WFTW Body: 

ನೀವು ಹಲವಾರು ವರ್ಷಗಳಿಂದ ಕ್ರೈಸ್ತಸಭೆಯ ಮೂಲಕ ಪಡಕೊಂಡಿರುವ ಆತ್ಮಿಕ ಆಹಾರವು ಬಹಳ ಬೆಲೆಯುಳ್ಳದ್ದೆಂದು ಅರಿತುಕೊಂಡಿದ್ದರೆ, ಆಗ ಸಭೆ ಅಮೂಲ್ಯವಾದದ್ದೆಂದು ಅದಕ್ಕೆ ಹೆಚ್ಚಿನ ಮಾನ್ಯತೆಯನ್ನು ಕೊಡುತ್ತೀರಿ. ಯಾರಾದರೂ ನಿಮ್ಮನ್ನು ಒಂದೇ ಒಂದು ದಿನ ಭೋಜನಕ್ಕೆ ಆಹ್ವಾನಿಸಿದ್ದರೆ, ನೀವು ಅವರ ಉಪಕಾರವನ್ನು ಎಷ್ಟರ ಮಟ್ಟಿಗೆ ನೆನಸಿಕೊಳ್ಳುತ್ತೀರೆಂದು ಯೋಚಿಸಿರಿ. ಹಾಗಾದರೆ ನೀವು ಸಭೆಯಲ್ಲಿ, ಹಲವಾರು ವರ್ಷಗಳಿಂದ, ನಿರಂತರವಾಗಿ ಪಡೆದಿರುವ ಆತ್ಮಿಕ ಭೋಜನಕ್ಕಾಗಿ ಇನ್ನೂ ಎಷ್ಟು ಹೆಚ್ಚಿನ ಕೃತಜ್ಞತೆಯುಳ್ಳವರಾಗಿ ಇರಬೇಕೆಂದು ಯೋಚಿಸಿರಿ.

ಅಥವಾ ಈ ವಿಷಯವನ್ನು ಇನ್ನೊಂದು ರೀತಿಯಲ್ಲಿ ನೋಡಿರಿ. ಒಂದು ವೇಳೆ ಯಾರಾದರೂ ನಿಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಿ, ಅವರನ್ನು ಅಪಾಯದಿಂದ ರಕ್ಷಿಸಿ, ಅವರು ಕಾಯಿಲೆ ಬಿದ್ದಾಗ ಅವರ ಆರೈಕೆ ಮಾಡಿ, ಅವರು ನಿರುತ್ಸಾಹಗೊಂಡಾಗ ಅವರನ್ನು ಧೈರ್ಯಪಡಿಸಿ, ಮತ್ತು ಅವರ ವಿದ್ಯಾಭ್ಯಾಸದಲ್ಲಿ ಉತ್ತಮ ಅಂಕವನ್ನು ಪಡೆಯುವಂತೆ ಅವರಿಗೆ ಸಹಾಯ ಮಾಡಿದ್ದಾರೆ ಅಂದುಕೊಳ್ಳೋಣ. ಅಷ್ಟೇ ಅಲ್ಲದೆ ಆ ವ್ಯಕ್ತಿಯು ಇದನ್ನು ಕೇವಲ ಒಂದೆರಡು ವರ್ಷಗಳು ಅಲ್ಲ, ಆದರೆ ಅನೇಕ ವರ್ಷಗಳ ವರೆಗೆ ಮಾಡಿದ್ದಾರೆ ಅನ್ನೋಣ. ಆ ವ್ಯಕ್ತಿಯ ಉಪಕಾರವನ್ನು ನೀವು ನೆನಸಿಕೊಳ್ಳುತ್ತೀರಿ ಅಲ್ಲವೇ? ಸಭೆಯು ನಿಮ್ಮ ಮಕ್ಕಳನ್ನು ಕಾಪಾಡಿದಕ್ಕಾಗಿ ನೀವು ಕಡಿಮೆ ಪಕ್ಷ ಅಷ್ಟೇ ಕೃತಜ್ಞತೆ ಉಳ್ಳವರಾಗಿದ್ದೀರಾ? ಅನೇಕ ವಿಶ್ವಾಸಿಗಳು ಆತ್ಮಿಕವಾಗಿ ಬೆಳವಣಿಗೆ ಹೊಂದದೇ ಇರುವುದಕ್ಕೆ ಒಂದು ಕಾರಣ, ಅವರು ಸಭೆಯಿಂದ ಪಡಕೊಂಡ ವಿಷಯಗಳಿಗಾಗಿ ಸ್ತೋತ್ರ ಸಲ್ಲಿಸುವ ಮನೋಭಾವವನ್ನು ಹೊಂದಿಲ್ಲ. ಸಭೆಯನ್ನು ಬಿಟ್ಟು ಹೋಗಿರುವವರು ಯಾರೆಂದರೆ, ತಾವು ಎಷ್ಟೋ ವರ್ಷಗಳಿಂದ ಸಭೆಯಿಂದ ಉಚಿತವಾಗಿ ಹೊಂದಿದ ಎಲ್ಲಾ ಸಂಗತಿಗಳಿಗಾಗಿ ಸ್ವಲ್ಪವಾದರೂ ಉಪಕಾರವನ್ನು ನೆನಸದೇ ಇರುವಂಥವರು ಆಗಿದ್ದಾರೆ.

ನಾವು ಲೂಕ. 17:15ರಲ್ಲಿ, ಹತ್ತು ಮಂದಿ ಕುಷ್ಠರೋಗಿಗಳು ಗುಣ ಹೊಂದಿದ ವಿಷಯವನ್ನು ಓದುತ್ತೇವೆ. ಆದರೆ ಅವರಲ್ಲಿ ಒಬ್ಬನು ಮಾತ್ರ ವಾಪಾಸು ಬಂದು ತನಗೆ ಗುಣವಾದುದಕ್ಕಾಗಿ ಕರ್ತ ಯೇಸುವಿಗೆ ಉಪಕಾರ ಸಲ್ಲಿಸಿದನು ಮತ್ತು ದೇವರನ್ನು ಕೊಂಡಾಡಿದನು. ಆ ಹತ್ತು ಮಂದಿ ಕೊರತೆಯಲ್ಲಿದ್ದಾಗ, ಎಲ್ಲರೂ ಒಟ್ಟಾಗಿ "ನಮ್ಮ ಮೇಲೆ ದಯೆ ತೋರಿಸಿ" ಎಂದು ಮಹಾಶಬ್ದದಿಂದ ಕೂಗಿಕೊಂಡಿದ್ದರು. ಆದರೆ ರೋಗದಿಂದ ಸ್ವಸ್ಥರಾದಾಗ, ಅವರಲ್ಲಿ ಒಂಭತ್ತು ಜನರಲ್ಲಿ ತಾವು ಪಡೆದ ಉಪಕಾರಕ್ಕಾಗಿ ಸ್ವಲ್ಪವೂ ಕೃತಜ್ಞತೆ ಇರಲಿಲ್ಲ. ಒಬ್ಬನು ಮಾತ್ರ ಧ್ವನಿಯೆತ್ತಿ ಸ್ತೋತ್ರ ಸಲ್ಲಿಸಿದನು. ಹೀಗೆಯೇ ರೋಗದಿಂದ ಗುಣ ಹೊಂದಿದರೂ ಕರ್ತನ ಉಪಕಾರ ಸ್ಮರಣೆ ಮಾಡದಿದ್ದ ಇತರ ಸಾವಿರಾರು ಜನರು ಕಾನಾನ್ ದೇಶದಲ್ಲಿ ("Palestine") ಇದ್ದಿರಬೇಕು.

ಆದರೆ ಈ ಸಮಾರ್ಯದವನು ಹಿಂದಿರುಗಿ ಬಂದನು ಮತ್ತು ಕರ್ತನಿಗೆ ಸ್ತೋತ್ರ ಸಲ್ಲಿಸಿದನು. ಅವನು ಕರ್ತನಿಗೆ ಹೀಗೆ ಹೇಳಿರಬಹುದು, "ಕರ್ತನೇ, ನೀನು ನನ್ನನ್ನು ಮುಟ್ಟಿದ್ದರಿಂದ ನನ್ನ ಭವಿಷ್ಯದ ಜೀವನ ಎಷ್ಟು ಬದಲಾವಣೆ ಹೊಂದಲಿದೆ. ನಾನು ನಗರದ ಒಳಗೆ ಪ್ರವೇಶಿಸಬಹುದು. ನಾನು ನನ್ನ ಕುಟುಂಬಕ್ಕೆ ಹಿಂದಿರುಗಬಹುದು. ನೀನು ನನ್ನ ಜೀವನದಲ್ಲಿ ಹರ್ಷವನ್ನು ತಂದಿದ್ದೀ. ನಾನು ಈ ಆಶೀರ್ವಾದಗಳಲ್ಲಿ ಒಂದನ್ನೂ ಮರೆಯಲಾರೆ. ನಾನು ಇವೆಲ್ಲವುಗಳಿಗಾಗಿ ನಿನಗೆ ಆಭಾರಿಯಾಗಿದ್ದೇನೆ ಮತ್ತು ನನ್ನ ಜೀವನದ ಸಕಲ ಸೌಭಾಗ್ಯಕ್ಕಾಗಿ ನಾನು ಚಿರಋಣಿಯಾಗಿದ್ದೇನೆ". ಆತನು ಪಡೆದ ಉಪಕಾರಗಳಿಗಾಗಿ ಅವನಲ್ಲಿ ಕೃತಜ್ಞತಾ ಭಾವನೆ ಇದ್ದುದನ್ನು ಯೇಸುವು ಮೆಚ್ಚಿದನು. ಹಾಗಾಗಿ ಯೇಸುವು ಅವನಿಗೆ ಇನ್ನೂ ಹೆಚ್ಚಿನದನ್ನು ಕೊಟ್ಟನು. ಅವನಿಗೆ ಅವನ ನಂಬಿಕೆಯ ಮೂಲಕ ರಕ್ಷಣೆ ಸಿಕ್ಕಿದೆಯೆಂದು ಕರ್ತನು ಹೇಳಿದನು. ಆ ಶುದ್ಧೀಕರಿಸಲ್ಪಟ್ಟ ಕುಷ್ಠರೋಗಿಯು ರೋಗದಿಂದ ಗುಣಹೊಂದಿದ್ದು ಮಾತ್ರವಲ್ಲದೆ, ಕರ್ತನಿಂದ ಬೇರೊಂದನ್ನು ಪಡೆದನು. ಅವನ ರೋಗವು ಈಗಾಗಲೇ ಗುಣವಾಗಿತ್ತು. ಆದರೆ ಅವನು ಕೃತಜ್ಞತೆ ಸಲ್ಲಿಸಿದ್ದರಿಂದ, ಅವನಿಗೆ ರಕ್ಷಣೆಯೂ ದೊರಕಿತು. ನಾನು ಪರಲೋಕದಲ್ಲಿ ಈ ಸಮಾರ್ಯದವನನ್ನು ಭೇಟಿ ಮಾಡುತ್ತೇನೆಂದು ನನಗೆ ಖಾತ್ರಿಯಿದೆ. ಆದರೆ ಮಿಕ್ಕ ಒಂಭತ್ತು ಜನರಲ್ಲಿ ಯಾರನ್ನಾದರೂ ಭೇಟಿಯಾಗುವುದರ ಬಗ್ಗೆ ನಾನು ಏನನ್ನೂ ಹೇಳಲಾರೆ. ನೀವು ಹಿಂದಿರುಗಿ ಬಂದು ಕರ್ತನ ಉಪಕಾರಕ್ಕಾಗಿ ಸ್ತೋತ್ರ ಸಲ್ಲಿಸಿದಾಗ, ನಿಮಗೆ ಇತರರಿಗಿಂತ ಹೆಚ್ಚಿನ ಆಶೀರ್ವಾದ ಲಭಿಸುತ್ತದೆ.

ಭೂಲೋಕದಲ್ಲಿ ಕ್ರೈಸ್ತಸಭೆಯು ಕರ್ತನ ದೇಹವಾಗಿದೆ, ಹಾಗಾಗಿ ಆತನು ಸಭೆಯ ಮಧ್ಯದಲ್ಲಿ ಇದ್ದಾನೆ. ಈಗ ನಾವು ಕರ್ತನ ದೇಹಕ್ಕೆ (ಸಭೆಗೆ) ಮಾನ್ಯತೆಯನ್ನು ಕೊಡುವುದರ ಮೂಲಕ ಕರ್ತನಿಗೆ ಮೆಚ್ಚುಗೆಯನ್ನು ತೋರಿಸುತ್ತೇವೆ. ನೀವು ಸಭೆಯನ್ನು ಇಷ್ಟಪಡದೆ ಇದ್ದರೆ ಮತ್ತು ಅದಕ್ಕೆ ಮಾನ್ಯತೆ ಕೊಡದೇ ಹೋದರೆ, ಅದರಿಂದ ನಿಮಗೆ ಹಾನಿಯಾಗುತ್ತದೆ, ಸಭೆಗಲ್ಲ. ಸಭೆಗೆ ಹೆಚ್ಚಿನ ಬೆಲೆ ಕೊಟ್ಟಿರುವವರಿಗೆ ಮತ್ತು ಸಭೆಯಿಂದ ಪಡೆದ ಉಪಕಾರಕ್ಕಾಗಿ ಕೃತಜ್ಞರಾಗಿ ಇರುವಂಥವರಿಗೆ ದೇವರು ಬಹಳ ಶ್ರೇಷ್ಠವಾದ ಆಶೀರ್ವಾದವನ್ನು ನೀಡಿದ್ದಾರೆ.

ಯೇಸುವು ತನ್ನ ಶಿಷ್ಯರ ನಿಷ್ಠೆಯು ಬಹಳ ಬೆಲೆಯುಳ್ಳದ್ದು ಎಂದು ಪರಿಗಣಿಸಿದನು. ಆತನು ಒಂದು ಸಂದರ್ಭದಲ್ಲಿ ಶಿಷ್ಯರಿಗೆ ಹೇಳಿದ್ದು ಏನೆಂದರೆ, ಅವರೆಲ್ಲರೂ ಮುಂದೆ ಸ್ವಲ್ಪ ಸಮಯದ ನಂತರ ಅವರವರ ಸ್ಥಳಗಳಿಗೆ ಚದರಿಹೋಗಿ, ಆತನನ್ನು ಒಂಟಿಗನಾಗಿ ಬಿಟ್ಟರೂ ಆತನು ಒಂಟಿಗನಾಗಿ ಇರುವುದಿಲ್ಲ, ಏಕೆಂದರೆ ತಂದೆಯು ಆತನ ಸಂಗಡ ಇರುತ್ತಾರೆ (ಯೋಹಾ. 16:32) . ಹಾಗಾಗಿ ಆತನಿಗೆ ಶಿಷ್ಯರ ಅವಶ್ಯಕತೆ ಇರಲಿಲ್ಲ. ಆದಾಗ್ಯೂ ’ಲೂಕ. 22:28'ರಲ್ಲಿ, ಅವರು ಎಡೆಬಿಡದೆ ತನ್ನ ಕಷ್ಟಗಳಲ್ಲಿ ತನ್ನ ಸಂಗಡ ಇದ್ದುದಕ್ಕಾಗಿ ಅವನು ಅವರಿಗೆ ಧನ್ಯವಾದವನ್ನು ಅರ್ಪಿಸುತ್ತಾನೆ. ಆತನು ಮಹಿಮೆಯುಳ್ಳ ಕರ್ತನಾಗಿದ್ದನು. ಆತನ ಜೊತೆಗೆ ಯಾರಾದರೂ ನಿಲ್ಲಬೇಕಾದ ಅವಶ್ಯಕತೆ ಅವನಿಗೆ ಇರಲಿಲ್ಲ. ಆದರೆ ಅವನಿಗೆ ಅವರ ಬೆಂಬಲದ ಅವಶ್ಯಕತೆ ಇರದಿದ್ದರೂ, ಅವನು ಅವರ ನಂಬಿಗಸ್ತಿಕೆಯನ್ನು ಮೆಚ್ಚಿದನು. ಅವನ ಮಾತಿನ ಅರ್ಥ ಹೀಗಿತ್ತು: "ನೀವು ನಿಮ್ಮ ಹಳೆಯ ಯೆಹೂದ್ಯ ಪದ್ಧತಿಯನ್ನು ತೊರೆದಿದ್ದೀರಿ ಮತ್ತು ದ್ರಾಕ್ಷಾರಸದ ಹಳೆಯ ಬುದ್ದಲಿಯನ್ನು ತ್ಯಜಿಸಿದ್ದೀರಿ. ನೀವು ಮದಲಗಿತ್ತಿಯ ಆತ್ಮಕ್ಕೂ ಮತ್ತು ವೇಶ್ಯಾಸ್ತ್ರೀಯ ಆತ್ಮಕ್ಕೂ ನಡುವೆ ಇರುವ ಅಂತರವನ್ನು ತಿಳಿದುಕೊಂಡು, ನನ್ನ ಜೊತೆಯಲ್ಲಿ ನಿಲ್ಲುವುದಕ್ಕೆ ಎಷ್ಟು ಬೆಲೆಯನ್ನಾದರೂ ಕೊಡಲು ಸಿದ್ಧರಾಗಿ ನನ್ನ ಬಳಿಗೆ ಬಂದಿದ್ದೀರಿ."

ಕಡೇ ದಿನದಲ್ಲಿ, ಕರ್ತನು ನಮ್ಮನ್ನು ಹೀಗೆ ವಿವರಿಸಲು ಸಾಧ್ಯವಾಗಲಿ ಎಂದು ನನ್ನ ಹಾರೈಕೆಯಾಗಿದೆ - ನಾವು ಅವನೊಂದಿಗೆ ನಿಂತಿದ್ದೇವೆ ಮತ್ತು ಅವನ ಬಗ್ಗೆ ನಾಚಿಕೊಳ್ಳಲಿಲ್ಲ, ಮತ್ತು ಅವನು ನಮ್ಮನ್ನು ಇರಿಸಿದ ಸಭೆಯನ್ನು ನಾವು ಪ್ರೀತಿಸಿದೆವು ಮತ್ತು ನಮ್ಮನ್ನು ಅದಕ್ಕೆ ಸಮರ್ಪಿಸಿಕೊಂಡೆವು, ಅದಲ್ಲದೆ ನಾವು ಇತರ ಹಲವರಂತೆ ಸಭೆಯ ವಿರುದ್ಧ ಗೊಣಗುಟ್ಟಲಿಲ್ಲ. ಸಹೋದರ ಸಹೋದರಿಯರೇ, ಸಭೆಯು ನಮಗೆ ಮತ್ತು ನಮ್ಮ ಮಕ್ಕಳಿಗೆ ಒದಗಿಸಿರುವ ವಿಶೇಷವಾದ ಸುರಕ್ಷತೆಗಾಗಿ ನಾವು ಅದಕ್ಕೆ ಮೆಚ್ಚುಗೆ ಮತ್ತು ಹೊಗಳಿಕೆಯನ್ನು ನೀಡೋಣ. ಯುವಜನರೇ, ಸಭೆಯು ನಿಮ್ಮನ್ನು ಎಂತಹ ಅಪಘಾತ, ಅಪಾಯ ಮತ್ತು ಪಾಪದಿಂದ ರಕ್ಷಿಸಿದೆ ಎಂಬುದರ ಅಂದಾಜು ನೀವು ಮಾಡಲಾರಿರಿ. ಸಭೆಯ ಕಟ್ಟುನಿಟ್ಟಾದ ನೈತಿಕ ಪರಿಸರವು ನೀವು ಲೋಕದ ಕಡೆಗೆ ಸೆಳೆಯಲ್ಪಟ್ಟು ಕೆಟ್ಟುಹೋಗದಂತೆ ನಿಮ್ಮನ್ನು ತಡೆಹಿಡಿದಿತ್ತು, ಎಂದು ನೀವು ಕರ್ತನ ಮುಂದೆ ನಿಲ್ಲುವ ದಿನದಲ್ಲಿ ಮಾತ್ರವೇ ನಿಮಗೆ ಅರಿವಾಗುತ್ತದೆ. ನೀವು ಅನೇಕ ವರ್ಷಗಳ ಹಿಂದೆ ಸಭೆಯಲ್ಲಿ ಕೇಳಿಸಿಕೊಂಡ ಎಚ್ಚರಿಕೆಯು, ಅನೇಕ ವರ್ಷಗಳ ನಂತರ ಹೇಗೆ ನಿಮ್ಮನ್ನು ಕೇಡಿನಿಂದ ರಕ್ಷಿಸಿತು, ಎಂದು ಆ ದಿನದಲ್ಲಿ ನೀವು ಅರಿಯುವಿರಿ. ನಿಮ್ಮ ಮಕ್ಕಳು ಸಭೆಯಲ್ಲಿ ಕೇಳಿಸಿಕೊಂಡ ಸಂಗತಿಗಳಿಂದಾಗಿ ಅನೇಕ ಅಪಾಯಗಳಿಂದ ತಪ್ಪಿಸಿಕೊಂಡದ್ದನ್ನು ಮತ್ತು ರಕ್ಷಿಸಲ್ಪಟ್ಟದ್ದನ್ನು ಸಹ ಆ ದಿನದಲ್ಲಿ ಕರ್ತನು ನಿಮಗೆ ತೋರಿಸಲಿದ್ದಾನೆ. ಆದರೂ ನಾವೆಲ್ಲರೂ ಇವನ್ನು ಮತ್ತು ಇತರ ಆಶೀರ್ವಾದಗಳನ್ನು ಲಕ್ಷಿಸದೆ, ಸಭೆಗೆ ಎಷ್ಟು ಕಡಿಮೆ ಮೆಚ್ಚುಗೆ ಹಾಗೂ ಮಾನ್ಯತೆಯನ್ನು ಸಲ್ಲಿಸಿದ್ದೇವೆ.

ನೀವು ನಿಮ್ಮಿಂದ ಇತರರಿಗೆ ಆಶೀರ್ವಾದ ಉಂಟಾಗುವ ಹಂತವನ್ನು ತಲುಪಲು ಬಯಸುತ್ತೀರಾ? ಹಾಗಿದ್ದರೆ, ಕರ್ತನು ನಿಮಗಾಗಿ ಮಾಡಿರುವ ಸಹಾಯಕ್ಕಾಗಿ ಮತ್ತು ಆತನು ನಿಮಗೆ ನೀಡಿರುವ ಸಭೆಗಾಗಿ ಕೃತಜ್ಞತೆಯನ್ನು ತೋರಿಸುವುದನ್ನು ಮೊದಲು ಕಲಿಯಿರಿ. ಸಭೆಯನ್ನು ಕಡೆಗಣಿಸಬೇಡಿರಿ. ನಮ್ಮಲ್ಲಿ ಅನೇಕ ಮಂದಿ, ತಮ್ಮ ಹೆತ್ತವರು ಸತ್ತ ಮೇಲೆ ಅವರ ಬೆಲೆಯನ್ನು ಅರಿಯುವ ಮಕ್ಕಳ ಹಾಗೆ ಆಗಿದ್ದೇವೆ. ಈಗ ಸಮಯ ಮೀರುವ ಮೊದಲು, ಸಭೆಯಲ್ಲಿ ಒಬ್ಬರಿಗೊಬ್ಬರು ಕೃತಜ್ಞತೆ ಉಳ್ಳವರಾಗಿ ಇರುವುದನ್ನು ಕರ್ತನು ನಮಗೆ ಕಲಿಸಲಿ.