ಬರೆದಿರುವವರು :   ಝ್ಯಾಕ್ ಪೂನನ್
WFTW Body: 

ಯೆಹೆಜ್ಕೇಲ 22:30ರಲ್ಲಿ ನಾವು ಓದುವಂತೆ, ಒಂದು ಸ್ಥಳದಲ್ಲಿ ತನಗಾಗಿ ನಿಲ್ಲುವ ಕನಿಷ್ಟ ಒಬ್ಬ ವ್ಯಕ್ತಿಯನ್ನು ಕಂಡುಕೊಳ್ಳುವುದನ್ನು ದೇವರು ಯಾವಾಗಲೂ ಎದುರು ನೋಡುತ್ತಿರುತ್ತಾರೆ. ಆತನು ಒಂದು ಸಮಯದಲ್ಲಿ ಹನೋಕನನ್ನು ಕಂಡುಕೊಂಡನು, ನಂತರ ನೋಹನನ್ನು, ನಂತರ ಅಬ್ರಹಾಮನನ್ನು ಮತ್ತು ತದನಂತರ ಎಲಿಜಾ ಮತ್ತು ಸ್ನಾನಿಕನಾದ ಯೋಹಾನ ಹಾಗೂ ಇತರರನ್ನು ಕಂಡುಕೊಂಡನು.

ಬಾಬೆಲೋನಿನಲ್ಲಿ ಆತನು ದಾನಿಯೇಲನನ್ನು ಕಂಡುಕೊಂಡನು. ಸತ್ಯವೇದವು ದಾನಿಯೇಲ 1:7 ರಲ್ಲಿ ದಾನಿಯೇಲನ ಮೂರು ಜನ ಸ್ನೇಹಿತರಾದ ಹನನ್ಯ, ಮಿಶಾಯೇಲ ಮತ್ತು ಅಜರ್ಯ (ನಂತರ ಮರುಹೆಸರಿಸಲ್ಪಟ್ಟ ಶದ್ರಕ್, ಮೇಶಕ್ ಮತ್ತು ಅಬೆದ್ನೆಗೋ) ಎಂಬವರನ್ನು ಉಲ್ಲೇಖಿಸಿದರೂ ದಾನಿಯೇಲ 1:8 ರಲ್ಲಿ ಹೇಳುವುದೇನೆಂದರೆ ತನ್ನನ್ನು ಅಶುದ್ಧ ಮಾಡಿಕೊಳ್ಳಬಾರದೆಂದು ದಾನಿಯೇಲನೊಬ್ಬನೇ ತನ್ನ ಹೃದಯದಲ್ಲಿ ನಿಶ್ಚಯಿಸಿಕೊಂಡನು ಎಂಬುದಾಗಿ. ದಾನಿಯೇಲನು ಈ ರೀತಿಯಾಗಿ ನಿಶ್ಚಯಿಸಿಕೊಂಡ ನಂತರವೇ, ಆತನ ಸ್ನೇಹಿತರು ದೇವರಿಗಾಗಿ ನಿಲ್ಲಲು ಧೈರ್ಯಮಾಡಿದರು. ಈ ಲೋಕದಲ್ಲಿ ಇದೇ ರೀತಿಯಾಗಿ ಅನೇಕ ವಿಶ್ವಾಸಿಗಳಲ್ಲಿ ಹನನ್ಯ, ಮಿಶಾಯೇಲ ಮತ್ತು ಅಜರ್ಯರಂತವರು ಇದ್ದಾರೆ. ಆದರೆ, ಇವರು ತಮ್ಮ ಸ್ವಂತ ನಿರ್ಧಾರದಿಂದ ದೇವರಿಗಾಗಿ ನಿಲ್ಲಲು ಧೈರ್ಯವನ್ನು ಹೊಂದಿರುವುದಿಲ್ಲ. ಆದರೆ ದಾನಿಯೇಲನಂತೆ ಯಾರಾದರೂ ಅವರ ಮಧ್ಯದಲ್ಲಿ ದೇವರಿಗಾಗಿ ನಿಲ್ಲಲು ಧೈರ್ಯ ಮಾಡಿದರೆ ಮಾತ್ರ ಅವರೂ ಆ ರೀತಿ ನಿಲ್ಲುತ್ತಾರೆ. ಹಾಗಾಗಿ ನೀವು ಯಾರೇ ಆಗಿದ್ದರೂ, ಕರ್ತನಿಗಾಗಿ ’ದಾನಿಯೇಲ’ನಾಗಿ ಇರಲು ನಿಶ್ಚಯಿಸಿಕೊಳ್ಳಿರಿ.

ಇದೇ ರೀತಿ, ಇದಕ್ಕೆ ವಿರುದ್ಧವಾಗಿ, ಕೆಟ್ಟದಾದುದನ್ನು ನಾವು ನೋಡುತ್ತೇವೆ. ಯಾವುದೋ ಒಂದು ಕಾರಣದಿಂದ ಅತೃಪ್ತಿಯಿಂದಿದ್ದ ಅನೇಕ ದೂತರು ಪರಲೋಕದಲ್ಲಿದ್ದರು. ಆದರೆ ಅವರ ಮಧ್ಯದಲ್ಲಿ ಲೂಸಿಫರನು ಅತೃಪ್ತಿಯ ವಿಷಯವಾಗಿ ಸಿಡಿದೇಳುವ ತನಕ, ಮಿಕ್ಕ ದೂತರಿಗೆ ಸಿಡಿದೇಳಲು ಧೈರ್ಯವಿದ್ದಿದ್ದಿಲ್ಲ. ಯಾವಾಗ ಲೂಸಿಫರನು (ದೂತರಲ್ಲಿ ಪ್ರಮುಖನು) ಅತೃಪ್ತಿಯ ವಿಷಯವಾಗಿ ಸಿಡಿದೆದ್ದನೋ, ತಕ್ಷಣವೇ ಮೂರರಲ್ಲಿ ಒಂದು ಭಾಗ ದೂತರು ಆತನೊಟ್ಟಿಗೆ ಸೇರಿಕೊಂಡರು (ಪ್ರಕ.12:4). ಈ ಮಿಲಿಯಗಟ್ಟಲೆ ದೂತರು ಲೂಸಿಫರನೊಂದಿಗೆ ದೇವರಿಂದ ದಬ್ಬಲ್ಪಟ್ಟರು. ಅವರೇ ದೆವ್ವಗಳಾಗಿ ಇಂದು ಜನರನ್ನು ತಮ್ಮ ವಶದಲ್ಲಿರಿಸುತ್ತಾರೆ. "ಆಗ ಅತಿಗರ್ವದಿಂದ ಮೆರೆಯುವವರನ್ನು ನಿನ್ನೊಳಗಿಂದ ತೊಲಗಿಸಿಬಿಡುವೆನು; ಅಂದಿನಿಂದ ನನ್ನ ಪವಿತ್ರ ಪರ್ವತದಲ್ಲಿ ಗರ್ವ ಪಡದೆ ಇರುವಿ. ದೀನ ದರಿದ್ರ ಜನರನ್ನು ನಿನ್ನಲ್ಲಿ ಉಳಿಸುವೆನು; ಅವರು ಯೆಹೋವನ ನಾಮವನ್ನು ಆಶ್ರಯಿಸಿಕೊಳ್ಳುವರು" (ಚೆಫನ್ಯ 3:11,12). ಈ ರೀತಿಯಾಗಿ ಅನೇಕ ಯುಗಗಳ ಹಿಂದೆ, ಆತನು ಪರಲೋಕವನ್ನು ಶುದ್ಧೀಕರಿಸಿದನು ಮತ್ತು ಅದೇ ರೀತಿಯಾಗಿ ಇಂದೂ ಸಹ ಆತನು ತನ್ನ ಸಭೆಯನ್ನು ಶುದ್ಧೀಕರಿಸುತ್ತಿದ್ದಾನೆ.

ಈ ಲೋಕದಲ್ಲಿ ಈಗ ಎರಡು ರೀತಿಯ ಚಳುವಳಿಗಳು ಒಂದೇ ಸಲ ಸಾಗುತ್ತಿವೆ: ದಾನಿಯೇಲನಂತವರು, ಕರ್ತನಿಗಾಗಿ ನಿಲ್ಲುವ ಇಬ್ಬರು ಅಥವಾ ಮೂವರನ್ನು ಒಟ್ಟುಗೂಡಿಸುತ್ತಿದ್ದಾರೆ; ಮತ್ತು ಲೂಸಿಫರನಂತವರು ಅಶುದ್ಧತೆಯನ್ನು ಮಾಡುವಂತೆ, ಅಧಿಕಾರದ ವಿರುದ್ಧ ಸಿಡಿದೇಳುವಂತೆ ಮತ್ತು ದೇವರ ಆಜ್ಞೆಗಳಿಗೆ ಅವಿಧೇಯರಾಗುವಂತೆ ಮಿಲಿಯಗಟ್ಟಲೆ ಜನರನ್ನು ಒಟ್ಟುಗೂಡಿಸುತ್ತಿದ್ದಾರೆ. ಆದರೆ ದಾನಿಯೇಲನ ರೀತಿ ಎರಡು ಅಥವಾ ಮೂರು ಜನರಿರುವವರು ಕೊನೆಗೆ ಜಯಶಾಲಿಯಾಗುತ್ತಾರೆ. ಏಕೆಂದರೆ ದೇವರೊಟ್ಟಿಗೆ ಇರುವಂತಹ ಒಬ್ಬ ಮನುಷ್ಯನೂ ಯಾವಾಗಲೂ ಬಹುಮತವುಳ್ಳವನಾಗಿರುತ್ತಾನೆ. ಒಂದು ಪ್ರದೇಶದಲ್ಲಿ ದೇವರಿಗೆ ಒಬ್ಬ ದಾನಿಯೇಲನು ಸಿಗದಿದ್ದರೆ, ಸೈತಾನನು ಒಬ್ಬಾತನನ್ನು ಆರಿಸಿಕೊಂಡು, ತನ್ನ ದಾರಿಗೆ ಜನರನ್ನು ನಡೆಸಿಕೊಳ್ಳುತ್ತಾನೆ. ಹಾಗಾಗಿ ದೇವರ ಅತೀ ಸಣ್ಣ ಆಜ್ಞೆಗಳಿಗೆ ಅವಿಧೇಯನಾಗುವುದರ ಮೂಲಕ ನನ್ನನ್ನು ನಾನು ಅಶುದ್ಧ ಮಾಡಿಕೊಳ್ಳುವುದಿಲ್ಲ ಮತ್ತು ಸಿಂಹದ ಬೋನಿಗೆ ದಬ್ಬಲ್ಪಟ್ಟರೂ ಸಹ, ನಾನು ದೇವರಿಗಾಗಿ ನಿಲ್ಲುತ್ತೇನೆ ಎಂದು ನಿನ್ನ ಹೃದಯದಲ್ಲಿ ನಿಶ್ಚಯಿಸಿಕೊಳ್ಳುವುದರ ಮೂಲಕ ನಿನ್ನ ಪ್ರದೇಶದಲ್ಲಿ ದೇವರಿಗಾಗಿ ನೀನು ದಾನಿಯೇಲನಾಗುವುದು ತುಂಬಾ ಅವಶ್ಯವಾಗಿದೆ.