ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ Struggling ತಿಳಿಯುವುದು
WFTW Body: 

ನಾವು ಅಂತ್ಯ ಕಾಲವನ್ನು ಸಮೀಪಿಸುತ್ತಿರುವಾಗ, ಲೋಕದಲ್ಲಿರುವ ಸಂಗತಿಗಳು ಕೆಟ್ಟದ್ದರಿಂದ ಇನ್ನೂ ಹೆಚ್ಚಿನ ಕೆಡುಕಿನೆಡೆಗೆ ಸಾಗುತ್ತವೆ ಮತ್ತು ನಾವು ಬಹುದೊಡ್ಡ ಸಂಕಟದ ಸಮಯಕ್ಕೆ ಸಮೀಪಿಸುತ್ತಿದ್ದೇವೆ. ಇದಾದ ನಂತರದಲ್ಲೇ ಕರ್ತನಾದ ಯೇಸು ಕ್ರಿಸ್ತನ ಬರುವಿಕೆ ಇದ್ದು, ಇದರ ಪೂರ್ವಭಾವಿಯಾಗಿ ಇವೆಲ್ಲಾ ಸಂಭವಿಸುತ್ತವೆ. ಆದುದರಿಂದ ನಾವು ಹೆಚ್ಚೆಚ್ಚು ನಂಬಿಕೆಯಿಂದ ಜೀವಿಸುವುದನ್ನು ಕಲಿಯುವುದು ತುಂಬಾ ಮುಖ್ಯ.

ಮತ್ತು ”ಕೇಳುವುದರಿಂದ ನಂಬಿಕೆಯುಂಟಾಗುತ್ತದೆ; ದೇವರ ವಾಕ್ಯವನ್ನು ಕೇಳುವುದರಿಂದಲೇ” (ರೋಮ 10:17).(ಕೆ.ಜೆ.ವಿ.ಭಾಷಾಂತರ)

ಯೇಸು ಅರಣ್ಯದಲ್ಲಿ ಸೈತಾನನಿಂದ ಶೋಧಿಸಲ್ಪಡುವ ಸಮಯದಲ್ಲಿ ದೇವರ ವಾಕ್ಯವನ್ನು ಉಲ್ಲೇಖಿಸುತ್ತಿದ್ದರು. ಇದರಿಂದಾಗಿ ಯೇಸು ಪ್ರತಿಯೊಂದು ಶೋಧನೆಯನ್ನು ಜಯಿಸಿದರು. ಯೇಸು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ದೇವರ ವಾಕ್ಯವನ್ನು ತಮ್ಮ ಮನಸ್ಸಿನಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದರು. ಆ ಸಂಗ್ರಹಗೊಂಡಿದ್ದ ಕೋಣೆಯಿಂದ (ಮನಸ್ಸಿನಿಂದ), ಪವಿತ್ರಾತ್ಮನು ಪ್ರತಿ ಶೋಧನೆಗೆ ತಕ್ಕ ಹಾಗೇ ಸರಿಯಾದ ವಾಕ್ಯವನ್ನು ನೆನಪಿಸಿಕೊಡುತ್ತಿದ್ದನು.

ನಾವು ಕೂಡ ದೇವರ ವಾಕ್ಯವನ್ನು ನಮ್ಮ ಮನಸ್ಸಿನಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು ಅತ್ಯವಶ್ಯಕ. ನಾವು ದೇವರ ವಾಕ್ಯದಲ್ಲಿ ಏನು ಓದುತ್ತೇವೋ, ಅದನ್ನು ನಂಬಲೇಬೇಕು ಮತ್ತು ”ನಾವು ನಮ್ಮ ಹೃದಯದಲ್ಲಿ ನಂಬಿರುವುದನ್ನು ನಮ್ಮ ಬಾಯಲ್ಲಿ ಅರಿಕೆ ಮಾಡಬೇಕು” (ರೋಮ 10:8, 9) - ಏಕೆಂದರೆ”ನಾವು ನಮ್ಮ ಸಾಕ್ಷಿಯ ವಾಕ್ಯದಿಂದ ಸೈತಾನನ್ನು ಜಯಿಸಬಹುದು” (ಪ್ರಕಟನೆ 12:11).

ಆದರೆ ನಮ್ಮ ಅರಿಕೆಯು ಯಾವಾಗಲೂ ದೇವರ ನಿಶ್ಚಿತ ವಾಗ್ದಾನಗಳ ಆಧಾರದ ಮೇಲೆ ಇರಬೇಕು.

ನಾವು ನಮ್ಮ ಬಾಯಿಂದ ಏನಾದರೂ ಅರಿಕೆ ಮಾಡಿದರೆ, ಆ ಸಂಗತಿಯು ನೆರವೇರುತ್ತದೆ ಅಥವಾ ನಾವು ಅರಿಕೆ ಮಾಡಿದ್ದನ್ನು ಪಡೆದುಕೊಳ್ಳುತ್ತೀವಿ ಎಂದು ಕೆಲವು ಬೋಧಕರು ಬೋಧಿಸುತ್ತಾರೆ. ಅದು ದುರಹಂಕಾರ ಮತ್ತು ಮೂರ್ಖತನ. ದೇವರು ತನ್ನ ವಾಕ್ಯವನ್ನು ಪೂರೈಸುತ್ತೀನಿ ಎಂಬುದಾಗಿ ವಾಗ್ದಾನ ಮಾಡಿದ್ದಾರೆಯೇ ಹೊರತು, ನಾವು ದುರಹಂಕಾರದಲ್ಲಿ ಏನು ಮಾತಾನಾಡಿರುತ್ತೇವೋ, ಅದನ್ನು ಪೂರೈಸುತ್ತೇನೆ ಎಂದು ಹೇಳಿಲ್ಲ. ಹಾಗಾಗಿ ನಾವು ದೇವರ ವಾಗ್ದಾನಗಳನ್ನು ಆತನ ವಾಕ್ಯದಲ್ಲಿ ಮೊದಲು ಕಂಡುಹಿಡಿಯಬೇಕು ಮತ್ತು ಆ ವಾಗ್ದಾನಗಳನ್ನು ಮಾತ್ರ ಅರಿಕೆ ಮಾಡಬೇಕು.

ದೇವರ ವಾಕ್ಯದ ಆಧಾರದ ಮೇಲೆ ನಿಂತಿರುವ ನಮ್ಮ ನಂಬಿಕೆಯು ಲೋಕವನ್ನು ಜಯಿಸುತ್ತದೆ (1 ಯೋಹಾನ 5:4).

ನಿಜವಾದ ನಂಬಿಕೆಯೆಂದರೆ, ನಮ್ಮ ಇಡೀ ವ್ಯಕ್ತಿತ್ವ ದೇವರ ಮೇಲೆ ಸಂಪೂರ್ಣ ಭರವಸವಿಟ್ಟೂ, ಆತನ ”ಷರತ್ತಿಲ್ಲದ ಪ್ರೀತಿಯಲ್ಲಿ”, ”ಸರ್ವಶಕ್ತ ಬಲದಲ್ಲಿ” ಮತ್ತು ಆತನ ಪರಿಪೂರ್ಣ ”ಜ್ಞಾನ”ದಲ್ಲಿ ಆತುಕೊಳ್ಳುವುದಾಗಿದೆ.

ಹಾಗಾಗಿ ಈ ಬರುವ ವರ್ಷದ ಅವಧಿಯಲ್ಲಿ, ದೇವರು ಏನು ವಾಗ್ದಾನ ಮಾಡಿದ್ದಾರೋ, ಆ ವಾಗ್ದಾನಗಳಲ್ಲಿ ನಂಬಿಕೆಯಿಟ್ಟು, ಕೆಳಗಿನ ಎಂಟು ಅರಿಕೆಗಳನ್ನು (ದೇವರ ವಾಕ್ಯದ ಆಧಾರದ ಮೇಲೆ) ನಂಬಿಕೆಯಿಂದ ಆಗಿಂದಾಗ್ಗೆ ಮಾಡಿ, ಅವುಗಳನ್ನು ನಿಮಗೆ ನೀವೇ ಹೇಳಿಕೊಳ್ಳಿ ಮತ್ತು ನಿಮ್ಮ ಹೃದಯದಿಂದ ಸೈತಾನನಿಗೂ ಹೇಳಿ. ಪ್ರತಿ ಅರಿಕೆಗೆ ಸಂಬಂಧಿಸಿದ ವಚನಗಳನ್ನು ಕೆಳಗೆ ಕೊಟ್ಟಿದ್ದು, ಅವುಗಳನ್ನು ಕಂಠಪಾಠ ಮಾಡಿ ಮತ್ತು ”ಜಯಹೊಂದುವವರಾಗಿ”.

1. ದೇವರು ಯೇಸುವನ್ನು ಪ್ರೀತಿಸಿದ ಹಾಗೇ ನನ್ನನ್ನು ಪ್ರೀತಿಸುತ್ತಾರೆ. ಹಾಗಾಗಿ ನಾನು ”ಯಾವಾಗಲೂ” ಸಂತೋಷಿಸುತ್ತೇನೆ
”ನೀನು ನನ್ನನ್ನು ಪ್ರೀತಿಸಿದಂತೆ ಅವರನ್ನೂ ಪ್ರೀತಿಸಿದ್ದೀ” (ಯೋಹಾನ 17:23) - ಯೇಸು ಈ ರೀತಿಯಾಗಿ ಪ್ರಾರ್ಥಿಸಿದರು.

ನಮ್ಮ ಪರಲೋಕದ ತಂದೆಯ ಅಪರಿಮಿತ ಪ್ರೀತಿಯಲ್ಲಿ ಮತ್ತು ಆತನು ನಮ್ಮ ಬಗ್ಗೆ ಕಾಳಜಿವಹಿಸುವುದರಲ್ಲಿ ನಾವು ನಮ್ಮ ಭದ್ರತೆಯನ್ನು ಕಂಡುಕೊಳ್ಳಬೇಕು. ಆಗ ನಾವು ಎಲ್ಲಾ ಚಿಂತೆಗಳಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದುತ್ತೇವೆ.

2. ದೇವರು ನನ್ನ ಎಲ್ಲಾ ಪಾಪಗಳನ್ನು ಕ್ಷಮಿಸಿದ್ದಾನೆ - ಹಾಗಾಗಿ ನಾನು ”ಯಾವತ್ತೂ” ಖಂಡನೆಯಲ್ಲಿ ಜೀವಿಸುವುದಿಲ್ಲ

''ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡಿದರೆ, ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ, ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು, ಸಕಲ ಅನೀತಿಯನ್ನು ಪರಿಹರಿಸಿ, ನಮ್ಮನ್ನು ಶುದ್ದಿ ಮಾಡುವನು”
(1 ಯೋಹಾನ 1:9)
.

”ನಾನು ಅವರ ದುಷ್ಕೃತ್ಯಗಳ ವಿಷಯವಾಗಿ ಕ್ಷಮೆಯುಳ್ಳವನಾಗಿರುವೆನು, ಅವರ ಪಾಪಗಳನ್ನು ನನ್ನ ನೆನಪಿಗೆ ಎಂದಿಗೂ ತರುವುದಿಲ್ಲ” ಎಂದು ಕರ್ತನು ನುಡಿಯುತ್ತಾನೆ. (ಇಬ್ರಿಯ 8:12).

ನಮ್ಮ ಹಿಂದಿನವುಗಳು ಎಲ್ಲವೂ ಅಳಿಸಿ ಹೋಗಿದೆ ಎಂಬ ನಿಶ್ಚಿತತೆಯನ್ನು ಹೊಂದಿಕೊಂಡು, ನಾವು ಯಾವಾಗಲೂ ವಿಶ್ರಾಂತಿಯಲ್ಲಿರಬೇಕು. ಸೈತಾನನು ಬಂದು ನಮ್ಮ ಹಿಂದಿನದರ ಬಗ್ಗೆ ಖಂಡಿಸುವಂತೆ ನಾವು ಆತನನ್ನು ಅನುಮತಿಸಬಾರದು. ನಾವು ಸಹ ಖಂಡನೆಯಲ್ಲಿ ಜೀವಿಸಬಾರದು.

3. ದೇವರು ನನ್ನನ್ನು ಪವಿತ್ರಾತ್ಮನಿಂದ ತುಂಬಿಸುತ್ತಾನೆ - ಹಾಗಾಗಿ ಪ್ರತಿಯೊಂದು ಕಾರ್ಯಕ್ಕೂ ಬೇಕಾದ ಬಲವನ್ನು ”ಯಾವಾಗಲೂ” ಹೊಂದಿರುತ್ತೇನೆ

”ಹಾಗಾದರೆ ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವರವನ್ನು ಕೊಡುವನಲ್ಲವೇ ಅಂದನು” (ಲೂಕ 11:13).

ನಮ್ಮ ಜೀವಿತದ ಪ್ರತಿಯೊಂದು ಕ್ಷೇತ್ರವು ಕರ್ತನಿಗೆ ಒಪ್ಪಿಸಿಕೊಡಲ್ಪಟ್ಟಿದೆಯೇ ಎಂದು ನಿಶ್ಚಿತಪಡಿಸಿಕೊಳ್ಳಬೇಕು. ನಂತರ ಹೊಸ ವರ್ಷದ ಪ್ರತಿದಿನವೂ ಪವಿತ್ರಾತ್ಮನಿಂದ ತುಂಬಿಸಲ್ಪಡಬೇಕು. ದೇವರು ನಿಶ್ಚಯವಾಗಿ ನಮ್ಮನ್ನು ಪವಿತ್ರಾತ್ಮನಿಂದ ತುಂಬಿಸುತ್ತಾನೆ.

4. ದೇವರು ನನ್ನ ಎಲ್ಲಾ ಮೇರೆಗಳನ್ನು ನಿಶ್ಚಯಿಸಿದ್ದಾನೆ - ಹಾಗಾಗಿ ನಾನು ”ಯಾವಾಗಲೂ” ತೃಪ್ತನಾಗಿರಬೇಕು

”ಆತನು ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ ಅವರವರು ಇರತಕ್ಕ ಕಾಲಗಳನ್ನೂ ಅವರವರ ನಿವಾಸಗಳ ಮೇರೆಗಳನ್ನೂ ನಿಷ್ಕರ್ಷಿಸಿದ್ದಾನೆ'' (ಅ.ಕೃತ್ಯಗಳು 17:26).

”ನಿಮಗಿರುವುಗಳಲ್ಲಿ ತೃಪ್ತರಾಗಿರಿ; ನಾನು ನಿನ್ನನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” (ಇಬ್ರಿಯ 13:5).

ನಮ್ಮ ಪರಿಸ್ಥಿತಿಗಳ ಬಗ್ಗೆ ನಾವು ದೂರನ್ನು ಹೊಂದಿರಬಾರದು ಮತ್ತು ನಾವು ಈ ಹೊಸ ವರ್ಷ ಪೂರ್ತಿ ನಮಗಿರುವವುಗಳನ್ನು ಮತ್ತೊಬ್ಬರೊಟ್ಟಿಗೆ ಯಾವ ಸಮಯದಲ್ಲೂ ಹೊಲಿಸಿಕೊಳ್ಳಬಾರದು.

5. ದೇವರ ಆಜ್ಞೆಗಳೆಲ್ಲವು ನನ್ನ ಅನುಕೂಲಕರಕ್ಕಾಗಿಯೇ ಇವೆ - ಹಾಗಾಗಿ ನಾನು ದೇವರ ಎಲ್ಲಾ ಆಜ್ಞೆಗಳಿಗೆ ''ಯಾವಾಗಲೂ'' ವಿಧೇಯನಾಗಬೇಕು

”ಆತನ ಆಜ್ಞೆಗಳು ಭಾರವಾದವುಗಳಲ್ಲ” (1 ಯೋಹಾನ 5:3).
”ನಾನು ನಿಮ್ಮ ಮೇಲಿಗಾಗಿ ಈಗ ಬೋಧಿಸುವ ಆತನ ಆಜ್ಞಾ ವಿಧಿಗಳನ್ನು ಅನುಸರಿಸುತ್ತಾ ಇರುವದನ್ನೇ ಹೊರತು ನಿಮ್ಮ ದೇವರಾದ ಯೆಹೋವನು ನಿಮ್ಮಿಂದ ಬೇರೇನು ಕೇಳಿಕೊಳ್ಳುತ್ತಾನೆ?” (ಧರ್ಮೋಪದೇಶಕಾಂಡ 10:13).

ನಾವು ಕರ್ತನನ್ನು ಪ್ರೀತಿಸುವುದರ ಗುರುತೇನೆಂದರೆ, ನಾವು ಆತನ ಆಜ್ಞೆಗಳಿಗೆ ಎಲ್ಲಾ ಸಮಯದಲ್ಲೂ ವಿಧೇಯರಾಗುತ್ತೇವೆ. (ಯೋಹಾನ 14:15). ಹಾಗಾಗಿ ಈ ಹೊಸ ವರ್ಷದಲ್ಲಿ ದೇವರ ಪ್ರತಿ ಆಜ್ಞೆಗಳಿಗೆ ವಿಧೇಯರಾಗಲು ಕಾತುರವುಳ್ಳವರಾಗಿರಬೇಕು.

6. ದೇವರು, ನನಗೆ ಬಾಧೆ ಪಡಿಸುವ ಎಲ್ಲಾ ಜನರನ್ನು ಮತ್ತು ಎಲ್ಲಾ ಸಂಗತಿಗಳನ್ನು ನಿಯಂತ್ರಿಸುತ್ತಾರೆ - ಹಾಗಾಗಿ ನಾನು ”ಯಾವಾಗಲೂ” ಕೃತಜ್ಞತೆ ಹೇಳಬೇಕು

”ಇದಲ್ಲದೆ ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತದೆ” (ರೋಮ 8:28).

ನಾವು ದೇವರನ್ನು ಪ್ರೀತಿಸಿ, ನಮ್ಮ ಜೀವಿತಕ್ಕಾಗಿ ಆತನ ಉದ್ದೇಶಗಳನ್ನು ಮಾತ್ರ ಪೂರೈಸುವುದರಲ್ಲಿ ಇಚ್ಛೆಯುಳ್ಳವರಾದರೆ, ನಂತರ ನಮಗೆ ಸಂಭವಿಸುವ ಪ್ರತಿಯೊಂದು ನಮ್ಮ ಅತ್ಯುತ್ತಮಕ್ಕಾಗಿ ಕಾರ್ಯಗತವಾಗುತ್ತದೆ. ಈ ಹೊಸ ವರ್ಷದಲ್ಲಿ ನಾವು ಎದುರಿಸುವಂತಹ ಪ್ರತಿ ವ್ಯಕ್ತಿ ಮತ್ತು ಸಂಗತಿಗಳು ನಮ್ಮ ಅನುಕೂಲಕ್ಕಾಗಿ ಎಂದು ಅರಿಯುವುದು ಎಷ್ಟು ಅದ್ಬುತ ಅಲ್ಲವೇ.

7. ಯೇಸು ಸೈತಾನನ್ನು ಸೋಲಿಸಿದ್ದಾರೆ ಮತ್ತು ಆತನ ಬಲದಿಂದ ನನ್ನನ್ನು ಬಿಡಿಸಿದ್ದಾರೆ - ಹಾಗಾಗಿ ನಾನು ”ಎಂದಿಗೂ” ಭಯಪಡುವುದಿಲ್ಲ

”ಇದಲ್ಲದೆ ಮಕ್ಕಳು ರಕ್ತ ಮಾಂಸಧಾರಿಗಳಾಗಿರುವದರಿಂದ ಆತನೂ ಅವರಂತೆಯೇ ಆದನು. ತನ್ನ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ಅಡಗಿಸಿಬಿಡುವದಕ್ಕೂ, ಮರಣಭಯದ ದೆಸೆಯಿಂದ ತಮ್ಮ ಜೀವ ಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವದಕ್ಕೂ ಅವರಂತೆ ರಕ್ತಮಾಂಸಧಾರಿಯಾದನು” (ಇಬ್ರಿಯ 2:14, 15).
”ಕರ್ತನು ನನ್ನ ಸಹಾಯಕನು, ಭಯಪಡೆನು” (ಇಬ್ರಿಯ 13:6).

ಸೈತಾನನು ದೇವರಿಂದ ಇನ್ನೂ ನಾಶಗೊಂಡಿಲ್ಲ. ಆದರೆ ಸೈತಾನನು ನಮ್ಮ ಕರ್ತನಿಂದ ನಿರಾಯುಧನಾಗಿದ್ದಾನೆ. ಸೈತಾನನನ್ನು ಯೇಸುವಿನ ಹೆಸರಿನಲ್ಲಿ ಎದುರಿಸಿರಿ. ಆಗ ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು
(ಯಾಕೋಬನು 4:7)

8. ದೇವರು ನನ್ನನ್ನು ಆಶಿರ್ವಾದ ನಿಧಿಯನ್ನಾಗಿ ಮಾಡಲು ಇಚ್ಛಿಸುತ್ತಾರೆ - ಹಾಗಾಗಿ ನಾನು ”ಯಾವಾಗಲೂ” ಮತ್ತೊಬ್ಬರಿಗೆ ಆಶೀರ್ವಾದ ನಿಧಿಯಾಗಿರಬೇಕು
ದೇವರು ಹೀಗೆ ಹೇಳುತ್ತಾರೆ, ”ನಾನು ನಿನ್ನನ್ನು ಆಶೀರ್ವದಿಸುವೆನು ಮತ್ತು ನೀನು ಆಶೀರ್ವಾದನಿಧಿಯಾಗುವಿ” (ಆದಿಕಾಂಡ 12:2).
”ಅಬ್ರಹಾಮನಿಗೆ ಉಂಟಾದ ಆಶೀರ್ವಾದವು ಕ್ರಿಸ್ತ ಯೇಸುವಿನಲ್ಲಿ ಅನ್ಯಜನರಿಗೆ ಉಂಟಾಗುವಂತೆಯೂ ದೇವರು ವಾಗ್ದಾನ ಮಾಡಿದ ಆತ್ಮನು ನಮಗೆ ನಂಬಿಕೆಯ ಮೂಲಕ ದೊರಕುವಂತೆಯೂ ಕ್ರಿಸ್ತನು ನಮ್ಮ ನಿಮಿತ್ತ ಶಾಪವಾಗಿ ಧರ್ಮಶಾಸ್ತ್ರದಲ್ಲಿ ಹೇಳಿರುವ ಶಾಪದೊಳಗಿನಿಂದ ನಮ್ಮನ್ನು ಬಿಡಿಸಿದನು” (ಗಲಾತ್ಯದವರಿಗೆ 3:14).

ನಮಗೆ ನಾವೇ ಮತ್ತೊಬ್ಬರಿಗೆ ಆಶಿರ್ವಾದ ನಿಧಿಯಾಗಲು ಸಾಧ್ಯವಿಲ್ಲ. ದೇವರು ಮಾತ್ರವೇ ನಮ್ಮನ್ನು ಮತ್ತೊಬ್ಬರಿಗೆ ಆಶೀರ್ವಾದ ನಿಧಿಯನ್ನಾಗಿ ಮಾಡಲು ಸಾಧ್ಯ. ಈ ಹೊಸ ವರ್ಷದಲ್ಲಿ ನೀವು ಸಂಧಿಸುವಂತ ಪ್ರತಿಯೊಬ್ಬರಿಗೆ ನೀವು ಆಶೀರ್ವಾದ ನಿಧಿಯಾಗುವಂತೆ ದೇವರು ನಿಮ್ಮನ್ನು ಮಾಡುತ್ತಾನೆ ಎಂಬ ವಾಗ್ದಾನವನ್ನು ಪಡೆದುಕೊಳ್ಳಿ. ”ನಂಬುವವನಿಗೆ ಎಲ್ಲವು ಸಾಧ್ಯ” (ಮಾರ್ಕ 9:23).

ಹೆಚ್ಚೆಚ್ಚಾಗಿ ನೀವು ನಿಮ್ಮನ್ನು ಸಂಪೂರ್ಣವಾಗಿ ಕರ್ತನಿಗೆ ಅರ್ಪಿಸುವುದರಿಂದ ಮತ್ತು ಮೇಲ್ಕಂಡ ದೇವರ ವಾಗ್ದಾನಗಳನ್ನು ಅರಿಕೆ ಮಾಡುವುದಷ್ಟೇ ಅಲ್ಲದೇ ಅವುಗಳನ್ನು ನಿಮ್ಮ ಜೀವಿತದಲ್ಲಿ ಹೆಚ್ಚೆಚ್ಚಾಗಿ ಅನುಭವ ಪಡೆಯುವದರಿಂದ, 2018ರಲ್ಲಿ ಎದುರಾಗುವ ಪ್ರತಿ ಸನ್ನಿವೇಶಗಳಲ್ಲಿ ನೀವು ಜಯಹೊಂದುವವರಾಗಿರಿ.