WFTW Body: 

ಯೆಹೋಶುವನ ಪುಸ್ತಕದಲ್ಲಿ, ಕಾನಾನ್ ದೇಶವು, ಪರಲೋಕದ ಒಂದು ಚಿತ್ರಣವಲ್ಲ (ಹಾಗೆಂದು ಕೆಲವು ವಿಶ್ವಾಸಿಗಳು ತಮ್ಮ ಸಂಗೀತದಲ್ಲಿ ಹಾಡುತ್ತಾರೆ), ಏಕೆಂದರೆ ಪರಲೋಕದಲ್ಲಿ ಕೊಲ್ಲಬೇಕಾದ ಯಾವ ದೈತ್ಯರೂ ಇರುವುದಿಲ್ಲ! ವಾಸ್ತವಿಕವಾಗಿ ಕಾನಾನ್ ದೇಶವು ಪವಿತ್ರಾತ್ಮಭರಿತ ಜಯಶೀಲ ಜೀವನದ ಒಂದು ನಿರೂಪಣೆಯಾಗಿದೆ; ಪಾಪವೆಂಬ ದೈತ್ಯರು - ನಮ್ಮಲ್ಲಿರುವ ಶಾರೀರಿಕ ಮೋಹಗಳು - ಶಿಲುಬೆಗೆ ಹಾಕಲ್ಪಡುವವು. ಎಲ್ಲಾ ದೈತ್ಯರೂ ಒಂದೇ ಕ್ಷಣದಲ್ಲಿ ಹತರಾಗಲಿಲ್ಲ. ಅವರು ಒಬ್ಬೊಬ್ಬರಾಗಿ ಕೊಲ್ಲಲ್ಪಟ್ಟರು.
ಇಸ್ರಾಯೇಲ್ಯರು ಕಾನಾನಿನ ತಮ್ಮ ಪ್ರಯಾಣದಲ್ಲಿ ಎರಡು ಜಲರಾಶಿಗಳನ್ನು ಹಾದುಹೋಗಬೇಕಿತ್ತು. ಅವುಗಳಲ್ಲಿ ಒಂದು ಕೆಂಪುಸಮುದ್ರ ಮತ್ತು ಇನ್ನೊಂದು ಯೊರ್ದನ್ ಹೊಳೆ. ಇವೆರಡೂ ಮರಣದ ಪ್ರತೀಕಗಳಾಗಿವೆ. ಕೆಂಪುಸಮುದ್ರವು ನೀರಿನ ದೀಕ್ಷಾಸ್ನಾನದ ಚಿತ್ರಣವಾಗಿದೆಯೆಂದು ನಾವು 1 ಕೊರಿಂಥ. 10ರಲ್ಲಿ ಕಾಣುವೆವು. ಯೊರ್ದನ್ ಹೊಳೆಯು ಇನ್ನೊಂದು ವಿಧವಾದ ಮರಣದ ಸಂಕೇತವಾಗಿದೆ. 1500 ವರ್ಷಗಳ ತರುವಾಯ ಸ್ನಾನಿಕನಾದ ಯೋಹಾನನು ಯೇಸುವಿಗೆ ದೀಕ್ಷಾಸ್ನಾನ ನೀಡಿದ್ದು ಇಲ್ಲಿಯೇ.

ನಮ್ಮ ಪೂರ್ವಸ್ವಭಾವವು ಶಿಲುಬೆಯ ಮೇಲೆ ದೇವರಿಂದ ಕ್ರೂಜೀಕರಿಸಲ್ಪಟ್ಟಿತು, ಎಂದು ವೇದವಾಕ್ಯವು ಕಲಿಸುತ್ತದೆ (ರೋಮಾ. 6: 6). ನಮ್ಮ ಹಳೆಯ ಮನುಷ್ಯನನ್ನು ಕ್ರೂಜೀಕರಿಸಲು ನಮ್ಮಿಂದ ಆಗುವದಿಲ್ಲ. ನಮ್ಮ ಹಳೆಯ ಮನುಷ್ಯನನ್ನು (ಪಾಪದ ಕಡೆಗೆ ಸೆಳೆಯುವ ಮನಸ್ಸು) ಕ್ರಿಸ್ತನೊಡನೆ ಶಿಲುಬೆಗೆ ಹಾಕಲಾಯಿತು. ಅದನ್ನು ದೇವರು ಮಾಡಿದರು. ಆದರೆ ನಾವು ಇನ್ಯಾವುದೋ ಒಂದನ್ನು ಶಿಲುಬೆಗೆ ಹಾಕಬೇಕಿದೆ - ನಮ್ಮ ಶರೀರಭಾವ (ನಮ್ಮ ಆಸೆ-ಮೋಹಗಳ ಉಗ್ರಾಣ). ಗಲಾತ್ಯ 5: 24 ಹೀಗೆನ್ನುತ್ತದೆ, "ಕ್ರಿಸ್ತ ಯೇಸುವಿನವರು ತಮ್ಮ ಶರೀರಭಾವವನ್ನು ಅದರ ವಿಷಯಾಭಿಲಾಷೆ, ಸ್ವೇಚ್ಛಾಭಿಲಾಷೆ ಸಹಿತ ಶಿಲುಬೆಗೆ ಹಾಕಿರುವರು."

ಶರೀರಭಾವ ಮತ್ತು ಹಳೆಯ ಮನುಷ್ಯನು, ಒಂದರಿಂದ ಒಂದು ವಿಭಿನ್ನವಾದವು. ಶರೀರಭಾವ ಹಾಗೂ ಅದರ ಕಾಮನೆಗಳು ನಮ್ಮ ಹೃದಯವನ್ನು, ದರೋಡೆಕಾರರ ಒಂದು ತಂಡದಂತೆ ಆವರಿಸಿ ಕಲುಷಿತಗೊಳಿಸಲು ಪ್ರಯತ್ನಿಸುತ್ತವೆ. ಹಳೆಯ ಮನುಷ್ಯನು, ನಮ್ಮ ಹೃದಯದಲ್ಲಿ ವಾಸಿಸುತ್ತಾ, ಪ್ರತೀ ಬಾರಿ ಈ ದರೋಡೆಕಾರರಿಗೆ ಬಾಗಿಲನ್ನು ತೆರೆಯುವ ಒಬ್ಬ ನಿಷ್ಠೆ ಇಲ್ಲದ ಸೇವಕನಂತೆ ಇರುತ್ತದೆ. ದೇವರು ಇವರಲ್ಲಿ ಯಾರನ್ನು ಸಾಯಿಸುವರು? ಅವರು ಆ ಸೇವಕನನ್ನು ಸಾಯಿಸುವರು. ದರೋಡೆಕಾರರ ತಂಡವು ಇನ್ನೂ ಗಟ್ಟಿಮುಟ್ಟಾಗಿ, ಬಲಿಷ್ಠವಾಗಿ ಇದೆ. ಈ ಕಾರಣದಿಂದಾಗಿ ಮಾನಸಾಂತರದ ನಂತರವೂ ನಾವೆಲ್ಲರೂ ಮೊದಲಿನಂತೆಯೇ ಶೋಧನೆಗೆ ಒಳಗಾಗುತ್ತೇವೆ. ದರೋಡೆಕೋರರು ಇನ್ನೂ ಜೀವಂತವಾಗಿ ಇರುವುದನ್ನು ಅದು ಸೂಚಿಸುತ್ತದೆ. ಅವರು ನಮ್ಮ ಹೃದಯದೊಳಗೆ ಕಾಲಿಡಲು ಪ್ರಯತ್ನಿಸುತ್ತಲೇ ಇರುವರು - ಆದರೆ ನಾವು ಮಾನಸಾಂತರ ಹೊಂದಿದಾಗ, ನಮ್ಮೊಳಗೆ ಬೇರಾವನೋ ಒಬ್ಬ - ಆ ಕಳ್ಳರಿಗಾಗಿ ಬಾಗಿಲು ತೆರೆಯುತ್ತಿದ್ದ ಸೇವಕ (ಆ ಹಳೆಯ ಮನುಷ್ಯನು) - ಸತ್ತು ಹೋಗಿದ್ದಾನೆ. ಆತನನ್ನು ದೇವರು ನಾವು ಹೊಸದಾಗಿ ಹುಟ್ಟಿದಾಗ ಸಂಹರಿಸಿದರು ಮತ್ತು ಒಬ್ಬ ಹೊಸ ಸೇವಕನನ್ನು ನಮ್ಮೊಳಗೆ ಇರಿಸಿದರು - ಇವನು ಆ ಕಳ್ಳರಿಗೆ ಬಾಗಿಲು ತೆರೆಯುವದಿಲ್ಲ. ಈಗ ನಮಗೆ ಶೋಧನೆ ಬಂದರೆ, ಈ ಹೊಸ ಸೇವಕನು "ಆಗದು" ಎನ್ನುವನು. ಹಾಗಿದ್ದರೂ ವಿಶ್ವಾಸಿಗಳು ಏಕೆ ಪಾಪದಲ್ಲಿ ಬೀಳುವರು? ಏಕೆಂದರೆ ಅವರು ಆ ಹೊಸ ಸೇವಕನಿಗೆ ಸಾಕಷ್ಟು ಆಹಾರವನ್ನು ನೀಡುವದಿಲ್ಲ! ಹಾಗಾಗಿ ದರೋಡೆಕೋರರು ಬಂದಾಗ ಬಾಗಿಲನ್ನು ಮುಚ್ಚುವ ಶಕ್ತಿ ಅವನಲ್ಲಿ ಇರುವದಿಲ್ಲ. ಆ ದರೋಡೆಕೋರರು ಬಲಾತ್ಕಾರವಾಗಿ ಒಳಕ್ಕೆ ನುಗ್ಗುವರು. ಹೀಗೆ ಒಬ್ಬ ವಿಶ್ವಾಸಿಯು ಪಾಪವನ್ನು ಮಾಡುತ್ತಾನೆ.

ಆದರೆ, ಒಬ್ಬ ವಿಶ್ವಾಸಿಯು ಮಾಡುವ ಪಾಪ ಮತ್ತು ಒಬ್ಬ ಅವಿಶ್ವಾಸಿಯು ಮಾಡುವ ಪಾಪಗಳ ನಡುವೆ ಬಹು ದೊಡ್ಡ ಅಂತರವಿದೆ - ವಿಶ್ವಾಸಿ ಪಾಪ ಮಾಡಲು ಬಯಸನು, ಆದರೆ ಅವಿಶ್ವಾಸಿ ಪಾಪವನ್ನು ಇಷ್ಟಪಡುತ್ತಾನೆ. ವಾಸ್ತವಿಕವಾಗಿ, ನೀನು ಹೊಸದಾಗಿ ಹುಟ್ಟಿದ್ದೀಯೋ, ಇಲ್ಲವೋ ಎನ್ನುವದರ ಪರೀಕ್ಷೆ ಇದೇ ಆಗಿದೆ. ಹೊಸದಾಗಿ ಹುಟ್ಟಿದವನ ಲಕ್ಷಣ ಪಾಪ ಮಾಡುವದು ಅಥವಾ ಮಾಡದಿರುವದು ಅಲ್ಲ, ಬದಲಿಗೆ, ಪಾಪ ಮಾಡಲು ನೀನು ಆಸೆ ಪಡುತ್ತೀಯೋ ಅಥವಾ ಇಲ್ಲವೋ ಎನ್ನುವದೇ ಆಗಿರುತ್ತದೆ. ನೀನು ಇನ್ನೂ ಪಾಪ ಮಾಡಲು ಆಶೆಪಡುತ್ತಿದ್ದಲ್ಲಿ, ನೀನು ಪರಿವರ್ತನೆ ಹೊಂದಿಲ್ಲವೆಂದು ನಾನು ಹೇಳಬಲ್ಲೆನು.

ನೀರಿನ ದೀಕ್ಷಾಸ್ನಾನಕ್ಕಾಗಿ ಬರುವವರಲ್ಲಿ ನಾನು, "ನೀನು ಇನ್ನು ಮೇಲೆ ಪಾಪ ಮಾಡಲು ಬಯಸುತ್ತೀಯೋ - ಬರೀ ಒಂದು ಸಾರಿಯೇ ಆದರೂ?" ಒಂದು ಪ್ರಶ್ನೆ ಕೇಳುತ್ತೇನೆ. ಅವರನ್ನು ನಾನು, "ನೀನು ಪಾಪ ಮಾಡುವೆಯಾ?" ಎಂದು ಪ್ರಶ್ನಿಸುವದಿಲ್ಲ, ಏಕೆಂದರೆ ಯಾರೂ ಪಾಪ ಮಾಡೆನೆಂದು ಹೇಳಲು ಆಗದು. ಹಳೆಯ ಮನುಷ್ಯನ ಲಕ್ಷಣವು, ಮಾಡಲು ಬಯಸುತ್ತೇನೆ’ ಎನ್ನುವದಾಗಿರುತ್ತದೆ.

ಹೊಸ ಒಡಂಬಡಿಕೆಯು ಎರಡು ಮರಣಗಳ ಬಗ್ಗೆ ಹೇಳುತ್ತದೆ. ಇವೆರಡನ್ನೂ ಇಸ್ರಾಯೇಲಿನ ಇತಿಹಾಸದಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ. ಫರೋಹನ ಸೇನೆಯು ಕೆಂಪುಸಮುದ್ರದಲ್ಲಿ ಕ್ಷಣಮಾತ್ರದಲ್ಲಿ ಸಮಾಧಿಯಾಯಿತು. ಅದು ಹಳೆಯ ಮನುಷ್ಯನ ಚಿತ್ರಣ. ಅದನ್ನು ಮಾಡಿದವರು ಯಾರು? ದೇವರು. ದೇವರು ಹಳೆಯ ಮನುಷ್ಯನನ್ನು ಶಿಲುಬೆಯ ಮೇಲೆ ಕ್ರೂಜೀಕರಿಸಿದರು. ಇದರ ನಂತರ ಇಸ್ರಾಯೇಲ್ಯರು ಇನ್ನೊಂದು ಮರಣದ ಸಂಕೇತವಾದ ಯೊರ್ದನನ್ನು ದಾಟಿದರು. ನಮ್ಮ ಶರೀರದ ಮೋಹಗಳ ವಿಷಯದಲ್ಲಿ ನಾವು ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟಿರುವೆವು, ಎಂದು ನಾವು ಒಪ್ಪಿಕೊಳ್ಳುತ್ತೇವೆ. ಕ್ರಿಸ್ತನಿಗೆ ಸೇರಿದವರು ತಮ್ಮ ಶರೀರದ ಮೋಹಗಳ ವಿಚಾರದಲ್ಲಿ ಈ ನಿಲುವನ್ನು ಸ್ವೀಕರಿಸುವರು. ಶರೀರದ ಮೋಹಗಳ ಇನ್ನೂ ಇವೆ ಮತ್ತು ನಾಡನ್ನು ಇನ್ನೂ ದೈತ್ಯರು ಆಳುತ್ತಿದ್ದಾರೆ, ಆದರೆ ಯೆಹೋಶುವ ಮತ್ತು ಇಸ್ರಾಯೇಲ್ಯರು ಅವರನ್ನು ಕ್ರಮಬದ್ಧವಾಗಿ ಕೊಲ್ಲಲು ನಿರ್ಣಯಿಸಿದ್ದರು. ನಾವು ಶೋಧಿಸಲ್ಪಟ್ಟಾಗ ನಮ್ಮ ಶರೀರದ ಮೋಹಗಳನ್ನು - ಕ್ರಮಬದ್ಧವಾಗಿ - ಕೊಲ್ಲಬೇಕಾಗಿರುವದು ನಾವೇ. ನಮ್ಮ ದುರಾಭ್ಯಾಸಗಳನ್ನು, ಪವಿತ್ರಾತ್ಮನು ನೀಡುವ ಬಲದ ಮೂಲಕ ನಾವೇ ಸ್ವತಃ ನಾಶ ಮಾಡಬೇಕು (ರೋಮಾ. 8: 13). ಐಗುಪ್ತ ಸೇನೆಯು ಒಂದೇ ಕ್ಷಣದಲ್ಲಿ ದೇವರಿಂದ ಹೂಳಲ್ಪಟ್ಟದ್ದಕ್ಕೆ ಇದು ಬಹಳ ಭಿನ್ನವಾದುದ್ದಾಗಿದೆ.

ಸತ್ಯವೇದವು ಉತ್ಸಾಹದಾಯಕವಾದ ಒಂದು ಪುಸ್ತಕ. ಹಳೆಯ ಒಡಂಬಡಿಕೆಯಲ್ಲಿ ಬರುವ ಹೊಸ ಒಡಂಬಡಿಕೆಯ ಜೀವನ ನಮೂನೆಯು ಕಿಂಚಿತ್ತೂ ತಪ್ಪಿಲ್ಲದ್ದೂ,

ಹೊಸ ಒಡಂಬಡಿಕೆಯ ವಚನ ಪ್ರಯೋಗದ ವಿಚಾರದಲ್ಲಿ ಸತ್ಯವೇದವು ಬಹಳ ನಿಖರವಾಗಿದೆ. ಪವಿತ್ರಾತ್ಮನಿಗೆ ನಾವು ನಮ್ಮನ್ನು ತೆರೆದು ತೋರಿದರೆ, ಈ ಗುಪ್ತವಾದ ವಿಷಯಗಳನ್ನು ಅವರು ನಮಗೆ ಪ್ರಕಟಿಸುತ್ತಾರೆ. ಸತ್ಯವೇದವು ಉತ್ಸಾಹದಾಯಕವಾದ ಒಂದು ಪುಸ್ತಕ. ಹಳೆಯ ಒಡಂಬಡಿಕೆಯಲ್ಲಿ ಬರುವ ಹೊಸ ಒಡಂಬಡಿಕೆಯ ಜೀವನ ನಮೂನೆಯು ಕಿಂಚಿತ್ತೂ ತಪ್ಪಿಲ್ಲದ್ದೂ, ಅತಿ ನಿಖರವಾದುದೂ ಆಗಿದೆ. ಇವೆಲ್ಲವೂ ಅಂದು ಹಳೆಯ ಒಡಂಬಡಿಕೆಯ ದೇವಜನರಿಗೆ ಅರಿವಾಗಲಿಲ್ಲ, ಆದರೆ ಇಂದು ಆ ಘಟನೆಗಳು ಸೂಚಿಸುವದನ್ನು ಅರಿತುಕೊಳ್ಳಲು ನಮಗೆ ಸಾಧ್ಯವಿದೆ.

ಕಾನಾನ್ ದೇಶವು, ಹಲವಾರು ವರ್ಷಗಳಿಂದ ವಿವಿಧ ಶರೀರದ ಮೋಹಗಳು, ದೈತ್ಯರ ಆಳ್ವಿಕೆಗೆ ಒಳಗಾಗಿರುವ ನಮ್ಮ ದೇಹವನ್ನು ಸೂಚಿಸುತ್ತದೆ. ಆದರೆ ನಾವು ಆ ದೈತ್ಯರ ವಿಚಾರದಲ್ಲಿ, "ಇನ್ನು ಮೇಲೆ ಪಾಪದ ಪಾಲಿಗೆ ನಾನು ಸತ್ತಿರುವೆನೆಂದು ಪರಿಗಣಿಸುವೆನು," ಎನ್ನುವ ನಿಲುವನ್ನು ಸ್ವೀಕರಿಸಿದ್ದೇವೆ. ನಾವು ಶಿಲುಬೆಯನ್ನು ಪ್ರತಿ ದಿನ ಹೊರಬೇಕೆಂದು ಯೇಸುವು ಹೇಳಿದರು. ಅದರ ಅರ್ಥ ಹಳೆಯ ಮನುಷ್ಯನನ್ನು ಕೊಳ್ಳುವದು ಎಂದಲ್ಲ. ಹಳೆಯ ಮನುಷ್ಯನು ಈಗಾಗಲೇ ಶಿಲುಬೆಗೆ ಹಾಕಲ್ಪಟ್ಟಿರುವನು. ಶಿಲುಬೆಯನ್ನು ಹೊತ್ತುಕೊಳ್ಳುವದು ಎಂದರೆ, ದಿನಾಲೂ ಆತ್ಮನ ಬಲದಿಂದ ನಮ್ಮ ಶರೀರಭಾವವನ್ನು (ಸತ್ಯವೇದವು ಅದನ್ನು ನಮ್ಮ "ಮಾಂಸಭಾವ"ವೆಂದು ಕರೆಯುತ್ತದೆ) ಸಾಯಿಸುವದು.

ನಿನ್ನ ಜೀವಿತದ ಪಾಪದ ವಿಷಯದಲ್ಲಿ ನಿನ್ನ ಮನೋಭಾವವು ಸಡಿಲವಾಗಿದ್ದರೆ, ನೀನು ಇನ್ನೊಮ್ಮೆ ಪೂರ್ವಸ್ವಭಾವವನ್ನು ಪಡೆಯಲು ಸಾಧ್ಯವಿದೆ (ಎಫೆಸ. 4: 22). "ಶರೀರ ಭಾವದಲ್ಲೇ ಜೀವಿಸುತ್ತಾ ಸಾಗುವ" ವ್ಯಕ್ತಿಯು ಆತ್ಮಿಕ ಮರಣವನ್ನು ಹೊಂದುವನು - ಹಿಂದೊಮ್ಮೆ ತಾನು ಜೀವಮಾರ್ಗದಲ್ಲಿ ನಡೆದಿದ್ದರೂ ಸಹ (ರೋಮಾ. 8: 13 - ಈ ವಚನವನ್ನು ವಿಶ್ವಾಸಿಗಳಿಗೆ ಬರೆಯಲಾಗಿದೆ ಎನ್ನುವದರಲ್ಲಿ ಯಾವ ಸಂದೇಹವೂ ಇಲ್ಲ).