ಬರೆದಿರುವವರು :   ಝ್ಯಾಕ್ ಪೂನನ್
WFTW Body: 

ದೇವರು ಅಬ್ರಹಾಮನನ್ನು ಪದೇ ಪದೇ ಪರೀಕ್ಷಿಸಿದನು. ಈ ಸಮಯದಲ್ಲಿ ದೇವರು ಅಬ್ರಹಾಮನನ್ನು ಕಾನಾನ್ಯದಲ್ಲಿನ ಘೋರ ಕ್ಷಾಮದ ಮೂಲಕ ಪರೀಕ್ಷಿಸಿದನು. ದೇವರು ನಿಮಗೆ ಕಾನಾನ್ಯ್ಗೆ ಹೋಗಲು ಹೇಳಿದಾಗ, ಅಲ್ಲಿ ಘೋರವಾದ ಕ್ಷಾಮವಿದ್ದರೆ ನೀವೇನು ಮಾಡುವಿರಿ? ಒಂದೋ ನಿಮ್ಮ ಇಂದ್ರಿಯಗಳ ಜ್ಞಾನದಿಂದ ಬರುವ ನಿಮ್ಮ ಸ್ವಂತ ತಿಳುವಳಿಕೆಯಿಂದ ನೀವು ಜೀವಿಸುತ್ತೀರಿ ಅಥವಾ ದೇವರು ತನ್ನ ಆತ್ಮದ ಮೂಲಕ ಏನು ಹೇಳುತ್ತಾನೋ ಅದರಿಂದ ನೀವು ಜೀವಿಸುತ್ತೀರಿ. ಒಂದು ಸುಂದರವಾದ ವಾಕ್ಯವು ಯೇಸುವಿನ ಬಗ್ಗೆ ಈ ರೀತಿ ಹೇಳುತ್ತದೆ "ಯೆಹೋವನ ಭಯವು ಅವನಿಗೆ ಪರಿಮಳಿಸುವದು; ಅವನು ಕಣ್ಣಿಗೆ ಕಂಡಂತೆ ತೀರ್ಪು ಮಾಡುವುದಿಲ್ಲ, ಕಿವಿಗೆ ಬಿದ್ದಂತೆ ನಿರ್ಣಯಿಸುವುದಿಲ್ಲ" (ಯೆಶಾ. 11:3, 4). ಆದರೆ ಮನುಷ್ಯನು ಆ ರೀತಿ ಜೀವಿಸುವುದಿಲ್ಲ. ಒಂದು ವೇಳೆ ನಾವು ಕಾನ್ಯಾನ್ನಲ್ಲಿ ಘೋರವಾದ ಕ್ಷಾಮವಿರುವ ಬಗ್ಗೆ ಕೇಳಿದಾಗ ಅಥವಾ ನೋಡಿದಾಗ, ನಮ್ಮ ಕಣ್ಣು, ಕಿವಿ ಹಾಗೂ ನಮ್ಮ ಬುದ್ಧಿವಂತ ಮೆದುಳು ನಮಗೇನು ಹೇಳುತ್ತವೋ, ಅದರ ಪ್ರಕಾರ ನಾವು ತಕ್ಷಣವೇ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಕಾನ್ಯಾನ್ ಖಂಡಿತವಾಗಿಯೂ ವಾಸಿಸಲು ಅನುಕೂಲವಲ್ಲದ ಸ್ಥಳ ಎಂದು ನಾವು ನಿರ್ಧರಿಸುತ್ತೇವೆ ಹಾಗೂ ತಕ್ಷಣವೇ ನಾವು ಬೇರೆ ಕಡೆ ಹೋಗಲು ಇಚ್ಛಿಸುತ್ತೇವೆ. ಈ ವಿಷಯವಾಗಿ ನಾವು ದೇವರನ್ನು ಸಂಪರ್ಕಿಸುವುದಿಲ್ಲ. ಏಕೆಂದರೆ ನಾವು ನಮ್ಮ ತಿಳುವಳಿಕೆಯಿಂದ ಜೀವಿಸುತ್ತಿರುತ್ತೇವೆ. ಅದನ್ನೇ ಅಬ್ರಹಾಮನು ಮಾಡಿದ್ದು. "ಆ ದೇಶದಲ್ಲಿ ಘೋರ ಕ್ಷಾಮವಿದ್ದದರಿಂದ ಅಲ್ಲಿರದೆ, ಐಗುಪ್ತ ದೇಶದಲ್ಲಿ ಕೆಲವು ಕಾಲ ಇರಬೇಕೆಂದು ಆ ಬೆಟ್ಟದ ಸೀಮೆಯಿಂದ ಇಳಿದು ಹೋದನು" (ಆದಿ.12:10). ಐಗುಪ್ತಕ್ಕೆ ಹೋಗಲು ಆತನಿಗೆ ಹೇಳಿದ್ದು ಯಾರು? ದೇವರಲ್ಲ. ಆದರೆ ಆತನ ತಿಳುವಳಿಕೆ! ಆ ಘೋರ ಕ್ಷಾಮದ ಸಮಯದಲ್ಲಿ ಒಬ್ಬ ಮನುಷ್ಯನನ್ನು ಸಂರಕ್ಷಿಸಲು ದೇವರಿಗೆ ಸಾಧ್ಯವಿಲ್ಲವೇ? ಖಂಡಿತವಾಗಿ ಸಾಧ್ಯವಿದೆ. "ಯಾವಾನು ಯೆಹೋವನಲ್ಲಿ ನಂಬಿಕೆಯಿಟ್ಟಿದ್ದಾನೋ ಯಾವನಿಗೆ ಯೆಹೋವನು ಭರವಸೆ ಆಗಿದ್ದಾನೋ ಅವನು ಧನ್ಯನು. ನೀರಾವರಿಯಲ್ಲಿ ನೆಡಲ್ಪಟ್ಟು ಹೊಳೆಯ ದಡದಲ್ಲಿ ತನ್ನ ಬೇರುಗಳನ್ನು ಹರಡಿ ದಗೆಗೆ ಭಯಪಡದೆ ಹಸುರೆಲೆಯನ್ನು ಬಿಡುತ್ತಾ ಕ್ಷಾಮ ವರ್ಷದಲ್ಲಿಯೂ ನಿಶ್ಚಿಂತೆಯಾಗಿ ಸದಾ ಫಲಕೊಡುತ್ತಾ ಇರುವ ಮರಕ್ಕೆ ಸಮಾನನಾಗಿರುವನು" (ಯೆರೆ. 17:5-8). ಯಾರು ದೇವರಲ್ಲಿ ಭರವಿಸೆಯಿಡುತ್ತಾರೋ, ಅವರು ದೇವರು ಹೇಳುವವರೆಗೆ ಎಲ್ಲಿಗೂ ಕದಲುವುದಿಲ್ಲ. ಅದನ್ನೇ ನಮ್ಮ ಕರ್ತನು ಅಡವಿಯಲ್ಲಿ ಸೈತಾನನಿಂದ ಶೋಧಿಸಲ್ಪಟ್ಟ ಸಂದರ್ಭದಲ್ಲಿ ಮಾಡಿದ್ದು. ಸೈತಾನನು ಯೇಸುವಿಗೆ ಕಲ್ಲನ್ನು ರೊಟ್ಟಿಯಾಗಿ ಬದಲಾಯಿಸುವಂತೆ ಹೇಳಿದನು. ಆದರೆ ಯೇಸು, "ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವುದಿಲ್ಲ, ಆದರೆ ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುತ್ತಾನೆ" ಎಂಬುದಾಗಿ ಉತ್ತರಿಸಿದನು (ಮತ್ತಾಯ 4:4).

ಆದರೆ ಅಬ್ರಹಾಮನು ಈ ರೀತಿಯಾಗಿ ಜೀವಿಸಲಿಲ್ಲ. ಆತನು ರೊಟ್ಟಿಯಿಂದ ಮಾತ್ರ ಬದುಕಿದನು. ಹಾಗಾಗಿ, ಐಗುಪ್ತದಲ್ಲಿ ರೊಟ್ಟಿ ಇದ್ದುದರಿಂದ, ಆತನು ಅಲ್ಲಿಗೆ ಹೋದನು. ಇದೇ ರೀತಿಯಾಗಿ ಇಂದು ಅನೇಕ ಕ್ರೈಸ್ತರು ಸೇವೆಯಲ್ಲಿ ತೊಡಗಿದ್ದಾರೆ. ಅನೇಕ ಕ್ರೈಸ್ತರು ದೇವರು ಹೇಳಿದ ಜಾಗಕ್ಕೆ ಹೋಗುವುದಿಲ್ಲ. ಅವರು ಎಲ್ಲಿ ಒಳ್ಳೆಯ ಸಂಬಳ ಸಿಗುತ್ತದೋ, ಎಲ್ಲಿ ಹೆಚ್ಚು ರೊಟ್ಟಿ ಇದೆಯೋ ಅಲ್ಲಿಗೆ ಹೋಗುತ್ತಾರೆ. ಅವರು ಯಾವುದೇ ಹಣದ ಕ್ಷಾಮವಿಲ್ಲದಿರುವ ಅನೇಕ ಸಂಸ್ಥೆಗಳಿಗೆ ತೆರಳುತ್ತಾರೆ. ಘೋರ ಕ್ಷಾಮದ ಅವಧಿಯಲ್ಲಿ ’ಐಗುಪ್ತವು’ ನೆಮ್ಮದಿಯ ಸ್ಥಳವಾಗಿರಬಹುದು. ಆದರೆ ಪ್ರಶ್ನೆಯೇನೆಂದರೆ, ದೇವರು ನಿಮಗೆ ಇರಲು ಹೇಳಿದ ಸ್ಥಳವು ಅದೇನಾ ಎಂಬುದಾಗಿ. ದೇವರು ನಿಮಗೆ ಕಾನ್ಯಾನ್ನಲ್ಲಿರಲು ಹೇಳಿದರೆ, ನೀವು "ಐಗುಪ್ತ"ಕ್ಕೆ ತೆರಳುವ ಹಾಗಿಲ್ಲ. ನಿಮಗೆ ದೇವರು ಈಗ ಏನು ಹೇಳುತ್ತಿದ್ದಾರೆ ಎಂದು ನೀವು ಕೇಳಿಸಿಕೊಳ್ಳದಿದ್ದರೆ, ದೇವರು ನಿಮ್ಮನ್ನು ಪರೀಕ್ಷೆಗೆ ಒಳಪಡಿಸಿದಂತಹ ಸಮಯದಲ್ಲಿ ನೀವು ಕೂಡ ಅಬ್ರಹಾಮನು ಮಾಡಿದ್ದನ್ನೇ ಮಾಡುತ್ತೀರಿ. ಯೇಸುವಿನಂತೆ, ದೇವರ ಬಾಯಿಂದ ಹೊರಡುವ ಮಾತಿನಿಂದ ಜೀವಿಸಿರಿ. ಆತನ ನಡತೆ ಹೇಗಿತ್ತೆಂದರೆ, "ಹೌದು, ರೊಟ್ಟಿಯು ಜೀವಿತಕ್ಕೆ ಅವಶ್ಯವಾದದ್ದು. ಆದರೆ ದೇವರಿಗೆ ವಿಧೇಯರಾಗುವಂತದ್ದು ತುಂಬಾ ಅವಶ್ಯ” ಎಂಬುದಾಗಿತ್ತು.

ಸೈತಾನನು ಯೇಸುವನ್ನೇ ಈ ರೀತಿಯಾಗಿ ಶೋಧಿಸುವಾಗ, ಹೆಚ್ಚು ರೊಟ್ಟಿಯಿರುವ ಸ್ಥಳಕ್ಕೆ ಹೋಗಿ ಎಂದು ಆತನು ನಿಮ್ಮನ್ನೂ ಸಹ ಇದೇ ರೀತಿಯಾಗಿ ಶೋಧಿಸುತ್ತಾನೆ ಎಂದು ನೀವು ಯೋಚಿಸುವುದಿಲ್ಲವೇ? ನೀವು ಪೂರ್ಣಾವಧಿಯ ಕ್ರೈಸ್ತ ಸೇವೆಯಲ್ಲಿದ್ದು, ಆರ್ಥಿಕವಾಗಿ ಕಷ್ಟಪಡುವಾಗ, ನೀವು ಮತ್ತೊಂದು ಸಂಸ್ಥೆಯಲ್ಲಿ ಅಥವಾ ಸಭೆಯಲ್ಲಿ ಇನ್ನೂ ಹೆಚ್ಚು ಹಣವನ್ನು ಪಡೆಯಬಹುಬಹುದು ಎಂದು ಹೇಳಿ, ಅಲ್ಲಿಗೆ ಹೋಗಲು ಸೈತಾನನು ನಿಮಗೆ ಹೇಳುತ್ತಾನೆ. ಇಂಥಹ ಸಮಯದಲ್ಲಿ ನೀವು ಸೈತಾನನ ಮಾತನ್ನು ಕೇಳದಂತೆ ಮತ್ತು ನಿಮ್ಮ ಜೀವಿತವು ನಾಶವಾಗದಂತೆ ದೇವರು ನಿಮ್ಮ ಮೇಲೆ ದಯೆ ತೋರಲಿ.

ಅಬ್ರಹಾಮನು ಐಗುಪ್ತಕ್ಕೆ ಹೋಗಿದ್ದರ ಫಲಿತಾಂಶವೇನಾಯಿತು? ಆತನು ಅಲ್ಲಿ ಸುಳ್ಳು ಹೇಳಬೇಕಾಗಿ ಬಂತು, ಆತನ ಹೆಂಡತಿಯನ್ನು ತಂಗಿಯೆಂದು ಹೇಳಬೇಕಾಗಿ ಬಂತು. ಐಗುಪ್ತಕ್ಕೆ ಹೋಗುವುದರಿಂದ ಅನೇಕ ಸಮಸ್ಯೆಗಳನ್ನು ನೀವು ಎದುರಿಸಬಹುದು. ನೀವು ಸುಳ್ಳುಗಳನ್ನು ಹೇಳಬಹುದು, ತಪ್ಪಾದ ವರದಿಗಳನ್ನು ಬರೆಯಬಹುದು, 100% ರಷ್ಟು ಸತ್ಯವಿಲ್ಲದಂತ ಸಂಗತಿಗಳನ್ನು ಹೇಳಬಹುದು, ನಿಮ್ಮ ಮನಸ್ಸಾಕ್ಷಿ ಜೊತೆಗೆ ರಾಜಿ ಮಾಡಿಕೊಳ್ಳಬಹುದು. ಹೀಗೆ ಹಲವಾರು ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಸಾರಳು 65 ಅಥವಾ 70 ವರ್ಷದವಳಾಗಿದ್ದಳು. ಆದರೂ ನೋಟದಲ್ಲಿ ಆಕೆ ಆಕರ್ಷಕಳಾಗಿದ್ದಿರಬಹುದು. ಐಗುಪ್ತದ ಆರಸನಾದ ಫರೋಹನು ತನ್ನ ಅಂತಪುರದಲ್ಲಿ ಆಕೆಯನ್ನು ಇರಿಸಿಕೊಳ್ಳಲು ಇಚ್ಛಿಸಿದ್ದನು. ಒಂದು ಬೇಸರದ ಸಂಗತಿ ಏನೆಂದರೆ, ಅಬ್ರಹಾಮನು ತನ್ನ ಹೆಂಡತಿಯು ಭ್ರಷ್ಟಗೊಳ್ಳಲು ಅಂತಪುರಕ್ಕೆ ಕರೆದೊಯ್ಯಲ್ಪಡುವುದನ್ನು ನೋಡಿದರೂ ಸಹ, ಆತನು ತನ್ನ ಸ್ವಂತ ಜೀವವನ್ನು ಹೆಚ್ಚಾಗಿ ಪ್ರೀತಿಸಿದನು. ಹಾಗಾಗಿ ಆತನು ಫರೋಹನಿಗೆ ಸತ್ಯವನ್ನು ಹೇಳಲಿಲ್ಲ. ನಾವು ಬಿಗುವಿನ (ಕಷ್ಟದ) ವಾತಾವರಣದಲ್ಲಿರುವಾಗಲೇ ನಾವು ಸತ್ಯವನ್ನು ಪ್ರೀತಿಸುತ್ತೇವೋ, ಇಲ್ಲವೋ ಎಂಬುದನ್ನು ತಿಳಿದುಕೊಳ್ಳುತ್ತೇವೆ.

ಈಗ ನಾನು ಕೆಲವು ಇನ್ನೂ ಹೆಚ್ಚು ಗಂಭೀರವಾದ ವಿಷಯಗಳನ್ನು ಹೇಳಲಿಚ್ಛಿಸುತ್ತೇನೆ. ಐಗುಪ್ತದಲ್ಲಿ ಅಬ್ರಹಾಮನು ದೇವರ ಮಾತನ್ನು ಕೇಳದೆ ಜೀವಿಸಿದ್ದರಿಂದ ಮುಂದಿನ 4000ವರ್ಷಗಳ ತನಕ ಪರಿಣಾಮ ಬೀರುವ ಸಂಗತಿಯೊಂದು ಐಗುಪ್ತದಲ್ಲಿ ನಡೆಯಿತು. ಆಬ್ರಹಾಮನು ಐಗುಪ್ತಕ್ಕೆ ಹೋದಾಗ, ಅಲ್ಲಿ ಶ್ರೀಮಂತರು ಕೆಲಸದಾಳುಗಳನ್ನು (ಹೆಂಗಸರು) ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದನ್ನು ನೋಡಿದನು ಹಾಗೂ ಅವರಂತೆಯೇ ತಾನೂ ಒಬ್ಬ ಕೆಲಸದಾಳನ್ನು ಇರಿಸಿಕೊಳ್ಳಲು ನಿರ್ಧರಿಸಿದನು. ಹಾಗಾಗಿ, ಹಾಗರಳೆಂಬ ಒಬ್ಬ ಹೆಣ್ಣಾಳನ್ನು ಆರಿಸಿಕೊಂಡನು. ಆತನು ಐಗುಪ್ತದಿಂದ ಹಿಂದಿರುಗಿ ಬರುವಾಗ, ಆಕೆಯನ್ನು ತನ್ನೊಟ್ಟಿಗೆ ಕರೆದುಕೊಂಡು ಬಂದನು. ಸಾರಳು ತನ್ನ ಗುಡಾರದಲ್ಲಿ ಹೆಚ್ಚಾಗಿ ಕೆಲವನ್ನೇನು ಮಾಡಬೇಕಾಗಿರಲಿಲ್ಲ. ಹಾಗರಳು ಆಕೆಗೆ ಸಹಾಯ ಮಾಡಲು ಇದ್ದಳು. ನಂತರ, ಸಾರಳು ಯಾವುದೇ ಮಕ್ಕಳನ್ನು ಹೆರದಿದ್ದಾಗ, ಹಾಗರಳು ಆ ಸಮಸ್ಯೆಯನ್ನು ಪರಿಹರಿಸಲು ನೆರವಾದಳು ಹಾಗೂ ಹಾಗರಳ ಮುಖಾಂತರ ಇಷ್ಮಾಯೀಲನು ಜನಿಸಿದನು, ಈ ಒಂದು ಬೀಜವು 4000 ವರ್ಷಗಳ ತನಕ ಇಸಾಕನ ಬೀಜದೊಂದಿಗೆ ತಿಕ್ಕಾಟವನ್ನು ಮುಂದುವರೆಸಿತು. ಆದರೆ ಇವೆಲ್ಲವು ಪ್ರಾರಂಭವಾಗಿದ್ದು, ದೇವರ ಮಾತನ್ನು ಕೇವಲ ಒಂದು ಸಲ ಕೇಳಿಸಿಕೊಳ್ಳದ ಒಬ್ಬ ಮನುಷ್ಯನಿಂದ. ನೀವು ಬೇಕಾದರೆ "ಅನೇಕ ಬಾರಿ ನಾನು ದೇವರಿಗೆ ಕಿವಿಗೊಟ್ಟಿದ್ದೇನೆ" ಎಂಬುದಾಗಿ ಹೇಳಬಹುದು. ಅದು ಸರೀನೆ. ಆದರೆ ನಾವು ನೋಡಿದ್ದೇನೆಂದರೆ, ಕೇವಲ ಒಂದು ಬಾರಿ ಮಾತ್ರ ದೇವರಿಗೆ ಕಿವಿಗೊಡದಿದ್ದಾಗ ಏನಾಯಿತು ಎಂಬುದಾಗಿ. ಈ ಒಂದು ಸಂದೇಶವು ನಿಮ್ಮ ಮನಸ್ಸಿಗೆ ಗಂಭೀರವಾಗಿ ನಾಟುವುದು ಎಂದು ನನ್ನ ಭರವಸೆ.