ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ತಿಳಿಯುವುದು
WFTW Body: 

ಆದಿಕಾಂಡ 22ನೇ ಅಧ್ಯಾಯದ 12ನೇ ವಚನದಲ್ಲಿ, ಸತ್ಯವೇದದಲ್ಲಿಯೇ ಮೊದಲ ಬಾರಿಗೆ ದೇವರು ಒಬ್ಬ ಮನುಷ್ಯನ ಬಗ್ಗೆ ಸಾಕ್ಷೀಕರಿಸಿ, ಹೀಗೆ ಹೇಳುತ್ತಾರೆ - "ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂಬುದು ಈಗ ತೋರಬಂತು". ಅಬ್ರಹಾಮನು ತನ್ನ ಮಗನಾದ ಇಸಾಕನನ್ನು ದೇವರಿಗೆ ಅರ್ಪಿಸಿದಾಗ, ದೇವರು ಹೇಳಿದ ಮಾತಿದು. ಈ ಸಮಯದಲ್ಲಿ, ಅಬ್ರಹಾಮನು ಸುಮಾರು 125 ವಯಸ್ಸಿನವನಾಗಿದ್ದನು ಮತ್ತು ದೇವರು ಪುನ: ಆತನನ್ನು ಪರೀಕ್ಷಿಸಿದರು. ಅಬ್ರಹಾಮನು ಮೊದಲು ಪ್ರೀತಿಸಿದ ಹಾಗೆ, ಈಗಲೂ ಎಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತಾನೋ ಎಂದು ನೋಡಲು ದೇವರು ಈ ಸಲ ಆತನನ್ನು ಪರೀಕ್ಷಿಸಿದರು. ದೇವರು ಅಬ್ರಹಾಮನಿಗೆ ಹೇಳಿದ್ದೇನೆಂದರೆ, "ನಿನ್ನ ಮಗನಾದ ಇಸಾಕನನ್ನು ಬಲಿಯಾಗಿ ಅರ್ಪಿಸು. ಇದನ್ನು ನೀನು ನಾಳೆ ಬೆಳಗ್ಗೆ ಮಾಡು ಎಂದು ನಾನು ಹೇಳುತ್ತಿಲ್ಲ. ಮೂರು ದಿನಗಳ ಪ್ರಯಾಣದ ನಂತರ ಮೊರೀಯ ಬೆಟ್ಟದ ಮೇಲೆ ಆತನನ್ನು ಬಲಿಯನ್ನಾಗಿ ಅರ್ಪಿಸು". ಯಾವುದನ್ನೂ ಅವಸರದಲ್ಲಿ ಮಾಡಲು ದೇವರು ನಮಗೆ ಹೇಳುವುದಿಲ್ಲ. ಅಬ್ರಹಾಮನು ಮೂರು ದಿನ ನಡೆದುಕೊಂಡು ಹೋಗಿ, ಈ ಬಲಿಯರ್ಪಣೆಗಾಗಿ ತಾನು ತೆರಬೇಕಾದ ಬೆಲೆಯನ್ನು ಲೆಕ್ಕಹಾಕುತ್ತಾನೆ ಮತ್ತು ಇಸಾಕನ್ನು ಆ ವೇದಿಯ ಮೇಲೆ ಮಲಗಿಸಿ, ಹೀಗೆ ಹೇಳುತ್ತಾನೆ. "ಕರ್ತನೇ, ನೀನು ಇಲ್ಲಿದ್ದೀಯ. ನಾನು ಈ ಲೋಕದಲ್ಲಿ ನನ್ನ ಅತ್ಯಂತ ಪ್ರೀತಿಮಯ ಸ್ವತ್ತಿಗಿಂತ ನಿನ್ನನ್ನು ಹೆಚ್ಚಾಗಿ ಪ್ರೀತಿಸುತ್ತೇನೆ".

ಇದು ಅಬ್ರಹಾಮನ ಸಮರ್ಪಣಾ ಮನೋಭಾವವನ್ನು ತೋರಿಸುತ್ತದೆ ಮತ್ತು ಇಸಾಕನ ಸಮರ್ಪಣಾ ಮನೋಭಾವವನ್ನು ಸಹ ತೋರಿಸುತ್ತದೆ. ಇಸಾಕನು, 25 ವರ್ಷದ ಯೌವನಸ್ಥನಾಗಿದ್ದು, 125 ವರ್ಷ ವಯಸ್ಸಿನ ಅಬ್ರಹಾಮನಿಗಿಂತ ಬಲಶಾಲಿಯಾಗಿದ್ದನು. ಇಸಾಕನು ಮನಸ್ಸು ಮಾಡದಿದ್ದರೆ, ಅಬ್ರಹಾಮನು ಇಸಾಕನನ್ನು ಯಜ್ಞವೇದಿಯ ಮೇಲೆ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಇದು ತೋರಿಸುವುದೇನೆಂದರೆ, ತನ್ನ ಮಗನಾದ ಇಸಾಕನು ತನಗೆ ವಿಧೇಯನಾಗುವುದನ್ನು ಅಬ್ರಹಾಮನು ಆತನಿಗೆ ಕಲಿಸಿಕೊಟ್ಟಿದ್ದನು ಎಂಬುದಾಗಿ. ತನ್ನ ಮಕ್ಕಳನ್ನು ಈ ರೀತಿಯಾಗಿ ಬೆಳೆಸಿದಂತಹ ವ್ಯಕ್ತಿಯು ನಿಜಕ್ಕೂ ಧನ್ಯನು. "ನಾನು ನಿನ್ನನ್ನೀಗ ದೇವರಿಗೆ ಬಲಿಯನ್ನಾಗಿ ಅರ್ಪಿಸುತ್ತೇನೆ. ನೀನಿಲ್ಲಿ ಮಲಗಿಕೊ" ಎಂದು ತಂದೆಯು ಹೇಳಿದಾಗ, ಅವನ ಮಗನು, ಮಲಗಿ, "ಸರಿ ಅಪ್ಪಾ, ನೀನು ಮಾಡಬೇಕಾದ್ದನ್ನು ಮಾಡು" ಎಂದು ಹೇಳುತ್ತಾನೆ. ಇಂಥಹ ತಂದೆಯು ನಿಜವಾಗಿಯೂ ದೈವಿಕ ಮನುಷ್ಯನೆಂದು ನೀವು ಖಚಿತವಾಗಿ ತಿಳಿಯಬಹುದು.

ಅಬ್ರಹಾಮನು ಇದನ್ನು "ದೇವರನ್ನು ಆರಾಧಿಸುವುದು" ಎಂದು ಕರೆದನು (ಆದಿ. 22:5). "ಆರಾಧನೆ" ಎಂಬ ಪದವು ಮೊದಲ ಬಾರಿಗೆ ಸತ್ಯವೇದದಲ್ಲಿ ಕಂಡು ಬಂದಿದ್ದು ಈ ಆಧ್ಯಾಯದಲ್ಲಿ ಮತ್ತು ಇದೇ ನಿಜವಾದ ಆರಾಧನೆಯಾಗಿದೆ. ತಂದೆಯು ಇಂತಹ ಆರಾಧಕರನ್ನು ಇಂದೂ ಸಹ ಹುಡುಕುತ್ತಿದ್ದಾರೆ.

ದೇವರು ಅಬ್ರಹಾಮನ ಭಕ್ತಿಯನ್ನು ನೋಡಿ ಹೀಗೆ ಹೇಳಿದರು. "ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂಬುದು ಈಗ ತೋರಬಂತು (ಆದಿ.22:14). "ದೇವರೇ, ನಾನು ಈ ಲೋಕದಲ್ಲಿರುವ ನನ್ನ ಅತ್ಯಂತ ಪ್ರೀತಿಮಯ ಸ್ವತ್ತಿಗಿಂತ ನಿನ್ನನ್ನು ಹೆಚ್ಚಾಗಿ ಪ್ರೀತಿಸುತ್ತೇನೆ" ಎಂದು ಹೇಳಿ ದೇವರಿಗೆ ಭಯಪಟ್ಟು ಆತನಿಗೆ ಸಂಪೂರ್ಣವಾಗಿ ವಿಧೇಯನಾದ ಉಲ್ಲೇಖ ಸತ್ಯವೇದದಲ್ಲಿ ದಾಖಲಾಗಿರುವುದು ಇದೇ ಮೊದಲ ಬಾರಿ. ಅಬ್ರಹಾಮನು ತನ್ನ ಕುಟುಂಬದ ಸದಸ್ಯರಿಗಿಂತ ಹೆಚ್ಚಾಗಿ ದೇವರನ್ನು ಪ್ರೀತಿಸಿದ್ದರಿಂದ ಊರ್ ಎಂಬ ಪಟ್ಟಣವನ್ನು 50 ವರ್ಷಗಳ ಹಿಂದೆಯೇ ಬಿಟ್ಟು ಬಂದಿದ್ದನು. 50 ವರ್ಷಗಳ ನಂತರವೂ, ದೇವರ ಮೇಲಿನ ಪ್ರೀತಿಯು ಆತನಿಗೆ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಇಂತಹ ಒಬ್ಬ ಮನುಷ್ಯನಿಂದ ಯೆರೂಸಲೆಮ್ ಪ್ರಾರಂಭವಾಯಿತು. ಹಿಂಬಾಲಿಸಲಿಕ್ಕೆ, ಎಂತಹ ಒಂದು ಮಾದರಿ ಇದು! ನಿಮ್ಮ ಜೀವಿತದ ಪ್ರತಿಯೊಂದು ದಿನವೂ ನೀವು ಈ ರೀತಿ ನಡೆದರೆ, ನೀವು ಧನ್ಯರು.

ಅಬ್ರಹಾಮನು ಈ ಸ್ಥಳಕ್ಕೆ "ಯೆಹೋವ ಯಿರೆ" ಎಂದು ಹೆಸರಿಟ್ಟನು - ಅಂದರೆ ದೇವರು ಒದಗಿಸುತ್ತಾನೆ ಎಂದು ಅರ್ಥ (ಆದಿ. 22:14). ನಮ್ಮ ಜೀವಿತದಲ್ಲಿ ನಾವು ಯಾವುದೇ ಸಮಸ್ಯೆಯನ್ನು ಎದುರಿಸುವಾಗ ಈ ಒಂದು ಪದವನ್ನು ನಾವು ಯೋಚಿಸಬಹುದು. ಏಕೆಂದರೆ, ಆತನ ವಾಗ್ದಾನವೇನೆಂದರೆ - ದೇವರು ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು (ಪಿಲಿಪ್ಪಿ. 4:19).

ಹೌದು, ಅಬ್ರಹಾಮನು ಮಾಡಿದ ರೀತಿಯಲ್ಲಿ, ಯಾರು ದೇವರಿಗೆ ಭಯಪಡುತ್ತಾರೋ ಮತ್ತು ಆರಾಧಿಸುತ್ತಾರೋ, ಅಂತವರಿಂದ ಇಂದೂ ಸಹ ದೇವರ ಮನೆಯು ಕಟ್ಟಲ್ಪಡುತ್ತದೆ

ಈ ಮೋರಿಯ ಬೆಟ್ಟದ ಮೇಲೆಯೇ ಅಬ್ರಹಾಮನು ದೇವರ ಹೃದಯದ ಮುನ್ನೋಟವನ್ನು (glimpse) ಕಂಡನು, ಅದೇನೆಂದರೆ, 2000 ವರ್ಷಗಳ ನಂತರ ಒಂದು ದಿನ ದೇವರು ತನ್ನ ಮಗನನ್ನು ಬಲಿಯಾಗಿ ಈ ಸ್ಥಳದಲ್ಲಿಯೇ ಅರ್ಪಿಸುತ್ತಾನೆ ಎಂದು. ಯೇಸು ಇದನ್ನು ಯೋಹಾನ 8:56ರಲ್ಲಿ ಉಲ್ಲೇಖಿಸಿದ್ದಾನೆ : ನಿಮ್ಮ ಮೂಲಪುರುಷನಾದ ಅಬ್ರಹಾಮನು ನನ್ನ ದಿನವನ್ನು ತಾನು ನೋಡೇನೆಂದು ಉಲ್ಲಾಸಪಟ್ಟನು; ಅದನ್ನು ನೋಡಿ ಆತನು ಸಂತೋಷಪಟ್ಟನು. ದೇವರು ಇಲ್ಲಿ ಅಬ್ರಹಾಮನ ಮನೋಭಾವವನ್ನು ನೋಡಿ ಎಷ್ಟು ಸಂತೋಷಪಟ್ಟರೆಂದರೆ, 1000ವರ್ಷಗಳ ನಂತರ ಇದೇ ಮೊರೀಯ ಬೆಟ್ಟದಲ್ಲಿ ದೇವಾಲಯವನ್ನು ಕಟ್ಟಲು ಆತನು ಆಜ್ಞಾಪಿಸಿದನು (2 ಪೂರ್ವಕಾಲವೃತ್ತಾಂತ 3:1). ಹೌದು, ಅಬ್ರಹಾಮನು ಮಾಡಿದ ರೀತಿಯಲ್ಲಿ, ಯಾರು ದೇವರಿಗೆ ಭಯಪಡುತ್ತಾರೋ ಮತ್ತು ಆರಾಧಿಸುತ್ತಾರೋ, ಅಂತವರಿಂದ ಇಂದೂ ಸಹ ದೇವರ ಮನೆಯು ಕಟ್ಟಲ್ಪಡುತ್ತದೆ.