ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮಹಿಳೆಯರಿಗೆ
WFTW Body: 

ಸಮುವೇಲನ ಕಥನವು ಬಂಜೆಯಾಗಿದ್ದ ಆತನ ತಾಯಿ ಹನ್ನಳಿಂದ ಶುರುವಾಗುವುದು. ಹನ್ನಳು ಬಂಜೆಯಾಗಿದ್ದಳು (1 ಸಮುವೇಲ 1:2) ಸತ್ಯವೇದದಲ್ಲಿ ಒಂದು ಗಮನ ಸೆಳೆಯುವ ವಿಷಯವೆಂದರೆ, ಅನೇಕ ಸ್ತ್ರೀಯರು - ಸಾರಳು, ರೆಬೆಕ್ಕಳು, ರಾಹೇಳಳು ಮತ್ತು ಹನ್ನಳು - ಮಕ್ಕಳನ್ನು ಪಡೆಯುವ ಮೊದಲು ಅನೇಕ ವರ್ಷಗಳ ವರೆಗೆ ಬಂಜೆತನವನ್ನು ಹೊಂದಿದ್ದುದು. ಅವರೆಲ್ಲರೂ ದೇವರಿಗೆ ಮೊರೆಯಿಟ್ಟು ಪ್ರಾರ್ಥಿಸಿದ ನಂತರ, ದೇವರ ಯೋಜನೆಯಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದ ಗಂಡು ಮಕ್ಕಳನ್ನು ಹೆತ್ತರು. ತಮ್ಮ ಬಂಜೆತನವನ್ನು ಅವರು ಒಪ್ಪಿಕೊಳ್ಳಲಿಲ್ಲ. ಅವರು ಮಕ್ಕಳನ್ನು ಪಡೆಯುವುದಕ್ಕಾಗಿ ದೇವರಲ್ಲಿ ಶ್ರದ್ಧೆಯಿಂದ ಪ್ರಾರ್ಥಿಸಿದರು. ಅದರಂತೆ ಅವರ ಪ್ರಾರ್ಥನೆಗೆ ದೇವರು ಉತ್ತರವನ್ನು ನೀಡಿದರು ಮತ್ತು ದೇವರ ವಿಶಿಷ್ಟ ಉದ್ದೇಶವನ್ನು ಪೂರೈಸುವಂಥಹ ಮಕ್ಕಳನ್ನು ಅವರೆಲ್ಲರೂ ಪಡೆದರು.

ಅನೇಕ ತಾಯಂದಿರು ಗರ್ಬಿಣಿಯಾಗಿರುವಾಗಲೇ, ತಮ್ಮ ಮಕ್ಕಳಿಗಾಗಿ ಪ್ರಾರ್ಥನೆ ಮಾಡುತ್ತಾರೆ. ಆದರೆ ಈ ಮಹಿಳೆಯರ ಪ್ರಾರ್ಥನೆಗಳು ಅಪರೂಪದ ಮತ್ತು ಅತ್ಯಾಸಕ್ತಿಯಿಂದ ತುಂಬಿದ್ದವು. ಇಂಥಹ ಅತ್ಯಾಸಕ್ತಿಯ ಪ್ರಾರ್ಥನೆಯಿಂದ ಒಂದು ಮಗುವಿನ ಜನನವಾಗುವದು ನಿಜಕ್ಕೂ ವಿಸ್ಮಯಕರವಾದುದು. ಸಮುವೇಲನ ಜನನವಾಗಿದ್ದು ಹೀಗೆಯೇ .

ಹನ್ನಳು ಒಂದು ಮಗುವಿಗೋಸ್ಕರ ದೇವರಲ್ಲಿ ಹಲವು ವರ್ಷಗಳ ಕಾಲ ಪ್ರಾರ್ಥಿಸಿದ್ದಳು. ಕೊನೆಗೆ ಅವಳು ಒಂದು ಶಪಥ ಮಾಡಿದಳು, ಆಕೆಯು ಒಂದು ಶಪಥವನ್ನು ಮಾಡಿ ಹೇಳಿದ್ದೇನೆಂದರೆ ”ಸೈನ್ಯಗಳ ಕರ್ತನೇ, ನೀನು ನಿಶ್ಚಯವಾಗಿ ನಿನ್ನ ದಾಸಿಯ ದೀನತೆಯನ್ನು ನೋಡಿ, ನಿನ್ನ ದಾಸಿಯನ್ನು ಮರೆಯದೆ, ನನ್ನನ್ನು ನೆನಸಿ, ನಿನ್ನ ದಾಸಿಗೆ ಗಂಡು ಮಗುವನ್ನು ಕೊಟ್ಟರೆ ಅವನು ಬದುಕುವ ಎಲ್ಲಾ ದಿವಸಗಳಲ್ಲಿ ಅವನನ್ನು ಕರ್ತನಿಗೆ ಒಪ್ಪಿಸಿಕೊಡುವೆನು . ಅವನ ತಲೆಯ ಮೇಲೆ ಕ್ಷೌರ ಕತ್ತಿ ಬೀಳುವುದಿಲ್ಲ” (1 ಸಮುವೇಲ 1:11) . ನಂತರ ಅವಳ ಯೋಚನೆಯಲ್ಲಿ ಒಂದು ಬದಲಾವಣೆಯಾಯಿತು. ಅದೇನೆಂದರೆ, ಮೊದಲು ಅವಳು ತನ್ನ ಸ್ವಂತ ಅವಶ್ಯಕತೆಗಳಿಗಾಗಿ ಯೋಚಿಸುತ್ತಿದ್ದಳು. ‘’ನನಗೆ ಒಂದು ಮಗು ಬೇಕು’’ ಎಂಬುದಾಗಿ. ಆನಂತರ ಅವಳು ಹೀಗೆ ಹೇಳಲು ಪ್ರಾರಂಭಿಸಿದಳು- ‘’ನನಗೆ ಒಂದು ಮಗುವಾದರೆ, ನಾನು ಅವನನ್ನು ದೇವರಿಗೆ ಕೊಡುತ್ತೇನೆ, ಏಕೆಂದರೆ ದೇವರಿಗೂ ಕೂಡ ಒಂದು ಅವಶ್ಯಕತೆಯಿದೆ’’ ಎಂಬುದಾಗಿ. ನಾವು ಯಾವಾಗ ನಮ್ಮ ಅವಶ್ಯಕತೆಗಳಿಗೆ ಮಾತ್ರವಲ್ಲದೆ, ದೇವರ ಅವಶ್ಯಕತೆಗಳಿಗಾಗಿಯೂ ಸಹ ಪ್ರಾರ್ಥನೆ ಮಾಡುತ್ತೇವೋ, ಆಗ ಮಾತ್ರ ನಮ್ಮ ಪ್ರಾರ್ಥನೆಗಳಿಗೆ ಉತ್ತರ ಸಿಗಲು ಪ್ರಾರಂಭವಾಗುತ್ತದೆ. ಕರ್ತನು ನಮಗೆ ಎಲ್ಲಾದಕ್ಕೂ ಮುಂಚೆ ಹೀಗೆ ಪ್ರಾರ್ಥಿಸಲು ಹೇಳಿಕೊಟ್ಟರು - “ನಿನ್ನ ನಾಮವು ಪರಿಶುದ್ದವಾಗಲಿ’’ ಎಂಬುದಾಗಿ.

ಆ ಕಾಲದಲ್ಲಿ ಇಸ್ರಾಯೇಲಿನಲ್ಲಿ ತೀವ್ರವಾದ ಆತ್ಮಿಕ ಕೊರತೆ ಎದ್ದು ಕಾಣುತ್ತಿತ್ತು. ದೇವ ಜನರು ತಮ್ಮ ಮನಸ್ಸಿಗೆ ಬಂದಂತೆ ನಡೆಯುತ್ತಾ ಹಿಂಜಾರಿ ಬೀಳುವವರಾಗಿದ್ದರು. ಅವರ ನಾಯಕರಾದ ಏಲಿ ಮತ್ತು ಇತರರೂ ವಿಪರೀತವಾಗಿ ತಪ್ಪುದಾರಿಯಲ್ಲಿ ಸಾಗುತ್ತಿದ್ದರು. ಮೋಶೆಯ ಸಮಯದ ನಂತರ ಇಸ್ರಾಯೇಲ್ಯರು ಯಾವ ಪ್ರವಾದಿಯನ್ನೂ ನೋಡಿರಲಿಲ್ಲ. ತನ್ನ ಸುತ್ತಲಿನ ಈ ಪರಿಸ್ಥಿತಿಯನ್ನು ಹನ್ನಳು ಅರಿತುಕೊಂಡಿದ್ದಳು. ಇಸ್ರಾಯೇಲ್ ಅನುಭವಿಸುತ್ತಿದ್ದ ಪ್ರವಾದಿಯ ಕೊರತೆಯನ್ನು ಆಕೆಯು ಗಮನಿಸಿದ್ದಳು. ಹೀಗಾಗಿ ಹನ್ನಳು ಪ್ರಾರ್ಥನೆಯನ್ನು ಮುಂದುವರಿಸುತ್ತಾ, "ಸ್ವಾಮಿಯೇ, ನಿನಗೆ ನನ್ನ ಮಗನನ್ನು ಸಮರ್ಪಿಸುವುದಲ್ಲದೆ, ಅವನ ತಲೆಯ ಮೇಲೆ ಕ್ಷೌರ ಕತ್ತಿಯನ್ನು ಬರಗೊಡುವದಿಲ್ಲ. ಅವನು ನಿನಗೆ ಪ್ರತಿಷ್ಠಿಸಲ್ಪಟ್ಟ ಒಬ್ಬ ನಾಜೀರನಾಗುವನು. ಅವನು ನಿನ್ನವನು, ಈ ದೇಶವನ್ನು ಮತ್ತೆ ನಿನ್ನೆಡೆಗೆ ತಿರುಗಿಸಲು ನೀನು ಅವನನ್ನು ಉಪಯೋಗಿಸಿಕೊಳ್ಳಬಹುದು," ಎಂದು ಹರಕೆ ಮಾಡಿದಳು. ಆಕೆಯ ಪ್ರಾರ್ಥನೆ ಆದ್ಯತೆ ಬದಲಾಯಿತು ಮತ್ತು ಆಕೆಯು ದೇವರ ಉದ್ದೇಶಕ್ಕಾಗಿ ಪ್ರಾರ್ಥಿಸಲು ಆರಂಭಿಸಿದಳು. ನಮ್ಮ ಅನೇಕ ವಿಜ್ಞಾಪನೆಗಳಿಗೆ ಉತ್ತರ ದೊರಕದಿರುವುದಕ್ಕೆ ಕಾರಣ ಅವುಗಳು ನಮ್ಮ ಸ್ವಂತ/ಸ್ವಾರ್ಥ ಉದ್ದೇಶಗಳ ಮೇಲೆಯೇ ಕೇಂದ್ರೀಕೃತವಾಗಿ ಇರುವುದಾಗಿದೆ. ಸಮುವೇಲನು ಇಂತಹ ಮಾತೆಗೆ ಜನಿಸಿದ್ದು ಎಷ್ಟು ಸಂತೋಷಕರವಾದುದು!

ಹನ್ನಳು ಸಮುವೇಲನಿಗೆ ಜನ್ಮಕೊಟ್ಟಾಗ, ಆಕೆಯು ತನ್ನ ವಾಗ್ದಾನವನ್ನು ಮರೆಯಲಿಲ್ಲ. ಆಕೆಯು ತನ್ನ ಮಗನನ್ನು ದೇವ ಮಂದಿರಕ್ಕೆ ಕರೆದೊಯ್ದು, "ನನ್ನ ಪ್ರಾರ್ಥನೆಯ ಫಲವಾಗಿ ಅನುಗ್ರಹಿಸಿದ ಮಗನು ಇವನೇ; ನಾನು ಇವನನ್ನು ಯೆಹೋವನಿಗೆ ಒಪ್ಪಿಸಿಬಿಟ್ಟಿದ್ದೇನೆ. ಇವನು ಜೀವದಿಂದಿರುವ ತನಕ ಆತನಿಗೇ ಪ್ರತಿಷ್ಠಿತನಾಗಿರುವನು," ಎಂದು ಹೇಳಿದಳು ( 1 ಸಮುವೇಲನು 1:27-28) . ಆ ಮಗನನ್ನು ಆಕೆಯು ಯಾವತ್ತೂ ಹಿಂದಕ್ಕೆ ಕೇಳಲು ಹೋಗಲಿಲ್ಲ. ಆಕೆಯು ಅಲ್ಲಿ ಆ ಪುಟ್ಟ ಬಾಲಕನಿಗೆ ಮಂಡಿ ಬಾಗಿಸಿ ಯೆಹೋವನನ್ನು ಆರಾಧಿಸಲು ಕಲಿಸಿದಳು. ಅಂತಹ ದೈವಿಕಳಾದ ತಾಯಿಯನ್ನು ಪಡೆಯುವುದು ಎಂಥಾ ಸೌಭಾಗ್ಯ! ನಂತರ ಆಕೆಯು ದೇವರನ್ನು ಕೊಂಡಾಡುತ್ತಾ ಧನ್ಯವಾದ ಸಮರ್ಪಣೆಯ ಸೊಗಸಾದ ಹಾಡೊಂದನ್ನು ಹಾಡಿದಳು ( 1 ಸಮುವೇಲನು 2:1-10) . ಮರಿಯಳು ದೇವರನ್ನು ಕೊಂಡಾಡಿ ಸಮರ್ಪಿಸಿದ ಹಾಡಿನ (ಲೂಕ 1:46-55) ಪ್ರೇರಣೆಯು ಹನ್ನಳ ಹಾಡೇ ಆಗಿರಬೇಕು - ಅವೆರಡರ ಪದಗಳು ಬಹಳ ಹೋಲುತ್ತವೆ.

ಸಮುವೇಲನು ದೊಡ್ಡವನಾಗಿ ತನ್ನ ಪ್ರವಾದನಾ ಸೇವೆಯಿಂದ ಇಸ್ರಾಯೇಲಿನ ದಿಕ್ಕನ್ನೇ ಬದಲಾಯಿಸಿದನು. ನ್ಯಾಯಸ್ಥಾಪಕರ ದಿನಗಳಲ್ಲಿ ತಬ್ಬಿಬ್ಬಾದ ಸ್ಥಿತಿಯಿಂದ, ದಾವೀದನ ಆಡಳಿತದಲ್ಲಿ ಉತ್ತಮವಾದ (ಭವ್ಯವಾದ) ಸ್ಥಿತಿಗೆ ತರುವುದನ್ನು ನಾವು ನೋಡುತ್ತೇವೆ.