ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಶಿಷ್ಯಂದಿರಿಗೆ
WFTW Body: 

ಯಾಜಕಕಾಂಡ ಪುಸ್ತಕವು ದೇವರ ಪರಿಶುದ್ಧತೆಯ ಬಗ್ಗೆ ಮಾತನಾಡುತ್ತದೆ. ಈ ಪುಸ್ತಕದ ಮುಖ್ಯ ವಿಷಯ ಪರಿಶುದ್ಧತೆಯಾಗಿದೆ. ಪರಿಶುದ್ಧತೆ ಎಂಬ ಪದಕ್ಕೆ ಅನೇಕ ವಿಶ್ವಾಸಿಗಳು ಭಯಪಡುತ್ತಾರೆ. ಆದರೆ ನಾವು ಧೃಢವಾಗಿ ಸಾರುವುದು ಏನೆಂದರೆ - ದೇವರ ವಾಕ್ಯವು ತೋರಿಸುವ ಗುಣಮಟ್ಟವು ವಾಸ್ತವವಾದಂತದ್ದು ಮತ್ತು ಹೊಂದಲು ಸಾಧ್ಯವಾಗುವಂತದ್ದು ಆಗಿದೆ. ಪರಿಶುದ್ಧತೆಯೇ ದೇವರ ಸ್ವಭಾವವು. ದೇವರು ನಮಗೆ ನೀಡುವಂತ ಆತ್ಮ 'ಪವಿತ್ರವಾದ' ಆತ್ಮವು. ಯೆಶಾಯನು ದೇವರ ದರ್ಶನವನ್ನು ಕಂಡಾಗ, ದೇವರ ಪವಿತ್ರತೆಯನ್ನು ಕಂಡನು ಮತ್ತು ತಾನು ಶುದ್ಧತೆ ಇಲ್ಲದಿರುವ ಮನುಷ್ಯನು ಎಂಬುದಾಗಿ ತಿಳಿದನು.

ಪರಿಶುದ್ಧತೆಯನ್ನು ಆರೋಗ್ಯಕ್ಕೆ ಹೋಲಿಸಬಹುದು. ಅತ್ಯುತ್ತಮ ಆರೋಗ್ಯವನ್ನು ಪಡೆಯುವ ಕುರಿತು ಸಂದೇಶಗಳನ್ನು ಕೇಳಿಸಿಕೊಳ್ಳಲು ನಿಮ್ಮಲ್ಲಿ ಯಾರಾದರೂ ಭಯಪಡುತ್ತೀರಾ? ಒಳ್ಳೆಯ ಆರೋಗ್ಯದ ಬಗ್ಗೆ ನಮಗೆ ಭಯವಿದೆಯೇ? ಇಲ್ಲ. ನಾವು ನಮ್ಮ ದೇಹದ ಆರೋಗ್ಯಕ್ಕಿಂತ ಹೆಚ್ಚು ಪ್ರಾಮುಖ್ಯವಾದ ಶ್ರೇಷ್ಠ ಆತ್ಮಿಕ ಆರೋಗ್ಯದ ಬಗ್ಗೆ ಯಾಕೆ ಭಯಪಡಬೇಕು? ಪಾಪವನ್ನು ದೈಹಿಕ ಖಾಯಿಲೆಗೆ ಹೋಲಿಸಬಹುದು. ಯಾಜಕಕಾಂಡದಲ್ಲಿ ನಾವು ಇದನ್ನು ನೋಡುತ್ತೇವೆ. ಇಲ್ಲಿ ಪರಿಶುದ್ಧತೆಗೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ದೇವರು ನೀಡಿದ್ದಾರೆ. ಇವೆರಡರ ನಡುವೆ ಹೆಚ್ಚಿನ ಹೋಲಿಕೆ ಇದೆ - ಒಂದು ಆತ್ಮಕ್ಕೆ ಅನ್ವಯಿಸುತ್ತದೆ ಮತ್ತು ಇನ್ನೊಂದು ದೇಹಕ್ಕೆ ಅನ್ವಯಿಸುತ್ತದೆ. ದೇಹಕ್ಕಾಗಿ ಇರುವಂತ ಪರಿಶುದ್ಧತೆಯನ್ನು ನಾವು 'ಆರೋಗ್ಯ' ಎಂದು ಕರೆಯುತ್ತೇವೆ. ಆತ್ಮ-ಪ್ರಾಣಗಳ ಆರೋಗ್ಯವನ್ನು ನಾವು 'ಪರಿಶುದ್ಧತೆ' ಎಂದು ಕರೆಯುತ್ತೇವೆ.

ಹೀಗಿರುವಾಗ, ನಾವು ಪರಿಶುದ್ಧತೆಯ ಕುರಿತಾದ ಈ ಭಯವನ್ನು ತೊರೆಯಬೇಕು. ನಾವು ಸಂಪೂರ್ಣ ಆರೋಗ್ಯಕ್ಕೂ ಹೆಚ್ಚಾಗಿ ಸಂಪೂರ್ಣ ಪರಿಶುದ್ಧತೆಯನ್ನು ಬಯಸುವವರು ಆಗಬೇಕು. ಹೇಗೆ ನಾವು ದೇಹದ ಎಲ್ಲಾ ಖಾಯಿಲೆಗಳಿಂದ ಸಂಪೂರ್ಣ ಬಿಡುಗಡೆ ಬಯಸುತ್ತೇವೋ ಹಾಗೆಯೇ, ನಮ್ಮನ್ನು ಅಪವಿತ್ರಗೊಳಿಸುವ ಎಲ್ಲಾ ಪಾಪಗಳಿಂದ ನಾವು ಸಂಪೂರ್ಣ ಬಿಡುಗಡೆಯನ್ನು ಬಯಸಬೇಕು. ನಾವು ನಮ್ಮ ಖಾಯಿಲೆಗಳನ್ನು ಸಹಿಸದೆ ಇರುವಷ್ಟೇ ಮಟ್ಟಿಗೆ ನಮ್ಮ ಪಾಪಗಳನ್ನೂ ಸಹಿಸದಿರಬೇಕು. ಹೊಲಸು ಆಲೋಚನೆಗಳನ್ನು ಸಹಿಸಿಕೊಳ್ಳುವಂತದ್ದು, ಕ್ಷಯ ಮತ್ತು ಕುಷ್ಟ ರೋಗವನ್ನು ಸಹಿಸಿಕೊಂಡ ಹಾಗೆ. ನಾವು ಕೋಪವನ್ನು ಸಹಿಸಿಕೊಂಡು - ''ಅದು ನನ್ನ ಬಲಹೀನತೆ ಅಥವಾ ನನ್ನ ಪ್ರಕೃತಿ ಸ್ವಭಾವ'' ಎಂದು ಅದನ್ನು ನೀತಿಕರಿಸಿಕೊಂಡು ನಮ್ಮ ಜೀವಿತದಲ್ಲಿ ಅನುಮತಿಸಿದರೆ, ಏಡ್ಸ್ ಅಥವಾ ಸಾಂಕ್ರಮಿಕ ರೋಗವನ್ನು ನಮ್ಮ ದೇಹದಲ್ಲಿ ಅನುಮತಿಸಿಕೊಂಡ ಹಾಗಾಗುತ್ತದೆ. ಪಾಪ ಮತ್ತು ಖಾಯಿಲೆ ಒಂದಕ್ಕೊಂದು ಬಹಳವಾಗಿ ಹೋಲುತ್ತವೆ.

ಉದಾಹರಣೆಗೆ, ಯಾಜಕಕಾಂಡದಲ್ಲಿ ಕುಷ್ಟ ರೋಗ ಮತ್ತು ಚರ್ಮ ರೋಗವನ್ನು ಹೊಂದಿರುವಂತ ಒಬ್ಬ ವ್ಯಕ್ತಿಯೊಟ್ಟಿಗೆ ಹೇಗೆ ವ್ಯವಹರಿಸಬೇಕು ಎಂಬುದನ್ನು ದೇವರು ಇಸ್ರಾಯೇಲ್ಯರಿಗೆ ತೋರಿಸುತ್ತಾರೆ. ಈ ಪುಸ್ತಕದಲ್ಲಿ ಇದು ಪಾಪಕ್ಕೆ ಹೋಲುತ್ತದೆ ಮತ್ತು ಇಲ್ಲಿ ಕೊಟ್ಟಿರುವಂತ ನಿಯಮಗಳು ಪಾಪದೊಟ್ಟಿಗೆ ಹೇಗೆ ವ್ಯವಹರಿಸಬೇಕು ಎಂಬುದಕ್ಕೆ ಸಂಬಂಧಪಡುತ್ತದೆ. ''ಪರಿಶುದ್ಧತೆ'' ಮತ್ತು ''ಪವಿತ್ರ'' ಎಂಬ ಪದಗಳು ಈ ಪುಸ್ತಕದಲ್ಲಿ ಹೆಚ್ಚು ಕಡಿಮೆ 100 ಬಾರಿ ಕಾಣಿಸಿಕೊಂಡಿವೆ, ಪರಿಶುದ್ಧತೆ ಈ ಪುಸ್ತಕದ ಮುಖ್ಯ ವಿಷಯ ಎಂಬುದನ್ನು ಇದು ಒತ್ತಿ ಹೇಳುತ್ತದೆ. ಈ ಪುಸ್ತಕವು 27 ಅಧ್ಯಾಯಗಳನ್ನು ಒಳಗೊಂಡಿದ್ದು, ಅವುಗಳಲ್ಲಿ ಪರಿಶುದ್ಧತೆ ಎಂಬ ಪದವು 100 ಬಾರಿ ನಮೂದಿಸಲ್ಪಟ್ಟಿದೆ ಎಂದರೆ, ನಿಶ್ಚಯವಾಗಿ ಈ ಪುಸ್ತಕವು ಪ್ರಮುಖವಾದ ಪುಸ್ತಕವಾಗಿದೆ.

ಯಾಜಕಕಾಂಡದಲ್ಲಿನ ಅನೇಕ ಅಧ್ಯಾಯಗಳು ಪರಿಶುದ್ಧತೆ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ನಿಯಮಗಳ ಕುರಿತಾಗಿವೆ. ಒಬ್ಬ ವ್ಯಕ್ತಿಯ ಜೀವಿತದ ಸಣ್ಣಪುಟ್ಟ ವಿಷಯಗಳಲ್ಲೂ ಸಹ ದೇವರು ಅಪರಿಮಿತವಾದ ಆಸಕ್ತಿಯನ್ನು ಹೊಂದಿದ್ದಾನೆ ಎಂಬುದಾಗಿ ಇವುಗಳ ಮುಖಾಂತರ ಕಂಡುಕೊಳ್ಳುತ್ತೇವೆ. ನಮ್ಮ ಜೀವಿತದಲ್ಲಿನ ಸಣ್ಣ ವಿಷಯಗಳಲ್ಲಿ ದೇವರಿಗೆ ಆಸಕ್ತಿ ಇಲ್ಲ ಎಂಬುದಾಗಿ ನಾವು ಕಲ್ಪಿಸಿಕೊಳ್ಳಬಹುದು. ಆದರೆ ಯಾಜಕಕಾಂಡ ಪುಸ್ತಕದಲ್ಲಿ ನಾವು ಕಂಡುಕೊಳ್ಳುವುದೇನೆಂದರೆ, ದೇವರಿಗೆ ನಮ್ಮ ಪ್ರತಿಯೊಂದು ಸಣ್ಣ ವಿವರದಲ್ಲಿಯೂ ಸಹ ಆಸಕ್ತಿ ಇದೆ ಎಂಬುದಾಗಿ. ಆಡುಗೆ ಮಾಡುವಂತ ಪಾತ್ರೆಯಲ್ಲಿ ಹಲ್ಲಿ ಬಿದ್ದರೆ ಏನು ಮಾಡಬೇಕು ಎಂಬುದಾಗಿಯೂ ಸಹ ಇಲ್ಲಿ ಇಸ್ರಾಯೇಲ್ಯರಿಗೆ ಹೇಳಲ್ಪಟ್ಟಿದೆ. ಆ ಮಣ್ಣಿನ ಪಾತ್ರೆಯಲ್ಲಿ ಹಲ್ಲಿಯು ಬಿದ್ದರೆ ಅದನ್ನು ಒಡೆದು ಹಾಕಬೇಕು ಮತ್ತು ಅದರಲ್ಲಿದ್ದ ಯಾವ ಆಹಾರವನ್ನು ತಿನ್ನಬಾರದು, ಏಕೆಂದರೆ ಇದರಿಂದ ಸೋಂಕು ತಾಕಿ, ಸಾವಿಗೆ ಕಾರಣವಾಗಬಹುದು ಎಂಬುದಾಗಿ ಹೇಳಲ್ಪಟ್ಟಿದೆ (ಯಾಜಕಕಾಂಡ 11:33). ಸ್ನಾನ ಮಾಡುವ ವಿಚಾರದ ಬಗ್ಗೆಯೂ ದೇವರು ಇಲ್ಲಿ ಕೆಲವು ತಿಳುವಳಿಕೆಗಳನ್ನು ಕೊಟ್ಟಿದ್ದಾನೆ - ಅವರು ಯಾವುದರಿಂದಲೋ ಅಶುದ್ಧಗೊಂಡಿದ್ದರೆ, ಹರಿಯುವ ನೀರಿನಲ್ಲಿ ಸ್ನಾನ ಮಾಡಬೇಕು ಎಂಬುದಾಗಿ ಅಲ್ಲಿ ಹೇಳಲ್ಪಟ್ಟಿದೆ (ಯಾಜಕಕಾಂಡ 15:13). ಅವರು ಅಶುದ್ಧಗೊಂಡಾಗ, ತಮ್ಮ ಬಟ್ಟೆಗಳನ್ನು ತೊಳೆದುಕೊಳ್ಳುವಂತೆ ಇಸ್ರಾಯೇಲ್ಯರಿಗೆ ಹೇಳಲ್ಪಟ್ಟಿದೆ (ಯಾಜಕಕಾಂಡ 15:5,7, 11 ಮತ್ತು ಅಧ್ಯಾಯ 17 ರಲ್ಲಿ ಸಹ). ದೇವರು ತನ್ನ ಜನರ ವಿಷಯವಾಗಿ ಹೊಂದಿರುವ ಕಾಳಜಿಯನ್ನು ತೋರಿಸಲು ಈ ಎರಡು ಉದಾಹರಣೆಗಳೇ ಸಾಕು. ನೀವು ಸೇವಿಸುವ ಆಹಾರ, ನಿಮ್ಮ ಶುಚಿತ್ವ - ನೀವು ಸ್ನಾನ ಮಾಡುವ ರೀತಿ ಮತ್ತು ಪ್ರತಿನಿತ್ಯ ನಿಮ್ಮ ಬಟ್ಟೆಯನ್ನು ಶುಚಿಗೊಳಿಸುವ ವಿಧಾನ - ಇವೆಲ್ಲ ವಿಷಯಗಳಲ್ಲಿ ದೇವರಿಗೆ ಇಷ್ಟೊಂದು ಆಸಕ್ತಿಯಿದೆ ಎಂಬುದಾಗಿ ನೀವು ಎಂದಾದರೂ ಯೋಚಿಸಿದ್ದೀರಾ? ಇಂತಹ ಸಂಗತಿಗಳನ್ನು ಓದಿ ತಿಳಿದಾಗ ನಾನು ಹರ್ಷಿಸಿ ಉಲ್ಲಾಸಿಸುತ್ತೇನೆ. ಹಾಗಿದ್ದಲ್ಲಿ ಯಾಜಕಕಾಂಡ ಪುಸ್ತಕವು ಬೇಸರ ತರಿಸುತ್ತದೆಂದು ಯಾರು ಹೇಳುತ್ತಾರೆ?

ಈ ಪುಸ್ತಕವು ಲೈಂಗಿಕ ಪರಿಶುದ್ಧತೆ ಮತ್ತು ಇತರ ಹಲವು ಆಸಕ್ತಿಕರ ವಿಷಯಗಳ ಕುರಿತಾಗಿಯೂ ಬೋಧಿಸುತ್ತದೆ. ಯಾಜಕಕಾಂಡ 10ರಲ್ಲಿ ದೇವರು ಆರೋನನಿಗೆ ಹೇಳಿದ್ದೇನೆಂದರೆ, ''ನೀನೂ ನಿನ್ನ ಮಕ್ಕಳೂ ದ್ರಾಕ್ಷಾರಸವನ್ನಾಗಲಿ ಮಧ್ಯಪಾನವನ್ನಾಗಲಿ ಕುಡಿದು ಸಭೆಯ ಗುಡಾರದೊಳಗೆ ಬರಬಾರದು; ಹಾಗೆ ಬಂದರೆ ಸತ್ತೀರಿ. ನಿಮ್ಮ ವಂಶಾವಳಿಯು ಇರುವವರೆಗೂ ಇದು ಶಾಶ್ವತವಾಗಿರುವ ಕಟ್ಟಳೆಯಾಗಿದೆ. ನೀವು ಶುದ್ಧವಾದದ್ದಕ್ಕೂ ಅಶುದ್ಧವಾದದ್ದಕ್ಕೂ, ಪವಿತ್ರವಾದದ್ದಕ್ಕೂ ಅಪವಿತ್ರವಾದದ್ದಕ್ಕೂ ವ್ಯತ್ಯಾಸವನ್ನು ತೋರಿಸುವುದಕ್ಕಾಗಿಯೂ, ಯೆಹೋವನು ಮೋಶೆಯ ಮೂಲಕ ಇಸ್ರಾಯೇಲ್ಯರಿಗೆ ಮಾಡಿದ ಎಲ್ಲಾ ಆಜ್ಞೆಗಳನ್ನು ಜನರಿಗೆ ಬೋಧಿಸುವುದೂ ನಿಮ್ಮ ಕರ್ತವ್ಯವಾಗಿದೆ'' (ಯಾಜಕಕಾಂಡ 10:8-11). ದೇವರು ಅಲ್ಲಿನ ನಾಯಕರುಗಳಿಗೆ ಹೇಳಿದ್ದೇನೆಂದರೆ, ತಮ್ಮ ದೇಹವು ಮಾಲಿನ್ಯವಾಗುವಂತ ಯಾವುದನ್ನು ಸಹ ಅವರು ಸೇವಿಸಬಾರದು ಎಂಬುದಾಗಿ. ನಾಯಕರುಗಳು ತಮ್ಮ ನಡವಳಿಕೆಯಲ್ಲಿ ಅನುಕರಣೀಯರು ಆಗಿರುವದನ್ನು ದೇವರು ಬಯಸುತ್ತಾರೆ.

ಯಾಜಕಕಾಂಡ 11ರಲ್ಲಿ, ಶುದ್ಧ ಮತ್ತು ಅಶುದ್ಧವಾಗಿರುವಂತ ಪ್ರಾಣಿಗಳ ಬಗ್ಗೆ ದೇವರು ಹೇಳುತ್ತಾರೆ; ಕೆಲವು ವಿಧವಾದ ಪ್ರಾಣಿಗಳನ್ನು ಅವರು ತಿನ್ನಬಹುದಾಗಿತ್ತು, ಇನ್ನೂ ಕೆಲವು ವಿಧವಾದ ಪ್ರಾಣಿಗಳನ್ನು ಅವರು ತಿನ್ನುವಂತಿರಲಿಲ್ಲ. ಈ ಅಧ್ಯಾಯಗಳ ಮೂಲಕ ನಾನು ಕಲಿತಿರುವಂತದ್ದು ಏನೆಂದರೆ, ನಮ್ಮ ತಿನ್ನುವ ಹವ್ಯಾಸದಲ್ಲಿಯೂ ಸಹ ಪರಲೋಕದಲ್ಲಿನ ದೇವರು ಆಸಕ್ತಿಯನ್ನು ಹೊಂದಿದ್ದಾನೆ ಎಂಬುದಾಗಿ. ನಾವು ಇದರಿಂದ ಆರೋಗ್ಯಕರ ಆಹಾರಗಳನ್ನು ಸೇವಿಸುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. 1 ಕೊರಿಂಥ 10:31ರಲ್ಲಿ, ''ನೀವು ಉಂಡರೂ ಕುಡಿದರೂ, ಇನ್ನೇನು ಮಾಡಿದರೂ, ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ'' ಎಂಬುದಾಗಿ ಹೇಳಲ್ಪಟ್ಟಿದೆ. ಕುಡಿಯುವ ಮತ್ತು ತಿನ್ನುವ ವಿಷಯದಲ್ಲಿ ಯಾಜಕಕಾಂಡದ ಮುಖ್ಯ ಸಂದೇಶ ಹೀಗಿದೆ: ''ನಿಮ್ಮ ದೇಹಕ್ಕೆ ಒಳ್ಳೇಯದಲ್ಲದ ಯಾವ ಆಹಾರವನ್ನು ಮತ್ತು ಪಾನೀಯವನ್ನು ಸಹ ಸೇವಿಸಬೇಡಿರಿ''. ದೇವರು ಇಂದು ತನ್ನ ಮಕ್ಕಳಿಗೆ ಹಾಳುಪಾಳು ಆಹಾರವನ್ನು ತಿನ್ನುವ ಮತ್ತು ಕುಡಿಯುವ ವಿಷಯವಾಗಿ ಹೇಳಲಿಕ್ಕೆ ಬಹಳವಿದೆ ಎಂಬುದಾಗಿ ನಾನು ನಿಶ್ಚಯವಾಗಿ ತಿಳಿದಿದ್ದೇನೆ!

ಕೆಲವು ನೈರ್ಮಲ್ಯದ ನಿಯಮಗಳೂ ಸಹ ಇವೆ, ಉದಾಹರಣೆಗಾಗಿ, ಯಾಜಕಕಾಂಡ 11:33ರಲ್ಲಿ: ''ಒಂದು ಮಣ್ಣಿನ ಪಾತ್ರೆಯೊಳಗೆ ಯಾವುದಾದರೂ ಸಣ್ಣ ಜಂತು ಬಿದ್ದು ಸತ್ತರೆ, ಆ ಪಾತ್ರೆಯಲ್ಲಿರುವದೆಲ್ಲಾ ಅಶುದ್ಧವಾಗಿರುವುದು. ಮತ್ತು ಆ ಪಾತ್ರೆಯನ್ನು ನೀವು ಒಡೆದುಬಿಡಬೇಕು. ''ತಿನ್ನುವ ಆಹಾರದ ಮೇಲೆ ಅಂಥ ನೀರು ಬಿದ್ದಿದ್ದರೆ ಅದು ಅಶುದ್ಧವಾಗಿರುವುದು; ಅಂಥ ಪಾತ್ರೆಯಲ್ಲಿರುವ ಎಲ್ಲಾ ಪಾನವೂ ಅಶುದ್ಧವಾಗಿರುವುದು'' (ಯಾಜಕಕಾಂಡ 11:34). ದೇವರು ಇಸ್ರಾಯೇಲ್ಯರಿಗೆ ನೈರ್ಮಲ್ಯವಾಗಿ ಇಟ್ಟುಕೊಳ್ಳುವಂತ ಹವ್ಯಾಸವನ್ನು ಮತ್ತು ಶುದ್ಧವಾದ ಜೀವನ ಶೈಲಿಯನ್ನು ಕಲಿಸಿದ್ದರು. ಆರೋಗ್ಯದ ವಿಷಯವಾಗಿ ಇರುವಂತ ನಿಯಮಗಳಿಗೆ ಅವಿಧೇಯರಾಗಿ ನಾವು ಖಾಯಿಲೆ ಬಿದ್ದು, ''ದೇವರೇ, ನನ್ನನ್ನು ಸ್ವಸ್ಥಪಡಿಸು'' ಎಂಬುದಾಗಿ ಪ್ರಾರ್ಥಿಸುವದು ಅರ್ಥವಿಲ್ಲದ್ದು. ಅದು ಮೂರ್ಖತನವಾಗಿದೆ. ದೇವರು ಮಾಡಿರುವಂತ ಶುಚಿತ್ವದ ನಿಯಮಗಳನ್ನು ಪಾಲಿಸದೆ ನೀವು ಅಸ್ವಸ್ಥರಾದಾಗ, ನೀವು ನಿಮ್ಮನ್ನೇ ದೂಷಿಸಿಕೊಳ್ಳಬೇಕು. ದೇವರು ವಿಮೋಚನಕಾಂಡ 15:26ರಲ್ಲಿ ಹೀಗೆ ಹೇಳಿದ್ದಾರೆ, ''ನೀವು ನನ್ನ ನಿಯಮಗಳಿಗೆ ವಿಧೇಯರಾದರೆ, ಆಗ ನಾನೇ ನಿಮಗೆ ಆರೋಗ್ಯದಾಯಕನು''. ದೇವರು ನಮ್ಮನ್ನು ಗುಣಪಡಿಸುವ ವರಕ್ಕಿಂತ ಹೆಚ್ಚಿನದಾದ ಆರೋಗ್ಯದ ವರವನ್ನು ಕೊಡಲು ಇಚ್ಛಿಸುತ್ತಾರೆ! ಆದರೆ ನಾವು ನಮ್ಮ ದೇಹದ ಆರೋಗ್ಯದ ಸಲುವಾಗಿ ಇರುವ ಆತನ ನಿಯಮಗಳನ್ನು ಪಾಲಿಸಬೇಕು. ಯಾಜಕಕಾಂಡ 11:44ರಲ್ಲಿ ನಾವು ಈ ರೀತಿಯಾಗಿ ಓದುತ್ತೇವೆ, ''ನಿಮ್ಮ ದೇವರಾದ ಕರ್ತನು ನಾನೇ. ಆದ್ದರಿಂದ ನೀವು ನಿಮ್ಮನ್ನು ಶುದ್ಧೀಕರಿಸಿಕೊಳ್ಳಿರಿ; ನಾನು ಪರಿಶುದ್ಧನು ಆಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು''. ಇದೇ ಯಾಜಕಕಾಂಡ ಪುಸ್ತಕದ ಮುಖ್ಯ ಸಂದೇಶವಾಗಿದೆ - ಮತ್ತು ಈ ವಚನವು ಸರಿಯಾಗಿ ಯಾಜಕಕಾಂಡ ಪುಸ್ತಕದ ಮಧ್ಯಭಾಗದಲ್ಲಿ ಇರಿಸಲ್ಪಟ್ಟಿದೆ!

ಪೇತ್ರನು 1 ಪೇತ್ರ 1:16ರಲ್ಲಿ ಈ ವಚನವನ್ನು ಉಲ್ಲೇಖಿಸುತ್ತಾನೆ : ''ದೇವರು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು''

ಪವಿತ್ರತೆ ಮತ್ತು ಶುಚಿತ್ವ ಇವು ಯಾಜಕಕಾಂಡದ ಕೇಂದ್ರ ಸಂದೇಶಗಳಾಗಿವೆ.