WFTW Body: 

ಯೂದನು ಹಳೆ ಒಡಂಬಡಿಕೆಯಿಂದ ಮೂರು ಉದಾಹರಣೆಗಳನ್ನು ಕೊಡುತ್ತಾನೆ - ಕಾಯಿನನು, ಬಾಳಮನು ಮತ್ತು ಕೋರಾಹನು.

ಕಾಯಿನನ ಸಮಸ್ಯೆ ಹೊಟ್ಟೆಕ್ಕಿಚ್ಚಾಗಿತ್ತು. ದೇವರು ಬೆಂಕಿಯನ್ನು ಕಳುಹಿಸಿ, ಕಾಣಿಕೆಯನ್ನು ಸ್ವೀಕರಿಸಿದ ತನ್ನ ಕಿರಿಯ ಸಹೋದರನ ಮೇಲೆ ಆತನು ಹೊಟ್ಟೆಕಿಚ್ಚುಪಟ್ಟನು. ಯಾವುದೇ ಸಹೋದರನ (ನಿಮಗಿಂತ ಕಿರಿಯನಾದ) ಜೀವಿತ ಮತ್ತು ಸೇವಾಕಾರ್ಯದಲ್ಲಿ ಬೆಂಕಿಯನ್ನು ಮತ್ತು ದೇವರ ಅಭಿಷೇಕವನ್ನು ನೋಡಿದಾಗ ನೀವು ಅವನ ಮೇಲೆ ಹೊಟ್ಟೆಕಿಚ್ಚುಪಡುತ್ತೀರಾ? ಹಾಗಿದ್ದಲ್ಲಿ, ನೀವು ಕಾಯಿನನ ಹೆಜ್ಜೆಜಾಡನ್ನು ಹಿಂಬಾಲಿಸುತ್ತಿದ್ದೀರಿ ಎಂದರ್ಥ. ನೀವು ಒಬ್ಬಾತನ ಮೇಲೆ ಹೊಟ್ಟೆಕಿಚ್ಚುಪಟ್ಟರೆ, ನೀವು ಆತನನ್ನು ಪ್ರೀತಿಸುತ್ತಿಲ್ಲ ಎಂಬುದು ಇದರರ್ಥ. ಅಭಿಷೇಕಿಸಲ್ಪಟ್ಟಂತ ಮತ್ತು ಬೆಂಕಿಯುಳ್ಳಂತಹ ಹಾಗೂ ತಮಗಿಂತಲೂ ಹೆಚ್ಚಾಗಿ ಆತ್ಮಿಕ ರೀತಿಯಲ್ಲಿ ಬೆಳೆಯುತ್ತಿರುವ ಕಿರಿಯ ಸಹೋದರರರ ಮೇಲೆ ಸಭೆಯ ಹಿರಿಯರು ಹೊಟ್ಟೆಕಿಚ್ಚುಪಡುತ್ತಿರುತ್ತಾರೆ. ನೀವು ಬೇರೆಯವರ ಮೇಲೆ ಹೊಟ್ಟೆಕಿಚ್ಚುಪಟ್ಟರೆ, ನೀವು ಸೈತಾನನ ಜೊತೆ ಅನ್ಯೋನ್ಯತೆಯನ್ನು ಹೊಂದಿರುತ್ತೀರಿ. ಒಬ್ಬ ದೈವಿಕ ಮನುಷ್ಯ ಇಂತಹ ಕಿರಿಯ ಸಹೋದರರನ್ನು ಪ್ರೋತ್ಸಾಹಿಸುತ್ತಾನೆ. ಆ ದೈವಿಕ ಮನುಷ್ಯನು ಕೂಟದಲ್ಲಿ ಕೂತುಕೊಂಡು, ಒಬ್ಬ ಕಿರಿಯ ಸಹೋದರನನ್ನು ಮುಖ್ಯ ಬೋಧಕನಾಗಿರಲು ಅನುಮತಿಸುತ್ತಾನೆ.

ಪದವಿಯನ್ನು ಪಡೆಯಲು ಕಾಲೇಜಿಗೆ ಹೋಗುವ ಮಗನ, ಅವಿದ್ಯಾವಂತ ಮತ್ತು ಕೂಲಿ ಕಾರ್ಮಿಕನಾಗಿರುವ ತಂದೆಯೊಬ್ಬನನ್ನು ನೀವು ಗಮನಿಸಿ. ಆ ತಂದೆಯು, ತನ್ನ ಮಗನು ಪದವಿ ಪತ್ರವನ್ನು ಪಡೆದುಕೊಳ್ಳುವುದನ್ನು ನೋಡಲು ಕಾಲೇಜಿಗೆ ಹೋಗುತ್ತಾನೆ. ತನ್ನ ಮಗನು ವಿದ್ಯೆಯಲ್ಲಿ ತನಗಿಂತ ಮುಂದೆ ಹೋಗಿದ್ದುದಕ್ಕಾಗಿ ತಂದೆಯು ಹೊಟ್ಟೆಕಿಚ್ಚು ಪಡುತ್ತಾನೆಯೇ? ಇಲ್ಲ. ಏಕೆ? ಏಕೆಂದರೆ ಆತನು ತನ್ನ ಮಗನನ್ನು ಪ್ರೀತಿಸುವ ತಂದೆ. ನೀನು ಒಂದು ಸಭೆಯ ಹಿರಿಯನಾಗಿದ್ದು, ನೀನು ಸಭೆಯಲ್ಲಿ ಯಾರ ಮೇಲಾದರೂ ಹೊಟ್ಟೆಕಿಚ್ಚುಪಡುತ್ತಿರುವುದಾದರೆ, ನೀನೊಬ್ಬ ತಂದೆಯಲ್ಲ ಎಂದರ್ಥ. ಒಬ್ಬ ನಿಜವಾದ ತಂದೆಯು ತನ್ನ ಮಗನು ಇನ್ನೂ ಮುಂದಕ್ಕೆ ಹೋಗುವಂತೆಯೂ ಮತ್ತು ಆತನು ಪಿ.ಹೆಚ್.ಡಿ ಪದವಿಯನ್ನು ಪಡೆದುಕೊಳ್ಳುವಂತೆಯೂ ಪ್ರೋತ್ಸಾಹಿಸುತ್ತಾನೆ. ಬಡ ಕೂಲಿ ಕಾರ್ಮಿಕರಾದ ತಂದೆಯಂದಿರು ತಮ್ಮ ಮಕ್ಕಳು ವಿದ್ಯಾವಂತರಾಗಿರುವುದನ್ನು ಕಂಡು ಸಂತೋಷಪಡುವುದನ್ನು ನಾನು ನೋಡಿದ್ದೇನೆ. ಆದರೆ ಕಿರಿಯ ಸಹೋದರರನ್ನು ಮುಂದೆ ತಳ್ಳುವ ಸಭಾ ಹಿರಿಯರನ್ನು ನೋಡುವುದು ತುಂಬಾ ವಿರಳ. ಬದಲಾಗಿ, ನಾನು ನೋಡಿದ್ದೇನೆಂದರೆ, ಹಿರಿಯರು ತಮ್ಮ ಸಿಂಹಾಸನದಲ್ಲಿ ಕೂತುಕೊಂಡು, ತಮ್ಮ ಹೊಟ್ಟೆಕಿಚ್ಚಿನ ಕಣ್ಣುಗಳಿಂದ ಕೆಲವು ಅಭಿಷೇಕಿಸಲ್ಪಟ್ಟಂತ ಕಿರಿಯ ಸಹೋದರರನ್ನು ನೋಡುತ್ತಾ, ಎಲ್ಲಿ ಅವರು ತಮ್ಮ ಅಧಿಕಾರಕ್ಕೆ ಅಪಾಯ ತರುತ್ತಾರೋ ಎಂಬ ಭಯದಿಂದ, ಸಾಧ್ಯವಾಗುವಂತಹ ಪ್ರತಿ ಹಂತದಲ್ಲಿಯೂ ಅವರನ್ನು ಹಿಂದಕ್ಕೆ ದಬ್ಬುತ್ತಿರುತ್ತಾರೆ. ಇಂದಿನ ಕ್ರೈಸ್ತತ್ವದಲ್ಲಿ ಒಂದು ದೊಡ್ಡ ದುರಂತವೇನೆಂದರೆ, ಇಂದು ತಂದೆಯಂದಿರು ಇರುವುದು ತುಂಬಾ ವಿರಳ. ಎಲ್ಲರೂ ತಮ್ಮ ಸ್ವಂತದ್ದನ್ನೇ (ಸ್ವಾರ್ಥ) ಕಂಡುಕೊಳ್ಳುವವರಾಗಿದ್ದಾರೆ. ಒಬ್ಬ ನಿಜವಾದ ದೈವಿಕ ಮನುಷ್ಯನು, ತನ್ನ ಕಿರಿಯ ಸಹೋದರರು ಬೆಳೆಯುತ್ತಿರುವುದನ್ನು ಮತ್ತು ಅವರ ಸೇವೆಯ ಮೇಲೆ ದೊಡ್ಡ ಅಭಿಷೇಕ ಇರುವುದನ್ನು ನೋಡಿ ಸಂತೋಭರಿತನಾಗುತ್ತಾನೆ. ಅವನು ಕಿರಿಯ ಸಹೋದರರನ್ನು ಮುಂದಕ್ಕೆ ತಳ್ಳುತ್ತಾನೆ ಮತ್ತು ತನ್ನ ಸ್ಥಾನವನ್ನು ಬಿಟ್ಟುಕೊಡುತ್ತಾನೆ. ನೀವು ಒಬ್ಬ ದೈವಿಕ ಹಿರಿಯನಾಗಬೇಕಿದ್ದರೆ, ಈ ರೀತಿಯಾಗಿ ಇರಬೇಕು ಮತ್ತು ಕಾಯಿನನ ರೀತಿ ಹೊಟ್ಟೆಕಿಚ್ಚುವುಳ್ಳವರಾಗಿರಬೇಡಿರಿ.

ಯೂದನು ಉಲ್ಲೇಖಿಸುವ ಎರಡನೇ ಉದಾಹರಣೆ ಬಾಳಾಮನದ್ದು. ಆತನ ಸಮಸ್ಯೆ ಏನಾಗಿತ್ತೆಂದರೆ ದುರಾಶೆ ಮತ್ತು ಹಣದ ಮೇಲಿನ ಪ್ರೀತಿಯಾಗಿತ್ತು . ಬಾಳಾಮನು ಅನೇಕ ಒಳ್ಳೆಯ ಸಂಗತಿಗಳನ್ನು ಬೋಧಿಸಿದನು. ಮೆಸ್ಸಾಯನು ಬರುವುದರ ಬಗ್ಗೆಯೂ ಸಹ ಬೋಧಿಸಿದನು (ಅರಣ್ಯಕಾಂಡ 24:17). ಆದರೆ ಆತನು ಸಹ ಹಣದ ಹಿಂದೆ ಓಡಿದನು. ಅನೇಕ ಬೋಧಕರೂ ಇಂದು ಅದ್ಭುತವಾದ ಸತ್ಯಗಳನ್ನು ಬೋಧಿಸಿದರೂ ದುರಾಶೆಯುಳ್ಳವರಾಗಿ ಬಾಳಾಮಾನ ಮಾರ್ಗದಲ್ಲಿ ಹೋಗುತ್ತಿದ್ದಾರೆ.

ಮೂರನೇದಾಗಿ, ಯೂದನು ಕೋರಹನ ಬಗ್ಗೆ ಮಾತನಾಡುತ್ತಾನೆ. ಆತನ ಸಮಸ್ಯೆ ಏನಾಗಿತ್ತೆಂದರೆ ಅಧಿಕಾರಕ್ಕೆ ತಿರುಗಿ ಬೀಳುವುದಾಗಿತ್ತು. ಕೋರಹನು ಐಗುಪ್ತದಲ್ಲಿ ಗುಲಾಮನಾಗಿ ನಾಶವಾಗಬೇಕಿತ್ತು. ಇಸ್ರಾಯೇಲಿನ ನಾಯಕನಿಗೆ ಇರಬೇಕಾಗಿರುವ ಅರ್ಹತೆಯನ್ನು ದೇವರು ಆತನಲ್ಲಿ ನೋಡಲಿಲ್ಲ. ಇವನ ಬದಲಾಗಿ ದೇವರು ಮೋಶೆಯನ್ನು ಉಪಯೋಗಿಸಿದನು. ಮೋಶೆಯು ಕೋರಹನನ್ನು ಐಗುಪ್ತದಲ್ಲಿ ಗುಲಾಮನಾಗಿ ಸಂಕಟಪಡುತ್ತಿದ್ದ ಪರಿಸ್ಥಿತಿಯಿಂದ ಬಿಡುಗಡೆಗೊಳಿಸಿದನು. ಮೋಶೆಯು ಆತನನ್ನು ಪ್ರೋತ್ಸಾಹಿಸಿದನು ಮತ್ತು ಆತನಿಗೆ ಒಂದು ರೀತಿಯ ನಾಯಕತ್ವದ ಸ್ಥಾನವನ್ನು ಕೊಟ್ಟನು. ಆದರೆ ಇದು ಕೋರಹನ ತಲೆಗೆ ಹೋಯಿತು ಮತ್ತು ಆತನು ಮೋಶೆಯನ್ನು ಧಿಕ್ಕರಿಸಲು ಪ್ರಾರಂಭಿಸಿದನು. ದೇವರು ಆತನನ್ನು ಹೇಗೆ ತೀರ್ಪು ಮಾಡಿದನೆಂಬುದನ್ನು ನೋಡಿ. ಭೂಮಿಯು ತೆರೆಯಲ್ಪಟ್ಟು, ಕೋರಹನನ್ನು ನುಂಗಿತು. ಕಾಯಿನನು ತನ್ನ ಕಿರಿಯ ಸಹೋದರನ ಮೇಲೆ ಹೊಟ್ಟೆಕಿಚ್ಚುಪಟ್ಟನು. ಕೋರಹನು ವಯಸ್ಸಾದ ಆತ್ಮಿಕ ನಾಯಕನ ಮೇಲೆ ಹೊಟ್ಟೆಕಿಚ್ಚುಪಟ್ಟನು. ನೀವು ಅಹಂಕಾರಿಯಗಿ ನಿಮ್ಮನ್ನು ನಡೆಸಿದ ಮತ್ತು ಪೋಷಿಸಿದ ಆತ್ಮಿಕ ಮನುಷ್ಯರಿಗೆ ನೀವು ಅಧೀನರಾಗದೆ ಇರಬಹುದು. ಏಕೆಂದರೆ ನೀವು ಸಹ ಒಬ್ಬ ಆತ್ಮಿಕ ನಾಯಕರೆಂಬುದಾಗಿ ಯೋಚಿಸಲು ಪ್ರಾರಂಭಿಸಿರುತ್ತೀರಿ. ಆದರೆ ತಾನು ಅಭಿಷೇಕಿಸಿದವರನ್ನು ದೇವರು, ಸಮರ್ಥಿಸುತ್ತಾನೆ. ಕೋರಹನಿಗೆ ಆದಂತೆ, ಆ ದಿನವು ನಿಮ್ಮ ಜೀವನದ ಬೇಸರದ ದಿನವಾಗಬಹುದು. ಅಧಿಕಾರಕ್ಕೆ ತಿರುಗಿ ಬೀಳುವಂತದ್ದು ಕ್ರೈಸ್ತತ್ವದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ನಾವು ಎಂದಿಗೂ ಆತ್ಮಿಕ ನಾಯಕನ ವಿರುದ್ಧ ತಿರುಗಿ ಬೀಳಬಾರದು. ನಿಮಗೆ ಒಂದು ಸಭೆಯ ಬಗ್ಗೆ ಸಂತೋಷವಿಲ್ಲವಾದರೆ, ಅದನ್ನು ಬಿಟ್ಟು, ಬೇರೆ ಕಡೆ ಹೋಗಿ. ನೀವು ಅಲ್ಲೇ ಇರಬೇಡಿ ಮತ್ತು ಅಲ್ಲಿನ ನಾಯಕರಿಗೆ ತೊಂದರೆ ಕೊಡಬೇಡಿ. ಇಲ್ಲವಾದಲ್ಲಿ ನೀವು ಕೋರಹನಂತೆ ಕೊನೆಗಾಣುತ್ತೀರಿ. ನೀವು ಒಂದು ಗುಂಪಿನೊಂದಿಗೆ ಒಪ್ಪದಿದ್ದಲ್ಲಿ, ಅದನ್ನು ಬಿಟ್ಟು ಬೇರೆ ಕಡೆ ಹೋಗಿಬಿಡಿ. ನೀವು ಇಷ್ಟಪಟ್ಟರೆ ಇನ್ನೊಂದು ಗುಂಪನ್ನು ಆರಂಭಿಸಿ. ಆದರೆ ಎಂದಿಗೂ ಸಹ ಅಧಿಕಾರದ ವಿರುದ್ಧ ತಿರುಗಿಬೀಳಬೇಡಿ . ಇಂತಹ ಮನುಷ್ಯರು ಹಡಗುಗಳು ಅಪ್ಪಳಿಸುವ ನೀರಿನಡಿಯಲ್ಲಿ ಮುಳುಗಿರುವ ಬಂಡೆಗಳು. ತಾವು ಆತ್ಮಿಕ ವರಗಳನ್ನು ಹೊಂದಿದ್ದೇವೆಂದು ಇಂಥವರು ತಿಳಿದುಕೊಂಡು, ಜನರನ್ನು ಮೂರ್ಖರನ್ನಾಗಿಸುತ್ತಾರೆ. ಆದರೆ ಅವರು ನೀರಿಲ್ಲದ ಮೇಘಗಳಂತಿರುತ್ತಾರೆ (ಯೂದನು 1:12).