ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಶಿಷ್ಯಂದಿರಿಗೆ
WFTW Body: 

( 1996ರಲ್ಲಿ ಪ್ರಕಟಿಸಲಾದ 'The Full Gospel' ಎಂಬ ಪುಸ್ತಕದಿಂದ ಆಯ್ದ ಭಾಗಗಳು)

ಸತ್ಯವೇದದಲ್ಲಿ ಎರಡು ತದ್ವಿರುದ್ಧವಾದ ಸೇವೆಗಳನ್ನು ನಾವು ನೋಡುತ್ತೇವೆ, ಇದು ನಮ್ಮ ಸಮಯಕ್ಕೆ ನಿಕಟ ಸಂಬಂಧವನ್ನು ಹೊಂದಿದೆ.

ದಾನಿಯೇಲನ ಸೇವೆ

ತನ್ನ ಜೀವಿತದ ಅವಧಿಯಲ್ಲಿ ದಾನಿಯೇಲನು ಅನ್ಯ ಸ್ಥಳದಲ್ಲಿ ದೇವರು ಬಳಸಬಹುದಾದ ಒಬ್ಬ ಮನುಷ್ಯನಾಗಿದ್ದನು. ದಾನಿಯೇಲನು ಯುವಕನಾಗಿದ್ದಾಗ, ಬಾಬೆಲೋನಿನಲ್ಲಿನ ಇತರೆ ಯೆಹೂದ್ಯರೊಟ್ಟಿಗೆ ಸಿಕ್ಕಿಕೊಂಡಾಗ "ತನ್ನನ್ನು ಅಶುದ್ಧ ಮಾಡಿಕೊಳ್ಳಬಾರದೆಂದು ನಿಶ್ಚಯಿಸಿದನು" ( ದಾನಿಯೇಲನು 1:8) .

ಯುವಕನಾದ ದಾನಿಯೇಲನು ದೇವರ ಪರವಾಗಿ ನಿಲ್ಲುವುದನ್ನು ಇತರೆ ಯೆಹೂದ್ಯರೊಟ್ಟಿಗೆ ಸಿಕ್ಕಿಕೊಂಡ ಹನನ್ಯ, ಮೀಶಾಯೇಲ ಮತ್ತು ಅಜರ್ಯರು ನೋಡಿ ತಾವೂ ಸಹ ಕರ್ತನ ಪರ ನಿಲ್ಲುವ ಧೈರ್ಯವನ್ನು ಪಡೆದರು (ದಾನಿಯೇಲನು 1:11). ಇವರುಗಳು ಸಹ ಧೈರ್ಯವಾಗಿರಲು ಮತ್ತು ತಾವು ದೇವರಿಗಾಗಿ ನಿಲ್ಲಲು ಹಾಗೂ ದಾನಿಯೇಲನೊಟ್ಟಿಗೆ ಸೇರಿಕೊಳ್ಳಲು ಈ ಸಂಗತಿಯು ಅವರಿಗೆ ಪ್ರೋತ್ಸಾಹವಾಯಿತು. ಅವರಲ್ಲಿ ತಾವಾಗಿಯೇ ದೇವರಿಗಾಗಿ ಯಾವುದೇ ನಿಲುವನ್ನು ಕೈಗೊಳ್ಳುವ ಧೈರ್ಯ ಇರಲಿಲ್ಲ. ಆದರೆ ದಾನಿಯೇಲನ ದೃಢ ನಿಶ್ಚಯವನ್ನು ನೋಡಿದ ಅವರು ಧೈರ್ಯಶಾಲಿಗಳಾದರು. ಈ ಮೂವರಂತೆ, ತಾವಾಗಿಯೇ ಕರ್ತನಿಗಾಗಿ ಎದ್ದುನಿಲ್ಲುವ ದಿಟ್ಟತನವಿಲ್ಲದ ಅನೇಕ ಜನರು ಇಂದು ಈ ಲೋಕದಲ್ಲಿ ಸಿಗುತ್ತಾರೆ. ದಾನಿಯೇಲನಂತೆ ನಿಲ್ಲುವ ಒಬ್ಬನನ್ನು ಕಂಡುಕೊಳ್ಳಲು ಅವರು ಕಾದಿರುವರು. ಅನಂತರ ಅವರು ಅವನ ಜೊತೆಗೂಡುವರು. ಹಾಗಾಗಿ ದೇವರು ಇಂದು ದಾನಿಯೇಲನಂತಿರುವವರನ್ನು ನೋಡುತ್ತಿದ್ದಾರೆ.

ಅಂತಹ ಒಬ್ಬ ದಾನಿಯೇಲ ನೀನಾಗುವೆಯಾ? ”ಶಿಷ್ಯತ್ವದ ಬಗ್ಗೆ ಇರುವ ದೇವರ ವಾಕ್ಯದ ವಿಷಯವಾಗಿ ನಾನು ರಾಜಿಯಾಗಲಾರೆ” (ಲೂಕ 14:26-33) ಅಥವಾ ”ಪರ್ವತದ ಮೇಲೆ ಮಾಡಿದ ಪ್ರಸಂಗದಲ್ಲಿ ಯೇಸು ತಿಳಿಸಿಕೊಟ್ಟ ವಿಷಯವಾಗಿ ನಾನು ರಾಜಿಯಾಗಲಾರೆ” ಎಂದು ನೀವು ಹೇಳುತ್ತೀರಾ (ಮತ್ತಾಯ 5 ರಿಂದ 7) ಅಥವಾ ”ಹೊಸ ಒಡಂಬಡಿಕೆಯ ವಿಷಯವಾಗಿ”
(ರೋಮ 6:14 ) ಮತ್ತು ”ಕ್ರಿಸ್ತನ ದೇಹದ ವಿಷಯವಾಗಿ ಹಾಗೂ ಇನ್ನೀತರೆ ವಿಷಯವಾಗಿ ನಾನು ರಾಜಿಯಾಗಲಾರೆ” (ಎಫೆಸ 4:11-16) ಎಂದು ನೀವು ಹೇಳುತ್ತೀರಾ ಅಥವಾ ''ಹಿಂಜರಿದಿರುವ ಸಭಾ ಹಿರಿಯ ಅಥವಾ ಪಾಸ್ಟರ್ ಅಥವಾ ಯಾವುದೇ ವಿಶ್ವಾಸಿ” ''ಇಲ್ಲವೇ ಇನ್ಯಾರಾದರೂ ಸರಿ, ಯಾರನ್ನೂ ಮೆಚ್ಚಿಸಲು ನಾನು ಪ್ರಯತ್ನಿಸುವುದಿಲ್ಲ. ನಾನು ಶೇಕಡಾ 100ರಷ್ಟು ದೇವರ ವಾಕ್ಯವು ಹೇಳಿಕೊಟ್ಟಂತೆ ಮಾಡುವೆ," ಎನ್ನಲು ನೀನು ಸಿದ್ಧನಿರುವೆಯಾ?

ಈ ದಿನ ಅಂತಹ ದಾನಿಯೇಲನ ರೀತಿಯ - "ಬಹು ಜನರನ್ನು ಸದ್ಧರ್ಮಿಗಳನ್ನಾಗಿ ಮಾಡುವ" ಪುರುಷರು ಮತ್ತು ಸ್ತ್ರೀಯರ - ಭಾರೀ ಅವಶ್ಯಕತೆ ಇದೆ ( ದಾನಿಯೇಲನು 12:4) . ಆ ವಚನ ಪ್ರಸ್ತಾಪಿಸುವದು ನೀತಿವಂತಿಕೆಯ ಬೋಧಕರ ವಿಚಾರವಲ್ಲ, ಆದರೆ ಇತರರನ್ನು ನೀತಿವಂತಿಕೆಗೆ - ಮಾತು ಹಾಗೂ ಜೀವಿತದ ಮೂಲಕ ನಡೆಸುವವರ ಬಗ್ಗೆ ಈ ವಚನವು ಪ್ರಸ್ತಾಪಿಸುತ್ತದೆ. ಇದು ದಾನಿಯೇಲ-ಸೇವೆಯಾಗಿದೆ.

ಲೂಸಿಫರನ ಸೇವೆ

ದೇವರ ವಾಕ್ಯದಲ್ಲಿ "ದಾನಿಯೇಲ-ಸೇವೆಯ" ತದ್ವಿರುದ್ಧವಾಗಿರುವ ಇನ್ನೊಂದು ಸೇವೆಯ ಬಗ್ಗೆ ನಾವು ಓದುತ್ತೇವೆ. ಅದು "ಲೂಸಿಫರ-ಸೇವೆ".

ಲೂಸಿಫರನು (ಯೆಶಾಯ 14:12 - ಸೈತಾನನಾದಂತವನು) ದೇವರಿಗೆ ವಿರುದ್ಧವಾದ ತನ್ನ ಬಂಡಾಯದಲ್ಲಿ, ಪರಲೋಕದ ದೇವದೂತರಲ್ಲಿ (ನಕ್ಷತ್ರಗಳು) ಮೂರನೇ ಒಂದು ಭಾಗವನ್ನು ತನ್ನೊಟ್ಟಿಗೆ ಎಳೆದುಕೊಂಡನು ಎಂಬುದಾಗಿ ಪ್ರಕಟನೆ 12:4 ರಲ್ಲಿ ನಾವು ಓದುತ್ತೇವೆ. (ಯೋಬ 38:7 ರಲ್ಲಿ ದೇವತೂತರು ”ನಕ್ಷತ್ರ” ಎಂಬುದಾಗಿ ಕರೆಯಲ್ಪಟ್ಟಿದ್ದಾರೆ ಮತ್ತು ಯೆಶಾಯ ೧೪:೧೨ ರಲ್ಲಿ ಲೂಸಿಫರನು ”ಉದಯ ನಕ್ಷತ್ರ” ಎಂಬುದಾಗಿ ಕರೆಯಲ್ಪಟ್ಟಿದ್ದಾನೆ). ಪರಲೋಕದ ದೇವದೂತರಲ್ಲಿ (ನಕ್ಷತ್ರಗಳು) ಮೂರನೇ ಒಂದು ಭಾಗವು ತನ್ನನ್ನು ಹಿಂಬಾಲಿಸುವಂತೆ ಮಾಡುವುದರಲ್ಲಿ ಮತ್ತು ದೇವರಿಗೆ ವಿರುದ್ಧವಾಗಿ ನಿಲ್ಲಿಸುವುದರಲ್ಲಿ ಲೂಸಿಫರನು ಸಫಲನಾದನು. ಲೂಸಿಫರನೊಟ್ಟಿಗೆ ಸಿಡಿದೆದ್ದ ದೇವದೂತರುಗಳು ಸೇರಿಕೊಳ್ಳುವವರೆಗೂ ದೇವರು ಕಾಯ್ದರು. ನಂತರ ಅವರೆಲ್ಲರನ್ನೂ ತಕ್ಷಣದಿಂದಲೇ ದೇವರು ತನ್ನ ಸಮ್ಮುಖದಿಂದ ಹೊರದಬ್ಬಿದರು. ಪ್ರಸ್ತುತ ಈ ಲಕ್ಷಾಂತರ ದೇವದೂತರು ದೆವ್ವಗಳಾಗಿದ್ದಾರೆ. ಇವುಗಳು ಈಗ ಮನುಷ್ಯರನ್ನು ಹಿಡಿಯಲು ಭೂಮಿಯನ್ನು ಸುತ್ತು ಹಾಕುತ್ತಿವೆ.

ಅಷ್ಟು ಮಂದಿ ದೇವದೂತರನ್ನು ಲೂಸಿಫರನು ಅಡ್ಡದಾರಿ ಹಿಡಿಸಲು ಏಕೆ ದೇವರು ಒಪ್ಪಿಗೆ ನೀಡಿದರು? ಏಕೆಂದರೆ ಪರಲೋಕವು ಎಲ್ಲಾ ಅತೃಪ್ತರೂ ಬಂಡಾಯಗಾರರೂ ಆದ ದೇವದೂತರಿಂದ ಶುದ್ಧಗೊಳ್ಳಲಿಕ್ಕಾಗಿ. ದೇವರ ವಿರುದ್ಧವಾದ ಅವರ ದಂಗೆಯಲ್ಲಿ ಅವರನ್ನು ನಡೆಸಲು ಲೂಸಿಫರನು ಅವರ ಮಧ್ಯದಲ್ಲಿ ಎದ್ದುಬಂದಿರದೇ ಇದ್ದರೆ, ಅವರ ಬಂಡುಕೋರ ಹೃದಯಗಳು ಪ್ರಕಟವಾಗುತ್ತಿರಲಿಲ್ಲ.

ಹಾಗೆಯೇ ಈ ದಿನವೂ ಸಹ, ಸಭೆಗಳಲ್ಲಿ ಸಹೋದರ ಸಹೋದರಿಯರು ಲೂಸಿಫರ-ಸೇವೆಯನ್ನು ಕೈಗೊಳ್ಳಲು ದೇವರು ಆಸ್ಪದ ನೀಡುತ್ತಾರೆ. ಈ ಸಹೋದರ ಸಹೋದರಿಯರು (ಹಳೆ ಲೂಸಿಫರನ ರೀತಿಯಲ್ಲಿರುವಂತವರನ್ನು) ಸಭೆಯಲ್ಲಿನ ಅಧಿಕಾರದ ವಿರುದ್ಧ ತಿರುಗಿ ಬೀಳುವಂತ ಆತ್ಮವನ್ನು ಹೊಂದಿಕೊಂಡು, ವಿವಿಧ ವಿಶ್ವಾಸಿಗಳನ್ನು ಮನೆ-ಮನೆಗಳಿಗೆ ತೆರಳಿ ಬೇಟಿ ಮಾಡುವ ಮೂಲಕ ಒಬ್ಬರ ವಿಷಯವಾಗಿ ಚಾಡಿಹೇಳಿ, ನಿಂದಿಸಿ, ಸುಳ್ಳಾಡಿ, ಕೆಟ್ಟಮಾತಾಡಿ, e-mailಗಳನ್ನು ಕಳುಹಿಸುವಾಗ ಸಭೆಯಲ್ಲಿ ಅಸಮಾಧಾನ, ದಂಗೆ ಮತ್ತು ಲೌಕಿಕತೆಯ ಮನೋಭಾವವಿರುವ ಎಲ್ಲಾ ವಿಶ್ವಾಸಿಗಳೂ ಗುರುತಿಸಲ್ಪಟ್ಟು, ಬಹಿರಂಗಗೊಂಡು, ಒಂದುಗೂಡಿಸಲ್ಪಟ್ಟು ಅನಂತರ ಸಭೆಯಿಂದ ಹೊರಹಾಕಲ್ಪಡುವದನ್ನು ದೇವರು ಅನುಮತಿಸುತ್ತಾರೆ. ನಂತರ ಇವರು ಒಬ್ಬಬ್ಬರಾಗಿಯೇ ಸಭೆಯನ್ನು ಬಿಟ್ಟು ಹೋಗುತ್ತಾರೆ ಅಥವಾ ಒಟ್ಟಾಗಿಯೇ ಬಿಟ್ಟುಹೋಗುತ್ತಾರೆ. ಇದರಿಂದ ಕ್ರಿಸ್ತನ ದೇಹಕ್ಕೆ ಪರಿಶುದ್ಧಗೊಳ್ಳುವ ಅವಕಾಶ ದೊರಕುವುದು.

ಲಕ್ಷಾಂತರ ವರ್ಷಗಳ ಹಿಂದೆ, ದೇವರು ಪರಲೋಕದಲ್ಲಿನ ಅಸಲೀ ಲೂಸಿಫರನ ಸೇವೆಯನ್ನು ತಡೆಯಲಿಲ್ಲ, ಹಾಗೆಯೇ ದೇವರು ಇಂದು ಸಹ ಇಂತಹ ಒಂದು ಲೂಸಿಫರ-ಸೇವೆಯಲ್ಲಿ ತೊಡಗಿರುವವರು ಸಭೆಯಲ್ಲಿ ವಿಶ್ವಾಸಿಗಳ ನಡುವೆ ಓಡಾಡುವುದನ್ನೂ ತಡೆಯುವುದಿಲ್ಲ. ಸಭೆಯನ್ನು ತೊಳೆಯಲು ದೇವರ ಮಾರ್ಗವು ಇದಾಗಿದೆ.

ಆದರೆ ವಿಶ್ವಾಸಿಗಳಿಗೆ ಸೈತಾನನ ವಿಷಯದಲ್ಲಿ ನಾವು ಮುನ್ನೆಚ್ಚರಿಕೆ ನೀಡುವ ಹಾಗೆ, ಇಂತಹ ಲೂಸಿಫರರ ಬಗ್ಗೆ ವಿಶ್ವಾಸಿಗಳನ್ನು ನಾವು ಎಚ್ಚರಿಸಬೇಕು. ಪೌಲನು ವಿಶ್ವಾಸಿಗಳಿಗೆ ಎಚ್ಚರಿಸಿ ಹೇಳಿದ್ದೇನೆಂದರೆ - ”ಸಹೋದರರೇ, ನೀವು ಹೊಂದಿದ ಉಪದೇಶಕ್ಕೆ ವಿರುದ್ಧವಾಗಿ ಭೇದಗಳನ್ನೂ ವಿಘ್ನಗಳನ್ನೂ ನಿಮ್ಮಲ್ಲಿ ಉಂಟು ಮಾಡುವವರನ್ನು ಗುರುತಿಟ್ಟು ಅವರನ್ನು ಬಿಟ್ಟು ತೊಲಗಿ ಹೋಗಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಅಂಥವರು ನಮ್ಮ ಕರ್ತನಾದ ಕ್ರಿಸ್ತನ ಸೇವೆಯನ್ನು ಮಾಡದೆ ತಮ್ಮ ಹೊಟ್ಟೆಯ ಸೇವೆಯನ್ನೇ ಮಾಡುವವರಾಗಿ ನಯದ ನುಡಿಗಳಿಂದಲೂ ಹೊಗಳಿಕೆಯ ಮಾತುಗಳಿಂದಲೂ ನಿಷ್ಕಪಟಿಗಳ ಹೃದಯಗಳನ್ನು ಮೋಸಗೊಳಿಸುತ್ತಾರೆ” ( ರೋಮಾ. 16:17,18 ನೋಡಿ).

ಆದರೆ ಇಂತಹ ಜನರು ಏನು ಮಾಡಲಿರುವರು ಎನ್ನುವ ವಿಷಯದಲ್ಲಿ ನಮಗೆ ಭಯವಿಲ್ಲ. ನಾವು ಅವರೊಟ್ಟಿಗೆ ಕಾದಾಟ ಮಾಡಬಾರದು. ಅವರು ಸಭೆಯನ್ನು ಭ್ರಷ್ಟಗೊಳಿಸಲಾರರು. ಅವರು ಕೇವಲ ದೇವರ ಉದ್ಯಾನದಿಂದ ಕಳೆಗಳನ್ನು ಮಾತ್ರವೇ ಕೀಳಲಿರುವರು. ಹಾಗಾಗಿ ಅವರು ನಿಜವಾಗಿಯೂ ಸಭೆಯನ್ನು ತೊಳೆಯುವುದರಿಂದ ನಮಗೆ ಒಂದು ರೀತಿಯಲ್ಲಿ ಸೇವೆ ಮಾಡುತ್ತಿದ್ದಾರೆ! ಸ್ವತಃ ದೇವರು ಸಭೆಯನ್ನು ಸಂರಕ್ಷಿಸಲಿರುವರು.

ಅಪೊಸ್ತಲನಾದ ಯೋಹಾನನು ಹೇಳಿರುವ ಪ್ರಕಾರ - ”ಅವರು ನಮ್ಮನ್ನು ಬಿಟ್ಟು ಹೊರಟು ಹೋದರು, ಆದರೆ ಅವರು ನಮ್ಮವರಾಗಿರಲಿಲ್ಲ. ಅವರು ನಮ್ಮವರಾಗಿದ್ದರೆ ನಮ್ಮ ಜೊತೆಯಲ್ಲೇ ಇರುತ್ತಿದ್ದರು, ಆದರೆ ಅವರು ನಮ್ಮನ್ನು ಬಿಟ್ಟು ಹೋದದರಿಂದ ಕ್ರೈಸ್ತರೆನಿಸಿಕೊಳ್ಳುವವರೆಲ್ಲರೂ ನಮ್ಮವರಲ್ಲವೆಂಬದು ಸ್ಪಷ್ಟವಾಗಿ ತೋರಬಂತು” (1 ಯೋಹಾನ 2:19).

ಅದಲ್ಲದೆ ಯಾರು ಸಭೆಯನ್ನು ನಾಶ ಮಾಡಲು ಪ್ರಯತ್ನಿಸುವರೋ ಅಂಥವರುಗಳನ್ನು ದೇವರು ತಕ್ಕ ಸಮಯದಲ್ಲಿ ನಾಶಗೊಳಿಸುತ್ತಾರೆ (1 ಕೊರಿಂಥದವರಿಗೆ 3:17). ಆದರೆ ದೇವರು ಯಾರ ನಾಶನವನ್ನು ಬಯಸುವುದಿಲ್ಲ, ನಾವು ನಾಶವನ್ನು ಮಾಡಲು ಬಯಸಿದರು ಸಹ. ದೇವರು ದೀರ್ಘಶಾಂತರು ಮತ್ತು ತೀರ್ಪುಮಾಡುವ ಮೊದಲು ಅನೇಕ ವರ್ಷಗಳ ಕಾಲ ಕಾಯುವರು. ಏಕೆಂದರೆ ಯಾರೂ ನಾಶನವನ್ನು ಹೊಂದಬಾರದೆಂದು ದೇವರು ಬಯಸುತ್ತಾರೆ. ಎಲ್ಲರೂ ಮಾನಸಾಂತರಪಡಬೇಕು ಎಂದು ದೇವರು ಇಚ್ಛೆಪಡುತ್ತಾರೆ.

ನೋಹನ ಸಮಯದಲ್ಲಿ, ದೇವರು 120 ವರುಷ ಕಾಯ್ದರು. ಆದರೆ ದೇವರು ತೀರ್ಪು ಮಾಡುವಾಗ, ಆತನ ತೀರ್ಪು ಕಠಿಣವಾಗಿರುವುದು.

ವಿಭಜನೆಯಲ್ಲಿ ದೇವರ ಉದ್ದೇಶವಿದೆ

ಯಾವುದೇ ಸಭೆಯು ತಾನು ಯಾವತ್ತೂ ಒಡೆಯಲ್ಪಟ್ಟಿಲ್ಲವೆಂದು ಹೆಮ್ಮೆಪಡುವದು ಅವಿವೇಕತನವಾಗಿದೆ. ಪರಲೋಕದಲ್ಲೇ ಆದರೂ, ಆದಿಕಾಲದಲ್ಲೇ ದೇವದೂತರ ನಡುವೆ ಒಂದು ವಿಭಜನೆಯಾಯಿತು. ಅಂತಹ ವಿಭಜನೆಗಳು ಅಗತ್ಯವಾಗಿ ಇಂದು ಬೇಕಾಗಿವೆ. ಪವಿತ್ರಾತ್ಮನು ಹೀಗೆನ್ನುತ್ತಾನೆ: "ನಿಮ್ಮಲ್ಲಿ (ಸಭೆಯಲ್ಲಿ) ಇಂಥಿಂಥವರು ಯೋಗ್ಯರೆಂದು (ದೇವರ ದೃಷ್ಟಿಯಲ್ಲಿ) ಕಾಣಬರುವಂತೆ, ಭಿನ್ನಾಭಿಪ್ರಾಯಗಳೂ (ಸೀಳುಗಳು) ಇರುವದು ಅವಶ್ಯವೇ" ( 1 ಕೊರಿಂಥದವರಿಗೆ 11:19) .

ದೇವರು ಮೊದಲ ದಿನ ಬೆಳಕನ್ನು ಉಂಟು ಮಾಡಿದಾಗ, ”ಬೆಳಕನ್ನು ಒಳ್ಳೆಯದೆಂದು ನೋಡಿದನು”. ದೇವರು ಮುಂದಿನ ಸಂಗತಿಯನ್ನು ಮಾಡಿದ್ದೇನೆಂದರೆ, ”ಕತ್ತಲೆಯನ್ನೂ ಬೆಳಕನ್ನೂ ಬೇರೆ ಬೇರೆ ಮಾಡಿದರು” ( ಆದಿಕಾಂಡ 1:4). ದೇವರು ತನ್ನ ಸಭೆಯಲ್ಲಿ ಅದನ್ನೇ ಇಂದು ಮಾಡುತ್ತಿದ್ದಾರೆ - ಏಕೆಂದರೆ ಬೆಳಕು ಕತ್ತಲೊಟ್ಟಿಗೆ ಅನ್ಯೋನ್ಯತೆಯನ್ನು ಹೊಂದಲು ಸಾಧ್ಯವಿಲ್ಲ. ಹಾಗೆಯೇ ಇಂದು ಜನರ ವಿಭಜನೆಗಳು ಸಭೆಯಲ್ಲಿ ಆಗದೇ ಹೋದರೆ, ಲೋಕದಲ್ಲಿ ದೇವರ ಸಾಕ್ಷಿಯು ಕಲುಷಿತವಾಗುವದು. ಹಾಗಾಗಿ ನಾವು ಹಿಂದೆ ನಿಂತುಕೊಂಡು ಜನರು ಲೂಸಿಫರನ ಸೇವೆಯನ್ನು ಮಾಡುವಂತೆ ಅನುಮತಿಸಬೇಕು, ಇದರಿಂದಾಗಿ ನಾವು ಪರಿಶುದ್ಧ ಸಭೆಯನ್ನು ಹೊಂದಲು ಸಾಧ್ಯ! ನಿಜಕ್ಕೂ ದೇವರ ಮಾರ್ಗಗಳು ವಿಸ್ಮಯಕಾರಿಗಳಾಗಿವೆ.

ನಾವೆಲ್ಲರೂ ಇವೆರಡರಲ್ಲಿ ಒಂದನ್ನು ಹೊಂದಬಹುದು, ಮೊದಲನೆಯದು ದಾನಿಯೇಲನ ಸೇವೆ (ಸಭೆಯಲ್ಲಿ ಐಕ್ಯತೆ ಹಾಗೂ ಅನ್ಯೋನ್ಯತೆಗಳನ್ನು ಕಟ್ಟುವುದು) - ಅಥವಾ ಎರಡನೆಯದು ಲೂಸಿಫರ-ಸೇವೆ (ವೈಮನಸ್ಸಿನ ಬೀಜವನ್ನು ಬಿತ್ತುವದು). ಜಗಳಗಳನ್ನು ಬಿತ್ತುವವನನ್ನು ದೇವರು ಹಗೆಮಾಡುವರು ( ಜ್ಞಾನೋಕ್ತಿಗಳು 6:16-19) . ನಾವು ಈ ವಿಷಯದಲ್ಲಿ ತಟಸ್ಥರಾಗಿರಲು ಸಾಧ್ಯವಿಲ್ಲ, ಏಕೆಂದರೆ ಯೇಸುವು ಹೇಳಿದಂತೆ, ಅವರ ಜೊತೆಯಲ್ಲಿ ಒಟ್ಟುಗೂಡಿಸದವರು ಜನರನ್ನು ಅವರಿಂದ ದೂರಕ್ಕೆ ಚದುರಿಸುತ್ತಿದ್ದಾರೆ. ಸಭೆಯಲ್ಲಿ ಎರಡು ಸೇವೆಗಳು ಮಾತ್ರ ಇವೆ - ಒಟ್ಟುಗೂಡಿಸುವದು ಇಲ್ಲವೇ ಚದುರಿಸುವದು ( ಮತ್ತಾಯನು 12:30) .

ನಮ್ಮ ಸಭೆಗಳಲ್ಲಿ, ಅಂತಸ್ತು ಮತ್ತು ಗೌರವಕ್ಕಾಗಿ ಹೆಣಗುತ್ತಿದ್ದವರು, ಅಥವಾ ವಿವಾದಾತ್ಮಕ ಮನೋಭಾವ ಇದ್ದವರು, ಅಥವಾ ತಮಗಿಂತ ಎಳೆಪ್ರಾಯದ ಸಹೋದರರು ಆತ್ಮೀಕವಾಗಿ ಮೇಲಕ್ಕೆ ಏರುವುದನ್ನು ನೋಡಿ ಅಸೂಯೆಗೊಂಡವರು, ಇಂತಹ ಎಲ್ಲರನ್ನೂ ಬಹಿರಂಗಪಡಿಸಿ ನಮ್ಮ ಮಧ್ಯದಿಂದ ಹೊರಕ್ಕೆ ಹಾಕುವಂತೆ ಕರ್ತರು ಅದ್ಭುತವಾಗಿ ಮತ್ತು ಕುಶಲತೆಯಿಂದ ಸನ್ನಿವೇಷಗಳನ್ನು ಸಿದ್ಧಪಡಿಸಿರುವರು. ನಮ್ಮ ನಡುವೆ ಇರುವ "ಜ್ಞಾನಿ" ಮತ್ತು "ಗಣ್ಯ" ಜನರನ್ನು ದೇವರು "ಅವರ ತಂತ್ರಗಳಲ್ಲಿಯೇ" ಹಿಡುಕೊಂಡು (1 ಕೊರಿಂಥದವರಿಗೆ 3:19), ಸಭೆಯನ್ನು "ಬೆದರಿಸಿ ಅಪಹರಿಸುವ" ಅವರ ರಹಸ್ಯ ಯೋಜನೆಗಳನ್ನು ಭಂಗಗೊಳಿಸಿದ್ದಾರೆ!! ನಮ್ಮ ಬಗ್ಗೆ ಕರ್ತರಿಗೆ ಇರುವ ಕಾಳಜಿ ಮತ್ತು ತನ್ನ ಹೆಸರಿಗಾಗಿ ಒಂದು ಶುದ್ಧವಾದ ಸಾಕ್ಷಿ ನಮ್ಮ ನಾಡಿನಲ್ಲಿ ಇರಬೇಕೆಂಬ ಅವರ ತೀವ್ರ ನಿರೀಕ್ಷೆಗಳ ಒಂದು ಕುರುಹು ಇದು.

ನಮ್ಮನ್ನು ಸೈತಾನನ ಇಂತಹ ದಾಳಿಗಳಿಂದ ಸಂರಕ್ಷಿಸಲು ಕರ್ತರು ಹಗಲಿರುಳು ನಮ್ಮ ಮೇಲೆ ದೃಷ್ಟಿ ಇರಿಸುವುದಕ್ಕಾಗಿ ಅವರಿಗೆ ನಾವು ಸ್ತೋತ್ರ ಸಲ್ಲಿಸುತ್ತೇವೆ. "ಯೆಹೋವನು ಪಟ್ಟಣವನ್ನು ಕಾಯದಿದ್ದರೆ ಕಾವಲುಗಾರರು ಅದನ್ನು ಕಾಯುವದು ವ್ಯರ್ಥ" ( ಕೀರ್ತನೆಗಳು 127:1) . ಸಹೋದರರು ಒಂದಾಗಿರುವಲ್ಲಿ ಮಾತ್ರ ಯೆಹೋವನು ತನ್ನ ಆಶೀರ್ವಾದವನ್ನು ಆಜ್ಞಾಪಿಸಲು ಸಾಧ್ಯ (ಕೀರ್ತನೆಗಳು 133:1,3) . ಒಗ್ಗಟ್ಟು ಇರುವ ಒಂದು ಸಭೆಯು ಮಾತ್ರವೇ ಪಾತಾಳಲೋಕದ ಮುಖದ್ವಾರಗಳ ವಿರುದ್ಧ ಜಯಿಸಲು ಸಾಧ್ಯ. ಹೀಗಾಗಿ ಪವಿತ್ರಾತ್ಮನು ನಮ್ಮ ಮಧ್ಯೆ ಪ್ರಬಲನಾಗಿ ಕಾರ್ಯಗೈಯುತ್ತಾ, ಈ ಐಕ್ಯತೆಗೆ ತಡೆ ಒಡ್ಡುವವರನ್ನು ತಳ್ಳಿಹಾಕಿ, ಆ ಮೂಲಕ ನಮ್ಮನ್ನು ಒಗ್ಗಟ್ಟಾದ ಒಂದೇ ದೇಹವಾಗಿ ನಮ್ಮ ಸಭೆಗಳಲ್ಲಿ ಕಾದಿರಿಸುವನು.

ಕರ್ತನು ನಮ್ಮ ಮಧ್ಯೆ ಈ ಕಾರ್ಯವನ್ನು ಇನ್ನು ಮುಂದೆಯೂ ಮಾಡುತ್ತಾ ಬರಬೇಕೆಂದು ನಾವು ಪ್ರಾರ್ಥಿಸಬೇಕು - ಏಕೆಂದರೆ ಯಾವುದೇ ಸಮಯದಲ್ಲಿ ಜನರು ನಮ್ಮ ನಡುವೆ ಯಾವ ಸಮಯದಲ್ಲಿಯಾದರೂ ಗರ್ವದಿಂದ ಉಬ್ಬಿಕೊಳ್ಳುವ ಮತ್ತು ಸ್ವಂತದ್ದನ್ನು ಹುಡುಕುವ ಸಾಧ್ಯತೆ ಇದೆ. ಆದರೂ ದೇವರು ನಮಗೆ ನೀಡಿರುವ ವಾಗ್ದಾನವು ಇದು: "ಅತಿಗರ್ವದಿಂದ ಮೆರೆಯುವವರನ್ನು ನಿನ್ನೊಳಗಿನಿಂದ ತೊಲಗಿಸಿಬಿಡುವೆನು; ... ದೀನದರಿದ್ರಜನವನ್ನು ನಿನ್ನಲ್ಲಿ ಉಳಿಸುವೆನು; ಅವರು ಯೆಹೋವನ ನಾಮವನ್ನು ಆಶ್ರಯಿಸಿಕೊಳ್ಳುವರು" ( ಚೆಫನ್ಯನು 3:11,12). ಒಗ್ಗಟ್ಟಿರುವ ಸಭೆಯು ದೀನರಾದ, ತಗ್ಗಿಸಿಕೊಂಡ ಜನರಿಂದ ಮಾತ್ರ ಕಟ್ಟಲ್ಪಡಲು ಸಾಧ್ಯ.

ಕರ್ತರು ತನ್ನ ಸಭೆಯನ್ನು ಪರಿಶುದ್ಧವಾಗಿ ಉಳಿಸಿಕೊಳ್ಳಲು ಉತ್ಸುಕರಾಗಿರುವರು ಮತ್ತು ಈ ಉದ್ದೇಶದಿಂದ ಸ್ವಪ್ರತಿಷ್ಠೆಯ ಅನ್ವೇಷಕರನ್ನು ಅವರು ತನ್ನ ವಿಶಿಷ್ಟ ರೀತಿಯಲ್ಲಿ ಮತ್ತು ತನ್ನ ಉಚಿತಕಾಲದಲ್ಲಿ, ಅವರು ದೇವಾಲಯದಿಂದ ಚಿನಿವಾರರನ್ನು ಸರಿಯಾದ ಸಮಯದಲ್ಲಿ ಹೊರಕ್ಕೆ ಅಟ್ಟಿದಂತೆ, ಸ್ವತಃ ಬಹಿರಂಗಪಡಿಸುವರು ಮತ್ತು ಹೊರಹಾಕುವರು.

ಈ ಕೊನೆ ದಿನಗಳಲ್ಲಿ ನಾವು ದೇವರು ಬಯಸಿದಂತೆ ಜೀವಿಸಲು ಮತ್ತು ದೇವರ ಮಹಿಮೆಗಾಗಿ ಪ್ರತಿಯೊಂದು ಸ್ಥಳದಲ್ಲಿಯೂ ಕರ್ತನಾದ ಯೇಸು ಕ್ರಿಸ್ತನ ಸಭೆಯನ್ನು ಶುದ್ಧ ಸಾಕ್ಷಿಯಾಗಿ ಕಟ್ಟುವಂತೆ ನಮಗೆ ಸಹಾಯವಾಗುವಂತೆ ಕೃಪೆಯನ್ನು ಮತ್ತು ಜ್ಞಾನವನ್ನು ಹೊಂದಿಕೊಳ್ಳೋಣ. ಆಮೇನ್