ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ
WFTW Body: 

ಧರ್ಮೋಪದೇಶಕಾಂಡ 11:18-21 ರಲ್ಲಿ ಈ ರೀತಿಯಲ್ಲಿ ಬರೆಯಲ್ಪಟ್ಟಿದೆ - ”ನನ್ನ ವಾಕ್ಯಗಳನ್ನು ನಿಮ್ಮ ಹೃದಯದಲ್ಲಿಯೂ ಪ್ರಾಣಗಳಲ್ಲಿಯೂ ಇಟ್ಟುಕೊಳ್ಳಿರಿ; ಆಗ ನಿಮ್ಮ ದಿವಸಗಳು ಆಕಾಶದ (ಪರಲೋಕದ) ದಿವಸಗಳ ಪ್ರಕಾರ ಇರುವವು”. ಎಂಥಹ ಅದ್ಬುತವಾದ ಹೇಳಿಕೆ ಅಲ್ವಾ ಇದು. ನಿಮ್ಮ ದಿವಸಗಳು ಆಕಾಶದ (ಪರಲೋಕದ) ದಿವಸಗಳ ಪ್ರಕಾರ ಇರುವವು”. ಪರಲೋಕದ ದಿವಸಗಳು ಎಂದರೆ ಏನು ಎಂಬುದಾಗಿ ಯೋಚಿಸಿ. ಪರಲೋಕದಲ್ಲಿ ಯಾವುದೇ ತರಹದ ಜಗಳಗಳಾಗಲಿ, ಕಲಹಗಳಾಗಲಿ ಇರುವುದಿಲ್ಲ, ಅದರ ಹೊರತಾಗಿ ಪರಲೋಕದಲ್ಲಿ ಸಂತೋಷ ಮತ್ತು ಸಮಾಧಾನ ಮಾತ್ರ ಇರುತ್ತದೆ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ, ಪರಲೋಕದ ಎಲ್ಲಾ ಕಡೆಯು ಪ್ರೀತಿಯು ತುಂಬಿರುತ್ತದೆ. ಪ್ರತಿದಿನ ಇಹಲೋಕದಲ್ಲಿ ಪರಲೋಕದ ದಿವಸಗಳನ್ನು ಹೊಂದಿರುವಂತಹ ಮನೆಯನ್ನು ನಾವು ಸಹ ಹೊಂದಬಹುದು. ಪ್ರತಿಯೊಂದು ಮನೆಯು ಅದೇ ರೀತಿಯಿಂದ ಇರಬೇಕು ಎಂಬುದು ದೇವರ ಉದ್ದೇಶವಾಗಿದೆ.

ಸತ್ಯವೇದವು ಆದಮ ಮತ್ತು ಹವ್ವಳ ಮದುವೆಯಿಂದ ಪ್ರಾರಂಭವಾಗಿ, ತನ್ನ ಜನರೊಟ್ಟಿಗೆ, ಸಭೆಯೊಟ್ಟಿಗೆ ಕ್ರಿಸ್ತನು ಮದುವೆ ಆಗುವ ಮೂಲಕ ಕೊನೆಗೊಳ್ಳುತ್ತದೆ, ದೇವರು ಮೊದಲು ಆದಮ ಮತ್ತು ಹವ್ವಳ ಮದುವೆಯನ್ನು ಏರ್ಪಡಿಸಿದಾಗ - ಇಹಲೋಕದ ಮೇಲೆ ಇವರ ದಿವಸಗಳು ಪರಲೋಕದ ದಿವಸಗಳಂತೆ ಇರಬೇಕು ಎಂದು ದೇವರು ಬಯಸಿದರು. ಅವರ ಮೊದಲ ಮನೆಯು ಪರದೈಸ್ (ಏದೆನ್) ಆಗಿತ್ತು. ಆದರೆ ಸೈತಾನನು ಬಂದು ಆ ಮನೆಯನ್ನು ನರಕವನ್ನಾಗಿ ಮಾಡಿದನು. ಪ್ರಸ್ತುತ ಈ ಲೋಕದಲ್ಲಿ ನಾವು ನರಕದ ರೀತಿಯ ಮನೆಗಳನ್ನು ಹೊಂದಿದ್ದೀವಿ. ಆದರೆ ದೇವರಿಗೆ ಸ್ತೋತ್ರ ಹೇಳಬೇಕು, ಏಕೆಂದರೆ ಇದು ಕಥೆಯ ಕೊನೆಯಲ್ಲ. ಆದಾಮನು ಪಾಪ ಮಾಡಿದ ತಕ್ಷಣದಲ್ಲಿಯೇ, ಅಂದರೆ ಸೈತಾನನು ಸೃಷ್ಠಿ ಮಾಡಿದ ಈ ಸಮಸ್ಯೆಗೆ ಪರಿಹಾರವಾಗಿ ದೇವರು ತನ್ನ ಮಗನನ್ನು ಕಳುಹಿಸಿದನು, ಇದರ ಮೂಲಕ ಹೇಗೆ ಏದೆನ್ ನಲ್ಲಿ ಇರಬಹುದು ಎಂಬುದಾಗಿ ಸತ್ಯವೇದ ಹೇಳುತ್ತದೆ. ಅಲ್ಲಿಯೇ ನಾವು ಅದ್ಬುತವಾದ ಸತ್ಯವನ್ನು ನೋಡಬಹುದು, ಅದೇನೆಂದರೆ : ”ಸೈತಾನನ ವಿರುದ್ಧವಾಗಿ ದೇವರು ಯಾವಾಗಲೂ ನಮ್ಮ ಪರವಾಗಿ ಇರುತ್ತಾರೆ”. ಅದಾಮನ ಪಾಪಕ್ಕಾಗಿ ದೇವರು ಭೂಮಿಯನ್ನು ಶಪಿಸಿದರು ಮತ್ತು ದೇವರು ಸೈತಾನನಿಗೆ (ಸರ್ಪ) ಈ ರೀತಿಯಾಗಿ ಹೇಳಿದರು - ಆದಮ ಮತ್ತು ಹವ್ವಳಿಂದ ಬರುವಂತ ಸಂತಾನವು ನಿನ್ನ ತಲೆಯನ್ನು ಜಜ್ಜುವದು ಎಂಬುದಾಗಿ. ಇದಾದ ನಂತರವೇ, ದೇವರು ಅವರುಗಳ ದಂಡನೆಯನ್ನು ನಿಶ್ಚಿತಗೊಳಿಸಿದನು. ಸೈತಾನನು ಬಂದು ಸಂಗತಿಗಳನ್ನು ಹಾಳು ಮಾಡಿದರೂ ಸಹ, ಸೈತಾನನ ವಿರುದ್ಧವಾಗಿ ಮತ್ತು ದೇವರು ನಮ್ಮ ಪರವಾಗಿ ಇರುತ್ತಾನೆ ಎಂಬುವಂತ ಸತ್ಯವನ್ನು ಆದಾಮ ಮತ್ತು ಹವ್ವಳು ಅರಿತಿರಬೇಕು ಎಂದು ದೇವರು ಬಯಸಿದರು. ಯಾವುದೇ ಮನೆಯಲ್ಲಿ ಸೈತಾನನು ಏನೇ ಮಾಡಿದರೂ ಪರವಾಗಿಲ್ಲ, ದೇವರು ಆ ಮನೆಗಳನ್ನು ಕಾಪಾಡುವಂತ, ಆ ಸಮಸ್ಯೆಗಳಿಂದ ಬಿಡುಗಡೆ ಮಾಡುವಂತ ಕೆಲಸದಲ್ಲಿ ತೊಡಗಿರುತ್ತಾನೆ. ನಾವು ಈ ಲೋಕದಲ್ಲಿ ಪರಲೋಕದ ದಿವಸಗಳನ್ನು ಅನುಭವಿಸಬೇಕು ಎಂಬ ಆತನ ನಿಜವಾದ ಯೋಜನೆಗೆ ಮತ್ತೊಮ್ಮೆ ತರುವ ಬಯಕೆಯನ್ನು ದೇವರು ಹೊಂದಿದ್ದಾರೆ ಮತ್ತು ಪ್ರಸ್ತುತ ಕ್ರಿಸ್ತನು ಬಂದು ಬಿಡುಗಡೆಯ ಕಾರ್ಯವನ್ನು ಪೂರೈಸಿದ್ದಾನೆ, ಪರಲೋಕದ ಮನೆಯನ್ನು ಹೊಂದುವ ಸಾಧ್ಯತೆ ನಮ್ಮೆಲ್ಲರಿಗೂ ಇದೆ. ಒಬ್ಬರನ್ನೊಬ್ಬರು ಪ್ರೀತಿಸುವುದರ ಬಗ್ಗೆ ಮೂರು ಸಂಗತಿಗಳನ್ನು ಹೇಳ ಬಯಸುತ್ತೇನೆ.

1. ಪ್ರೀತಿಯು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತದೆ

ವೈವಾಹಿಕ ಪ್ರೀತಿಯ ಬಗ್ಗೆ ದೇವರು ಒಂದು ಇಡೀ ಪುಸ್ತಕವನ್ನೇ ಸೇರಿಸಿದ್ದಾರೆ. ಅದೇ ಪರಮಗೀತ. ಎಲ್ಲಾ ದಂಪತಿಗಳು ಆ ಪುಸ್ತಕವನ್ನು ಪರಸ್ಪರ ಒಬ್ಬರಿಗೊಬ್ಬರು ಓದಬೇಕು. ಪತಿ ಪತ್ನಿಯರು ಒಬ್ಬರಿಗೊಬ್ಬರು ಮಾತನಾಡಬೇಕೆಂದು ಸರ್ವಶಕ್ತ ದೇವರು ನಿರೀಕ್ಷಿಸುವುದನ್ನು ಅಲ್ಲಿ ನೋಡಿದರೆ ಆಶ್ಚರ್ಯವಾಗುತ್ತದೆ. ಬೈಬಲಿನ ಇತರ ಪುಸ್ತಕಗಳಂತೆ, ಆ ಪುಸ್ತಕವೂ ಪವಿತ್ರಾತ್ಮ ಪ್ರೇರೇಪಿತ ಪುಸ್ತಕವಾಗಿದೆ.

ನಾವು ಪತಿ ಪತ್ನಿಯರಂತೆ, ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸುವುದನ್ನು ಕಲಿಯುವ ಸಲುವಾಗಿ, ಈ ಪುಸ್ತಕದ ಕೆಲವು ಆಯ್ದ ಭಾಗಗಳನ್ನು ನಾನು ಓದುತ್ತೇನೆ. ಮೆಚ್ಚುಗೆ ವ್ಯಕ್ತಪಡಿಸುವುದರಲ್ಲಿ ನಾವೆಲ್ಲರು ಜಿಪುಣರು. ಟೀಕಿಸುವುದರಲ್ಲಿ ನಾವು ಬಹಳ ಮುಂದು. ಆದರೆ, ಮೆಚ್ಚುಗೆ ವ್ಯಕ್ತಪಡಿಸುವುದರಲ್ಲಿ ನಾವು ಬಹಳ ಹಿಂದೆ. ನಾವು ಜನರನ್ನು ನೋಡಿದಾಗ ಅವರಲ್ಲಿ ಅನೇಕ ತಪ್ಪುಗಳನ್ನು/ಲೋಪಗಳನ್ನು ಕಾಣುತ್ತೇವೆ. ಅದು ಮನುಷ್ಯ ಸ್ವಭಾವ. ಈ ರೀತಿಯಾಗಿ, ದೂರುಗಾರನಾದ ಸೈತಾನನು ನಮ್ಮೊಳಗೆ ನೆಲೆಯೂರುತ್ತಾನೆ. ನಾವು ಇತರರನ್ನು ನೋಡಿ ಅವರಲ್ಲಿ ಏನಾದರೂ ಕಂಡು, ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದಾಗ, ದೇವರು ನಮ್ಮಲ್ಲಿ ನೆಲೆಯೂರುತ್ತಾನೆ. ನಾವು ಪ್ರತಿಯೊಬ್ಬರೂ ನಮ್ಮ ಗುಣನಡತೆಯನ್ನು ಇಲ್ಲಿ ಪರೀಕ್ಷಿಸಬಹುದು.

ಪರಮಗೀತ 4:7 ರಲ್ಲಿ ಪತಿಯು, ಪತ್ನಿಗೆ ಏನು ಹೇಳುತ್ತಾನೆಂಬುದನ್ನು ನೋಡಿರಿ. "ನನ್ನ ಪ್ರಿಯಳೇ, ನೀನು ಸರ್ವಾಂಗಸುಂದರಿ. ನೀನು ತಲೆಯಿಂದ ಪಾದದ ತನಕ ಹೋಲಿಸಲಾಗದಷ್ಟು ಸುಂದರಿ, ನಿನ್ನಲ್ಲಿ ಯಾವ ದೋಷವೂ ಇಲ್ಲ. ನೀನು ನಿಜವಾಗಿಯೂ ಅಪರಂಜಿ. ನೀನು ಆನಂದ ಪರವಶಗೊಳಿಸುವ ಮೋಹಕ ಚೆಲುವಿ. ನಿನ್ನ ಸ್ವರವು ಕೋಮಲ ಹಾಗೂ ನಿನ್ನ ಮುಖ ನಿನ್ನ ಆಂತರಿಕ ಹಾಗು ಬಾಹ್ಯ ಚೆಲುವು, ನನ್ನ ನಲ್ಮೆಯ ಗೆಳತಿಯೇ, ನಿನ್ನ ಚೆಲುವು ಸಂಪೂರ್ಣವಾದುದು. ನೀನು ಒಂದು ಪರದೈಸು. ನೀನು ನನ್ನ ಹೃದಯವನ್ನು ಸೆರೆಹಿಡಿದಿದ್ದೀಯ. ನೀನು ನನ್ನನ್ನು ನೋಡಿದೆ ಹಾಗೂ ನಾನು ನಿನ್ನನ್ನು ಪ್ರೀತಿಸಿದೆ. ನನ್ನೆಡೆಗೆ ನಿನ್ನ ಒಂದು ನೋಟ - ನಾನು ನಿನ್ನನ್ನು ಪ್ರೀತಿಸಿದೆ. ನನ್ನ ಹೃದಯವು ಆನಂದಪರವಶಗೊಂಡಿದೆ. ಓ, ನಿನ್ನನ್ನು ನೋಡಿದಾಗ ನನ್ನಲ್ಲಿ ಉಂಟಾಗುವ ಭಾವನೆಗಳೇ ಹಾಗೂ ನನ್ನ ಆಸೆಗಳೇ. ನಿನ್ನಂತೆ ಜಗತ್ತಿನಲ್ಲಿ ಯಾರೂ ಇಲ್ಲ, ಎಂದೂ ಇದ್ದಿಲ್ಲ, ಎಂದೂ ಇರುವುದಿಲ್ಲ. ನೀನು ಹೋಲಿಸಲಾಗದ ಸ್ತ್ರೀ.

ಈಗ ಪತ್ನಿಯು ಏನು ಹೇಳುತ್ತಾಳೆಂಬುದನ್ನು ಕೇಳಿ. ಇದು ಅವಳ ಉತ್ತರ: ನೀನು ನನ್ನ ಪ್ರಿಯಕರನೇ ತುಂಬಾ ಸುಂದರವಾಗಿದ್ದೀಯ. ನೀನು ಮಿಲಿಯ ಜನರಲ್ಲಿ ಒಬ್ಬನು. ನಿನ್ನಂತೆ ಬೇರೆ ಯಾರೂ ಇಲ್ಲ! ನೀನು ಬಂಗಾರದಂತೆ. ನೀನು ಗುಡ್ಡಗಾಡಿನ ಪುರುಷನಂತೆ. ನಿನ್ನ ಮಾತುಗಳು ಮಧುರ ಹಾಗೂ ಭರವಸೆಯನ್ನು ಕೊಡುವಂಥವು. ನಿನ್ನ ಮಾತುಗಳು ಮುತ್ತುಗಳಂತೆ ಹಾಗೂ ನಿನ್ನ ಮುತ್ತುಗಳೆಲ್ಲವೂ ಮಾತುಗಳಂತೆ. ನಿನ್ನ ಎಲ್ಲವೂ ನನ್ನನ್ನು ಹರ್ಷಗೊಳಿಸುತ್ತದೆ. ನೀನು ನನ್ನನ್ನು ಸಂಪೂರ್ಣವಾಗಿ ಪುಳಕಿತಗೊಳಿಸುತ್ತೀಯ. ನಾನು ನಿನಗಾಗಿ ಹಂಬಲಿಸುತ್ತಿದ್ದೇನೆ. ನಾನು ನಿನ್ನನ್ನು ಕಂಡಾಗ ನನ್ನ ತೋಳುಗಳಿಂದ ನಿನ್ನನ್ನು ಬಿಗಿದಪ್ಪಿ ಹಿಡಿಯಬಯಸುತ್ತೇನೆ ಹಾಗೂ ನಾನು ನಿನ್ನನ್ನು ಹೋಗಲು ಬಿಡುವುದಿಲ್ಲ. ನಾನು ನಿನ್ನವಳೇ ಹಾಗೂ ನೀನು ನನ್ನ ಒಬ್ಬನೇ ಪ್ರಿಯಕರನು ಹಾಗೂ ನೀನೇ ನನ್ನ ಏಕೈಕ ಪುರುಷನು.

2. ಪ್ರೀತಿಯು ಕ್ಷಮಿಸಲು ಮುಂದು. ಪ್ರೀತಿಯು ಅರೋಪಿಸಲು ನಿಧಾನ, ಆದರೆ ಕ್ಷಮಿಸಲು ಮುಂದು.

ಪ್ರತಿಯೊಂದು ವಿವಾಹ ಜೀವಿತದಲ್ಲೂ ಪತಿ-ಪತ್ನಿಯರ ಮಧ್ಯೆ ಸಮಸ್ಯೆಗಳಿರುತ್ತವೆ. ಆದರೆ ನೀವು ಆ ಸಮಸ್ಯೆಗಳನ್ನು ಮುಚ್ಚಿಡಲು ಪ್ರಯತ್ನಿಸಿದರೆ, ಅವು ಖಂಡಿತವಾಗಿಯೂ ಮತ್ತೆ ತೋರ್ಪಡಿಸಿಕೊಳ್ಳುತ್ತವೆ. (ಅಂದರೆ, ನೀವು ಆ ಸಮಸ್ಯೆಗಳನ್ನು ಕೂಡಲೇ ಬಗೆಹರಿಸದೆ ಅವಕ್ಕೆ ಪ್ರಾಮುಖ್ಯತೆ ಕೊಡದಿದ್ದರೆ, ಆ ಸಮಸ್ಯೆಗಳು ಉಲ್ಭಣಗೊಳ್ಳುತ್ತವೆ.) ಆದುದರಿಂದ ಕ್ಷಮೆ ಕೇಳಲು ಹಾಗೂ ಕ್ಷಮಿಸಲು ತ್ವರಿತವಾಗಿರಿ. ಅದನ್ನು ಮಾಡಲು ಅಂದಿನ ದಿನದ ಸಾಯಂಕಾಲದವರೆಗೆ ಕಾಯಬೇಡಿ. ಬೆಳಿಗ್ಗೆ ನಿನ್ನ ಪಾದಕ್ಕೆ ಮುಳ್ಳು ಚುಚ್ಚಿದರೆ, ನೀನು ಅದನ್ನು ಕೂಡಲೇ ತೆಗೆಯುತ್ತೀಯೇ ಹೊರತು ಸಂಜೆಯವರೆಗೆ ಕಾಯುವುದಿಲ್ಲ. ನೀನು ನಿನ್ನ ಸಂಗಾತಿಗೆ ಬೇಸರಪಡಿಸಿದ್ದರೆ, ನೀನು ಅವನು/ಅವಳಿಗೆ ಮುಳ್ಳಿನಿಂದ ಚುಚ್ಚಿದ್ದೀಯೆ ಎಂದು ಅರ್ಥ, ಅದನ್ನು ಕೂಡಲೇ ತೆಗೆದುಬಿಡು. ತಕ್ಷಣವೇ ಕ್ಷಮೆ ಕೇಳು ಹಾಗೂ ಕೂಡಲೇ ಕ್ಷಮಿಸಲು ತ್ವರಿತನಾಗು.

3. ಪ್ರೀತಿಯು ತನ್ನ ಸಂಗಾತಿಯೊಡಗೂಡಿ ಕೆಲಸ ಮಾಡಲು ಕಾತರಿಸುತ್ತದೆ, ಒಂಟಿಯಾಗಿ ಅಲ್ಲ.

ಏದೇನಿನ ತೋಟದಲ್ಲಿ ಹವ್ವಳು, "ನಾನು ನಿರ್ಧಾರ ತೆಗೆದುಕೊಳ್ಳುವ ಮೊದಲು ನನ್ನ ಗಂಡನೊಡನೆ ಮೊದಲು ಚರ್ಚಿಸುತ್ತೇನೆ" ಎಂದು, ಸೈತಾನನು ಶೋಧಿಸಲು ಬಂದಾಗ ಹೇಳಿದ್ದರೆ, ಮನುಷ್ಯನ ಚರಿತ್ರೆಯು ಎಷ್ಟು ವಿಭಿನ್ನವಾಗುತ್ತಿತ್ತು? ಪ್ರಪಂಚದಲ್ಲಿನ ಎಲ್ಲಾ ಸಮಸ್ಯೆಗಳು ಬಂದುದರ ಕಾರಣವೇನೆಂದರೆ, ಒಬ್ಬ ಹೆಂಗಸು, ತಾನು ನಿರ್ಧಾರ ತೆಗೆದುಕೊಳ್ಳುವ ಮುನ್ನ ಚರ್ಚಿಸಲು ಒಬ್ಬ ಸಂಗಾತಿಯನ್ನು ದೇವರು ಕೊಟ್ಟಿದ್ದರೂ ಸಹ ಅದನ್ನು ಕಡೆಗಣಿಸಿ, ತಾನೇ ಸ್ವತ: ನಿರ್ಧಾರ ತೆಗೆದುಕೊಂಡದ್ದರಿಂದ ಎಂಬುದನ್ನು ನೆನಪಿಡಿ. ನಿಜವಾದ ಪ್ರೀತಿ ಯಾವತ್ತೂ ಜೊತೆಯಾಗಿ ಕೆಲಸಮಾಡುತ್ತದೆ. ಯಾವಾಗಲೂ ಇಬ್ಬರು, ಒಬ್ಬನಿಗಿಂತ ಉತ್ತಮ.