ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ
WFTW Body: 

ನಮ್ಮೆಲ್ಲರಿಗೂ ಗೊತ್ತಿರುವಂತೆ ನಾವು ಕೆಲವು ಮನೆಗಳಿಗೆ ಹೋಗುವಾಗ ನಮ್ಮದೇ ಸ್ವಂತ ಮನೆಯಂಥಹ (feeling at home)  ಅನುಭವ ನಮಗಾಗುವುದಿಲ್ಲ. ಆದರೆ ಕೆಲವು ಇತರ ಮನೆಗಳಲ್ಲಿ, ನಾವು  ಆ ಮನೆಗಳನ್ನು ಪ್ರವೇಶಿಸಿದ ಕ್ಷಣದಿಂದಲೇ ನಮಗೆ ನಮ್ಮದೇ ಮನೆಯಂಥಹ ಅನುಭವ ಆಗುವಂತೆ ಅವರು ಮಾಡುತ್ತಾರೆ. ಇದನ್ನು ವಿವರಿಸಲು ಕಷ್ಟ. ಆದರೆ ನಮ್ಮೆಲ್ಲರಿಗೂ ಅದು ಗೊತ್ತು.

   

ಕ್ರೈಸ್ತ ಮನೆಯು ಯೇಸುವು ಸಂಪೂರ್ಣವಾಗಿ ಸ್ವಂತ ಮನೆಯ ಅನುಭವವನ್ನು ಪಡೆಯುವಂಥದ್ದಾಗಿರಬೇಕು. ಅಂದರೆ ಆತನು ಆ ಮನೆಯಲ್ಲಿ ನೋಡುವ ಪ್ರತಿಯೊಂದು ವಿಷಯದ ಬಗ್ಗೆ ಸಂತೋಷಪಡುವವನಾಗಿರಬೇಕು. ನೀವು ಓದುವಂಥ ಪುಸ್ತಕಗಳು, ನೀವು ಪಡೆಯುವ ಪತ್ರಿಕೆಗಳು, ಗಂಡ-ಹೆಂಡತಿಯ ನಡುವಿನ ನಡೆಯುವ ಸಂಭಾಷಣೆ, ನೀವು ಮಾತಾಡುವ ಸಂಗತಿಗಳು,  ಟಿ. ವಿ.  ಯಲ್ಲಿ ನೋಡುವ ಕಾರ್ಯಕ್ರಮಗಳು ಹೀಗೆ ಮತ್ತು ಪ್ರತಿಯೊಂದು ವಿಷಯಗಳ ಬಗ್ಗೆ ಆತನು ಸಂತೋಷಪಡಬೇಕು. ಅನೇಕ ಕ್ರೈಸ್ತ ಮನೆಗಳಲ್ಲಿ ಬೈಬಲಿನ ವಾಕ್ಯಗಳು ಗೋಡೆಯ ಮೇಲೆ ನೇತಾಡುತ್ತಿರುತ್ತವೆ. ಆದರೆ ಯೇಸುವಿಗೆ ಆ ಮನೆಯಲ್ಲಿ ಇರಬೇಕೆಂದು ಅನಿಸುವುದಿಲ್ಲ.

 

ದೇವರು ಆದಾಮ ಮತ್ತು ಹವ್ವರನ್ನು ಎಂಥಹ ಮಹತ್ತರವಾದ ಪೂರ್ವ ನಿರೀಕ್ಷಣೆಯಿಂದ ಒಟ್ಟಿಗೆ ತಂದನು ಎಂಬುದಾಗಿ ನೀವು ಊಹಿಸಲು ಸಾಧ್ಯವೇ? ತಂದೆಯಾಗಿ ಆತನಿಗೆ ಎಂಥಹ ಅದ್ಭುತ ಯೋಜನೆಗಳಿದ್ದವು! ಆತನಿಗೆ ಯಾವಾಗಲೂ ಪ್ರಥಮ ಸ್ಥಾನವಿರುವ ಅದ್ಭುತಕರವಾದ ಮನೆಯಲ್ಲಿ ಅವರಿರುವರು ಎಂದು ಆತನು ನಿರೀಕ್ಷಿಸಿದನು. ಆದರೆ ಬಹಳ ಬೇಗ ದೇವರು ನಿರಾಶೆಗೊಳಗಾದನು. ಆತನು ಅವರ ಮೇಲೆ ಕೋಪಗೊಳ್ಳಲಿಲ್ಲ. ಆದರೆ ಆತನು ದುಃಖದಿಂದಿದ್ದನು. ಈ ದಿನ ಅನೇಕ ಕುಟುಂಬಗಳಲ್ಲಿ ಸಮಾಧಾನವಿಲ್ಲದೆ, ಬರೀ ಜಗಳ ಮತ್ತು ಕಲಹಗಳಿಂದ ತುಂಬಿರುವ ಸನ್ನಿವೇಶಗಳನ್ನು ದೇವರು ನೋಡುವಾಗ ಆತನ ಹೃದಯದಲ್ಲಿ ಬಹಳ ನೋವಿರುತ್ತದೆ ಎಂದು ನಾನು ನಂಬುತ್ತೇನೆ. ಜನರು ಅವರಿಗೆ ತೊಂದರೆಗಳಿರುವಾಗ ಮಾತ್ರ ದೇವರ ಕಡೆಗೆ ಬರುತ್ತಾರೆ. ಈ ಲೋಕದ ಜನರು ತಾವು ಸಮಸ್ಯೆಗಳನ್ನು ಎದುರಿಸುವಾಗ ಮಾತ್ರ ದೇವರ ಕಡೆಗೆ ತಿರುಗುತ್ತಾರೆ. ಆದರೆ ಕ್ರೈಸ್ತರಾದ ನಾವು ಅವರಿಗಿಂತ ಭಿನ್ನವಾಗಿರಬೇಕು. ದೇವರು ನಾವು ಯಾವುದೋ ತೊಂದರೆಯಲ್ಲಿರುವಾಗ ಕರೆಮಾಡುವಂಥ, ತುರ್ತು (ಫೋನ್) ಸಂಖ್ಯೆಯಲ್ಲ.  ದೇವರು, ಎಲ್ಲಾಸಮಯದಲ್ಲೂ ನಮ್ಮ ಜೀವಿತಗಳ ಕೇಂದ್ರವಾಗಿರಬೇಕು.

     

ದೇವರ ವಾಕ್ಯವು ನಮಗೆ, ನಾವು ಯಾವುದಾದರೂ  ಯಂತ್ರೋಪಕರಣವನ್ನು ಕೊಳ್ಳುವಾಗ ಅದರ ಜೊತೆ ಸಿಗುವ ‘ತಯಾರಕರ ಸೂಚನೆಗಳ’ ಕೈಪಿಡಿಯಲ್ಲಿ ಕೊಡಲ್ಪಟ್ಟಿದೆ. ಒಂದು ವಿದ್ಯುತ್ತಿನ ಸಣ್ಣ ಉಪಕರಣವನ್ನು ಕೊಂಡಾಗ ಉತ್ಪದಕರ ನಿರ್ದೇಶನದಲ್ಲಿ ಕೊಟ್ಟಿರುವ ನಿರ್ದೇಶನಗಳನ್ನು ಸರಿಯಾಗಿ ಪಾಲಿಸಲು ನಾವು ಬಹಳ ಜಾಗ್ರತೆವಹಿಸುತ್ತೇವೆ. ಒಂದು ವೇಳೆ ನಾವು ಕೊಂಡುಕೊಂಡಿರುವ ಆ ಸಣ್ಣ ಉಪಕರಣಕ್ಕೆ ಯಾವುದೋ ಸಮಸ್ಯೆ ಇರುವುದನ್ನು  ನಾವು ಕಂಡರೆ ಅದನ್ನು ಉತ್ಪಾದಕನ ಬಳಿಗೆ ತೆಗೆದುಕೊಂಡು ಹೋಗುತ್ತೇವೆ. ಹಾಗೆ ತೆಗೆದುಕೊಂಡು ಹೋದಾಗ ಮೊಟ್ಟ ಮೊದಲನೆಯದಾಗಿ ಆ ಉತ್ಪಾದಕನು, “ನೀವು ತಯಾರಕರ ಸೂಚನೆಗಳ’ ಕೈಪಿಡಿಯನ್ನು ಸರಿಯಾಗಿ ಅನುಸರಿಸಿದ್ದೀರೋ? " ಎಂಬುದಾಗಿ ಪ್ರಶ್ನೆ ಕೇಳುತ್ತಾರೆ. ಸತ್ಯಾಂಶವೆಂದರೆ "ತಯಾರಕರ ಸೂಚನೆಗಳನ್ನು ಸರಿಯಾಗಿ ಪಾಲಿಸದಿದ್ದಲ್ಲಿ ಖಾತರಿ ಕಾರ್ಡ್ (Guarantee card) ನಿಷ್ಪ್ರಯೋಜಕ ಎಂದು ಬಹಳಷ್ಟು ಖಾತರಿ ಕಾರ್ಡ್ ಗಳಲ್ಲಿ ಬರೆದಿರುತ್ತದೆ.

         

ದೇವರ ಬಗ್ಗೆ ಅದ್ಭುತವಾದ ಸಂಗತಿಯೆಂದರೆ ನಾವು ನಮ್ಮ ಎಷ್ಟೇ ಹೊಲಸಾದ ಜೀವಿತವನ್ನು ಆತನ ಬಳಿಗೆ ಯಾವುದೇ ಸಮಯದಲ್ಲಿ ತೆಗೆದುಕೊಂಡರೂ ಸಹ ಆತನು ಅದನ್ನು ಸಂತೋಷದಿಂದ ಸರಿಪಡಿಸುತ್ತಾನೆ. ಆತನದು ಒಂದು ವರುಷದ ಖಾತರಿಯಲ್ಲ! ಅದು ಜೀವನ ಪರ್ಯಂತರ! ಒಂದು ವೇಳೆ ನೀವು ಮುರಿದ ಜೀವಿತದಿಂದ ಆತನ ಬಳಿಗೆ ಬಂದರೆ ಆತನು ಅದನ್ನು ನೆಟ್ಟಗೆ ಮಾಡುತ್ತಾನೆ. ಇದೇ ದೇವರ ಕುರಿತಾದ ಅದ್ಭುತ - ಆತನು ನಮ್ಮ ಪ್ರೀತಿಯ ತಂದೆ. ಮತ್ತು ನಿಮ್ಮ ಕುಟುಂಬದಲ್ಲಿ ಆತನಿಗಾಗಿ ಪ್ರವಿತ್ರವಾದ ಸ್ಥಳವನ್ನು ಸಿದ್ಧಪಡಿಸುವಂತೆ ಕೇಳುತ್ತಿರುವನು - ಪ್ರೀತಿಯ ತಂದೆ ಎಂಬುದನ್ನು ನೀವು ತಿಳಿದವರಾಗಿರಬೇಕೆಂಬುದು ಬಹಳ ಪ್ರಾಮುಖ್ಯವಾದುದು. ಆತನಿಗೆ ನಿಮ್ಮ ಜೀವಿತದ ಬಗ್ಗೆ ಬಹಳ ಆಸಕ್ತಿ ಇದೆ.  ಯೇಸುವು ಮರಳಿ ಬರುವವರೆಗೂ ನೀವು ಸಂತೋಷದಿಂದಿರಬೇಕೆಂದು ಆತನ ಆಪೇಕ್ಷೆಯಾಗಿದೆ.

      

ಯೇಸು ಕ್ರಿಸ್ತನನ್ನು ನಮ್ಮ ಜೀವಿತದ ಕೇಂದ್ರವಾಗಿಟ್ಟುಕೊಂಡು ಜೀವಿಸುವ ಜೀವಿತವು ಬಹಳ ಅದ್ಭುತಕರವಾದ ಜೀವಿತವೆಂಬುದನ್ನು ನಾನು ನಿಮಗೆ ಹೇಳಬಲ್ಲೆ. ನೀವು ಸಮಯ ಕಳೆಯುವ ವಿಧಾನ, ನೀವು ಹಣವನ್ನು ಉಪಯೋಗಿಸುವ ವಿಧಾನ, ಮತ್ತು ನೀವು ನಿಮ್ಮ ಕುಟುಂಬದಲ್ಲಿ ಮಾಡುವಂಥ ಪ್ರತಿಯೊಂದೂ ಯೇಸುವನ್ನು ಸಂತೋಷಪಡಿಸಬೇಕು.  ನೀವು ಹಾಗೆ ಜೀವಿಸುವುದಾದರೆ, ನಿಮ್ಮ ಜೀವಿತದ ಅಂತ್ಯದಲ್ಲಿ ಆತನ ಎದುರಿಗೆ ನಿಲ್ಲುವಾಗ, ಆತನು “ಚೆನ್ನಾಗಿ ಜೀವಿಸಿದೆ" (ಚೆನ್ನಾಗಿ ಆಯಿತು) ಎಂದು ನಿಮಗೆ ಹೇಳುವನು. ಆಗ, ಇತರರು ನಿಮ್ಮ ಬಗ್ಗೆ ಏನೇ ಯೋಚಿಸಿದ್ದರೂ ಅದು ಮಹತ್ವದ್ದಾಗಿರುವುದಿಲ್ಲ.

      

ಮಾನವನ ಒಂದು ಗುಣವೆಂದರೆ ಅವನು ಹೊರಗಿನ ತೋರಿಕೆಯನ್ನು ನೋಡಿ ತೀರ್ಪು ಮಾಡುತ್ತಾನೆ. ನಿಯಮಕ್ಕೆ ಅತೀ ಪ್ರಾಶಸ್ತ್ಯ ಕೊಡುವವನಾಗಿರುವಾಗ ಅನೇಕ ವರ್ಷಗಳವರೆಗೆ ನಾನೂ ಹೀಗೆ ಮಾಡಿದೆ. ಆದರೆ ಈಗ ದೇವರು ಹೃದಯವನ್ನು ನೋಡುತ್ತಾನೆ ಎಂಬುದು ನನಗೆ ಈಗ ಬಹಳ ಸ್ಪಷ್ಟವಾಗಿದೆ. ನಿಮ್ಮ ಹೃದಯಗಳು ಯಾವಾಗಲೂ ಶುದ್ಧವಾಗಿರಬೇಕೆಂಬುದನ್ನು ನೀವು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ನಿಮ್ಮ ಮನೆ ಅರಮನೆಯೋ ಅಥವಾ ಗುಡಿಸಲೋ ಎಂಬುದು ಎರಡನೆಯ ವಿಷಯ. ದೇವರು ನೋಡುವಂಥದ್ದು ನಮ್ಮ ಹೃದಯವನ್ನು. ಆದ್ದರಿಂದ ನಿಮ್ಮ ಹೃದಯಗಳು, ದೇವರು ನೆಲೆಸಲು ಪವಿತ್ರ ಸ್ಥಾನವಾಗಿವೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಿರಿ.