’ಪ್ರಕಟನೆ 14:1-5'ರಲ್ಲಿ, ಶಿಷ್ಯರ ಒಂದು ಚಿಕ್ಕ ಗುಂಪು ಅಥವಾ ಸಮೂಹವು ಭೂಲೋಕದ ತಮ್ಮ ಜೀವಿತಾವಧಿಯಲ್ಲಿ ಕರ್ತನಾದ ಯೇಸುವನ್ನು ಹೃತ್ಪೂರ್ವಕವಾಗಿ ಹಿಂಬಾಲಿಸಿದ್ದಾಗಿ ನಾವು ಓದುತ್ತೇವೆ. ಅಂತ್ಯದ ದಿನದಲ್ಲಿ, ಇವರು ಜಯಶಾಲಿಗಳಾಗಿ ಯೇಸುವಿನ ಜೊತೆಯಲ್ಲಿ ನಿಲ್ಲುತ್ತಾರೆ - ಈ ರೀತಿಯಾಗಿ ತಂದೆಯಾದ ದೇವರು ಇವರ ಜೀವಿತದಲ್ಲಿ ತನ್ನ ಸಂಪೂರ್ಣ ಸಂಕಲ್ಪವನ್ನು ಸಾಧಿಸುತ್ತಾರೆ.
ಪಾಪ ಕ್ಷಮಾಪಣೆ ಹೊಂದಿದ ಜನರ ಮಹಾ ಸಮೂಹವು ಎಣಿಸಲಾರದಷ್ಟು ದೊಡ್ಡದಾಗಿತ್ತು, ಎಂಬುದಾಗಿ ನಮಗೆ ’ಪ್ರಕಟನೆ 7:9,10'ರಲ್ಲಿ ಕಂಡುಬರುತ್ತದೆ.
ಇದಾದ ಮೇಲೆ ಇಗೋ, ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ ನಿಂತಿರುವದನ್ನು ಕಂಡೆನು. ಅವರು ಸಕಲ ಜನಾಂಗ ಕುಲ ಪ್ರಜೆಗಳವರೂ, ಸಕಲ ಭಾಷೆಗಳನ್ನಾಡುವವರೂ ಆಗಿದ್ದರು. ಅವರು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡು ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದುಕೊಂಡಿದ್ದರು. ಅವರು, ’ಸಿಂಹಾಸನದ ಮೇಲೆ ಆಸೀನನಾಗಿರುವ ನಮ್ಮ ದೇವರಿಗೂ ಯಜ್ಞದ ಕುರಿಯಾದಾತನಿಗೂ ನಮಗೆ ರಕ್ಷಣೆ ಉಂಟಾದದ್ದಕ್ಕಾಗಿ ಸ್ತೋತ್ರ,’ ಎಂದು ಮಹಾ ಶಬ್ದದಿಂದ ಕೂಗಿದರು.
ಆದರೆ ’ಪ್ರಕಟನೆ 14'ನೇ ಅಧ್ಯಾಯದಲ್ಲಿ ಉಲ್ಲೇಖಿಸಲಾದ ಶಿಷ್ಯರ ಸಮೂಹವು ಎಣಿಸಬಹುದಾದ ಒಂದು ಚಿಕ್ಕ ಗುಂಪಾಗಿತ್ತು - 1,44,000 ಮಂದಿ. ಈ ಸಂಖ್ಯೆಯು ಅಕ್ಷರಶವೋ ಅಥವಾ ಸಾಂಕೇತಿಕವೋ ಎಂಬುದು ಮುಖ್ಯವಲ್ಲ (ಪ್ರಕಟನೆ ಗ್ರಂಥವು ಬಹಳಷ್ಟು ಸಂಕೇತಗಳನ್ನು ಒಳಗೊಂಡಿದೆ). ಮುಖ್ಯಾಂಶವೆಂದರೆ ಆ ಮಹಾ ಸಮೂಹಕ್ಕೆ ಹೋಲಿಸಿದಾಗ ಇಲ್ಲಿ ಉಲ್ಲೇಖಿಸಿರುವ ಶಿಷ್ಯರ ಸಂಖ್ಯೆ ಅತ್ಯಂತ ಚಿಕ್ಕದಾಗಿತ್ತು.
ಇವರು ದೇವರಿಗೆ ನಂಬಿಗಸ್ತರಾಗಿ, ಯಥಾರ್ಥರಾಗಿ ಲೋಕದಲ್ಲಿ ಉಳಕೊಂಡ ಸ್ವಲ್ಪ ಜನರಾಗಿದ್ದರು. ಇವರು ಪರೀಕ್ಷಿಸಲ್ಪಟ್ಟಿದ್ದರು ಮತ್ತು ದೇವರ ಮೆಚ್ಚುಗೆಯ ಬಹುಮಾನವನ್ನು ಗಳಿಸಿದ್ದರು. ಸ್ವತಃ ದೇವರೇ ಇವರ ವಿಷಯವಾಗಿ ನೀಡಿದ ಪ್ರಮಾಣಪತ್ರ ಹೀಗಿದೆ, "ಇವರು ನಿಷ್ಕಳಂಕರಾಗಿದ್ದಾರೆ ... ಯಜ್ಞದ ಕುರಿಯಾದಾತನು ಎಲ್ಲಿ ಹೋದರೂ ಇವರು ಆತನನ್ನು ಹಿಂಬಾಲಿಸುತ್ತಾರೆ .... ಅವರ ಬಾಯಲ್ಲಿ ಸುಳ್ಳು ಸಿಕ್ಕಲಿಲ್ಲ .... ಇವರು ನಿರ್ದೋಷಿಗಳಾಗಿದ್ದಾರೆ (ಪ್ರಕ. 14:4,5).
"ಓ, ಮುಂದೆ ಬರಲಿರುವ ದಿನದಲ್ಲಿ ನಮಗೆ ಸ್ಪಷ್ಟವಾಗಿ ಕಾಣಿಸಲಿರುವ ಸತ್ಯ ಸಂಗತಿಗಳ ಸ್ವಲ್ಪ ಅಂಶವನ್ನಾದರೂ ನಾವು ಗ್ರಹಿಸಿಕೊಳ್ಳುವಂತೆ ನಮ್ಮ ಕಣ್ಣುಗಳು ಈಗಲೇ ತೆರೆಯಲ್ಪಡಲಿ!"
ಇವರು ದೇವರಿಗೆ ಪ್ರಥಮ ಫಲವಾಗಿರುತ್ತಾರೆ. ಇವರೇ ಕ್ರಿಸ್ತನ ಮದಲಗಿತ್ತಿಯಾಗಿದ್ದಾರೆ. ಯಜ್ಞದ ಕುರಿಯಾದಾತನ ವಿವಾಹದ ಸಮಯ ಪ್ರಾಪ್ತವಾದಾಗ, ಎಲ್ಲರಿಗೂ ಸ್ಪಷ್ಟವಾಗಿ ತಿಳಿಯುವುದು ಏನೆಂದರೆ, ಲೌಕಿಕ ಜೀವಿತದ ಪ್ರತಿಯೊಂದು ವಿಷಯದಲ್ಲಿ - ಚಿಕ್ಕವು ಹಾಗೂ ದೊಡ್ಡವು - ಸಂಪೂರ್ಣ ಯಥಾರ್ಥತೆ ಹಾಗೂ ನಂಬಿಗಸ್ತಿಕೆ ಎಷ್ಟು ಸಾರ್ಥಕವೆಂಬುದು.
ಆ ದಿನದಲ್ಲಿ ಪರಲೋಕದಲ್ಲಿ ಗುಡುಗಿನ ಶಬ್ದದಂತೆ ಕೇಳಿಬರುವ ಘೋಷ ಇದಾಗಿರುತ್ತದೆ, "ಯಜ್ಞದ ಕುರಿಯಾದಾತನ ವಿವಾಹ ಕಾಲವು ಬಂತು; ಆತನಿಗೆ ವಿವಾಹವಾಗುವ ಕನ್ಯೆ ತನ್ನನ್ನು ಸಿದ್ಧಮಾಡಿಕೊಂಡಿದ್ದಾಳೆ; ಸಂತೋಷಪಡೋಣ, ಹರ್ಷಗೊಳ್ಳೋಣ, ಆತನನ್ನು ಘನಪಡಿಸೋಣ" (ಪ್ರಕ. 19:7).
ಯಾರು ಸ್ವಕಾರ್ಯಗಳ ಮೇಲೆ ಮನಸ್ಸಿಡುತ್ತಾರೋ ಮತ್ತು ಸಮ್ಮಾನ, ಮೆಚ್ಚುಗೆಗಳಿಗಾಗಿ ಹಂಬಲಿಸುತ್ತಾರೋ, ತಾವು ಎಷ್ಟು ಅಪಾರ ನಷ್ಟಕ್ಕೆ ಒಳಗಾದೆವೆಂದು ಆ ದಿನ ಬಂದಾಗ ಅವರು ಸಂಪೂರ್ಣವಾಗಿ ಅರಿತುಕೊಳ್ಳುತ್ತಾರೆ. ಯಾರು ತನ್ನ ತಂದೆ ಅಥವಾ ತಾಯಿಯನ್ನು, ಹೆಂಡತಿ ಅಥವಾ ಮಕ್ಕಳನ್ನು, ಅಣ್ಣತಮ್ಮಂದಿರನ್ನು ಅಥವಾ ಅಕ್ಕತಂಗಿಯರನ್ನು, ಅಥವಾ ತನ್ನ ಪ್ರಾಣವನ್ನು, ಅಥವಾ ಇಹಲೋಕದ ವಸ್ತುಗಳನ್ನು ಕರ್ತನಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾನೋ, ಆತನು ತನ್ನ ನಿತ್ಯತ್ವದ ನಷ್ಟ ಎಂಥದ್ದೆಂದು ಆ ದಿನದಲ್ಲಿ ಕಂಡುಕೊಳ್ಳುತ್ತಾನೆ.
ಯಾರು ಯೇಸುವಿನ ಆಜ್ಞೆಗಳಿಗೆ ಸಂಪೂರ್ಣ ವಿಧೇಯರಾಗುತ್ತಾರೋ ಮತ್ತು ಪೂರ್ಣ ಹೃದಯದಿಂದ ಯೇಸುವು ನಡೆದ ಹಾದಿಯಲ್ಲಿ ತಾವೂ ನಡೆಯಲು ತವಕಿಸುತ್ತಾರೋ, ಅವರು ಭೂಲೋಕದಲ್ಲಿ ಅತ್ಯಂತ ಜ್ಞಾನಿಗಳೆಂದು ಆಗ ವ್ಯಕ್ತವಾಗುತ್ತದೆ. ಕ್ರೈಸ್ತ ಧಾರ್ಮಿಕ ಪ್ರಪಂಚದ ನಕಲಿ ಮಾನ್ಯತೆಯು ಕೆಲಸಕ್ಕೆ ಬಾರದ ಕಸಕ್ಕೆ ಸಮಾನವೆಂದು ಆಗ ಸ್ಪಷ್ಟವಾಗಿ ತಿಳಿದುಬರುತ್ತದೆ. ಹಣ ಮತ್ತು ಲೌಕಿಕ ಸಂಪತ್ತು ದೇವರು ಕೇವಲ ನಮ್ಮನ್ನು ಪರೀಕ್ಷೆಗೆ ಒಳಪಡಿಸಿ, ಕ್ರಿಸ್ತನ ವಿವಾಹದ ಕನ್ಯೆಯಾಗಲು ನಾವು ಅರ್ಹರೋ ಇಲ್ಲವೋ ಎಂದು ನಿರ್ಣಯಿಸಲು ಬಳಸಿಕೊಂಡ ಸಾಧನಗಳಾಗಿದ್ದವು, ಎಂಬುದಾಗಿ ಆಗ ನಾವು ಕಂಡುಕೊಳ್ಳುತ್ತೇವೆ.
ಓ, ಆ ದಿನದಲ್ಲಿ ನಾವು ಸ್ಪಷ್ಟವಾಗಿ ಕಾಣಿಸಲಿರುವ ಸತ್ಯ ಸಂಗತಿಗಳ ಸ್ವಲ್ಪ ಅಂಶವನ್ನಾದರೂ ಈಗಲೇ ನಮ್ಮ ಕಣ್ಣುಗಳು ತೆರೆಯಲ್ಪಟ್ಟು ನಾವು ನೋಡುವಂತಾಗಲಿ!
ಆ ದಿನದಲ್ಲಿ ಯಾವ ಮನುಷ್ಯನಾದರೂ ಹೊಂದಬಹುದಾದ ಅತ್ಯಂತ ಶ್ರೇಷ್ಠ ಸನ್ಮಾನ ಯಾವುದೆಂದರೆ, ಕ್ರಿಸ್ತನ ವಿವಾಹದ ಕನ್ಯೆಯಲ್ಲಿ ತಾನೂ ಸೇರಿಕೊಳ್ಳುವುದಾಗಿದೆ - ಸ್ವತಃ ದೇವರಿಂದ ಪರೀಕ್ಷಿಸಲ್ಪಟ್ಟು, ದೇವರ ಒಪ್ಪಿಗೆಯ ಪ್ರಮಾಣಪತ್ರವನ್ನು ಗಳಿಸುವಂಥದ್ದು!
ಕಿವಿಯುಳ್ಳವನು ಕೇಳಲಿ. ಆಮೆನ್!
========