ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಪುರುಷರಿಗೆ
WFTW Body: 

"ನೀನು ಅವನಿಗೂ, ಅವನ ಮನೆಗೂ, ಅವನ ಎಲ್ಲಾ ಸ್ವಾಸ್ತ್ಯಕ್ಕೂ ಸುತ್ತು ಮುತ್ತಲು ಬೇಲಿಯನ್ನು ಹಾಕಿದ್ದೀಯಲ್ಲಾ," ಎಂದು ಸೈತಾನನು ದೇವರನ್ನು ಕೇಳಿದನು (ಯೋಬ. 1:10). ಸೈತಾನನ ಈ ಮಾತಿನಿಂದ ನಾವು ಮೂರು ಶ್ರೇಷ್ಠ ಸತ್ಯಾಂಶಗಳನ್ನು ಕಲಿಯುತ್ತೇವೆ.ದೈವಿಕ ಮನುಷ್ಯನ ಸುತ್ತಲು ದೇವರು ಮೂರು ಆವರಣದ ಬೇಲಿಯನ್ನು ಹಾಕಿದ್ದಾರೆ: ಮೊದಲನೆಯದು ವೈಯಕ್ತಿಕವಾಗಿ ಅವನ ಸುತ್ತಲು, ಎರಡನೆಯದು ಆತನ ಕುಟುಂಬದ ಸುತ್ತಲು, ಮತ್ತು ಮೂರನೆಯದು ಆತನ ಸಂಪತ್ತು ಹಾಗೂ ಆಸ್ತಿಯ ಸುತ್ತಲು. ಈ ವಿಷಯ, ಆತ್ಮಿಕ ಕ್ಷೇತ್ರದ ತಿಳುವಳಿಕೆಯನ್ನು ಹೊಂದಿರುವ ಸೈತಾನನಿಗೆ ತಿಳಿದಿದೆ. ನಾವು ಈ ಬೇಲಿಗಳನ್ನು ಕಾಣಲಾರೆವು, ಆದರೆ ಅವುಗಳು ಅಲ್ಲಿ ಇದ್ದವು.

ಯೋಬನಿಗಾಗಲೀ, ಆತನ ಕುಟುಂಬಕ್ಕಾಗಲೀ ಅಥವಾ ಆತನ ಆಸ್ತಿಗಾಗಲೀ ಹಾನಿಮಾಡುವದು ತನಗೆ ಅಸಾಧ್ಯವೆಂದು ಸ್ವತಃ ಆತ್ಮಿಕ ಜೀವಿಯಾಗಿರುವ ಸೈತಾನನಿಗೆ ತಿಳಿದಿತ್ತು. ದೈವಿಕ ಜೀವಿತವನ್ನು ನಾನು ಬಾಳುವುದಾದರೆ, ನನ್ನ ಸುತ್ತಲು ಸಹ ಮೂರು ಸುತ್ತಿನ ಬೇಲಿ ಇದೆ, ಎನ್ನುವದು ನನ್ನನ್ನು ಬಹಳ ಸಂತೈಸುತ್ತದೆ. ಅದಲ್ಲದೆ, ದೇವರ ಒಪ್ಪಿಗೆಯಿಲ್ಲದೆ ಯಾವುದೇ ಒಂದು ಬೇಲಿಯನ್ನೂ ಸಹ ಭೇದಿಸಲು ಸಾಧ್ಯವಿಲ್ಲ. ನಾವು ಯೋಬನ ಗ್ರಂಥದಲ್ಲಿ, ಆ ಬೇಲಿಗಳ ಒಳಗೆ ನುಗ್ಗಲು ಅನುಮತಿಗಾಗಿ ಸೈತಾನನು ದೇವರನ್ನು ಕೇಳಬೇಕಿದ್ದನ್ನು ಕಾಣುತ್ತೇವೆ. ಇದರ ಹಾಗೆಯೇ, ಅನೇಕ ವರ್ಷಗಳ ನಂತರ ಕರ್ತನಾದ ಯೇಸುವು ಪೇತ್ರನಿಗೆ, "ಸೈತಾನನು ನಿನ್ನನ್ನು ಗೋದಿಯಂತೆ ಒನೆಯಬೇಕೆಂದು ಅಪ್ಪಣೆ ಕೇಳಿಕೊಂಡನು," (ಲೂಕ 22:31) ಎಂದು ತಿಳಿಸಿದರು.

ದೇವರು ಸೈತಾನನಿಗೆ ಒಂದೊಂದೇ ಬೇಲಿಯನ್ನು ಪ್ರವೇಶಿಸಲು ಅಪ್ಪಣೆ ನೀಡಿದರು. ಅವರು ಎಲ್ಲಾ ಬೇಲಿಗಳನ್ನು ಒಮ್ಮೆಗೇ ತೆರೆಯಲಿಲ್ಲ. ಮೊದಲು ದೇವರು ಯೋಬನ ಸೊತ್ತನ್ನು ಮತ್ತು ಅವನ ಕುಟುಂಬವನ್ನು ದಾಳಿಮಾಡಲು ಸೈತಾನನಿಗೆ ಅನುಮತಿಯನ್ನು ನೀಡಿದರು. ಇದಾದ ಮೇಲೆ, ಯೋಬನ ದೇಹವನ್ನು ಆಕ್ರಮಿಸಲು ಸೈತಾನನಿಗೆ ದೇವರು ಅಪ್ಪಣೆ ನೀಡಿದರು, ಆದರೆ ಆಗಲೂ ಆತನ ಪ್ರಾಣವನ್ನು ಹಾನಿಗೊಳಿಸಲು ಅವಕಾಶವನ್ನು ಸೈತಾನನಿಗೆ ನೀಡಲಿಲ್ಲ. ಹೀಗಾಗಿ ಸೈತಾನನು ಯೋಬನನ್ನು ಕೊಲ್ಲಲು ಸಾಧ್ಯವಿದ್ದಿಲ್ಲ. ಯೋಬನನ್ನು ಕೊಲ್ಲುವದು ಸೈತಾನನಿಗೆ ಇಷ್ಟವಾಗಿದ್ದಾಗ್ಯೂ, ಅದು ಅವನಿಗೆ ಅಸಾಧ್ಯವಾಗಿತ್ತು. ಅಂಗಾಲಿನಿಂದ ನೆತ್ತಿಯ ವರೆಗೆ ಕುರುಗಳನ್ನು ಹುಟ್ಟಿಸಿ ಆತನನ್ನು ಬಾಧಿಸಲು ಮಾತ್ರ ಅವನಿಗೆ ಸಾಧ್ಯವಾಯಿತು.

ಮೊದಲನೆಯ ಬೇಲಿಯು ತೆರೆಯಲ್ಪಟ್ಟಾಗ, ಸೈತಾನನು ಒಳಹೊಕ್ಕಿ ಯೋಬನ ಎಲ್ಲಾ ಸೊತ್ತನ್ನು ನಾಶಗೊಳಿಸಿದನು. ಕೋಟ್ಯಾಧೀಶನಾಗಿದ್ದ ಯೋಬನು 24 ತಾಸುಗಳಲ್ಲಿ ಭಿಕಾರಿಯಂತಾದನು!

ಇದರ ನಂತರೆ ಎರಡನೆಯ ಬೇಲಿಯನ್ನು ತೆರೆಯಲಾಯಿತು. ಆ ಆವರಣದೊಳಗೆ ಯೋಬನ ಪತ್ನಿ ಮತ್ತು ಮಕ್ಕಳಿದ್ದರು. ಹಾಗಾಗಿ ಸೈತಾನನು ಅಲ್ಲಿ ಯೋಬನ ಎಲ್ಲಾ 10 ಮಕ್ಕಳನ್ನು ಕೊಂದನು. ಯೋಬನ ಪತ್ನಿಯನ್ನೂ ಸಹ ಅವನು ಕೊಲ್ಲಬಹುದಾಗಿತ್ತು. ಅವನು ಹಾಗೆ ಮಾಡಲಿಲ್ಲ, ಏಕೆಂದರೆ ಆಕೆಯು ಸಾಯುವುದಕ್ಕಿಂತ ಜೀವಂತವಾಗಿರುವದು ಅವನಿಗೆ ಹೆಚ್ಚು ಉಪಯುಕ್ತವಾಗಿತ್ತು. ಯೋಬನನ್ನು ಪೀಡಿಸಿ ರೇಗಿಸಲು ಆಕೆಯು ಸೈತಾನನಿಗೆ ಉಪಯೋಗಿಯಾಗಿದ್ದಳು. ಕಿರಿಕಿರಿಮಾಡುವ ಪತ್ನಿಯೋರ್ವಳು ನಿಮಗೆ ಕಾಣಸಿಕ್ಕಲ್ಲಿ, ಸೈತಾನನು ಆಕೆಯನ್ನು ಜೀವಂತವಾಗಿ ಇಟ್ಟಿರುವುದರ ಕಾರಣ ನಿಮಗೆ ಈಗ ಅರಿವಾಗಬಹುದು! ಪಿಶಾಚನಿಗೆ ಕೆಲವು ಮಂದಿ ಸತ್ತಿರುವುದಕ್ಕಿಂತ ಜೀವಂತವಿರುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.

ದೇವರ ಪ್ರೇರಿತ ವಾಕ್ಯದ ಮೊತ್ತ ಮೊದಲ ಪುಟಗಳಿಂದ ಸೈತಾನನ ಬಗ್ಗೆಯೂ ನಾವು ತಿಳಿದುಕೊಳ್ಳಬಹುದಾದ ಕೆಲವು ವಿಷಯಗಳು ಇರುವವು.

ಮೊದಲನೆಯದಾಗಿ, ಸೈತಾನನು ಒಂದು ಹೊತ್ತಿನಲ್ಲಿ ಒಂದು ಸ್ಥಳದಲ್ಲಿ ಮಾತ್ರವೇ ಇರಬಲ್ಲನು. ದೇವರು ಎಲ್ಲಾ ಕಡೆಯೂ ಇದ್ದಾರೆ. ಸೃಷ್ಟಿಸಲ್ಪಟ್ಟ ಜೀವಿಯಾಗಿರುವ ಸೈತಾನನು, ತಾನು ಒಂದು ಜಾಗದಲ್ಲಿ ಇದ್ದಾಗ, ಇನ್ನೊಂದೆಡೆ ಇರಲಾರನು. ಹಾಗಾಗ್ಯೂ ಅವನ ಬಳಿ ಇರುವ ಅನೇಕ ಪಿಶಾಚರು ಅವನ ಕಾರ್ಯದ ನಿಮಿತ್ತ ಭೂಮಿಯಲ್ಲೆಲ್ಲಾ ಅಲೆದಾಡುವರು.

ಎರಡನೆಯದಾಗಿ, ಸೈತಾನನಿಗೆ ಭವಿಷ್ಯಕಾಲದ ಬಗ್ಗೆ ತಿಳುವಳಿಕೆ ಇಲ್ಲ. ಭವಿಷ್ಯದ ಜ್ಞಾನ ಅವನಿಗೆ ಮೊದಲೇ ಇದ್ದಿದ್ದರೆ, ಯೋಬನು ಕೊನೆಯಲ್ಲಿ ಮೊದಲಿಗಿಂತಲೂ ಹೆಚ್ಚು ಆಶೀರ್ವದಿಸಲ್ಪಡುವನೆಂದು ತಿಳಿದುಕೊಂಡು, ಯೋಬನಿಂದ ಅವನು ದೂರವಿರುತ್ತಿದ್ದನು. ಕಲ್ವಾರಿ ಶಿಲುಬೆಯ ಮೇಲೆ ಕ್ರಿಸ್ತನು ಮರಣ ಹೊಂದಿದ್ದರ ಪರಿಣಾಮವನ್ನು ಅವನು ಮೊದಲೇ ತಿಳಕೊಂಡಿದ್ದಲ್ಲಿ, ಆ ಶಿಲುಬೆಯ ಮೂಲಕ ತನಗೆ ಉಂಟಾಗುವ ಸೋಲಿನ ಬಗ್ಗೆ ಅರಿವು ಆತನಿಗೆ ಇದ್ದಲ್ಲಿ, ಕ್ರಿಸ್ತನನ್ನು ಶಿಲುಬೆಗೆ ಏರಿಸಲು ಜನರನ್ನು ಅವನು ಪ್ರೇರೇಪಿಸುತ್ತಿದ್ದನೇ? ಖಂಡಿತವಾಗಿಯೂ ಇಲ್ಲ. ಹಾಮಾನನ ಅಂತ್ಯವು ಗಲ್ಲು ಮರದಲ್ಲಿ ನೇತುಹಾಕಲ್ಪಟ್ಟು ಆಗುವದು ಅವನಿಗೆ ತಿಳಿದಿದ್ದಲ್ಲಿ, ಆ ಗಲ್ಲುಮರವನ್ನು ಹಾಮಾನನು ಸಿದ್ಧಮಾಡಲು ಸೈತಾನನು ನೆರವಾಗುತ್ತಿದ್ದನೇನು? ಜಗತ್ತಿನಾದ್ಯಂತ ಜನರು ಏನು ಮಾಡುತ್ತಿದ್ದಾರೆಂದು ಅವನು ತಿಳಿದಿರುವನು, ಮತ್ತು ಅವರ ಕಾರ್ಯದ ಪರಿಣಾಮ ಏನಾಗಬಹುದೆಂದು ಅವನು ಊಹಿಸಬಲ್ಲನು (ಇದನ್ನು ನಾವೂ ಸಹ ಮಾಡಬಹುದು), ಆದರೆ ಆತನು ಭವಿಷ್ಯವನ್ನು ಮೊದಲೇ ನುಡಿಯಲಾರನು.

ಮೂರನೆಯದಾಗಿ, ನಿನ್ನ ಆಲೋಚನೆಗಳನ್ನು ಸೈತಾನನು ತಿಳಿಯಲಾರನು. ನೀನು ಏನು ಮಾಡುತ್ತಿರುವೆಯೆಂದು ಆತನು ಹೊರನೋಟದಲ್ಲಿ ದೃಷ್ಟಿಸ ಬಲ್ಲನು. ಯೋಬನ ಬಗ್ಗೆ ಆತನಿಗಿದ್ದುದು ಹೊರನೋಟದ ಜ್ಞಾನ ಮಾತ್ರವೇ. ಯೋಬನ ಆಲೋಚನೆಗಳು ಅವನಿಗೆ ಅಗೋಚರವಾಗಿದ್ದವು.

ನಾಲ್ಕನೆಯ ವಿಷಯವೆಂದರೆ, ದೇವಜನರ ಮೇಲೆ ಹಲ್ಲೆಮಾಡಲು ಸೈತಾನನಿಗೆ ದೇವರ ಅಪ್ಪಣೆಯು ಬೇಕೇ ಬೇಕು.

ನನಗೆ ಬಹಳ ನೆಮ್ಮದಿ ನೀಡುವ ವಿಷಯವೆಂದರೆ, ನಾನು ಎದುರಿಸಿ ಹೋರಾಡುತ್ತಿರುವ ಶತ್ರುವಿಗೆ ನನ್ನ ಭವಿಷ್ಯದ ಬಗ್ಗೆ ಅಥವಾ ನನ್ನ ಆಲೋಚನೆಗಳ ಬಗ್ಗೆ ಏನೂ ತಿಳಿದಿಲ್ಲ ಮತ್ತು ಅವನು ದೇವರು ಹಾಕಿರುವ ಪರಿಮಿತಿಯ ನಿರ್ಬಂಧಕ್ಕೆ ಒಳಗಾಗಿದ್ದಾನೆ. ಇವೆಲ್ಲಕ್ಕೂ ಹೆಚ್ಚಾಗಿ, ಅವನು ಶಿಲುಬೆಯ ಮೇಲೆ ಸೋತಿರುವನು. ಅದು ನನಗಿರುವ ಸೈತಾನನ ಎಲ್ಲಾ ಭಯವನ್ನು ತೊಲಗಿಸುತ್ತದೆ.

ಎರಡನೆಯ ಬೇಲಿಯ ತಡೆಯು ಸರಿದಾಗ, ಯೋಬನ ತನ್ನ ಎಲ್ಲಾ 10 ಮಕ್ಕಳನ್ನು ಕಳೆದುಕೊಂಡನು. ಒಬ್ಬ ದೈವಿಕ ಮನುಷ್ಯನ ಮಕ್ಕಳು ಕಷ್ಟಪಡುವುದನ್ನು ಅಥವಾ ತೊಂದರೆಗೆ ಒಳಗಾದುದನ್ನು ನೀನು ನೋಡಿದಾಗ, ಆತನನ್ನು ಎಂದಿಗೂ ಟೀಕಿಸದಿರು. ಅವರಿಗಾಗಿ ಪ್ರಾರ್ಥಿಸು. ಆತನ ಮಕ್ಕಳ ಮೇಲೆ ನಿನ್ನ ಮಕ್ಕಳು ಅನುಭವಿಸದೆ ಇರಬಹುದಾದ ಸೈತಾನನ ಲಕ್ಷವು ಇರುವದು - ಏಕೆಂದರೆ ಸೈತಾನನಿಗೆ ನಿನ್ನ ಆತ್ಮಿಕ ಮಟ್ಟ ಆ ದೈವಿಕ ಮನುಷ್ಯನ ಮಟ್ಟಕ್ಕಿಂತ ಕಡಿಮೆಯಾಗಿದೆ ಎಂದು ತಿಳಿದಿರಬಹುದು. ಆ ಕಾರಣಕ್ಕಾಗಿ ಅವನು ನಿನ್ನನ್ನು ಮತ್ತು ನಿನ್ನ ಪರಿವಾರವನ್ನು ಮುಟ್ಟದಿರಬಹುದು!

ಈಗ ಇವೆಲ್ಲವುಗಳ ನಡುವೆ ಯೋಬನ ಪ್ರತಿಕ್ರಿಯೆಯನ್ನು ಗಮನಿಸು. ಎಲ್ಲವೂ ನಾಶವಾದುದು ಆತನಿಗೆ ಗೊತ್ತಾಯಿತು. ಆತನ ಸೇವಕರು ಒಬ್ಬೊಬ್ಬರಾಗಿ ಬಂದು ಎಲ್ಲವೂ ನಿರ್ನಾಮವಾದ್ದನ್ನು ತಿಳಿಸಿದರು. ಆಗ ಯೋಬನು ಎದ್ದು, ಮೇಲಂಗಿಯನ್ನು ಹರಿದು, ತಲೆಬೋಳಿಸಿಕೊಂಡು, ನೆಲದಲ್ಲಿ ಅಡ್ಡಬಿದ್ದು ದೇವರನ್ನು ಆರಾಧಿಸಿದನು (ಯೋಬ. 1:20). ದೇವರ ವಾಕ್ಯದ ಮೊದಲ ಪುಟಗಳಲ್ಲಿ ಇರುವ ಸಂದೇಶವಿದು: ದೈವಿಕ ಮನುಷ್ಯನು ಒಬ್ಬ ಆರಾಧಕನಾಗಿದ್ದಾನೆ. ದೇವರ ವಾಕ್ಯದ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ, ಅಥವಾ ದೇವರ ಸೇವೆಯಲ್ಲಿ ನಿರತನಾಗಿರುವುದಕ್ಕಿಂತ ಹೆಚ್ಚಾಗಿ, ದೇವಮನುಷ್ಯನು ಪ್ರಾಥಮಿಕವಾಗಿ ಒಬ್ಬ ಆರಾಧಕನಾಗಿರುವನು. ನೀನು ಎಲ್ಲವನ್ನೂ ಹೊಂದಿರುವಾಗ ಒಬ್ಬ ಆರಾಧಕನಾಗಿ ಇರಬೇಕು, ಹಾಗೆಯೇ ಎಲ್ಲವನ್ನು ಕಳಕೊಂಡಾಗಲೂ ಒಬ್ಬ ಆರಾಧಕನಾಗಿಯೇ ಇರಬೇಕು. ಯೇಸುವು ಹೇಳಿದಂತೆ, "ದೇವರು ಆತ್ಮ ಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು. ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುತ್ತಾನಲ್ಲವೇ (ಯೋಹಾನನು 4:24,23)? ಎಲ್ಲವನ್ನೂ ಅವರಿಗೆ ಅರ್ಪಿಸುವದನ್ನೇ ದೇವರ ಆರಾಧನೆ ಎನ್ನುವದು.

ಯೋಬನ ಮಾತಿನಂತೆ, "’ಏನೂ ಇಲ್ಲದವನಾಗಿ ತಾಯಿಯ ಗರ್ಭದಿಂದ ಬಂದೆನು; ಏನೂ ಇಲ್ಲದವನಾಗಿಯೇ ಗತಿಸಿ ಹೋಗುವೆನು; ಯೆಹೋವನು ಕೊಟ್ಟನು, ಯೆಹೋವನೇ ತೆಗೆದುಕೊಂಡನು;’ ಇದೆಲ್ಲದರಲ್ಲಿಯೂ ಯೋಬನು ಪಾಪವನ್ನು ಮಾಡಲಿಲ್ಲ" (ಯೋಬ. 1:21,22). ಬಹುಶಃ ತಾನು ಬೆತ್ತಲೆಯಾಗಿ ಭೂಮಿತಾಯಿಯ ಮಡಿಲಿಂದ ಹೊರಬಂದುದನ್ನು ಮತ್ತು ಕೊನೆಯಲ್ಲಿ ಅಲ್ಲಿಗೇ ಬೆತ್ತಲೆಯಾಗಿ ಹಿಂತಿರುಗಲಿರುವದರ ಕುರಿತಾಗಿ ಯೋಬನು ಇಲ್ಲಿ ಪ್ರಸ್ತಾವಿಸಿರಬಹುದು. ತನ್ನ ಜೀವಿತದಲ್ಲಿ ಕರ್ತನು ಚಿತ್ತೈಸಿದ್ದನ್ನು ಅವನು ಮನಃಪೂರ್ವಕವಾಗಿ ಸ್ವೀಕರಿಸಿದನು.

ಯೋಬನು ದೇವರ ಚಿತ್ತಕ್ಕೆ ತನ್ನನ್ನು ಸಮರ್ಪಿಸಿಕೊಂಡುದನ್ನು ಯೋಚಿಸಿದಾಗ ನಾನು ವಿಸ್ಮಯಗೊಳ್ಳುತ್ತೇನೆ. ನಮಗೆ ಇರುವಂತಹ ಯೇಸುವಿನ ಮತ್ತು ಅಪೊಸ್ತಲರ ಮಾದರಿಗಳು ಅವನಿಗಿದ್ದಿಲ್ಲ. ಅನುಕರಣೆ ಮಾಡಬಹುದಾದ ಯಾವುದೇ ಉದಾಹರಣೆಗಳು ಅವನಿಗೆ ಇರಲಿಲ್ಲ. ಅವನಿಗೆ ನಮಗಿರುವಂತೆ ಪವಿತ್ರಾತ್ಮನ ಬಲವು ಸಿಗಲಿಲ್ಲ. ನಮ್ಮ ಕೈಗೆ ಸಿಕ್ಕಿರುವ ಬೈಬಲನ್ನು ಅವನು ಹೊಂದಿರಲಿಲ್ಲ. ಸಹ ವಿಶ್ವಾಸಿಗಳ ಅಥವಾ ತನ್ನ ಸ್ವಂತ ಪತ್ನಿಯ ಪ್ರೋತ್ಸಾಹ, ಬೆಂಬಲಗಳನ್ನು ಅವನು ಕಾಣಲಿಲ್ಲ. ಯೋಬನಿಗೆ ಇದ್ದುದು ದೇವರೊಬ್ಬನೇ - ಮತ್ತು ಅವನಿಗೆ ದೇವರು ಒದಗಿದ್ದು ಬೇಕಾದಷ್ಟಾಯಿತು. ಅಂತಹ ದಿವ್ಯ ಜೀವನವನ್ನು ಯೋಬನು ಹೊಂದಲು ಸಾಧ್ಯವಾದಲ್ಲಿ, ನಮಗೂ ಏಕೆ ಅದು ಸಾಧ್ಯವಾಗದು?