ಹೊಸ ವರ್ಷಕ್ಕಾಗಿ ರಸ್ತೆ ನಿಯಮಗಳು

ಬರೆದಿರುವವರು :   Santosh Poonen ಭಾಗಗಳು :   ಯೌವನಸ್ಥರಿಗೆ ಶಿಷ್ಯಂದಿರಿಗೆ
Article Body: 

"ನಮ್ಮ ಭೂಲೋಕದ ಜೀವಿತದ ದಿನಗಳು ಬಹಳ ಬೇಗನೆ ಗತಿಸಿಹೋಗುತ್ತವೆ; ನಾವು ಈ ಲೋಕದಿಂದ ಹಾರಿ ಹೋಗುತ್ತೇವೆ. ನಮ್ಮ ದಿನಗಳು ಕೊಂಚವೇ ಎಂದು ತಿಳಿದು ಅವುಗಳನ್ನು ಎಣಿಸಿಕೊಳ್ಳುವಂತೆ ನಮಗೆ ಕಲಿಸು; ಆಗ ನಾವು ನಿನಗೆ ಜ್ಞಾನದ ಹೃದಯಗಳನ್ನು ಸಮರ್ಪಿಸಲು ಸಾದ್ಯವಾಗಬಹುದು" (ಕೀರ್ತನೆಗಳು 90:2,4,10,12).

ನಾವು ಮತ್ತೊಂದು ವರ್ಷದ ಕೊನೆಯನ್ನು ತಲುಪುತ್ತಿದ್ದೇವೆ. ಮೇಲಿನ ಕೀರ್ತನೆಯ ವಚನಗಳಲ್ಲಿ ಹೇಳಿರುವ ಹಾಗೆ, ಈ ಭೂಲೋಕದ ನಮ್ಮ ಜೀವಿತದ ಸಮಯ ಎಷ್ಟು ಕಡಿಮೆಯಿದೆ, ಮತ್ತು ಉಳಿದಿರುವ ಜೀವಿತದ ಪ್ರತಿಯೊಂದು ಕ್ಷಣವೂ ಎಷ್ಟು ಪ್ರಾಮುಖ್ಯವಾದದ್ದು, ಎಂಬುದನ್ನು ನಾವು ನೆನಪಿಸಿಕೊಳ್ಳುವ ಒಂದು ಉತ್ತಮ ಅವಕಾಶ ಇದಾಗಿದೆ.

ನೀವು ಮುಂದಿನ ಹೊಸ ವರ್ಷದ ದಾರಿಯಲ್ಲಿ ಹೇಗೆ ಸಾಗಬೇಕು ಎಂಬುದನ್ನು ಯೋಚಿಸುತ್ತಿರುವಾಗ, ಜೀವನದಲ್ಲಿ ನೀವು ಅಳವಡಿಸಿಕೊಂಡು ಪಾಲಿಸಬೇಕಾದ ನಾಲ್ಕು ತುಂಬಾ ಸರಳ ರಸ್ತೆ ಸಂಚಾರದ ನಿಯಮಗಳು ಇಲ್ಲಿವೆ:

1. ಕೆಂಪು ದೀಪವಿದ್ದಲ್ಲಿ ನಿಂತುಕೊಳ್ಳಿರಿ

ನಮಗೆ ರಸ್ತೆಯಲ್ಲಿ ಯಾವಾಗಲೂ ಹಸಿರು ದೀಪಗಳೇ ಸಿಗುತ್ತವೆಂದು ಭಾವಿಸಿ (ಅಂದರೆ ನಾವು ಏನು ಬೇಕಾದರೂ ಮಾಡಬಹುದು, ಅಂದುಕೊಂಡು), ಅವಸರದಿಂದ ಜೀವನದಲ್ಲಿ ಮುನ್ನುಗ್ಗುವ ಪ್ರವೃತ್ತಿ ನಮ್ಮದಾಗಿದೆ. ಇದಕ್ಕೆ ಬದಲಾಗಿ, ನಾವು ಯಾವ ಕಡೆಗೆ ತಿರುಗಬೇಕೆಂದು ನಿರ್ಧರಿಸಬೇಕಾದ ರಸ್ತೆಯ ಜಂಕ್ಷನ್ನಿಗೆ ಬಂದಾಗ, ಒಂದು ಕ್ಷಣ ಶಾಂತವಾಗಿ ನಿಲ್ಲೋಣ ಮತ್ತು ದೇವರಿಗೆ ಅರಿಕೆಮಾಡೋಣ. ನಾವು ಯಾವ ರಸ್ತೆಯಲ್ಲಿ ಹೋಗಬೇಕೆಂದು ಅವರನ್ನು ಕೇಳಿದರೆ, ಅವರು ಉತ್ತರಿಸಿ ನಮಗೆ ಸರಿಯಾದ ಮಾರ್ಗವನ್ನು ತೋರಿಸುತ್ತಾರೆ (ಯೆಶಾಯನು 30:21'ನ್ನು ಓದಿಕೊಳ್ಳಿರಿ), ಮತ್ತು ನಾವು ಹೋಗಬೇಕಾದ ಮಾರ್ಗಗಳನ್ನು ಅವರು ಸರಾಗ ಮಾಡುತ್ತಾರೆ (ಜ್ಞಾನೋಕ್ತಿಗಳು 3:6). ಮತ್ತೊಂದು ಕಡೆ, ದೇವರು ದೀಪವನ್ನು ಹಸಿರು ಬಣ್ಣಕ್ಕೆ ತಿರುಗಿಸುವುದಕ್ಕಾಗಿ ನಾವು ಕಾಯದಿದ್ದರೆ, ನಮ್ಮ ಪ್ರಯಾಣವು ಒಂದು ಅಪಘಾತದಲ್ಲಿ ಕೊನೆಗೊಳ್ಳುತ್ತದೆ.

2. ಹಸಿರು ದೀಪವಿರುವಲ್ಲಿ ನಿಲ್ಲಬೇಡಿರಿ

ನಾವು ನಮ್ಮನ್ನೇ ನಿರಾಕರಿಸಿ, ನಮ್ಮ ಶಿಲುಬೆಯನ್ನು ಹೊತ್ತುಕೊಂಡು ಯೇಸುವನ್ನು ಹಿಂಬಾಲಿಸುವಂತ ಪ್ರತಿಯೊಂದು ಅವಕಾಶವೂ ಒಂದು ಹಸಿರು ದೀಪವಾಗಿದೆ ಮತ್ತು ನಾವು ಇಂತಹ ಸಂದರ್ಭಗಳಲ್ಲಿ ಯಾವಾಗಲೂ ತಡಮಾಡದೆ ಮುಂದುವರಿಯಬೇಕು. ಯಾರೊಂದಿಗಾದರೂ ಕೆಟ್ಟುಹೋಗಿರುವ ಸಂಬಂಧಗಳನ್ನು ಸರಿಪಡಿಸಿಕೊಳ್ಳುವುದಕ್ಕಾಗಿ ನಾವು ಒಂದು ಸೇತುವೆಯನ್ನು ಕಟ್ಟಬಹುದಾದ ಪ್ರತಿಯೊಂದು ಅವಕಾಶವೂ ಒಂದು ಹಸಿರು ದೀಪವಾಗಿದೆ ಮತ್ತು ಅಲ್ಲಿ ನಾವು ಯಾವಾಗಲೂ ತಡಮಾಡದೆ ಮುಂದುವರಿಯಬೇಕು (ರೋಮಾ. 12:18). ನಾವು ಕ್ರಿಸ್ತನಲ್ಲಿ ಯಥಾರ್ಥವಾಗಿ ನೂತನ ಸೃಷ್ಟಿಯಾಗಿ ಬದಲಿಸಲ್ಪಟ್ಟಿದ್ದೇವೆ ಎಂಬುದರ ಒಂದು ರುಜುವಾತು ಏನೆಂದರೆ, ನಾವು "ಸಮಾಧಾನ ಪಡಿಸುವವರು" ಆಗುತ್ತೇವೆ (2 ಕೊರಿ. 5:17-20). ನಾವು ಯಾರೊಂದಿಗಾದರೂ ಕ್ಷಮೆ ಕೇಳಿ ಉತ್ತಮ ಸಂಬಂಧವನ್ನು ಮತ್ತೊಮ್ಮೆ ಬೆಳೆಸುವ ಅವಕಾಶ ನಮಗೆ ಒದಗಿದಾಗ - ನಮ್ಮ ಗರ್ವದಿಂದಾಗಿ, ಅಥವಾ ನಮ್ಮನ್ನು ಸಮರ್ಥಿಸಿಕೊಳ್ಳುವುದರ ಮೂಲಕ, ಅಥವಾ ಅವರನ್ನು ದೂಷಿಸುವುದರ ಮೂಲಕ - ನಾವು ತಡ ಮಾಡಿದರೆ ಆಗ ನಾವು ಹಸಿರು ದೀಪ ಸಿಕ್ಕಿದರೂ ರಸ್ತೆಯಲ್ಲಿ ಮುಂದುವರಿಯದೇ ನಿಂತಂತೆ ಆಗುತ್ತದೆ. ನಾವು ಹೀಗೆ ಮಾಡಿದರೆ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದೇವೆ, ಮತ್ತು ಅಂತಿಮವಾಗಿ, ನಾವು ಒಂದು ಅಪಘಾತಕ್ಕೆ ಒಳಗಾಗುತ್ತೇವೆ. ಇದಕ್ಕೆ ಬದಲಾಗಿ, ಹಸಿರು ದೀಪವಿರುವಲ್ಲಿ ನಾವು ಯಾವಾಗಲೂ ತಡಮಾಡದೆ ಮುಂದುವರಿಯೋಣ ಮತ್ತು ಸಮಾಧಾನ ಪಡಿಸುವವರಾಗೋಣ (ಮತ್ತಾ. 5:9).

ದೇವರು ದೀಪವನ್ನು ಹಸಿರು ಬಣ್ಣಕ್ಕೆ ತಿರುಗಿಸುವುದಕ್ಕಾಗಿ ನಾವು ಕಾಯದಿದ್ದರೆ, ನಮ್ಮ ಪ್ರಯಾಣವು ಒಂದು ಅಪಘಾತದಲ್ಲಿ ಕೊನೆಗೊಳ್ಳುತ್ತದೆ.

3. ರಸ್ತೆಯನ್ನು ಬಿಟ್ಟು ದೂರ ಸರಿಯಬೇಡಿರಿ

ನಾವು ದೇವರೊಂದಿಗೆ ಪ್ರಯಾಣಿಸುತ್ತಾ ಮುಂದೆ ಸಾಗುತ್ತಿರುವಾಗ, ರಸ್ತೆಯಿಂದ ನಮ್ಮನ್ನು ದೂರ ಸರಿಸಲಿಕ್ಕಾಗಿ ಸೈತಾನನು ಸದಾಕಾಲ ಪ್ರಯತ್ನಿಸುತ್ತಾನೆ. ಅನೇಕ ಹೂವುಗಳು ಮತ್ತು ಮರಗಳು (ಅಂದರೆ, ಬೇರೆ ಜನರ ಅಭಿಪ್ರಾಯಗಳು) ನಮ್ಮ ಗಮನವನ್ನು ರಸ್ತೆಯ ಅಕ್ಕಪಕ್ಕಕ್ಕೆ ಸೆಳೆಯುತ್ತವೆ. ಇತರರನ್ನು ಒಲಿಸುವ ಇಚ್ಛೆಗೆ, ಅಥವಾ ನಮ್ಮ ಬಗ್ಗೆ ಜನರು ಏನು ಯೋಚಿಸುತ್ತಾರೆಂಬ ಭಯಕ್ಕೆ ನಾವು ಆಸ್ಪದ ನೀಡಿದರೆ, ಆಗ ನಮ್ಮ ಮನಸ್ಸು ವಿಚಲಿತವಾಗುತ್ತದೆ (ಗಲಾತ್ಯದವರಿಗೆ 1:10), ಮತ್ತು ನಾವು ರಸ್ತೆಯನ್ನು ಬಿಟ್ಟು ಪಕ್ಕಕ್ಕೆ ಸರಿಯುತ್ತೇವೆ ಮತ್ತು ಒಂದು ಅಪಘಾತಕ್ಕೆ ಒಳಗಾಗುತ್ತೇವೆ. ನನ್ನ ತಂದೆಯವರು ನನಗೆ ಆಗಾಗ ಒತ್ತಿ ಹೇಳುತ್ತಿದ್ದ ಮಾತು, "ಜನರನ್ನು ಮೆಚ್ಚಿಸುತ್ತೀಯೋ ಅಥವಾ ಅವರನ್ನು ಆಶೀರ್ವದಿಸುತ್ತೀಯೋ ಎಂಬುದಾಗಿ ನೀನು ನಿಶ್ಚಯಿಸಬೇಕು. ಯಾವಾಗಲೂ ಅವರನ್ನು ಆಶೀರ್ವದಿಸುವುದಾಗಿ ನಿಶ್ಚಯಿಸು." ಜನರ ಮೆಚ್ಚುಗೆಯನ್ನು ಸಂಪಾದಿಸಲು ನೀನು ಪ್ರತಿಭಾವಂತನಾಗಿರಬೇಕು - ಇದಕ್ಕಾಗಿ ನೀನು ನಿನ್ನನ್ನು "ಹೆಚ್ಚಿಸಿಕೊಳ್ಳುವುದು" ಮುಖ್ಯವಾಗುತ್ತದೆ. ಆದರೆ ನೀನು ಅವರಿಗೆ ನಿಜವಾಗಿ ಸಹಾಯ ಮಾಡಬೇಕೆಂದು ಬಯಸಿದರೆ, ಆಗ ನಿನಗೆ ಪವಿತ್ರಾತ್ಮನ ಬಲ ಅವಶ್ಯವಾಗಿರುತ್ತದೆ - ಇದಕ್ಕಾಗಿ "ನೀನು" ಎನ್ನುವುದು ಕಡಿಮೆಯಾದಷ್ಟು ಒಳ್ಳೆಯದು (ಯೋಹಾ. 3:30)!

4. ರಸ್ತೆಯಲ್ಲಿ ನಿಮ್ಮ ಪಥದಲ್ಲೇ ಇರಿ

ದುರದೃಷ್ಟಕರ ಸಂಗತಿಯೆಂದರೆ, ಅನೇಕ ಜನರು ರಸ್ತೆಯಲ್ಲಿ ತಾವು ಹೋಗುತ್ತಿರುವ ಒಂದು ಪಥದಲ್ಲೇ ಇರುವುದನ್ನು ರೂಢಿ ಮಾಡಿಕೊಳ್ಳುವುದಿಲ್ಲ, ಮತ್ತು ಇದು ಅನೇಕ ಅಪಘಾತಗಳಿಗೆ ಕಾರಣವಾಗುತ್ತದೆ. ನಮ್ಮ ಕ್ರೈಸ್ತ ಜೀವಿತದಲ್ಲೂ ಸಹ, ದೇವರು ನಮ್ಮ ರಕ್ಷಣೆಗಾಗಿ ನಾವು ಚಲಿಸಬೇಕಾದ ಪಥಗಳನ್ನು (ನಿಯಮಿತ ಹಾದಿಗಳನ್ನು) ಗೆರೆಗಳನ್ನು ಹಾಕಿ ಗುರುತಿಸಿದ್ದಾರೆ. ನಮ್ಮ ಪಥದಲ್ಲಿ ಸಾಗುವುದು ಎಂದರೆ, ಯಾವಾಗಲೂ ನಮಗೆ ಕೊಡಲ್ಪಟ್ಟ ಕಾರ್ಯವನ್ನು ನಡೆಸಿಕೊಂಡು ಹೋಗುವುದು (1 ಥೆಸ. 4:11-12) ಮತ್ತು ಇತರರ ಕಾರ್ಯಗಳಲ್ಲಿ ತಲೆಹಾಕದಿರುವುದು (2 ಥೆಸ. 3:11; 1 ಪೇತ್ರ. 4:15). ನಮಗೆ ಸಂಬಂಧಿಸದ ವಿಷಯಗಳಿಗೆ ನಾವು ತಲೆಹಾಕುವುದು ಎಂದರೆ, ರಸ್ತೆಯಲ್ಲಿ ನಾವು ಹೋಗುತ್ತಿರುವ ಹಾದಿಯನ್ನು ಬಿಟ್ಟು ಬೇರೊಬ್ಬರು ಹೋಗುತ್ತಿರುವ ಪಕ್ಕದ ಹಾದಿಗೆ ನುಗ್ಗಿದಂತೆ ಇರುತ್ತದೆ. ಇದು ಅಂತಿಮವಾಗಿ ನಮ್ಮ ಸ್ವಂತ ಜೀವಕ್ಕೆ ಹಾನಿ ತಂದೊಡ್ಡುವುದು ಮಾತ್ರವಲ್ಲದೆ ನಮ್ಮ ಅಕ್ಕ ಪಕ್ಕದ ಇತರರ ಜೀವಕ್ಕೂ ಹಾನಿ ಮಾಡುತ್ತದೆ.

ಇನ್ನು ಕೊನೆಯದಾಗಿ: ನಾವು ನಿಧಾನವಾಗಿ ಚಲಿಸಿ, ನಮ್ಮ ಪ್ರಯಾಣವನ್ನು ತೆವಳುತ್ತಾ ಮುಂದುವರಿಸುವುದು ಬೇಡ. ಆದರೆ ಇದಕ್ಕೆ ಬದಲಾಗಿ, ನಾವು ಬಹಳ ವೇಗವಾಗಿ ಓಡುತ್ತಾ ಪರಲೋಕದ ಕಿರೀಟವನ್ನು ಗೆಲ್ಲೋಣ (1 ಕೊರಿ. 9:24)!

ಪ್ರತಿದಿನವೂ ದೇವರಿಂದ ಶ್ರೇಷ್ಠವಾಗಿ ಆಶೀರ್ವದಿಸಲ್ಪಟ್ಟಂತ ಒಂದು ಅತಿ ಶ್ರೇಷ್ಠ ಹೊಸ ವರ್ಷವು ನಿಮ್ಮೆಲ್ಲರಿಗೂ ಸಿಗಲೆಂದು ನಾವು ಹಾರೈಸುತ್ತೇವೆ!!