ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಆತ್ಮಭರಿತ ಜೀವಿತ
WFTW Body: 

"ಸುಳ್ಳು ಕೃಪೆ"ಯು 21ನೇ ಶತಮಾನದ ಒಂದು ವಿಶೇಷವಲ್ಲ. ಅಪೊಸ್ತಲರ ದಿನಗಳಲ್ಲಿಯೂ ಇದು ಬೋಧಿಸಲ್ಪಡುತ್ತಿತ್ತು.

ಯೂದನ ಮಾತುಗಳಲ್ಲಿ, "ಭಕ್ತಿಹೀನರಾದ ಕೆಲವು ಜನರು ಕಳ್ಳತನದಿಂದ ಸಭೆಗಳಲ್ಲಿ ಹೊಕ್ಕಿ, ದೇವರ ಕೃಪೆಯನ್ನು ನೆವ ಮಾಡಿಕೊಂಡು, ತಮ್ಮ ನಾಚಿಗೆಗೆಟ್ಟ ಕೃತ್ಯಗಳನ್ನು ನಡಿಸುತ್ತಿರುವದು" ಅಷ್ಟೇ ಅಲ್ಲದೆ, ಅವರು ಬೋಧಿಸುವದು ಏನೆಂದರೆ, "ನಾವು ಕ್ರೈಸ್ತರಾದ ಮೇಲೆ ದೇವರ ದಂಡನೆಯ ಭಯವಿಲ್ಲದೆ ನಮ್ಮ ಇಷ್ಟದಂತೆ ಏನು ಬೇಕಾದರೂ ಮಾಡಬಹುದು," ಎಂದು (ಯೂದ 4 - Today's English Version ಹಾಗೂ Living Bible ಭಾಷಾಂತರಗಳು).

ಈ ಕಾರಣದಿಂದಾಗಿ, ಪವಿತ್ರಾತ್ಮನಿಂದ ಪ್ರೇರಿತನಾದ ಪೇತ್ರನು ದೇವರ ನಿಜವಾದ ಕೃಪೆಯನ್ನು ವಿವರಿಸಲು ಒಂದು ಸಂಪೂರ್ಣ ಪತ್ರಿಕೆಯನ್ನು ಬರೆದನು (1 ಪೇತ್ರ). ಆ ಪತ್ರಿಕೆಯ ಕೊನೆಯ ಭಾಗದಲ್ಲಿ ಆತನು ಹೀಗೆನ್ನುತ್ತಾನೆ, "ನಿಮ್ಮನ್ನು ಎಚ್ಚರಿಸುವುದಕ್ಕೂ, ಇದೇ ದೇವರ ನಿಜವಾದ ಕೃಪೆ ಎಂದು ಸಾಕ್ಷಿ ಹೇಳುವುದಕ್ಕೂ, ನಾನು ಸಂಕ್ಷೇಪವಾಗಿ ಬರೆದಿದ್ದೇನೆ. ಈ ನಿಜವಾದ ಕೃಪೆಯಲ್ಲಿ ನಿಲ್ಲಿರಿ" (1 ಪೇತ್ರ 5:12).

ಹಾಗಾಗಿ, ನಾವು ಪೇತ್ರನ ಮೊದಲ ಪತ್ರಿಕೆಯನ್ನು ಅಭ್ಯಸಿಸುವುದಾದರೆ, ನಿಜವಾದ ಕೃಪೆ ಎಂದರೆ ಏನೆಂದು ಅರ್ಥ ಮಾಡಿಕೊಳ್ಳುತ್ತೇವೆ.

ನೀವು ನಿಮ್ಮನ್ನು ಪರೀಕ್ಷಿಸಿಕೊಂಡು, ದೇವರ ನಿಜವಾದ ಕೃಪೆಯು ನಿಮ್ಮಲ್ಲಿ ಇದೆಯೇ ಎಂದು ನೋಡಿಕೊಳ್ಳಿರಿ:

ಪವಿತ್ರಾತ್ಮನು ತಿಳಿಸುವಂತೆ, ದೇವರ ನಿಜವಾದ ಕೃಪೆಯು:
- ನೀವು ದೇವರ ವಾಕ್ಯಕ್ಕೆ ವಿಧೇಯರಾಗಿ ಜೀವಿಸುವಂತೆ ಮಾಡುತ್ತದೆ - ಮತ್ತು ನೀವು ಪರಿವರ್ತನೆ ಹೊಂದುವದಕ್ಕೆ ಮೊದಲು ನಿಮ್ಮನ್ನು ಆಳುತ್ತಿದ್ದ ಕೆಟ್ಟ ದುರಾಶೆಗಳ ಪ್ರಕಾರ ನಡೆಯುವದಿಲ್ಲ (1 ಪೇತ್ರ 1:14).
- ದೇವರು ಪರಿಶುದ್ಧನಾಗಿರುವ ಪ್ರಕಾರ ನೀವು ಕೂಡ ಪರಿಶುದ್ಧರಾಗಲು ಬಯಸುವ ಹಾಗೆ ಮಾಡಿ, ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಮತ್ತು ನೀವು ಜೀವಿಸುವ ರೀತಿಯಲ್ಲಿ ನೀವು ಪರಿಶುದ್ಧರಾಗಿ ನಡೆಯುವಂತೆ ಮಾಡುತ್ತದೆ (1ಪೇತ್ರ1:15).
- ನೀವು ಈ ಲೋಕದ ಎಲ್ಲಾ ಬೆಳ್ಳಿ ಬಂಗಾರಕ್ಕಿಂತ ಕ್ರಿಸ್ತನ ರಕ್ತವನ್ನು ಅಮೂಲ್ಯವೆಂದು ಎಣಿಸುವಂತೆ ಮಾಡುತ್ತದೆ ಮತ್ತು ಇದರಿಂದಾಗಿ ಪಾಪವನ್ನು ನೀವು ಎಂದಿಗೂ ಹಗುರವಾಗಿ ತೆಗೆದುಕೊಳ್ಳುವುದಿಲ್ಲ (ಪಾಪಕ್ಕಾಗಿ ಕ್ರಿಸ್ತನು ತನ್ನ ರಕ್ತವನ್ನು ಸುರಿಸಿದ್ದಾನೆ) (1ಪೇತ್ರ 1:18, 19).
- ನೀವು ಇತರರನ್ನು ಶುದ್ಧ ಹೃದಯದಿಂದ ಯಥಾರ್ಥವಾಗಿಯೂ, ಹೃದಯಪೂರ್ವಕವಾಗಿಯೂ ಪ್ರೀತಿಸುವಂತೆ ನಿಮ್ಮನ್ನು ಬಲಪಡಿಸುತ್ತದೆ (1ಪೇತ್ರ 1:22).

- ನೀವು ಎಲ್ಲಾ ಕೆಟ್ಟತನವನ್ನೂ, ಎಲ್ಲಾ ವಂಚನೆಯನ್ನೂ, ಕಪಟವನ್ನೂ, ಹೊಟ್ಟೆಕಿಚ್ಚನ್ನೂ, ಎಲ್ಲಾ ತರದ ನಿಂದೆಯನ್ನೂ ವಿಸರ್ಜಿಸುವಂತೆ ಮಾಡುತ್ತದೆ (1 ಪೇತ್ರ 2:1).
- ಹಸುಮಕ್ಕಳು ಹಾಲಿಗಾಗಿ ಅಳುವಂತೆ, ನೀವು ದೇವರ ವಾಕ್ಯವನ್ನು ಬಯಸುವಂತೆ ಮಾಡುತ್ತದೆ (1ಪೇತ್ರ 2:2).
- ದೇವರ ಕುಟುಂಬದಲ್ಲಿ ಇತರರೊಂದಿಗೆ ಸೇರಿ, ನೀವು ದೇವರ ಆತ್ಮಿಕ ಮನೆಯಾಗಿ ಕಟ್ಟಲ್ಪಡುವಂತೆ ಮಾಡುತ್ತದೆ ಮತ್ತು ಇತರರಿಂದ ದೂರ ಸರಿಯುವ ಕ್ರೈಸ್ತತ್ವದಿಂದ ನಿಮ್ಮನ್ನು ಬಿಡುಗಡೆಗೊಳಿಸುತ್ತದೆ(1 ಪೇತ್ರ 2:5).
- ಕರ್ತನ ನಿಮಿತ್ತ ಎಲ್ಲಾ ಲೌಕಿಕ ಅಧಿಕಾರಕ್ಕೆ ಅಧೀನರಾಗುವಂತೆ ಮಾಡುತ್ತದೆ (1ಪೇತ್ರ 2:13).

- ತಿಳಿಯದೆ ಮಾತಾಡುವ ಮೂಢಜನರ ಬಾಯನ್ನು ನೀವು ಒಳ್ಳೇ ನಡತೆಯಿಂದ ಕಟ್ಟುವಂತೆ ಮಾಡುತ್ತದೆ (1 ಪೇತ್ರ 2:15)
- ನೀವು ಎಲ್ಲಾ ಮನುಷ್ಯರನ್ನು ಸನ್ಮಾನಿಸುವಂತೆ ಮಾಡುತ್ತದೆ (1 ಪೇತ್ರ 2:17).
- ನೀವು ಯಾವ ಪಾಪವನ್ನು ಮಾಡದಂಥ ಕ್ರಿಸ್ತನ ಹೆಜ್ಜೇಜಾಡಿನಲ್ಲಿ ನಡೆಯುವಂತೆ ಮಾಡುತ್ತದೆ. ಆತನು ಯಾವ ಪಾಪವನ್ನೂ ಮಾಡಲಿಲ್ಲ (1ಪೇತ್ರ :21, 22).
- ನೀವು ಕ್ರಿಸ್ತನ ಮಾದರಿಯನ್ನು ಹಿಂಬಾಲಿಸುವಂತೆ ಮಾಡುತ್ತದೆ, ಆತನು ಬೈಯುವವರನ್ನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನು ಅನುಭವಿಸಿದಾಗ ಯಾರನ್ನು ಬೆದರಿಸದೆ, ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು (1 ಪೇತ್ರ 2:23).

- ಸ್ತ್ರೀಯರಾಗಿರುವ ನೀವು, ನಿಮ್ಮ ಗಂಡಂದಿರಿಗೆ ಸಾತ್ವಿಕವಾದ ಶಾಂತ ಮನಸ್ಸಿನಿಂದ ಅಧೀನರಾಗುವಂತೆ ಸಹಾಯ ಒದಗಿಸುತ್ತದೆ (1ಪೇತ್ರ 3:1-5).
- ಪುರುಷರಾಗಿರುವ ನೀವು, ನಿಮ್ಮ ಪತ್ನಿಯರು ಬಲಹೀನರೆಂದು ಯಾವಾಗಲೂ ನೆನಪಿರಿಸಿಕೊಂಡು, ಅವರು ನಿಮ್ಮೊಂದಿಗೆ ಜೀವವರಕ್ಕೆ ಬಾಧ್ಯರಾಗಿದ್ದಾರೆಂದು ತಿಳಿದು, ಅವರಿಗೆ ಮಾನವನ್ನು ಸಲ್ಲಿಸುವಂತೆ ಸಹಾಯ ಒದಗಿಸುತ್ತದೆ (1 ಪೇತ್ರ 3:7).
- ನೀವು ಅಪಕಾರಕ್ಕೆ ಅಪಕಾರವನ್ನು, ನಿಂದೆಗೆ ನಿಂದೆಯನ್ನು ಮಾಡದೇ, ಇದರ ಬದಲಾಗಿ ಇತರರನ್ನು ಅಶೀರ್ವದಿಸಲು ಸಹಾಯ ಮಾಡುತ್ತದೆ (1ಪೇತ್ರ 3:9).
- ನಿಮ್ಮ ನಾಲಿಗೆ ಕೆಟ್ಟದ್ದನ್ನು ನುಡಿಯದಂತೆ ಮತ್ತು ಸುಳ್ಳು ಹೇಳದಂತೆ ತುಟಿಗಳನ್ನು ಬಿಗಿಹಿಡಿಯುತ್ತದೆ (1 ಪೇತ್ರ 3:10).

- ನೀವು ಎಲ್ಲರ ಸಂಗಡ, ಯಾವಾಗಲೂ ಸಮಾಧಾನವನ್ನು ಹುಡುಕುವಂತೆ ಮಾಡುತ್ತದೆ (1 ಪೇತ್ರ 3:11).
- ಯೇಸುವು ಮಾಡಿದ ಹಾಗೆ ("ಶರೀರದಲ್ಲಿ ಬಾಧೆಪಡುವದು"), ನೀವು ನಿಮ್ಮ ಸ್ವಾರ್ಥ ಸ್ವಭಾವಕ್ಕೆ ಸಾಯುವಂತೆ ಮಾಡುತ್ತದೆ. ಇದರಿಂದಾಗಿ ನೀವು ಪಾಪ ಮಾಡುವದನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಮಾಡುತ್ತದೆ (1 ಪೇತ್ರ 4:1).
- ನೀವು ನಿಮ್ಮ ಜೀವಿತದ ಮಿಕ್ಕ ದಿನಗಳನ್ನು ದೇವರ ಚಿತ್ತದ ಪ್ರಕಾರ ಬದುಕಲು ಹಾತೊರೆಯುವಂತೆ ಮಾಡುತ್ತದೆ (1 ಪೇತ್ರ 4:2).
- ನೀವು ದೈವಿಕ ಪ್ರೀತಿಯಿಂದ ಇತರರ ಪಾಪಗಳನ್ನು ಮುಚ್ಚುವಂತೆ ಮಾಡುತ್ತದೆ (1ಪೇತ್ರ 4:8).

- ನೀವು ಕ್ರಿಸ್ತನ ನಿಮಿತ್ತ ಉಂಟಾಗುವ ಬಾಧೆಗಳಲ್ಲಿ ಸಂತೋಷಿಸುವಂತೆ ಮಾಡುತ್ತದೆ (1 ಪೇತ್ರ 4:13).
- ನೀವು ಮತ್ತೊಬ್ಬರ ವಿಷಯದಲ್ಲಿ ತಲೆ ಹಾಕದಂತೆ ನಿಮ್ಮನ್ನು ಕಾಪಾಡುತ್ತದೆ (1 ಪೇತ್ರ 4:15).
- ನೀವು ಮತ್ತೊಬ್ಬರನ್ನು ತೀರ್ಪು ಮಾಡದೇ, ನಿಮ್ಮನ್ನೇ ತೀರ್ಪು ಮಾಡಿಕೊಳ್ಳುವಂತೆ ಮಾಡುತ್ತದೆ (1 ಪೇತ್ರ 4:17).
- ಸಭಾ ಹಿರಿಯರು, ಸಂಬಳವನ್ನು ತೆಗೆದುಕೊಳ್ಳದೆ, ದೇವಜನರನ್ನು ದೀನಭಾವದಿಂದ ಸೇವೆ ಮಾಡುವಂತೆ ಮಾಡುತ್ತದೆ (1ಪೇತ್ರ 5:1-3).

- ನೀವು ಎಲ್ಲಾ ಸಮಯದಲ್ಲಿ ನಿಮ್ಮನ್ನು ತಗ್ಗಿಸಿಕೊಳ್ಳುವಂತೆ ಮಾಡುತ್ತದೆ (1ಪೇತ್ರ 5:5,6).
- ನಿಮ್ಮನ್ನು ಲೋಕದ ಎಲ್ಲಾ ಆತಂಕ ಮತ್ತು ಚಿಂತೆಗಳಿಂದ ಬಿಡುಗಡೆ ಮಾಡುತ್ತದೆ (1 ಪೇತ್ರ 5:7).
- ನೀವು ಸ್ವಸ್ಥಚಿತ್ತರಾಗಿದ್ದು, ಎಚ್ಚರವಾಗಿದ್ದು, ನಂಬಿಕೆಯಲ್ಲಿ ಧೃಢವಾಗಿದ್ದು, ಸೈತಾನನ್ನು ಎಲ್ಲಾ ಸಮಯದಲ್ಲಿ ಎದುರಿಸುವಂತೆ ಮಾಡುತ್ತದೆ (1 ಪೇತ್ರ 5:8,9).

ಪವಿತ್ರಾತ್ಮನು ತೋರಿಸಿರುವಂತೆ, "ದೇವರ ನಿಜವಾದ ಕೃಪೆಯು" ವಿಶ್ವಾಸಿಗಳಲ್ಲಿ ಇವೆಲ್ಲಾ ಗುಣಗಳನ್ನು ಉಂಟುಮಾಡುತ್ತದೆ; ಯಾವಾಗಲೂ "ಈ ನಿಜವಾದ ಕೃಪೆಯಲ್ಲಿ ನಿಲ್ಲುವಂತೆ" ಪವಿತ್ರಾತ್ಮನು ದೇವರ ಮಕ್ಕಳನ್ನು ಉತ್ತೇಜಿಸುತ್ತಾನೆ (1 ಪೇತ್ರ 5:12).

ಕ್ರಿಸ್ತನು ತನ್ನ ಮರಣ ಮತ್ತು ಪುನರುತ್ಥಾನದ ಮೂಲಕ, ನಮಗಾಗಿ ಕೊಂಡುಕೊಂಡ ನಮ್ಮ ಸ್ವಾಸ್ಥ್ಯವಾದ ದೇವರ ನಿಜವಾದ ಕೃಪೆ ಇದಾಗಿದೆ. ಹಾಗಾಗಿ ಸುಳ್ಳು ಕೃಪೆಯ ಸಂದೇಶಗಳಿಗೆ ಕಿವಿಗೊಟ್ಟು, ಈ ಬಾಧ್ಯತೆಯನ್ನು ಕಳಕೊಳ್ಳಬೇಡಿರಿ. ಈ ಸುಳ್ಳು ಕೃಪೆಯು ಇಂದು ಬಾಬೆಲಿನ ಕ್ರೈಸ್ತತ್ವದ ಪ್ರಮುಖ ಬೋಧನೆಯಾಗಿದೆ.

ಮೇಲೆ ವಿವರಿಸಿದ ಅಂಶಗಳನ್ನು ಹೊರತುಪಡಿಸಿ, ಮಿಕ್ಕವುಗಳೆಲ್ಲಾ ಸುಳ್ಳು ಕೃಪೆಗೆ ಸೇರಿದವುಗಳು - ಅವನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು.

"ನೀವೆಲ್ಲರೂ ದೀನ ಮನಸ್ಸೆಂಬ ವಸ್ತ್ರದಿಂದ ಸೊಂಟಾಕಟ್ಟಿಕೊಂಡು ಒಬ್ಬರಿಗೊಬ್ಬರು ಸೇವೆ ಮಾಡಿರಿ. ದೇವರು ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ" (1ಪೇತ್ರ 5:5).

ನೀವು ಕರ್ತನ ನಿಜವಾದ ಕೃಪೆಯನ್ನು ನೋಡಿ ಅದನ್ನು ಸ್ವೀಕರಿಸುವಂತೆ, ನಿಮ್ಮ ಹೃದಯದ ಕಣ್ಣುಗಳನ್ನು ಆತನು ತೆರೆಯಲಿ. ಆಮೆನ್.