WFTW Body: 

1. ಯೇಸುವು ತನ್ನ ಎಲ್ಲಾ ಕಾರ್ಯಗಳಲ್ಲಿ ತನ್ನ ತಂದೆಯನ್ನು ಮಹಿಮೆ ಪಡಿಸಲು ಪ್ರಯತ್ನಿಸಿದರು (ಯೋಹಾ. 7:18)

ಯೇಸುವಿನ ಅತಿ ದೊಡ್ಡ ಆಕಾಂಕ್ಷೆ ಯಾವುದಾಗಿತ್ತು ಎಂದರೆ, ಅದು ಮಾನವ ಕುಲದ ಕಲ್ಯಾಣ ಆಗಿರಲಿಲ್ಲ (ಅದೊಂದು ಶ್ರೇಷ್ಠ ಉದ್ದೇಶವೇ ಆಗಿದ್ದರೂ ಸಹ), ಆದರೆ ಆತನ ಆಕಾಂಕ್ಷೆ ತನ್ನ ತಂದೆಯ ನಾಮವನ್ನು ಮಹಿಮೆ ಪಡಿಸುವದು ಆಗಿತ್ತು (ಯೋಹಾ. 17:4). ಆತನು ತನ್ನ ತಂದೆಯ ಸಮ್ಮುಖದಲ್ಲಿ ಜೀವಿಸಿದನು, ಮತ್ತು ಪ್ರತಿಯೊಂದು ಕಾರ್ಯದಲ್ಲಿ ಕೇವಲ ತನ್ನ ತಂದೆಯನ್ನು ಮೆಚ್ಚಿಸಲು ಬಯಸಿದನು. ಜನರಿಗೆ ಬೋಧಿಸುವಾಗ, ಆತನ ದೃಷ್ಟಿ ತನ್ನ ತಂದೆಯ ಮೇಲೆ ಇತ್ತೇ ಹೊರತಾಗಿ, ಮಾತನ್ನು ಆಲಿಸುತ್ತಿದ್ದ ಜನರ ಮೇಲೆ ಇರಲಿಲ್ಲ. ಆತನು ಮುಖ್ಯವಾಗಿ ತನ್ನ ತಂದೆಯ ಸೇವೆ ಮಾಡಿದನು, ಜನರ ಸೇವೆ ಅಲ್ಲ. ನಾವೂ ಸಹ ದೇವರನ್ನು ಹೀಗೆಯೇ ಸೇವೆ ಮಾಡಬೇಕು. ನಾವು ಕರೆಯಲ್ಪಟ್ಟಿರುವುದು ಮೊದಲನೆಯದಾಗಿ ಕ್ರೈಸ ಸಭೆಯ ಸೇವಕರಾಗಿ ಅಲ್ಲ, ಆದರೆ ಕರ್ತನ ಸೇವಕರಾಗಿ. ಕರ್ತನು ನಮಗೆ ಪ್ರಾರ್ಥಿಸುವಂತೆ ಆದೇಶಿಸಿ ನೀಡಿದ ಮೊದಲ ಪ್ರಾರ್ಥನೆ, "ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ", ಎಂಬುದಾಗಿದೆ. ಜನರ ಸೇವೆ ಮಾಡುವದು ನಮ್ಮ ಅಪೇಕ್ಷೆಯಾಗಿದ್ದರೆ, ಕೊನೆಗೆ ಮನುಷ್ಯರನ್ನು ಮೆಚ್ಚಿಸಲು ಪ್ರಯತ್ನಿಸುತ್ತೇವೆ, ಮತ್ತು ಒಳ್ಳೆಯ ಹೆಸರನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತೇವೆ.

2. ಯೇಸುವು ಸಭೆಗಾಗಿ ಎಲ್ಲವನ್ನೂ - ತನ್ನಲ್ಲಿದ್ದ ಪ್ರತಿಯೊಂದನ್ನೂ - ಬಿಟ್ಟುಕೊಟ್ಟರು

ಯೇಸುವು ಸಭೆಯ ಅಸ್ತಿವಾರ ಹಾಕುವ ಕಾರ್ಯಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿದ್ದರು. "ಕ್ರಿಸ್ತನು ಸಭೆಯನ್ನು ಪ್ರೀತಿಸಿದನು ಮತ್ತು ಅದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟನು" (ಎಫೆ. 5:25). ಯೆಶಾಯನ ಪ್ರವಾದನೆಯಲ್ಲಿ ಆತನ ಮರಣವು ಈ ರೀತಿಯಾಗಿ ವಿವರಿಸಲ್ಪಟ್ಟಿದೆ: "ಇವನು ತನ್ನ ಸ್ವಂತ ಹಿತಕ್ಕಾಗಿ ಮನ ಮರುಗದೆ ಜೀವಲೋಕದಿಂದ ಕೀಳಲ್ಪಟ್ಟನು (ಯೆಶಾ. 53:8 "Message Bible, ಭಾವಾನುವಾದ). ಇದನ್ನು ಯೋಚಿಸಿರಿ: ಆತನು ಜನ್ಮದಿನದಿಂದ ಸಾಯುವ ದಿನದ ವರೆಗೆ ತನ್ನ ಸುಖದ ಕುರಿತಾಗಿ ಒಂದೇ ಒಂದು ಯೋಚನೆಯನ್ನೂ ಮಾಡಲಿಲ್ಲ! ಆತನು ಸಭೆಗಾಗಿ ತನ್ನನ್ನೇ ಸಂಪೂರ್ಣವಾಗಿ ಒಪ್ಪಿಸಿಕೊಟ್ಟನು. ನಾವೂ ಸಹ ಇದೇ ಹಾದಿಯಲ್ಲಿ ನಡೆಯುವಂತೆ ಆತನು ಕರೆ ನೀಡಿದ್ದಾನೆ - ಮತ್ತು ಈ ಮಾರ್ಗದಲ್ಲಿ ನಡೆಯಲು ಸಿದ್ಧರಾಗಿರುವವರು ಮಾತ್ರ ಒಂದು ಹೊಸ ಒಡಂಬಡಿಕೆಯ ಸಭೆಯನ್ನು ಕಟ್ಟುತ್ತಾರೆ. ನಾವು ಇಂತಹ ಒಂದು ಸಭೆಯನ್ನು ಕಟ್ಟುವುದಕ್ಕಾಗಿ, ನಮ್ಮ ಜೀವನದಲ್ಲಿ ಅನೇಕ ಅನಾನುಕೂಲತೆಗಳನ್ನು ಅನುಭವಿಸಲು ಸಿದ್ಧರಾಗಿರಬೇಕು. ನಾವು ಸಹಿಸಬೇಕಾದದ್ದು ಏನೇನು ಎಂದರೆ, ನಮ್ಮ ದೈನಿಕ ದಿನಚರಿಯು ಅಸ್ತವ್ಯಸ್ತಗೊಳ್ಳುವಂಥದ್ದು, ಇತರರು ನಮ್ಮನ್ನು ತಪ್ಪಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳುವಂಥದ್ದು, ನಮ್ಮ ಲೌಕಿಕ ಸ್ವತ್ತುಗಳನ್ನು ಇತರರು ಬಳಸಿಕೊಳ್ಳುವಂಥದ್ದು, ವಿವಿಧ ಒತ್ತಡಗಳು ಬಂದಾಗ ಯಾವುದನ್ನೂ ವಿರೋಧಿಸದೆ ಸ್ವೀಕರಿಸುವಂಥದ್ದು!

3. ಯೇಸುವು ನಮ್ಮ ದುಃಖಗಳನ್ನು ತಾನು ಅನುಭವಿಸಿದರು

ಯೇಸುವು ತನ್ನನ್ನು ನಮ್ಮೊಂದಿಗೆ ಸಂಪೂರ್ಣವಾಗಿ ಗುರುತಿಸಿಕೊಂಡರು. ಆತನು ದೇವರ ಮಗನಾಗಿದ್ದರೂ, ನಮ್ಮ "ಸಹಾಯಕ"ನಾಗುವ ಮೊದಲು, ನಮ್ಮಂತೆ ಬಾಧೆಗಳನ್ನು ಅನುಭವಿಸಿ ವಿಧೇಯತೆಯನ್ನು ಕಲಿತು, ತಾನೂ ಒಂದು ಶಿಕ್ಷಣವನ್ನು ಪಡೆಯುವದು ಅವಶ್ಯವಾಗಿತ್ತು (ಇಬ್ರಿ. 2:17; ಇಬ್ರಿ. 5:8). ಇದರ ಮೂಲಕ ಆತನು ನಮಗಿಂತ ಮುಂದಾಗಿ ಹೋಗುವ "ಮುಂದೋಟಗಾರನು" ಆಗಿದ್ದಾನೆ (ಇಬ್ರಿಯ 6:20). ನಾವು ಬಾಧೆಗಳನ್ನು ಅನುಭವಿಸಿ, ನಮ್ಮ ಶೋಧನೆಗಳ ನಡುವೆ ವಿಧೇಯತೆಯನ್ನು ಕಲಿಯಲು ಸಿದ್ಧರಿಲ್ಲವಾದರೆ, ನಾವು ಇತರರಿಗೆ ಸಹಾಯ ಮಾಡಲು ಆಗುವುದಿಲ್ಲ. ನಮ್ಮ ಸಭೆಗಳಲ್ಲಿ ನಾವು ನಮ್ಮ ಸಹೋದರ-ಸಹೋದರಿಯರಿಗೆ "ಚಿಕ್ಕ ಮುಂದೋಟಗಾರರು" ಆಗುವುದಕ್ಕಾಗಿ ಕರೆಯಲ್ಪಟ್ಟಿದ್ದೇವೆ - ಕೇವಲ ಬೋಧಕರು ಆಗುವುದಕ್ಕಾಗಿ ಅಲ್ಲ. ಮತ್ತು ಇದಕ್ಕಾಗಿ ನಾವು ಅನೇಕ ಸಂಕಟಗಳನ್ನು ಮತ್ತು ಕಷ್ಟಕರ ಶೋಧನೆಗಳನ್ನು ದಾಟಿ ನಡೆಯಬೇಕಾಗುತ್ತದೆ, ಅಲ್ಲದೆ ಇಂತಹ ಎಲ್ಲಾ ಸನ್ನಿವೇಶಗಳಲ್ಲಿ ನಾವು ದೇವರ ಉತ್ತೇಜನ ಮತ್ತು ಬಲವನ್ನು ಅನುಭವಿಸಿ, ಇತರರಿಗೆ ನೀಡಬಹುದಾದ ಜೀವಕರ ಅನುಭವಗಳನ್ನು ಸಂಪಾದಿಸುತ್ತೇವೆ - ಆಗ ನಾವು ನೀಡುವ ಸಂದೇಶಗಳು ಕೇವಲ ದೇವರ ವಾಕ್ಯದ ಅಧ್ಯಯನದಿಂದ, ಅಥವಾ ಒಂದು ಪುಸ್ತಕದಿಂದ, ಅಥವಾ ನಾವು ಕೇಳಿಸಿಕೊಂಡ ಯಾವುದೋ ಒಂದು ಪ್ರಸಂಗದ ಮೂಲಕ ಬಂದಂಥದ್ದು ಆಗಿರುವುದಿಲ್ಲ (2 ಕೊರಿ. 1:4).