WFTW Body: 

ಅಪೊಸ್ತಲರ ಕೃತ್ಯಗಳು ಅಧ್ಯಾಯ 10 ರಲ್ಲಿ, ಮೊದಲ ಸಲ ಯೆಹೂದ್ಯರಲ್ಲದವರಿಗೆ ಸುವಾರ್ತೆಯು ತಲುಪುವುದನ್ನು ನಾವು ಓದಬಹುದು. ದೇವರು ತನ್ನ ಶಿಷ್ಯರಿಗೆ ಯೆರೂಸಲೇಮಿನಲ್ಲಿಯೂ, ಯೂದದಲ್ಲಿಯೂ, ಸಮಾರ್ಯದಲ್ಲಿಯೂ ಮತ್ತು ಲೋಕದ ಕಟ್ಟ ಕಡೆಯವರೆಗೂ ಸಾಕ್ಷಿಗಳಾಗಿರಬೇಕೆಂದು ಹೇಳಿದನು. ಅಧ್ಯಾಯ 2 ರಲ್ಲಿ, ಅವರು ಯೆರೂಸಲೇಮಿನಲ್ಲಿ ಮತ್ತು ಯೂದದಲ್ಲಿನ ಯೆಹೂದ್ಯರೊಡನೆ ಪ್ರಾರಂಭಿಸಿದರು. ನಂತರ ಅಧ್ಯಾಯ 8 ರಲ್ಲಿ ಸಮಾರ್ಯಗೆ ಹೋದರು ಮತ್ತು ಈಗ ಮೊದಲ ಸಲ ಯೆಹೂದ್ಯರಲ್ಲದವರ ಕಡೆ ಅವರು ಚಲಿಸುತ್ತಿದ್ದರು. ಯೆಹೂದ್ಯರಿಗೂ ಮತ್ತು ಯೆಹೂದ್ಯರಲ್ಲದವರಿಗೂ ಸಹ (ಸುವಾರ್ತೆ ಸಾರುವ) ಬಾಗಿಲನ್ನು ತೆರೆಯುವಂತ ಹಕ್ಕು ಪೇತ್ರನಿಗೆ ಕೊಡಲ್ಪಟ್ಟಿತು.

ಕೊರ್ನೇಲ್ಯನೆಂಬ ಮನುಷ್ಯನಿಗೆ, ಸತ್ಯವೇದದ ಬಗ್ಗೆಯಾಗಲೀ ಅಥವಾ ದೇವರ ಬಗ್ಗೆಯಾಗಲೀ ಏನೂ ಗೊತ್ತಿರಲಿಲ್ಲ. ಆದರೆ ಆತನು ಭಕ್ತಿವಂತ ಮನುಷ್ಯನಾಗಿದ್ದು, ದೇವರಿಗೆ ಸತತವಾಗಿ ಪ್ರಾರ್ಥನೆ ಮಾಡುವವನು ಮತ್ತು ಬಡವರಿಗೆ ಉದಾರವಾಗಿ ಸಹಾಯ ಮಾಡುವವನಾಗಿದ್ದನು (ಅ. ಕೃ. 10:2). ದೂತನು ಆತನಿಗೆ ಪ್ರತ್ಯಕ್ಷನಾಗಿ, ಆತನ ಪ್ರಾರ್ಥನೆಗಳು ಮತ್ತು ಆತನ ದಾನಧರ್ಮಗಳು ದೇವರಿಂದ ಅಂಗೀಕರಿಸಲ್ಪಟ್ಟಿವೆ ಎಂಬುದಾಗಿ ಹೇಳಿದನು (ಅ. ಕೃ. 10:4). ಆದ್ದರಿಂದ ದೇವರು ಅಕ್ರೈಸ್ತರ ಪ್ರಾರ್ಥನೆಗಳನ್ನೂ ಸಹ ಆಲಿಸುತ್ತಾನೆ ಎಂಬುದಾಗಿ ನಾವು ನೋಡಬಹುದು. ಒಂದು ವೇಳೆ ಅವರು ದೇವರಿಗೆ ಭಯಪಡುವಂತವರು ಮತ್ತು ಪ್ರಾಮಾಣಿಕರಾಗಿದ್ದರೆ, ಆತನು ಅವರನ್ನು ತಂದೆಯ ಬಳಿಗೆ ಹೋಗಲು ಇರುವ ಏಕೈಕ ಮಾರ್ಗವಾದ ಕ್ರಿಸ್ತನ ಕಡೆಗೆ ಮುನ್ನೆಡುಸುತ್ತಾನೆ (ಯೆಹೋನ 14:6). ಹಲವು ಕ್ರೈಸ್ತರು, ಪೇತ್ರನಂತೆ ಅಕ್ರೈಸ್ತರಿಗಿಂತ ತಾವೇ ಶ್ರೇಷ್ಠರು ಎಂಬುದಾಗಿ ಕಲ್ಪಿಸಿಕೊಳ್ಳುತ್ತಾರೆ. ಆದರೆ ಕೆಲವು ಅಕ್ರೈಸ್ತರು, ಕೊರ್ನೇಲ್ಯನ ಹಾಗೇ, ಹಲವು ಕ್ರೈಸ್ತರಿಗಿಂತ ದೇವರಿಗೆ ತುಂಬಾ ಭಯ ಪಡುವವರಾಗಿರುತ್ತಾರೆ. ಪೇತ್ರನು ಸಹ ತಾನು ಯೆಹೂದ್ಯರಲ್ಲದವರಿಗಿಂತ ಶುದ್ಧನು ಎಂದು ಭಾವಿಸಿದ್ದನು. ಆದರೆ ದೇವರು ಪೇತ್ರನ ಅಭಿಪ್ರಾಯಗಳನ್ನು ಬದಲಾಯಿಸಿ, ಆತನ ಹೃದಯವನ್ನು ವಿಶಾಲವಾಗಿಸಿದನು. ಹಾಗೆಯೇ ಅನ್ಯ ಕ್ರೈಸ್ತರ ಬಗ್ಗೆ ನಮ್ಮ ಅಭಿಪ್ರಾಯಗಳನ್ನೂ ದೇವರು ಬದಲಾಯಿಸಬಹುದು. ಪೇತ್ರನು ತನ್ನ ಅಭಿಪ್ರಾಯದಲ್ಲಿ ತುಂಬಾ ಹಠಮಾರಿಯಾಗಿದ್ದನು. ದೇವರು ಆತನ ಅಭಿಪ್ರಾಯವನ್ನು ಬದಲಿಸಲು ಆತನಿಗೆ ದರ್ಶನವನ್ನು ಕೊಟ್ಟನು (ಅ. ಕೃ. 10:11). ಈ ದರ್ಶನದಲ್ಲಿ ದೊಡ್ಡ ಜೋಳಿಗೆಯಂತಿರುವ ಬಟ್ಟೆಯಲ್ಲಿ ಶುದ್ಧ ಮತ್ತು ಅಶುದ್ಧ ಪ್ರಾಣಿಗಳು ಇಳಿದು ಬರುವುದನ್ನು ಕಂಡನು ಮತ್ತು ಅವುಗಳನ್ನು ಕೊಂದು, ತಿನ್ನುವಂತೆ ಆತನಿಗೆ ಹೇಳುವ ಧ್ವನಿಯನ್ನು ಕೇಳಿದನು. ಪೇತ್ರನು ಅದರಂತೆ ಮಾಡಲು ನಿರಾಕರಿಸಿ, ಅಶುದ್ಧವಾದ ಯಾವುದನ್ನಾಗಲೀ ತಿನ್ನುವುದಿಲ್ಲ ಎಂದು ಹೇಳಿದನು. ಏಕೆಂದರೆ ಮೋಶೆಯ ಮತ್ತು ಯೆಹೂದ್ಯರ ಧರ್ಮಶಾಸ್ತ್ರದ ಪ್ರಕಾರ ನಿಶ್ಚಯವಾದ ಅಶುದ್ಧ ಪದಾರ್ಥಗಳನ್ನು ತಿನ್ನುವುದನ್ನು ನಿಷೇಧಿಸಲಾಗಿತ್ತು (ಯಾಜಕಕಾಂಡ 11). ಆದರೆ ದೇವರು ಆತನಿಗೆ, ದೇವರು ಶುದ್ಧ ಮಾಡಿದ ಯಾವುದನ್ನೂ ಅಶುದ್ಧವೆಂದು ಕರೆಯಬಾರದು ಎಂದು ಹೇಳಿದನು. ಈ ದರ್ಶನವು ಮೂರು ಸಾರಿ ಪುನರಾವರ್ತಿಸಿತು. ಪೇತ್ರನು ಈ ದರ್ಶನವನ್ನು ಅರ್ಥ ಮಾಡಿಕೊಳ್ಳದೇ ಗೊಂದಲದಲ್ಲಿದ್ದಾಗ, ದೂತನು ಪೇತ್ರನ ಬಳಿಗೆ ಕಳುಹಿಸಲು ಕೊರ್ನೇಲ್ಯನಿಗೆ ಹೇಳಿದ ಪ್ರಕಾರ, ಕೊರ್ನೇಲ್ಯನಿಂದ ಬಂದ ಸಂದೇಶಕನು ಸಂದೇಶದೊಂದಿಗೆ ಪೇತ್ರನ ಮನೆಯನ್ನು ತಲುಪಿದನು. ಆಗ ಯೆಹೂದ್ಯರು ಅಶುದ್ಧವೆಂದು ತೀರ್ಮಾನಿಸಿಕೊಂಡ ಈ ಯೆಹೂದ್ಯನಲ್ಲದ ಮನುಷ್ಯನ ಮನೆಗೆ ಹೋಗಲು ದೇವರು ತನಗೆ ಹೇಳುತ್ತಿದ್ದಾನೆ ಎಂದು ಪೇತ್ರನು ಅರ್ಥ ಮಾಡಿಕೊಂಡನು.

ಕೊರ್ನೇಲ್ಯನ ಬಳಿಗೆ ಬಂದಂತಹ ದೂತನಿಗೆ - ಕ್ರಿಸ್ತನು ಲೋಕದ ಪಾಪಗಳಿಗಾಗಿ ಸತ್ತನು ಮತ್ತು ಸಾವಿನಿಂದ ಮತ್ತೆ ಎದ್ದು ಬಂದನು ಎಂಬ ಸುವಾರ್ತೆಯ ಸತ್ಯವು ನಿಶ್ಚಯವಾಗಿ ಗೊತ್ತಿತ್ತು. ಆತನು ಪೇತ್ರನನ್ನು ಕರೆದು ಆ ಸಂದೇಶವನ್ನು ಕೊರ್ನೇಲ್ಯನಿಗೆ ಬೋಧಿಸುವಂತೆ ಹೇಳುವುದರ ಬದಲಾಗಿ ತಾನೇ ಆ ಸುವಾರ್ತೆಯನ್ನು ಯಾಕಾಗಿ ಬೋಧಿಸಲಿಲ್ಲ? ದೂತನು ಹೊಂದದೆ ಇರುವಂತದ್ದು, ಪೇತ್ರನು ಹೊಂದಿದ್ದೇನು? ಪೇತ್ರನಿಗಿಂತ ದೂತನು ಹತ್ತು ಪಟ್ಟು ಸುವಾರ್ತೆಯನ್ನು ವಿವರಿಸುತ್ತಿದ್ದನು ಎಂಬುದನ್ನು ನಾನು ಖಚಿತವಾಗಿ ಬಲ್ಲೆ. ಆದರೆ ದೂತನು ಹೊಂದದೆ ಇರುವಂತ ರಕ್ಷಣೆಯ ಅನುಭವವನ್ನು ಪೇತ್ರನು ಹೊಂದಿದ್ದನು. ಕೃಪೆಯಿಂದ ರಕ್ಷಿಸಲ್ಪಟ್ಟ ಒಬ್ಬ ಪಾಪಿಯು ಮಾತ್ರ ಮತ್ತೊಬ್ಬ ಪಾಪಿಗೆ ರಕ್ಷಣೆಯ ಬಗ್ಗೆ ಹೇಳಲು ಸಾಧ್ಯ. ಅದನ್ನೇ ನಾವು ಅಪೊಸ್ತಲರ ಕೃತ್ಯದ ಮೊದಲ ವಚನದಲ್ಲಿ ನೋಡುವಂಥದ್ದು. ಅದೇನೆಂದರೆ: ಯೇಸುವು ಮೊದಲು ಮಾಡಿ ತೋರಿಸಿದನು (ಪಾಲಿಸಿದನು), ನಂತರ ಕಲಿಸಿದನು. ಒಂದು ವೇಳೆ ಯಾವುದಾದರ ಬಗ್ಗೆ ನಿಮಗೆ ಅನುಭವವಿಲ್ಲದಿದ್ದರೆ, ನೀವು ಅದರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ದೂತನು ಸಹ ದೈವಿಕ ತತ್ವವನ್ನು ಗೌರವಿಸಿದನು. ಆದ್ದರಿಂದ ನಿಮಗೆ ಕೇವಲ ಗೊತ್ತಿದ್ದು, ನೀವು ಪಾಲಿಸದಿರುವುದನ್ನು ನೀವು ಬೋಧಿಸಬೇಡಿ. ಆದರೆ ನೀವು ಪಾಲಿಸಿರುವುದನ್ನು ಅಥವಾ ಕನಿಷ್ಠ ಪಕ್ಷ ಪಾಲಿಸಲು ಪ್ರಯತ್ನಿಸುತ್ತಿರುವುದನ್ನು ಬೋಧಿಸಿ.

ಪೇತ್ರನು ಕೊರ್ನೇಲ್ಯನ ಮನೆಗೆ ಬಂದಾಗ, "ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದು ಬಂದಿದೆ" (ಅ. ಕೃ.10:35) ಎಂಬುದಾಗಿ ಹೇಳಿದನು. (ಪ್ರತಿಯೊಂದು ಜನಾಂಗದಲ್ಲಿ ಮಾತ್ರವಲ್ಲ, ಪ್ರತಿಯೊಂದು ಕ್ರೈಸ್ತ ಗುಂಪಿನಲ್ಲಿಯೂ/ಸಭೆಯಲ್ಲಿಯೂ). ಎಲ್ಲಾ ಧರ್ಮಗಳಲ್ಲಿ ಯಾರು ದೇವರಿಗೆ ಭಯ ಪಡುತ್ತಾರೋ, ಅವರನ್ನು ಆತನು ಸ್ವಾಗತಿಸುತ್ತಾನೆ ಮತ್ತು ಕ್ರಿಸ್ತನ ಬಳಿಗೆ ಅವರನ್ನು ಮುನ್ನಡೆಸುತ್ತಾನೆ. ಆದ್ದರಿಂದ ಅವರು ರಕ್ಷಣೆ ಹೊಂದುತ್ತಾರೆ. ಪೇತ್ರನು ಕೊರ್ನೇಲ್ಯನ ಮನೆಗೆ ಹೋಗಲು ನಿರಾಕರಿಸಿದ್ದರೆ ಏನಾಗುತ್ತಿತ್ತು? ಪೇತ್ರನು ಅವಿಧೇಯನಾಗಿದ್ದರೆ ಕೊರ್ನೇಲ್ಯನು ರಕ್ಷಣೆ ಹೊಂದುತ್ತಿರಲಿಲ್ಲವೇ? ಪೇತ್ರನ ಅವಿಧೇಯತನದಿಂದ ಕೊರ್ನೇಲ್ಯನಿಗೆ ರಕ್ಷಣೆ ಸಿಗದಿರುತ್ತಿದ್ದರೆ, ದೇವರಿಂದ ತುಂಬಾ ಅನ್ಯಾಯವಾಗುತ್ತಿತ್ತು. ಒಂದು ವೇಳೆ ಪೇತ್ರನು ಹೋಗದಿರುತ್ತಿದ್ದರೆ, ದೇವರು ಯಾಕೋಬ ಅಥವಾ ಯೋಹಾನ ಅಥವಾ ಮತ್ತೊಬ್ಬರನ್ನು ಆತನ-ಬಳಿಗೆ ಕಳುಹಿಸುತ್ತಿದ್ದರು. ಒಂದು ವೇಳೆ ಅನನೀಯನು ತಾರ್ಸದ ಸೌಲನ ಬಳಿಗೆ ಹೋಗದಿದ್ದರೆ, ದೇವರು ಮತ್ತೊಬ್ಬರನ್ನು ಕಳುಹಿಸುತ್ತಿದ್ದರು. ಒಂದು ವೇಳೆ ದೇವರು ನಿಮಗೆ ಹೇಳಿದ ಜಾಗಕ್ಕೆ ನೀವು ಹೋಗದಿದ್ದರೆ, ದೇವರು ನಿಮ್ಮ ಸೇವೆಯನ್ನು ಬೇರೊಬ್ಬರಿಗೆ ಕೊಡುತ್ತಾರೆ.

ಅಪೊಸ್ತಲರ ಕೃತ್ಯಗಳು 10:38 ರಲ್ಲಿ, ಪೇತ್ರನು ಯೇಸುವಿನ ಸೇವೆಯನ್ನು ಹೀಗೆ ವಿವರಿಸುತ್ತಾನೆ. "ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮದಿಂದಲೂ ಬಲದಿಂದಲೂ ಅಭಿಷೇಕಿಸಿದನು; ದೇವರು ಆತನ ಸಂಗಡ ಇದ್ದದರಿಂದ ಆತನು ಉಪಕಾರಗಳನ್ನು ಮಾಡುತ್ತಾ ಸೈತಾನನಿಂದ ಬಾಧಿಸಲ್ಪಡುತ್ತಿರುವವರೆಲ್ಲರನ್ನು ಗುಣಮಾಡುತ್ತಾ ಸಂಚರಿಸಿದನು”. ಯೇಸುವಿನ ಜೀವಿತದಲ್ಲಿಯೂ ಸಹ, (ಪವಿತ್ರಾತ್ಮನ), ಬಲವೇ ಆತನು ಪವಿತ್ರಾತ್ಮನಿಂದ ಅಭಿಷೇಕಿಸಲ್ಪಟ್ಟಿದ್ದಾನೆ ಎಂಬುದರ ಸಾಕ್ಷಿಯಾಗಿತ್ತು. ಮತ್ತು ಆ ಬಲದಿಂದ ಯೇಸು ಉಪಕಾರಗಳನ್ನು ಮಾಡಿದನು ಮತ್ತು ಸೈತಾನನ ದಬ್ಬಾಳಿಕೆಯಿಂದ ಜನರನ್ನು ಬಿಡಿಸಿದನು. ದೇವರು ನಮ್ಮನ್ನು ಆತ್ಮದಿಂದ ತುಂಬಿಸುತ್ತಾನೆ. ಇದರಿಂದ ನಾವು ಕೂಡ ಮತ್ತೊಬ್ಬರಿಗೆ ಉಪಕಾರಗಳನ್ನು ಮಾಡಲು ಸಾಧ್ಯ ಮತ್ತು ಅವರನ್ನು ಸೈತಾನನ ದಬ್ಬಾಳಿಕೆಯಿಂದ ಬಿಡುಗಡೆಗೊಳಿಸಲು ಸಾಧ್ಯ. ಸೈತಾನನಿಂದ ಬಾಧಿಸಲ್ಪಟ್ಟಿರುವವರು, ಎದೆಗುಂದಿರುವವರು, ದಾಂಪತ್ಯ ಜೀವನದಲ್ಲಿ ಅಸಂತೋಷದಲ್ಲಿರುವವರು, ತಮ್ಮ ದಾಂಪತ್ಯ ಸಂಗಾತಿಗಳ (ಗಂಡ ಅಥವಾ ಹೆಂಡತಿ) ಕಿರುಕುಳಕ್ಕೊಳಗಾದವರು, ತಮ್ಮ ಪೋಷಕರಿಂದ ತಿರಸ್ಕರಿಸಲ್ಪಟ್ಟವರು ಮತ್ತು ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಿರುವವರು ನಮ್ಮ ಸುತ್ತ-ಮುತ್ತಲಿದ್ದಾರೆ. ನಮ್ಮನ್ನು ದೇವರು ಇಂತಹ ಜನರ ಮಧ್ಯದಲ್ಲಿಟ್ಟಿದ್ದಾನೆ. ಹಾಗಾಗಿ ಅವರು ಪಾಪದಿಂದ ಮತ್ತು ಸೈತಾನನಿಂದ ಬಿಡುಗಡೆ ಹೊಂದಲು ಮತ್ತು ಅವರು ಸಂತೋಷದಿಂದಿರಲು ಅವರಿಗೆ ನಾವು ಸಹಾಯ ಮಾಡಬೇಕು. ಯೇಸುವಿಗೂ ಸಹ ಈ ಸೇವೆಯನ್ನು ಪೂರ್ಣಗೊಳಿಸಲು ಪವಿತ್ರಾತ್ಮನ ಅಭಿಷೇಕದ ಅವಶ್ಯಕತೆ ಇತ್ತು. ಹಾಗಾದಲ್ಲಿ, ನಮಗೆ ಪವಿತ್ರಾತ್ಮನ ಅಭಿಷೇಕ ಎಷ್ಟು ಅವಶ್ಯವಿರಬಹುದು! ಯೇಸು ಅಭಿಷೇಕಿಸಲ್ಪಟ್ಟಾಗ ”ದೇವರು ಆತನೊಂದಿಗೆ ಇದ್ದನು” ಎಂಬುದಾಗಿ ನಾವು ಓದುತ್ತೇವೆ ಮತ್ತು ನಾವು ಪವಿತ್ರಾತ್ಮನಿಂದ ತುಂಬಿಸಲ್ಪಟ್ಟಾಗ, ದೇವರು ನಮ್ಮೊಂದಿಗೂ ಸಹ ಇರುತ್ತಾನೆ. ನಾವು ದೇವರ ವಾಕ್ಯವನ್ನು ಬೋಧಿಸಲು ವೇದಿಕೆಯಲ್ಲಿ ನಿಂತಾಗ ಅಥವಾ ನಾವು ಒಬ್ಬರಿಂದ ದೆವ್ವವನ್ನು ಬಿಡಿಸಲು ಹೋದಾಗ, ಜನರನ್ನು ಆಶಿರ್ವದಿಸಲು ದೇವರು ನಮ್ಮೊಂದಿಗಿರುತ್ತಾರೆ.