ ಅಭಿಷೇಕವು ಇಂತಹ ಶಕ್ತಿಯನ್ನು ತರುತ್ತದೆ - ಮರಣದಿಂದ ಜೀವವನ್ನು ತರುವ ಶಕ್ತಿ, ಪುನರುತ್ಥಾನದ ಶಕ್ತಿ; ಎಲ್ಲರಿಗೂ ಸ್ಪಷ್ಟವಾಗಿ ಕಾಣಿಸುವ ಅಭಿಷೇಕದ ಪ್ರಮಾಣ ಇದೊಂದೇ ಆಗಿದೆ. ನಾವು ಹೊಸ ಒಡಂಬಡಿಕೆಯಲ್ಲಿ ಇದೇ ಶಕ್ತಿಯನ್ನು ಕುರಿತು ಪದೇ ಪದೇ ಓದುತ್ತೇವೆ. ಪೌಲನು ಎಫೆಸದ ಕ್ರೈಸ್ತರಿಗೆ ಬರೆಯುತ್ತಾ, ಅವರು ಈ ಶಕ್ತಿಯನ್ನು ತಿಳಕೊಳ್ಳುವಂತೆ ಅವರಿಗೋಸ್ಕರ ಪ್ರಾರ್ಥಿಸುವದಾಗಿ ಹೇಳುತ್ತಾನೆ. ಅವನು ಮುಂದುವರಿದು, ದೇವರ ಅತಿಶಯವಾದ ಬಲವು ಕಂಡುಬರುವದು, ಆತನ ಸೃಷ್ಟಿಯಲ್ಲಿ ಅಥವಾ ಸತ್ಯವೇದದ ಅದ್ಭುತಗಳಲ್ಲಿ ಅಲ್ಲ; ಆದರೆ ಅದು ಸತ್ತ ಕ್ರಿಸ್ತನು ಎಬ್ಬಿಸಲ್ಪಟ್ಟದ್ದರಲ್ಲಿ ರುಜುವಾತಾಗಿದೆ, ಎಂದು ಹೇಳುತ್ತಾನೆ (ಎಫೆಸ್ಸ 1:19-23). ಪೌಲನು ಫಿಲಿಪ್ಪಿಯ ಕ್ರೈಸ್ತರಿಗೆ ಬರೆಯುತ್ತಾ, ಪುನರುತ್ಥಾನದ ಈ ಶಕ್ತಿಯನ್ನು ಹೆಚ್ಚು ಹೆಚ್ಚಾಗಿ ತಿಳಕೊಳ್ಳುವದೇ ತನ್ನ ಅಭಿಲಾಷೆಯೆಂದು ಹೇಳುತ್ತಾನೆ (ಫಿಲಿಪ್ಪಿ 3:10).

ಯೇಸುವು ಇದೇ ಬಲದ ಕುರಿತಾಗಿ, ಪವಿತ್ರಾತ್ಮನು ಶಿಷ್ಯರ ಮೇಲೆ ಬಂದಾಗ ಅವರು ಬಲವನ್ನು ಹೊಂದುವದಾಗಿ ಹೇಳಿದನು (ಅಪೋಸ್ತಲರ ಕೃತ್ಯ 1:8), ಎಂದು ನನಗೆ ಮನದಟ್ಟಾಗಿದೆ - ಇದು ಪುನರುತ್ಥಾನದ ಬಲ, ಆತ್ಮಿಕ ಮರಣವನ್ನು ತಪ್ಪಿಸಿ ಜೀವವನ್ನು ಉಂಟುಮಾಡುವಂಥದ್ದು. ದೇವರು ನಮಗೂ ಇದನ್ನು ಕಳುಹಿಸಲು ಇಚ್ಛಿಸ್ತುತ್ತಾನೆ.

ಸಹೋದರ ಸಹೋದರಿಯೇ, ಅಭಿಷೇಕದ ಗುರುತು ಇದೇ ಆಗಿದೆ. ಯಾವುದೋ ಅನುಭವವಲ್ಲ, ಯಾವುದೋ ರೀತಿಯಲ್ಲಿ ಮಾತಾಡುವದು ಅಲ್ಲ, ಆದರೆ ನಾವು ಹೋದಲ್ಲೆಲ್ಲಾ ಆತ್ಮಿಕ ಜೀವನವನ್ನು ಮರಣದಿಂದ ಬಿಡುಗಡೆ ಮಾಡುವ ಶಕ್ತಿ. ನಮ್ಮಲ್ಲಿ ಅಭಿಷೇಕ ಇದೆಯೋ ಇಲ್ಲವೋ ಎಂಬುದಕ್ಕೆ ಉಗ್ರ ಪರೀಕ್ಷೆ ಇದೇ ಆಗಿದೆ.

ಎಂತಹ ದುರದೃಷ್ಟ, ಕ್ರೈಸ್ತರ ಸೇವೆಯು ಹಲವು ಬಾರಿ ಜೀವವನ್ನು ತರುವ ಬದಲಾಗಿ ಮರಣವನ್ನು ತರುತ್ತದೆ. ನಮ್ಮ ನಾಡಿನ ಅನ್ಯಜನರು, ಮರುಜನ್ಮ ಪಡೆದವರೆಂದು ಹೇಳಿಕೊಳ್ಳುವ ಕ್ರೈಸ್ತರ ನಡುವಿನ ಜಗಳ ಮತ್ತು ಕಚ್ಚಾಟಗಳು, ಪ್ರಾಮಾಣಿಕತೆಯ ಕೊರತೆ, ಹಾಗೂ ಕ್ರಿಸ್ತನ ಸ್ವರೂಪಕ್ಕೆ ಸರಿಹೊಂದದ ನಡವಳಿಕೆಯನ್ನು ನೋಡಿ, ಹಲವು ಬಾರಿ ಕರ್ತನ ಬಳಿಗೆ ಸೆಳೆಯಲ್ಪಡುವ ಬದಲು ಆತನಿಂದ ದೂರ ತಳ್ಳಲ್ಪಡುತ್ತಾರೆ. ನಾವು ನಮ್ಮ ನಡತೆಯ ಮೂಲಕ ದೇವರ ನಾಮಕ್ಕೆ ನಿಂದನೆಯನ್ನು ತಂದಿರುವದಕ್ಕಾಗಿ, ನಮ್ಮನ್ನು ದೇವರ ಮುಂದೆ ತಗ್ಗಿಸಿಕೊಂಡು, ಆತನ ಕ್ಷಮೆಯನ್ನು ಯಾಚಿಸುವದು ಬಹಳ ಅವಶ್ಯಕವಾಗಿದೆ.

ನಾವು “ಸುವಾರ್ತಾ ಪ್ರಸಾರಕರು” ಆಗಿದ್ದೇವೆಂದು ಹೆಚ್ಚಳ ಪಡುವದು ಬೇಡ. ನಾವು ಎಚ್ಚರ ವಹಿಸದೇ ಹೋದರೆ, ಸಾರ್ದಿಸಿನ ಸಭೆಯಂತೆ ಜೀವಿಸುವವನೆಂಬ ಹೆಸರಿದ್ದರೂ, ಕೊನೆಗೆ ಸಾಯುವ ನಿಜಸ್ಥಿತಿಗೆ ತಲುಪಬಹುದು (ಪ್ರಕಟನೆ 3:1).

ನಾವು ಪ್ರಮಾಣ ಮಾಡುವ ಸಿದ್ಧಾಂತಗಳು ಮತ್ತು ನಾವು ಒಪ್ಪಿಕೊಂಡು ಸಹಿ ಹಾಕುವ ನಂಬಿಕೆಗಳ ಪಟ್ಟಿಯು ಸತ್ಯವೇದಕ್ಕೆ ಅನುಸಾರವಾಗಿದ್ದರೆ ಸಾಲದು. ನಾವು ಅತೀ ಮೂಲಭೂತವಾದ ನಂಬಿಕೆಗಳ ಪಟ್ಟಿಗೆ ಸಹಿ ಹಾಕಲೂ ಬಹುದು. ಇದನ್ನು ಪಿಶಾಚನೂ ಮಾಡಬಲ್ಲನು! ಅವನು ಸತ್ಯವೇದವನ್ನು ಚೆನ್ನಾಗಿ ತಿಳಿದಿದ್ದಾನೆ ಮತ್ತು ಈ ವಿಷಯದಲ್ಲಿ ಆತನು ಆಧುನಿಕತಾವಾದಿಯಲ್ಲ. ತತ್ವ ಸಿದ್ಧಾಂತಗಳ ವಿಷಯದಲ್ಲಿ ಅವನು ಒಬ್ಬ ಕಟ್ಟಾ ಮೂಲ ತತ್ವವಾದಿಯಾಗಿದ್ದಾನೆ! ಆದ್ದರಿಂದ ನಾವು ಮೂಲ ತತ್ವವಾದಿಗಳೆಂದು ಹೆಮ್ಮೆ ಪಡುವದು ಅರ್ಥವಿಲ್ಲದ್ದು.

ಧಾರ್ಮಿಕ ತತ್ವಗಳಿಗೆ ಪ್ರಾಮುಖ್ಯತೆ ಇದೆ. ನಾನು ಅವುಗಳ ಪ್ರಾಮುಖ್ಯತೆಯನ್ನು ತಗ್ಗಿಸಿದರೆ, ಅದು ದೇವರಿಗೆ ಒಪ್ಪಿಗೆಯಾಗದು. ಆದರೆ ಎಲ್ಲಾ ಧಾರ್ಮಿಕ ತತ್ವಗಳಿಗಿಂತ, ನಾವು ಆತ್ಮಿಕ ಜೀವವನ್ನು ತರುವ ಸೇವೆಯನ್ನು ಮಾಡುತ್ತೇವೋ ಇಲ್ಲವೋ ಎನ್ನುವದು ದೇವರ ದೃಷ್ಟಿಯಲ್ಲಿ ಹೆಚ್ಚು ಮುಖ್ಯವಾಗಿದೆ.

ಅಪೊಸ್ತಲ ಪೌಲನು ತೋರಿಸಿದಂತೆ, ಆತನು ದೇವರ ಸಹಾಯದಿಂದ ಹೊಸ ಒಡಂಬಡಿಕೆಯ ಒಬ್ಬ ಉತ್ತಮ ಸೇವಕನಾಗಿ, ಆತ್ಮಿಕ ಜೀವವನ್ನು ಒದಗಿಸಿದನು (2 ಕೊರಿಂಥ 3:5,6). ಆತನು ತಾನು ಸ್ವತಃ ಒಬ್ಬ ಮೂಲ ತತ್ವವಾದಿಯೆಂದು ಹೊಗಳಿಕೊಳ್ಳಲಿಲ್ಲ. ಅಥವಾ ಕೇವಲ ತನ್ನ ಅನುಭವಗಳನ್ನು - ದಮಸ್ಕದ ಮಾರ್ಗದ್ದು ಅಥವಾ ನೆಟ್ಟನೇ ಬೀದಿಯದ್ದು - ವ್ಯರ್ಥವಾಗಿ ವಿವರಿಸಲಿಲ್ಲ. ಇಲ್ಲ. ಇದರ ಬದಲಾಗಿ, ಆತನು ತನ್ನ ಮೂಲಭೂತ ನಂಬಿಕೆ ಮತ್ತು ತನ್ನ ಆತ್ಮಿಕ ಅನುಭವಗಳ ಫಲವನ್ನು, ಆತ್ಮಿಕ ಮರಣವಿರುವಲ್ಲಿ ಜೀವವನ್ನು ತರುವ ಸೇವೆಯನ್ನು ಎಡೆಬಿಡದೆ ಮಾಡಿ ತೋರಿಸಿಕೊಟ್ಟನು.

ಪೌಲನ ಜೀವಿತದಲ್ಲಿ, ಎಲೀಷನ ಜೀವಿತದಂತೆಯೇ, ಕೊನೆಯ ವರೆಗೂ ಶಕ್ತಿಯು ಕುಗ್ಗಲಿಲ್ಲ. ಅವನು ತನ್ನ ಅಂತಿಮ ವರ್ಷಗಳಲ್ಲಿ, ಇತ್ತೀಚಿನ ದಿನಗಳಲ್ಲಿ ದೇವರ ಹಲವಾರು ಸೇವಕರು ಅನುಭವಿಸುತ್ತಿರುವಂತೆ, ಅಭಿಷೇಕವನ್ನು ಕಳೆದುಕೊಳ್ಳಲಿಲ್ಲ. ಪೌಲ ಮತ್ತು ಎಲೀಷರು, ತಮ್ಮ ಗತಕಾಲದಲ್ಲಿ ದೇವರು ನಡೆಸಿದ್ದ ಕಾರ್ಯಗಳನ್ನು ನೆನಪಿಸಿಕೊಂಡು ಹಿಗ್ಗುವದನ್ನಷ್ಟೇ ಮಾಡುವ ಸ್ಥಿತಿಗೆ ಬರಲಿಲ್ಲ. ಅವರು ನಿರಂತರವಾಗಿ ದೇವರ ಬಲ ಮತ್ತು ಅಭಿಷೇಕದ ಆನಂದದಲ್ಲಿ ಪ್ರತೀ ದಿನವನ್ನು ಕಳೆದರು. ಅವರ ಆತ್ಮಿಕ ಶಕ್ತಿಯು ಕುಂದದೆ, ಹೆಚ್ಚು ಹೆಚ್ಚಾಗಿ ಬೆಳೆಯುತ್ತಾ ಹೋಯಿತು. ಅವರು ದಿನೇ ದಿನೇ ಬಲಶಾಲಿಗಳಾಗುತ್ತಾ ಜೀವಿಸಿದರು. ಅವರ ಬೆಳಕು ಪ್ರಭಾವದಿಂದ ಅಧಿಕ ಪ್ರಭಾವಕ್ಕೆ ಸಾಗುತ್ತಾ, ಪರಿಪೂರ್ಣತೆಯನ್ನು ಸಮೀಪಿಸಿತು. ಎಂತಹ ಆಶೀರ್ವಾದಕರ ಜೀವಿತ! ದೇವರು ತನ್ನ ಪ್ರತಿಯೊಂದು ಮಗುವೂ ಇದೇ ಮಾರ್ಗದಲ್ಲಿ ನಡೆಯಲಿ ಎಂದೇ ಅಪೇಕ್ಷಿಸುತ್ತಾನೆ (ಜ್ಞಾನೋಕ್ತಿ 4:18).

ಎಲೀಷನು ದೇವರೊಂದಿಗೆ ಸತತವಾದ ಸಂಬಂಧವನ್ನು ಇಟ್ಟುಕೊಂಡಿದ್ದನು, ಹಾಗಾಗಿ ಯಾವಾಗಲೂ ಆತನು ಹೋದಲ್ಲೆಲ್ಲಾ ಮರಣದಿಂದ ಜೀವವನ್ನುಂಟುಮಾಡಲು ಸಮರ್ಥನಾಗಿದ್ದನು. ಹಾಗಾಗಿ ಜನರು ತಮ್ಮ ಸಮಸ್ಯೆಗಳು ಮತ್ತು ಅವಶ್ಯಕತೆಗಳಿಗಾಗಿ ಆತನನ್ನು ಸಂಧಿಸುತ್ತಿದ್ದರು. ಅವನು ಸೇವೆಯನ್ನು ಹುಡುಕುತ್ತಾ ಹೋಗಲಿಲ್ಲ. ಅವನು ತನ್ನನ್ನು ಆಮಂತ್ರಿಸಲು ಮತ್ತು ತನ್ನ ಸೇವೆಗೆ ಸಹಾಯ ನೀಡಲು ಸುತ್ತಲಿನ ಜನರನ್ನು ಕೇಳಬೇಕಾಗಿರಲಿಲ್ಲ. ಇಲ್ಲ. ಯಾವ ಬಾಹ್ಯ ಪ್ರಯತ್ನವಿಲ್ಲದೆಯೇ, ಅವನಿಗೆ ಹೇರಳವಾಗಿ ಸೇವೆಯ ಸಂದರ್ಭಗಳು ಒದಗಿ ಬಂದವು.

ಸ್ನಾನಿಕನಾದ ಯೋಹಾನನಿಗೆ ಇದೇ ರೀತಿ ಆಯಿತು. ಅವನು ತನ್ನ ಕುರಿತು ಎಂದೂ ಪ್ರಚಾರ ಮಾಡದಿದ್ದರೂ, ಒಂದೇ ಒಂದು ಅದ್ಭುತ ಕಾರ್ಯ ಮಾಡದಿದ್ದರೂ, ಯೆರೂಸಲೇಮಿನಿಂದಲೂ, ಯೆಹೂದದ ಎಲ್ಲಾ ಪ್ರಾಂತಗಳಿಂದಲೂ ಮತ್ತು ಯೊರ್ದನ್ನಿನ ಎಲ್ಲಾ ಪ್ರದೇಶಗಳಿಂದಲೂ ಜನರು ಬಹು ದೂರ ಪ್ರಯಾಣಿಸಿ ಅವನ ಮಾತನ್ನು ಕೇಳಲು ಬಂದರು.

ಈ ಪುರುಷರು ಅಭಿಷಿಕ್ತರಾಗಿದ್ದರು, ಮತ್ತು ನಿರಂತರವಾಗಿ ಆ ಅಭಿಷೇಕದ ಅಡಿಯಲ್ಲಿ ಜೀವಿಸಿದರು. ಇದರ ರಹಸ್ಯ ಇಷ್ಟೇ. ಬೇರೇನೂ ಇಲ್ಲ.

ಆತ್ಮನ ಅಭಿಷೇಕವು ಇಷ್ಟು ಮುಖ್ಯವಾಗಿದ್ದರೆ, ದೇವರು ಅದನ್ನು ತನ್ನ ಎಲ್ಲಾ ಮಕ್ಕಳಿಗೆ ಏಕೆ ಕೊಡುವದಿಲ್ಲ? ಅದಕ್ಕೆ ಕಾರಣ, ಅವರಲ್ಲಿ ಕೆಲವರು ಮಾತ್ರವೇ ಅದನ್ನು ಹೊಂದಲು ತೆರಬೇಕಾದ ಬೆಲೆಯನ್ನು ತೆರಲು ಸಿದ್ಧರಿದ್ದಾರೆ.

ಎಲೀಷನು ಅಭಿಷೇಕ ಹೊಂದಿದ್ದಕ್ಕೆ ಕಾರಣಗಳಿವೆ, ಮತ್ತು ನಾನು ಅವುಗಳಲ್ಲಿ ಕನಿಷ್ಠ ಪಕ್ಷ ಮೂರನ್ನು ಗುರುತಿಸಿದ್ದೇನೆ.

ದಾಹ

ಎಲೀಷನಲ್ಲಿ ಅಭಿಷೇಕಕ್ಕಾಗಿ ಇದ್ದ ದಾಹ ಎಲ್ಲರಿಗೂ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅವನು ಈ ಲೋಕದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಹಂಬಲಿಸಿದ್ದು ಅಭಿಷೇಕಕ್ಕಾಗಿ.

2 ಅರಸು 2:1-10ರಲ್ಲಿ, ಎಲೀಯನು ಈ ವಿಷಯದಲ್ಲಿ ಎಲೀಷನನ್ನು ಹೇಗೆ ಪರೀಕ್ಷಿಸಿದನೆಂದು ನಾವು ಓದುತ್ತೇವೆ. ಮೊದಲನೆಯದಾಗಿ, ತಾನು ಗಿಲ್ಗಾಲಿನಿಂದ ಹೊರಟಿದ್ದರೂ ಸಹ ಎಲೀಷನನ್ನು ಅಲ್ಲಿಯೇ ಉಳಕೊಳ್ಳಲು ಹೇಳಿದನು. ಆದರೆ ಎಲೀಷನು ಎಲೀಯನನ್ನು ಬಿಟ್ಟಿರಲು ನಿರಾಕರಿಸಿದನು. ನಂತರ ಎಲೀಯನು ಅವನನ್ನು 15 ಮೈಲು ಪಶ್ಚಿಮಕ್ಕೆ ಬೇತೇಲಿಗೆ, ಅಲ್ಲಿಂದ ಮತ್ತೊಮ್ಮೆ 12 ಮೈಲು ಯೆರಿಕೋವಿನ ಕಡೆಗೆ ಮತ್ತು ಅಲ್ಲಿಂದ ಪೂರ್ವಕ್ಕೆ 5 ಮೈಲು ಯೊರ್ದನಿಗೆ ನಡೆಸುವುದರ ಮೂಲಕ, ಪ್ರತಿಯೊಂದು ಹಂತದಲ್ಲೂ ಎಲೀಷನ ತಾಳ್ಮೆ ಮತ್ತು ಆಸಕ್ತಿಯನ್ನು ಪರೀಕ್ಷಿಸಿದನು. ಅಂತಿಮವಾಗಿ, ಎಲೀಯನು ಅವನನ್ನು ಬಿಟ್ಟುಹೋಗುವ ಮೊದಲು ಕೊಡಬಹುದಾದ ಏನಾದರೂ ಬೇಡಿಕೆ ಇದೆಯಾ? ಎಂದು ಕೇಳಿದನು. ಆಗ ಎಲೀಷನು, “ನನಗೆ ಬೇಕಾಗಿರುವದು ಒಂದೇ ಒಂದು. ಆದಕ್ಕಾಗಿಯೇ ಇಷ್ಟು ಹೊತ್ತಿನಿಂದ ನಾನು ನಿನ್ನನ್ನು ಹಿಂಬಾಲಿಸುತ್ತಿದ್ದೇನೆ. ಅದಕ್ಕಾಗಿಯೇ ನೀನು ನನ್ನನ್ನು ದೂರ ಸರಿಸಲು ಪ್ರಯತ್ನಿಸಿದಾಗ್ಯೂ ನಾನು ನಿನ್ನನ್ನು ಬಿಡಲಿಲ್ಲ. ನಿನಗಿರುವ ಆತ್ಮದ ಎರಡರಷ್ಟನ್ನು ನನಗೆ ಅನುಗ್ರಹಿಸು,” ಎಂದನು.

ಎಲೀಷನು ಹೃದಯ ಪೂರ್ವಕವಾಗಿ ಆ ಅಭಿಷೇಕವನ್ನು ಹಂಬಲಿಸಿದನು. ಆತನು ಇದಕ್ಕಿಂತ ಕಡಿಮೆಯಾದ ಯಾವುದರಲ್ಲೂ ತೃಪ್ತಿ ಹೊಂದಲು ಸಿದ್ಧನಿರಲಿಲ್ಲ. ಹಾಗಾಗಿ ತಾನು ಕೇಳಿಕೊಂಡದ್ದನ್ನು ಆತನು ಪಡೆದನು.

ಎಲೀಯನು ಎಲೀಷನನ್ನು ನಡೆಸಿದಂತೆಯೇ, ಅನೇಕ ಸಲ ದೇವರು ನಮ್ಮನ್ನು ನಡೆಸಿ, ನಾವು ಪವಿತ್ರಾತ್ಮನ ಪೂರ್ಣ ಅಭಿಷೇಕಕ್ಕಿಂತ ಕಡಿಮೆಯಾದ ಯಾವುದರಲ್ಲೋ ತೃಪ್ತಿ ಪಟ್ಟುಕೊಳ್ಳುತ್ತೇವೋ ಎಂದು ಪರೀಕ್ಷಿಸುತ್ತಾನೆಂದು ನಾನು ನಂಬುತ್ತೇನೆ. ನಾವು ಕಡಿಮೆಯಲ್ಲೇ ತೃಪ್ತಿಗೊಳ್ಳುವದಾದರೆ, ನಮಗೆ ಅಷ್ಟೇ ದೊರಕುತ್ತದೆ. ಅಭಿಷೇಕವಿಲ್ಲದಿದ್ದರೆ ತೊಂದರೆಯಿಲ್ಲ ಎಂದುಕೊಂಡು, ಯಾವ ಚಿಂತೆಯೂ ಇಲ್ಲದೆ ಸಂತುಷ್ಟನಾಗಿರುವ ವಿಶ್ವಾಸಿಗೆ, ದೇವರು ಈ ಅಭಿಷೇಕವನ್ನು ಕೊಡುವದಿಲ್ಲ.

ಆದರೆ ನಾವು ಎಲೀಷನಂತೆ, ಇದು ಎಲ್ಲಕಿಂತ ಹೆಚ್ಚು ಅವಶ್ಯವೆಂದು ತಿಳಕೊಂಡು ಇದು ಸಿಗುವ ವರೆಗೂ ಇದಕ್ಕಾಗಿ ಪ್ರಯಾಸ ಪಡುವದಾದರೆ, ಮತ್ತು ಪೆನಿಯೇಲಿನಲ್ಲಿ ಯಾಕೋಬನು ಹೇಳಿದಂತೆ, “ಕರ್ತನೇ, ನೀನು ನನ್ನನ್ನು ಆಶೀರ್ವದಿಸದ ಹೊರತು ನಾನು ನಿನ್ನನ್ನು ಬಿಡುವುದಿಲ್ಲ,” ಎಂದು ಯಥಾರ್ಥವಾಗಿ ಹೇಳುವದಾದರೆ, ನಾವು ಈ ಪವಿತ್ರಾತ್ಮನ ಶಕ್ತಿಗಾಗಿ, ಪುನರುತ್ತಾನದ ಶಕ್ತಿಗಾಗಿ, ಹೆಣಗುತ್ತಾ ನಿಜವಾಗಿ ಹಂಬಲಿಸಿದರೆ, ಆಗ ನಿಜವಾಗಿಯೂ ನಾವು ಅದನ್ನು ಪಡೆಯುತ್ತೇವೆ. ಆಗ ನಾವು ದೇವರೊಂದಿಗೂ ಮತ್ತು ಮನುಷ್ಯರೊಂದಿಗೂ ಶಕ್ತಿಯುಳ್ಳ ನಿಜವಾದ ಇಸ್ರಾಯೇಲ್ಯರಾಗುತ್ತೇವೆ.

ನಮಗೆ ಈ ಅಭಿಷೇಕವು ಎಷ್ಟು ಅಗತ್ಯವೆಂಬುದನ್ನು ತೋರಿಸುವುದಕ್ಕಾಗಿ, ದೇವರು ಅನೇಕ ಸಲ ನಮ್ಮ ಜೀವನದಲ್ಲಿ ಸೋಲು, ನಿರಾಶೆಗಳನ್ನು ಅನುಮತಿಸುತ್ತಾನೆ. ನಾವು ಸುವಾರ್ತಾ ಪ್ರಸಾರದ ಸಿದ್ಧಾಂತವನ್ನು ನಂಬಿದ್ದರೂ ಮತ್ತು ನಮ್ಮೊಳಗೆ ಪವಿತ್ರಾತ್ಮನು ವಾಸಮಾಡಿದ್ದರೂ, ನಮ್ಮ ಮೇಲೆ ದೇವರಾತ್ಮನು ಶಕ್ತಿಯುತವಾಗಿ ನೆಲೆಗೊಳ್ಳುವ ಅನುಭವ ನಮಗೆ ಅಗತ್ಯವೆಂದು ನಾವು ಸ್ಪಷ್ಟವಾಗಿ ಗ್ರಹಿಸುವಂತೆ ಮಾಡಲು ಆತನು ಇಚ್ಛಿಸುತ್ತಾನೆ.

ಅಭಿಷೇಕವನ್ನು ಹೊಂದುವುದು ಅಷ್ಟು ಸುಲಭವಾದ ಸಂಗತಿಯಲ್ಲ. ಎಲೀಯನು ಎಲೀಷನ ಬಿನ್ನಹವನ್ನು ಕೇಳಿದಾಗ, “ಓಹೋ, ನೀನು ಕೇಳಿಕೊಂಡಿರುವುದು ಬಹು ಸುಲಭವಾದ ಸಂಗತಿ, ನೀನಿಲ್ಲಿ ಮೊಣಕಾಲೂರು, ನಾನು ನಿನ್ನ ತಲೆಯ ಮೇಲೆ ಕೈ ಇಡುವೆನು ಮತ್ತು ನಿನಗೆ ಅದು ಸಿಕ್ಕುತ್ತದೆ” ಎಂದು ಅವನಿಗೆ ಹೇಳಲಿಲ್ಲ. ಬದಲಾಗಿ, ಎಲೀಯನು ಎಲೀಷನಿಗೆ, “ನೀನು ಕಠಿಣವಾದ ಸಂಗತಿಯನ್ನು ಕೇಳಿಕೊಂಡಿದ್ದಿ,” ಎಂದು ಹೇಳಿದನು. ಹೌದು, ಅದು ನಿಜವಾಗಿಯೂ ಒಂದು ಕಠಿಣವಾದ ಸಂಗತಿಯಾಗಿದೆ. ನಾವು ಅದರ ಬೆಲೆಯನ್ನು ತೆರಬೇಕಾಗುತ್ತದೆ. ನಾವು ಅದಕ್ಕಾಗಿ ಈ ಲೋಕದ ಪ್ರತಿಯೊಂದನ್ನೂ ತ್ಯಜಿಸಲು ಸಿದ್ಧರಾಗಬೇಕು.

ನಾವು ಪವಿತ್ರಾತ್ಮನ ಅಭಿಷೇಕವನ್ನು ಈ ಲೋಕದ ಇನ್ನೆಲ್ಲವುಗಳಿಗಿಂತ ಹೆಚ್ಚಾಗಿ - ಸಂಪತ್ತು, ಸುಖ-ಸೌಲಭ್ಯಗಳು, ಕೀರ್ತಿ ಮತ್ತು ಪ್ರಸಿದ್ಧಿ, ಅಷ್ಟೇ ಅಲ್ಲದೆ ಯಶಸ್ವೀ ಕ್ರಿಸ್ತೀಯ ಸೇವೆಗಿಂತಲೂ ಹೆಚ್ಚಾಗಿ ಆಶಿಸಬೇಕು. ಹೌದು, ಅದು ನಿಜವಾಗಿಯೂ ಕಠಿಣವಾದ ಸಂಗತಿಯಾಗಿದೆ. ಆದರೆ ದಾಹ ಎಂಬುದರ ಅರ್ಥ ಇದೇ ಆಗಿದೆ. ನಾವು ಆ ಸ್ಥಿತಿಗೆ ತಲುಪಿದಾಗ, ದೇವರ ವಚನವು ವಿವರಿಸುವಂತೆ, ಯೇಸುವಿನ ಬಳಿಗೆ ಹೋಗಿ ಆ ಜೀವಜಲವನ್ನು ಕುಡಿಯುತ್ತೇವೆ, ಮತ್ತು ಜೀವಕರವಾದ ನೀರಿನ ಹೊಳೆಗಳು ನಮ್ಮಿಂದ ಅನೇಕ ದಿಕ್ಕುಗಳಲ್ಲಿ ಹರಡಿ ಹೋಗುತ್ತವೆ ಮತ್ತು ಅವು ಹರಿಯುವಲ್ಲೆಲ್ಲಾ ಮರಣದಿಂದ ಜೀವ ಉಂಟಾಗುತ್ತದೆ (ಯೋಹಾನ 7:37-39; ಯೆಹೆಜ್ಕೇಲ 47:8,9).

ನಾವು ಈ ಅಭಿಷೇಕವನ್ನು ಪಡೆದ ಮೇಲೆ, ಏನೇ ಆದರೂ ಅದನ್ನು ಕಳಕೊಳ್ಳದಂತೆ ಎಚ್ಚರವಾಗಿರಬೇಕು. ಅಜಾಗ್ರತೆಯ ಮೂಲಕ ನಾವು ಹೊಂದಿರುವದನ್ನು ಕಳಕೊಳ್ಳಲೂ ಸಾಧ್ಯವಿದೆ. ನಮ್ಮ ನಿರ್ದಾಕ್ಷಿಣ್ಯ ಟೀಕೆಗಳು, ಅಥವಾ ಬಾಯಿಗೆ ಬಂದಂತೆ ಆಡುವ ಮಾತುಗಳು, ಅಥವಾ ಅಶುದ್ಧ ಕಲ್ಪನೆಗಳು, ಇಲ್ಲವೇ ನಮ್ಮ ಹೃದಯದ ಗರ್ವ ಅಥವಾ ಇತರರನ್ನು ಕ್ಷಮಿಸಲಾರದ ಛಲ, ನಾವು ಇವೆಲ್ಲವುಗಳನ್ನು ದೂರ ಮಾಡದಿದ್ದಲ್ಲಿ, ಅಭಿಷೇಕವು ಹೊರಟು ಹೋಗುತ್ತದೆ.

ಅಪೊಸ್ತಲನಾದ ಪೌಲನು, ಇತರರಿಗೆ ಬೋಧಿಸಿದ ಮೇಲೆ ತಾನೇ ಅಯೋಗ್ಯನು ಎನಿಸಿಕೊಳ್ಳದೇ ಇರುವಂತೆ, ತನ್ನ ದೇಹದ ಅಂಗಗಳನ್ನು ಜಜ್ಜಿ ಸ್ವಾಧೀನ ಪಡಿಸಿದ್ದಾಗಿ 1 ಕೊರಿಂಥ 9:27ರಲ್ಲಿ ಹೇಳುತ್ತಾನೆ. ಇಲ್ಲಿ ಅವನು ಹೇಳುತ್ತಿರುವದು, ತಾನು ರಕ್ಷಣೆಯನ್ನು ಕಳೆದುಕೊಳ್ಳುವ ಸಾಧ್ಯತೆಯ ಕುರಿತಲ್ಲ, ಆದರೆ ತಾನು ಅಭಿಷೇಕವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆಯೆಂದು ಹೇಳುತ್ತಿದ್ದಾನೆಂದು ನಾನು ನಂಬುತ್ತೇನೆ. ಪೌಲನಂತ ಒಬ್ಬ ಶ್ರೇಷ್ಠ ಅಪೊಸ್ತಲನು, ಹಲವಾರು ಸಭೆಗಳನ್ನು ಸ್ಥಾಪಿಸಿದ ನಂತರ, ಎಷ್ಟೋ ಅದ್ಭುತಗಳನ್ನು ಮಾಡಿದ ಮೇಲೆ ಮತ್ತು ದೇವರಿಂದ ಬಲವಾಗಿ ಉಪಯೋಗಿಸಲ್ಪಟ್ಟಿದ್ದರೂ, ಅಜಾಗರೂಕನಾಗಿ ನಡೆದರೆ ಅಭಿಷೇಕವನ್ನು ಕಳಕೊಳ್ಳುವ ಅಪಾಯದಲ್ಲಿದ್ದರೆ, ನಮ್ಮ ಗತಿಯೇನೆಂದು ನಾನು ಚಕಿತನಾಗಿ ಯೋಚಿಸುವದನ್ನು ನಿಲ್ಲಿಸಿಲ್ಲ.

“ಕರ್ತನೇ, ನನ್ನ ಜೀವನದಲ್ಲಿ ನಾನು ಏನನ್ನು ಕಳಕೊಂಡರೂ ನಿನ್ನ ಅಭಿಷೇಕವನ್ನು ಮಾತ್ರ ಎಂದಿಗೂ ಕಳಕೊಳ್ಳದಂತೆ ನನ್ನನ್ನು ಇರಿಸು,” ಎಂದು ನಾವು ಎಡೆಬಿಡದೆ ಪ್ರಾರ್ಥಿಸುವದು ಅವಶ್ಯ.

ಉದ್ದೇಶದಲ್ಲಿ ಪರಿಶುದ್ಧತೆ

ಎಲೀಷನು ಅಭಿಷೇಕ ಹೊಂದಿದ್ದರ ಎರಡನೆಯ ಕಾರಣ, ಅವನ ಉದ್ದೇಶಗಳು ಶುದ್ಧವಾಗಿದ್ದವು. ಅವನ ಒಂದೇ ಒಂದು ಇಚ್ಛೆ - ದೇವರನ್ನು ಮಹಿಮೆ ಪಡಿಸುವುದೇ ಆಗಿತ್ತು. ಈ ಮಾತು ಎಲ್ಲಿಯೂ ಬರಯಲ್ಪಟ್ಟಿಲ್ಲ, ಆದರೆ ಅವನ ಜೀವನದ ವಿವರಗಳನ್ನು ಓದುವಾಗ ಅದು ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಎಲೀಷನ ಕಾಲದಲ್ಲಿ ದೇವರ ನಾಮವು ನಿಂದೆಗೆ ಒಳಗಾಗಿದ್ದುದನ್ನು ಮತ್ತು ದೇವಜನರು ಅಪಾರವಾದ ಕೊರತೆಯಲ್ಲಿ ಇದ್ದುದನ್ನು ನೋಡಿ, ಅವನ ಮೊದಲು ಎಲೀಯನು ಅನುಭವಿಸಿದಂತೆಯೇ, ಅವನಿಗೆ ಬಹಳ ನೋವಾಯಿತು. ಅವನು ಆ ನಾಡಿನಲ್ಲಿ ದೇವರ ಸೇವೆಯ ಅವಶ್ಯಕತೆಯನ್ನು ಪೂರೈಸಿ, ಆತನ ಮಹಿಮೆಯುಳ್ಳ ನಾಮಕ್ಕೆ ಉಂಟಾಗಿದ್ದ ನಿಂದೆಯನ್ನು ತೊಲಗಿಸಲು ಬೇಕಾದ ಅಭಿಷೇಕಕ್ಕಾಗಿ ಹಂಬಲಿಸುತ್ತಿದ್ದನು.

ಅನೇಕಾವರ್ತಿ ದೇವರ ಮಕ್ಕಳು ಅಭಿಷೇಕಿಸಲ್ಪಡದೇ ಇರುವದರ ಕಾರಣ, ಅವರ ಅಶುದ್ಧತೆ ಮತ್ತು ಸ್ವಾರ್ಥಪರ ಪ್ರೇರಣೆಗಳು ಆಗಿರುತ್ತವೆ. ಹೆಚ್ಚಿನ ಕ್ರೈಸ್ತರು ಹೊರತೋರಿಕೆಯ ಜೀವನವನ್ನು ಸರಿಪಡಿಸುವದರಲ್ಲಿ ಸಂತೋಷಿಸುತ್ತಾರೆ, ಆದರೆ ದೇವರು ಅಂತರಂಗದಲ್ಲಿ ಸತ್ಯವನ್ನು ಹುಡುಕುತ್ತಾನೆ. ನಮಗಿರುವ ಕಾಳಜಿ ನಮ್ಮ ಸ್ವಂತ ಮಹಿಮೆಗಾಗಿಯೋ ಅಥವಾ ಆತನ ಮಹಿಮೆಗಾಗಿಯೋ ಎನ್ನುವದನ್ನು ಆತನು ಪರೀಕ್ಷಿಸುತ್ತಾನೆ. ಆತನ ನಾಮವು ನಿಂದನೆಗೆ ಗುರಿಯಾಗಿರುವದು ನಮ್ಮನ್ನು ನೋಯಿಸುತ್ತದೋ ಇಲ್ಲವೋ ಎಂದು ಆತನು ನೋಡುತ್ತಾನೆ. ಇಂದಿನ ದಿನ ನಮ್ಮ ನಾಡಿನಲ್ಲಿ ದೇವರ ನಾಮಕ್ಕೆ ಆಗುವ ಅವಹೇಳನವನ್ನು ನೋಡಿ, ನಮ್ಮ ಹೃದಯದಲ್ಲಿ ಭಾರವಾಗಲೀ, ನೋವಾಗಲೀ ಇಲ್ಲವಾದರೆ, ದೇವರು ನಮ್ಮನ್ನು ಎಂದಾದರೂ ಅಭಿಷೇಕಿಸುವನೋ, ಎನ್ನುವ ಸಂದೇಹ ನನಗಿದೆ.

ಯೆಹೆಜ್ಕೇಲ 9:1-6ರಲ್ಲಿ, ದೇವರು ಕೆಲವು ನಿಗದಿತ ಜನರನ್ನು ತನ್ನ ಸ್ವಕೀಯ ಪ್ರಜೆಗಳನ್ನಾಗಿ ಪ್ರತ್ಯೇಕಿಸಿದನೆಂದು ನಾವು ಓದುತ್ತೇವೆ. ಹೀಗೆ ಗುರುತಿಸಲಾದವರು, ದೇವಜನರ ನಡುವೆ ಇದ್ದ ಪಾಪಗಳನ್ನು ಕಂಡು ನರಳಿ ಗೋಳಾಡುವ ಜನರಾಗಿದ್ದರು. ಇವರೇ ದೇವರ ಶೇಷ ಜನರೆಂದು ಗೊತ್ತು ಮಾಡಲ್ಪಟ್ಟವರು ಮತ್ತು ಇಂಥವರನ್ನೇ ದೇವರು ಅಭಿಷೇಕಿಸುವದು - ಇವರೇ ದೇವರ ನಾಮಕ್ಕಾಗಿ ಚಿಂತಿಸುವ ಹೃದಯ ಉಳ್ಳವರು ಮತ್ತು ಆತನೊಬ್ಬನನ್ನೇ ಮಹಿಮೆಪಡಿಸಲು ಹಾತೊರೆಯುವವರು.

ಈ ಲೋಕವನ್ನು ಪ್ರೀತಿಸದಿರುವದು

ಎಲೀಷನು ಅಭಿಷೇಕ ಹೊಂದಿದ್ದಕ್ಕೆ ಮೂರನೆಯ ಕಾರಣವೆಂದರೆ, ಅವನು ಈ ಲೋಕವನ್ನು ಯಾವುದೇ ರೀತಿಯಲ್ಲಿ ಪ್ರೀತಿಸಲಿಲ್ಲ. ಇದು ಅವನು ನಾಮಾನನೊಂದಿಗೆ ವ್ಯವಹರಿಸಿದ ರೀತಿಯಲ್ಲಿ ವ್ಯಕ್ತವಾಗುತ್ತದೆ. ಆತನು ಗುಣ ಹೊಂದಿದ ತರುವಾಯ ಹಣವನ್ನು ನೀಡಲು ಮುಂದಾದಾಗ, ಅವನು ಅದ್ಭುತಕಾರ್ಯವನ್ನು ನೆರವೇರಿಸಿದ್ದಕ್ಕೆ ಪ್ರತಿಫಲವನ್ನು ಸ್ವೀಕರಿಸಲು ಒಪ್ಪಲಿಲ್ಲ. ಎಲೀಷನಲ್ಲಿ ಈ ಲೋಕಕ್ಕಾಗಿ ಅಥವಾ ಹಣಕ್ಕಾಗಿ ಲಾಲಸೆ ಇರಲಿಲ್ಲ. ಕರ್ತನ ಕಾರ್ಯದಲ್ಲಿ ಅವನು ತನ್ನ ವೈಯಕ್ತಿಕ ಲಾಭವನ್ನು ಹುಡುಕಲಿಲ್ಲ.

ಇನ್ನೊಂದು ಕಡೆ, ಇದಕ್ಕೆ ತದ್ವಿರುದ್ಧವಾದ ನಡತೆ ನಮಗೆ ಗೇಹಜಿಯಲ್ಲಿ ಕಾಣಿಸುತ್ತದೆ. ಎಲೀಷನು ಎಲೀಯನ ಸಹಾಯಕನಾಗಿದ್ದಂತೆಯೇ ಇವನು ಎಲೀಷನ ಸಹಾಯಕನಾಗಿದ್ದನು. ಅಲ್ಲಿ ಎಲೀಷನು ಎಲೀಯನ ಆತ್ಮದ ಎರಡು ಪಾಲನ್ನು ಹೊಂದಿ ಎಲೀಯನ ಸೇವೆಯನ್ನು ಮುಂದುವರೆಸಿದಂತೆ, ಗೇಹಜಿಯೂ ಸಹ ಖಂಡಿತವಾಗಿ ಎಲೀಷನ ಆತ್ಮವನ್ನು ಸ್ವೀಕರಿಸಿ ಎಲೀಷನ ಸೇವೆಯನ್ನು ಮುಂದುವರಿಸಬಹುದಿತ್ತು. ಆದರೆ ಅವನಿಗೆ ಆ ಅಭಿಷೇಕವು ದೊರಕಲಿಲ್ಲ. ಅದರ ಬದಲಾಗಿ ಅವನಿಗೆ ಕುಷ್ಠರೋಗ ಹತ್ತಿತು. ಏಕೆ? ಏಕೆಂದರೆ ದೇವರು ಅವನ ಹೃದಯವನ್ನು ನೋಡಿದನು. ಗೇಹಜಿಯಲ್ಲಿ ಆತ್ಮಿಕತೆಯ ಹೊರತೋರಿಕೆ ಇದ್ದರೂ, ಆತನ ಹೃದಯದ ಅಂತರಾಳದಲ್ಲಿ ಸ್ವಾರ್ಥದ ಸಂಪಾದನೆಯ ಆಸೆಯಿತ್ತು. ಅವನು ಕರ್ತನ ಕಾರ್ಯವನ್ನು ಆರಂಭಿಸಿದಾಗ ಪ್ರಾಮಾಣಿಕನಾಗಿಯೇ ಪ್ರಾರಂಭಿಸಿರಬಹುದು, ಆದರೆ ಸ್ವಲ್ಪ ಸಮಯದಲ್ಲೇ ಲೌಕಿಕ ಅನುಕೂಲಗಳ ಬಗ್ಗೆಯೂ ಯೋಚಿಸ ತೊಡಗಿದನು. ಅವನು ಅಭಿಷೇಕವನ್ನು ಪಡೆಯುವದರ ಜೊತೆಗೆ, ಈ ಲೋಕದ ಐಶ್ವರ್ಯವನ್ನೂ ತಾನು ಸಂಪಾದಿಸಬಹುದೆಂದು ಯೋಚಿಸಿದನು. ಆದರೆ ಅವನ ಎಣಿಕೆ ತಪ್ಪಾಗಿತ್ತು. ಅನೇಕ ಕ್ರೈಸ್ತ ಕಾರ್ಯಕರ್ತರು ಇದೇ ತಪ್ಪನ್ನು ಮಾಡಿದ್ದಾರೆ.

ಯಾವುದೇ ಕ್ರೈಸ್ತಸಭೆ ಅಥವಾ ಕ್ರೈಸ್ತ ಸಂಸ್ಥೆಗಳಲ್ಲಿ ನಮ್ಮ ಸ್ಥಾನ ಅಥವಾ ನಮ್ಮ ಸೇವೆಯನ್ನು ಯಾವುದೇ ವೈಯಕ್ತಿಕ ಲಾಭದ ಸಾಧನವಾಗಿ ಮಾಡಿಕೊಳ್ಳದಂತೆ ಕರ್ತನು ನಮ್ಮನ್ನು ತಡೆಯಲಿ.

ಒಂದು ಬಾರಿ ಅವಿಶ್ವಾಸಿಯಾಗಿದ್ದ ಒಬ್ಬನು ನನಗೆ, ಈ ದಿನಗಳಲ್ಲಿ ಕ್ರೈಸ್ತ ಸೇವೆಯನ್ನು ಕೈಗೊಳ್ಳುವದು ಒಂದು ಒಳ್ಳೆಯ ಲಾಭದಾಯಕ ಉದ್ಯೋಗವೆಂದು ಆತನು ಯೋಚಿಸುವದಾಗಿ ಹೇಳಿದನು. ಆತನಿಗೆ ತಿಳಿದಿದ್ದ ಒಂದು ಉದಾಹರಣೆಯು ಹೀಗಿತ್ತು: ಒಬ್ಬ ಕ್ರೈಸ್ತ ಸೇವಕನು ಹಿಂದೆ ಒಂದು ಲೌಕಿಕ ನೌಕರಿ ಮಾಡುತ್ತಿದ್ದಾಗ, ಆರ್ಥಿಕವಾಗಿ ಅಷ್ಟೊಂದು ಒಳ್ಳೆಯ ಸ್ಥಿತಿಯಲ್ಲಿ ಇರಲಿಲ್ಲ. ಆದರೆ ಈಗ ಅವನು ಬಹಳ ಸಮೃದ್ಧ ಸ್ಥಿತಿಗೆ ತಲುಪಿದ್ದನು. ಅವನಿಗೆ ಅಮೇರಿಕಾದಿಂದ ಹಣದ ಹೊಳೆಯೇ ಹರಿದು ಬರುತ್ತಿತ್ತು. ಅವನು ಸ್ವಂತ ಮನೆಯನ್ನು ಕಟ್ಟಿಕೊಂಡು ಈಗ ಐಷಾರಾಮದ ಜೀವನ ನಡೆಸುತ್ತಿದ್ದನು. ಇಷ್ಟೇ ಅಲ್ಲದೆ, ಒಬ್ಬ ಸೌವಾರ್ತಿಕನೂ ಆಗಿದ್ದ ಅವನಿಗೆ, ಪರಲೋಕದಲ್ಲಿ ಒಂದು ಜಾಗವೂ ಖಾತ್ರಿಯಾಗಿತ್ತು. ಇಂತಹ ಮನುಷ್ಯರು ಖಂಡಿತವಾಗಿ ದೇವರ ಸೇವೆ ಮಾಡುತ್ತಿಲ್ಲ.

ಕ್ರೈಸ್ತ ಸೇವೆಯು ನಮ್ಮ ಆಸ್ತಿಪಾಸ್ತಿಗಳನ್ನು ಬೆಳೆಸುವದಾದರೆ, ಸಹೋದರರೇ, ನಾವು ನಮ್ಮ ಜೀವನವನ್ನು ಮತ್ತೊಮ್ಮೆ ಪರೀಕ್ಷಿಸಿಕೊಂಡು, ನಾವು ನಿಜವಾಗಿಯೂ ಯೇಸುವನ್ನು ಅನುಸರಿಸುತ್ತಿದ್ದೇವೋ ಎಂದು ನೋಡಬೇಕು. ಆಗ ಸಾಮಾನ್ಯವಾಗಿ, ನಾವು ಹಾಗೆ ಮಾಡುತ್ತಿಲ್ಲವೆಂದು ನಮಗೆ ಕಂಡುಬರುತ್ತದೆ.

ವಾಚ್ಮನ್ ನೀ ಎಂಬ ಭಕ್ತರು ಹೇಳಿರುವಂತೆ, ನಾವು ದೇವರ ಸೇವೆಗೆ ಹೊರಡುವಾಗ, ಯಾವುದೇ ವ್ಯಯವಿಲ್ಲದಿದ್ದರೆ, ತ್ಯಾಗ ಮಾಡಿರದಿದ್ದರೆ, ನಮಗೆ ಕರೆ ಬಂದಿರುವದು ನಿಜವಾಗಿ ದೇವರಿಂದಲೋ, ಎಂದು ಗಂಭೀರವಾಗಿ ನಮ್ಮನ್ನೇ ಪ್ರಶ್ನಿಸಿಕೊಳ್ಳುವದು ಒಳ್ಳೆಯದು.

ನಮ್ಮ ಹೃದಯಗಳಲ್ಲಿ ಲೋಕಕ್ಕಾಗಿ, ಅದರ ಆನಂದ ಮತ್ತು ಸುಖ ಸಾಧನಗಳು ಮತ್ತು ಐಶ್ವರ್ಯಕ್ಕಾಗಿ ಯಾವುದೇ ವಿಧವಾದ ಪ್ರೀತಿ ಇದೆಯೋ, ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳೋಣ. ಇದು ಇರುವುದಾದರೆ ದೇವರು ನಮ್ಮನ್ನು ಅಭಿಷೇಕಿಸಲು ಆಗದು.

ಜಯಶಾಲಿಗಳಾದ ಜನಶೇಷವು

ದೇವರು ನಮ್ಮ ನಾಡಿನಲ್ಲಿ ಇಂದು ಆತನ ಆತ್ಮನಿಂದ ಆತನು ಅಭಿಷೇಕಿಸಬಹುದಾದ ಸ್ತ್ರೀ-ಪುರುಷರಿಗಾಗಿ ಹುಡುಕುತ್ತಿದ್ದಾನೆ - ಯಾವ ಬೆಲೆಯನ್ನಾದರೂ ಕೊಟ್ಟು ಇಂತಹ ಶಕ್ತಿಯ ವರದಾನವನ್ನು ಸ್ವೀಕರಿಸಿ, ಅದನ್ನು ಉಳಿಸಿಕೊಳ್ಳಲು ಬಯಸುವಂತಹ ಜನಶೇಷ!

ನಮಗೆ ಯೊರ್ದನ್ನಿನ ನೀರು, ಇಂದು ಅಂಧಕಾರದ ಶಕ್ತಿಗಳ ಚಟುವಟಿಕೆಯ ಮೂಲಕ ನಮ್ಮ ನಾಡಿನ ಉದ್ದಗಲಕ್ಕೂ ಹರಡಿರುವ ಆತ್ಮಿಕ ಸಾವಿನ ಸಂಕೇತವಾಗಿದೆ. ಇದರ ನಡುವೆ ಹಾದುಹೋಗಿ ಸಾವಿನಿಂದ ಜೀವವನ್ನು ತರಲು ಸಿದ್ಧರಾದ ಜಯಶಾಲೀ ಶೇಷವನ್ನು, ದೇವರು ತನ್ನ ಜನರೊಳಗೆ ಹುಡುಕುತ್ತಿದ್ದಾನೆ. ಕರ್ತನಾದ ಯೇಸುಕ್ರಿಸ್ತನ ಹೆಸರನ್ನು ಉಪಯೋಗಿಸಿ, ವೈರಿಯ ಸೇನೆಯನ್ನು ಅಡಗಿಸಿಬಿಡುವ ಮತ್ತು ಪ್ರತಿಯೊಂದು ಅಡೆತಡೆಯನ್ನು ಯಾವುದೇ ಅಭ್ಯಂತರವಿಲ್ಲದೆ ದಾಟಿ ಹೋಗುವವರನ್ನು; ಮತ್ತು ಯೊರ್ದನ್ನಿನಂತಹ ಪ್ರತಿಯೊಂದು ಆತಂಕದ ಮೂಲಕ ಸಾಗುವ ದೇವರ ಹೆದ್ದಾರಿಗಳನ್ನು ನಿರ್ಮಿಸಲಿಕ್ಕಾಗಿ ಜನರನ್ನು ಆತನು ಹುಡುಕುತ್ತಿದ್ದಾನೆ! ಇದು ನಮ್ಮ ಸಭೆಗಳಲ್ಲಿ ನಡೆದಾಗ ನಾವು ಹಾರೈಸುತ್ತಿರುವ ಭಕ್ತಿ ಸಂಜೀವನವನ್ನು ಕಾಣುವೆವು; ಆಗ ನಮ್ಮ ಮಧ್ಯೆ ಇರುವ ದೇವರು ನಿಜವಾದ ದೇವರೆಂದು ಅನ್ಯರು ಚೆನ್ನಾಗಿ ತಿಳಿದುಕೊಳ್ಳುವರು.

ಈ ಅಭಿಷೇಕವು ಮಾತ್ರವೇ ನಮ್ಮ ನಾಡಿನಲ್ಲಿ ವೈರಿಯ ನೊಗವನ್ನು ಮುರಿದು ಹಾಕಲು ಸಮರ್ಥವಾಗಿದೆ (ಯೆಶಾಯ 10:27). ಯೇಸುವಿನ ಹೆಸರು ನಮ್ಮ ವಶಕ್ಕೆ ಒಪ್ಪಿಸಲ್ಪಟ್ಟಿದೆ. ಆದರೆ ಈ ಅಭಿಷೇಕವನ್ನು ನಾವು ಹೊಂದಿದ್ದೇವೋ?

ಓ! ನಮ್ಮ ಜೀವನ ಮತ್ತು ನಮ್ಮ ಸೇವೆಯಲ್ಲಿ ದೇವರ ನಾಮವನ್ನು ಮಹಿಮೆ ಪಡಿಸುವಂತೆ, ಆತನ ಚಿತ್ತವನ್ನು ನೆರವೇರಿಸುವಂತೆ, ಮತ್ತು ಆತನ ರಾಜ್ಯವನ್ನು ಬರಮಾಡುವಂತೆ, ಪವಿತ್ರಾತ್ಮನ ಶಕ್ತಿಗಾಗಿ ನಮ್ಮಲ್ಲಿ ದಾಹವು ಅವಶ್ಯವಾಗಿ ಉಂಟಾಗಲಿ!

ನಮ್ಮ ಮಧ್ಯದಲ್ಲಿ ಪರಿಶುದ್ಧರು, ದೀನರು, ಮತ್ತು ಅಭಿಷಿಕ್ತರಾದ ದೇವರ ಸ್ತ್ರೀ-ಪುರುಷರಾಗಲು ಕೊಡಬೇಕಾದ ಬೆಲೆಯನ್ನು ನೀಡಲು ಸಿದ್ಧರಾಗಿರುವ ಅನೇಕರನ್ನು ಆತನು ಕಂಡುಕೊಳ್ಳಲಿ. ಆಮೆನ್.

ಅಧ್ಯಾಯ 5
ಒಂದು ಪ್ರಾರ್ಥನೆ

ನಮ್ಮ ಪ್ರಸ್ತುತ ಸಂತಾನದವರು ಕಂಡಿರುವ ಕೆಲವೇ ಪ್ರವಾದಿಗಳಲ್ಲಿ ಒಬ್ಬರಾದ ದಿವಂಗತ ಎ.ಡಬ್ಲ್ಯು.ಟೋಝರ್‌ರವರು ಬರೆದಿರುವ ಪ್ರಾರ್ಥನೆ ಇಲ್ಲದೆ, ಈ ಧ್ಯಾನಗಳ ಸರಣಿಯನ್ನು ಮುಗಿಸುವುದು ಅಷ್ಟು ಯುಕ್ತವಲ್ಲವೆಂದು ನಾನು ಯೋಚಿಸುತ್ತೇನೆ.

ಇದರ ತಲೆಬರಹ ಹೀಗಿದೆ: ’ಒಬ್ಬ ಚಿಕ್ಕ ಪವಾದಿಯ ಪ್ರಾರ್ಥನೆ’ “ಓ ಕರ್ತನೆ, ನಾನು ನಿನ್ನ ಸ್ವರವನ್ನು ಕೇಳಿ ಭಯಗೊಂಡಿದ್ದೇನೆ. ನೀನು ಇಂಥಹ ಅಪಾಯಕಾರಕ ಮತ್ತು ಕಷ್ಟದ ಘಳಿಗೆಯಲ್ಲಿ ನನ್ನನ್ನು ಈ ಗಂಭೀರವಾದ ಕೆಲಸಕ್ಕೆ ಕರೆದಿರುವಿ. ನೀನು ಎಲ್ಲಾ ರಾಷ್ಟ್ರಗಳನ್ನೂ, ಭೂಮಿಯನ್ನೂ ಮಾತ್ರವಲ್ಲದೆ ಪರಲೋಕವನ್ನೂ ನಡುಗಿಸುವಿ. ಆಗ ಕದಲದ ವಸ್ತುಗಳು ಮಾತ್ರ ಉಳಿಯುವವು. ಓ ಕರ್ತನೆ, ನಮ್ಮ ಕರ್ತನೇ, ನಿನ್ನ ಸೇವಕನೆಂಬ ಗೌರವಕ್ಕೆ ನನ್ನನ್ನು ಒಳಪಡಿಸಿದ್ದಿ. ಯಾವ ಮನುಷ್ಯನೂ ಈ ಗೌರವವನ್ನು ತಾನಾಗಿ ತೆಗೆದುಕೊಳ್ಳಲಾರನು. ಆರೋನನಂತೆ ದೇವರಿಂದ ಕರೆದವರನ್ನೇ ಆತನು ರಕ್ಷಿಸುತ್ತಾನೆ. ಕಠಿಣ ಹೃದಯಗಳಿಗೂ, ಕಿವಿಕೇಳದ ಮೊಂಡರಿಗೂ ನಿನ್ನ ದೂತನನ್ನಾಗಿ ನನ್ನನ್ನು ನೇಮಿಸಿದ್ದಿ. ನೀನು ಒಡೆಯನಾಗಿದ್ದಾಗ್ಯೂ ನಿನ್ನವರು ನಿನ್ನನ್ನು ನಿರಾಕರಿಸಿದ್ದಾರೆ, ಅವರು ನಿನ್ನ ಸೇವಕನಾದ ನನ್ನನ್ನು ಅಂಗೀಕರಿಸುವರೆಂಬ ಭರವಸೆ ಇಲ್ಲವಾಗಿದೆ.

”ನನ್ನ ದೇವರೇ, ಈ ಕಾರ್ಯಕ್ಕಾಗಿ, ನನ್ನ ಬಲಹೀನತೆಯಲ್ಲಿ ಇಲ್ಲವೇ ಅಯೋಗ್ಯತೆಗಾಗಿ ಶೋಕಿಸುತ್ತಾ ಸಮಯವನ್ನು ಕಳೆಯಲಾರೆ. ಈ ಜವಾಬ್ದಾರಿಯು ನನ್ನದಲ್ಲ ಆದರೆ ನಿನ್ನದು. ನೀನು ಹೇಳಿದ್ದಿ “ನಾನು ನಿನ್ನನ್ನು ಬಲ್ಲೆನು - ನಾನು ನಿನ್ನನ್ನು ನೇಮಿಸಿದ್ದೇನೆ - ನಾನು ನಿನ್ನನ್ನು ಶುದ್ಧ ಪಡಿಸಿದ್ದೇನೆ” ಮತ್ತು ನೀನು ಇನ್ನೂ ಹೇಳಿದ್ದೇನೆಂದರೆ “ನಾನು ನಿನ್ನನ್ನು ಕಳುಹಿಸುವಲ್ಲೆಲ್ಲಾ ನೀನು ಹೋಗತಕ್ಕದ್ದು, ಮತ್ತು ನಾನು ಏನನ್ನು ಆಜ್ಞಾಪಿಸುತ್ತೇನೋ ಅದನೆಲ್ಲಾ ನೀನು ಮಾತನಾಡತಕ್ಕದ್ದು” ಎಂದು. ನಿನ್ನೊಂದಿಗೆ ತರ್ಕಮಾಡಲು, ನಿನ್ನ ಸರ್ವ ಸ್ವತಂತ್ರವುಳ್ಳ ಆರಿಸಿಕೊಳ್ಳುವ ಕರೆಯನ್ನು ಪ್ರಶ್ನಿಸಲು ನಾನು ಯಾರು? ತೀರ್ಮಾನವು ನನ್ನದಲ್ಲ, ಆದರೆ ನಿನ್ನದು. ಆದ್ದರಿಂದ ಹಾಗೇ ಆಗಲಿ! ಕರ್ತನೆ, ನನ್ನ ಚಿತ್ತವಲ್ಲ, ನನ್ನ ಚಿತ್ತವಲ್ಲ, ನಿನ್ನ ಚಿತ್ತವೇ ನೆರವೇರಲಿ.

”ಪ್ರವಾದಿಗಳ ಮತ್ತು ಅಪೊಸ್ತಲರ ದೇವರಾದ ನೀನು ಎಲ್ಲಿಯ ವರೆಗೆ ನಾನು ನಿನ್ನನ್ನು ಸನ್ಮಾನಿಸುತ್ತೇನೋ, ನೀನೂ ನನ್ನನ್ನು ಸನ್ಮಾನಿಸುತ್ತೀ, ಎಂದು ನಾನು ತಿಳಿದುಕೊಂಡಿದ್ದೇನೆ. ಆದ್ದರಿಂದ ನಿನ್ನನ್ನು ಸನ್ಮಾನಿಸುವ ಈ ವಿಧಿಯುಕ್ತವಾದ ಪ್ರತಿಜ್ಞೆಯನ್ನು, ನನ್ನ ಎಲ್ಲಾ ಭವಿಷ್ಯತ್ ಜೀವಿತದಲ್ಲಿ ಮತ್ತು ಶ್ರಮ ಕಾರ್ಯಗಳಲ್ಲಿ, ಲಾಭವಾದರೂ ಇಲ್ಲವೇ ನಷ್ಟವಾದರೂ, ಜೀವವಿದ್ದರೂ ಅಥವಾ ಮರಣವಾದರೂ, ನಾನು ಜೀವಿಸಿರುವವರೆಗೂ ಈ ಪ್ರತಿಜ್ಞೆಯನ್ನು ಮುರಿಯದೆ ಕಾಪಾಡಿಕೊಳ್ಳುವುದಕ್ಕೆ ನನಗೆ ಸಹಾಯ ಮಾಡು''.

”ಓ ದೇವರೇ, ನಿನ್ನ ಕಾರ್ಯ ಮಾಡಲು ಸಮಯವಿದು ಯಾಕಂದರೆ, ವೈರಿಯು ನಿನ್ನ ಹುಲ್ಲುಗಾವಲುಗಳನ್ನು ಪ್ರವೇಶಿಸಿದ್ದಾನೆ, ಕುರಿಗಳು ಬಾಧೆಪಟ್ಟು ಚದುರಿ ಹೋಗಿವೆ. ನಿನ್ನ ಮಂದೆಗಳನ್ನು ಸುತ್ತುವರೆದ ಅಪಾಯವನ್ನೂ ಮತ್ತು ಭಯವನ್ನೂ ನಿರಾಕರಿಸಿ, ಹೆಚ್ಚಾಗಿರುವ ಸುಳ್ಳು ಕುರುಬರು ನಗುತ್ತಿದ್ದಾರೆ. ಈ ಕೂಲಿಯಾಳುಗಳಿಂದ ಕುರಿಗಳು ಮೋಸಹೋಗಿ ನಿಷ್ಠೆಯನ್ನು ಪ್ರತಿಪಾದಿಸುತ್ತಾ ಅವರನ್ನು ಹಿಂಬಾಲಿಸುವಾಗ, ತೋಳಗಳು ಕೊಂದು ನಾಶಮಾಡಿ ಮುಗಿಸಿ ಬಿಡುತ್ತವೆ. ನಿಜವಾದ ಮತ್ತು ಸುಳ್ಳಾದ ಸ್ನೇಹಿತರ ವ್ಯತ್ಯಾಸವನ್ನು ತಿಳಿಯಲು ತಿಳುವಳಿಕೆಯನ್ನು ನನಗೆ ಕೊಡು, ವೈರಿಯ ಸಮಸ್ತವನ್ನು ಶೋಧಿಸಲು ನನಗೆ ತೀಕ್ಷ್ಣವಾದ ಕಣ್ಣುಗಳನ್ನು ಕೊಡು, ಎಂದು ನಾನು ನಿನ್ನನ್ನು ಪ್ರಾರ್ಥಿಸುತ್ತೇನೆ. ನಾನು ನೋಡುವಂತೆ ಮತ್ತು ನಾನು ನೋಡಿದ್ದನ್ನು ಧೈರ್ಯದಿಂದಲೂ ಮತ್ತು ನಂಬಿಗಸ್ತಿಕೆಯಿಂದಲೂ ವರದಿ ಮಾಡಲು ನನಗೆ ದರ್ಶನವನ್ನು ಕೊಡು. ನನ್ನ ಸ್ವರವನ್ನು ನಿನ್ನ ಸ್ವರದಂತೆಯೇ ಮಾಡು, ಆಗ ಅನಾರೋಗ್ಯದಲ್ಲಿರುವ ಕುರಿಗಳು ಅದನ್ನು ಗುರಿತಿಸಿ, ನಿನ್ನನ್ನು ಹಿಂಬಾಲಿಸುತ್ತವೆ.

”ಕರ್ತನಾದ ಯೇಸುವೇ, ನಾನು ಆತ್ಮಿಕ ಸಿದ್ಧತೆಗಾಗಿ ನಿನ್ನ ಬಳಿಗೆ ಬಂದಿದ್ದೇನೆ. ನಿನ್ನ ಕೈಯನ್ನು ನನ್ನ ಮೇಲಿಡು. ಹೊಸ ಒಡಂಬಡಿಕೆಯ ಪ್ರವಾದಿಯ ಎಣ್ಣೆಯಿಂದ ನನ್ನನ್ನು ಅಭಿಷೇಕಿಸು. ನಾನೊಬ್ಬ ಕೇವಲ ಧಾರ್ಮಿಕ ಬರಹಗಾರನಾಗಿರುವುದನ್ನು ತಡೆದು, ನನ್ನ ಪ್ರವಾದನಾ ಕರೆಯುವಿಕೆಯನ್ನು ಕಳೆದುಕೊಳ್ಳದಂತೆ ಕಾಪಾಡು. ರಾಜಿ ಮಾಡಿಕೊಳ್ಳುವ, ನಕಲು ಮಾಡುವ ಶಾಪ, ಇಂದಿನ ವೈದಿಕರ ಮುಖದ ಮೇಲೆ ಬಿದ್ದಿರುವ ಎಲ್ಲಾ ರೀತಿಯ ಶಾಪ ಮತ್ತು ಕತ್ತಲೆಯಿಂದ ನನ್ನನ್ನು ರಕ್ಷಿಸು. ಒಂದು ಸಭೆಯ ಗಾತ್ರ, ಅದರ ಪ್ರಸಿದ್ದಿ, ಹಾಗೂ ಅದರ ವಾರ್ಷಿಕ ಕಾಣಿಕೆಯ ಮೊತ್ತ, ಇವುಗಳ ಮೂಲಕ ತೀರ್ಪು ಮಾಡುವಂಥ ತಪ್ಪಿನಿಂದ ರಕ್ಷಿಸು. ನಾನೊಬ್ಬ ಪ್ರವಾದಿ, ಕೇವಲ ಪ್ರೊತ್ಸಾಹಕಾರನಲ್ಲ, ಧಾರ್ಮಿಕ ವ್ಯವಸ್ಥಾಪಕನಲ್ಲ - ಆದರೆ ನಾನೊಬ್ಬ ಪ್ರವಾದಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಾಯಮಾಡು. ನಾನೆಂದೂ ಜನ ಸಮೂಹದ ಗುಲಾಮನಾಗದಿರಲಿ. ಶರೀರದ ಹಿರಿಯಾಶೆಗಳಿಂದ ನನ್ನನ್ನು ಗುಣಪಡಿಸು ಮತ್ತು ಪ್ರಸಿದ್ಧಿಗೆ ಬರಬೇಕೆಂಬ ಕಜ್ಜಿಯಂತಿರುವ ಆಶೆಯಿಂದ ನನ್ನನ್ನು ಬಿಡುಗಡೆ ಮಾಡು. ಪ್ರಾಪಂಚಿಕ ವಸ್ತುಗಳ ಬಂಧನದಲ್ಲಿರದಂತೆ ಕಾಪಾಡು. ಮನೆಯಲ್ಲೇ ಸುತ್ತಾಡುತ್ತಾ ನನ್ನ ಸಮಯವನ್ನು ನಾನು ಹಾಳು ಮಾಡಿಕೊಳ್ಳದಿರಲಿ. ಓ, ದೇವಾ, ನಿನ್ನ ಭಯವು ಯಾವಾಗಲೂ ನನ್ನಲ್ಲಿರಲಿ ಮತ್ತು ನಾನು ಈ ಲೋಕದ ಅಂಧಕಾರದ ದೊರೆತನ, ಅಧಿಕಾರ, ಹಾಗೂ ಶಕ್ತಿಗಳ ವಿರುದ್ಧ ಹೊರಾಡಲು ಪ್ರಾರ್ಥನೆಯ ಸ್ಥಳಕ್ಕೆ ನನ್ನನ್ನು ನಡೆಸು. ಹೆಚ್ಚು ತಿನ್ನುವದರಿಂದಲೂ ಮತ್ತು ಹೊತ್ತು ಮೀರಿ ಮಲಗುವದರಿಂದಲೂ ಬಿಡುಗಡೆ ಮಾಡು. ನಾನು ಒಬ್ಬ ಶಿಸ್ತು ಪಾಲಕನಾಗಿ, ಯೇಸು ಕ್ರಿಸ್ತನ ಒಬ್ಬ ಒಳ್ಳೆಯ ಸೈನಿಕನಾಗುವದನ್ನು ಕಲಿಸು.

”ನಾನು ನನ್ನ ಜೀವಿತದಲ್ಲಿ ಕಠಿಣ ಕೆಲಸಗಳನ್ನು ಸ್ವೀಕರಿಸಿ ಚಿಕ್ಕ ಪ್ರತಿಫಲಗಳನ್ನು ಅಪೇಕ್ಷಿಸುತ್ತೇನೆ. ನಾನು ಸುಲಭ ದಾರಿಯನ್ನು ಕೇಳುವುದಿಲ್ಲ. ನನ್ನ ಜೀವಿತವನ್ನು ಸುಲಭಗೊಳಿಸುವ ಚಿಕ್ಕ ಮಾರ್ಗಗಳನ್ನು ನನ್ನ ಕಣ್ಣುಗಳು ನೋಡದೇ ಇರಲು ನಾನು ಪ್ರಯತ್ನಿಸುತ್ತೇನೆ. ಬೇರೆಯವರು ಸರಳ ಮಾರ್ಗವನ್ನು ಆರಿಸುವಾಗ ಅವರನ್ನು ಕ್ರೂರವಾಗಿ ತೀರ್ಪುಮಾಡದೆ ನಾನು ಮಾತ್ರ ಕಠಿಣವಾದ ಮಾರ್ಗವನ್ನು ಆರಿಸಲು ಪ್ರಯತ್ನಿಸುತ್ತೇನೆ. ನಾನು ವಿರೋಧಗಳನ್ನು ನಿರೀಕ್ಷಿಸಿ ಅವುಗಳನ್ನು ಮೌನವಾಗಿ ಸ್ವೀಕರಿಸಲು ಪ್ರಯತ್ನಿಸುತ್ತೇನೆ. ಇಲ್ಲವೆ, ಕೆಲ ಸಮಯಗಳಲ್ಲಿ ನಿನ್ನ ದಯಾವಂತ ಜನರಿಂದ ಕೃತಜ್ಞತಾ ದಾನಗಳು, ನಿನ್ನ ಹಲವಾರು ಸೇವಕರಿಗೆ ಬಂದಂತೆ, ನನ್ನಲ್ಲಿಗೂ ಬಂದು ಬೀಳಬಹುದು. ಆದರೆ ಇದು ನನ್ನನ್ನು ನಾಶ ಮಾಡದಂತೆ ಕಾಪಾಡು. ಈ ರೀತಿಯಾಗಿ ನಾನು ಯಾವುದನ್ನು ಸ್ವೀಕರಿಸಿದರೂ, ಅದು ನನ್ನ ಆತ್ಮವನ್ನು ಬಾಧಿಸದಂತೆ, ನನ್ನ ಆತ್ಮಿಕ ಶಕ್ತಿಯನ್ನು ಕುಗ್ಗಿಸದಂತೆ ಉಪಯೋಗಿಸುವುದನ್ನು ನನಗೆ ಕಲಿಸು. ನಿನ್ನ ಅಪ್ಪಣೆಯ ದೈವಾನುಗ್ರಹವು ನಿನ್ನ ಸಭೆಯಿಂದ ನನಗೆ ಬರುವಾಗ, ಆ ಘಳಿಗೆಯಲ್ಲಿ ನಿನ್ನ ಕರುಣೆಯನ್ನು ಹೊಂದಲು ನಾನು ಅಯೋಗ್ಯನು ಎಂದು ನಾನು ಮರೆಯದಿರಲಿ. ನಾನು ನನ್ನನ್ನು ತಿಳಿದುಕೊಂಡಂತೆ, ಇತರರು ನನ್ನ ಹತ್ತಿರದ ಪರಿಚಯದವರು ಅರ್ಥ ಮಾಡಿಕೊಳ್ಳುವುದಾದರೆ, ಅವರು ನನಗೆ ಸಲ್ಲಿಸುವ ಗೌರವವನ್ನು ನಿಲ್ಲಿಸಿ, ಅದನ್ನು ಹೊಂದಲು ಹೆಚ್ಚು ಯೋಗ್ಯರಾದ ಇತರರಿಗೆ ಅದನ್ನು ಸಲ್ಲಿಸುವರು.

”ಓ, ದೇವರೇ, ಭೂಲೋಕ ಮತ್ತು ಪರಲೋಕಗಳ ಒಡೆಯನೇ, ಈಗ ನನ್ನ ಉಳಿದಿರುವ ದಿನಗಳನ್ನು ನಿನಗೆ ಅರ್ಪಿಸುತ್ತೇನೆ. ನಿನ್ನಿಚ್ಛೆಯಂತೆ ಅವು ಹೆಚ್ಚಾದರೂ ಇರಲಿ, ಕಡಿಮೆಯಾದರೂ ಇರಲಿ. ನಾನು ಶ್ರೇಷ್ಠ ಅಥವಾ ಬಡವರ ಮತ್ತು ದೀನರ ಮುಂದೆ ನಿಂತು ಸೇವೆ ಮಾಡುವ ಆಯ್ಕೆ ನನ್ನದಲ್ಲ ಮತ್ತು ಒಂದು ವೇಳೆ ಸಾಧ್ಯವಿದ್ದರೂ ನಾನು ಪ್ರಭಾವ ಬೀರದೆ ಇರಬಹುದು. ನಾನು ನಿನ್ನ ಚಿತ್ತವನ್ನು ನೆರವೇರಿಸುವ ನಿನ್ನ ಸೇವಕನು ಮತ್ತು ಆ ನಿನ್ನ ಚಿತ್ತವು, ಎಲ್ಲಾ ಅಧಿಕಾರಕ್ಕಿಂತಲೂ, ಐಶ್ವರ್ಯಕ್ಕಿಂತಲೂ, ಅಥವಾ ಕೀರ್ತಿಗಿಂತಲೂ ಸಿಹಿಯಾಗಿದೆ. ಅದನ್ನು ನಾನು ಭೂಲೋಕ ಅಥವಾ ಪರಲೋಕಗಳಿಗಿಂತಲೂ ಹೆಚ್ಚಾಗಿ ಆಯ್ಕೆ ಮಾಡಿದ್ದೇನೆ.

”ನಾನು ನಿನ್ನಿಂದ ಗೌರವಹೊಂದಿ, ಉನ್ನತವಾದ ಪರಿಶುದ್ಧವಾದ ಕರೆಯುವಿಕೆಗಾಗಿ ಆರಿಸಲ್ಪಟ್ಟಿದ್ದರೂ, ನಾನೊಬ್ಬ ಮನುಷ್ಯನೂ, ಮಣ್ಣುಬೂದಿಯೂ, ಎಲ್ಲಾ ಸ್ವಾಭಾವಿಕ ತಪ್ಪುಗಳಿಂದಲೂ, ಮನುಷ್ಯ ಜಾತಿಯ ಮಾರಿಬೇನೆಯಂತಿರುವ ಶಾರೀರಿಕ ಅಭಿಲಾಷೆಗಳು ನನ್ನಲ್ಲಿವೆ ಎಂಬುದನ್ನು ನಾನೆಂದೂ ಮರೆಯದಿರಲಿ. ಆದ್ದರಿಂದ ಕರ್ತನೇ, ನನ್ನ ವಿಮೋಚಕನೇ, ನಾನು ಇತರರಿಗೆ ಆಶೀರ್ವಾದಪ್ರದನಾಗಲು ಪ್ರಯತ್ನಿಸುವಾಗ ನಾನು ನಾನಾಗಿ ಮಾಡಿಕೊಳ್ಳುವ ಎಲ್ಲಾ ಕೇಡುಗಳಿಂದಲೂ ನನ್ನನ್ನು ರಕ್ಷಿಸು ಎಂದು ಪ್ರಾರ್ಥಿಸುತ್ತೇನೆ. ಪವಿತ್ರಾತ್ಮನ ಮೂಲಕ ನಿನ್ನ ಬಲದಿಂದ ನನ್ನನ್ನು ತುಂಬಿಸು ಮತ್ತು ನಾನು ನಿನ್ನ ನೀತಿಯನ್ನು ಮಾತ್ರವೇ ಹೇಳಲು ನಿನ್ನ ಶಕ್ತಿಯಿಂದ ಹೋಗುತ್ತೇನೆ. ನನ್ನ ಸಹಜ ಶಕ್ತಿಯು ಇರುವವರೆಗೆ ಬಿಡುಗಡೆಯ ಪ್ರೀತಿಯ ಸಂದೇಶವನ್ನು ಎಲ್ಲಾ ಕಡೆಗಳಲ್ಲಿಯೂ ಸಾರುವೆನು.

”ನಂತರ, ಪ್ರಿಯ ಕರ್ತನೇ, ಮುಂದುವರೆಸಲು ಕಷ್ಟವಾದಾಗ, ಮುಪ್ಪಿನಿಂದ ದಣಿದಿರುವಾಗ, ನನಗೋಸ್ಕರ ಒಂದು ಸ್ಥಳವನ್ನು ಉನ್ನತದಲ್ಲಿ ಸಿದ್ಧಪಡಿಸು ಮತ್ತು ನಿನ್ನ ಸದ್ಭಕ್ತರೊಂದಿಗೆ ನಿತ್ಯ ಮಹಿಮೆಯಲ್ಲಿ ಸೇರುವಂತೆ ನನ್ನನ್ನು ಎಣಿಸು. ಆಮೆನ್”

(“ಎ.ಡಬ್ಲು.ಟೋಝರ್” ನಲ್ಲಿ ಡೇವಿಡ್ ಜೆ, ಫಾಂಟ್ ಜೂನಿಯರ್‌ರವರು ಉಲ್ಲೇಖಿಸಿದ್ದು). ಇದೇ ನಿಮ್ಮ ಮತ್ತು ನನ್ನ ಹೃದಯದ ಪ್ರಾರ್ಥನೆಯಾಗಿರಲಿ!