WFTW Body: 

ಈಗ ನಾವು ವರ್ಷಾಂತ್ಯಕ್ಕೆ ತಲಪಿರುವಾಗ, ನಮ್ಮ ಜೀವನ ಹೇಗೆ ಸಾಗಿದೆಯೆಂದು ನಾವು ಪರೀಕ್ಷಿಸಿ ನೋಡುವುದು ಒಳ್ಳೆಯದು. ಪ್ರವಾದಿಯಾದ ಹಗ್ಗಾಯನು ಅವನ ಕಾಲದ ಜನರು, "ತಮ್ಮ ಜೀವನದ ರೀತಿ ಎಂಥದ್ದೆಂದು" ಗಮನಿಸಬೇಕೆಂದು ಒತ್ತಾಯಿಸಿದನು. ’ಹಗ್ಗಾ. 1:5,6' ಹೇಳುವಂತೆ, "ಸೇನಾಧೀಶ್ವರನಾದ ಕರ್ತನು ಹೀಗೆ ಹೇಳಿದ್ದಾನೆ, ’ನಿಮ್ಮ ಗತಿಯನ್ನು ಮನಸ್ಸಿಗೆ ತಂದುಕೊಳ್ಳಿರಿ. ನೀವು ಬಿತ್ತಿದ ಬೀಜವು ಬಹಳ, ತಂದ ಫಲವು ಸ್ವಲ್ಪ; ತಿನ್ನುತ್ತೀರಿ, ತೃಪ್ತಿಯಾಗದು, ಕುಡಿಯುತ್ತೀರಿ, ಆನಂದವಾಗದು; ಹೊದಿಯುತ್ತೀರಿ, ಬೆಚ್ಚಗಾಗದು; ಸಂಬಳಗಾರನು ಸಂಬಳ ಹಾಕುವ ಚೀಲವು ತೂತಿನದು.’" ಈ ಪ್ರಶ್ನೆಗಳನ್ನು ನಾವು ಸ್ವತಃ ನಮಗೆ ಹಾಕಿಕೊಳ್ಳಬಹುದು: ಕರ್ತನು ನಮಗೆ ನೀಡಿರುವ ಸವಾಲು ಇದು: "ನಿನ್ನ ಜೀವನದ ಸಂಗತಿಗಳನ್ನು ಗಮನಿಸಿ ನೋಡಿರುವೆಯಾ?"

ನೀವು ಒಳ್ಳೆಯ ಆತ್ಮಿಕ ಫಲವನ್ನು ಪಡೆಯುತ್ತಿದ್ದೀರಾ? ನೀವು ಬಹಳಷ್ಟು ಬೀಜ ಬಿತ್ತಿದ್ದೀರಿ, ಆದರೆ ಪಡೆದಿರುವ ಫಸಲು ಅಲ್ಪ. ನೀವು ಅನೇಕ ಕ್ರೈಸ್ತ ಕೂಟಗಳಿಗೆ ಹಾಜರಾಗಿದ್ದೀರಿ, ಹಲವಾರು ಕ್ರೈಸ್ತ ಪುಸ್ತಕಗಳನ್ನು ಓದಿದ್ದೀರಿ ಹಾಗೂ ಅನೇಕ ಕ್ರೈಸ್ತ ವೀಡಿಯೋ ಸಂದೇಶಗಳನ್ನು ನೋಡಿದ್ದೀರಿ, ಆದರೆ ಈ ದಿನ ನಿಮ್ಮ ಮನೆ ಒಂದು ದೈವಿಕ ಮನೆಯಾಗಿದೆಯೇ ಮತ್ತು ಶಾಂತಿ-ಸಮಾಧಾನ ನೆಲೆಸಿರುವ ಮನೆಯಾಗಿದೆಯೇ? ಸಾಮಾನ್ಯವಾಗಿ ಕಂಡುಬರುವ ಒಂದು ಸಮಸ್ಯೆ, ಗಂಡ ಮತ್ತು ಹೆಂಡತಿ ಧ್ವನಿ ಏರಿಸಿ ಮಾಡುವ ವಿವಾದಗಳನ್ನು ನಿಲ್ಲಿಸಿದ್ದೀರಾ? ಇಲ್ಲವಾದಲ್ಲಿ, ನೀವು ಬಹಳ ಬೀಜ ಬಿತ್ತಿದರೂ, ಪಡೆದಿರುವ ಫಸಲು ಕಡಿಮೆ. ನೀವು ಉಡುಪು ಧರಿಸಿದ್ದರೂ, ಅದು ಬೆಚ್ಚಗಾಗಿಲ್ಲ. ಬಹಳ ಹಣ ಸಂಪಾದಿಸಿದ್ದೀರಿ, ಆದರೆ ನಿಮ್ಮ ಜೇಬಿನಲ್ಲಿ ತೂತುಗಳಿವೆ, ಹಾಗಾಗಿ ಸಂಪಾದನೆಯ ಹೆಚ್ಚಿನ ಅಂಶ ಪೋಲಾಗಿ ಹೋಗಿದೆ.

ದೇವರು ಸರಿಪಡಿಸಲಾರದ್ದು ಯಾವುದೂ ಇಲ್ಲ - ನಾವು ಪದೇ ಪದೇ ಸೋತು, ಕರುಣಾಜನಕ ಸ್ಥಿತಿಗೆ ತಲಪಿದ್ದರೂ, ದೇವರು ನಮ್ಮನ್ನು ಅವರ ಪರಿಪೂರ್ಣ ಚಿತ್ತಕ್ಕೆ ಸೇರಿಸಲು ಶಕ್ತರಾಗಿದ್ದಾರೆ. ಆದರೆ ನಮ್ಮಲ್ಲಿ ನಂಬಿಕೆ ಇಲ್ಲದಿದ್ದಾಗ ಮಾತ್ರ ದೇವರು ಅದನ್ನು ಮಾಡಲಾರರು. ಅದನ್ನು ಮಾಡಲಿಕ್ಕೆ ದೇವರಿಗೆ ಸಾಧ್ಯವಾಗದೇ ಹೋಗುವುದು ಯಾವಾಗ ಅಂದರೆ, ದೇವರು ಮಾಡುತ್ತಾರೆಂಬ ಭರವಸೆ ನಿಮ್ಮಲ್ಲಿ ಇಲ್ಲದೆ, "ನಾನು ಲೆಕ್ಕವಿಲ್ಲದಷ್ಟು ಕಾರ್ಯಗಳನ್ನು ಕೆಡಿಸಿಕೊಂಡಿದ್ದೇನೆ. ಈಗ ದೇವರು ನನ್ನನ್ನು ಅವರ ಪರಿಪೂರ್ಣ ಯೋಜನೆಗೆ ಸೇರಿಸಲಾರರು" ಎಂದು ನೀವು ಹೇಳುವಾಗ; ಏಕೆಂದರೆ ಆಗ ನಿಮಗಾಗಿ ದೇವರು ಮಾಡುವ ಕಾರ್ಯದ ಬಗ್ಗೆ ನಿಮ್ಮಲ್ಲಿ ನಂಬಿಕೆ ಇಲ್ಲವಾಗಿದೆ. ಆದರೆ ದೇವರು ನಮಗಾಗಿ ಮಾಡಲಾರದ್ದು ಯಾವುದೂ ಇಲ್ಲವೆಂಬುದು ಯೇಸುವಿನ ಮಾತಾಗಿದೆ - ಆದರೆ ಒಂದು ವಿಷಯ, ಇದರ ಬಗ್ಗೆ ನಮ್ಮಲ್ಲಿ ನಂಬಿಕೆ ಇರಬೇಕು.

"ನೀವು ನಂಬಿದಂತೆ ನಿಮಗೆ ಆಗಲಿ," ಎನ್ನುವ ದೇವರ ನಿಯಮ ಎಲ್ಲಾ ಸಂಗತಿಗಳಿಗೆ ಅನ್ವಯಿಸುತ್ತದೆ (ಮತ್ತಾ. 9:29). ನಾವು ನಂಬಿದಂಥದ್ದು ನಮಗೆ ಸಿಗುತ್ತದೆ. ನಮಗಾಗಿ ದೇವರು ಯಾವುದೋ ಒಂದು ಕಾರ್ಯವನ್ನು ಮಾಡುವುದು ಅಸಾಧ್ಯವೆಂದು ನಾವು ನಂಬಿದರೆ, ಆಗ ನಮ್ಮ ಜೀವನದಲ್ಲಿ ಆ ಕಾರ್ಯವು ನೆರವೇರುವುದೇ ಇಲ್ಲ. ಇನ್ನೊಂದು ಮಗ್ಗಲಲ್ಲಿ, ನೀವು ಕ್ರಿಸ್ತನ ನ್ಯಾಯತೀರ್ಪಿನ ಸಿಂಹಾಸನದ ಮುಂದೆ ನಿಲ್ಲುವಾಗ, ನಿಮಗಿಂತ ಕಳಪೆಯಾದ ಜೀವನವನ್ನು ಜೀವಿಸಿದ್ದ ಇನ್ನೊಬ್ಬ ವಿಶ್ವಾಸಿಯ ಜೀವನದಲ್ಲಿ ದೇವರ ಪರಿಪೂರ್ಣ ಯೋಜನೆಯು ನೆರವೇರಿದ್ದನ್ನು ನೀವು ಕಾಣುವಿರಿ - ಇದಕ್ಕೆ ಒಂದೇ ಕಾರಣ, ತನ್ನೆಲ್ಲಾ ವಿಫಲತೆಗಳನ್ನು ದೇವರು ಉಪಯೋಗಿಸಿಕೊಂಡು "ಬಹಳ ಉತ್ತಮವಾದುದನ್ನು" ಮಾಡುತ್ತಾರೆ ಎಂಬ ನಂಬಿಕೆ ಆತನಲ್ಲಿ ಇತ್ತು. ದೇವರು ನಿಮಗಾಗಿ ಇರಿಸಿದ್ದ ಯೋಜನೆ ಭಂಗಗೊಳ್ಳಲು ಕಾರಣ ನಿಮ್ಮ ಸೋಲುಗಳು ಅಲ್ಲ (ಲೆಕ್ಕವಿಲ್ಲದಷ್ಟು ಸೋಲುಗಳಿದ್ದರೂ ಸರಿ) ಆದರೆ ನಿಮ್ಮ ಅವಿಶ್ವಾಸ, ಎಂದು ಆ ದಿನದಲ್ಲಿ ನಿಮಗೆ ಅರಿವಾದಾಗ ನಿಮಗೆ ಎಷ್ಟು ನಿರಾಶೆಯಾಗಲಿದೆ!

"ಸೈತಾನನು ಮಾಡಿರುವ ಕಾರ್ಯಗಳನ್ನು ಲಯ ಮಾಡುವುದಕ್ಕೋಸ್ಕರವೇ (ಅಳಿಸಲು) ದೇವಕುಮಾರನು ಪ್ರತ್ಯಕ್ಷನಾದನು" (1 ಯೊಹಾ. 3:8- Amplified Bible). ಈ ವಚನದ ನಿಜವಾದ ಅರ್ಥ ಏನೆಂದರೆ, ನಮ್ಮ ಜೀವನದಲ್ಲಿ ಸೈತಾನನಿಂದ ಹಾಕಲ್ಪಟ್ಟ ಎಲ್ಲಾ ಗಂಟುಗಳನ್ನು ಬಿಡಿಸಲಿಕ್ಕಾಗಿ ಯೇಸುವು ಬಂದನು. ಇದನ್ನು ಈ ರೀತಿಯಾಗಿ ಚಿತ್ರಿಸಿಕೊಳ್ಳಿರಿ: ನಾವು ಜನಿಸಿದಾಗ, ದೇವರು ನಮ್ಮೆಲ್ಲರಿಗೆ ದಾರವನ್ನು ಅಂದವಾಗಿ ಸುತ್ತಿ ಮಾಡಿದ್ದ ಒಂದೊಂದು ನೂಲಿನ ಉಂಡೆಯನ್ನು ಕೊಟ್ಟರು. ನಮ್ಮ ಜೀವನ ಆರಂಭವಾದಾಗ, ನಾವು ಒಂದೊಂದು ದಿನವೂ ಆ ನೂಲಿನ ಉಂಡೆಯನ್ನು ಬಿಚ್ಚುತ್ತಾ, ದಾರದಲ್ಲಿ ಗಂಟುಗಳನ್ನು ಹಾಕುತ್ತಾ (ನಾವು ಮಾಡುವ ಪಾಪಗಳು) ಬಂದೆವು. ಹಲವಾರು ವರ್ಷಗಳಿಂದ ಗಂಟುಗಳು ಸೇರಿಕೊಂಡಿರುವ ದಾರವನ್ನು ನಾವು ಈ ದಿನ ನೋಡುವಾಗ, ಸಾವಿರಾರು ಗಂಟುಗಳು ನಮ್ಮನ್ನು ಎದೆಗುಂದಿಸುತ್ತವೆ. ಆದರೆ ಯೇಸುವು "ಪಿಶಾಚನು ಹಾಕಿರುವ ಗಂಟುಗಳನ್ನು ಬಿಚ್ಚಲು" ಬಂದಿದ್ದಾನೆ. ಹಾಗಾಗಿ ದಾರದ ಚೆಂಡಿನಲ್ಲಿ ಲೆಕ್ಕವಿಲ್ಲದಷ್ಟು ಗಂಟುಗಳಿರುವ ಜನರಿಗೂ ಸಹ ನಿರೀಕ್ಷೆ ಇದೆ.

ಕರ್ತನು ಪ್ರತಿಯೊಂದು ಗಂಟನ್ನು ಸಡಿಲಿಸ ಬಲ್ಲನು ಮತ್ತು ಸುಂದರವಾಗಿ ಸುತ್ತಲ್ಪಟ್ಟ ನೂಲಿನ ಉಂಡೆಯನ್ನು ಮತ್ತೊಮ್ಮೆ ನಿಮ್ಮ ಕೈಗೆ ಕೊಡಬಲ್ಲನು. ಇದು ಸುವಾರ್ತೆಯ ಸಂದೇಶವಾಗಿದೆ: ನೀವು ಒಂದು ಹೊಸ ಆರಂಭವನ್ನು ಮಾಡಬಹುದು. "ಅದು ಸಾಧ್ಯವೇ ಇಲ್ಲ!" ಎಂದು ನೀವು ಅನ್ನುತ್ತೀರಿ. ಸರಿ, ನಿಮ್ಮ ನಂಬಿಕೆಯಂತೆ ನಿಮಗೆ ನಡೆಯುತ್ತದೆ. ನಿಮ್ಮ ವಿಷಯದಲ್ಲಿ ಅದು ಅಸಾಧ್ಯವೇ ಆಗಿರುತ್ತದೆ. ಆದರೆ ನಿಮಗಿಂತ ಕಳಪೆಯಾಗಿ ಜೀವಿಸಿದ ಇನ್ನೊಬ್ಬನ ಧ್ವನಿ, "ಹೌದು, ದೇವರು ನನ್ನಲ್ಲಿ ಕಾರ್ಯ ಮಾಡುತ್ತಾರೆಂದು ನಾನು ನಂಬುತ್ತೇನೆ," ಎಂದು ಹೇಳುವುದು ನನಗೆ ಕೇಳಿಸುತ್ತಿದೆ. ಅವನ ಜೀವನದಲ್ಲೂ ಸಹ, ಅವನ ನಂಬಿಕೆಯಂತೆಯೇ ಆಗುತ್ತದೆ. ದೇವರ ಪರಿಪೂರ್ಣ ಯೋಜನೆಯು ಅವನ ಜೀವನದಲ್ಲಿ ಸಫಲವಾಗುತ್ತದೆ.

ನಿಮ್ಮ ಜೀವಿತದ ಎಲ್ಲಾ ಸೋಲುಗಳಿಗಾಗಿ ದೇವರ ಚಿತ್ತಾನುಸಾರವಾದ ದುಃಖ ನಿಮ್ಮಲ್ಲಿದ್ದರೆ - ಹಳೇ ಒಡಂಬಡಿಕೆಯ ವಾಗ್ದಾನದ ಪ್ರಕಾರ, ನಿಮ್ಮ ಪಾಪಗಳು ಕಡು ಕೆಂಪಾಗಿದ್ದರೂ ಅವು ಹಿಮದ ಹಾಗೆ ಬೆಳ್ಳಗಾಗುವುದು ಮಾತ್ರವಲ್ಲದೆ (’ಯೆಶಾ. 1:18') - ಹೊಸ ಒಡಂಬಡಿಕೆಯ ವಾಗ್ದಾನದ ಪ್ರಕಾರ, "ದೇವರು ನಿಮ್ಮ ಪಾಪಗಳನ್ನು ಎಂದಿಗೂ ನೆನಪಿಗೆ ತಂದುಕೊಳ್ಳುವುದಿಲ್ಲ" (ಇಬ್ರಿ. 8:12). ನಿಮ್ಮ ತಪ್ಪು-ದೋಷಗಳು ಏನೇ ಆಗಿದ್ದರೂ, ನೀವು ದೇವರೊಂದಿಗೆ ಒಂದು ಹೊಸ ಆರಂಭವನ್ನು ಮಾಡಲು ಸಾಧ್ಯವಿದೆ. ನೀವು ಈಗಾಗಲೇ ಸಾವಿರ ಸಲ ಆರಂಭಿಸಿ ಸೋತಿದ್ದರೂ, ಇಂದು ನೀವು 1001ನೇ ಸಲ ಆರಂಭಿಸಲು ಸಾಧ್ಯವಿದೆ. ದೇವರು ನಿಮ್ಮ ಜೀವನದಲ್ಲಿ ಮಹಿಮೆಯುಳ್ಳ ಯಾವುದೋ ಕಾರ್ಯವನ್ನು ಮಾಡಲು ಈಗಲೂ ಶಕ್ತರಾಗಿದ್ದಾರೆ.

ಜೀವವಿದ್ದಷ್ಟು ದಿನ ನಿರೀಕ್ಷೆ ಇದೆ. ಹಾಗಾಗಿ, ಯಾವತ್ತೂ ದೇವರನ್ನು ನಂಬದೇ ಇರಬೇಡಿ. ದೇವರು ತನ್ನ ಅನೇಕ ಮಕ್ಕಳಿಗಾಗಿ ಹಲವು ಮಹತ್ಕಾರ್ಯಗಳನ್ನು ಮಾಡಲು ಸಾಧ್ಯವಾಗದಿರುವುದಕ್ಕೆ ಕಾರಣ, ಹಿಂದೆ ಅವರು ದೇವರ ಚಿತ್ತದಂತೆ ನಡೆಯದಿರುವುದು ಅಲ್ಲ, ಆದರೆ ಈಗ ಅವರು ದೇವರನ್ನು ನಂಬದಿರುವುದು. ಹಾಗಾದರೆ ನಾವು, "ದೇವರು ತನ್ನ ವಾಗ್ದಾನವನ್ನು ನೆರವೇರಿಸುವುದಕ್ಕೆ ಸಮರ್ಥರೆಂದು ಪೂರಾ ಭರವಸೆಯಿಟ್ಟು ದೃಢನಂಬಿಕೆ ಉಳ್ಳವರಾಗಿ ದೇವರನ್ನು ಘನಪಡಿಸೋಣ" (ರೋಮಾ. 4:20), ಮತ್ತು ಇದು ವರೆಗೆ ಅಸಾಧ್ಯವೆಂದು ನಾವು ತಿಳಿದಿದ್ದ ಸಂಗತಿಗಳಿಗಾಗಿ ಮುಂದಿನ ದಿನಗಳಲ್ಲಿ ಅವರನ್ನು ನಂಬೋಣ. ಎಲ್ಲಾ ಜನರು - ಯುವಕರು ಮತ್ತು ವೃದ್ಧರು - ಹಿಂದೆ ಅವರು ಎಷ್ಟು ಸಲ ಸೋತಿದ್ದರೂ, ಸೋಲುಗಳನ್ನು ಒಪ್ಪಿಕೊಂಡು ದೀನತೆಯಿಂದ ದೇವರನ್ನು ನಂಬಿದರೆ, ನಿರೀಕ್ಷೆಯನ್ನು ಇರಿಸಿಕೊಳ್ಳಲು ಸಾಧ್ಯವಿದೆ.