’ವಿಮೋಚನಕಾಂಡ 15 ನೇ ಅಧ್ಯಾಯ’ವು ಇಸ್ರಾಯೇಲ್ಯರು ದೇವರನ್ನು ಘನಪಡಿಸುವುದರೊಂದಿಗೆ ಪ್ರಾರಂಭವಾಗಿ, ಅವರು ದೇವರ ವಿರುದ್ಧ ಗುಣಗುಟ್ಟುವುದರೊಂದಿಗೆ ಮುಕ್ತಾಯವಾಗುತ್ತದೆ. ಅರಣ್ಯದಲ್ಲಿ ಇಸ್ರಾಯೇಲ್ಯರು ಅನೇಕ ಸಲ ಇದೇ ರೀತಿಯಾಗಿ ಮತ್ತೆ ಮತ್ತೆ ನಡೆದರು. ಗಣಿತಶಾಸ್ತ್ರದಲ್ಲಿ "ಸೈನ್ ವೇವ್" ಎಂದು ಕರೆಯಲಾಗುವ ತರಂಗವು ನಿರಂತರವಾಗಿ ಪ್ರದರ್ಶಿಸುವ ಏರಿಳಿತಗಳು, ಹೆಚ್ಚಿನ ವಿಶ್ವಾಸಿಗಳ ಜೀವಿತದ ಅತ್ಯುತ್ತಮ ನಿದರ್ಶನವಾಗಿದೆ - ಅವರಿಗೆ ಬೇಕಾದದ್ದು ದೊರಕಿದಾಗ ದೇವರಿಗೆ ಸ್ತೋತ್ರ ಸಲ್ಲಿಸುವುದು ಮತ್ತು ಅವರ ಜೀವಿತದಲ್ಲಿ ಏನಾದರೂ ಅಡಚಣೆ ಉಂಟಾದಾಗ ಗುಣುಗುಟ್ಟುವುದು, ಸಮಸ್ಯೆ ಬಗೆಹರಿದಾಗ ದೇವರಿಗೆ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸುವುದು, ಮತ್ತೆ ಇನ್ನೊಂದು ಸಮಸ್ಯೆ ಎದುರಾದಾಗ ದೇವರ ಬಗ್ಗೆ ಸಂದೇಹ ಪಡುವುದು. ಇದಕ್ಕೆ ಕಾರಣವೇನೆಂದರೆ, ಅನೇಕ ವಿಶ್ವಾಸಿಗಳು, ನಿಖರವಾಗಿ ಇಸ್ರಾಯೇಲ್ಯರಂತೆಯೇ, ನಂಬಿಕೆಯ ಮೂಲಕ ಜೀವಿಸುವುದಿಲ್ಲ ಮತ್ತು ತಮ್ಮ ದೃಷ್ಟಿಯ ಮೂಲಕ ಜೀವಿಸುತ್ತಾರೆ. ಭಾನುವಾರ ಬೆಳಿಗ್ಗೆ ಕೂಟಗಳಲ್ಲಿ ಗಟ್ಟಿಯಾಗಿ ದೇವರನ್ನು ಸ್ತುತಿಸುತ್ತಾರೆ (ಕೆಲವು ವೇಳೆ ಅನ್ಯಭಾಷೆಯಲ್ಲಿ). ಆದರೆ ಭಾನುವಾರ ಮಧ್ಯಾಹ್ನದಿಂದ ತಮ್ಮ ಮಾತೃಭಾಷೆಯಲ್ಲಿ ಅವರು ಆಡುವ ಮಾತುಗಳು ವ್ಯತ್ಯಾಸವಾಗಿರುತ್ತವೆ. ಆಫೀಸಿನಲ್ಲಾಗಲೀ ಮತ್ತು ಮನೆಗಳಲ್ಲಾಗಲೀ ಅವರ ಮಾತುಗಳು ಕೋಪದಿಂದಲೂ, ಗುಣಗುಟ್ಟುವಿಕೆಯಿಂದಲೂ, ಚಾಡಿ ಹೇಳುವುದರಿಂದಲೂ ತುಂಬಿರುತ್ತವೆ!! ನಂತರ ಮುಂದಿನ ಭಾನುವಾರ ಮತ್ತೊಮ್ಮೆ ಅವರ ಮಾತು "ಸೈನ್ ವೇವ್"ನಂತೆ ಮೇಲಕ್ಕೆ ಏರುತ್ತದೆ ಮತ್ತು ಅವರು ದೇವರನ್ನು ಸ್ತುತಿಸುತ್ತಾರೆ.
ಅದಾದ ನಂತರ, ಅವರ ಮಾತಿನ ತರಂಗವು ಮತ್ತೆ ಕೆಳಕ್ಕೆ ಇಳಿಯುತ್ತದೆ!! ದೇವರು ಹೊಸ ಒಡಂಬಡಿಕೆಯ ತನ್ನ ಮಕ್ಕಳು ಹೀಗೆ ಜೀವಿಸುವುದನ್ನು ನಿಶ್ಚಯವಾಗಿ ಉದ್ದೇಶಿಸಲಿಲ್ಲ. ಅನ್ಯಭಾಷೆಗಳಲ್ಲಿ ಮಾತನಾಡುವ ವರವನ್ನು ನೀಡುವ ಪವಿತ್ರಾತ್ಮನು, ಒಬ್ಬ ವ್ಯಕ್ತಿಯ ಮಾತೃಭಾಷೆಯ ಮಾತನ್ನು ನಿಯಂತ್ರಿಸಲು ಸಾಧ್ಯವಿಲ್ಲವೇ? ಖಂಡಿತವಾಗಿಯೂ ಆತನು ಅದನ್ನು ಮಾಡಲು ಶಕ್ತನಾಗಿದ್ದಾನೆ. ಸತ್ಯವೇದವು ಹೇಳುತ್ತದೆ, "ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ. ಯಾವಾಗಲೂ ಎಲ್ಲಾ ಕಾರ್ಯಗಳಿಗೋಸ್ಕರ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ತಂದೆಯಾದ ದೇವರಿಗೆ ಸ್ತೋತ್ರ ಮಾಡಿರಿ" (ಪಿಲಿಪ್ಪಿ 4:4, ಎಫೆ. 5:20).
ಹೊಸ ಒಡಂಬಡಿಕೆಯಲ್ಲಿ, ಎಲ್ಲಾ ಸಮಯದಲ್ಲೂ ಇದುವೇ ನಮಗಾಗಿ ದೇವರ ಚಿತ್ತವಾಗಿದೆ. ಮತ್ತು ಈ ಆಜ್ಞೆಗಳನ್ನು ಪಾಲಿಸಲು ನಮಗೆ ಸಹಾಯ ಮಾಡಲಿಕ್ಕೆಂದೇ ಪವಿತ್ರಾತ್ಮನನ್ನು ನಮಗೆ ಅನುಗ್ರಹಿಸಲಾಗಿದೆ. ಇದಲ್ಲದೆ, ನಾವು ನಂಬಿಕೆಯಿಂದ ಬದುಕಬೇಕು - ನಾವು ಎದುರಿಸುವ ಪ್ರತಿಯೊಂದು ಸಮಸ್ಯೆಗೂ ದೇವರು ಈಗಾಗಲೇ ಪರಿಹಾರವನ್ನು ಯೋಜಿಸಿದ್ದಾರೆಂದು ನಂಬಬೇಕು.
ಇಸ್ರಾಯೇಲ್ಯರು ಮೋಶೆಯನ್ನು ದೂರಿದಾಗ, ಅವನು ಕರ್ತರಿಗೆ ಮೊರೆಯಿಟ್ಟನು ಮತ್ತು ಕರ್ತರು ಅವನಿಗೆ, "ನಿನ್ನ ಸಮಸ್ಯೆಗೆ ಪರಿಹಾರ ಇಲ್ಲೇ, ನಿನ್ನ ಮುಂದೆಯೇ ಇದೆ," ಎಂದು ಹೇಳಿದರು (ವಿಮೋಚನಕಾಂಡ 15:25). ಕರ್ತರು ಅವನಿಗೆ ಒಂದು ಮರವನ್ನು ತೋರಿಸಿದರು. ಮೋಶೆಯು ಆ ಮರವನ್ನು ಕಡಿದು ನೀರಿಗೆ ಹಾಕಿದನು ಮತ್ತು ಕಹಿಯಾಗಿದ್ದ ನೀರು ಸಿಹಿಯಾಯಿತು.
"ನಂಬಿಕೆಯ ಮೂಲಕ ನಡೆಯುವುದೆಂದರೆ, ಇಂದು ಅನಿರೀಕ್ಷಿತವಾಗಿ ದೇವರನ್ನು ಆಶ್ಚರ್ಯಗೊಳಿಸುವ ಯಾವುದೇ ಸಮಸ್ಯೆಯು ಉದ್ಭವಿಸಲಾರದು, ಎಂದು ನಂಬುವುದು"
ಅರಣ್ಯದಲ್ಲಿ ಆ ಮರವನ್ನು ನೆಟ್ಟವರು ಯಾರು? ಮನುಷ್ಯನೋ ಅಥವಾ ದೇವರೋ? ನಿಸ್ಸಂದೇಹವಾಗಿ ದೇವರು! ಮನುಷ್ಯರು ಅರಣ್ಯದಲ್ಲಿ ಮರಗಳನ್ನು ನೆಡುವುದಿಲ್ಲ. ದೇವರು ಆ ಮರವನ್ನು ಹಲವು ವರ್ಷಗಳ ಹಿಂದೆಯೇ ’ಮಾರಾ’ ಎಂಬಲ್ಲಿ ನೆಟ್ಟಿದ್ದರು. ಏಕೆಂದರೆ ಅನೇಕ ವರ್ಷಗಳ ನಂತರ ತನ್ನ ಮಕ್ಕಳು ’ಮಾರಾ’ ಎಂಬ ಆ ಸ್ಥಳಕ್ಕೆ ಬರುವಾಗ ಅಲ್ಲಿ ನೀರು ಕಹಿಯಾಗಿರುತ್ತದೆಂದು ಅವರಿಗೆ ತಿಳಿದಿತ್ತು. ಆದ್ದರಿಂದ ಅವರು ನಿಜವಾಗಿಯೂ ಇಸ್ರಾಯೇಲ್ಯರ ಸಮಸ್ಯೆಗೆ ಹಲವು ವರ್ಷಗಳ ಮೊದಲೇ ಪರಿಹಾರವನ್ನು ಯೋಜಿಸಿದ್ದರು. ಅದೇ ದೇವರು ಸಮಸ್ಯೆಗಳು ನಿಮ್ಮನ್ನು ಎದುರಿಸುವ ಮೊದಲೇ, ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಯೋಜಿಸಿದ್ದಾರೆಂದು ನೀವು ಅರಿತಿದ್ದೀರಾ?
ನಂಬಿಕೆಯಿಂದ ನಡೆಯುವುದು ಎಂದರೆ ಈ ವಿಷಯವನ್ನು ನಂಬುವುದು. ಇಂದು ದೇವರನ್ನು ಆಶ್ಚರ್ಯಗೊಳಿಸುವ ಯಾವುದೇ ಸಮಸ್ಯೆಯು ಇದ್ದಕ್ಕಿದ್ದಂತೆ ಉದ್ಭವಿಸುವುದಿಲ್ಲ. ಸೈತಾನನು ನಮಗಾಗಿ ಯಾವ ಸಮಸ್ಯೆಗಳನ್ನು ಸಿದ್ಧಪಡಿಸುತ್ತಿದ್ದಾನೆಂದು ದೇವರು ಮೊದಲೇ ತಿಳಿದಿರುವುದಲ್ಲದೆ, ಅವೆಲ್ಲಕ್ಕೂ ಮುಂಚಿತವಾಗಿಯೇ ಪರಿಹಾರವನ್ನು ಸಹ ಇರಿಸಿದ್ದಾರೆ. ಆದ್ದರಿಂದ ನೀವು ಪ್ರತಿಯೊಂದು ಸಮಸ್ಯೆಯನ್ನು ಧೈರ್ಯದಿಂದ ಎದುರಿಸಬಹುದು.
ನಾನೊಬ್ಬ ವಿಶ್ವಾಸಿಯಾದ ನಂತರದ ಜೀವಿತದ 66 ವರ್ಷಗಳಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿದ ನಂತರ, ಇದು ಸತ್ಯವೆಂದು ನಾನು ಸಾಕ್ಷಿ ಹೇಳಬಲ್ಲೆ. ನಾನು ಇದು ವರೆಗೆ ಯಾವತ್ತೂ ದೇವರು ಪರಿಹಾರವನ್ನು ಯೋಜಿಸದಿರುವ ಒಂದು ಸಮಸ್ಯೆಯನ್ನೂ ಎದುರಿಸಿಲ್ಲ. ನಾನು ನನ್ನ ಜೀವನದಲ್ಲಿ "ಮಾರಾ"ಗಳನ್ನು ತಲುಪುವ ಬಹಳ ಹಿಂದೆಯೇ, ದೇವರು ನೀರನ್ನು ಸಿಹಿಗೊಳಿಸಲು ಮರಗಳ ಬೀಜವನ್ನು ಬಿತ್ತಿದ್ದರು. ನಮ್ಮ ಅದ್ಭುತಕರ, ಪ್ರೀತಿಯುಳ್ಳ ತಂದೆಯಲ್ಲಿ ನಂಬಿಕೆಯಿರಿಸಿ ನಡೆಯಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಅವರು ಯಾವಾಗಲೂ "ನಮಗಾಗಿ ಪ್ರೀತಿಯಿಂದ, ಮೌನವಾಗಿ ಯೋಜಿಸುತ್ತಿದ್ದಾರೆ" (ಚೆಫನ್ಯನು 3:17 - ಭಾವಾನುವಾದ), ಮತ್ತು ನೀವು ನಿರಂತರವಾಗಿ ನಿಮ್ಮ ಪ್ರತಿಯೊಂದು ಸಮಸ್ಯೆಯನ್ನು ಜಯಿಸುವಿರಿ. ಇನ್ನು ಮುಂದೆ ನಿಮ್ಮ ಬಾಯಲ್ಲಿ ಎಂದಿಗೂ ದೂರು, ಗೊಣಗಾಟ ಮತ್ತು ಕೋಪ ಕಂಡುಬರುವುದಿಲ್ಲ, ಆದರೆ ದೇವರಿಗೆ ಸ್ತುತಿ ಮತ್ತು ಕೃತಜ್ಞತೆ ಮಾತ್ರ ಕಂಡುಬರುತ್ತವೆ. ಆಮೆನ್.