WFTW Body: 

ಅಪೊಸ್ತಲ ಪೌಲನು ಎಫೆಸದವರಿಗೆ ಬರೆದ ಪತ್ರಿಕೆಯಲ್ಲಿ ಸಮತೋಲನವುಳ್ಳ ಸುವಾರ್ತಾ ಸಂದೇಶವು ಕಂಡುಬರುತ್ತದೆ. ಈ ಪತ್ರಿಕೆಯ ಮೊದಲ ಮೂರು ಅಧ್ಯಾಯಗಳಲ್ಲಿ ನಮಗೆ ಒಂದಾದರೂ ಬುದ್ಧಿವಾದ ಕೊಡಲ್ಪಟ್ಟಿಲ್ಲ. ಈ ಮೂರು ಅಧ್ಯಾಯಗಳು ’ದೇವರು ನಮಗಾಗಿ ಮಾಡಿರುವ ಕಾರ್ಯಗಳನ್ನು’ ಮಾತ್ರ ವಿವರಿಸುತ್ತವೆ. ಕೊನೆಯ ಮೂರು ಅಧ್ಯಾಯಗಳು, ’ನಾವು ದೇವರಿಗಾಗಿ ಮಾಡಬೇಕಾದ ಸಂಗತಿಗಳ’ ಬಗ್ಗೆ ಬಹಳಷ್ಟು ಉಪದೇಶಗಳನ್ನು ಹೊಂದಿವೆ. ಇವೇ ’ಸುವಾರ್ತೆ’ ಎಂಬ ನಾಣ್ಯದ ಎರಡು ಮುಖಗಳಾಗಿವೆ. ನಾಣ್ಯದ ಎರಡು ಬದಿಗಳಲ್ಲಿ ಒಂದು ಖಾಲಿಯಾಗಿದ್ದರೆ, ಆ ನಾಣ್ಯ (ಅಂತಹ ’ಸುವಾರ್ತೆ’) ಒಂದು ಖೋಟಾ ನಾಣ್ಯವಾಗಿದೆ. ಗಲಾತ್ಯ ಒಂದನೇ ಅಧ್ಯಾಯದಲ್ಲಿ "ಬೇರೊಂದು ಸುವಾರ್ತೆ"ಯನ್ನು ಬೋಧಿಸುವವರಿಗೆ ಒಂದು ಶಾಪವನ್ನು ಘೋಷಿಸಲಾಗಿದೆ. ಹಾಗಾಗಿ ನಾವು ಇತರರಿಗೆ ಬೋಧಿಸುವುದು "ಸಂಪೂರ್ಣ ಸುವಾರ್ತೆ" ಆಗಿರುವಂತೆ ಎಚ್ಚರ ವಹಿಸಬೇಕು - ಮತ್ತು ಅದರಲ್ಲಿ ದೋಷಗಳು ಇರಬಾರದು.

ದೇವರು ನಮಗೆ ಪರಲೋಕದ ಸಕಲ ಆತ್ಮೀಯ ವರಗಳನ್ನು ಕ್ರಿಸ್ತನಲ್ಲಿ ಅನುಗ್ರಹಿಸಿದ್ದಾರೆ (ಎಫೆ. 1:3). ’ದೇವರು ನಮಗಾಗಿ ಮಾಡಿದ ಕಾರ್ಯದ’ ಮೂಲಕ ನಮ್ಮ ಕ್ರಿಸ್ತೀಯ ಜೀವನದ ಆರಂಭವಾಗಬೇಕು. ’ಮೊದಲು ದೇವರು ನಮ್ಮನ್ನು ಪ್ರೀತಿಸಿದರು’, ಆದ್ದರಿಂದ ನಾವು ಅವರನ್ನು ಪ್ರೀತಿಸುತ್ತೇವೆ. ’ಮೊದಲು ಅವರು ನಮ್ಮ ಸೇವೆ ಮಾಡಿದರು’, ಆದ್ದರಿಂದ ನಾವು ಅವರ ಸೇವೆ ಮಾಡುತ್ತೇವೆ. ದೇವರು ’ಜಗತ್ತನ್ನು ಉಂಟುಮಾಡುವುದಕ್ಕೆ ಮುಂಚೆ’ ಅವರು ನಮ್ಮನ್ನು ಅರಿತಿದ್ದರು (ಎಫೆ. 1:4). ಇದು ನಮಗೆ ಅರ್ಥವಾಗುವುದಿಲ್ಲ ಏಕೆಂದರೆ, ನಾವು ಸಮಯವನ್ನು ಭೂತಕಾಲ, ವರ್ತಮಾನ ಕಾಲ ಮತ್ತು ಭವಿಷ್ಯತ್ ಕಾಲ ಎಂಬುದಾಗಿ ವಿಂಗಡಿಸುತ್ತೇವೆ, ಆದರೆ ದೇವರೋ "ಸದಾಕಾಲ ಇರುವಾತನು" ಎಂಬ ಹೆಸರನ್ನು ಹೊಂದಿದ್ದಾರೆ (ವಿಮೋ. 3:14). ದೇವರು ಸದಾ ವರ್ತಮಾನಕಾಲದಲ್ಲಿ ಜೀವಿಸುತ್ತಾರೆ. ಹಾಗಾಗಿ ಅವರು ನಮ್ಮೆಲ್ಲರ ಹೆಸರನ್ನು ಸೃಷ್ಟಿಯನ್ನು ಕೈಗೊಳ್ಳುವುದಕ್ಕೆ ಬಹಳ ಮೊದಲೇ ಖುದ್ದಾಗಿ ಅರಿತಿದ್ದರು. ಅವರು ಜಗದುತ್ಪತ್ತಿಗೂ ಮುಂಚೆ ನಮ್ಮನ್ನು ’ಕ್ರಿಸ್ತನಲ್ಲಿ ಇರಿಸಿದ್ದರು’.

"ಕ್ರಿಸ್ತನಲ್ಲಿ ಇರಿಸಲ್ಪಡುವುದು" ಎಂದರೆ ಏನೆಂಬುದನ್ನು ಈ ಕೆಳಗಿನ ಚಿತ್ರಣವು ತೋರಿಸುತ್ತದೆ. ನೀವು ಒಂದು ಕಾಗದದ ಹಾಳೆಯನ್ನು ಒಂದು ಪುಸ್ತಕದೊಳಗೆ ಇರಿಸಿ, ಆ ಮೇಲೆ ಆ ಪುಸ್ತಕಕ್ಕೆ ಬೆಂಕಿ ಹಚ್ಚಿದರೆ, ಅ ಕಾಗದದ ಹಾಳೆಯೂ ಸಹ ಸುಟ್ಟುಹೋಗುತ್ತದೆ. ಆ ಪುಸ್ತಕವನ್ನು ನೆಲದೊಳಗೆ ಹುಗಿದಿಟ್ಟರೆ, ಆ ಹಾಳೆಯು ಅದರೊಟ್ಟಿಗೆ ಹೂಣಲ್ಪಡುತ್ತದೆ. ಆ ಪುಸ್ತಕವನ್ನು ಅಂತರಿಕ್ಷದಲ್ಲಿ ಹಾರುವ ಒಂದು ’ರಾಕೆಟ್’ನೊಳಗೆ ಇರಿಸಿ ಚಂದ್ರನ ಬಳಿಗೆ ಕಳುಹಿಸಿದರೆ, ಕಾಗದದ ಹಾಳೆಯೂ ಸಹ ಚಂದ್ರನ ಬಳಿಗೆ ತಲಪುತ್ತದೆ. ಆ ಕಾಗದದ ಹಾಳೆಯ ಹಾಗೆ, ನಾವು ಕ್ರಿಸ್ತನಲ್ಲಿ ಇರಿಸಲ್ಪಟ್ಟೆವು (ಇದನ್ನು ದೇವರು ಅನಂತ ಕಾಲದಿಂದ ತಮ್ಮ ಮನಸ್ಸಿನಲ್ಲೇ ಮಾಡಿದರು). ಹಾಗಾಗಿ ಕ್ರಿಸ್ತಶಕ 29ನೇ ಇಸವಿಯಲ್ಲಿ ಕ್ರಿಸ್ತನು ಶಿಲುಬೆಗೆ ಏರಿಸಲ್ಪಟ್ಟಾಗ, ನಾವು ಆತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟೆವು. ಆತನು ಹೂಣಲ್ಪಟ್ಟಾಗ, ನಾವು ಹೂಣಲ್ಪಟ್ಟೆವು. ಆತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟು ಪರಲೋಕಕ್ಕೆ ಏರಿದಾಗ, "ದೇವರು ನಮ್ಮನ್ನು ಸಹ ಆತನೊಂದಿಗೆ ಎಬ್ಬಿಸಿ ಪರಲೋಕದಲ್ಲಿ ಆತನೊಂದಿಗೆ ಕೂಡ್ರಿಸಿದ್ದಾರೆ" (ಎಫೆ. 2:6) .

ಇದೊಂದು ಅದ್ಭುತ ಸತ್ಯವಾಗಿದೆ. ಆದರೆ ನಾವು ದೇವರ ವಾಕ್ಯವನ್ನು ನಂಬಿಕೆಯಿಂದ ಸ್ವೀಕರಿಸಿದಾಗ ಮಾತ್ರ ಈ ಅನುಭವವು ನಮ್ಮ ಪಾಲಿಗೆ ನಿಜವಾಗುತ್ತದೆ - ಇಲ್ಲವಾದಲ್ಲಿ ಆಗುವುದಿಲ್ಲ. "ನೀವು ನಂಬಿದಂತೆ ನಿಮಗೆ ಆಗಲಿ" (ಮತ್ತಾ. 9:29), ಎನ್ನುವ ಮಾತು ದೇವರ ಒಂದು ನಿಯಮವಾಗಿದೆ.

’ದೇವರು ನಮಗಾಗಿ ಕ್ರಿಸ್ತನಲ್ಲಿ ಮಾಡಿರುವ ಕಾರ್ಯದಲ್ಲಿ’ ನಾವು ಭದ್ರವಾಗಿ ನಿಲ್ಲಬೇಕು. ಈ "ಅಸ್ತಿವಾರ" ಹಾಕಲ್ಪಟ್ಟ ನಂತರ, ನಾವು ಎಫೆ. 4 - 6 ಅಧ್ಯಾಯಗಳ ಬೋಧನೆಯನ್ನು ಅನುಸರಿಸಿ - ಒಂದು ಹೊಸ ಮಾರ್ಗದಲ್ಲಿ ನಡೆಯುವುದು ಮತ್ತು ಸೈತಾನನನ್ನು ಹೋರಾಡಿ ಸೊಲಿಸುವುದು, ಇತ್ಯಾದಿ ಕಾರ್ಯಗಳ ಮೂಲಕ - ನಮ್ಮ ಮನೆಯನ್ನು ಕಟ್ಟಬಹುದು. ನಾವು ಹೀಗೆ ಮಾಡದಿದ್ದರೆ, ನಾವು ನಿರುತ್ಸಾಹದ ಕೆಸರಿನ ಗುಂಡಿಯಲ್ಲಿ ಒದ್ದಾಡುತ್ತೇವೆ ಮತ್ತು ಪದೇ ಪದೇ ಸ್ವ-ನಿಂದೆಗೆ ಒಳಗಾಗುತ್ತೇವೆ. ಹಾಗಾಗಿ ಮೊದಲು ಎಫೆ. 1 - 3 ಅಧ್ಯಾಯಗಳನ್ನು ಸಾಕಷ್ಟು ಧ್ಯಾನಿಸಿರಿ.

ಅನೇಕ ಕ್ರೈಸ್ತರು ಒಂದು ಜಾಗದಲ್ಲಿ ತಳಪಾಯ ಹಾಕುತ್ತಾರೆ ಮತ್ತು ಅನಂತರ ಇನ್ನೊಂದು ಜಾಗದಲ್ಲಿ ಮನೆಯನ್ನು ಕಟ್ಟುತ್ತಾರೆ! ಅಂತಹ ಮನೆಯು ಕುಸಿದು ಬೀಳುತ್ತದೆ. ಎಫೆಸ ಪತ್ರಿಕೆಯ ಕೊನೆಯ 3 ಅಧ್ಯಾಯಗಳ ಪ್ರತಿಯೊಂದು ಬುದ್ಧಿವಾದವು ಕೊಡಲ್ಪಡಲು ಕಾರಣ, ದೇವರು ನಮ್ಮನ್ನು ಪ್ರೀತಿಸುತ್ತಾರೆ ಮತ್ತು ನಮ್ಮನ್ನು ಸಂಪೂರ್ಣವಾಗಿ ಸ್ವೀಕರಿಸುತ್ತಾರೆ (ಇದನ್ನು ಎಫೆಸ ಪತ್ರಿಕೆಯ ಮೊದಲ 3 ಅಧ್ಯಾಯಗಳು ತೋರಿಸುತ್ತವೆ). ಇದು ಪ್ರಾಥಮಿಕವಾದ ಸಂಗತಿ. ಆದಾಗ್ಯೂ ನಾವು ಸಾಮಾನ್ಯವಾಗಿ ಇದನ್ನು ಮರೆತು ಬಿಡುತ್ತೇವೆ. ನಾವು 45 ನಿಮಿಷಗಳ ಕಾಲ ಸತ್ಯವೇದ ಅಧ್ಯಯನ ಮಾಡಿದ ದಿನ, ದೇವರು ನಮ್ಮನ್ನು ಹೆಚ್ಚಾಗಿ ಸ್ವೀಕರಿಸುತ್ತಾರೆಂದು ನಾವು ಅಂದುಕೊಳ್ಳುತ್ತೇವೆ, ಮತ್ತೆ ಬೇರೊಂದು ದಿನ, ನಾವು ಒಂದು ನಿಮಿಷವೂ ಸತ್ಯವೇದದ ಅಧ್ಯಯನಕ್ಕೆ ಉಪಯೋಗಿಸದೇ ಇದ್ದಾಗ, ದೇವರು ನಮ್ಮ ಮೇಲೆ ಸಿಟ್ಟಾಗಿ, ನಮ್ಮ ಪ್ರಾರ್ಥನೆಯನ್ನು ಕೇಳಲಾರರು ಎಂದು ಗ್ರಹಿಸುತ್ತೇವೆ. ಮತ್ತು ಆ ದಿನ ಯಾವುದೋ ಕಾರ್ಯ ಸರಿಯಾಗಿ ನಡೆಯದಿದ್ದರೆ, ಅದಕ್ಕೆ ಕಾರಣ ನಾವು ಆ ದಿನ ದೇವರ ವಾಕ್ಯವನ್ನು ಓದದಿದ್ದದ್ದು, ಎಂದು ನಮ್ಮ ಭಾವನೆಯಾಗಿದೆ! ಇದು ಮೂಢನಂಬಿಕೆಯಾಗಿದೆ, ಮತ್ತು ಇದಕ್ಕೆ ಕಾರಣ ದೇವರು ನಮ್ಮನ್ನು ಸ್ವೀಕರಿಸುವುದು ನಮ್ಮ ಸತ್ಯವೇದ ಅಧ್ಯಯನದಿಂದಾಗಿ ಮತ್ತು ಕ್ರಿಸ್ತನು ನಮಗಾಗಿ ಮಾಡಿರುವ ಕಾರ್ಯದಿಂದಾಗಿ ಅಲ್ಲ, ಎಂಬ ನಮ್ಮ ತಪ್ಪು ತಿಳುವಳಿಕೆಯಾಗಿದೆ. ಸತ್ಯವೇದದ ಅಧ್ಯಯನವು ಬಹಳ ಪ್ರಮುಖ ಸಂಗತಿ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ದೇವರು ನಮ್ಮನ್ನು ಮೆಚ್ಚಿಕೊಳ್ಳುವುದಕ್ಕೆ ಅದು ಆಧಾರವಲ್ಲ. ಅದು ನಾವು ಕಟ್ಟುವ ಮೇಲ್ಕಟ್ಟಡದ ಒಂದು ಭಾಗವಾಗಿದೆ.

ನೀವು ಈ ಸತ್ಯಾಂಶವನ್ನು ಅರಿತುಕೊಂಡು ಅದರಲ್ಲಿ ನೆಲೆಗೊಳ್ಳುವುದು ಅತ್ಯಂತ ಹೆಚ್ಚು ಮಹತ್ವದ ವಿಷಯವಾಗಿದೆ. ಹಾಗೆ ಮಾಡದಿದ್ದಲ್ಲಿ ಸುವಾರ್ತೆಯು ಮಾನವ-ಕೇಂದ್ರಿತವಾಗುತ್ತದೆ - ಮತ್ತು ನೀವು ಕಟ್ಟಡದ ಅಸ್ತಿವಾರದ ಜಾಗದಲ್ಲಿ ಕಿಟಿಕಿ, ಬಾಗಿಲುಗಳನ್ನು ಕೂರಿಸಿದಂತೆ ಆಗುತ್ತದೆ! ಈ ಸತ್ಯಾಂಶಗಳನ್ನು (ಎಫೆಸ ಪತ್ರಿಕೆಯ ಮೊದಲ 3 ಅಧ್ಯಾಯಗಳಲ್ಲಿ ಇರುವಂಥವು) ಕಡೆಗಣಿಸುವವರು ಅಥವಾ ಅವುಗಳನ್ನು ಅಮೂಲ್ಯವಾಗಿ ಪರಿಗಣಿಸದೇ ಇರುವಂಥವರು ಫರಿಸಾಯರಾಗಿ ಕೊನೆಗೊಳ್ಳುತ್ತಾರೆ.

ಆದರೆ ಮುಖ್ಯವಾದ ವಿಷಯ ಏನೆಂದರೆ, ಒಂದು ಅಸ್ತಿವಾರವನ್ನು ಹಾಕುವುದರ ಮೂಲ ಉದ್ದೇಶ ಮನೆಯನ್ನು ಕಟ್ಟುವುದು. ಹಾಗಾಗಿ ನಾವು ಅಸ್ತಿವಾರವನ್ನು ಹಾಕಿದ ಮೇಲೆ, ಕೆಲಸವನ್ನು ಅಲ್ಲಿಗೇ ನಿಲ್ಲಿಸುವುದಿಲ್ಲ. ನಾವು ಮೇಲ್ಕಟ್ಟಡವನ್ನು ಕಟ್ಟುತ್ತಾ ಮುಂದುವರಿಯಬೇಕು.

"ಕೃಪೆ" ಅಂದರೆ, ಪರಲೋಕದ ಎಲ್ಲಾ ಆಶೀರ್ವಾದಗಳನ್ನು ದೇವರು ಕೈಚಾಚಿ ನಮಗೆ ಕೊಡುವುದು. "ನಂಬಿಕೆ" ಎಂದರೆ, ಆ ಆಶೀರ್ವಾದಗಳನ್ನು ನಾವು ಕೈನೀಡಿ ದೇವರ ಕೈಯಿಂದ ಸ್ವೀಕರಿಸುವುದು. ಹಾಗಾಗಿ ನಾವು ಯೇಸುವಿನ ಹೆಸರಿನ ಮೇಲೆ ನಂಬಿಕೆಯಿಟ್ಟು ಎಷ್ಟನ್ನು ಕೇಳುತ್ತೇವೋ, ಅಷ್ಟನ್ನು ಮಾತ್ರ ಪಡೆಯುತ್ತೇವೆ. ದೇವರು ಪರಲೋಕದ ನಮ್ಮ ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ಆಶೀರ್ವಾದಗಳನ್ನು ಇರಿಸಿದ್ದಾರೆ ಮತ್ತು ಯೇಸುವು ಸಹಿ ಹಾಕಿರುವ ಬಹಳಷ್ಟು ಖಾಲಿ ಚೆಕ್ ಹಾಳೆಗಳನ್ನು ನಮಗೆ ನೀಡಿದ್ದಾರೆ. ಈಗ ನಾವು ಮಾಡಬೇಕಾದದ್ದು ಇಷ್ಟೇ, ನಮಗೆ ಬೇಕಾದ ಮೊತ್ತವನ್ನು ಚೆಕ್‍ನಲ್ಲಿ ಬರೆದು ಅದನ್ನು ಬ್ಯಾಂಕ್ ನಲ್ಲಿ ಕೊಟ್ಟು, ನಮ್ಮ ಬಾಧ್ಯತೆಯನ್ನು ಕೇಳಿ ಪಡೆಯಬೇಕು.