WFTW Body: 

ಹಗ್ಗಾ. 1:7,8ರಲ್ಲಿ ಕಟ್ಟಡವನ್ನು ಪೂರ್ಣಗೊಳಿಸಲು ಹಗ್ಗಾಯನು ಜನರನ್ನು ಒತ್ತಾಯಿಸುತ್ತಾನೆ. ಅಸ್ತಿವಾರವು ಬಹಳ ವರ್ಷಗಳ ಹಿಂದೆಯೇ ಹಾಕಲಾಗಿತ್ತು. ಆದರೆ ಅವರು ಅಲ್ಲೇ ನಿಂತರು.

ಕೇವಲ ಅಸ್ತಿವಾರವನ್ನು ಹಾಕಿ, ಮತ್ತೆ ಕಟ್ಟಡವನ್ನು ಪೂರ್ಣಗೊಳಿಸದ ಒಬ್ಬನ ಬಗ್ಗೆ ಸಾಮ್ಯವನ್ನು ಯೇಸುವು ಹೇಳಿದನು (14:28-30) ಆ ಸಾಮ್ಯವು ಅವನ ಶಿಷ್ಯನಾಗುವುದರ ಬಗ್ಗೆ ಅವನು ಹೇಳುವುದರ ಮಧ್ಯೆ ಬರುತ್ತದೆ. ನಾವು ಏನನ್ನು ಅರ್ಥೈಸಿಕೊಳ್ಳಬೇಕೆಂದು ಯೇಸುವು ಬಯಸಿದನೆಂದರೆ, ಸುವಾರ್ತೆಯ ಬೋಧನೆಯು, ಜನರನ್ನು ಶಿಷ್ಯರನ್ನಾಗಿಸದೆ, ಕೇವಲ ಅಸ್ತಿವಾರವನ್ನು ಮಾತ್ರ ಹಾಕಿ ಕಟ್ಟಡವನ್ನು ಕಟ್ಟದೇ ಇರುವುದಾಗಿದೆ. ಅಸ್ತಿವಾರವು ಅಗತ್ಯವೋ? ಹೌದು, ಅವಶ್ಯವಾಗಿ ಅದು ಪ್ರಮುಖವಾದುದು. ಒಂದು ಮನೆಯನ್ನು ಕಟ್ಟುವಾಗ ಮೊಟ್ಟ ಮೊದಲಾಗಿ ಮಾಡಬೇಕಾದ ಕೆಲಸವದು. ಸುವಾರ್ತೆಯ ಬೋಧನೆಯು ಅಗತ್ಯವೋ? ಖಚಿತವಾಗಿ ಅದು ಅಗತ್ಯ. ಅದೂ ಮೊಟ್ಟಮೊದಲಾಗಿ ಮಾಡಬೇಕಾದ ಕೆಲಸ. ಆದರೆ ನೀನು ಕೇವಲ ಸುವಾರ್ತೆಯ ಬೋಧನೆಯನ್ನು ಮಾಡಿ, ಜನರನ್ನು ಶಿಷ್ಯರನ್ನಾಗಿ ಮಾಡದಿದ್ದಲ್ಲಿ ಅದು ಅಸ್ತಿವಾರವಿಲ್ಲದ ಕಟ್ಟಡದಷ್ಟು ವ್ಯರ್ಥವಾದ ಕೆಲಸವಾಗುವದು.

ಇಬ್ರಿಯ 6:1-3 ಅಂಥಹ ಮೂರ್ಖತನದ ಬಗ್ಗೆ ಎಚ್ಚರಿಕೆ ಕೊಡುತ್ತದೆ. "ಸ್ನಾನ ಹಸ್ತಾರ್ಪಣಗಳ ವಿಷಯವಾದ ಉಪದೇಶ, ಸತ್ತವರಿಗೆ ಪುನುತ್ಥಾನವೂ, ನಿತ್ಯವಾದ ನ್ಯಾಯತೀರ್ಪೂ ಉಂಟೆಂಬುದು ಇವುಗಳನ್ನು ಪದೇಪದೇ ಅಸ್ತಿವಾರವಾಗಿ ಹಾಕದೆ ಕ್ರಿಸ್ತನ ವಿಷಯವಾದ ಪ್ರಥಮ ಬೋಧನೆಯನ್ನು ಕುರಿತು ಇನ್ನೂ ಮಾತಾಡದೆ ಪೂರ್ಣವಾದ ತಿಳುವಳಿಕೆಗೆ ಸಾಗುತ್ತಾ ಹೋಗೋಣ." ಅವೆಲ್ಲವೂ ಕೇವಲ ಅಸ್ತಿವಾರ. ಲೇಖಕನು ಹೇಳುವುದೇನೆಂದರೆ, ಅದರ ನಂತರ ನಾವೆಲ್ಲ ಪರಿಪೂರ್ಣತೆಯೆಡೆಗೆ ಸಾಗಬೇಕು ಎಂಬುದಾಗಿ." ಅದೇ, ಮನೆಯನ್ನು ಕಟ್ಟುವುದು. ಸುವಾರ್ತೆಯ ಬೋಧನೆಯ ಮೂಲಕ ನಾವು ಜನರನ್ನು ಕ್ರಿಸ್ತನೆಡೆಗೆ ನಡೆಸಿದ ನಂತರ, ಅವರನ್ನು ಯೇಸುವನ್ನು ಹಿಂಬಾಲಿಸುವ ಮತ್ತು ಪರಿಪೂರ್ಣತೆಯೆಡೆಗೆ ಸಾಗುವ ಶಿಷ್ಯರನ್ನಾಗಿ ಮಾಡಲೇಬೇಕು.

ಅದುದರಿಂದ ಹಗ್ಗಾಯನ ಸಂದೇಶ ಅಸ್ತಿವಾರ ಹಾಕುವುದರ ಬಗ್ಗೆಯಲ್ಲ. ಅದು ಸಂಪೂರ್ಣತೆಯ ಬಗ್ಗೆ. "ಕ್ರಿಸ್ತನ ದೇಹವಾದ ಕಟ್ಟಡವನ್ನು ಪೂರ್ಣಗೊಳಿಸುವುದರ ಬಗ್ಗೆ. ದೇವರ ಮನೆಯ ಮತ್ತು ಒಂದು ಸಮಾವೇಶದ ನಡುವಿನ ವ್ಯತ್ಯಾಸವೇನು? ಒಂದು ಕಲ್ಲುಗಣಿಯಿಂದ 50,000 ಕಲ್ಲುಗಳನ್ನು ಕಡಿದು ತಂದು ಕಟ್ಟಡ ಕಟ್ಟುವ ಸ್ಥಳದಲ್ಲಿ ರಾಶಿಹಾಕಿದರೆ, ಅದು ಸುವಾರ್ತೆಯ ಬೋಧನೆ. ಈ ಕಲ್ಲುಗಳು ಹೊಸದಾಗಿ ಹುಟ್ಟಿದವರನ್ನು ಸಂಕೇತಿಸುತ್ತವೆ. ಆದರೆ ಅವಿನ್ನೂ ಕಟ್ಟಡವಾಗಿಲ್ಲ. ಅವು ಕೇವಲ ಕಲ್ಲುಗಳ ರಾಶಿ. ಇಂದಿನ ಬಹುತೇಕ ಸುವಾರ್ತೆಯ ಬೋಧನೆಯ ಕೂಟಗಳು ಇವೇ ಆಗಿವೆ. ಅದು ಕ್ರಿಸ್ತನ ದೇಹವಾಗಿ ವ್ಯಕ್ತವಾಗಬೇಕಾದರೆ, ಅವು ಒಂದರ ಪಕ್ಕ ಇನ್ನೊಂದರಂತೆ ಕಟ್ಟಲ್ಪಡಬೇಕು. "ದೇವರ ಮನೆಯಂತೆ ಅವನ್ನು ಜೊತೆಯಾಗಿ ಕಟ್ಟುವುದು" - ಬಹಳ ಕಷ್ಟದ ಕೆಲಸ.

ಇಂದು ಅನೇಕ ಸಭೆಗಳು ಕೇವಲ ಸಮಾವೇಶಗಳಾಗಿವೆ. ಅಲ್ಲಿ ಒಬ್ಬ ಮನುಷ್ಯ (ಸಭಾಪಾಲಕ) ಕಾವಲುಗಾರನಂತೆ, ಯಾರೂ ತನ್ನ ಕಲ್ಲುಗಳನ್ನು ಕದಿಯದಂತೆ, ನೋಡಿಕೊಳ್ಳಬೇಕಾಗಿದೆ. ಒಂದು ದಿನ ಅವನ ಒಂದು ಕಲ್ಲು ತಾನು ಹೆಚ್ಚಾಗಿ ಆತ್ಮಿಕ ನೆರವನ್ನು ಪಡೆಯಬಹುದಾದ ಸಭೆಗೆ ಸೇರಲು ನಿರ್ಧರಿಸಿದಾಗ, ತನ್ನ ಕಲ್ಲುಗಳನ್ನು ಯಾರೋ ಕದಿಯುತ್ತಾರೆಂದು ಈ ಕಾವಲುಗಾರನು ದೂರುತ್ತಾನೆ. ಆದರೆ, ಅವನು ಈ ಕಲ್ಲುಗಳನ್ನು ಒಂದು ಕಟ್ಟಡವಾಗಿ ಕಟ್ಟಿದ್ದರೆ, ಯಾರೊಬ್ಬನಿಗೂ ಅದನ್ನು ಕದಿಯುವುದು ಅಸಾಧ್ಯವಾಗುತ್ತಿತ್ತು. ನೀನು ಕ್ರಿಸ್ತನ ದೇಹವನ್ನು ಕಟ್ಟುವುದಾದರೆ, ಇತರರು ನಿನ್ನ ಸದಸ್ಯರನ್ನು ಕದಿಯುವುದರ ಬಗ್ಗೆ ನೀನು ಚಿಂತಿಸಬೇಕಾಗಿಲ್ಲ. ಕಲ್ಲುಗಳು ಒಂದರೆ ಮೇಲೆ, ಒಂದರೆ ಕೆಳಗೆ, ಒಂದರೆ ಬಲಬದಿಗೆ ಮತ್ತು ಎಡಬದಿಗೆ ಸಿಮೆಂಟಿನಿಂದ ಕಟ್ಟಲ್ಪಟ್ಟಾಗ, ಅವನ್ನು ಯಾರು ಕದ್ದಾರು?

1975ರಿಂದ ಬೆಂಗಳೂರಿನಲ್ಲಿ ನನಗೊಂದು ಸಭೆಯಿದೆ. ಆದರೆ ನನ್ನ ಸಭೆಯಿಂದ ಯಾರನ್ನಾದರೂ ಯಾರಾದರೂ ಕದ್ದರೆಂಬುದರ ಬಗ್ಗೆ ನಾನು ಯಾವತ್ತೂ ದೂರಲಿಲ್ಲ. ನಮ್ಮ ಮಧ್ಯೆ ಕಟ್ಟಲ್ಪಡುತ್ತಿರುವವರು ಎಂದಿಗೂ ಕದಿಯಲ್ಪಡಲಾರರು. ಆದುದರಿಂದ ಕೇವಲ ಅಸ್ತಿವಾರವನ್ನು ಹಾಕಿ, ಕಲ್ಲುಗಳನ್ನು ರಾಶಿಮಾಡುವ ಬದಲಾಗಿ ದೇವರ ಮನೆಯನ್ನು ಕಟ್ಟುವವರಂತಾಗೋಣ.

1:9-11ರಲ್ಲಿ ಕರ್ತನು ಕೊಡುವ ತೀಕ್ಷ್ಣವಾದ ಗದರಿಕೆಯನ್ನು ಗಮನಿಸಿರಿ. ನಮ್ಮ ಸಭೆಗಳಲ್ಲಿ ಪ್ರೀತಿಯಿಂದ ಗದರಿಕೆಯ ಮಾತನ್ನಾಡುವ ಬೋಧಕರ ಬಹಳ ಅಗತ್ಯ ಇಂದು ಇದೆ. ಈ ದಿನಗಳಲ್ಲಿ ಬಹಳಷ್ಟು ಬೋಧನೆಯಿದೆ. ಆದರೆ, ಬಹಳ ಗದರಿಕೆ ಮತ್ತು ತಿದ್ದುವಿಕೆ ಬಹಳ ಕಡಿಮೆ. ನಿನ್ನ ಜೀವನದಲ್ಲಿ, ದೇವರು ನಿರಂತರ ಸೋಲುವಿಕೆಯನ್ನು ಸಮ್ಮತಿಸಿದಾಗ, ನೀನು ನಿಂತು ಅವನು ನಿನಗೆ ಏನು ಹೇಳುತ್ತಾನೆಂದು ಕೇಳಬೇಕಾದ ಅಗತ್ಯವಿದೆ. ನಿನಗೆ ನೀನೇ ಕೇಳುವವನಂತಾಗು, "ನನ್ನ ಜೀವನದಲ್ಲಿ ಆತ್ಮದ ಫಲ ಯಾಕೆ ಇಲ್ಲ, ನನ್ನ ಕುಟುಂಬ-ಜೀವನ ಯಾಕಾಗಿ ಗೊಂದಲದಲ್ಲಿದೆ? ಯಾಕಾಗಿ ಸ್ವರ್ಗದಿಂದ ಮಳೆಯಿಲ್ಲ? ಯಾಕಾಗಿ ನನ್ನ ಜೀವನದಲ್ಲಿ ಒಣತನವಿದೆ? (1:9-11). ಇದು ಬಹುಷ, ಕರ್ತನ ಜೊತೆ ನಿನ್ನ ನಡಿಗೆಗಿಂತ, ಪ್ರಾಪಂಚಿಕ ವಿಷಯಗಳಲ್ಲಿ ಮತ್ತು ನಿನ್ನ ಬ್ಯಾಂಕ್ ಖಾತೆಯ ಬಗ್ಗೆ ನಿನಗೆ ಜಾಸ್ತಿ ಕಾಳಜಿಯಿರುವುದರಿಂದ ಆಗಿದ್ದಿರಬಹುದು!

ಜೆರುಬ್ಬಾಬೆಲ ಮತ್ತು ಮಹಾಯಾಜಕನಾದ ಯೆಹೋಶುವನು ಈ ಪ್ರವಾದನೆಯನ್ನು ಕೇಳಿದಾಗ, ಅವರು ಹಗ್ಗಾಯನ ಸಂದೇಶಕ್ಕೆ ಕೂಡಲೇ ಸ್ಪಂದಿಸಿದರು ಮತ್ತು ಹೇಳಿದರೇನೆಂದರೆ, "ಈ ಕ್ಷಣವೇ ನಾವು ದೇವರ ಮನೆಯನ್ನು ಕಟ್ಟಲು ಆರಂಬಿಸುತ್ತೇವೆ" ಅಥವಾ ಸಾಂಕೇತಿಕವಾಗಿ, "ಇನ್ನು ಮುಂದೆ ನಾವು ಕೇವಲ ಸುವಾರ್ಥಾ ಕಾರ್ಯದಲ್ಲಿ ತೊಡಗುವುದಿಲ್ಲ. ನಾವು ಶಿಷ್ಯರನ್ನು ಮಾಡುತ್ತೇವೆ. ನಾವು ಕ್ರಿಸ್ತನ ದೇಹವನ್ನು ಕಟ್ಟುತ್ತೇವೆಯೇ ಹೊರತಾಗಿ, ಒಬ್ಬ-ವ್ಯಕ್ತಿಯ ಸಭೆಯನ್ನಲ್ಲ" ಸಭೆಯು ಕ್ರಿಯಾತ್ಮಕ ದೇಹವಾಗಿರಬೇಕೇ ಹೊರತು, ಅಂಗರಚನಾ (anatomy) ಪ್ರಯೋಗಾಲಯಗಳಲ್ಲಿ ನೋಡಸಿಗುವಂತೆ, ದೇಹದ ಅಂಗಾಂಗಗಳ ರಾಶಿಯಲ್ಲ. ಅಲ್ಲಿ ಅನೇಕ ಕೈಗಳು, ಕಾಲುಗಳು, ಕಣ್ಣುಗಳು, ಕಿವಿಗಳು ಬಿದ್ದಿರುತ್ತವೆ. ಆದರೆ ಅವೆಲ್ಲ ಜೀವದಿಂದ ಒಂದಕ್ಕೊಂದು ಸೇರಿಸಲ್ಪಟ್ಟಿಲ್ಲ. ಮತ್ತು ಅವೆಲ್ಲ ಜೊತೆಯಾಗಿ ಕಾರ್ಯಮಾಡಲಾಗುವುದಿಲ್ಲ. ಇಂದು ಅನೇಕ ಸಭೆಗಳು ಯಥಾವತ್ತಾಗಿ ಹಾಗೇಯೇ ಆಗಿವೆ.