WFTW Body: 

ನೀವು ಖುದ್ದಾಗಿ ಮಾಡಬಹುದಾದ ಒಂದು ಆಹ್ಲಾದಕರವಾದ ಸತ್ಯವೇದದ ಅಧ್ಯಯನ ಯಾವುದೆಂದರೆ, ಅಪೊಸ್ತಲ ಪೌಲನು ಮಾಡಿದ ಪ್ರಾರ್ಥನೆಗಳನ್ನು ಪರಿಶೀಲಿಸುವುದು. ಅಪೊಸ್ತಲ ಪೌಲನ ಅನೇಕ ಪ್ರಾರ್ಥನೆಗಳು ರೋಮಾಪುರದ ಪತ್ರಿಕೆಯಿಂದ ತಿಮೊಥೇಯನ 2ನೇ ಪತ್ರಿಕೆಯ ವರೆಗೆ ಕಂಡುಬರುತ್ತವೆ, ಮತ್ತು ನೀವು ಗಮನಿಸಬಹುದಾದ ಅಂಶ, ಯಾವಾಗಲೂ ಆತನ ಎಲ್ಲಾ ಪ್ರಾರ್ಥನೆಗಳು ಆತ್ಮಿಕ ವಿಷಯಗಳಿಗಾಗಿ ಆಗಿದ್ದವು. ಆತನು ಈ ಜನರು ಹೆಚ್ಚು ಐಶ್ವರ್ಯ ಹೊಂದುವಂತೆ, ಅವರು ಒಳ್ಳೆಯ ಮನೆಗಳಲ್ಲಿ ವಾಸಿಸುವಂತೆ ಅಥವಾ ಅವರ ನೌಕರಿಯಲ್ಲಿ ಬಡ್ತಿ ಹೊಂದುವಂತೆ ಪ್ರಾರ್ಥಿಸಲೇ ಇಲ್ಲ. ಅವನು ಇಂತಹ ಯಾವುದೇ ಲೌಕಿಕ ಸಂಗತಿಗಳಿಗಾಗಿ ಯಾವತ್ತೂ ಬೇಡಿಕೊಳ್ಳಲಿಲ್ಲ. ಅವನು ಯಾವಾಗಲೂ ನಿತ್ಯತ್ವದ ಆಳವಾದ ಆತ್ಮಿಕ ಸಂಗತಿಗಳ ಕುರಿತಾಗಿ ಪ್ರಾರ್ಥಿಸಿದನು, ಏಕೆಂದರೆ ಈ ಲೋಕದ ಎಲ್ಲಾ ಸಂಗತಿಗಳು ತಾತ್ಕಾಲಿಕವಾದವು ಎಂದು ಪೌಲನ ಹೃದಯವು ಬಹಳ ಚೆನ್ನಾಗಿ ಗ್ರಹಿಸಿಕೊಂಡಿತ್ತು.

ಇದು ಹೇಗೆಂದರೆ, ನೀವು ದೆಹಲಿಗೆ ಪ್ರಯಾಣಿಸುತ್ತಿದ್ದೀರಿ ಮತ್ತು ಅಲ್ಲಿ ಮುಂದಿನ 50 ವರ್ಷ ನೆಲೆಸುತ್ತೀರಿ, ಎಂದುಕೊಳ್ಳೋಣ. ನಿಮಗಾಗಿ ಪ್ರಾರ್ಥಿಸುತ್ತಿರುವ ಒಬ್ಬ ವ್ಯಕ್ತಿಯು, ಪ್ರಾರ್ಥನೆಯ ಹೆಚ್ಚಿನ ಸಮಯವನ್ನು ನಿಮ್ಮ ದೆಹಲಿಯ ರೈಲು ಪ್ರಯಾಣದ ಕುರಿತಾಗಿ, ಅಂದರೆ ಸುಖಕರ ಪ್ರಯಾಣ, ಉತ್ತಮ ಆಹಾರ ಮತ್ತು ಪ್ರಯಾಣಕ್ಕೆ ಒಳ್ಳೆಯ ಉಡುಪು ಮತ್ತು ರೈಲಿನಲ್ಲಿ ನೀವು ಚೆನ್ನಾಗಿ ನಿದ್ರೆ ಮಾಡುವಂತೆ ಪ್ರಾರ್ಥಿಸುವುದು ಸರಿಯಲ್ಲ. ಆತನು ಮುಖ್ಯವಾಗಿ ನೀವು ದೆಹಲಿಯಲ್ಲಿ ಅನೇಕ ವರ್ಷಗಳು ಸುಖಕರ ಜೀವನ ಜೀವಿಸುವಂತೆ ಪ್ರಾರ್ಥಿಸಬೇಕು. ಅದೇ ರೀತಿ ನಮ್ಮ ಈ ಲೋಕದ ಜೀವನವು ನಮ್ಮನ್ನು ನಿತ್ಯತ್ವಕ್ಕೆ ಕರೆದೊಯ್ಯುವ ಒಂದು ಚಿಕ್ಕ ಪ್ರಯಾಣ, ಎಂಬುದನ್ನು ನೀವು ಅರಿಯಬೇಕು. ವಿಶ್ವಾಸಿಗಳಿಗಾಗಿ ಪೌಲನು ಮಾಡಿದ ಪ್ರಾರ್ಥನೆ, ಅವರು ಈ ಭೂಮಿಯ ಮೇಲೆ ಜೀವಿಸುವ ರೀತಿಯು ಅವರು ಪರಲೋಕವನ್ನು ಸೇರಿದಾಗ ಅವರಿಗೆ ಬೇಸರ ಕೊಡದೇ ಇರುವಂಥದ್ದು ಆಗಿರಲಿ, ಎಂದಾಗಿತ್ತು.

ಪೌಲನು ಕೊಲೊ. 1:9-10ರಲ್ಲಿ, ದೇವಜನರು ಸಕಲ ಆತ್ಮೀಯ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ, ಕರ್ತನ ಚಿತ್ತದ ವಿಷಯವಾದ ತಿಳುವಳಿಕೆಯಿಂದ ತುಂಬಿಕೊಳ್ಳಲಿ, ಎಂದು ಪ್ರಾರ್ಥಿಸಿದನು. ಈ ವಚನದ ಒಂದು ಭಾಷಾಂತರ ಹೀಗಿದೆ, "ನೀವು ದೇವರ ದೃಷ್ಟಿಕೋನದಿಂದ ಎಲ್ಲಾ ಸಂಗತಿಗಳನ್ನು ನೋಡಬೇಕೆಂದು ನಾನು ಪ್ರಾರ್ಥಿಸುತ್ತಿದ್ದೇನೆ." ನೀವು ’ಆತ್ಮಿಕ ಜ್ಞಾನ ಮತ್ತು ಜಾಣತನದಿಂದ ದೇವರ ಚಿತ್ತದ ಜ್ಞಾನವನ್ನು ಸರಿಯಾಗಿ ತಿಳಕೊಳ್ಳುತ್ತೀರಿ’ ಎನ್ನುವುದರ ಅರ್ಥ, ಪ್ರತಿಯೊಂದು ವಿಷಯವನ್ನು ದೇವರ ದೃಷ್ಟಿಕೋನದಿಂದ ನೋಡುವಿರಿ, ಎಂದು.

ನೀವು ನಿಮ್ಮ ಮಾನವ ದೇಹದ ಕುರಿತಾಗಿ, ಈ ಲೋಕದ ತತ್ವಜ್ಞಾನಿಗಳು ಹೇಳುವುದನ್ನೆಲ್ಲಾ ಕೇಳಬೇಡಿ, ಮತ್ತು ದೇವರು ನೋಡುವ ರೀತಿಯಲ್ಲಿ ಅದನ್ನು ದೃಷ್ಟಿಸಿರಿ. ಯೇಸುವು ಒಂದು ಮಾನವ ದೇಹದ ಮೂಲಕ ಜನಿಸಿದನು. ಹಾಗಾಗಿ ಅದನ್ನು ಕಡೆಗಣಿಸಬೇಡಿರಿ. ಜೀವನದಲ್ಲಿ ಎಲ್ಲವನ್ನೂ ದೇವರು ನೋಡುವ ಹಾಗೆ ನೋಡಿರಿ. ನಾವು ನಮಗಾಗಿ ಮಾಡಬಹುದಾದ ಒಂದು ಉತ್ತಮ ಪ್ರಾರ್ಥನೆ ಯಾವುದೆಂದರೆ, "ಕರ್ತನೇ, ನನ್ನ ಜೀವನದಲ್ಲಿ ನಡೆಯುವ ಎಲ್ಲಾ ವಿಷಯಗಳನ್ನು ನಿನ್ನ ದೃಷ್ಟಿಕೋನದಿಂದ ನೋಡಲು ನನಗೆ ಸಹಾಯ ಮಾಡು."

ನನ್ನ ಜೀವನದಲ್ಲಿ ಎದುರಾದ ಒಂದು ಕಷ್ಟಕರ ಪರಿಸ್ಥಿತಿಯ ಬಗ್ಗೆ ನಾನು ಏನೆಂದು ವಿಚಾರ ಮಾಡಲಿ - ಆ ಒಂದು ಕಾಯಿಲೆ, ಶರೀರಕ್ಕೆ ನಾಟಿದ ಆ ಒಂದು ಶೂಲ, ನನ್ನೊಂದಿಗೆ ಕೆಟ್ಟದಾಗಿ ನಡೆಯುತ್ತಿರುವ ಆ ಒಬ್ಬ ವ್ಯಕ್ತಿ? ಆ ಪರಿಸ್ಥಿತಿಯನ್ನು ದೇವರ ದೃಷ್ಟಿಕೋನದಿಂದ ನೋಡು. ಇದು ದೇವರಿಗೆ ತಿಳಿಯದಂತೆ ಅನಿರೀಕ್ಷಿತವಾಗಿ ನಡೆಯಿತೇ? ಇದು ದೇವರಿಗೆ ಅನಿರೀಕ್ಷಿತವಾಗಿರಲಿಲ್ಲ. ಇದು ನನ್ನನ್ನು ಕಂಗಾಲಾಗಿಸಿತು, ಏಕೆಂದರೆ ನಾನು ಸಮಯ ಮತ್ತು ವ್ಯಾಪ್ತಿಯ ಸೀಮೆಗೆ ಒಳಪಟ್ಟ ಒಬ್ಬ ಮಾನವನಾಗಿದ್ದೇನೆ. ಆದರೆ ಇವೆಲ್ಲವೂ ದೇವರನ್ನು ಆಶ್ಚರ್ಯಗೊಳಿಸಲಿಲ್ಲ, ಮತ್ತು ನಾನು ದೇವರ ದೃಷ್ಟಿಕೋನವನ್ನು ಪುನಃ ಸ್ವೀಕರಿಸಿದಾಗ ಅಥವಾ ಆ ಮಟ್ಟಕ್ಕೆ ಏರಿದಾಗ, ನನ್ನ ಹೃದಯವು ಶಾಂತವಾಗುತ್ತದೆ ಮತ್ತು ಈ ಲೋಕದ ಸಂಗತಿಗಳು ಬಹಳ ವ್ಯತ್ಯಾಸವಾಗಿ ಕಾಣಿಸುತ್ತವೆ. ಇದು ನಾವು ಪ್ರಾರ್ಥಿಸಬಹುದಾದ ಒಂದು ಬಹಳ ಉತ್ತಮ ಪ್ರಾರ್ಥನೆಯಾಗಿದೆ.

ಜನರು ಎಲ್ಲವನ್ನು ದೇವರ ದೃಷ್ಟಿಕೋನದಿಂದ ನೋಡಲು ಕಲಿತಿರುವಂತ ಒಂದು ಸಭೆಯನ್ನು ನೀವು ಕಟ್ಟಲು ಸಾಧ್ಯವಾದರೆ, ನೀವು ಒಂದು ಆತ್ಮಿಕ ಸಭೆಯನ್ನು ಹೊಂದಿದ್ದೀರಿ.