ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ನಾಯಕರಿಗೆ ತಿಳಿಯುವುದು
WFTW Body: 

ನ್ಯಾಯಸ್ಥಾಪಕರು 6:34ರಲ್ಲಿ ಈ ರೀತಿಯಾಗಿ ಬರೆದಿದೆ - "ಗಿದ್ಯೋನನು ಯೆಹೋವನ ಆತ್ಮನ ಆವೇಶವುಳ್ಳವನಾದನು". ಗಿದ್ಯೋನನ ಮೇಲೆ ಪವಿತ್ರಾತ್ಮನು ಆತನ ಉಡುಪಿನಂತೆ ಆವರಿಸಿದನು. ಇದರಿಂದ ಗಿದ್ಯೋನನು ಬಲಗೊಂಡು, ತುತ್ತೂರಿಯ ಧ್ವನಿಯೊಂದಿಗೆ ಯುದ್ಧಕ್ಕೆ ಹೊರಟನು. 32,000 ಜನರು ಆತನೊಂದಿಗೆ ಸೇರಿಕೊಂಡು ಯುದ್ಧಕ್ಕೆ ಹೊರಟರು. ಆದರೆ ಇಷ್ಟು ಜನ ಬೇಕಿಲ್ಲವೆಂದು ದೇವರು ಹೇಳಿದರು (ನ್ಯಾಯಸ್ಥಾಪಕರು 7:2). ಅವರೆಲ್ಲರಲ್ಲಿ ಪೂರ್ಣಹೃದಯ ಇರದಿದ್ದುದರಿಂದ, ದೇವರಿಗೆ ಅವರು ಬೇಕಾಗಿರಲಿಲ್ಲ. ಗಿದ್ಯೋನನು ಅವರಲ್ಲಿ ಧೈರ್ಯವಿಲ್ಲದ ಎಲ್ಲರನ್ನೂ ಮನೆಗೆ ಕಳುಹಿಸಿದನು.

ದೇವರು ನಮಗೂ ಅದನ್ನೇ ಹೇಳುತ್ತಾರೆ: "ನಿಮಗೆ ಪಿಶಾಚನ ಭಯವೇ? ಹಾಗಿದ್ದರೆ ನೀವು ಮನೆಗೆ ಹೋಗಿರಿ. ಯಾರಾದರೂ ನಿಮ್ಮನ್ನು ’ಬೆಲ್ಜೆಬೂಲ’, ’ಸಂಪ್ರದಾಯ ವಿರೋಧಿ’ ಅಥವಾ ’ಸುಳ್ಳು ಪ್ರವಾದಿ’ ಎಂದು ಕರೆಯುವರೆಂದು ಭಯಪಡುವಿರಾ? ಹಾಗಾದರೆ ಮನೆಗೆ ಹಿಂತಿರುಗಿರಿ. ದೇವರ ಸೇವೆಯಲ್ಲಿ ನಿಮ್ಮ ಸಮಯ ವ್ಯರ್ಥ ಮಾಡಬೇಡಿರಿ''.

ಆ ದಿನ 22,000 ಜನರು ಮನೆಗಳಿಗೆ ಹಿಂದಿರುಗಿದರು. ಇನ್ನೂ 10,000 ಮಂದಿ ಉಳಿದಿದ್ದರು (ನ್ಯಾಯಸ್ಥಾಪಕರು 7:3). ದೇವರು ಇನ್ನೂ ಬಹಳ ಹೆಚ್ಚು ಜನರು ಇದ್ದಾರೆಂದು ಹೇಳಿದರು. ಇವರೂ ಸಹ ಪೂರ್ಣ ಹೃದಯರಾಗಿರಲಿಲ್ಲ. ಅವರಲ್ಲಿ ಅಧಿಕಾಂಶ ಜನ ತಮ್ಮ ಹಿತಾಸಕ್ತಿಯನ್ನೇ ನೋಡುತ್ತಿದ್ದುದರಿಂದ ಅವರನ್ನು ತೆಗೆದುಹಾಕುವದು ಅವಶ್ಯವಾಗಿತ್ತು. "ಅವರನ್ನು ನೀರಿನ ಹಳ್ಳಕ್ಕೆ ಕರೆದುಕೊಂಡು ಹೋಗು; ಅಲ್ಲಿ ಅವರನ್ನು ನಿನಗೋಸ್ಕರ ಪರೀಕ್ಷಿಸುವೆನು" ಎಂದು ಕರ್ತನು ಹೇಳಿದನು (ನ್ಯಾಯಸ್ಥಾಪಕರು 7:4). ಅವರು ಹಳ್ಳಕ್ಕೆ ಬಂದಾಗ, ಹೆಚ್ಚಿನವರು ಎಲ್ಲಾ ಶತ್ರುಗಳನ್ನು ಮರೆತು, ಮೊಣಕಾಲೂರಿ ತಲೆತಗ್ಗಿಸಿ ನೀರು ಕುಡಿದರು. ಅನೇಕ ಕ್ರೈಸ್ತರೂ ಸಹ ಹೀಗಿರುತ್ತಾರೆ. ಅವರು ಈ ಲೋಕದ ಆಕರ್ಷಕ ವಸ್ತುಗಳನ್ನು ಕಂಡೊಡನೆ, ಕರ್ತನನ್ನೂ, ಆತನ ಹೋರಾಟಗಳನ್ನೂ ಮರೆತುಬಿಟ್ಟು, ಹಣದ ದುರಾಸೆಗೆ ತಲೆ ಬಾಗಿಸುತ್ತಾರೆ. ಈ ರೀತಿಯಾಗಿ ಆ ದಿನ ಗಿದ್ಯೋನನ 9,700 ಸೈನಿಕರು ಅನರ್ಹರಾದರು.

ಅಲ್ಲಿ 300 ಜನರು ಮಾತ್ರ ಉಳಿದುಕೊಂಡರು. ಇವರು ನೀರಿನ ತೊರೆಯ ಬಳಿಗೆ ಬಂದಾಗ, ಶತ್ರುಗಳ ಬಗ್ಗೆ ಜಾಗೃತರಾಗಿದ್ದು, ತಮ್ಮ ಕೈ ಬೊಗಸೆಯಲ್ಲಿ ಸ್ವಲ್ಪ ನೀರನ್ನು ಬಾಚಿಕೊಂಡು, ತಮ್ಮ ಸದ್ಯದ ದಾಹವನ್ನು ತೀರಿಸಿಕೊಂಡರು. ಹಣವನ್ನು ಮತ್ತು ಲೌಕಿಕ ವಸ್ತುಗಳನ್ನು ಉಪಯೋಗಿಸಿಕೊಂಡರೂ, ಇವುಗಳು ಮನಸ್ಸಿಗೆ ನಾಟದಂತೆ ಎಚ್ಚರಿಕೆ ವಹಿಸುವ ವಿಶ್ವಾಸಿಗಳ ನಮೂನೆ ಇದಾಗಿದೆ. ಇವರು ಕೆಲಸ-ಉದ್ಯೋಗಗಳಲ್ಲಿ ನಂಬಿಗಸ್ಥರಾಗಿದ್ದು ಸಂಪಾದಿಸುತ್ತಾರೆ, ಆದರೆ ಮಿಕ್ಕ ಸಮಯವನ್ನು ದೇವರಿಗಾಗಿ ತಮ್ಮ ಕೈಯಲ್ಲಿ ಆದಷ್ಟನ್ನು ಮಾಡುತ್ತಾ ವಿನಿಯೋಗಿಸುತ್ತಾರೆ. "ನನಗೆ ಇಂಥವರು ಬೇಕಾಗಿದ್ದಾರೆ" ಎಂದು ದೇವರು ಹೇಳುತ್ತಾರೆ. ಅಂದು ಆ ಸೇನೆಯಲ್ಲಿ ಕೇವಲ 300 ಜನರು ಉಳಿದಿದ್ದರು - ಅಂದರೆ, ಆರಂಭದಲ್ಲಿದ್ದ 32,000 ಜನರಲ್ಲಿ 1%ರಷ್ಟು ಮಾತ್ರ. ಯಾವಾಗಲೂ ಇವರ ಪ್ರಮಾಣವು ಚಿಕ್ಕದಾಗಿರುತ್ತದೆ, ಏಕೆಂದರೆ ಜೀವಮಾರ್ಗವು ತುಂಬಾ ಇಕ್ಟಟ್ಟಾಗಿದ್ದು, ಇದನ್ನು ಸ್ವಲ್ಪ ಜನರಷ್ಟೇ ಕಂಡುಕೊಳ್ಳುತ್ತಾರೆ. ಇಸ್ರಾಯೇಲಿನ 6,00,000 ಜನರಲ್ಲಿ ಇಬ್ಬರು ಮಾತ್ರ - ಯೆಹೋಶುವ ಮತ್ತು ಕಾಲೇಬ - ಪ್ರಮಾಣಪೂರ್ವಕವಾಗಿ ಕೊಟ್ಟ ದೇಶವನ್ನು ನೋಡಿದರು. ಆದರೆ ಕರ್ತನು ಆ ಅಲ್ಪ ಸಂಖ್ಯೆಯಲ್ಲೇ ಸಂತೋಷಿಸುತ್ತಾನೆ.

ನಾವು ನ್ಯಾಯಸ್ಥಾಪಕ. 7:16ರಲ್ಲಿ ಓದುವಂತೆ, ಗಿದ್ಯೋನನು ತನ್ನ ಸೇನೆಯನ್ನು ತಲಾ 100 ಗಂಡಸರಂತೆ ವಿಂಗಡಿಸಿದನು. ಪ್ರತಿಯೊಬ್ಬರೂ ಕೈಗಳಲ್ಲಿ ಒಂದು ಕೊಂಬನ್ನು ಮತ್ತು ಉರಿಯುವ ಪಂಜು ಅಡಗಿದ್ದ ಒಂದು ಖಾಲಿ ಮಡಕೆಯನ್ನು ಹಿಡಿದುಕೊಂಡರು. ಅವರು ಉರಿಯುವ ಪಂಜು ಅಡಗಿದ್ದ ಬರಿ ಮಡಕೆಯನ್ನು ಒಡೆದಾಗ ಬೆಳಕು ತೋರಿತು ಮತ್ತು ಜೊತೆಗೆ ತಮ್ಮ ಕೊಂಬುಗಳನ್ನು ಊದಿದರು. ನಮ್ಮ ಜೀವನ ಮತ್ತು ಸೇವೆಯು ಹೇಗಿರಬೇಕೆಂಬ ಚಿತ್ರಣ ಇದಾಗಿದೆ.

ನಾವೆಲ್ಲರೂ ಮಣ್ಣಿನ ಮಡಕೆಗಳಾಗಿದ್ದೇವೆ, ಆದರೆ "ಅನೇಕರಿಗೆ ದೇವಪ್ರಭಾವ ಜ್ಞಾನವೆಂಬ ಪ್ರಕಾಶವು ಉಂಟಾಗುವುದಕ್ಕಾಗಿ ದೇವರು ನಮ್ಮ ಹೃದಯದಲ್ಲಿ ಹೊಳೆದನು. ಈ ನಿಕ್ಷೇಪವು ಮಣ್ಣಿನ ಘಟಗಳಲ್ಲಿ ನಮ್ಮಲ್ಲಿದೆ" (2 ಕೊರಿಂಥ 4:6,7 - ಭಾವಾನುವಾದ). ಆದರೆ ಅನೇಕ ಸಂಕಟಗಳ ಮೂಲಕ ಈ ಮಣ್ಣಿನ ಹಂಡೆಯು ಒಡೆಯಬೇಕು - ಅಂದರೆ, "ಯೇಸುವಿನ ಮರಣಾವಸ್ಥೆಯನ್ನು" ಅನುಭವಿಸಬೇಕು - ಹೀಗೆ ಆದಾಗ ಮಾತ್ರವೇ ಈ ಬೆಳಕಿನ ಪ್ರಕಾಶ ಇತರರನ್ನು ತಲಪುತ್ತದೆ (2 ಕೊರಿಂಥ 4:7-11). ಹೀಗೆ ಆಗದಿದ್ದಲ್ಲಿ, ಈ ಬೆಳಕು ಕೊನೆಯವರೆಗೂ ನಮ್ಮೊಳಗೆ ಅಡಗಿರುತ್ತದೆ. ಈ ವಚನಗಳನ್ನು ಪೌಲನು ಬರೆದಾಗ, ಗಿದ್ಯೋನನ ಸೇನೆಯು ಬೆಂಕಿಯ ಪಂಜನ್ನು ಮಣ್ಣಿನ ಮಡಕೆಗಳ ಒಳಗೆ ಇರಿಸಿದ್ದನ್ನೂ, ಆ ಮಡಕೆಗಳು ಒಡೆಯಲ್ಪಟ್ಟಾಗ ಮಾತ್ರ ಒಳಗಿನ ಬೆಳಕು ಕಾಣಿಸಿದ್ದನ್ನೂ ನೆನಪಿಸಿಕೊಂಡಿದ್ದನು. ದೇವರು ನಮ್ಮನ್ನು ಅನೇಕ ಸನ್ನಿವೇಷಗಳ ಮುಖಾಂತರ ಮುರಿದು, ಆ ಮೂಲಕ ನಮ್ಮೊಳಗಿರುವ ಕ್ರಿಸ್ತನ ಸ್ವರೂಪವು ಪ್ರಜ್ವಲಿಸುವಂತೆ ಮಾಡಲು ಬಯಸುತ್ತಾರೆ. ತುತ್ತೂರಿಯನ್ನು ಊದುವದು, ದೇವರ ಪ್ರಭಾವವನ್ನು ಮತ್ತು ಆತನ ವಾಕ್ಯದ ಮಹಿಮೆಯನ್ನು ನಾಚಿಕೆ ಪಡದೆ ಸಾರುವದರ ಒಂದು ಚಿತ್ರಣವಾಗಿದೆ. ಇಂದು ದೇವರು ಇಂತಹ ಪುರುಷರು ಮತ್ತು ಸ್ತ್ರೀಯರಿಗಾಗಿ ಕಾದಿದ್ದಾರೆ.

ಇದಕ್ಕೂ ಹಿಂದೆ, ಯುದ್ಧಕ್ಕೆ ಹೊರಡುವ ಮೊದಲು, ದೇವರು ಗಿದ್ಯೋನನಿಗೆ ಹೀಗೆ ಹೇಳಿದರು, "ಅವರ ಮೇಲೆ ಬೀಳುವದಕ್ಕೆ ಹೆದರುತ್ತೀಯಾದರೆ, ಮೊದಲು ನಿನ್ನ ಸೇವಕನಾದ ಪುರನ ಸಂಗಡ ಅಲ್ಲಿಗೆ ಹೋಗಿ, ಅವರು ಮಾತಾಡಿಕೊಳ್ಳುವದನ್ನು ಲಾಲಿಸು" (ನ್ಯಾಯಸ್ಥಾಪಕರು 7:10,11). ಗಿದ್ಯೋನನು ಹಾಗೆಯೇ ಇಳಿದು ಅಲ್ಲಿಗೆ ಹೋದಾಗ, ಎಲ್ಲಾ ಮಿದ್ಯಾನ್ಯರು ಆತನಿಗೂ, ಆತನ ಜನರ ಗುಂಪಿಗೂ ಭಯಪಡುತ್ತಾರೆಂದು ಆತನಿಗೆ ತಿಳಿಯಿತು. ನೀವು ಇಂದು ಪಿಶಾಚನ ಪಾಳೆಯಕ್ಕೆ ಹೋಗಿ ಆಲಿಸಿದರೆ, ಅವುಗಳೆಲ್ಲವೂ ಯೇಸುವಿಗೆ ಭಯಪಡುತ್ತವೆ ಮತ್ತು ಆತನ ಶಿಷ್ಯರಿಗೂ ಭಯಪಡುತ್ತವೆ ಎಂದು ತಿಳಕೊಳ್ಳುತ್ತೀರಿ. ಆಗ ನಮಗೆ ಸೈತಾನನನ್ನು ಎದುರಿಸಿ ಹೋರಾಡುವ ಧೈರ್ಯ ಬರುತ್ತದೆ. ಪಿಶಾಚನು ಯೇಸು ಕ್ರಿಸ್ತನಿಗೆ ಭಯಪಡುತ್ತಾನೆ - ಮತ್ತು ನಾವು ನಿಜವಾದ ಶಿಷ್ಯರಾಗಿದ್ದರೆ - ಆತನು ನಮಗೂ ಸಹ ಭಯಪಡುತ್ತಾನೆ. ಹಾಗಾಗಿ ಆತನು ನಮ್ಮನ್ನು ಭಯ ಪಡಿಸಲು ಯತ್ನಿಸುವಾಗ, ನಾವು ಪ್ರತೀ ಸಾರಿ ಆತನ ವಂಚನೆಯ ಮುಖವಾಡವನ್ನು ಬಯಲು ಮಾಡೋಣ.