WFTW Body: 

ಹೊಸ ಒಡಂಬಡಿಕೆಯ ಶುಭಸಂದೇಶದ ಮೂಲಭೂತ ಅಂಶ ಏನೆಂದರೆ, ನಾವು ದೈವಿಕ ಸ್ವಭಾವದಲ್ಲಿ ಪಾಲ್ಗೊಳ್ಳಬಹುದು. ಪ್ರೀತಿಯು ದೇವರ ಸ್ವಭಾವವಾಗಿದೆ - ಮತ್ತು ಪ್ರೀತಿಯ ಅತಿ ಮುಖ್ಯ ಗುಣಲಕ್ಷಣವೇನೆಂದರೆ, ಅದು ತನ್ನ ಸ್ವಹಿತವನ್ನು ಹುಡುಕುವುದಿಲ್ಲ. ಯೇಸುವು ತನ್ನ ಸ್ವಂತದ ಲಾಭವನ್ನು ಬಯಸದೇ ಇದ್ದುದರಿಂದ ಅವರು ನಮ್ಮನ್ನು ರಕ್ಷಿಸಲು ಪರಲೋಕದಿಂದ ಭೂಲೋಕಕ್ಕೆ ಬಂದರು. ದೇವರು ನಮಗೆ ತೋರಿಸುವ ಪ್ರೀತಿಯನ್ನು ಒಬ್ಬ ತಾಯಿಯು ತನ್ನ ಮೊಲೆಗೂಸಿಗೆ ತೋರಿಸುವ ಪ್ರೀತಿಗೆ ಅವರು ಹೋಲಿಸುತ್ತಾರೆ (ಯೆಶಾಯನು 49:15). ಈ ಭೂಲೋಕದಲ್ಲಿ ಒಬ್ಬ ತಾಯಿಯು ತನ್ನ ಮೊಲೆಗೂಸಿಗೆ ತೋರಿಸುವ ಪ್ರೀತಿಗಿಂತ ಮಿಗಿಲಾದ ಪ್ರೀತಿಯಿಲ್ಲ - ಏಕೆಂದರೆ, ಒಬ್ಬ ಒಳ್ಳೆಯ ತಾಯಿಯಾದವಳು ತನ್ನ ಮಗುವಿನಿಂದ ಏನನ್ನೂ ಅಪೇಕ್ಷಿಸದೆ, ಆ ಕೂಸಿಗಾಗಿ ನಿಸ್ವಾರ್ಥವಾಗಿ ಎಲ್ಲವನ್ನೂ ಮಾಡುತ್ತಾಳೆ. ದೇವರ ಪ್ರೀತಿಯೂ ಸಹ ಇಂಥದ್ದಾಗಿದೆ - ಮತ್ತು ಈ ಸ್ವಭಾವದಲ್ಲಿ ನಾವು ಸಹ ಪಾಲ್ಗೊಳ್ಳಬೇಕಾಗಿದೆ. ಆಗ ಸ್ವತಃ ಯೇಸುವು ದೇವಜನರಿಗೆ ಸೇವೆ ಸಲ್ಲಿಸಿದ ಹಾಗೆ ನಾವು ಸಹ ಸೇವೆ ಸಲ್ಲಿಸಬಹುದು.

ಪ್ರೀತಿಯು ಕ್ರೈಸ್ತ ಜೀವನದ ಇಂಧನವಾಗಿದೆ. ಇಂಧನವಿಲ್ಲದ ವಾಹನವನ್ನು ತಳ್ಳಬೇಕಾಗುತ್ತದೆ. ಇದೇ ರೀತಿ, ಕರ್ತನಲ್ಲಿ ಆ ಉತ್ಕಟ ಪ್ರೀತಿಯು ಬತ್ತಿಹೋದಾಗ, ಕರ್ತನಿಗಾಗಿ ನಮ್ಮ ಶ್ರಮವು ಭಾರ ಹಾಗೂ ಹೊರೆಯಾಗುತ್ತದೆ, ಮತ್ತು ವಾಹನವನ್ನು ತಳ್ಳುವಷ್ಟೇ ಕಷ್ಟಕರವಾಗುತ್ತದೆ. ಆಗ ನಮ್ಮ ಅಕ್ಕಪಕ್ಕದಲ್ಲಿರುವ ಇತರರ ಬಲಹೀನತೆಗಳನ್ನು ಮತ್ತು ಮೂರ್ಖತನವನ್ನು ಸಹಿಸಿಕೊಳ್ಳುವುದು ಸಹ ಕಷ್ಟಕರವಾಗಿ ಪರಿಣಮಿಸುತ್ತದೆ. ಆದ್ದರಿಂದ ಇಂಧನವನ್ನು ತುಂಬಿಕೊಳ್ಳಲು ನಾವು ಮತ್ತೆ ಮತ್ತೆ ಅನಿಲ ನಿಲ್ದಾಣಕ್ಕೆ (ಪೆಟ್ರೋಲ್ ಬಂಕ್) ಹೋಗುವಂತೆ, ನಾವು ದೇವರಿಂದ "ಮತ್ತೆ ಮತ್ತೆ ಪವಿತ್ರಾತ್ಮನಿಂದ ತುಂಬಿಸಲ್ಪಡಬೇಕು" (ಎಫೆಸದವರಿಗೆ 5:18).

’ಕೋಪದ ಮೇಲೆ ಮತ್ತು ಕಾಮುಕ ದೃಷ್ಟಿಯ ಮೇಲೆ ಜಯವಷ್ಟೇ ನಮ್ಮ ಗುರಿಯಾಗಿರದೆ, ಇವು ಕೇವಲ ಸ್ವತಃ ದೇವರ ಸ್ವಭಾವದಲ್ಲಿ ಪಾಲ್ಗೊಳ್ಳುವ ಅಂತಿಮ ಗುರಿಯನ್ನು ತಲಪುವುದಕ್ಕೆ ಸಿದ್ಧತೆಯಾಗಿರಬೇಕು’. ನಮ್ಮೊಳಗಿನ ಶರೀರಭಾವವು ಅತಿಯಾಗಿ ಪಾಪದಿಂದ ತುಂಬಿದೆ, ಮತ್ತು ಪ್ರತಿದಿನ ಈ ಸ್ವಾರ್ಥತನವು ಮರಣಕ್ಕೆ ಒಳಗಾಗಬೇಕು. ನಾವು ನಮ್ಮ ಸ್ವಂತ ಹಿತ ಅಥವಾ ಗೌರವ ಅಥವಾ ಸುಖಸೌಕರ್ಯಗಳಿಗಾಗಿ, ಅಥವಾ ಸ್ವಂತ ಅನುಕೂಲವನ್ನು ಕಂಡುಕೊಳ್ಳಬಾರದು - ಏಕೆಂದರೆ ಅದು ನಿತ್ಯ ಮರಣವಾಗಿದೆ. ನಾವು ನಮಗಾಗಿರುವ ದೇವರ ಚಿತ್ತವನ್ನು ಮಾತ್ರ ಮಾಡಲು ನಮ್ಮನ್ನೇ ಸಂಪೂರ್ಣವಾಗಿ ಒಪ್ಪಿಸಿಕೊಳ್ಳುವುದು ಜೀವದ ದಾರಿಯಾಗಿದೆ - ಇದಕ್ಕಾಗಿ ನಮಗೆ ಎಷ್ಟಾದರೂ ವೆಚ್ಚ ತಗಲಬಹುದು. ನಾವು ಪ್ರತಿದಿನ, ಮತ್ತು ದಿನಕ್ಕೆ ಹಲವು ಬಾರಿ, ನಮ್ಮನ್ನೇ ನ್ಯಾಯತೀರ್ಪು ಮಾಡಿಕೊಳ್ಳಬೇಕು - ಇದನ್ನು ’ನಮ್ಮ ಅಂತರಂಗವನ್ನು ನೋಡುತ್ತಾ’ ಮಾಡುವುದಲ್ಲ, ಆದರೆ ’ತಲೆಯೆತ್ತಿ ಯೇಸುವನ್ನು ದೃಷ್ಟಿಸುತ್ತಾ’ ಮಾಡಬೇಕು - ಆ ರೀತಿಯಾಗಿ ಯಾವ ಕ್ಷೇತ್ರಗಳಲ್ಲಿ ನಾವು ದೇವರನ್ನು ಮಹಿಮೆಪಡಿಸುವುದರ ಬದಲಾಗಿ ನಮ್ಮ ಸ್ವಹಿತ ಅಥವಾ ಸ್ವಂತದ ಲಾಭಕ್ಕಾಗಿ ಶ್ರಮಿಸುತ್ತಿದ್ದೇವೆಯೆಂದು ನಮಗೆ ಅರಿವಾಗುತ್ತದೆ. ಆಗ ನಾವು ನಮ್ಮನ್ನು ಆ ಸ್ವಾರ್ಥದಿಂದ ಶುದ್ಧೀಕರಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದುವೇ ಪರಿಪೂರ್ಣತೆಯ ಮಾರ್ಗವಾಗಿದೆ. ಕೇವಲ ಕೆಲವರು ಮಾತ್ರ ಇಷ್ಟು ಯಥಾರ್ಥವಾಗಿ ಶರೀರಾತ್ಮಗಳ ಕಲ್ಮಶದಿಂದ ತಮ್ಮನ್ನು ತಾವೇ ಶುಚಿಮಾಡಿಕೊಳ್ಳುವ ಆಸಕ್ತಿ ಹೊಂದಿರುತ್ತಾರೆ (2 ಕೊರಿ. 7:1) - ಹಾಗಾಗಿ ಬಹಳ ಕಡಿಮೆ ಜನರು ಬೆಳವಣಿಗೆಯನ್ನು ಹೊಂದಿ ಯಥಾರ್ಥವಾದ ದೈವಿಕ ಜೀವನವನ್ನು ಜೀವಿಸುತ್ತಾರೆ.

"’ಬಲಪ್ರಯೋಗ ಮಾಡುವ ಮನುಷ್ಯರು’ ಮಾತ್ರ ಪರಲೋಕರಾಜ್ಯವನ್ನು ಸ್ವಾಧೀನ ಮಾಡಿಕೊಳ್ಳುತ್ತಾರೆ" ಎಂದು ಯೇಸುವು ಹೇಳಿದರು (ಮತ್ತಾಯನು 11:12). ಈ ಮಾತಿನ ಅರ್ಥವೇನೆಂದರೆ, ದೇವರ ಆಜ್ಞೆಗಳಿಗೆ ವಿಧೇಯರಾಗಲು ಅಡ್ಡಿಯಾಗಿರುವ ನಮ್ಮೊಳಗಿನ ಪ್ರತಿಯೊಂದು ಸಂಗತಿಯನ್ನೂ ಬಲಾತ್ಕಾರವಾಗಿ ಕಿತ್ತುಹಾಕಬೇಕು. ನಾವು ನಮ್ಮ ವಿಧೇಯತೆಯನ್ನು ಸಾಬೀತುಪಡಿಸುವುದು ದೇವರ ದೊಡ್ಡ ಆಜ್ಞೆಗಳನ್ನು ಪಾಲಿಸುವುದರ ಮೂಲಕವಲ್ಲ. ಯೇಸುವು ಹೇಳಿರುವ ಪ್ರಕಾರ, ಯಾರು ಕನಿಷ್ಠವಾದ (ಚಿಕ್ಕ) ಆಜ್ಞೆಗಳನ್ನು ಪಾಲಿಸುತ್ತಾನೋ ಮತ್ತು ಅವುಗಳನ್ನು ಪಾಲಿಸುವುದನ್ನು ಇತರರಿಗೆ ಕಲಿಸುತ್ತಾನೋ, ಅವನು ಪರಲೋಕರಾಜ್ಯದಲ್ಲಿ ಶ್ರೇಷ್ಠನೆಂದು ಕರೆಯಲ್ಪಡುವನು (ಮತ್ತಾಯನು 5:19). ಒಬ್ಬ ಚಿಕ್ಕ ಬಾಲಕನ ವಿಧೇಯತೆಯನ್ನು ಪರೀಕ್ಷಿಸುವುದು, ಅವನು ಯಾರನ್ನಾದರೂ ಕೊಲೆ ಮಾಡಿದ್ದಾನೋ ಅಥವಾ ಶಾಲೆಯಲ್ಲಿ ವ್ಯಭಿಚಾರ ಮಾಡಿದ್ದಾನೋ, ಎಂಬುದನ್ನು ಪರೀಕ್ಷಿಸುವುದರ ಮೂಲಕವಲ್ಲ. ಹಾಗಲ್ಲ. ಆತನ ತಾಯಿಯು ಯಾವುದೋ ಕೆಲಸದಲ್ಲಿ ಸಹಾಯಕ್ಕಾಗಿ ಅವನನ್ನು ಕರೆದಾಗ, ಅವನಿಗೆ ಆಟವಾಡುವ ಮನಸ್ಸಿದ್ದರೂ ಅದನ್ನು ಬದಿಗಿಟ್ಟು, ಆತನು ತನ್ನ ತಾಯಿಗೆ ವಿಧೇಯನಾಗುವುದರಿಂದ ಅದು ಪರೀಕ್ಷಿಸಲ್ಪಡುತ್ತದೆ. ಇದರಂತೆಯೇ ದೇವರೊಂದಿಗೆ ನಮ್ಮ ಸಂಬಂಧವನ್ನೂ ಸಹ ಪರಿಶೀಲಿಸಿ ನೋಡಬೇಕು. ನಾವು ದೈನಂದಿನ ಜೀವನದ ಸಣ್ಣಪುಟ್ಟ ವಿಷಯಗಳಲ್ಲಿ ನಂಬಿಗಸ್ತರಾಗಿ ನಡೆಯಬೇಕು. ಇಲ್ಲವಾದರೆ ನಾವು ಅವಿಧೇಯರಾಗಿದ್ದೇವೆ.

"ಮತ್ತಾಯನು 13:43"ರಲ್ಲಿ, "ನೀತಿವಂತರು ಸೂರ್ಯನಂತೆ ಪ್ರಕಾಶಿಸುವರು," ಎಂದು ಯೇಸುವು ಹೇಳಿದರು. ಸೂರ್ಯನು ಲಕ್ಷಾಂತರ ಡಿಗ್ರಿಯ ಅತ್ಯಂತ ಉಗ್ರ ಉಷ್ಣತೆಯಿಂದ ನಿರಂತರವಾಗಿ ಉರಿಯುತ್ತಿರುತ್ತಾನೆ. ಆದ್ದರಿಂದ ಯಾವುದೇ ಸೂಕ್ಷ್ಮಜೀವಿಗಳು ಅಥವಾ ಬ್ಯಾಕ್ಟೀರಿಯಾಗಳು ಅವನ ಮೇಲೆ ಬದುಕಲಾರವು. ನಾವು ಸಹ ಹಾಗೆ ಇರಬೇಕೆಂದು ದೇವರು ಬಯಸುತ್ತಾರೆ - ಯಾವಾಗಲೂ ಅವರಿಗಾಗಿ ಉರಿಯುತ್ತಿರುವುದು, ಯಾವಾಗಲೂ ಪರಿಶುದ್ಧತೆಗಾಗಿ, ಇತರರ ಸೇವೆ ಮಾಡುವುದರ ಮೂಲಕ ಅವರನ್ನು ಆಶೀರ್ವದಿಸುವುದಕ್ಕಾಗಿ, ನಮ್ಮನ್ನು ತಗ್ಗಿಸಿಕೊಳ್ಳಲಿಕ್ಕಾಗಿ, ಸಭಾಕೂಟಗಳಲ್ಲಿ ಸಾಕ್ಷಿ ನೀಡುವುದಕ್ಕಾಗಿ ಉತ್ಸುಕರಾಗಿರುವುದು ಮತ್ತು ತವಕಿಸುವುದು, ಮತ್ತು ಸಭೆಯನ್ನು ಕಟ್ಟುವ ಕಾರ್ಯಕ್ಕಾಗಿ ಸದಾ ಉರಿಯುತ್ತಿರುವುದು. ಇದನ್ನು ಮಾಡುವುದಕ್ಕೆ ಮುಂದಾಗುವ ಜನರಲ್ಲಿ ನಿಮ್ಮಂತಹ ಯುವ ಜನರು ಮೊದಲಿಗರು ಆಗಿರಬೇಕು. ನಾವು ಹೇಗೆ ಉರಿಯುತ್ತಾ ಇರಬಹುದು ಎಂಬುದನ್ನು ಯೇಸುವು ಮೇಲೆ ಉಲ್ಲೇಖಿಸಿದ ಸಂದರ್ಭದಲ್ಲಿ ಮುಂದಿನ ಮೂರು ವಚನಗಳಲ್ಲಿ (ಮತ್ತಾಯನು 13:44-46), ಎರಡು ಸಾಮ್ಯಗಳ ಮೂಲಕ ವಿವರಿಸಿದರು (ಒಂದು ಹೊಲದಲ್ಲಿ ಹೂಳಿಟ್ಟ ನಿಧಿಯ ಬಗ್ಗೆ ಮತ್ತು ಇನ್ನೊಂದು ಬಹು ಬೆಲೆಬಾಳುವ ಮುತ್ತಿನ ಬಗ್ಗೆ). ಇವೆರಡು ಸಾಮ್ಯಗಳಲ್ಲೂ ಒಂದು ನುಡಿಗಟ್ಟು ಮರುಕಳಿಸುವುದನ್ನು ನಾವು ನೋಡುತ್ತೇವೆ - "ಅವನು ತನ್ನ ಬದುಕನ್ನೆಲ್ಲಾ ಮಾರಿದನು." ಬೆಂಕಿಯಂತೆ ಉರಿಯುವುದರ ರಹಸ್ಯ ಇದರಲ್ಲಿ ಅಡಗಿದೆ. ನಾವು ನಮ್ಮ ಸ್ವೇಚ್ಛೆ, ನಮ್ಮ ಹಕ್ಕುಗಳು, ನಮ್ಮ ಗೌರವಾನ್ವಿತ ಸ್ಥಾನ, ಹಕ್ಕುಬಾಧ್ಯತೆಗಳು, ಇವೆಲ್ಲವನ್ನೂ ಬಿಟ್ಟುಕೊಡಬೇಕು. ಆಗ ಮಾತ್ರ ನಾವು ಸೂರ್ಯನಂತೆ ಪ್ರಜ್ವಲಿಸಬಹುದು - ಯಾವಾಗಲೂ ಉರಿಯುತ್ತಾ ಇರಬಹುದು.