WFTW Body: 

1993ನೇ ಇಸವಿಯ ಆಗಸ್ಟ್ ತಿಂಗಳಿನಲ್ಲಿ ಒಂದು ದಿನ, ನಾನು ನನ್ನ ಚಿಕ್ಕ ದ್ವಿಚಕ್ರ ವಾಹನದಿಂದ ಕೆಡವಲ್ಪಟ್ಟು ರೈಲು ಹಳಿಗಳ ಮೇಲೆ ಬಿದ್ದಾಗ, ದೇವರು ನನ್ನ ಜೀವವನ್ನು ಕಾಪಾಡಿದರು. ಆ ದಿನ ನಡೆದದ್ದು ಏನೆಂದರೆ, ರಸ್ತೆಯು ರೈಲು ಹಳಿಗಳನ್ನು ದಾಟುವ ಜಾಗದಲ್ಲಿ ರೈಲ್ವೇಗೇಟನ್ನು ನಿರ್ವಹಿಸುವುದಕ್ಕೆ ಒಬ್ಬ ಹೊಸಬನನ್ನು ನೇಮಿಸಿದ್ದರು ಮತ್ತು ಆತನಿಗೆ ಅಲ್ಲಿದ್ದ ಅಡ್ಡಗಂಬವನ್ನು ಹೇಗೆ ನಿಯಂತ್ರಿಸಬೇಕೆಂಬ ಅನುಭವವಿಲ್ಲದ ಕಾರಣ, ನಾನು ರೈಲು ಹಳಿಗಳನ್ನು ದಾಟುತ್ತಿದ್ದಾಗ ಹಠಾತ್ತಾಗಿ ಅಡ್ಡಗಂಬವನ್ನು ಕೆಳಕ್ಕೆ ಇಳಿಸಿದನು ಮತ್ತು ಅದು ನನ್ನ ಎದೆಗೆ ಬಡಿದು ನಾನು ದ್ವಿಚಕ್ರ ವಾಹನದಿಂದ ಬಿದ್ದುಬಿಟ್ಟೆ. ನಾನು ಪ್ರಜ್ಞಾಹೀನನಾಗಿ ಸ್ವಲ್ಪ ಸಮಯ ರೈಲು ಹಳಿಗಳ ಮೇಲೆ ಬಿದ್ದಿದ್ದೆ. ಎಷ್ಟು ಸಮಯ ಬಿದ್ದಿದ್ದೆ ಎಂದು ನನಗೆ ತಿಳಿಯದು. ರೈಲುಗಾಡಿ ಬರುವದಕ್ಕೆ ಮೊದಲು ಯಾರೋ ನನ್ನನ್ನು ಪಕ್ಕಕ್ಕೆ ಎಳೆದು ಮಲಗಿಸಿದರು. ಈ ಅನುಭವದ ನಂತರ ಈಗ ನಾನು ಮರಣದಿಂದ ವಾಪಾಸು ಬಂದಿದ್ದೇನೆಂಬ ತಿಳುವಳಿಕೆ ನನ್ನಲ್ಲಿ ಉಂಟಾಗಿದೆ (ಏಕೆಂದರೆ ನಾನು ಬಿದ್ದಲ್ಲಿಯೇ ಸಾಯಬಹುದಾಗಿತ್ತು).

ಈ ಘಟನೆಯು ನಾನು ಇನ್ನು ಮುಂದೆ ಉಳಿದಿರುವ ನನ್ನ ಜೀವಿತಕ್ಕಾಗಿ ದೇವರಿಗೆ ಚಿರಋಣಿಯಾಗಿ ಇರಬೇಕೆಂದು ತಾಜಾವಾಗಿ ನೆನೆಪಿಸುವಂಥದ್ದಾಗಿತ್ತು. ನಾನು ಇಷ್ಟಪಟ್ಟಂತೆ ನನ್ನ ಸಮಯ ಅಥವಾ ಸಾಮರ್ಥ್ಯ ಅಥವಾ ಹಣವನ್ನು ಉಪಯೋಗಿಸುವುದು ಸರಿಯಲ್ಲ. ನಾನು ನನ್ನ ಸ್ವಂತ ಇಷ್ಟದ ಪ್ರಕಾರ ಪುಸ್ತಕಗಳನ್ನು ಓದಬಾರದು. ನನಗೆ ಇಷ್ಟ ಬಂದಂತೆ ಮಾತನಾಡುವುದು ಸರಿಯಲ್ಲ. ಯಾವುದು ದೇವರನ್ನು ಮಹಿಮೆಪಡಿಸುತ್ತದೆ ಎಂಬುದರ ಮೂಲಕ ಎಲ್ಲವನ್ನೂ ನಿರ್ಧರಿಸಬೇಕು. ಅಂತಹ ಜೀವನವು ಒಂದು ಪ್ರಯಾಸಕರ ಜೀವನವಾಗಿರುವುದಿಲ್ಲ (ಸೈತಾನನು ನಮ್ಮಲ್ಲಿ ಈ ಯೋಚನೆಯನ್ನು ಹುಟ್ಟಿಸಲು ಪ್ರಯತ್ನಿಸುತ್ತಾನೆ), ಅದಕ್ಕೆ ಬದಲಾಗಿ ಯಾರಾದರೂ ಬದುಕಬಹುದಾದ ಅತ್ಯಂತ ಭವ್ಯ ಜೀವನವಾಗಿರುತ್ತದೆ - ಏಕೆಂದರೆ ನಮ್ಮ ಕರ್ತರು ಹೀಗೆ ಜೀವಿಸಿದರು. ನೀವು ಸಹ ರಸ್ತೆಯಲ್ಲಿ ಹೋಗುವಾಗ ಇದೇ ರೀತಿಯ ಮಾರಣಾಂತಿಕ ಅಪಘಾತಗಳ ಅನುಭವಗಳನ್ನು ಹೊಂದಿದ್ದೀರಿ. ಆದರೆ ದೇವದೂತರು ನಿಮ್ಮನ್ನು ರಕ್ಷಿಸಿದರು. ಹಾಗಾಗಿ ನಿಮಗೂ ದೇವರಿಗೆ ಉಪಕಾರವನ್ನು ಸಮರ್ಪಿಸುವ ಈ ಋಣಭಾರ ಇದೆ. ನಮ್ಮ ಜೀವಗಳನ್ನು ಕಾಪಾಡಿದ ಕರ್ತರನ್ನು ಸ್ತುತಿಸಿರಿ. ನಾವು ಸತ್ತವರೊಳಗಿಂದ ಎಬ್ಬಿಸಿದವರಂತೆ ಬದುಕೋಣ.

ಆ ಅಪಘಾತದಲ್ಲಿ ಉಳುಕಿದ್ದ ನನ್ನ ಕೈ ಮತ್ತು ಭುಜವು ಮೂರು ವಾರಗಳಲ್ಲಿ 95%ರಷ್ಟು ಸುಧಾರಿಸಿ ಸಹಜ ಸ್ಥಿತಿಗೆ ಬಂದವು. ಅದು ಒಂದು ಅದ್ಭುತವಾಗಿತ್ತು, ಮತ್ತು ಅದಕ್ಕಾಗಿ ನಾನು ದೇವರಿಗೆ ಸ್ತೋತ್ರ ಸಲ್ಲಿಸುವವನಾಗಿದ್ದೇನೆ. ಆ ಮೂರು ವಾರಗಳಲ್ಲಿ ನಾನು ಕಲಿತ ವಿಷಯಗಳಲ್ಲಿ ಒಂದು ಏನೆಂದರೆ, ಜೀವನದ ಸಾಮಾನ್ಯ ಸಂಗತಿಗಳನ್ನು - ಕೈಗಳನ್ನು ಎತ್ತಿ ದೇವರಿಗೆ ಸ್ತೋತ್ರ ಮಾಡುವ ಸಾಮರ್ಥ್ಯವನ್ನು ಸಹ ಲಘುವಾಗಿ ತೆಗೆದುಕೊಳ್ಳಬಾರದು, ಏಕೆಂದರೆ ಆ 3 ವಾರಗಳಲ್ಲಿ ನನಗೆ ಕೈಗಳನ್ನು ಎತ್ತಲು ಸಾಧ್ಯವಾಗಲಿಲ್ಲ. ನನ್ನ 54 ವರ್ಷಗಳ ಜೀವಿತದಲ್ಲಿ ಮೊದಲನೇ ಬಾರಿ, ನಾನು ದೇವರಿಗೆ ಸ್ತೋತ್ರ ಮಾಡುವಾಗ ನನ್ನ ಎರಡು ಕೈಗಳನ್ನು ಎತ್ತುವ ಸುಯೋಗಕ್ಕಾಗಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದೆನು. ಅಲ್ಲಿಯ ವರೆಗೆ ನಾನು ಈ ಸಾಮರ್ಥ್ಯವನ್ನು ಲಘುವಾಗಿ ತೆಗೆದುಕೊಂಡಿದ್ದೆ. ಇದರ ನಂತರ ನನ್ನ ದೇಹದ ಇತರ ಹಲವು ಅಂಗಗಳ ಉಪಯೋಗದ ಬಗ್ಗೆ - ನನ್ನ ಕಣ್ಣುಗಳು, ಕಿವಿಗಳು ಮತ್ತು ನಾಲಿಗೆ, ಇತ್ಯಾದಿಗಳಿಗಾಗಿ ನಾನು ದೇವರಿಗೆ ಆಭಾರಿಯಾಗಿದ್ದೇನೆ

ನಾವು ಎಲ್ಲಾ ವಿಷಯಗಳಲ್ಲೂ ದೇವರಿಗೆ ಕೃತಜ್ಞರಾಗಿ ಇರುವುದನ್ನು ಕಲಿತುಕೊಳ್ಳಬೇಕು. ಯೋನನು ಮೀನಿನ ಹೊಟ್ಟೆಯೊಳಗಿಂದ ಮಾಡಿದ ಪ್ರಾರ್ಥನೆಯು ನಮಗೆ ತಿಳುವಳಿಕೆಯನ್ನು ನೀಡುವಂಥದ್ದಾಗಿದೆ (’ಯೋನನು 2'ನೇ ಅಧ್ಯಾಯ). ಆ ಸ್ಥಳವು ಇಕ್ಕಟ್ಟಾಗಿತ್ತು, ಅವನ ಮೇಲೆ ಮೀನಿನ ಹೊಟ್ಟೆಯ ದ್ರವಗಳು ಸುರಿಯುತ್ತಿದ್ದವು, ಆದರೂ ಯೋನನು ತನ್ನನ್ನು ಅಲ್ಲಿ ಇರಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದನು. ಯೋನನು ಕರ್ತರನ್ನು ಸ್ತೋತ್ರ ಮಾಡಲು ಪ್ರಾರಂಭಿಸಿದ ನಂತರವೇ, ದೇವರು ಅವನನ್ನು ಒಣ ನೆಲದಲ್ಲಿ ಕಾರಿ ಬಿಡುವಂತೆ ಮೀನಿಗೆ ಅಪ್ಪಣೆ ಮಾಡಿದರು ಯೋನ. 2:9-10 ಗಮನವಿಟ್ಟು ಓದಿಕೊಳ್ಳಿರಿ).

ಹಾಗಾಗಿ ನಿಮ್ಮ ಮನೆಯ ವಿಚಾರದಲ್ಲಿ ಅಥವಾ ಊಟ-ತಿಂಡಿಯ ಬಗ್ಗೆ ಅಥವಾ ನಿಮ್ಮ ಪರಿಸ್ಥಿತಿಯ ಬಗ್ಗೆ ಗುಣಗುಟ್ಟುವುದನ್ನು ಸಂಪೂರ್ಣವಾಗಿ ಬಿಟ್ಟುಬಿಡಿರಿ. ಕೃತಜ್ಞತೆ ಉಳ್ಳವರಾಗಿರಿ. ಅನೇಕ ಮಕ್ಕಳು ತಮ್ಮ ಮನೆ ಬಿಟ್ಟು ವಿಶಾಲ ಜಗತ್ತನ್ನು ಪ್ರವೇಶಿಸಿ ಅಲ್ಲಿ ಕಷ್ಟವನ್ನು ಅನುಭವಿಸುವವರೆಗೆ, ತಮ್ಮ ತಂದೆತಾಯಿಯ ಬಗ್ಗೆ ಮತ್ತು ತಮ್ಮ ಮನೆಯ ವಿಚಾರವಾಗಿ ಕೃತಜ್ಞತೆಯನ್ನು ಹೊಂದಿರುವುದಿಲ್ಲ. ಕೃತಜ್ಞತಾಭಾವವು ನಿಮ್ಮನ್ನು ಅನೇಕ ರೀತಿಯ ಬಂಧನಗಳಿಂದ ಪಾರುಮಾಡಲು ಶಕ್ತವಾಗಿದೆ. ಇದೇ ಬಿಡುಗಡೆ ಯೋನನಿಗೆ ಸಿಕ್ಕಿತ್ತು.