ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಅಸ್ಥಿವಾರದ ಸತ್ಯಗಳು
WFTW Body: 

ನೀವು ಒಂಟಿಯಾಗಿ ಮಾಡಬಹುದಾದ ಒಂದು ಬಹಳ ಸ್ವಾರಸ್ಯಕರವಾದ ಸತ್ಯವೇದದ ಅಧ್ಯಯನ, ಅಪೊಸ್ತಲ ಪೌಲನ ಎಲ್ಲಾ ಪ್ರಾರ್ಥನೆಗಳ ಪರಿಶೀಲನೆ. ರೋಮಾ ಪತ್ರಿಕೆಯಿಂದ ಆರಂಭಿಸಿ 2 ತಿಮೊಥೆಯದ ವರೆಗೆ ಪೌಲನ ಹಲವಾರು ಪ್ರಾರ್ಥನೆಗಳಿವೆ, ಮತ್ತು ಆತನ ಎಲ್ಲಾ ಪ್ರಾರ್ಥನೆಗಳು ಆತ್ಮಿಕ ಸಂಗತಿಗಳ ಕುರಿತು ಆಗಿದ್ದವೆಂದು ನೀವು ಕಾಣುವಿರಿ. ಈ ಜನರ ಐಶ್ವರ್ಯಕ್ಕಾಗಿ, ಅವರ ವಾಸಕ್ಕೆ ಒಳ್ಳೆಯ ಮನೆಗಳು ಸಿಗಲಿಕ್ಕಾಗಿ ಅಥವಾ ಅವರ ಕೆಲಸದಲ್ಲಿ ಬಡ್ತಿಗಾಗಿ ಆತನು ಯಾವತ್ತೂ ಪ್ರಾರ್ಥಿಸಲಿಲ್ಲ. ಆತನು ಇಂತಹ ಶಾರೀರಿಕ ಸಂಗತಿಗಳಿಗಾಗಿ ಎಂದೂ ಪ್ರಾರ್ಥಿಸಲಿಲ್ಲ. ಪೌಲನು ಯಾವಾಗಲೂ ಆಳವಾದ ಶಾಶ್ವತ ಆತ್ಮಿಕ ಸಂಗತಿಗಳ ಬಗ್ಗೆ ಪ್ರಾರ್ಥಿಸಿದನು, ಏಕೆಂದರೆ ಈ ಲೋಕದ ಎಲ್ಲಾ ಸಂಗತಿಗಳೂ ಕ್ಷಣಿಕವೆಂದು ಆತನ ಹೃದಯಕ್ಕೆ ದೃಢವಾಗಿ ತಿಳಿದಿತ್ತು.

ಇದನ್ನು ಒಂದು ಸನ್ನಿವೇಶಕ್ಕೆ ಹೋಲಿಸಿರಿ - ನೀವು ನವದೆಹಲಿಗೆ ಪ್ರಯಾಣ ಕೈಗೊಂಡಿರುತ್ತೀರಿ ಮತ್ತು ಮುಂದಿನ 50 ವರ್ಷ ಅಲ್ಲಿ ನೆಲೆಸಲಿದ್ದೀರಿ. ನಿಮಗಾಗಿ ಪ್ರಾರ್ಥಿಸುತ್ತಿರುವ ಒಬ್ಬಾತನು ಪ್ರಾರ್ಥನೆಯ ಹೆಚ್ಚಿನ ಸಮಯ ನಿಮ್ಮ ನವದೆಹಲಿಯ ರೈಲು ಪ್ರಯಾಣದಲ್ಲಿ ನಿಮಗೆ ನೆಮ್ಮದಿಯ ಪ್ರಯಾಣ ಮತ್ತು ಒಳ್ಳೆಯ ಆಹಾರ, ಉಡುಗೆ ತೊಡುಗೆ ಮತ್ತು ನಿದ್ರೆ ಸಿಗುವದಕ್ಕಾಗಿ ಪ್ರಾರ್ಥಿಸಿದರೆ, ಅದು ಸರಿಯಲ್ಲ. ಆತನು ನಿಮಗೆ ನವದೆಹಲಿಯಲ್ಲಿ ದೀರ್ಘ ಸುಖಮಯ ಜೀವನ ಸಿಗಲೆಂದು ಪ್ರಾರ್ಥಿಸಬೇಕು. ಅದರಂತೆಯೇ, ಈ ಲೋಕದಲ್ಲಿ ನಮ್ಮ ಜೀವಿತವು ನಿತ್ಯತ್ವದ ಕಡೆಗೆ ಒಂದು ಚಿಕ್ಕ ಪ್ರಯಾಣ ಅಷ್ಟೇ ಎನ್ನುವದನ್ನು ನೀವು ತಿಳಿಯಬೇಕು. ಪೌಲನು ಮಾಡುತ್ತಿದ್ದ ಪ್ರಾರ್ಥನೆ, ಈ ಜನರು ಈ ಲೋಕದಲ್ಲಿ ಜೀವಿಸುವ ರೀತಿ ಅವರಿಗೆ ನಿತ್ಯತ್ವದಲ್ಲಿ ಯಾವುದೇ ವಿಷಾದವನ್ನು ಉಂಟುಮಾಡದಿರಲಿ ಎಂದು ಆಗಿತ್ತು.

ಅಪೊಸ್ತಲ ಪೌಲನು, ಜನರು ಸಕಲ ಆತ್ಮೀಯ ಜ್ಞಾನ ಮತ್ತು ಗ್ರಹಿಕೆಯನ್ನು ಹೊಂದಿ ಕರ್ತನ ಚಿತ್ತದ ವಿಷಯವಾದ ತಿಳುವಳಿಕೆಯಿಂದ ತುಂಬಿದವರಾಗಲಿ ಎಂದು ಕೊಲೊಸ್ಸೆ. 1:9 ರಲ್ಲಿ ಪ್ರಾರ್ಥಿಸಿದನು. ಈ ವಾಕ್ಯದ ಇನ್ನೊಂದು ಅನುವಾದ ಹೀಗಿದೆ, "ನೀವು ಸಂಗತಿಗಳನ್ನು ದೇವರ ದೃಷ್ಟಿಕೋನದಿಂದ ನೋಡಬೇಕೆಂದು ನಾನು ಪ್ರಾರ್ಥಿಸುತ್ತಿದ್ದೇನೆ." ಎಲ್ಲಾ ಆತ್ಮೀಯ ಜ್ಞಾನ ಮತ್ತು ಗ್ರಹಿಕೆಯಲ್ಲಿ ಆತನ ಚಿತ್ತದ ವಿಷಯವಾದ ತಿಳುವಳಿಕೆಯನ್ನು ಗ್ರಹಿಸಿಕೊಳ್ಳವದು ಎನ್ನುವದರ ಅರ್ಥ, ನೀವು ಪ್ರತಿಯೊಂದು ವಿಷಯವನ್ನು ದೇವರ ದೃಷ್ಟಿಕೋನದಿಂದ ನೋಡುವಿರಿ ಎಂದು. ನೀವು ನಿಮ್ಮ ಮನುಷ್ಯ ದೇಹದ ಬಗ್ಗೆ ಪ್ರಪಂಚದ ತತ್ವಜ್ಞಾನಿಗಳು ಹೇಳುವ ಎಲ್ಲಾ ಮಾತುಗಳನ್ನು ಕೇಳಬೇಡಿ, ಅದನ್ನು ದೇವರ ದೃಷ್ಟಿಕೋನದಿಂದ ನೋಡಿರಿ. ಒಂದು ಮಾನವ ದೇಹವು ಯೇಸುವಿಗೆ ಜನ್ಮ ನೀಡಿತು. ಆದುದರಿಂದ ಅದನ್ನು ಕೀಳಾಗಿ ಕಾಣದಿರಿ. ಜೀವನದಲ್ಲಿ ಪ್ರತಿಯೊಂದನ್ನು ದೇವರು ನೋಡುವ ರೀತಿಯಲ್ಲಿ ನೋಡಿರಿ. ಅದು ನಾವು ನಮಗೋಸ್ಕರ ಮಾಡಬಹುದಾದ ಒಂದು ಒಳ್ಳೆಯ ಪ್ರಾರ್ಥನೆಯಾಗಿದೆ. "ಕರ್ತನೇ, ನನ್ನ ಜೀವಿತದಲ್ಲಿ ನಡೆಯುವ ಎಲ್ಲವನ್ನು ನಿನ್ನ ದೃಷ್ಟಿಕೋನದಿಂದ ಕಾಣಲು ನನಗೆ ಸಹಾಯ ಮಾಡು."

ನಾನು ನನ್ನ ಜೀವನದಲ್ಲಿ ಉಂಟಾದ ಆ ಒಂದು ಸಂದರ್ಭವನ್ನು - ಆ ಒಂದು ಕಾಯಿಲೆ, ದೇಹದಲ್ಲಿ ಇರುವ ಆ ಮುಳ್ಳು, ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ಆ ವ್ಯಕ್ತಿ - ಇದನ್ನು ಹೇಗೆ ನೋಡಬೇಕು? ದೇವರ ದೃಷ್ಟಿಕೋನದಿಂದ ಅದನ್ನು ನೋಡು. ದೇವರಿಗೆ ಇದರ ಬರುವಿಕೆ ಅನಿರೀಕ್ಷಿತವಾಗಿತ್ತೇ? ಇದು ದೇವರನ್ನು ಆಶ್ಚರ್ಯಪಡಿಸಲಿಲ್ಲ. ನಿಜ, ಇದು ನನಗೆ ಅನಿರೀಕ್ಷಿತವಾಗಿತ್ತು, ಏಕೆಂದರೆ ನಾನು ಸಮಯ ಮತ್ತು ಸ್ಥಳದ ಇತಿಮಿತಿಗಳಿಗೆ ಒಳಪಟ್ಟಿರುವ ಮನುಷ್ಯ. ಆದರೆ ದೇವರು ಆಶ್ಚರ್ಯ ಪಡಲಿಲ್ಲ ಮತ್ತು ನಾನು ದೇವರ ದೃಷ್ಟಿಕೋನವನ್ನು ಹೊಂದಲಿಕ್ಕಾಗಿ ಹಿಂದೆ ಅಥವಾ ಮೇಲಕ್ಕೆ ಸರಿದಾಗ, ನನ್ನ ಹೃದಯ ಶಾಂತವಾಗುತ್ತದೆ ಮತ್ತು ಲೋಕದ ಹಲವು ಸಂಗತಿಗಳು ಬಹಳ ವಿಭಿನ್ನವಾಗಿ ಕಾಣುತ್ತವೆ. ಇದು ನಾನು ಪ್ರಾರ್ಥಿಸಬಹುದಾದ ಒಂದು ಒಳ್ಳೆಯ ಪ್ರಾರ್ಥನೆ.

ನೀನು ಕಟ್ಟುವ ಒಂದು ಸಭೆಯಲ್ಲಿ ಜನರು ಪ್ರತಿಯೊಂದು ಸಂಗತಿಯನ್ನು ದೇವರ ದೃಷ್ಟಿಯಿಂದ ನೋಡಲು ಕಲಿತಿದ್ದರೆ, ನೀನು ಒಂದು ಆತ್ಮಿಕ ಸಭೆಯನ್ನು ಕಟ್ಟಿದಂತಾಗುತ್ತದೆ. ಸುವಾರ್ತೆ ಸಾರುವುದರಲ್ಲಿ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ನಿನ್ನನ್ನು ನೀನು ಹೆಚ್ಚಾಗಿ ತೊಡಗಿಸಿಕೊಂಡ ಮಾತ್ರಕ್ಕೆ ನೀನು ಕಟ್ಟುವ ಸಭೆ ಆತ್ಮಿಕವಾಗುವದಿಲ್ಲ. ನಾವು ಪ್ರತಿಯೊಂದು ಸಂಗತಿಯನ್ನು ದೇವರ ದೃಷ್ಟಿಕೋನದಲ್ಲಿ ನೋಡುವುದನ್ನು ಕಲಿಯಬೇಕು, ಆಗ ಮಾತ್ರ ನಾವು ಕರ್ತನಿಗೆ ಯೋಗ್ಯರಾಗಿ ನಡೆದುಕೊಳ್ಳಬಹುದು (ಕೊಲಸ್ಸೆ. 1:10). ಮೊದಲು ನಿಮ್ಮ ಮನಸ್ಸು ಪ್ರತಿಯೊಂದು ಸಂಗತಿಯನ್ನು ದೇವರ ದೃಷ್ಟಿಯಿಂದ ನೋಡುವಂತೆ ಮಾಡದ ಹೊರತು, ನೀವು ದೇವರು ಬಯಸುವ ಹಾಗೆ ನಡೆಯಲು ಖಂಡಿತವಾಗಿ ಆಗದು.