ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಶಿಷ್ಯಂದಿರಿಗೆ
WFTW Body: 

ಯೇಸುವು ನಮಗೆ ಜನರನ್ನು ಮತಾಂತರ ಮಾಡಲು ಆದೇಶಿಸಲಿಲ್ಲ - ಆದರೆ ಎಲ್ಲೆಡೆ ಶಿಷ್ಯಂದಿರನ್ನು ಮಾಡುವಂತೆ ಹೇಳಿದರು. ಹಾಗಾಗಿ ಸಭೆಯು ಒಂದು ಪರಿಶುದ್ಧವಾದ ಸಾಕ್ಷಿಯನ್ನು ಹೊಂದಬೇಕಾದರೆ, ಮೊದಲನೆಯದಾಗಿ, ನಾವು ನಮ್ಮ ಸಭೆಯ ಅಂಗವಾಗಲು ಬಯಸುವ ಪ್ರತಿಯೊಬ್ಬನಿಗೆ, ಶಿಷ್ಯನಾಗಲು ಪಾಲಿಸಬೇಕಾದ ಷರತ್ತುಗಳನ್ನು ಸ್ಪಷ್ಟವಾಗಿ ಕಲಿಸಬೇಕು; ಅದರ ಜೊತೆಗೆ, ಶಿಷ್ಯತ್ವವು ನಮ್ಮ ಖಾಸಗಿ ಜೀವನ, ಕುಟುಂಬದ ಜೀವನ ಹಾಗೂ ಸಭೆಯ ಜೀವನದಲ್ಲಿ ಎಂತಹ ಬದಲಾವಣೆಗಳನ್ನು ತರುತ್ತದೆ ಎನ್ನುವುದನ್ನು ಅವರಿಗೆ ತೋರಿಸಿಕೊಡಬೇಕು.

ಎಲ್ಲಕ್ಕೂ ಮೊದಲು, ನಾವು ಲೂಕ. 14:26-33 ರಲ್ಲಿ ಯೇಸುವು ಶಿಷ್ಯರಾಗಲು ಬಯಸುವವರಿಗೆ ನೀಡಿದ ಮೂರು ಅವಶ್ಯಕ ಷರತ್ತುಗಳನ್ನು ಕಲಿಸಬೇಕು:

  • 1. ನಾವು ಯೇಸುವನ್ನು, ನಮ್ಮ ಕುಟುಂಬದ ಸದಸ್ಯರು, ಬಂಧುಬಳಗ ಮತ್ತು ಸಹೋದರ ಸಹೋದರಿಯರು ಇವರೆಲ್ಲರಿಗಿಂತ ಹೆಚ್ಚಾಗಿ ಪ್ರೀತಿಸಬೇಕು (ಲೂಕ. 14:26). ನಾವು ನಮ್ಮ ಕರ್ತನಾದ ಯೇಸುವಿನ ಆದೇಶದಂತೆ ನಡೆಯುವದಕ್ಕೆ ಇವರಲ್ಲಿ ಯಾರೂ ಅಡ್ಡಿಯಾಗದಂತೆ ನಾವು ನೋಡಿಕೊಳ್ಳಬೇಕು.
  • 2. ನಾವು ನಮ್ಮನ್ನೇ ಪ್ರೀತಿಸುವದಕ್ಕಿಂತ ಹೆಚ್ಚಾಗಿ ಯೇಸುವನ್ನು ಪ್ರೀತಿಸಬೇಕು (ಲೂಕ. 14:27). ನಮ್ಮ ಸ್ವಾರ್ಥ ಜೀವವು ದಿನಾಲೂ ನಿರಾಕರಿಸಲ್ಪಟ್ಟು ಶಿಲುಬೆಯ ಮೇಲೆ ಸಾಯಬೇಕು - ಇದನ್ನು ನಾವು ಒಂದೊಂದು ದಿನವೂ ಅನೇಕ ಬಾರಿ ಶೋಧನೆಗೆ ಒಳಗಾದಾಗ ಮಾಡಬೇಕಾಗುತ್ತದೆ (ಲೂಕ. 9:23).
  • 3. ನಾವು ನಮ್ಮ ಸ್ವತ್ತು ಸಂಪತ್ತುಗಳಿಗಿಂತ ಹೆಚ್ಚಾಗಿ ಯೇಸುವನ್ನು ಪ್ರೀತಿಸಬೇಕು (ಲೂಕ. 14:33). ನಾವು ಹಲವು ಲೌಕಕ ವಸ್ತುಗಳನ್ನು ಹೊಂದಿರುವುದಕ್ಕೆ ದೇವರು ಅವಕಾಶ ನೀಡುತ್ತಾರೆ. ಆದರೆ ನಾವು ಅವುಗಳ ಹಿಡಿತಕ್ಕೆ ಸಿಕ್ಕಿ ಬೀಳಬಾರದು. ಅವೆಲ್ಲವೂ ದೇವರಿಗೆ ಸೇರಿದ ಸ್ವತ್ತು ಎಂದು ತಿಳಿದುಕೊಂಡು, ಅವನ್ನು ತೆರೆದ ಅಂಗೈಯ ಮೇಲೆ ಇರಿಸಬೇಕು.
  • ಎರಡನೆಯದಾಗಿ, ಪರ್ವತ ಪ್ರಸಂಗದಲ್ಲಿ (ಮತ್ತಾಯ 5, 6 ಮತ್ತು7ರಲ್ಲಿ) ಯೇಸುವು ಕಲಿಸಿಕೊಟ್ಟ ಎಲ್ಲಾ ವಿಷಯಗಳನ್ನು ಮತ್ತು ನಮ್ಮನ್ನು ಎಚ್ಚರಿಸಲು ಹೇಳಿದ ಪ್ರತಿಯೊಂದು ಮಾತನ್ನು ನಾವು ಸ್ಪಷ್ಟವಾಗಿ ಮತ್ತು ವಿವರವಾಗಿ ತೋರಿಸಿ ಕೊಡಬೇಕು. ಆ ಪ್ರಸಂಗದ ಅಂತ್ಯದಲ್ಲಿ ಯೇಸುವು ಮೂರು ಉದಾಹರಣೆಗಳನ್ನು ನೀಡಿದರು:

  • (a) ಅವರು ಈ ಪ್ರಸಂಗದಲ್ಲಿ ನಿತ್ಯಜೀವದ ಬಗ್ಗೆ ಕಲಿಸುತ್ತಾ, ಅಲ್ಲಿಗೆ ನಡೆಸುವ ದಾರಿಯು ಇಕ್ಕಟ್ಟಾದದ್ದು ಎಂದು ವಿವರಿಸಿದರು (ಮತ್ತಾ. 7:14).
  • (b) ಅವರ ಶಿಷ್ಯರು ಈ ಪ್ರಸಂಗದ ಬೋಧನೆಗಳನ್ನು ಪಾಲಿಸುವುದರ ಮೂಲಕ ಮಾತ್ರವೇ ಒಳ್ಳೆಯ ಫಲ ಕೊಡುವ ಮರಗಳಾಗಿ, ದೇವರಿಗೆ ಮಹಿಮೆ ತರಲು ಸಾಧ್ಯವಾಗುತ್ತದೆ (ಮತ್ತಾ. 7:16-20).
  • (c) ಈ ಪ್ರಸಂಗದಲ್ಲಿ ಯೇಸುವು ಕಲಿಸಿದ ಎಲ್ಲವನ್ನೂ ಶಿಷ್ಯರು ಕೇಳಿಸಿಕೊಂಡು, ಅವುಗಳಿಗೆ ತಕ್ಕಂತೆ ನಡೆದಾಗ ಮಾತ್ರ, ಅವರ ವೈಯಕ್ತಿಕ ಜೀವನ, ಅವರ ಕುಟುಂಬದ ಜೀವನ ಮತ್ತು ಅವರ ಸಭೆ, ಎಲ್ಲವನ್ನೂ ಸುಭದ್ರವಾದ ಅಸ್ತಿವಾರದ ಮೇಲೆ ನಿತ್ಯತ್ವಕ್ಕಾಗಿ ಕಟ್ಟಲು ಸಾಧ್ಯವಾಗುತ್ತದೆ (ಮತ್ತಾ. 7:24-27).
  • ಮೂರನೆಯದಾಗಿ, ಪವಿತ್ರಾತ್ಮನಿಂದ ತುಂಬಿಸಲ್ಪಡುವದಕ್ಕಾಗಿ ದೇವರನ್ನು ಬೇಡಿಕೊಳ್ಳುವಂತೆ ಸಭೆಯಲ್ಲಿ ಪ್ರತಿಯೊಬ್ಬರನ್ನೂ ನಾವು ಪ್ರೋತ್ಸಾಹಿಸಬೇಕು - ಏಕೆಂದರೆ ಸ್ವ-ಪ್ರಯತ್ನದ ಮೂಲಕ ಮೇಲೆ ತೋರಿಸಲಾದ ಉನ್ನತ ಮಟ್ಟಕ್ಕೆ ಏರಲು ಯಾರಿಗೂ ಸಾಧ್ಯವಿಲ್ಲ. ಆದರೆ ಪವಿತ್ರಾತ್ಮನು ನಮಗೆ ಕೊಡುವ ಬಲದ ಮೂಲಕ ಇದು ಸಾಧ್ಯವಾಗುತ್ತದೆ (ಅ.ಕೃ. 1:8; ಎಫೆಸ 5:18).

    ನಾಲ್ಕನೆಯದಾಗಿ, ಪ್ರತಿಯೊಬ್ಬ ವಿಶ್ವಾಸಿಯೂ ಪರಲೋಕದಲ್ಲಿರುವ ದೇವರು ತನ್ನ ಸ್ವಂತ ತಂದೆಯಾಗಿದ್ದಾರೆ ಎಂದು ತಿಳಕೊಳ್ಳುವಂತೆ ನಾವು ಅವರನ್ನು ನಡೆಸಬೇಕು, ಮತ್ತು ಆ ಮೂಲಕ ಅವರು ಈ ಲೋಕದ ದುಷ್ಟತನ ಮತ್ತು ಅನಿಶ್ಚಿತತೆಯ ನಡುವೆಯೂ, ತಮ್ಮ ತಂದೆಯಲ್ಲಿ ಸುರಕ್ಷತೆಯನ್ನು ಕಂಡುಕೊಳ್ಳುವರು.

    ಐದನೆಯದಾಗಿ, ಯೇಸುವು "ಎಲ್ಲಾ ವಿಷಯಗಳಲ್ಲಿ ನಮಗೆ ಸಮನಾಗಿ" ಮಾಡಲ್ಪಟ್ಟನು (ಇಬ್ರಿ. 2:17) ಮತ್ತು ಆತನು "ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು" (ಇಬ್ರಿ. 4:15), ಎಂಬ ಶ್ರೇಷ್ಠವಾದ ಸತ್ಯವನ್ನು ಜನರಿಗೆ ಬೋಧಿಸಬೇಕು, ಏಕೆಂದರೆ ಇದರಿಂದ ಎಲ್ಲರೂ "ಕ್ರಿಸ್ತನು ನಡೆದಂತೆಯೇ ತಾನೂ ನಡೆಯುತ್ತೇನೆ" (1 ಯೋಹಾ. 2:6) ಎಂಬ ನಂಬಿಕೆಯನ್ನು ಹೊಂದಲು ಸಾಧ್ಯವಾಗುತ್ತದೆ.

    ನಾವು ನಮ್ಮ ಸಭೆಯನ್ನು ಆರಂಭಿಸಿದಾಗ ಮೇಲಿನ ಸತ್ಯಾಂಶಗಳನ್ನು ಅನೇಕ ತಿಂಗಳುಗಳ ವರೆಗೆ ಅಭ್ಯಾಸಿಸಿದೆವು. ಇದರ ಫಲವಾಗಿ ಉತ್ತಮ ಫಲಿತಾಂಶಗಳನ್ನೂ ಸಹ ಪಡೆದುಕೊಂಡೆವು. ಹೀಗೆ ಮಾಡುವುದರಿಂದ ಮಾತ್ರವೇ ಕರ್ತನಿಗಾಗಿ ಒಂದು ಪರಿಶುದ್ಧವಾದ ಸಾಕ್ಷಿಯನ್ನು - ಒಂದು ಹೊಸ ಒಡಂಬಡಿಕೆಯ ಸಭೆಯನ್ನು - ಬೆಳೆಸಬಹುದು!