WFTW Body: 

ಯೇಸುವು ನಮ್ಮ ಮುಂದೋಟಗಾರರಾಗಿದ್ದಾರೆ (ಪಂದ್ಯದಲ್ಲಿ ನಮ್ಮ ಮುಂದೆ ಓಡುವಾತನು), ಮತ್ತು ಅವರು ನಮಗಾಗಿ ದೇವರ ಸನ್ನಿಧಿಯನ್ನು ಪ್ರವೇಶಿಸುವಂತ ಒಂದು ಮಾರ್ಗವನ್ನು ಹಾಗೂ ಅಲ್ಲಿ ಸದಾ ಕಾಲ ವಾಸಿಸುವ ಅವಕಾಶವನ್ನು ತೆರೆದಿದ್ದಾರೆ. ಈ ಮಾರ್ಗವು, "ಜೀವವುಳ್ಳ ಹೊಸ ದಾರಿ"ಯೆಂದು ಕರೆಯಲ್ಪಟ್ಟಿದೆ (ಇಬ್ರಿ. 10:20). ಅಪೊಸ್ತಲ ಪೌಲನು ಇದನ್ನು "ಯಾವಾಗಲೂ ನಮ್ಮ ದೇಹದಲ್ಲಿ ಯೇಸುವಿನ ಮರಣಾವಸ್ಥೆಯನ್ನು ಅನುಭವಿಸುತ್ತಾ ಸಾಗುವುದು," ಎಂದು ವರ್ಣಿಸಿದ್ದಾನೆ (2 ಕೊರಿ. 4:10). ಒಮ್ಮೆ ಪೌಲನು ತನ್ನ ಸ್ವಂತ ಸಾಕ್ಷಿಯನ್ನು ನೀಡುತ್ತಾ, ತಾನು ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟಿದ್ದೇನೆ ಮತ್ತು ಈಗ ತಾನು ಜೀವಿಸುತ್ತಿಲ್ಲವೆಂದು ಹೇಳಿದನು. ಆತನು ಕಲ್ವಾರಿಯಲ್ಲಿ ಮರಣ ಹೊಂದಿದ್ದರಿಂದ, ಈಗ ಕ್ರಿಸ್ತನು ಆತನಲ್ಲಿ ಜೀವಿಸುವಾತನು ಆಗಿದ್ದನು. ಪೌಲನ ಅದ್ಭುತ ಜೀವನ ಮತ್ತು ಆತನು ದೇವರಿಗೆ ಉಪಯೋಗಿಯಾಗಿ ಜೀವಿಸಿದ್ದರ ರಹಸ್ಯ ಇದಾಗಿತ್ತು.

ಯೇಸುವು ಯಾವಾಗಲೂ ಶಿಲುಬೆಯ ದಾರಿಯಲ್ಲಿ ನಡೆದರು - ಅಂದರೆ ಸ್ವಾರ್ಥ ಜೀವಿತದ ಮರಣದ ದಾರಿ. ಯಾವುದೇ ಸನ್ನಿವೇಶದಲ್ಲಿ ಯೇಸುವು ತನ್ನ ಸ್ವಂತ ಸುಖವನ್ನು ನೋಡಿಕೊಳ್ಳಲೇ ಇಲ್ಲ (ರೋಮಾ. 15:3). ಎಲ್ಲಾ ಪಾಪದ ಸಾರಾಂಶ ಅಥವಾ ಮುಖ್ಯ ಲಕ್ಷಣ ನಮ್ಮನ್ನೇ ತೃಪ್ತಿ ಪಡಿಸಿಕೊಳ್ಳುವುದಾಗಿದೆ. ಪರಿಶುದ್ಧತೆಯ ಮುಖ್ಯ ಲಕ್ಷಣ ನಮ್ಮನ್ನು ನಿರಾಕರಿಸಿಕೊಳ್ಳುವುದಾಗಿದೆ. ಯೇಸುವು ಒಂದು ಸಲ ಹೇಳಿದ ಮಾತು ಯಾವನಾದರೂ ದಿನಾಲೂ ತನ್ನನ್ನು ನಿರಾಕರಿಸುವ ಮತ್ತು ದಿನಾಲೂ ತನ್ನ ಸ್ವೇಚ್ಛೆಯನ್ನು ಸಾಯಿಸುವ ದೃಢ ನಿಶ್ಚಯ ಮಾಡದೇ ಹೋದರೆ, ಆತನು ಅವರನ್ನು ಹಿಂಬಾಲಿಸಲಾರನು (ಲೂಕ. 9:23). ಇದು ನೇರವಾದ ಮಾತು. ನಾವು ದಿನಾಲೂ ನಮ್ಮನ್ನು ನಿರಾಕರಿಸದಿದ್ದರೆ, ನಾವು ಯೇಸುವನ್ನು ಹಿಂಬಾಲಿಸುವುದು ಒಂದು ಅಸಾಧ್ಯವಾದ ಮಾತಾಗಿದೆ. ನಾವು ಯೇಸುವಿನ ರಕ್ತದ ಮೂಲಕ ಪಾಪ ನಿವಾರಣೆ ಹೊಂದಿರಬಹುದು, ಪವಿತ್ರಾತ್ಮನನ್ನು ಸಹ ಪಡೆದಿರಬಹುದು; ಅದಲ್ಲದೆ ನಮ್ಮಲ್ಲಿ ದೇವರ ವಾಕ್ಯದ ಆಳವಾದ ಜ್ಞಾನವೂ ಇರಬಹುದು. ಆದರೆ ನಾವು ದಿನಾಲೂ ನಮ್ಮ ಪ್ರಾಣವನ್ನು ಮರಣಕ್ಕೆ ಒಪ್ಪಿಸದಿದ್ದರೆ, ನಾವು ಕರ್ತನಾದ ಯೇಸುವನ್ನು ಹಿಂಬಾಲಿಸಲಾರೆವು. ಇದು ಸ್ಪಷ್ಟವಾದ ಮಾತಾಗಿದೆ.

ಕೆಲವರು ಹೊಸ ಬಟ್ಟೆಯ ತುಂಡನ್ನು ಹಳೇ ವಸ್ತ್ರಕ್ಕೆ ತೇಪೆ ಹಚ್ಚಲು ಪ್ರಯತ್ನಿಸುತ್ತಾರೆಂದು ಯೇಸುವು ಒಂದು ಸಲ ಹೇಳಿದರು. ಹೊಸ ಬಟ್ಟೆಯ ತೇಪೆಯು ಹಳೆಯ ವಸ್ತ್ರವನ್ನು ಹರಿದು ಕೆಡಿಸುತ್ತದೆಂದು ಅವರು ತಿಳಿಸಿದರು. ಇಲ್ಲಿ ಮಾಡಬೇಕಾದದ್ದು ಏನೆಂದರೆ, ಹಳೆಯ ಬಟ್ಟೆಯನ್ನು ತೆಗೆದುಹಾಕಿ, ಒಂದು ಹೊಸ ಬಟ್ಟೆಯನ್ನು ಬಳಸುವುದು. ಇನ್ನೊಂದು ಸಾಮ್ಯದಲ್ಲಿ, ಒಳ್ಳೆಯ ಫಲವನ್ನು ಪಡೆಯಲು ಒಂದು ಒಳ್ಳೆಯ ಮರವನ್ನು ನೆಡಬೇಕು, ಎಂದು ಅವರು ಹೇಳಿದರು. ಕೆಟ್ಟ ಫಲವನ್ನು ಮಾತ್ರ ಕಿತ್ತುಹಾಕಿದರೆ ಉಪಯೋಗವಿಲ್ಲ.

ಇವೆಲ್ಲಾ ಸಾಮ್ಯಗಳಲ್ಲಿ ಮೂಲತಃ ಒಂದು ಪಾಠ ಸಿಗುತ್ತದೆ: ಪೂರ್ವ ಸ್ವಭಾವವನ್ನು ಸುಧಾರಿಸಲು ಆಗುವುದಿಲ್ಲ. ದೇವರು ನಮ್ಮ ಪೂರ್ವ ಸ್ವಭಾವವನ್ನು ಶಿಲುಬೆಗೆ ಹಾಕಿದ್ದಾರೆ (ರೋಮಾ. 6:6). ಹಳೆಯ ಸ್ವಭಾವದ ವಿಚಾರದಲ್ಲಿ ದೇವರ ನ್ಯಾಯತೀರ್ಪು ಸೂಕ್ತವೆಂದು ಈಗ ನಾವು ಒಪ್ಪಿಕೊಳ್ಳಬೇಕು, ಮತ್ತು ಆ ಹಳೆಯ ಸ್ವಭಾವವನ್ನು ತೆಗೆದು ಹಾಕಬೇಕು, ಮತ್ತು ಒಂದು ಹೊಸ ಸ್ವಭಾವವನ್ನು ಬೆಳೆಸಿಕೊಳ್ಳಬೇಕು.

ಶಿಲುಬೆಯ ಮಾರ್ಗ ಆತ್ಮಿಕ ಉನ್ನತಿಯ ಮಾರ್ಗವಾಗಿದೆ. ಕೋಪ, ಸಿಡುಕು, ಅಸಹನೆ, ಕಾಮುಕ ಆಲೋಚನೆಗಳು, ಅಪ್ರಾಮಾಣಿಕತೆ, ಅಸೂಯೆ, ದುರ್ಭಾವನೆ, ಕಹಿ ಭಾವನೆ, ಮತ್ತು ಹಣದಾಸೆ ಇಂತಹ ಪಾಪಗಳನ್ನು ಸೋಲಿಸಲು ನಿಮ್ಮಿಂದ ಆಗುತ್ತಿಲ್ಲವಾದರೆ, ಅದಕ್ಕೆ ಕಾರಣ: ನೀವು ಶಿಲುಬೆಯ ಮಾರ್ಗದಲ್ಲಿ ನಡೆಯುತ್ತಿಲ್ಲ.

ಒಬ್ಬ ಸತ್ತಿರುವ ವ್ಯಕ್ತಿಯು ತನ್ನ ಹಕ್ಕುಗಳನ್ನು ಸಮರ್ಥಿಸಿಕೊಳ್ಳುವುದಿಲ್ಲ. ಆತನು ಅದಕ್ಕಾಗಿ ಸೆಣಸಾಡುವುದಿಲ್ಲ. ಆತನು ಒಳ್ಳೆಯ ಹೆಸರು ಪಡೆಯಲು ತವಕಿಸುವುದಿಲ್ಲ. ಆತನಿಗೆ ಮುಯ್ಯಿ ತೀರಿಸುವ ಆಸೆ ಇರುವುದಿಲ್ಲ. ಆತನು ಯಾರನ್ನೂ ದ್ವೇಷಿಸುವುದಿಲ್ಲ ಅಥವಾ ಯಾರ ವಿರುದ್ಧವೂ ಕಹಿ ಭಾವನೆಯನ್ನು ಹೊಂದಿರುವುದಿಲ್ಲ. ಪ್ರಾಣವನ್ನು ಮರಣಕ್ಕೆ ಒಪ್ಪಿಸುವುದರ ಅರ್ಥ ಇದಾಗಿದೆ. ನಮ್ಮ ಆತ್ಮಿಕ ಬೆಳವಣಿಗೆಗಾಗಿ ದೇವರು ವ್ಯವಸ್ಥೆ ಗೊಳಿಸಿರುವ ಇತರ ಸಂಗತಿಗಳಂತೆ, ನಾವು ಆತ್ಮಿಕ ಮುನ್ನಡೆಯನ್ನು ಸಾಧಿಸುವುದಕ್ಕೆ ಈ ಶಿಲುಬೆಯ ಮಾರ್ಗವು ನಮಗೆ ಪ್ರತಿದಿನ ಬೇಕಾದದ್ದು ಆಗಿರುತ್ತದೆ.