WFTW Body: 

ಪಶ್ಚಾತ್ತಾಪದಿಂದ ಜಜ್ಜಿಹೋದ ಹೃದಯವು ದೇವರಿಗೆ ಇಷ್ಟವಾದ ಯಜ್ಞವಾಗಿದೆ. ಆ ಹೃದಯವು ತನ್ನ ಶೂನ್ಯತೆ ಹಾಗೂ ಅಸಹಾಯಕತೆಯನ್ನು ಅರಿತುಕೊಂಡಿದೆ (ಕೀರ್ತ. 51:17). ಇಂತಹ ಮನಸ್ಸು ಹೇಬೆಲನಲ್ಲಿತ್ತು, ಮತ್ತು ಕಾಯಿನನಲ್ಲಿ ಅದು ಇರಲಿಲ್ಲ. ಆದುದರಿಂದ ದೇವರ ವಾಕ್ಯದಲ್ಲಿ ಹೀಗೆ ಬರೆಯಲ್ಪಟ್ಟಿದೆ, "ಕರ್ತನು ಹೇಬೆಲನನ್ನು ಮೆಚ್ಚಿದನು, (ಆದುದರಿಂದ) ಅವನ ಕಾಣೆಕೆಯನ್ನು ಕೂಡ ಮೆಚ್ಚಿದನು... ಆದರೆ ಕರ್ತನು ಕಾಯಿನನನ್ನು ಮೆಚ್ಚಲಿಲ್ಲ, (ಆದುದರಿಂದ) ಅವನ ಕಾಣಿಕೆಯನ್ನು ಕೂಡ ಮೆಚ್ಚಲಿಲ್ಲ" (ಆದಿ. 4:5).

ಆತ್ಮವು ಅಸಹಾಯಕತೆಯಿಂದ ದೇವರನ್ನು ಅವಲಂಬಿಸಿರುವುದೇ ನಂಬಿಕೆಯಾಗಿದೆ ಮತ್ತು "ಹೇಬೆಲನು ನಂಬಿಕೆಯಿಂದಲೇ ಕಾಯಿನನ ಯಜ್ಞಕ್ಕಿಂತ ಶ್ರೇಷ್ಠವಾದ ಯಜ್ಞವನ್ನು ದೇವರಿಗೆ ಸಮರ್ಪಿಸಿದನು" (ಇಬ್ರಿ. 11:4). ಆದ್ದರಿಂದ ಹೇಬೆಲನ ಕಾಣಿಕೆಗಳು ದೇವರಿಗೆ ಒಪ್ಪಿಗೆಯಾದವು.

ಹೇಬೆಲ ಮತ್ತು ಕಾಯಿನರ ನಡುವಿನ ವ್ಯತ್ಯಾಸದ ಬಗ್ಗೆ ಒಂದು ದೊಡ್ಡ ಕಪಟತನದ ಬೋಧನೆ ಏನೆಂದರೆ, ಹೇಬಲನು ರಕ್ತವನ್ನು ಅರ್ಪಿಸಿದನು, ಆದರೆ ಕಾಯಿನನು ಅದನ್ನು ಅರ್ಪಿಸಲಿಲ್ಲ, ಎನ್ನುವಂತದ್ದು. ಈ ಬೋಧನೆಯ ಒಳಗಿನ ಅರ್ಥ ಏನೆಂದರೆ, ಒಬ್ಬ ಮನುಷ್ಯನು ಯೇಸುವಿನ ರಕ್ತವನ್ನು ದೇವರಿಗೆ ಅರ್ಪಿಸಿದರೆ, ಅವನು ದೇವರಿಗೆ ಒಪ್ಪಿಗೆಯಾದ ಮನುಷ್ಯನಾಗುತ್ತಾನೆ, ಎಂಬುದಾಗಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಮನುಷ್ಯನು ಜೀವಿಸುವ ರೀತಿ ಮತ್ತು ಅವನ ಹೃದಯದ ಸ್ಥಿತಿ (ಅದು ಮುರಿಯಲ್ಪಟ್ಟಿದೆಯೋ ಇಲ್ಲವೋ, ಅದರಲ್ಲಿ ನಂಬಿಕೆ ಇದೆಯೋ ಅಥವಾ ಇಲ್ಲವೋ) ಇವೆಲ್ಲವೂ ಹೇಗಿದ್ದರೂ ಪರವಾಗಿಲ್ಲ, ಎಂದು ಹೇಳುವಂತದ್ದು. ಮನುಷ್ಯನು ಮಾಡಬೇಕಾದದ್ದು ಏನೆಂದರೆ, ತನ್ನ ಮುಂದೆ ಯೇಸುವಿನ ರಕ್ತವನ್ನು ಒಂದು ಮಾಂತ್ರಿಕನ ಮೋಡಿಯಂತೆ (ಚಮತ್ಕಾರದಂತೆ) ದೇವರಿಗೆ ಮನವಿ ಮಾಡುವುದು, ಮತ್ತು ಅದರ ಮೂಲಕ ದೇವರ ಮನ್ನಣೆಯನ್ನು ಪಡೆಯುವುದು. ಇದು ಒಂದು ಸುಳ್ಳಾಗಿದೆ ಮತ್ತು ಇದರ ಮೂಲಕ ಅನೇಕರು ಮೋಸಹೋಗುತ್ತಿದ್ದಾರೆ.

ಯೇಸುವಿನ ರಕ್ತವನ್ನು ಎಲ್ಲರೂ ಮತ್ತು ಯಾರಾದರೂ ತಮಗೆ ಸೇರಿದ್ದೆಂದು ಹಕ್ಕು ಸಾಧಿಸಲು ಆಗುವುದಿಲ್ಲ. ದೇವರ ವಾಕ್ಯದಲ್ಲಿ ಯೇಸುವಿನ ರಕ್ತವು ಪ್ರತಿಯೊಬ್ಬರನ್ನು ಮತ್ತು ಯಾರನ್ನಾದರೂ ಶುದ್ಧೀಕರಿಸಿ ಪಾಪ ವಿಮುಕ್ತಿಗೊಳಿಸುತ್ತದೆಂದು ಹೇಳಲಾಗಿಲ್ಲ. ಇಲ್ಲ. ಹೀಗೆ ಹೇಳುವದು ದೇವರ ವಾಕ್ಯವನ್ನು ಕುತಂತ್ರದಿಂದ ಭ್ರಷ್ಟಗೊಳಿಸುವುದಾಗಿದೆ. ನಿಜವಾಗಿ ದೇವರ ವಚನವು ಹೇಳಿರುವುದು ಏನೆಂದರೆ, "ದೇವರು ಬೆಳಕಿನಲ್ಲಿ ಇರುವಂತೆಯೇ ಯಾರು ಬೆಳಕಿನಲ್ಲಿ ನಡೆಯುತ್ತಾರೋ," ಅವರೆಲ್ಲರನ್ನು ಯೇಸುವಿನ ರಕ್ತವು ಶುದ್ಧೀಕರಿಸುತ್ತದೆ, ಎಂಬುದಾಗಿ (1 ಯೋಹಾ 1:7). ದೇವರ ಬೆಳಕಿನಲ್ಲಿ ನಡೆಯುವುದಕ್ಕೆ, ಹೇಬೆಲನು ಹೊಂದಿದ್ದ ಪಶ್ಚಾತ್ತಾಪದಿಂದ ಜಜ್ಜಿಹೋದ ಹೃದಯವು ಒಬ್ಬನಲ್ಲಿರಬೇಕು. ಆಗ ಮಾತ್ರ ಒಬ್ಬನು ಕೊಡುವ ಕಾಣಿಕೆಯು ದೇವರಿಗೆ ಸ್ವೀಕಾರಾರ್ಹವಾಗುತ್ತದೆ.

ಒಬ್ಬ ವ್ಯಕ್ತಿಯು ತಾನು ಯೇಸುವಿನ ರಕ್ತದಲ್ಲಿ ನಂಬಿಕೆ ಇರಿಸಿದ್ದೇನೆಂದು ಹೇಳಿಕೊಂಡರೂ, ತನ್ನಲ್ಲಿ ಜಂಭ ಮತ್ತು ಅಹಂಕಾರದ ಆತ್ಮವನ್ನು ಇರಿಸಿಕೊಂಡಿದ್ದರೆ, ದೇವರು ಕಾಯಿನನನ್ನು ವಿರೋಧಿಸಿದಂತೆ, ಅವರು ಆ ವ್ಯಕ್ತಿಯನ್ನು ಎದುರಿಸಿ ವಿರೋಧಿಸುತ್ತಾರೆ (1 ಪೇತ್ರ. 5:5). ದೀನರು ಮಾತ್ರ ಕೃಪೆಯ ಅನುಗ್ರಹವನ್ನು ಹೊಂದುತ್ತಾರೆ (ಯಾಕೋಬ. 4:6).

ನಮ್ಮ ಆರಾಧನೆ, ಪ್ರಾರ್ಥನೆ ಮತ್ತು ಸೇವೆಯ ಕಾಣಿಕೆಗಳು ಪಶ್ಚಾತ್ತಾಪದಿಂದ ಜಜ್ಜಿಹೋದ ಆತ್ಮದಿಂದ ನಂಬಿಕೆಯೊಂದಿಗೆ ಬಂದರೆ ಮಾತ್ರ (ದೇವರಿಗೆ ದೀನತೆಯಿಂದ ಶರಣಾಗುವುದು) ದೇವರು ಅವನ್ನು ಸ್ವೀಕರಿಸುತ್ತಾರೆ. ನಮ್ಮ ಮಾತಿನ ವಾಕ್ಚಾತುರ್ಯ ಅಥವಾ ಸೇವೆಯ ದಕ್ಷತೆಯನ್ನು ದೇವರು ಪರಿಶೀಲಿಸುವುದಿಲ್ಲ, ಬದಲಿಗೆ ನಮ್ಮಲ್ಲಿ ಹೃದಯದ ದೀನತೆ ಇರಬೇಕೆಂದು ಅವರು ಬಯಸುತ್ತಾರೆ. ’ಆದಿಕಾಂಡ 4'ನೇ ಅಧ್ಯಾಯದ ಘಟನೆಯಿಂದ ನಾವು ಕಲಿಯಬಹುದಾದ ಮೊದಲ ಪಾಠ ಇದಾಗಿದೆ.

ಕಾಯಿನ ಮತ್ತು ಹೇಬೆಲರ ಕಾಲದಿಂದ ಆರಂಭಿಸಿ ಯುಗದ ಅಂತ್ಯದವರೆಗೆ, ಯಾವಾಗಲೂ ಪಶ್ಚಾತ್ತಾಪದಿಂದ ಜಜ್ಜಿಹೋದ ಆತ್ಮವು ದೇವರಿಗೆ ಒಪ್ಪಿಗೆಯಾದ ಕಾಣಿಕೆಯಾಗಿರುತ್ತದೆ. ದೇವರು ಬದಲಾಗುವುದಿಲ್ಲ. ಅವರ ಧರ್ಮಶಾಸ್ತ್ರದ ನಿಯಮಗಳು ಬದಲಾಗುವುದಿಲ್ಲ.

ಕಾಯಿನನು ಒಂದು ಕುರಿಯನ್ನು ತಂದು ಅದರ ರಕ್ತವನ್ನು ಕಾಣಿಕೆಯಾಗಿ ಸಮರ್ಪಿಸಿದ್ದರೂ ಸಹ, ದೇವರು ಆತನನ್ನು ಸ್ವೀಕರಿಸುತ್ತಿರಲಿಲ್ಲ, ಏಕೆಂದರೆ ಆತನ ಹೃದಯವು ಜಂಬದಿಂದ ಕೊಬ್ಬಿಹೋಗಿತ್ತು.

ಹೃದಯದ ದೀನತೆಯು ರಕ್ಷಣೆ ಪಡೆಯುವದಕ್ಕೆ ಮೊದಲನೆಯ ಹೆಜ್ಜೆಯಾಗಿದೆ. ಇದರ ನಂತರ ನಾವು ಬೆಳಕಿಗೆ ಪ್ರವೇಶಿಸಿ, ಯೇಸುವಿನ ರಕ್ತವು ನಮ್ಮ ಸಕಲ ಪಾಪಗಳನ್ನು ನಿವಾರಿಸಬೇಕೆಂದು ಬೇಡಿಕೊಳ್ಳಬಹುದು.

ಹೃದಯದಲ್ಲಿ ದೀನತೆಯುಳ್ಳವರು ಮಾತ್ರವೇ ಅಪೊಸ್ತಲ ಪೌಲನೊಂದಿಗೆ ಜಯಧ್ವನಿಯಿಂದ, "ದೇವರು ನಮ್ಮ ಕಡೆ ಇದ್ದರೆ, ನಮ್ಮನ್ನು ಎದುರಿಸುವವರು ಯಾರು?" ಎಂದು ಘೋಷಿಸಬಹುದು (ರೋಮಾ. 8:31), ಏಕೆಂದರೆ ದೇವರು ಕೇವಲ ದೀನರ ಜೊತೆಯಲ್ಲಿ ಇರುತ್ತಾರೆ. ಮೇಲೆ ಉಲ್ಲೇಖಿಸಿರುವ ಮಾತನ್ನು ಅಹಂಕಾರಿಗಳು ಹೇಳಲು ಆಗುವುದಿಲ್ಲ, ಏಕೆಂದರೆ ದೇವರು ಅವರ ವಿರೋಧವಾಗಿ ಇರುತ್ತಾರೆ. ಯಾರೇ ಆದರೂ ತನ್ನನ್ನೇ ಹೆಚ್ಚಳಪಡಿಸಿಕೊಂಡು ಕಾಯಿನನಂತೆ ನಡೆದರೆ, ಆತನು ಯೇಸುವಿನ ರಕ್ತದ ಮೂಲಕ ತಾನು ರಕ್ಷಿಸಲ್ಪಟ್ಟಿರುವುದಾಗಿ ಹೇಳುತ್ತಿದ್ದರೂ, ಅವನಿಗೆ ಕಾಯಿನನ ಅಂತ್ಯವೇ ಸಿಗುತ್ತದೆ. "ಮೋಸಹೋಗಬೇಡಿರಿ; ದೇವರು ತಿರಸ್ಕಾರ ಸಹಿಸುವವನಲ್ಲ. ಮನುಷ್ಯನು ಏನು ಬಿತ್ತುತ್ತಾನೋ ಅದನ್ನೇ ಅವನು ಕೊಯ್ಯಬೇಕು" (ಗಲಾ. 6:7). ಈ ನಿಯಮವು ಒಟ್ಟಾರೆಯಾಗಿ ಮಾನ್ಯರಿಗೂ ಸಾಮಾನ್ಯರಿಗೂ - ಎಲ್ಲರಿಗೂ ಅನ್ವಯಿಸುತ್ತದೆ.