WFTW Body: 

ಮಲಾಕಿಯನ ಗ್ರಂಥದ (ಮಲಾ. 1:11) ಪ್ರವಾದನೆಯಲ್ಲಿ ಹೇಳಿರುವಂತೆ, ಇಂದಿನ ಹೊಸ ಒಡಂಬಡಿಕೆಯ ಅವಧಿಯಲ್ಲಿ ನಮ್ಮ ಕರ್ತನು ಬಯಸುವುದು ಏನೆಂದರೆ, ಎಲ್ಲೆಲ್ಲೂ - ಪ್ರತಿಯೊಂದು ದೇಶದಲ್ಲಿ, ಪೂರ್ವದಿಂದ ಪಶ್ಚಿಮದ ವರೆಗೆ - "ನಾಡಿನ ಉದ್ದಗಲವೂ ಒಂದು ಶುದ್ಧವಾದ ಸಾಕ್ಷಿ" ಇರಬೇಕೆಂದು. ಬೆಂಗಳೂರಿನಲ್ಲಿ ಕರ್ತನು ನಮ್ಮ ಸಭೆಯನ್ನು 1975ನೇ ಇಸವಿಯಲ್ಲಿ ಆರಂಭಿಸಿದಾಗ, ಈ ವಚನವನ್ನು ನಮಗೆ ನಮ್ಮ ಗುರಿಯಾಗಿ ನೀಡಿದನು. ಸೈತಾನನ ಮುಖ್ಯ ಗುರಿ "ಒಂದು ಆತ್ಮಿಕ ಸಭೆಯ ಸಾಕ್ಷಿಯನ್ನು ಕೆಡಿಸುವುದು" ಆಗಿರುತ್ತದೆಯೇ ಹೊರತು, "ಆ ಸಭೆಗೆ ಬರುವ ಜನರ ಸಂಖ್ಯೆ ಹೆಚ್ಚದಂತೆ ತಡೆಯುವುದು" ಆಗಿರುವುದಿಲ್ಲ. ಇಂತಹ ಆತ್ಮಿಕ ಸಭೆಗೆ ಜನರು ಹೆಚ್ಚು ಹೆಚ್ಚಾಗಿ ಸೇರಿಕೊಂಡಾಗ ಸೈತಾನನ ಯೋಜನೆ ಸಫಲವಾಗುವ ಸಾಧ್ಯತೆ ಹೆಚ್ಚುತ್ತದೆ, ಏಕೆಂದರೆ ಆಗ ಆತನು ಪ್ರಾಪಂಚಿಕ ಮನಸ್ಸುಳ್ಳ ವಿಶ್ವಾಸಿಗಳ ಮೂಲಕ ಹೆಚ್ಚು ಸುಲಭವಾಗಿ ಆ ಸಭೆಯ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸಿ, ಅದರ ಸಾಕ್ಷಿಯನ್ನು ಕೆಡಿಸಬಹುದು.

ಯಾವುದೇ ಸಭೆಯನ್ನು ಕರ್ತನಿಗಾಗಿ ಶುದ್ಧವಾಗಿ ಉಳಿಸಿಕೊಳ್ಳಲು ಶ್ರಮಿಸಿ ಹೋರಾಡಬೇಕಾಗುತ್ತದೆ. ಸಭೆಯ ಆರಂಭ ಉತ್ತಮವಾಗಿದ್ದು, ಮೆಲ್ಲಮೆಲ್ಲನೆ ಗುಣಮಟ್ಟದ ಮೇಲಿನ ಹಿಡಿತ ಸಡಿಲಗೊಂಡು, ಕ್ರಮೇಣವಾಗಿ ಅದು ಒಂದು ಸತ್ತ ಸಭೆಯಾಗಿ ಅವನತಿಗೊಳ್ಳಲು ಹೆಚ್ಚು ಸಮಯ ಬೇಕಾಗುವುದಿಲ್ಲ. ನಮಲ್ಲಿ ಇದರ ಕುರಿತಾಗಿ ಆತ್ಮಿಕ ಎಚ್ಚರಿಕೆ ಇರಬೇಕು ಮತ್ತು ನಾವು ಸೈತಾನನ ಕುತಂತ್ರಗಳನ್ನು ಅರಿತುಕೊಳ್ಳಬೇಕು. ನಮ್ಮಲ್ಲಿ ಈ ಜಾಗರೂಕತೆ ಮತ್ತು ಸೈತಾನನ ಉಪಾಯಗಳ ಅರಿವು ಹರಿತಗೊಳ್ಳುವುದಕ್ಕಾಗಿ, ನಾವು ಮೊದಲು "ಸ್ವತಃ ನಮ್ಮ ಆತ್ಮಿಕ ಜೀವಿತದ ವಿಷಯದಲ್ಲಿ ಕಾಳಜಿ ವಹಿಸಬೇಕಾಗುತ್ತದೆ". ಪ್ರಾಪಂಚಿಕ ಜನರು ನಮ್ಮ ಸಭಾಕೂಟಗಳಿಗೆ ಬರುವುದನ್ನು ತಡೆಯಲು ಆಗುವುದಿಲ್ಲ. ಸ್ವತಃ ಯೇಸುವಿನ 12 ಮಂದಿಯ"ಸಭೆಯಲ್ಲಿ" ಒಬ್ಬ ಇಸ್ಕಾರಿಯೋತ ಯೂದನಿದ್ದನು. ಕೊರಿಂಥದಲ್ಲಿ ಪೌಲನು ನೆಟ್ಟ ಸಭೆಯಲ್ಲಿ ಪ್ರಾಪಂಚಿಕ ಬುದ್ಧಿಯುಳ್ಳ ಹಲವರು ಇದ್ದರು. ನಮ್ಮ ಸಭೆಗಳಲ್ಲೂ ಸಹ ಪ್ರಾಪಂಚಿಕ ಜನರು ಇರಬಹುದು. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ನಾವು ಜಾಗ್ರತೆ ವಹಿಸಬೇಕಾದ ವಿಷಯ, "ಸಭೆಯ ನಾಯಕತ್ವವು ಯಾವಾಗಲೂ ಆತ್ಮಿಕ ಮನುಷ್ಯರ ಕೈಯಲ್ಲಿ ಇದೆಯೆಂದು" ಖಚಿತ ಪಡಿಸಿಕೊಳ್ಳಬೇಕು. ಅದಲ್ಲದೆ, "ಸಭೆಯು ಯಾವಾಗಲೂ ಶುದ್ಧವಾದ, ಹೊಸ ಓಡಂಬಡಿಕೆಯ ಸಂದೇಶವನ್ನು ಘೋಷಿಸುತ್ತದೆ", ಎಂದೂ ಸಹ ಖಚಿತ ಪಡಿಸಿಕೊಳ್ಳಬೇಕು.

ಪೌಲನು ತಿಮೊಥೆಯನಿಗೆ (1 ತಿಮೊ. 4:15,16), "ಮೊದಲು ನಿನ್ನ ವಿಷಯದಲ್ಲಿ ಎಚ್ಚರಿಕೆಯಾಗಿರು," ಎಂದು ಹೇಳಿದನು. ಇಂತಹ ಪ್ರಯತ್ನದ ಮೂಲಕ, "ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ, ತಮ್ಮನ್ನು ಶುಚಿ ಮಾಡಿಕೊಳ್ಳುವುದರಲ್ಲಿ ಯಥಾರ್ಥರಾಗಿ ದೇವಭಯದಿಂದ ಕೂಡಿದವರು" (2 ಕೊರಿ. 7:1) ಶತ್ರುವಿನ ಕುತಂತ್ರಗಳ ವಿಷಯದಲ್ಲಿ ಆತ್ಮಿಕ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳುತ್ತಾರೆ. ನಮಗೆ ಇದಕ್ಕೆ ಹೊರತಾಗಿ ಬೇರೆ ಮಾರ್ಗವಿಲ್ಲ. ದೇವರ ವಾಕ್ಯದ ಸಿದ್ಧಾಂತಗಳ ಉತ್ತಮ ಜ್ಞಾನ, ವಾಕ್ಚಾತುರ್ಯ ಮತ್ತು ಆತ್ಮಿಕ ವರಗಳು, ಇವೆಲ್ಲವೂ ಸಹ ಶತ್ರುವಿನ ಕುತಂತ್ರವನ್ನು ತೋರಿಸುವುದರಲ್ಲಿ ಉಪಯೋಗಕ್ಕೆ ಬರುವುದಿಲ್ಲ, ಏಕೆಂದರೆ ನಮ್ಮ ಹೋರಾಟವು ರಕ್ತ ಮಾಂಸವುಳ್ಳ ಮನುಷ್ಯರ ವಿರುದ್ಧ ಅಲ್ಲ, ಅಥವಾ ಮಾನಸಿಕ ಬಲಶಾಲಿಗಳ ವಿರುದ್ಧವೂ ಅಲ್ಲ, ಆದರೆ ಅದು ವಂಚನೆಗೆ ಒಳಗಾಗುವವರನ್ನು ವಂಚಿಸಲು ಕಾದು ನಿಂತಿರುವ ಕೆಟ್ಟ ದುರಾತ್ಮಗಳ ಸೇನೆಯ ವಿರುದ್ಧವಾಗಿ ಆಗಿರುತ್ತದೆ.

ಯೇಸುವು ಹೇಳಿದಂತೆ, ಆತನು ಆತ್ಮಿಕ ಮರಣದ ಶಕ್ತಿಗಳು ಸೋಲಿಸಲಾರದಂತ ಒಂದು ಸಭೆಯನ್ನು ಕಟ್ಟಲಿದ್ದಾನೆ (ಮತ್ತಾ. 16:18). ಇಂತಹ ಒಂದು ಸಭೆಯನ್ನು ಹೇಗೆ ಕಟ್ಟಬೇಕೆಂದು ಕರ್ತನೊಬ್ಬನೇ ಬಲ್ಲನು. ನಾವು ಇದನ್ನು ಕಟ್ಟಲಾರೆವು. ನಾವು ಹೆಚ್ಚೆಂದರೆ, ಆತನ ಚಿತ್ತದ ಪ್ರಕಾರ ಆತನು ಬಳಸಬಹುದಾದ ಸಾಧನಗಳು ಮಾತ್ರ ಆಗಬಹುದು. ಅದಾಗ್ಯೂ, ಆ ಸಭೆಯ ಆಡಳಿತವು ಆತನ ಭುಜದ ಮೇಲೆ ಮಾತ್ರ ನೆಲೆಗೊಳ್ಳಬೇಕು (ಯೆಶಾ. 9:6). ನಾವು ಇದನ್ನು ಎಂದಿಗೂ ಮರೆಯಬಾರದು. ಕೀರ್ತನೆಯಲ್ಲಿ ಹಾಡಿರುವಂತೆ, ಕರ್ತನು ಸಭೆಯನ್ನು ಕಟ್ಟದಿದ್ದರೆ, ನಾವು ಎಷ್ಟು ಶ್ರಮಿಸಿದರೂ ವ್ಯರ್ಥ (ಕೀರ್ತ. 127:1). ಜನರು ಯಾವುದೇ ಸ್ಥಳದಲ್ಲಿ ಸಭೆಯನ್ನು ಸ್ವತಃ ತಾವು ಕಟ್ಟುತ್ತೇವೆಂದು ಅಂದುಕೊಂಡರೆ, ಅವರು ಅರಿಯದೆ ನಬೂಕದ್ನೆಚ್ಚರನ ಸಂಗಾತಿಗಳಾಗಿ, "ಇಗೋ, ನನ್ನ ಬಲದಿಂದ ನಾನು ಕಟ್ಟಿರುವ ಬಾಬೆಲ್ ಪಟ್ಟಣ ಇದಲ್ಲವೇ?" ಎಂದು ಹೇಳುವವರು ಆಗುತ್ತಾರೆ (ದಾನಿಯೇಲನು4:30). ಇಂತಹ ಗರ್ವವು ಒಂದು ಪ್ರಾಪಂಚಿಕವಾದ, ಬಾಬೆಲನ್ನು ಪ್ರತಿಬಿಂಬಿಸುವ "ಸಭೆ"ಯನ್ನು ಮಾತ್ರ ಸೃಷ್ಟಿಸಬಹುದು (ಪ್ರಕಟನೆ17:5).

ದೇವರಿಗೆ ದೀನತೆಯುಳ್ಳ ನಾಯಕರು ಬೇಕಾಗಿದ್ದಾರೆ. ದೇವರಿಗೆ ಮೊದಲು ದೇವರ ರಾಜ್ಯಕ್ಕಾಗಿ ತವಕಪಡುವ ಜನರೂ ಸಹ ಬೇಕಾಗಿದ್ದಾರೆ - ಅಂದರೆ, ಹೇಗೆ ನೋಹನಿಗೆ ನಾವೆಯನ್ನು ಕಟ್ಟುವದು ಅತ್ಯಂತ ಆದ್ಯತೆಯ ಕಾರ್ಯವಾಗಿತ್ತೋ, ಹಾಗೆ ಸಭೆಯನ್ನು ಕಟ್ಟುವ ಕಾರ್ಯಕ್ಕೆ ಅತೀ ಹೆಚ್ಚಿನ ಆದ್ಯತೆ ನೀಡುವಂಥ ಜನರು. ಕ್ರಿಸ್ತನು ಸಭೆಯನ್ನು ಪ್ರೀತಿಸಿದನು ಮತ್ತು ತನ್ನನ್ನು ಅದಕ್ಕೆ ಒಪ್ಪಿಸಿಕೊಟ್ಟನು (ಎಫೆ. 5:25,26). ನಾವು ಸಭೆಯನ್ನು ಪ್ರೀತಿಸಿದರೆ, ನಾವೂ ಸಹ ಅದಕ್ಕೆ ನಮ್ಮನ್ನು ಮತ್ತು ನಮ್ಮಲ್ಲಿರುವ ಎಲ್ಲವನ್ನೂ ಸಂಪೂರ್ಣವಾಗಿ ಒಪ್ಪಿಸಿಕೊಡುತ್ತೇವೆ. ಅವರವರ ಪ್ರಾಪಂಚಿಕ ನೌಕರಿಗಳು ಸ್ಥಳೀಯ ಸಭೆಯ ನಿರ್ಮಾಣಕ್ಕಿಂತ ಹೆಚ್ಚಿನ ಮಹತ್ವದ್ದೆಂದು ತಿಳಿಯುವ ಜನರು, ಮತ್ತೊಂದು ಬಾಬೆಲಿನ ಹೊರತಾಗಿ ಇನ್ನೇನನ್ನೂ ಕಟ್ಟಲಾರರು. ಇದರ ಅರ್ಥ ನಾವು ನಮ್ಮ ನೌಕರಿಗಳನ್ನು ಬಿಟ್ಟುಬಿಡಬೇಕು ಎಂದಲ್ಲ. ಅದು ಸರಿಯಲ್ಲ. ಇಂದಿನ ದಿನಗಳಲ್ಲಿ ಅಪೊಸ್ತಲ ಪೌಲನಂತೆ "ಹಣಕಾಸಿನ ವಿಷಯದಲ್ಲಿ ನಾವು ಸ್ವಾವಲಂಬಿಗಳು ಆಗಿರುವುದು ಬಹಳ ಶ್ರೇಷ್ಠವಾದದ್ದು", ಏಕೆಂದರೆ ಅನ್ಯಜನರು ಕ್ರೈಸ್ತ ಕಾರ್ಯಕರ್ತರು ಎಲ್ಲಾ ಕಾರ್ಯಗಳನ್ನು ಹಣಕ್ಕಾಗಿ ಮಾಡುತ್ತಾರೆ ಎಂದು ಹೇಳುವ ದೂಷಣೆಯ ವಿರುದ್ಧವಾಗಿ ಇದು ಒಂದು ಒಳ್ಳೆಯ ಸಾಕ್ಷಿ ಆಗಿರುತ್ತದೆ. ಅದರೆ ನಾವು ಲೌಕಿಕ ನೌಕರಿಗಳಲ್ಲಿ ತೊಡಗಿದ್ದರೂ, ನಮ್ಮ ಹೃದಯದ ಆಲೋಚನೆಗಳಲ್ಲಿ ದೇವರ ರಾಜ್ಯವು ಎಲ್ಲಕ್ಕೂ ಮೇಲಿನ ಸ್ಥಾನದಲ್ಲಿ ಇರಬೇಕು.

ದೇವರು ಸಭೆಯ ನಿರ್ಮಾಣ ಕಾರ್ಯದಲ್ಲಿ ನಮ್ಮನ್ನು ಬೆಂಬಲಿಸುವುದಕ್ಕೆ ಮೊದಲು, ನಮ್ಮ ಹೃದಯದ ಅಲೋಚನೆಗಳಲ್ಲಿ ಮತ್ತು ನಮ್ಮ ಜೀವನದಲ್ಲಿ ನಾವು ಪ್ರಥಮ ಆದ್ಯತೆ ಆತನ ಸಭೆಗೆ ನೀಡಿದ್ದೇವೋ ಎಂಬುದನ್ನು ಪರೀಕ್ಷಿಸುತ್ತಾರೆ.

ನಾವು ನಮ್ಮ ಸಂಖ್ಯೆಯನ್ನು ಹೆಚ್ಚಿಸುವುದರಲ್ಲಿ - ವಿಶ್ವಾಸಿಗಳ ಸಂಖ್ಯೆ ಅಥವಾ ಸಭೆಗಳ ಸಂಖ್ಯೆ - ಎಂದಿಗೂ ಆಸಕ್ತಿ ಇರಿಸಬಾರದು. ನಮ್ಮ ಕರ್ತನಿಗಾಗಿ ಒಂದು ಶುದ್ಧವಾದ ಸಾಕ್ಷಿ ನಮ್ಮ ಏಕೈಕ ಧ್ಯೇಯವಾಗಿರಬೇಕು. ಸ್ವತಃ ದೇವರು ಸಹ ಇದರಲ್ಲೇ ಆಸಕ್ತರಾಗಿದ್ದಾರೆ. ಯೇಸುವು ನಮಗೆ ಕಲಿಸಿದ ವಿಷಯ ಏನೆಂದರೆ, ಯಾವಾಗಲೂ ನಮ್ಮ ಮೊದಲ ಪ್ರಾರ್ಥನೆ, "ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ," ಎಂದು ಆಗಿರಬೇಕೇ ಹೊರತು, "ನಮ್ಮ ಸಂಖ್ಯೆಯನ್ನು ಹೆಚ್ಚಿಸು," ಎಂದಲ್ಲ. ಒಂದು ಸ್ಥಳದಲ್ಲಿ ಒಂದು ಅಶುದ್ಧವಾದ ಸಭೆ ಇರುವುದಕ್ಕಿಂತ, ಯಾವ ಸಭೆಯೂ ಇಲ್ಲದಿರುವದು ಎಷ್ಟೋ ಉತ್ತಮವಾದದ್ದು - ಏಕೆಂದರೆ ಅಂತಹ ಅಶುದ್ಧ ಸಭೆಯು ಕ್ರಿಸ್ತನಿಗೆ ಒಂದು ಕೆಟ್ಟ ಸಾಕ್ಷಿಯಾಗಿದೆ.