WFTW Body: 

ಯೇಸುವಿನ ಕುರಿತಾಗಿ ಹೀಗೆ ಬರೆಯಲ್ಪಟ್ಟಿದೆ: ಯೇಸುವಿನ ಹೃದಯವು ’ಯಾವಾಗಲೂ ಹರ್ಷಿಸುತ್ತಿತ್ತು’, ಏಕೆಂದರೆ ಆತನು ತನ್ನ ತಂದೆಯನ್ನು ಯಾವಾಗಲೂ ತನ್ನೆದುರಿಗೆ ಇಟ್ಟುಕೊಂಡಿದ್ದನು. ಯೇಸುವಿನಲ್ಲಿ ಸದಾ "ಪರಿಪೂರ್ಣ ಸಂತೋಷ" ಇತ್ತು ಮತ್ತು ತಂದೆಯು ಯಾವಾಗಲೂ ಆತನ ಬಲಗಡೆ ಇದ್ದುಕೊಂಡು ಆತನನ್ನು ಬೆಂಬಲಿಸುತ್ತಿದ್ದರು (ಅ.ಕೃ. 2:25,26ರಲ್ಲಿ ಈ ವಾಕ್ಯವನ್ನು ಕೀರ್ತ. 16:10,11ರಿಂದ ಉಲ್ಲೇಖಿಸಲಾಗಿದೆ). ಈ ಕಾರಣಕ್ಕಾಗಿ ನೀವು ಯಾವಾಗಲೂ ಕರ್ತನನ್ನು ನಿಮ್ಮೆದುರಿನಲ್ಲಿ ಇರಿಸಿಕೊಳ್ಳಿರಿ; ಆಗ ನಿಮ್ಮ ಮನಸ್ಸು ಸದಾ ಉಲ್ಲಾಸದಿಂದ ತುಂಬಿರುತ್ತದೆ ಮತ್ತು ಕರ್ತನು ಯಾವಾಗಲೂ ನಿಮ್ಮ ಬಲಗಡೆ ಇದ್ದು, ನಿಮ್ಮನ್ನು ಬಲಗೊಳಿಸುತ್ತಾನೆ. ಹಾಗಾಗಿ ಜನರು ಅಥವಾ ಸನ್ನಿವೇಶಗಳು ನಿಮ್ಮ ಮತ್ತು ಕರ್ತನ ನಡುವೆ ಬರದಂತೆ ನೋಡಿಕೊಳ್ಳಿರಿ.

"ನಿರ್ಮಲಚಿತ್ತರು ಧನ್ಯರು; ಅವರು ದೇವರನ್ನು ನೋಡುವರು" (ಮತ್ತಾ. 5:8)- ಮತ್ತು ಅವರು ಎಲ್ಲಾ ಸನ್ನಿವೇಶಗಳಲ್ಲಿ ದೇವರನ್ನು ಮಾತ್ರ ನೋಡುತ್ತಾರೆ, ಜನರನ್ನು ಅಥವಾ ಸನ್ನಿವೇಶಗಳನ್ನಲ್ಲ. ನೀವು ಯೇಸುವಿನ ಸೌಂದರ್ಯದಿಂದ ಸೆಳೆಯಲ್ಪಟ್ಟಾಗ, ಶೋಧನೆಯ ಆಕರ್ಷಣೆಯು ಕಳೆಗುಂದುತ್ತದೆ. ನೀವು ’ಕರ್ತನ ಮೂಲಕವಾಗಿ’ ಜನರನ್ನೂ, ಸಂದರ್ಭಗಳನ್ನೂ ನೋಡುವಾಗ, ಆ ಸಂದರ್ಭಗಳು ಮತ್ತು ಜನರ ಮೂಲಕ ದೇವರು ನಿಮಗೆ ಹೆಚ್ಚಿನ ಅನುಕೂಲವಾಗುವಂತೆ ಕಾರ್ಯವೆಸಗುವರು ಎಂಬ ಭರವಸೆಯನ್ನು ಹೊಂದುವಿರಿ ಮತ್ತು ನಿಮ್ಮ ಮನಸ್ಸಿನಲ್ಲಿ "ವಿಶ್ರಾಂತಿ" ಉಂಟಾಗುತ್ತದೆ (ರೋಮಾ. 8:28). ನೀವು ಈಗ ದಿನಾಲೂ ಎದುರಿಸುವ ಚಿಕ್ಕ ಪುಟ್ಟ ಸಾಮಾನ್ಯ ಶೋಧನೆಗಳಲ್ಲಿ, ಯಾವಾಗಲೂ ಪ್ರಶಾಂತವಾಗಿ ಇರುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ಏಕೆಂದರೆ ಆ ಮೂಲಕ ಮುಂದೆ ಭವಿಷ್ಯದಲ್ಲಿ ಬರಲಿರುವ ಇನ್ನೂ ದೊಡ್ಡ ಶೋಧನೆಗಳನ್ನು ನೀವು ಜಯಿಸಲು ಸಾಧ್ಯವಾಗುತ್ತದೆ.

"ಯಾವುದೇ ಮನುಷ್ಯನನ್ನು, ಅಥವಾ ಮನುಷ್ಯನ ಯಾವುದೇ ಬರವಣಿಗೆಯನ್ನು ಎಂದಿಗೂ ’ಪೂಜಿಸಬೇಡಿರಿ’." ಯಥಾರ್ಥರಾದ ದೈವಿಕ ಮನುಷ್ಯರು ಮತ್ತು ನಿಜವಾಗಿ ಪವಿತ್ರಾತ್ಮಪ್ರೇರಿತ ಪುಸ್ತಕಗಳು ಯಾವಾಗಲೂ ನಿಮ್ಮನ್ನು ಯೇಸುವಿನ (ಜೀವಿಸುವ ದೇವವಾಕ್ಯ) ಕಡೆಗೆ ಮತ್ತು ಸತ್ಯವೇದದ (ಬರೆಯಲ್ಪಟ್ಟ ದೇವವಾಕ್ಯ) ಕಡೆಗೆ ನಡೆಸುತ್ತವೆ. ಇಂತಹ ಮನುಷ್ಯರನ್ನು ಮಾತ್ರ ಹಿಂಬಾಲಿಸಿರಿ ಮತ್ತು ಇಂತಹ ಪುಸ್ತಕಗಳನ್ನು ಮಾತ್ರ ಓದಿರಿ.

ದೇವರ ಬಲಾತಿಶಯದ ಅತ್ಯಂತ ಶ್ರೇಷ್ಠವಾದ ಮಟ್ಟವು ಕಾಣಿಸುವುದು ದೇವರ ಸೃಷ್ಟಿಯಲ್ಲಿ ಅಲ್ಲ, ಆದರೆ ಕರ್ತನಾದ ಯೇಸುವಿನ ಮರಣ ಮತ್ತು ಪುನರುತ್ಥಾನದಲ್ಲಿ - ಅಲ್ಲಿ ಸೈತಾನನು ಸೋಲಿಸಲ್ಪಟ್ಟಾಗ (ಎಫೆ. 1:19,20). ಯೇಸುವು ಶಿಲುಬೆಗೆ ಹಾಕಲ್ಪಟ್ಟಿದ್ದು ಮಾನವ ಇತಿಹಾಸದಲ್ಲಿ ’ಅತ್ಯಂತ ದುಷ್ಟ ಕಾರ್ಯ’ವಾಗಿತ್ತು. ಆ ಘಟನೆಯು ಭೂಲೋಕದಲ್ಲಿ ಸಂಭವಿಸಿದ ’ಅತ್ಯಂತ ಉತ್ತಮ ಸಂಗತಿಯೂ’ ಸಹ ಆಗಿತ್ತು. ದೇವರು ಇತಿಹಾಸದ ಅತ್ಯಂತ ಕೆಟ್ಟದಾದ ಕಾರ್ಯವನ್ನು ಅತ್ಯುತ್ತಮ ಕಾರ್ಯವನ್ನಾಗಿ ಮಾರ್ಪಡಿಸುವಷ್ಟು ಬಲವುಳ್ಳವರು ಆಗಿರುವಾಗ, ನಿಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಸಂಗತಿಯನ್ನೂ ಸಹ ಅವರು ನಿಮ್ಮ ಪ್ರಯೋಜನಕ್ಕಾಗಿ ಉಜ್ವಲವಾಗಿ ಬದಲಾಯಿಸುವರು, ಎಂದು ನೀವು ನಿಶ್ಚಯವಾಗಿ ತಿಳಿದುಕೊಳ್ಳಬಹುದು (ರೋಮಾ. 8:28).

ದೇವರು ಒಂದು ಕಾರ್ಯವನ್ನು ನಿರ್ವಹಿಸುವಾಗ, ಆಡಂಬರ ಅಥವಾ ಪ್ರದರ್ಶನ ಅಥವಾ ತುತ್ತೂರಿಯ ಧ್ವನಿ ಇಲ್ಲದೆ, ಅದನ್ನು ಯಾರಿಗೂ ತಿಳಿಯದಂತೆ ಅಗೋಚರವಾಗಿ ಮಾಡಲು ಇಷ್ಟಪಡುತ್ತಾರೆ. ಇದರ ಫಲವಾಗಿ, ಕೆಲವೊಂದು ಸಲ ಸಂಭವಿಸಿದ ಯಾವುದೋ ಕೆಲವು ಸಂಗತಿಗಳು, ಆಕಸ್ಮಿಕವಾಗಿ ಅಥವಾ ಸುಯೋಗದಿಂದ ನಡೆದಿವೆ ಎಂದು ನೀವು ಯೋಚಿಸಬಹುದು, ಆದರೆ ವಾಸ್ತವವಾಗಿ ಅವುಗಳು ಪ್ರಾರ್ಥನೆಯಿಂದ ಉಂಟಾದ ನಿರ್ದಿಷ್ಟ ಉತ್ತರಗಳು ಆಗಿರುತ್ತವೆ - ನಿಮ್ಮ ಸ್ವಂತ ಪ್ರಾರ್ಥನೆಗಳು ಮತ್ತು ಇತರರು ನಿಮಗಾಗಿ ಮಾಡಿದ ಪ್ರಾರ್ಥನೆಗಳು. ದೇವರು ಮಾಡುವ ಕಾರ್ಯಗಳನ್ನು "ನೀನು ಮರೆ ಮಾಡಿಕೊಳ್ಳುವ ದೇವರಾಗಿದ್ದೀ," ಎಂದು ವಿವರಿಸಬಹುದು (ಯೆಶಾ. 45:15). "ನಾವು ಅವರ ಕಾರ್ಯ ವಿಧಾನವನ್ನು ಕಂಡುಹಿಡಿಯುವದು ಎಷ್ಟೋ ಅಸಾಧ್ಯ" (ರೋಮಾ. 11:33 - 'Living Bible').

ನೀವು ಕೈಲಾದಷ್ಟನ್ನು ಚೆನ್ನಾಗಿ ಮಾಡಿರಿ - ಮಿಕ್ಕಿದ್ದನ್ನು ದೇವರ ಕೈಯಲ್ಲಿ ಇರಿಸಿರಿ. ದೇವರು ನಿಮ್ಮ ಕುರಿತಾದ ಪ್ರತಿಯೊಂದು ವಿಚಾರವನ್ನು ಅವರ ಅಧಿಪತ್ಯದ ಮೂಲಕ ತಮ್ಮ ಹತೋಟಿಯಲ್ಲಿ ಇರಿಸುತ್ತಾರೆ. ನಿಮ್ಮ ದೋಷಗಳು ಮತ್ತು ತಪ್ಪುಗಳು ಸಹ ಕರ್ತನ ಮೂಲಕ ಆತ್ಮಿಕವಾಗಿ ಲಾಭದಾಯಕವಾಗುತ್ತವೆ. ನಾವು ಇಂತಹ ದೇವರನ್ನು ಆರಾಧಿಸುತ್ತೇವೆ - ಭೂಲೋಕದ ಪ್ರತಿಯೊಂದು ಸಂಗತಿಯನ್ನೂ ತನ್ನ ಹತೋಟಿಯಲ್ಲಿ ಇರಿಸಿಕೊಳ್ಳುವಂತವರು. ಹಾಗಾಗಿ ನೀವು ಮಾಡಿರುವ ಯಾವುದೋ ತಪ್ಪುಗಳ ವಿಚಾರವಾಗಿ ನೀವು ಬೇಸರದಿಂದ ಜೀವಿಸುವ ಅವಶ್ಯಕತೆಯಿಲ್ಲ. ಅಂತಹ ಬೇಸರದ ಮನೋಭಾವದ ಮೂಲಕ ನಿಮ್ಮ ಆನಂದವನ್ನು ಕಿತ್ತುಕೊಳ್ಳಲು ಸೈತಾನನಿಗೆ ಅವಕಾಶ ಕೊಡಬೇಡಿರಿ. ದೇವರ ಸಾರ್ವಭೌಮತ್ವವು ಎಂಥದ್ದು ಎಂದರೆ, ’ಅವರು ನಮ್ಮ ತಪ್ಪು ಕೆಲಸಗಳನ್ನೂ ಸಹ ಅವರ ಮಹಿಮೆಗಾಗಿ ಮತ್ತು ನಮ್ಮ ಒಳಿತಿಗಾಗಿ ಫಲದಾಯಕವಾಗಿ ಮಾಡುವರು’. ನೀವು ಶೋಕಿಸ ಬೇಕಾಗಿರುವುದು ಒಂದು ಸಂಗತಿಗಾಗಿ ಮಾತ್ರ - ಅಹಂಕಾರ ಹಾಗೂ ಪಶ್ಚಾತ್ತಾಪ ಪಡದಂತ ಪಾಪಕ್ಕಾಗಿ. ಆದಾಗ್ಯೂ, ಸೈತಾನನು ನಿಮ್ಮ ಹಳೆಯ ತಪ್ಪುಗಳನ್ನು ನಿಮಗೆ ನೆನಪಿಸುತ್ತಲೇ ಇರುತ್ತಾನೆ - ನಿರುತ್ಸಾಹಪಡಿಸಿ ನಿಮ್ಮನ್ನು ಸೋಲಿಸುವುದು ಅವನ ಉದ್ದೇಶವಾಗಿದೆ. ಹೀಗೆ ನೀವು ಹಿಂದಿನ ಸೋಲುಗಳ ವಿಚಾರವಾಗಿ ನಿರುತ್ಸಾಹಗೊಳ್ಳುತ್ತಿದ್ದರೆ, ನೀವು ಮತ್ತೊಮ್ಮೆ ಎಡವಿ ಬೀಳುವಂತೆ ಮಾಡುವುದು ಸೈತಾನನಿಗೆ ಸುಲಭ ಸಾಧ್ಯವಾಗುತ್ತದೆ.

ತೆರೆಗಳು ರಭಸದಿಂದ ಅಪ್ಪಳಿಸುವ ಸಮಯದಲ್ಲಿ, ಅತಿ ಮುಖ್ಯವಾಗಿ ಮಾಡಬೇಕಾದದ್ದು ನಿಮ್ಮ ದೃಷ್ಟಿಯನ್ನು ಸ್ವತಃ ಯೇಸುವಿನ ಮೇಲೆ ಇರಿಸುವುದು, ಮತ್ತು ಪೇತ್ರನು ಮಾಡಿದಂತೆ ಸಮುದ್ರದ ಅಲೆಗಳನ್ನು ನೋಡುವುದಲ್ಲ (ಮತ್ತಾ. 14:30). ನಿಮ್ಮ ನೌಕರಿಯ ಜಾಗದಲ್ಲಿ ಅಥವಾ ನಿಮ್ಮ ಸುತ್ತಲಿನ ಪರಿಸರದಲ್ಲಿ ಗೊಂದಲ ಇರಬಹುದು. ಆದರೆ ನೀವು ಯೇಸುವನ್ನು ಮಾತ್ರ ದೃಷ್ಟಿಸಿದರೆ, ಎದುರುಗಾಳಿ ಬೀಸುತ್ತಿರುವ ಸಮುದ್ರದ ಮೇಲೆಯೂ ನೀವು ಜಯಶೀಲರಾಗಿ ನಡೆಯುವಿರಿ.