WFTW Body: 

ಪೌಲನು ಸೆರೆಮನೆಯಿಂದ ಫಿಲಿಪ್ಪಿ ಪಟ್ಟಣದ ವಿಶ್ವಾಸಿಗಳಿಗೆ ಬರೆದ ಸಂಗತಿಗಳಲ್ಲಿ ಸಂತೋಷಿಸುವ ಮನೋಭಾವಕ್ಕೆ ಬಹಳ ಒತ್ತು ನೀಡಿರುವದು ನಮಗೆ ಒಂದು ಸವಾಲಾಗಿದೆ. ಎಲ್ಲವೂ ಅನುಕೂಲವಾಗಿರುವ ಪರಿಸ್ಥಿತಿಗಳಲ್ಲಿ ನಾವು ಸಂತೋಷದ ಕುರಿತಾಗಿ ಬೋಧನೆ ಮಾಡುವುದು ಸ್ವಾಭಾವಿಕ. ಆದರೆ ನಾವು ಕಷ್ಟಕರ ಪರಿಸ್ಥಿತಿಗಳಲ್ಲಿ ಇರುವಾಗ ಸಂತೋಷದ ಕುರಿತಾಗಿ ಬರೆಯುವುದು ಬೇರೊಂದು ಸಂಗತಿಯಾಗಿದೆ. ಫಿಲಿ. 1:4 ಹಾಗೂ ಫಿಲಿ. 4:4 ನಮಗೆ ಕಲಿಸಿಕೊಡುವುದು ಏನೆಂದರೆ, ಒಬ್ಬ ಕ್ರೈಸ್ತನು ಎಲ್ಲಾ ಪರಿಸ್ಥಿತಿಗಳಲ್ಲಿ ಸಂತೋಷವನ್ನು ಅನುಭವಿಸಲು ಸಾಧ್ಯವಾಗುತ್ತದೆ, ಎಂಬುದಾಗಿ. ಇದೇ ಕ್ರಿಸ್ತನ ಮನಸ್ಸು (ಮನೋಭಾವವು) ಆಗಿದೆ.

ಪೌಲನು ಫಿಲಿ. 1:6,7ರಲ್ಲಿ ಹೀಗೆನ್ನುತ್ತಾನೆ, "ಈ ಒಳ್ಳೇ ಕೆಲಸವನ್ನು ನಿಮ್ಮಲ್ಲಿ ಆರಂಭಿಸಿದಾತನು ಅದನ್ನು ನಡಿಸಿಕೊಂಡು, ಯೇಸು ಕ್ರಿಸ್ತನು ಬರುವ ದಿನದೊಳಗಾಗಿ ಸಿದ್ಧಿಗೆ ತರುವನೆಂದು ನನಗೆ ಭರವಸವುಂಟು. ನಿಮ್ಮ ಕುರಿತಾಗಿ ಈ ಅಭಿಪ್ರಾಯ ಉಳ್ಳವನಾಗಿ ಇರುವುದು ನ್ಯಾಯವಾಗಿದೆ, ... ಏಕೆಂದರೆ ನಾನು ನಿಮ್ಮನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ". ನೀವು ಒಬ್ಬ ಬೋಧಕರಾಗಿದ್ದು, ದೇವಜನರಿಗೆ ಒಂದು ಪ್ರವಾದನೆಯ ವಾಕ್ಯವನ್ನು ನೀಡಲು ಬಯಸಿದರೆ, ನೀವು ನಿಮ್ಮ ಹೃದಯದಲ್ಲಿ ಎರಡು ವಿಷಯಗಳನ್ನು ಯಾವಾಗಲೂ ಇರಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಹೃದಯದಲ್ಲಿ "ದೇವರ ವಾಕ್ಯ" ಹಾಗೂ "ದೇವಜನರು" ಇರಲೇ ಬೇಕು. ನೀವು ದೇವರ ವಾಕ್ಯವನ್ನು ಮಾತ್ರ ನಿಮ್ಮ ಹೃದಯದಲ್ಲಿ ಇರಿಸಿಕೊಂಡಿದ್ದು, ನಿಮ್ಮಲ್ಲಿ ದೇವರ ಜನರಿಗಾಗಿ ಪ್ರೀತಿ ಇಲ್ಲವಾದರೆ, ಆಗ ಅವರಿಗೆ ಕೊಡಲು ಸೂಕ್ತವಾದ ಒಂದು ವಾಕ್ಯವನ್ನು ದೇವರು ನಿಮಗೆ ನೀಡುವುದಿಲ್ಲ. ಅದೇ ರೀತಿಯಾಗಿ, ನೀವು ದೇವಜನರನ್ನು ಪ್ರೀತಿಸಿದರೂ, ನಿಮ್ಮ ಹೃದಯದಲ್ಲಿ ದೇವರ ವಾಕ್ಯವನ್ನು ತುಂಬಿಕೊಳ್ಳದಿದ್ದರೆ, ಆಗಲೂ ಸಹ ದೇವರು ಅವರಿಗಾಗಿ ಒಂದು ವಾಕ್ಯವನ್ನು ನಿಮಗೆ ನೀಡುವುದಿಲ್ಲ.

ಇಸ್ರಾಯೇಲ್ಯರ 12 ಕುಲಗಳ ಹೆಸರುಗಳು ಆರೋನನು ತನ್ನ ಎದೆಯ ಮೇಲೆ ಧರಿಸಿದ್ದ ಪದಕದ ಮೇಲೆ ಬರೆಯಲ್ಪಟ್ಟಿದ್ದಂತೆ, ಪೌಲನು ತನ್ನ ಹೃದಯದಲ್ಲಿ ವಿಶ್ವಾಸಿಗಳನ್ನು ಹೊತ್ತುಕೊಂಡಿದ್ದನು. ಪೌಲನು ಒಬ್ಬ ಮನುಷ್ಯಮಾತ್ರನು ಆಗಿದ್ದನು, ಮತ್ತು ಆತನು ತನ್ನ ಹೃದಯದಲ್ಲಿ ಇಡೀ ಲೋಕದ ಪ್ರತಿಯೊಬ್ಬ ವಿಶ್ವಾಸಿಯನ್ನು ಹೊತ್ತುಕೊಳ್ಳುವದು ಅಸಾಧ್ಯವಾಗಿತ್ತು. ದೇವರು ಆತನ ಜವಾಬ್ದಾರಿಯಾಗಿ ಒಪ್ಪಿಸಿಕೊಟ್ಟಿದ್ದ ಜನರನ್ನು ಮಾತ್ರ ಆತನು ಹೊತ್ತಿದ್ದನು. ನಮ್ಮ ಹೃದಯಗಳಲ್ಲಿ ದೇವರ ವಾಕ್ಯ ಮತ್ತು ನಾವು ನೋಡಿಕೊಳ್ಳುವಂತೆ ನಮಗೆ ದೇವರು ಒಪ್ಪಿಸಿಕೊಟ್ಟಿರುವ ಜನರು ಇದ್ದಾಗ, ನಾವು ನುಡಿಯುವ ಕೇವಲ ಒಂದು ವಾಕ್ಯವೂ ಸಹ ಅವರನ್ನು ಆಶೀರ್ವದಿಸುವದು.

ಪೌಲನು ಫಿಲಿ. 2:3ರಲ್ಲಿ ಫಿಲಿಪ್ಪಿಯ ವಿಶ್ವಾಸಿಗಳನ್ನು ಪ್ರೋತ್ಸಾಹಿಸುತ್ತಾ, ಸ್ವಾರ್ಥತೆ ಮತ್ತು ಒಣಹೆಮ್ಮೆಯಿಂದ ಯಾವುದನ್ನೂ ಮಾಡದಂತೆ ಕೇಳಿಕೊಳ್ಳುತ್ತಾನೆ. ಅಲ್ಲಿಂದ ಮುಂದುವರಿದು, ಪೌಲನು ಫಿಲಿ. 2:5ರಲ್ಲಿ, "ಯೇಸುವಿನಲ್ಲಿ ಇದ್ದಂಥ ಮನಸ್ಸು (ಮನೋಭಾವ) ನಿಮ್ಮಲ್ಲಿಯೂ ಇರಲಿ," ಎಂದು ಹೇಳುತ್ತಾನೆ. ಈ ಒಂದು ವಾಕ್ಯದ ಮಾರ್ಗದರ್ಶನದಿಂದ ನೀವು ಇಡೀ ಜೀವಿತವನ್ನು ಜೀವಿಸಬಹುದು. ಇದರ ಹೊರತಾಗಿ ನಿಮ್ಮ ಪರಿವರ್ತನೆಗೆ ಸತ್ಯವೇದದ ಬೇರೆ ಯಾವ ವಾಕ್ಯವೂ ಅವಶ್ಯವಿಲ್ಲ. ಪ್ರತಿಯೊಂದು ಸಂದರ್ಭದಲ್ಲಿ, "ನಾನು ಕ್ರಿಸ್ತನ ಮನೋಭಾವವನ್ನು ಇರಿಸಿಕೊಂಡಿದ್ದೇನೆಯೇ?" ಎಂದು ನಿಮ್ಮನ್ನೇ ಪ್ರಶ್ನಿಸಿಕೊಳ್ಳಿರಿ. ಹಿಂದೆ ನೀವು ಮಾಡಿರುವ ಕಾರ್ಯಗಳನ್ನು ಈ ರೀತಿಯಾಗಿ ಪ್ರಶ್ನಿಸಿ ತೀರ್ಪುಮಾಡಿರಿ: "ಆ ಸಂದರ್ಭದಲ್ಲಿ ನಾನು ಕ್ರಿಸ್ತನ ಮನೋಭಾವವನ್ನು ಇರಿಸಿಕೊಂಡಿದ್ದೆನೇ?"

ಫಿಲಿ. 3:8ರಲ್ಲಿ, "ಮನುಷ್ಯನ ನೀತಿವಂತಿಕೆಯೂ ಸೇರಿದಂತೆ" ಲೋಕದ ಪ್ರತಿಯೊಂದು ಸಂಗತಿಯೂ "ಕ್ರಿಸ್ತನಿಗೆ ಹೋಲಿಸಿದಾಗ" ಕೇವಲ ಕಸ ಮತ್ತು ಹೊಲಸಿನಂತೆ ಇದೆ, ಎಂದು ಪೌಲನು ಹೇಳಿದನು. ನೀವು ಇದನ್ನು ಅರ್ಥ ಮಾಡಿಕೊಂಡಿದ್ದೀರಾ? ಈ ಲೋಕದ ಸಕಲ ಸಂಪತ್ತು ಕ್ರಿಸ್ತನ ಹೋಲಿಕೆಯಲ್ಲಿ ಕಸವೆಂದು ನೀವು ತಿಳಿದಿದ್ದೀರಾ? ಮಾನವ ಮಾನ್ಯತೆ ಮತ್ತು ಮರ್ಯಾದೆಯೂ ಕ್ರಿಸ್ತನ ಹೋಲಿಕೆಯಲ್ಲಿ ಕಸವೆಂದು ನೀವು ಕಂಡಿದ್ದೀರಾ? ಲೋಕದ ಎಲ್ಲಾ ಸುಖಸೌಲಭ್ಯಗಳು ಕ್ರಿಸ್ತನ ಎದುರು ಯಾವ ಬೆಲೆಯೂ ಇಲ್ಲದ ಕಸವೆಂದು ನೀವು ಅರಿತಿದ್ದೀರಾ? ದೇವರ ಚಿತ್ತದಂತೆ ನಡೆಯುವುದು, ದೇವರು ನಿಮ್ಮನ್ನು ಕಳುಹಿಸುವ ಸ್ಥಳದಲ್ಲಿ ಇರುವುದು, ಕ್ರಿಸ್ತನ ಸಾರೂಪ್ಯದಲ್ಲಿ ಬೆಳೆಯುವುದು ಮತ್ತು ದೇವರು ಕೊಡುವ ಸೇವೆಯನ್ನು ಪೂರೈಸುವುದು - ನಿತ್ಯತ್ವದ ದೃಷ್ಟಿಕೋನದಲ್ಲಿ ಇವು ಮಾತ್ರವೇ ಮುಖ್ಯ ಸಂಗತಿಗಳಾಗಿವೆ. ಪೌಲನು ಮುಂದುವರಿದು ತನ್ನ ಜೀವನದ ಮಹತ್ವಾಕಾಂಕ್ಷೆಯನ್ನು ವಿವರಿಸುತ್ತಾನೆ. ಅದು ಒಬ್ಬ ದೊಡ್ಡ ಬೋಧಕನಾಗುವುದು ಅಥವಾ ಖ್ಯಾತ ವ್ಯಕ್ತಿ ಆಗುವುದು ಅಲ್ಲ. ಅವೆಲ್ಲವೂ ಆತನಿಗೆ ಹೊಲಸು ಕಸದಂತೆ ಆಗಿದ್ದವು. ಅವನಲ್ಲಿದ್ದ ತೀವ್ರಾಸಕ್ತಿ ಕ್ರಿಸ್ತನನ್ನು ಹೆಚ್ಚುಹೆಚ್ಚಾಗಿ ತಿಳಕೊಳ್ಳುವುದು, ಆತನ ಪುನರುತ್ಥಾನದ ಶಕ್ತಿಯನ್ನು ಚೆನ್ನಾಗಿ ತಿಳಕೊಂಡು, ಆತನು ಅನುಭವಿಸಿದ ಬಾಧೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವುದು ಆಗಿತ್ತು (ಫಿಲಿ. 3:10).

ಇದರ ನಂತರ ಪೌಲನು ಇನ್ನೊಂದು ದೊಡ್ಡ ಸವಾಲನ್ನು ಹಾಕುತ್ತಾನೆ: "ಯಾವ ಸಂಬಂಧವಾಗಿಯೂ ಚಿಂತೆ ಮಾಡಬೇಡಿರಿ" (ಫಿಲಿ. 4:6). ಇದು ನಾವು ಏರಬೇಕಾದ ಇನ್ನೊಂದು ಪರ್ವತ ಶಿಖರವಾಗಿದೆ. ನಮ್ಮೆಲ್ಲರಿಗೆ ಚಿಂತೆಯು ಬಹಳ ಸ್ವಾಭಾವಿಕವಾಗಿ ಬರುತ್ತದೆ. ತಿಂಗಳ ಕೊನೆಯಲ್ಲಿ ಖರ್ಚಿಗಾಗಿ ಸಾಕಷ್ಟು ಹಣ ಕೈಯಲ್ಲಿ ಇಲ್ಲದಿದ್ದಾಗ ಚೆಂತೆಯು ಕಾಡಿಸುತ್ತದೆ. ಮಕ್ಕಳು ಶಾಲೆಯಿಂದ ಬರುವುದು ವಿಳಂಬವಾದರೆ, ನೀವು ಚಿಂತಿಸಲು ಶುರು ಮಾಡುತ್ತೀರಿ. ನೀವು ಯೌವನ ಪ್ರಾಯದವರಾಗಿದ್ದರೆ, ವಯಸ್ಸು ಹೆಚ್ಚುತ್ತಿದ್ದಂತೆ ವಿವಾಹದ ಭರವಸೆ ಕಡಿಮೆಯಾದಾಗ ಚಿಂತೆಯು ಕಾಡಿಸಬಹುದು. ಅನೇಕ ಸಂಗತಿಗಳು ಚಿಂತೆಗೆ ಕಾರಣವಾಗಬಹುದು. ನಮ್ಮ ಈ ಲೋಕದ ಜೀವಿತದಲ್ಲಿ ಈ ಪರ್ವತದ ಶಿಖರವನ್ನು ಏರಲು ಆಗದಿರಬಹುದು. ಆದರೆ ನಾವು ಮೇಲೇರುತ್ತಾ ಹೋಗಬೇಕು, ಆಗ ದೇವರಲ್ಲಿ ಭರವಸೆ ಮತ್ತು ನಂಬಿಕೆ ನಮ್ಮಲ್ಲಿ ಹೆಚ್ಚುತ್ತವೆ; ಮತ್ತು ಯಾವುದೇ ಚಿಂತೆ ಕಳವಳವು ನಮ್ಮನ್ನು ಎದುರಿಸಿದಾಗ, ನಾವು ಅದನ್ನು ಕರ್ತನ ಬಳಿ ಪ್ರಾರ್ಥನೆ ಮತ್ತು ಕೃತಜ್ಞತಾ ಸ್ತುತಿಯೊಂದಿಗೆ ಒಯ್ಯುತ್ತೇವೆ.

ಪೌಲನು ಫಿಲಿಪ್ಪಿ ಪಟ್ಟಣದ ಕ್ರೈಸ್ತರಿಗೆ ಯಾವಾಗಲೂ ಮನಸ್ಸಿನಲ್ಲಿ ಶ್ರೇಷ್ಠವಾದ ಸಂಗತಿಗಳನ್ನು ಧ್ಯಾನಿಸುವಂತೆ ಪ್ರೋತ್ಸಾಹಿಸಿದನು (ಫಿಲಿ. 4:8). ಅದಲ್ಲದೆ ಪೌಲನು ತನ್ನ ಜೀವನದಲ್ಲಿ ಸಮೃದ್ಧಿ ಅಥವಾ ಕೊರತೆ ಕಂಡುಬಂದಾಗ, ಸರ್ವಜ್ಞಾನಿಯಾದ ದೇವರು ತನ್ನ ಪಾಲಿಗೆ ಏನನ್ನು ನೀಡಿದರೂ, ಅದರಲ್ಲಿ ಸಂತುಷ್ಟನಾಗಿರುವ ರಹಸ್ಯವನ್ನು ಕಲಿತುಕೊಂಡೆನು, ಎಂದು ನಮಗೆ ತಿಳಿಸುತ್ತಾನೆ (ಫಿಲಿ. 4:11,12). ಇದು ನಿಜವಾಗಿಯೂ ಒಂದು ರಹಸ್ಯವೇ ಆಗಿದೆ - ಏಕೆಂದರೆ ಹೆಚ್ಚಿನ ಕ್ರೈಸ್ತರಿಗೆ ಇದರ ಅರಿವು ಇರುವುದಿಲ್ಲ. ಇದರ ನಂತರ ಪೌಲನು ಹರ್ಷೋಲ್ಲಾಸದ ಒಂದು ಘೋಷಣೆಯನ್ನು ಮಾಡುತ್ತಾನೆ: "ನಾನು ನನ್ನನ್ನು ಬಲಪಡಿಸುವಾತನಲ್ಲಿ ಇದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ'' (ಫಿಲಿ. 4:13). ಕ್ರಿಸ್ತನು ನಮ್ಮನ್ನು ಬಲಪಡಿಸುತ್ತಿರುವಾಗ, ನಾವು ಯಾವಾಗಲೂ ಹರ್ಷಧ್ವನಿ ಗೈದು, ಚಿಂತೆಯನ್ನು ಬಿಟ್ಟುಬಿಡಲು ಸಾಧ್ಯವಾಗುತ್ತದೆ.