ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ತಿಳಿಯುವುದು
WFTW Body: 

ನಿಮಗೆ ದೇವರು ಮಾಡಿರುವ ಎಲ್ಲಾ ಉಪಕಾರಗಳಿಗೆ ಸೂಕ್ತವಾದ ಪ್ರತಿಕ್ರಿಯೆಯನ್ನು ನೀವು ಹೇಗೆ ತೋರಿಸಬಹುದು? ನೀವು ಕೇವಲ ಮಾತುಗಳಲ್ಲಿ ದೇವರಿಗೆ ಕೃತಜ್ಞತೆ ಸಲ್ಲಿಸಿದರೆ ಸಾಲದು. ಈ ಪ್ರಶ್ನೆಗೆ ಉತ್ತರ ’ರೋಮಾ. 12'ನೇ ಅಧ್ಯಾಯದಲ್ಲಿ (ಸಂಪೂರ್ಣ ಅಧ್ಯಾಯ) ಸಿಗುತ್ತದೆ. ನೀವು "ದೇವರ ಕನಿಕರವನ್ನು ನೆನಪಿಸಿಕೊಂಡು" ಮಾಡಬೇಕಾದ ಕಾರ್ಯಗಳು ಇವುಗಳು:

1. ಎಲ್ಲಕ್ಕೂ ಮೊದಲು, ನಿಮ್ಮ ದೇಹವನ್ನು ಒಂದು ಸಜೀವ ಯಜ್ಞವಾಗಿ ದೇವರಿಗೆ ಮೀಸಲಾಗಿ ಇರಿಸಿರಿ (’ರೋಮಾ. 12:1'). "ಯಜ್ಞ" ಎಂಬ ಪದವು, ನೀವು ನಿಮ್ಮ ದೇಹವನ್ನು ಕರ್ತನಿಗೆ ಕಾಣಿಕೆಯಾಗಿ ಸಮರ್ಪಿಸುವುದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ, ಎಂಬುದನ್ನು ಸೂಚಿಸುತ್ತದೆ. ಅದಕ್ಕಾಗಿ ನೀವು ಯಾವುದನ್ನೋ ತ್ಯಜಿಸ ಬೇಕಾಗುತ್ತದೆ - ಅದೇನೆಂದರೆ, ನಿಮ್ಮ ದೇಹವನ್ನು ಉಪಯೋಗಿಸಿಕೊಳ್ಳಲು ಬಯಸುವ ನಿಮ್ಮ ಬಲಿಷ್ಠವಾದ ಸ್ವೇಚ್ಛಾಭಾವವನ್ನು - ಅಂದರೆ, ನಿಮ್ಮ ಸ್ವಂತ ಸುಖಭೋಗಕ್ಕಾಗಿ ಕಣ್ಣುಗಳು, ಕೈಗಳು, ನಾಲಿಗೆ ಮತ್ತು ನಿಮ್ಮ ಚಿಂತನೆಗಳು ಹಾಗೂ ದುರಾಶೆಗಳು, ಇತ್ಯಾದಿಗಳನ್ನು ಬಳಸಿಕೊಳ್ಳುವ ಸ್ವಭಾವವನ್ನು ಬಿಟ್ಟುಬಿಡಬೇಕಾಗುತ್ತದೆ.

2. ನಿಮ್ಮ ಮನಸ್ಸು ನೂತನ ಸ್ವರೂಪಕ್ಕೆ ಬದಲಾಗಲಿಕ್ಕೆ ಅದನ್ನು ಒಪ್ಪಿಸಿ ಕೊಡುವುದು (’ರೋಮಾ. 12:2) - ಅಂದರೆ, ಜನರನ್ನು ಮತ್ತು ಸನ್ನಿವೇಶಗಳನ್ನು ನೋಡುವಾಗ ದೇವರ ದೃಷ್ಟಿಯನ್ನು ಇರಿಸಿಕೊಳ್ಳುವುದು. ನೀವು ಇದಕ್ಕಾಗಿ ನಿಮ್ಮನ್ನೇ ಶುದ್ಧೀಕರಿಸಿಕೊಳ್ಳುವುದು ಅವಶ್ಯ - ನೀವು ಹುಡುಗಿಯರನ್ನು ನೋಡುವ ದೃಷ್ಟಿಯಲ್ಲಿ ಇರುವ ಕಲ್ಮಶದಿಂದ, ನಿಮಗೆ ಕೇಡು ಗೈದಿರುವ ಜನರ ಬಗ್ಗೆ ನಿಮ್ಮಲ್ಲಿರುವ ಕಹಿಭಾವನೆಯಿಂದ, ನಿಮಗೆ ಇಷ್ಟವಾದ ಜನರು ಮತ್ತು ಇಷ್ಟವಿಲ್ಲದ ಜನರ ನಡುವೆ ಭೇದಭಾವ ಮಾಡುವುದರಿಂದ, ಕಷ್ಟಕರ ಸನ್ನಿವೇಶಗಳಲ್ಲಿ ಅಥವಾ ಭವಿಷ್ಯದ ವಿಚಾರವಾಗಿ ನಿಮ್ಮ "ಅವಿಶ್ವಾಸ" (ನಂಬಿಕೆ ಇಲ್ಲದಿರುವುದು), "ಆತಂಕ" ಮತ್ತು "ಭಯ" ಇವನ್ನೆಲ್ಲಾ ತ್ಯಜಿಸುವುದು. ಯಾವಾಗಲೂ ನಿಮ್ಮನ್ನು ಹೀಗೆ ಪ್ರಶ್ನಿಸಿಕೊಳ್ಳಿರಿ, "ಈ ವ್ಯಕ್ತಿಯನ್ನು ಅಥವಾ ಈ ಸನ್ನಿವೇಶವನ್ನು ದೇವರು ಹೇಗೆ ನೋಡುತ್ತಾರೆ?" ಮತ್ತು ದೇವರ ದೃಷ್ಟಿಗೆ ಹೊಂದಿಕೆಯಾಗದ ನಿಮ್ಮ ಪ್ರತಿಯೊಂದು ದೃಷ್ಟಿಕೋನವನ್ನು ತೆಗೆದುಹಾಕಿರಿ.

3. ನಿಮ್ಮ ಸ್ವಂತ ಯೋಗ್ಯತೆಯ ಬಗ್ಗೆ ಅತಿಯಾಗಿ ಯೋಚಿಸದಿರಿ (’ರೋಮಾ. 12:3'). ನಿಮ್ಮ ಆತ್ಮಿಕ ಬಲದ ನಿಜವಾದ ಅಳತೆಗೋಲು ಇದು: ನಿಮ್ಮಲ್ಲಿ ಎಷ್ಟು ಬಲವಾದ "ನಂಬಿಕೆ" ಇದೆ, ಎನ್ನುವಂಥದ್ದು - ನಿಮ್ಮ ’ಜ್ಞಾನ’ ಅಥವಾ ’ಉತ್ಸಾಹ’ ಎಷ್ಟು ಹೆಚ್ಚಾಗಿದೆ, ಎನ್ನುವಂಥದ್ದು ಅಲ್ಲ.

4. ದೇವರು ನಿಮಗೆ ಯಾವುದೋ ವರಗಳನ್ನು ಹಾಗೂ ವಿಶೇಷ ಪ್ರತಿಭೆಗಳನ್ನು ಕೊಟ್ಟಿದ್ದರೆ, ನಿಮ್ಮ ಸೇವೆಯನ್ನು ಪೂರೈಸಲು ಅವುಗಳನ್ನು ಬಳಸಿಕೊಂಡು, ಕ್ರಿಸ್ತನ ದೇಹವನ್ನು ಬಲಪಡಿಸಿರಿ (’ ರೋಮಾ. 12:4-8'). ಒಂದೇ ತಲಾಂತನ್ನು ಹೊಂದಿದ ಕೆಲಸದಾಳು ಅದನ್ನು ಬಚ್ಚಿಟ್ಟಂತೆ, ಕೊಡಲ್ಪಟ್ಟದ್ದನ್ನು ನೆಲದೊಳಗೆ ಹುಗಿದು (ಲೌಕಿಕ ವಿಷಯಗಳಿಗಾಗಿ ಬಳಸಿ) ಬಚ್ಚಿಡಬೇಡಿರಿ. ಕರ್ತನ ಸೇವೆಯಲ್ಲಿ ಶ್ರದ್ಧೆ ಮತ್ತು ಆಸಕ್ತಿ ಇರಲಿ (’ ರೋಮಾ. 12:11'), ಮತ್ತು ಬೇಸರಗೊಳ್ಳದೆ ಹೆಚ್ಚಾಗಿ ಪ್ರಾರ್ಥಿಸಿರಿ (= ದೇವರ ಮಾತನ್ನು ಕೇಳಿರಿ ಮತ್ತು ಅವರೊಂದಿಗೆ ಮಾತನಾಡಿರಿ) (’ ರೋಮಾ. 12:12').

5. ಕೆಟ್ಟತನವನ್ನು ದ್ವೇಷಿಸಿರಿ, ಮತ್ತು ಒಳ್ಳೆಯದನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ (’ ರೋಮಾ. 12:9'). ಈ ಎರಡನೆಯ ವಿಷಯಕ್ಕೆ ಗಮನ ಕೊಟ್ಟಾಗ, ಮೊದಲನೆಯದನ್ನು ಮಾಡುವುದು ನಿಮಗೆ ಹೆಚ್ಚು ಸುಲಭವಾಗುತ್ತದೆ.

6. ಎಲ್ಲಾ ಸಹೋದರರ ಮೇಲೆ ನಿಷ್ಕಪಟ ಪ್ರೀತಿ ಮತ್ತು ಗೌರವ ಇರಲಿ - ಏಕೆಂದರೆ, ಅವರು ಯೇಸು ಕ್ರಿಸ್ತನ ತಮ್ಮಂದಿರು ಆಗಿದ್ದಾರೆ (’ ರೋಮಾ. 12:9,10'). ಅವಶ್ಯಕತೆಗೆ ತಕ್ಕಂತೆ ಅವರಿಗೆ ಸಹಾಯಮಾಡಿರಿ (’ ರೋಮಾ. 12:13'). ಅವರು ಸಂತೋಷಿಸುವಾಗ ನೀವೂ ಹರ್ಷಿಸಿರಿ ಮತ್ತು ಅವರು ಅಳುವಾಗ ನೀವೂ ಜೊತೆಗೆ ದುಃಖಿಸಿರಿ (’ ರೋಮಾ. 12:15'). ನಿಮ್ಮ ನಡತೆಯಲ್ಲಿ ದೊಡ್ಡಸ್ತಿಕೆ ಬೇಡ - ಕ್ರಿಸ್ತನ ದೇಹಕ್ಕೆ ಸೇರಿದ ಬಡವರು ಹಾಗೂ ಹೆಚ್ಚು ವರಗಳನ್ನು ಪಡೆಯದೇ ಇರುವವರೊಂದಿಗೆ ವಿಶೇಷವಾಗಿ ದೀನತೆಯಿಂದ ನಡೆದುಕೊಳ್ಳಿರಿ (’ ರೋಮಾ. 12:16').

7. ಎಲ್ಲಾ ಜನರನ್ನು, ಮುಖ್ಯವಾಗಿ ನಿಮ್ಮೊಂದಿಗೆ ಕೆಟ್ಟದಾಗಿ ನಡೆಯುವವರನ್ನು, ಪ್ರೀತಿಸಿರಿ ಮತ್ತು ಆಶೀರ್ವದಿಸಿರಿ (’ ರೋಮಾ. 12:14, 17-21'). ಸಾಧ್ಯವಾದಷ್ಟು ಮಟ್ಟಿಗೆ ಎಲ್ಲರೊಂದಿಗೆ ಸಮಾಧಾನದಿಂದಿರಿ. ಎಂದಿಗೂ ಮುಯ್ಯಿಗೆ ಮುಯ್ಯಿ ತೀರಿಸುವ ಯೋಚನೆ ಮಾಡಬೇಡಿರಿ ಅಥವಾ ನಿಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡವರಿಗೆ ಕೆಟ್ಟ ಪ್ರತಿಫಲ ಸಿಗಬೇಕೆಂಬ ಯೋಚನೆ ನಿಮಗೆ ಬರದಿರಲಿ. ಅವರಿಗೆ ಒಳ್ಳೆಯದನ್ನು ಮಾಡಿರಿ ಮತ್ತು ಆ ಮೂಲಕ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸಿರಿ. ಈ ಲೋಕದಲ್ಲಿ ಬಹಳಷ್ಟು ಜನ ’ಕೆಟ್ಟದ್ದಕ್ಕೆ ಅದಕ್ಕಿಂತ ಹೆಚ್ಚಿನ ಕೆಟ್ಟತನದಿಂದ ಪ್ರತ್ಯುತ್ತರ ನೀಡಲು’ ಪ್ರಯತ್ನಿಸುತ್ತಾರೆ. ಆದರೆ ಕೆಟ್ಟತನವನ್ನು ಕೆಟ್ಟತನವು ಎಂದಿಗೂ ಜಯಿಸಲಾರದು. ಒಳ್ಳೇತನ ಮಾತ್ರವೇ ಕೆಟ್ಟತನವನ್ನು ಜಯಸಲು ಸಾಧ್ಯವಿದೆ, ಏಕೆಂದರೆ ’ಒಳ್ಳೇತನವು ಕೆಟ್ಟತನಕ್ಕಿಂತ ಹೆಚ್ಚು ಬಲಶಾಲಿಯಾಗಿದೆ’. ಯೇಸುವು ಕಲ್ವಾರಿಯಲ್ಲಿ ಇದನ್ನೇ ತೋರಿಸಿಕೊಟ್ಟನು. ದೇವರು ನಿಮಗೆ ಕೊಡುವಂತ ಸಂಕಟಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳಿರಿ ಮತ್ತು ’ಇವೆಲ್ಲವು ನಿಮ್ಮನ್ನು ಯೇಸುವಿನ ಸಾರೂಪ್ಯಕ್ಕೆ ಬದಲಾಯಿಸಲು ಕೊಡಲ್ಪಟ್ಟಿವೆ’, ಎಂಬ ನಿರೀಕ್ಷೆಯಿಂದ ಉಲ್ಲಾಸಪಡಿರಿ (’ ರೋಮಾ. 12:12').

ನಾವು ಇವೆಲ್ಲವುಗಳನ್ನು ಮಾಡುವ ಮೂಲಕ, ದೇವರು ನಮಗೆ ಮಾಡಿರುವ ಅತಿಶಯವಾದ ಉಪಕಾರಗಳಿಗಾಗಿಯೂ, ಮತ್ತು ನಮ್ಮನ್ನು ಪದೇ ಪದೇ ಕ್ಷಮಿಸಿ ನಮಗೆ ತೋರಿಸಿರುವ ಅಪಾರ ಕರುಣೆಗಾಗಿಯೂ ನಾವು ನಿಜವಾಗಿಯೂ ಕೃತಜ್ಞರಾಗಿದ್ದೇವೆ, ಎಂಬುದನ್ನು ದೇವರಿಗೆ ರುಜುವಾತು ಪಡಿಸುತ್ತೇವೆ.