ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ತಿಳಿಯುವುದು
WFTW Body: 

ದೇವರು ನಮ್ಮ ವಿಭಿನ್ನ ಸ್ವಭಾವಗಳು ಹಾಗೂ ವರಗಳನ್ನು ಉಪಯೋಗಿಸಿ ಲೋಕಕ್ಕೆ ಕ್ರಿಸ್ತನ ಒಂದು ಸಮತೋಲನವುಳ್ಳ ಚಿತ್ರವನ್ನು ಪರಿಚಯಿಸುತ್ತಾನೆ. ನಾವು ಯಾರಾದರೂ ನಮ್ಮ ಸ್ವ-ಪ್ರಯತ್ನದ ಮೂಲಕ, ಒಂದು ವೇಳೆ ಕ್ರಿಸ್ತನ ಒಂದು ವಿರೂಪವಾದ, ಸಮತೋಲನವಿಲ್ಲದ ರೂಪವನ್ನು ಮಾತ್ರ ಪ್ರದರ್ಶಿಸಬಹುದು. ಯಾವನಾದರೂ ಒಬ್ಬ ವ್ಯಕ್ತಿಯ ಸ್ವ-ಸಾಮರ್ಥ್ಯದ ಸೇವೆಯು ಸಮತೋಲನವಿಲ್ಲದ ಕ್ರೈಸ್ತರನ್ನು ಉಂಟು ಮಾಡಬಹುದು. ಕ್ರಿಸ್ತನ ದೇಹದಲ್ಲಿ ವಿಭಿನ್ನ ಪ್ರಾಧಾನ್ಯತೆಗಳು ಹಾಗೂ ಭಿನ್ನವಾದ ಮಾನಸಿಕ ಪ್ರವೃತ್ತಿಗಳನ್ನು ಹೊಂದಿರುವ ಇತರರು ಇರುವದಕ್ಕಾಗಿ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು. ಉದಾಹರಣೆಗೆ, ಒಂದು ವೇಳೆ ಇಬ್ಬರು ಸಹೋದರರು ಒಂದೇ ಗುಂಪಿನ ವಿಶ್ವಾಸಿಗಳಿಗೆ ವಾಕ್ಯವನ್ನು ಕೊಡುತ್ತಿರುತ್ತಾರೆ ಮತ್ತು ಒಬ್ಬನು, ”ನೀವು ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಿದ್ದೀರಿ ಎಂದು ಅತಿ ನಿಶ್ಚಿತರಾಗಿ ಇರಬೇಡಿ, ನೀವು ನಿಮ್ಮನ್ನೇ ವಂಚಿಸಿಕೊಳ್ಳುತ್ತಾ ಇರಬಹುದು” ಎಂಬುದನ್ನು ಒತ್ತಿ ಹೇಳುತ್ತಾನೆ; ಹಾಗೆಯೇ ಮತ್ತೊಬ್ಬ ಸಹೋದರನು, “ನೀವು ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಿದ್ದಿರಿ ಎಂದು ಧೃಢವಾಗಿರ್ರಿ” ಎಂಬುದಕ್ಕೆ ಪ್ರಾಧಾನ್ಯತೆ ನೀಡುತ್ತಾನೆ. ಮೇಲ್ನೋಟಕ್ಕೆ ಇವರಿಬ್ಬರ ಮಾತುಗಳು ಪರಸ್ಪರ ವಿರೋಧವಾಗಿ ಇರುವಂತೆ ಕಾಣುತ್ತವೆ. ಆದರೆ ಇವೆರಡು ಪ್ರಾಧಾನ್ಯತೆಗಳೂ ಅಗತ್ಯವಾದವುಗಳು - ಹಾಗಾಗಿ ಇವರ ಸೇವೆಗಳು ಪರಸ್ಪರ ಪೂರಕವಾಗಿ ಇರಬಹುದು.

ನಾವು ಕ್ರಿಸ್ತನ ದೇಹದಲ್ಲಿ, ಕೆಲವು ವಿಷಯಗಳಿಗೆ ತಮ್ಮದೇ ಆದ ವಿಶಿಷ್ಟ ಒತ್ತು ನೀಡುವ ಕ್ಯಾಲವೆನಿಸ್ಟ್‌ಗಳು ಮತ್ತು ಅರ್‌ಮೇನಿಯನ್‌ಗಳು ಒಟ್ಟಾಗಿ ಕೆಲಸ ಮಾಡುವದನ್ನು ಕಾಣಬಹುದು - ಸತ್ಯವೇದದಲ್ಲಿ ಇಬ್ಬರ ದೃಷ್ಟಿಕೋನಗಳೂ ಇವೆ. ಒಂದು ಸಲ ಚಾರ್ಲ್ಸ್ ಸಿಮಿಯೋನ್ ಎಂಬವರು - “ಸತ್ಯವು ಮಧ್ಯದಲ್ಲೂ ಇಲ್ಲ, ಒಂದು ಕಟ್ಟಕಡೆಯಲ್ಲೂ ಇಲ್ಲ, ಆದರೆ ಎರಡು ತುತ್ತತುದಿಗಳಲ್ಲಿದೆ” ಎಂಬುದಾಗಿ ಹೇಳಿದ್ದಾರೆ. ಹಾಗಾಗಿ, ಎರಡು ತುತ್ತತುದಿಗಳನ್ನು ತೋರಿಸುವಂತಹ ಜನರ ಅಗತ್ಯತೆ ನಮಗಿದೆ.

ಅಷ್ಟೇ ಅಲ್ಲದೆ, ಇಲ್ಲಿ “ಲವಲವಿಕೆಯ” ವ್ಯಕ್ತಿತ್ವವುಳ್ಳವರ ಜೊತೆಗೆ "ಹಿಂದೆಗೆಯುವ" ವ್ಯಕ್ತಿತ್ವವುಳ್ಳವರಿಗೂ ಅವಕಾಶವಿದೆ. ವಿಭಿನ್ನ ಸ್ವಾಭಾವಿಕ ಪ್ರಕೃತಿಗಳು ಪರಸ್ವರ ಪೂರಕವಾಗಲು ಸಾಧ್ಯವಿದೆ. ಕೆಲವು ಜನರು ತುಂಬಾ ಎಚ್ಚರಿಕೆಯುಳ್ಳವರು ಆಗಿರಬಹುದು; ಇವರು ಬಹಳವಾಗಿ ವಿವೇಚಿಸದೇ ಮುಂದೆ ಹೆಜ್ಜೆ ಇಡಲಾರರು, ’ಪರ ಮತ್ತು ವಿರೋಧ’ ವಿಷಯಗಳನ್ನು ತೂಕ ಮಾಡುತ್ತಾರೆ ಮತ್ತು ಮುಂದೆ ಚಲಿಸಲೇ ಅಥವಾ ಬೇಡವೇ ಎಂದು ಹೆಚ್ಚು ಸಮಯ ಯೋಚಿಸಿ ನಿರ್ಧರಿಸುತ್ತಾರೆ. ಇನ್ನು ಕೆಲವರು ಬಹು ನಿಶ್ಚಿಂತೆಯಿಂದಿದ್ದು, ಮುಂದಿನ ಪರಿಣಾಮಗಳ ಬಗ್ಗೆ ಆಳವಾಗಿ ಯೋಚಿಸದೆ ಹುರುಪಿನಿಂದ ಮುನುಗ್ಗುವ ಪ್ರವೃತ್ತಿ ಹೊಂದಿರುತ್ತಾರೆ. ಕ್ರಿಸ್ತನ ದೇಹದಲ್ಲಿ ಇವೆರಡು (ಹಾಗೂ ಇನ್ನಿತರ) ಸ್ವಭಾವಗಳು ಕಾಣಸಿಗುವದರಿಂದ, ಇಲ್ಲಿ ಸಮತೋಲನವಿದೆ. ಒಂದು ವೇಳೆ ಕ್ರಿಸ್ತನ ದೇಹವು ಹಿಂದೆ ಮುಂದೆ ನೋಡುವಂತಹ, ಆಳವಾಗಿ ಯೋಚಿಸುವಂತಹ ಸ್ವಭಾವದವರನ್ನು ಮಾತ್ರ ಹೊಂದಿದ್ದರೆ, ಪ್ರಗತಿ ತುಂಬಾ ನಿಧಾನವಾಗಬಹುದು. ಇದರ ಪ್ರತಿಯಾಗಿ, ಒಂದು ವೇಳೆ ಕ್ರಿಸ್ತನ ದೇಹವು ಯೋಚಿಸದೆ ಮುನ್ನುಗ್ಗುವವರನ್ನು ಮಾತ್ರ ಒಳಗೊಂಡಿದ್ದರೆ, ಅನೇಕ ಯೋಜನೆಗಳು ಮುಗಿಯದೇ ಉಳಿಯಬಹುದು.

ಇವೆರಡು ಪ್ರಕೃತಿಗಳಲ್ಲಿ ತಮ್ಮದೇ ಆದ ಸಾಮರ್ಥ್ಯಗಳು ಮತ್ತು ಬಲಹೀನತೆಗಳು ಇವೆ. ವಿಭಿನ್ನ ಪ್ರಕೃತಿಗಳನ್ನು ಹೊಂದಿರುವ ಬೇರೆ ಬೇರೆ ರೀತಿಯ ಜನರು, ಕ್ರೈಸ್ತರಾಗಿ ಒಟ್ಟಾಗಿ ಕಾರ್ಯ ನಿರ್ವಹಿಸುತ್ತಾ, ಕ್ರಿಸ್ತನ ಹೆಚ್ಚು ನಿಖರವಾದ, ಸಂಪೂರ್ಣವಾದ ಚಿತ್ರವನ್ನು ಲೋಕಕ್ಕೆ ತೋರಿಸಬಹುದು. ಹಾಗಾಗಿ ನಾವು ಕ್ರಿಸ್ತನ ದೇಹದ ಪ್ರತಿಯೊಬ್ಬರನ್ನು ನಮ್ಮಂತೆ ಬದಲಾಯಿಸಲು ಪ್ರಯತ್ನಿಸುತ್ತಾ ನಮ್ಮ ಸಮಯವನ್ನು ವ್ಯರ್ಥ ಮಾಡಬಾರದು. ಪ್ರತಿಯೊಬ್ಬರು ಅವರು ಇರುವಂತೆಯೇ ಇರಲು ನಾವು ಅನುಮತಿಸಬೇಕು. ನಾವು ಏನು ಮಾಡಬೇಕೆಂದರೆ, ನಮ್ಮ ಬಲ ಮತ್ತೊಬ್ಬರ ಬಲಹೀನತೆಯನ್ನು ಹೇಗೆ ಬೆಂಬಲಿಸಬಹುದು ಎಂಬುದರ ಬಗ್ಗೆ ಗಮನ ಹರಿಸಬೇಕು. ಇದಕ್ಕೆ ಪ್ರತಿಯಾಗಿ ಇನ್ನೊಬ್ಬನ ಬಲವು ನಮ್ಮ ಬಲಹೀನತೆಗೆ ಬೆಂಬಲ ಆಗಬಹುದು.

ಪೇತ್ರ ಮತ್ತು ಯೋಹಾನರು (ವಿಭಿನ್ನ ಪ್ರಕೃತಿಯ ವ್ಯಕ್ತಿಗಳು) ಒಟ್ಟಾಗಿ ಕೆಲಸ ಮಾಡುತ್ತಾ, ತಾವು ಸ್ವತಂತ್ರವಾಗಿ ಮಾಡಲು ಸಾಧ್ಯವಿದ್ದುದಕ್ಕಿಂತ ಬಹಳ ಅಧಿಕ ಮಹಿಮೆಯನ್ನು ದೇವರಿಗೆ ತಂದರು. ಪೌಲ ಮತ್ತು ತಿಮೊಥೆಯರು - ತಮ್ಮ ಪ್ರಾಕೃತಿಕ ಸ್ವಭಾವದಲ್ಲಿ ಸಂಪೂರ್ಣ ವಿಭಿನ್ನವಾಗಿದ್ದರೂ ಸಹ - ಸುವಾರ್ತೆಗಾಗಿ ಜೊತೆಗೂಡಿ ಕಾರ್ಯ ನಿರ್ವಹಿಸಿ, ಒಂದು ಬಲಶಾಲಿ ತಂಡವಾಗಲು ಸಾಧ್ಯವಾಯಿತು.

ಸಭೆಯಲ್ಲಿ ತೀಕ್ಷ್ಣಬುದ್ಧಿಯ ಬುದ್ಧಿಜೀವಿಗಳು ಅಲ್ಲದೇ, ಸಾಮಾನ್ಯ ಬುದ್ಧಿಶಕ್ತಿಯುಳ್ಳವರು ಸಹ ಇರುತ್ತಾರೆ. ಸ್ವಾಭಾವಿಕವಾಗಿ, ಅವರು ದೇವರ ಸತ್ಯವನ್ನು ಇತರರಿಗೆ ಪರಿಚಯಿಸುವ ವಿಧಾನಗಳಲ್ಲಿ ವೈವಿಧ್ಯತೆ ಇರುತ್ತದೆ. ಆದರೆ, ಬುದ್ಧಿಜೀವಿಗಳು ಮತ್ತು ಸಾಮಾನ್ಯರು, ತತ್ವಶಾಸ್ತ್ರಜ್ಞರು, ಗೃಹಿಣಿಯರು, ವಿದ್ಯಾರ್ಥಿಗಳು ಮತ್ತು ರೈತರು, ಹೀಗೆ ಎಲ್ಲರನ್ನು ಒಳಗೊಂಡುರುವ ಲೋಕಕ್ಕೆ ಸುವಾರ್ತೆಯನ್ನು ಸಾರಲು ಸಭೆಗೆ ಇಬ್ಬರೂ ಅವಶ್ಯ, ಆದುದರಿಂದ ಒಂದು ಗುಂಪು ಮತ್ತೊಂದನ್ನು ಹೀನಾಯಿಸುವದು ಮತ್ತು ಟೀಕಿಸುವದು ತಪ್ಪು. ದೇವರಿಗೆ ಒಬ್ಬ ಪ್ರತಿಭಾವಂತ ಮತ್ತು ಪಂಡಿತನಾದ ಪೌಲನ ಜೊತೆಗೆ, ಒಬ್ಬ ಅವಿದ್ಯಾವಂತ ಮೀನುಗಾರ ಪೇತ್ರನೂ ಬೇಕಾಗಿದ್ದನು. ಇಬ್ಬರೂ ಒಂದೇ ಸುವಾರ್ತೆಯನ್ನು ವಿಭಿನ್ನ ಭಂಗಿಗಳಲ್ಲಿ ಬೋಧಿಸಿದರು, ಆದರೆ ಇಬ್ಬರಿಗೂ ವಿಶಿಷ್ಟವಾದ ಪಾತ್ರಗಳು ಇದ್ದವು ಮತ್ತು ದೇವರು ಅವರಿಬ್ಬರಲ್ಲಿ ಒಬ್ಬನ ಮೂಲಕ ನಿರ್ವಹಿಸಿದ ಕಾರ್ಯವನ್ನು ಇನ್ನೊಬ್ಬನು ಅಷ್ಟೇ ಸಮರ್ಥನಾಗಿ ಮಾಡಲು ಸಾಧ್ಯವಿರಲಿಲ್ಲ.

ಪರಿವರ್ತನೆಯು ಒಬ್ಬ ವ್ಯಕ್ತಿಯ ಬುದ್ಧಿಶಕ್ತಿಯನ್ನು ಪರಿವರ್ತಿಸುವದಿಲ್ಲ. ಅದಲ್ಲದೆ ಪರಿವರ್ತನೆಯು ಆತನು ತನ್ನ ಸಾಮಾಜಿಕ ಸ್ಥಾನಮಾನಗಳನ್ನು ಬದಲಾಯಿಸುವಂತೆ ಒತ್ತಾಯಿಸುವದಿಲ್ಲ. ಸುವಾರ್ತೆಯು ಸಮಾಜದ ವೈವಿಧ್ಯತೆಯನ್ನು ನಿರ್ಮೂಲ ಮಾಡುವದಿಲ್ಲ, ಆದರೆ ಕ್ರಿಸ್ತನಲ್ಲಿ ಈ ಲೋಕದ ಸಾಮಾಜಿಕ ಅಂತರಗಳು ತಮ್ಮ ಪ್ರಾಮುಖ್ಯತೆಯನ್ನು ಕಳಕೊಳ್ಳುತ್ತವೆ. ದೇವರಿಗೆ ಫಿಲೆಮೋನನಂತಹ ಒಬ್ಬ ಐಶ್ವರ್ಯವಂತನ ಅಗತ್ಯತೆ ಇತ್ತು, ಜೊತೆಗೆ ಫಿಲೆಮೋನನ ಮನೆಯ ಒಬ್ಬ ಸೇವಕನಾದ ಓನೇಸಿಮನ ಅವಶ್ಯಕತೆಯೂ ಇತ್ತು. ಅವರ ಸಾಮಾಜಿಕ ಮಟ್ಟ ಮತ್ತು ಜೀವಿತದ ಗುಣಮಟ್ಟ ಬದಲಾಗದೆ ಹಾಗೇ ಉಳಿಯಿತು, ಆದರೆ ಕ್ರಿಸ್ತನ ದೇಹವನ್ನು ಕಟ್ಟುವದರಲ್ಲಿ ಅವರಿಬ್ಬರದೂ ಒಂದೊಂದು ವಿಭಿನ್ನ ಕೊಡುಗೆ ಇತ್ತು, ಮತ್ತೊಬ್ಬನಿಂದ ಅದನ್ನು ಮಾಡುವದು ಅಸಾಧ್ಯವಾಗಿತ್ತು; ಹಾಗಾಗಿ ಇಬ್ಬರೂ ಸುವಾರ್ತೆಯಲ್ಲಿ ಒಟ್ಟಾಗಿ ದುಡಿದರು.

ದೇವರು ಕ್ರಿಸ್ತನ ದೇಹದ ಎಲ್ಲಾ ಜನರು - ಕಾರ್ಖಾನೆಯಲ್ಲಿ ತಯಾರಾಗುವ ಒಂದೇ ರೀತಿಯ ಮೋಟರ್‌ಕಾರ್‌ಗಳಂತೆ - ಎಲ್ಲಾ ರೀತಿಯಲ್ಲಿ ಒಂದೇ ಸಮನಾಗಿ ಇರಬೇಕೆಂದು ಯಾವತ್ತೂ ಉದ್ದೇಶಿಸಲಿಲ್ಲ. ಇಲ್ಲ. ದೇಹದ ಸೇವೆಯು ಅದರ ಅಂಗಗಳಲ್ಲಿ ಇರುವ ವಿಭಿನ್ನತೆಯನ್ನೇ ಅವಲಂಬಿಸಿದೆ. ಒಂದು ವೇಳೆ ಎಲ್ಲರೂ ಒಂದೇ ರೀತಿ ಇದ್ದರೆ ಅಲ್ಲಿ ಹಿಂಜಾರುವಿಕೆ ಮತ್ತು ಆತ್ಮಿಕ ಮರಣ ಕಾಣಿಸುತ್ತಿತ್ತು.

ನಮ್ಮಲ್ಲಿ ಒಬ್ಬರಿಂದೊಬ್ಬರಿಗೆ ಆಗುವ ಭಿನ್ನಾಭಿಪ್ರಾಯಗಳು ಸಹ ನಮ್ಮ ಅನ್ಯೋನ್ಯತೆಯನ್ನು ಗಾಢವಾಗಿಸಲು ಮತ್ತು ನಮ್ಮನ್ನು ಆತ್ಮಿಕ ಪ್ರಗತಿಗೆ ಮುನ್ನಡೆಸಲು ದೇವರಿಂದ ಉಪಯೋಗಿಸಲ್ಪಡಬಹುದು. ಜ್ಞಾನೋಕ್ತಿ. 27:17 ಹೀಗೆ ಹೇಳುತ್ತದೆ - “ಕಬ್ಬಿಣವು ಕಬ್ಬಿಣವನ್ನು ಹೇಗೋ ಮಿತ್ರನು ಮಿತ್ರನ ಬುದ್ಧಿಯನ್ನು ಹಾಗೆ ಹರಿತ ಮಾಡುವನು.” ಬೆಂಕಿಯ ಕಿಡಿಗಳು ಬರುತ್ತವೆ, ಆದರೆ ಈ ರೀತಿಯಾಗಿ ಎರಡು ಕಬ್ಬಿಣದ ಚೂರುಗಳೂ ಹರಿತಗೊಳ್ಳುತ್ತವೆ.

ಕೆಲವು ಬಾರಿ ದೇವರು ತನ್ನ ಕಾರ್ಯದಲ್ಲಿ ವಿಭಿನ್ನ ಪ್ರಕೃತಿಯುಳ್ಳ ಇಬ್ಬರು ವ್ಯಕ್ತಿಗಳನ್ನು ಒಟ್ಟಾಗಿ ಇರಿಸುತ್ತಾನೆ ಮತ್ತು ಅವರು ಒಂದಾಗಿ ಕೆಲಸಕ್ಕೆ ತೊಡಗಿದಾಗ ಅವರಿಬ್ಬರ ನಡುವೆ ಕಿಡಿಗಳು ಹಾರಬಹುದು, ಆದರೆ ಇದು ಇವರನ್ನು “ಹರಿತ ಮಾಡುವ” ದೇವರ ವಿಧಾನವಾಗಿರಬಹುದು. ಒಂದು ವೇಳೆ ಒಬ್ಬ ವ್ಯಕ್ತಿಯು ಕಬ್ಬಿಣದಂತೆ ಮತ್ತು ಇನ್ನೊಬ್ಬನು ಜೇಡುಮಣ್ಣಿನಂತಿದ್ದರೆ, ಅಲ್ಲಿ ಕಿಡಿಯಾಗಲಿ ಮತ್ತು ಹರಿತಗೊಳ್ಳುವದಾಗಲಿ ಇರುವದಿಲ್ಲ. ಅದರ ಬದಲಾಗಿ, ಅಲ್ಲಿ ಜೇಡಿಮಣ್ಣಿನ ಮೇಲೆ ಕಬ್ಬಿಣದ ಮುದ್ರೆ ಇರುತ್ತದೆ - ಒಬ್ಬ ಬಲಿಷ್ಠ ಮನಸ್ಸಿನ ವ್ಯಕ್ತಿಯ ಅಭಿಪ್ರಾಯವು ಬಲಹೀನ ಮನಸ್ಥಿತಿಯ ವ್ಯಕ್ತಿಯ ಮೇಲೆ ಬಲವಂತವಾಗಿ ಹೇರಲ್ಪಡುತ್ತದೆ. ಆದರೆ ಒಬ್ಬ ವ್ಯಕ್ತಿಯು ತನ್ನ ಅನಿಸಿಕೆಯನ್ನು ಮತ್ತೊಬ್ಬರ ಮೇಲೆ ಹೇರುವದು ದೇವರ ಚಿತ್ತವಲ್ಲ, ಅದಕ್ಕೆ ಬದಲಾಗಿ ಇಬ್ಬರೂ ಪರಸ್ಪರವಾಗಿ ಮತ್ತೊಬ್ಬನಿಂದ ಕಲಿಯಬೇಕು. ನಮ್ಮಲ್ಲಿ ಭಿನ್ನಾಭಿಪ್ರಾಯ ಇರಬಹುದು, ಆದಾಗ್ಯೂ ನಾವು ಒಗ್ಗಟ್ಟಾಗಿದ್ದು ಒಬ್ಬರನ್ನೊಬ್ಬರು ಪ್ರೀತಿಸಬಹುದು - ಇಲ್ಲ, ಈಗ ಮೊದಲಿಗಿಂತಲೂ ಹೆಚ್ಚು ಗಾಢವಾಗಿ ನಾವು ಒಬ್ಬರನ್ನೊಬ್ಬರು ಪ್ರೀತಿಸಬಹುದು.