WFTW Body: 

ಯಾಕೋಬ 1:12-15ರಲ್ಲಿ, ಅಪೊಸ್ತಲನು ಶೋಧನೆ ಮತ್ತು ಪಾಪದ ಬಗ್ಗೆ ಮಾತನಾಡುತ್ತಾನೆ. ಆತನು ಹೇಳುವುದೇನೆಂದರೆ - ನೀವು ಶೋಧನೆಯನ್ನು ಜಯಿಸುತ್ತಾ ಹೋದರೆ, ಒಂದು ದಿನ ದೇವರಿಂದ ಜೀವ(ನ)ದ ಕಿರೀಟವನ್ನು ಪಡೆದುಕೊಳ್ಳುತ್ತೀರಿ. ದೇವರನ್ನು ಪ್ರೀತಿಸುವವರೆಲ್ಲರಿಗೂ ದೇವರು ಈ ವಾಗ್ದಾನವನ್ನು ಕೊಡುತ್ತಾರೆ. ಇದು ನಮಗೆ ಬೋಧಿಸುವುದೇನೆಂದರೆ, ನಾವು ಕರ್ತನನ್ನು ಪ್ರೀತಿಸಿದರೆ, ಪಾಪದ ಎಲ್ಲಾ ಶೋಧನೆಗಳ ವಿರುದ್ಧ ನಾವು ಹೋರಾಡುವವರಾಗಿದ್ದೇವೆ ಎಂಬುದಾಗಿ.

ನಿಮಗೆ ಶೋಧನೆ ಬಂದಾಗ, ಈ ರೀತಿಯಾಗಿ ಕೇಳಬೇಡಿ - "ದೇವರೇ, ಈ ಶೋಧನೆಯನ್ನು ನನಗೆ ಏಕೆ ಬರಮಾಡಿದ್ದೀ?" ಎಂಬುದಾಗಿ. ದೇವರು ಅದನ್ನು ಕಳುಹಿಸಿರುವುದಿಲ್ಲ. ದೇವರು ಯಾರನ್ನೂ ಶೋಧಿಸುವುದಿಲ್ಲ. "ಯಾವನಾದರೂ ಪಾಪಮಾಡುವುದಕ್ಕೆ ಪ್ರೇರೇಪಿಸಲ್ಪಡುವಾಗ - ಈ ಪ್ರೇರಣೆಯು ನನಗೆ ದೇವರಿಂದ ಉಂಟಾಯಿತೆಂದು ಹೇಳಬಾರದು. ದೇವರು ಕೆಟ್ಟದ್ದಕ್ಕೇನೂ ಸಂಬಂಧಪಟ್ಟವನಲ್ಲ; ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸುವುದಿಲ್ಲ” (ಯಾಕೋಬ 1:13).

ಹಾಗಾದರೆ ನಿಮ್ಮನ್ನು ಶೋಧಿಸುತ್ತಿರುವುದು ಯಾರು? ನಿಮ್ಮ ಶರೀರದಾಶೆಗಳ ಮೂಲಕ ಸೈತಾನನು ನಿಮ್ಮನ್ನು ಶೋಧಿಸುತ್ತಿದ್ದಾನೆ. ನಾವು ನಮ್ಮ ಬಾಲ್ಯಾವಸ್ಥೆಯಿಂದ ಅನೇಕ ವರ್ಷಗಳ ತನಕ, ನಮ್ಮ ಶರೀರದ ಆಶೆಗಳನ್ನು ತೃಪ್ತಿಪಡಿಸುತ್ತಾ ಬಂದಿದ್ದೇವೆ. ನಮ್ಮನ್ನು ಶೋಧಿಸುವ ಸಲುವಾಗಿ ಸೈತಾನನು ಈ ಶರೀರದಾಶೆಗಳನ್ನು ಉಪಯೋಗಿಸುತ್ತಾನೆ. ಒಂದು ದೇಶ ಯುದ್ಧ ಮಾಡುತ್ತಿರುವಾಗ, ಶತ್ರುವು ತನ್ನ ಪ್ರತಿನಿಧಿಗಳನ್ನು ರಹಸ್ಯವಾಗಿ ವೈರಿ ದೇಶದೊಳಕ್ಕೆ ನುಗ್ಗಿಸಿ, ಅಲ್ಲಿ ವಿನಾಶ ಮಾಡುವಂತೆ ಕಳುಹಿಸುತ್ತಾನೆ. ಹೀಗೆ ಶತ್ರುವು ಎರಡು ವಿಧದಲ್ಲಿ ಹೋರಾಡುತ್ತಾನೆ. ಮೊದಲನೆಯದಾಗಿ ರಣರಂಗದಲ್ಲಿ ಹೋರಾಡುವುದು ಮತ್ತು ಎರಡನೇದಾಗಿ, ತನ್ನ ಪ್ರತಿನಿಧಿಗಳ ಮೂಲಕ ದೇಶದೊಳಗೆ ಹೋರಾಡುವುದು. ಇದನ್ನೇ ಸೈತಾನನು ಸಹ ಮಾಡುವವನಾಗಿದ್ದಾನೆ. ನಾವು ನಮ್ಮೊಳಗಿರುವ ಸೈತಾನನ ಪ್ರತಿನಿಧಿಗಳನ್ನು ಪತ್ತೆಹಚ್ಚಬೇಕು. ನಮ್ಮ ಶರೀರದಲ್ಲಿರುವ ದೈವಿಕವಲ್ಲದ ಆಸೆಗಳು ಸೈತಾನನ ಪಕ್ಷದವರಾಗಿರುವುದರಿಂದ, ನಾವು ಅವುಗಳನ್ನು ಸಾಯಿಸಬೇಕು. ನೀವು ನಿಮ್ಮೊಳಗಿರುವ ಶತ್ರುವಿನ ಪ್ರತಿನಿಧಿಗಳನ್ನು ಸಾಯಿಸಿದರೆ, ಮುಂದೆ ನೀವು ಸೈತಾನನ ವಿರುದ್ಧ ಹೋರಾಡಲು ಬಲಗೊಳ್ಳುತ್ತೀರಿ. ನಿಮ್ಮ ಮನಸ್ಸನ್ನು ತಪ್ಪಾದ ಆಸೆಗಳಿಗೆ ಒಪ್ಪಿಸಿಕೊಟ್ಟಾಗ ಮಾತ್ರ ನೀವು ಪಾಪ ಮಾಡುವವರಾಗಿರುತ್ತೀರಿ. ಅಲ್ಲಿಯ ತನಕ ಅಲೋಚನೆಯು ನಿಮ್ಮ ಮನಸ್ಸಿಗೆ ಬಂದರೆ, ಅದು ಕೇವಲ ಶೋಧನೆಯಾಗಿರುತ್ತದೆ. ಉದಾಹರಣೆಗೆ, ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ನಿಮಗೆ ಶೋಧಿಸುವಂತದ್ದನ್ನು ನೀವು ನೋಡಿದರೆ ಅದು ಪಾಪವಲ್ಲ. ಅದು ಕೇವಲ ಶೋಧನೆಯಾಗಿದೆ. ಆದರೆ ನೀವು ಅದನ್ನು ಮತ್ತೊಮ್ಮೆ ನೋಡಿದರೆ ಅದು ಪಾಪವಾಗಿದೆ. ಮೊದಲ ನೋಟವು ಶೋಧನೆಯಾಗಿದೆ, ಎರಡನೇ ನೋಟವು ಪಾಪವಾಗಿದೆ. ನಾವು ಮೊದಲನೇ ನೋಟವನ್ನು ತಡೆಹಿಡಿಯಲು ಆಗುವುದಿಲ್ಲ, ಯಾಕೆಂದರೆ ನಾವು ಜೀವಿಸುತ್ತಿರುವ ಲೋಕದ ಸುತ್ತಮುತ್ತಲಿನ ಹೆಚ್ಚಿನದೆಲ್ಲ ಕೆಟ್ಟದ್ದಾಗಿದೆ. ಆದರೆ ಕೆಟ್ಟದ್ದಕ್ಕೆ ಒಪ್ಪಿಕೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ನಾವು ನಿರ್ಧರಿಸಬಹುದು.

ಪವಿತ್ರಾತ್ಮನು ಇಲ್ಲಿ ಉಪಯೋಗಿಸಿದ ಉದಾಹರಣೆಯು ಮಗುವಿಗಾಗಿ ಗರ್ಭಧರಿಸುವುದಂತಿದೆ. ನಿಮ್ಮ ಮನಸ್ಸು ನಿಮ್ಮ ಶರೀರದಲ್ಲಿನ ದುರಾಶೆಗಳಿಗೆ ಒಪ್ಪಿದರೆ, ಅದು ಒಬ್ಬ ಹೆಂಗಸು ಒಬ್ಬನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಲು ತನ್ನ ದೇಹವನ್ನು ಕೊಡಲು ಒಪ್ಪಿಕೊಂಡ ಹಾಗೆ. ಆಗ ಗರ್ಭದಾರಣೆ ನಡೆಯುತ್ತದೆ. ಆದರೆ ಒಬ್ಬ ಹೆಂಗಸು ಒಬ್ಬಾತನಿಗೆ ತನ್ನನ್ನೇ ಒಪ್ಪಿಸಿಕೊಡಲು ನಿರಾಕರಿಸಿದರೆ ಗರ್ಭಧಾರಣೆಯು ನಡೆಯುವುದಿಲ್ಲ. ಅದೇ ರೀತಿ, ನೀವು ಶೋಧನೆಯನ್ನು ತಿರಸ್ಕರಿಸಿ, ನಿಮ್ಮ ಮನಸ್ಸನ್ನು ದುರಾಶೆಗಳಿಗೆ ಒಪ್ಪಿಸಲು ಅನುಮತಿಸದಿದ್ದರೆ, ಅಲ್ಲಿ ಪಾಪವಿರುವುದಿಲ್ಲ.

ಒಬ್ಬರು ಈ ರೀತಿಯಾಗಿ ಹೇಳಿದ್ದಾರೆ -

"ನಿಮ್ಮ ತಲೆಯ ಮೇಲೆ ಹಾರಾಡುವ ಪಕ್ಷಿಗಳನ್ನು ತಡೆಯಲಾಗುವುದಿಲ್ಲ, ಆದರೆ ಆ ಪಕ್ಷಿಗಳು ನಿಮ್ಮ ತಲೆಯಲ್ಲಿ ಗೂಡನ್ನು ಕಟ್ಟುವುದನ್ನು ತಡೆಯಬಹುದು"

. ಪಕ್ಷಿಯು ನಿಮ್ಮ ತಲೆಯ ಮೇಲೆ ಹಾರಾಡುವಂತದ್ದು ಶೋಧನೆಯಾಗಿದೆ. ಅನೇಕ ಕೆಟ್ಟ ಆಲೋಚನೆಗಳು ನಿಮ್ಮ ಮನಸ್ಸಿಗೆ ಬರುತ್ತವೆ. ಅವುಗಳನ್ನು ನೀವು ತಕ್ಷಣವೇ ತಿರಸ್ಕರಿಸಿದರೆ, ಅದು ಪಾಪವಲ್ಲ. ಅವು ಕೇವಲ ಶೋಧನೆಗಳಾಗಿವೆ. ಆದರೆ ನೀವು ಕೇವಲ ಕೆಲವೇ ಸೆಂಕೆಂಡುಗಳ ಕಾಲ ಆ ಕೆಟ್ಟ ಆಲೋಚನೆಗಳಲ್ಲಿ ಸಂತೋಷಪಟ್ಟು, ಅವುಗಳನ್ನು ಆರಿಸಿಕೊಂಡರೆ, ನೀವು "ಹಕ್ಕಿಗಳನ್ನು" ನಿಮ್ಮ ಮನಸ್ಸಿನಲ್ಲಿ ಗೂಡು ಕಟ್ಟಲು ಅನುಮತಿಸಿದ ಹಾಗೆ ಆಗುತ್ತದೆ. ಆಗ ನೀವು ಪಾಪ ಮಾಡಿದವರಾಗಿರುತ್ತೀರಿ.

ಯೇಸುವಿನ ಮನಸ್ಸೊಳಗೆ ಹಲವು ಆಲೋಚನೆಗಳನ್ನು ಹಾಕುವ ಮೂಲಕ ಅರಣ್ಯದಲ್ಲಿ ಸೈತಾನನು ಆತನನ್ನು ಶೋಧಿಸಿದನು. ಆದರೆ ಪ್ರತೀ ಸಮಯವು ಯೇಸುವು ಅವನ್ನು ತಿರಸ್ಕರಿಸಿದ್ದರಿಂದ, ಆತನು ಪಾಪ ಮಾಡಲಿಲ್ಲ. ಆದ್ದರಿಂದ (ಕೆಟ್ಟ) ಆಲೋಚನೆಗಳು ಪದೇ ಪದೇ ನಿಮ್ಮ ಮನಸ್ಸಿಗೆ ಬರುವುದರಿಂದ ನಿರುತ್ಸಾಹಗೊಳ್ಳಬೇಡಿರಿ. ಅವು ಕೇವಲ ಶೋಧನೆಗಳಾಗಿವೆ. ನೀವು ಆ ಆಲೋಚನೆಗಳಲ್ಲಿ ಸಂತೋಷಪಟ್ಟರೆ ಮತ್ತು ಅವುಗಳನ್ನು ಒಪ್ಪಿಕೊಂಡರೆ, ಆಗ ಅದು ಪಾಪವಾಗುತ್ತದೆ. ಗರ್ಭಧರಿಸಿಕೊಂಡರೆ ಮಾತ್ರ ಪಾಪ ಹುಟ್ಟುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ನಮಗೊಂದು ಬಿಡುಗಡೆಯಾಗಿದೆ. ಒಂದು ವೇಳೆ ಗರ್ಭಧಾರಣೆ ಇಲ್ಲದಿದ್ದಲ್ಲಿ, ಮಗು ಇರುವುದಿಲ್ಲ. ಪಾಪದ ಕೊನೆಯ ಫಲಿತಾಂಶವೇನೆಂದರೆ ಆತ್ಮಿಕ ಮರಣವಾಗಿದೆ (ಯಾಕೋಬ 1:5) ಮತ್ತು ನಾವು ಇದರ ಬಗ್ಗೆ ಮೋಸ ಹೋಗಬಾರದು (ಯಾಕೋಬ 1:16).