WFTW Body: 

2 ಕೊರಿಂಥದವರಿಗೆ 4:6 ರಲ್ಲಿ ದೇವರ ಪ್ರಭಾವವು ನಿಜವಾದ ನಿಕ್ಷೇಪವಾಗಿದ್ದು, ಅದನ್ನು ಭೂಲೋಕದಲ್ಲಿ ನಾವು ಹೊಂದಿರತಕ್ಕದ್ದು ಎಂಬುದರ ಬಗ್ಗೆ ಪೌಲನು ಮಾತನಾಡುತ್ತಾನೆ. ಹಿಂದೆ ಆದಿಕಾಂಡ 1ನೇ ಅಧ್ಯಾಯದಲ್ಲಿ, ದೇವರು ಬೆಳಕಾಗಲಿ ಎಂದು ಆಜ್ಞಾಪಿಸಿದ ರೀತಿಯಲ್ಲಿಯೇ, ಆತನು ನಮ್ಮ ಹೃದಯದೊಳಗೂ ಸಹ ಬೆಳಕು ಹರಿಸಿದ್ದಾನೆ ಮತ್ತು ಈ ಬೆಳಕು ಮಣ್ಣಿನ ಘಟದಲ್ಲಿ (ಪಾತ್ರೆ) ಇದೆ (2 ಕೊರಿಂಥದವರಿಗೆ 4:7). ನಮ್ಮ ಜೀವಿತದ ಕೊನೆಯವರೆಗೂ, ನಾವೆಲ್ಲರೂ ಮಣ್ಣಿನ ಘಟಗಳು ಮಾತ್ರ ಆಗಿದ್ದೇವೆ. ಈ ಘಟದ ಅತ್ಯಾಕರ್ಷಕ ಸಂಗತಿಯೇನೆಂದರೆ, ಇದು ದೇವರ ಪ್ರಭಾವವನ್ನು ಒಳಗೊಂಡಿರುತ್ತದೆ.

ಹಳೆ ಒಡಂಬಡಿಕೆಯಲ್ಲಿ, ಅಬ್ರಹಾಮ ಮತ್ತು ದಾವೀದರು ಭೌತಿಕವಾಗಿ ಐಶ್ವರ್ಯವಂತರಾಗಿದ್ದರು. ಅದು ಭೂಲೋಕದ ಮಹಿಮೆ - ಏಕೆಂದರೆ ಎಲ್ಲಾ ಮನುಷ್ಯರ ಮಹಿಮೆಯು ಲೋಕದ ಐಶ್ವರ್ಯದಲ್ಲಿದೆ. ಆದರೆ ಹೊಸ ಒಡಂಬಡಿಕೆಯಲ್ಲಿ, ದೇವರು ಪೌಲನ ರೀತಿ ಒಬ್ಬ ಮನುಷ್ಯನನ್ನು ಉಪಯೋಗಿಸಿದನು, ಆತನು ಬಡವನಾಗಿದ್ದನು ಮತ್ತು ಪ್ರಭಾವ ಬೀರದವನಾಗಿದ್ದನು. ಅಪೊಸ್ತಲನಾದ ಪೌಲನು ಕೇವಲ 4 ಅಡಿ 11 ಇಂಚು ಉದ್ದ ಮಾತ್ರ ಇದ್ದನು. ಬೋಳುತಲೆಯವನು, ಕೊಕ್ಕೆಯಾಕಾರದ ಮೂಗನ್ನು ಹೊಂದಿದ್ದನು ಮತ್ತು ತನ್ನ ಜೀವಿತದ ಎಷ್ಟೋ ಸಮಯ ಖಾಯಿಲೆ ಬಿದ್ದವನಾಗಿದ್ದನು. ಆತನು ಮಾತನಾಡಲು ನಿಂತಾಗ, ಆತನು ಪ್ರಭಾವ ಬೀರುವಂತಹ ವ್ಯಕ್ತಿತ್ವವನ್ನು ಹೊಂದಿರಲಿಲ್ಲ. ಆದರೆ ದೇವರು ``ಲೋಕವನ್ನು ಅಲ್ಲಕಲ್ಲೋಲ ಮಾಡುವಂತೆ'' ಈ ಮನುಷ್ಯನನ್ನು ಉಪಯೋಗಿಸಿದನು. ಏಕೆಂದರೆ ಆತನು ಅಭಿಷೇಕಿಸಲ್ಪಟ್ಟಿದ್ದನು (ಅ.ಕೃ 17:6). ಪೌಲನು ನಿಜವಾಗಿಯೂ ಲೋಕವನ್ನು ``ಸರಿಯಾದ ದಾರಿಗೆ'' ತಿರುಗಿಸಿದ್ದನು. ಏಕೆಂದರೆ ಇಡೀ ಲೋಕವು ತಲೆಕೆಳಗಾಗಿತ್ತು, ಆದಾಮನು ಪಾಪ ಮಾಡಿದಾಗಿನಿಂದ ಮಾನವನು ಬಲಹೀನ ಮಣ್ಣಿನ ಪಾತ್ರೆಯಾಗಿದ್ದನು, ಆದರೆ ಪೌಲನ ಒಳಭಾಗದಲ್ಲಿ ಕ್ರಿಸ್ತನ ಪ್ರಭಾವವು ಸೇರಿತ್ತು. ನಿಮ್ಮಲ್ಲಿ ನಿಜವಾಗಿಯೂ ಬೆಲೆಬಾಳುವಂಥದ್ದು ಯಾವುದು? ಇಂದು ದೇವರ ದೊಡ್ಡ ದೊಡ್ಡ ಸೇವಕರೆಂದು ಕರೆಯಲ್ಪಡುವ ಅನೇಕರು, ಸಿನಿಮಾ ತಾರೆಗಳನ್ನು ಅನುಸರಿಸಿ ಎತ್ತರದ ವೇದಿಕೆಯಲ್ಲಿ ನಿಂತು ಪ್ರಭಾವ ಪ್ರದರ್ಶಿಸುತ್ತಾರೆ. ಆದರೆ ನಿಜವಾದ ದೇವರ ಸೇವಕನ ಈ ರೀತಿಯ ಚಿತ್ರವನ್ನು ಅಪೋಸ್ತಲನಾದ ಪೌಲನಿಂದ ನಾವು ಪಡೆದುಕೊಳ್ಳುವುದಿಲ್ಲ. ಆತನು ಬಂಗಾರದ ಪಾತ್ರೆಯಾಗಿರಲಿಲ್ಲ. ಆತನು ಮಣ್ಣಿನ ಪಾತ್ರೆಯಾಗಿದ್ದನು. ಒಂದು ವೇಳೆ ನಿಮ್ಮಲ್ಲಿ ಅನೇಕ ಮನುಷ್ಯ ಮಿತಿಗಳು ಮತ್ತು ಬಲಹೀನತೆಗಳು ಕಂಡುಬಂದರೆ ನಿರುತ್ಸಾಹಗೊಳ್ಳಬೇಡಿರಿ. ಒಳಭಾಗದಲ್ಲಿ ದೊಡ್ಡದಾದ ಪ್ರಭಾವವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅದು, ನೀವು ದೇವರ ಮುಂದೆ ಶುದ್ಧ ಮನಸ್ಸಾಕ್ಷಿಯೊಂದಿಗೆ ನಡೆಯುವುದು ಮತ್ತು ಎಲ್ಲಾ ಸಮಯಗಳಲ್ಲಿ ಪವಿತ್ರಾತ್ಮನಿಂದ ಅಭಿಷೇಕಿಸಲ್ಪಟ್ಟಾಗ ಇರುವಂಥದ್ದು. ಇದುವೇ ನಿಜವಾದ ಪ್ರಧಾನ್ಯವಾದ ಸಂಗತಿಯಾಗಿದೆ.

ಈ ಒಂದು ಪ್ರಭಾವವು ಸಂಕಟಗಳ ಮೂಲಕ ನಮ್ಮ ಜೀವಿತದೊಳಗೆ ಕಾರ್ಯ ಮಾಡುತ್ತದೆ ಮತ್ತು ಯೇಸುವಿನ ಹೃದಯದೊಂದಿಗಿನ ಅನ್ಯೋನ್ಯತೆಗೆ ಹೆಚ್ಚು ಹತ್ತಿರವಾಗುತ್ತೇವೆ

ಬೆಳಕು ಮಣ್ಣಿನ ಪಾತ್ರೆಯಲ್ಲಿದೆ (2 ಕೊರಿಂಥದವರಿಗೆ 4:6,7). ಗಿದ್ಯೋನನ ಸೇನೆಯ 300 ಸೈನಿಕರೂ ಒಳಭಾಗದಲ್ಲಿ ಬೆಳಕಿನೊಂದಿಗೆ ಮಣ್ಣಿನ ಘಟವನ್ನು ಹೊಂದಿದ್ದರು ಎಂಬುದನ್ನು ಇದು ನೆನಪಿಸುತ್ತದೆ. ಈ 300 ಜನರು 32,000 ಜನರನ್ನೊಳಗೊಂಡ ಗುಂಪಿನಿಂದ ದೇವರಿಂದ ಆರಿಸಲ್ಪಟ್ಟಿದ್ದರು ಮತ್ತು ಕೊನೆ ದಿನಗಳಲ್ಲಿ ಜಯ ಹೊಂದುವವರು ಆ ಸೈನಿಕರನ್ನು ಹೋಲುತ್ತಾರೆ. ಅವರು ಸೈತಾನನ ವಿರುದ್ಧ ಯುದ್ಧ ಮಾಡಿದ ಆ ಸೈನಿಕರಂತೆ, ಖಡ್ಗವನ್ನು (ಅದು ದೇವರ ವಾಕ್ಯ) ಹೊಂದಿರುತ್ತಾರೆ. ಆದರೆ ಅವರು ಒಳಭಾಗದಲ್ಲಿ ಬೆಳಕಿನೊಟ್ಟಿಗೆ ಮಣ್ಣಿನ ಘಟವನ್ನು ಸಹ ಹೊಂದಿರುತ್ತಾರೆ. ಗಿದ್ಯೋನನು ತನ್ನ ಸೈನಿಕರ ಮಣ್ಣಿನ ಘಟದಿಂದ ಬೆಳಕು ಹೊರಗೆ ಪ್ರಜ್ವಲಿಸಲು, ಅವರು ಮಣ್ಣಿನ ಘಟವನ್ನು ಒಡೆಯಲು ಹೇಳಿದನು. ನೀವು ಒಂದು ಮಡಕೆಯ ಒಳಭಾಗದಲ್ಲಿ ಒಂದು ಮೊಂಬತ್ತಿಯನ್ನು ಇಟ್ಟರೆ, ಎಷ್ಟು ಬೆಳಕು ಹೊರಬರಲು ಸಾಧ್ಯವಿದೆ? ಆದರೆ ಆ ಮಡಕೆಯು ಒಡೆಯಲ್ಪಟ್ಟರೆ, ಬೆಳಕು ಎಲ್ಲರೂ ಕಾಣುವಂತೆ ಹೊರಗೆ ಪ್ರಜ್ವಲಿಸುತ್ತದೆ. ಯೇಸುವಿನ ಜೀವಿತವು ಹೊರಗೆ ಪ್ರಜ್ವಲಿಸಲು ನಮ್ಮ ಮಣ್ಣಿನ ಘಟವು ಹೇಗೆ ಮುರಿಯಲ್ಪಡಬೇಕು (ಒಡೆಯಬೇಕು) ಎಂಬುದನ್ನು ಪೌಲನು ನಮಗೆ ತೋರಿಸುತ್ತಾನೆ. ಆತನು ಇಕ್ಕಟ್ಟಿನ ಮೂಲಕ, ದಿಕ್ಕು ಕಾಣದಿರುವ ಮೂಲಕ, ಹಿಂಸೆಗೆ ಒಳಪಡುವುದರ ಮೂಲಕ ಹಾದು ಹೋಗಬೇಕಾಯಿತು. ಕೆಡವಲ್ಪಟ್ಟರೂ, ಕೈಬಿಡಲ್ಪಡಲಿಲ್ಲ (2 ಕೊರಿಂಥದವರಿಗೆ 4: 8-12). ಹೀಗೆ ಆತನ ಮಣ್ಣಿನ ಘಟಕವು ಮುರಿಯಲ್ಪಟ್ಟಿತು ಮತ್ತು ಜನರು ಬೆಳಕನ್ನು (ಯೇಸುವಿನ ಜೀವಿತ) ಆತನಲ್ಲಿ ಸಂಪೂರ್ಣವಾಗಿ ಕಂಡರು. ಅನೇಕ ವಿಶ್ವಾಸಿಗಳು ಇದನ್ನು ಅರ್ಥ ಮಾಡಿಕೊಂಡಿಲ್ಲ ಮತ್ತು ಅವರಿಗೆ ಆ ಆಸಕ್ತಿಯೂ ಸಹ ಇರುವುದಿಲ್ಲ. ಆದರೆ ಕೇವಲ ಶಿಲುಬೆಯ ಹಾದಿಯೇ ಜೀವಿತದ ಹಾದಿಯಾಗಿದೆ.

ನೀವು ಹೊಲದಲ್ಲಿ ಗೋಧಿಯ ಕಾಳು ಮೊಳಕೆ ಒಡೆಯುವದನ್ನು ನೋಡಿದರೆ, ಅದರ ಹೊರ ಭಾಗದ ತುಂಬಾ ಗಟ್ಟಿಯಾದ ಹೊರ ಹೊದಿಕೆ ಮೊದಲು ಸೀಳುತ್ತದೆ. ನಂತರ ಮಾತ್ರವೇ ಒಳಗಿರುವ ಜೀವ ಹೊರಗೆ ಬರುವುದು. ನಮ್ಮಲ್ಲಿನ ಹೊಸದಾಗಿ ಹುಟ್ಟಿದ ಕ್ರೈಸ್ತರಲ್ಲಿಯೂ ಸಹ, ಗಟ್ಟಿಯಾದ ಹೊರ ಹೊದಿಕೆ ಇರುತ್ತದೆ. ಅದು ಪ್ರಾಕೃತಿಕ ವ್ಯಕ್ತಿತ್ವ ಮತ್ತು ನಮ್ಮ ದೈಹಿಕ ಬಯಕೆಗಳಾಗಿದ್ದು, ಅವು ಮುರಿಯಲ್ಪಡಬೇಕಾಗಿರುತ್ತದೆ. ನಂತರವೇ ಮಾತ್ರ ದೈವ ಪ್ರಭಾವವುಳ್ಳ ಬೆಳಕು ನಮ್ಮ ಮೂಲಕ ಪ್ರಜ್ವಲಿಸುತ್ತದೆ.

ಈ ತತ್ವವನ್ನು ನಾವು ಸತ್ಯವೇದದೆಲ್ಲೆಡೆ ನೋಡಬಹುದಾಗಿದೆ. ಹೆಂಗಸೊಬ್ಬಳು ಸುಗಂಧ ತೈಲದ ಭರಣಿಯನ್ನು ಯೇಸುವಿನೆಡೆ ತಂದಾಗ, ಅದರೊಳಗೆ ಅದ್ಭುತವಾದ ಸುಗಂಧ ತೈಲವಿತ್ತು. ಆದರೆ ಆ ಭರಣಿಯನ್ನು ಮುರಿಯುವ ತನಕ ಆಆ ಮನೆಯಲ್ಲಿನ ಯಾರೊಬ್ಬರೂ ಆ ಸುಗಂಧ ತೈಲದ ಸುವಾಸನೆಯನ್ನು ಪಡೆದುಕೊಳ್ಳಲಾಗಲಿಲ್ಲ. ಅದೇ ರೀತಿ, ನಮ್ಮ ಹೊರಗಿನ ಜೀವಿತ ಮುರಿಯಲ್ಪಡುವಂತೆ ದೇವರು ನಮ್ಮನ್ನು ಹಲವು ಪರಿಸ್ಥಿತಿಗಳ ಮೂಲಕ ತೆಗೆದುಕೊಂಡು ಹೋಗುತ್ತಾನೆ. ಆಗ ನಾವು ಜನರಿಗೆ ಇನ್ನೆಂದೂ ಆಕರ್ಷಿತರಾಗಿರುವುದಿಲ್ಲ. ನೀನು ತುಂಬಾ ಚತುರ ವ್ಯಕ್ತಿಯೆಂದು ಜನರು ತಿಳಿಯಬೇಕೆಂದು ನೀನು ಬಯಸಬಹುದು. ಆದರೆ ದೇವರು ಹೇಳುವುದೇನೆಂದರೆ, ``ನಿನ್ನ ಈ ಬಯಕೆಯನ್ನು ಮುರಿಯಲು ನೀನು ನನಗೆ ಬಿಡು''. ಮನುಷ್ಯನು ಆತ್ಮ, ಪ್ರಾಣ ಮತ್ತು ದೇಹವನ್ನು ಹೊಂದಿದ್ದಾನೆ. ಕ್ರಿಸ್ತನು ನಮ್ಮೊಳಗೆ ಬಂದಾಗ, ನಮ್ಮ ಆತ್ಮದಲ್ಲಿ ಬಹು ಸೊಗಸಾದ ಮಹಿಮೆಯು ನೆಲೆಸುತ್ತದೆ. ಆದರೆ ನಮ್ಮ ಪ್ರಾಣದ/ಪ್ರಾಕೃತಿಕ ಜೀವಿತವು ಆ ಮಹಿಮೆಯು ಪ್ರಜ್ವಲಿಸುವುದಕ್ಕೆ ಅಡ್ಡಿ ಮಾಡುತ್ತದೆ. ಅದಕ್ಕಾಗಿ ಅನೇಕ ರೀತಿಯಲ್ಲಿ ನಾವು ಮುರಿಯಲ್ಪಡುವುದನ್ನು ದೇವರು ಅನುಮತಿಸುತ್ತಾನೆ. ಈ ಮೂಲಕ ನಾವು ನಮ್ಮ ಜೀವಿತದಲ್ಲಿ ದೇವರ ಉದ್ದೇಶಗಳನ್ನು ಸಾಧಿಸಬಹುದಾಗಿದೆ.

2 ಕೊರಿಂಥ 4:10, 11, ರಲ್ಲಿನ ವಚನಗಳನ್ನು ಅನೇಕ ಕ್ರೈಸ್ತರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅನೇಕ ವಿಶ್ವಾಸಿಗಳು, ತಮ್ಮ ಜೀವಿತದಲ್ಲಿ ಆಗಬಹುದಾದ ಅದ್ಬುತ ಕಾರ್ಯಗಳ ಕುರಿತು ಸುವಾರ್ತೆಯನ್ನು ಕೇಳಲು ಕಾತುರರಾಗಿರುತ್ತಾರೆ. ಆದರೆ, ನಿಮ್ಮಲ್ಲಿ ಕ್ರಿಸ್ತನ ಜೀವಿತವು ಪ್ರಕಟವಾಗಬೇಕೆಂದರೆ, ಅದಕ್ಕೆ ಉತ್ತರವು ಈ ವಚನಗಳಲ್ಲಿ ಸಿಗುತ್ತದೆ. ನಾವು ಕ್ರಿಸ್ತನ ಮರಣವನ್ನು ನಮ್ಮ ದೇಹದಲ್ಲಿ ಹೊತ್ತು ಸಾಗಬೇಕು. ''ಯೇಸುವಿನ ಮರಣ'' ಎಂದರೇನು? ಇದು ನಾವು ನಮ್ಮ ಸ್ವಂತ ಚಿತ್ತಕ್ಕೆ ಮತ್ತು ನಮ್ಮ ಸ್ವಾರ್ಥದ ಜೀವಿತಕ್ಕೆ ಸಾಯುವುದಾಗಿದೆ. ಇದನ್ನೇ ಯೇಸು ತನ್ನ ಇಹಲೋಕದ 331/2 ವರುಷಗಳ ಕಾಲ ಮಾಡಿದರು (ಯೋಹಾನ 6:38). ಯೇಸು ಇಹಲೋಕದಲ್ಲಿರುವಾಗ ಜೀವಿತದ ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸಿದಂತೆಯೇ ನಾವೂ ಪ್ರತಿಕ್ರಿಯಿಸಬೇಕು. ಜನರು ಯೇಸುವನ್ನು ದೆವ್ವವೆಂದು ಕರೆದಾಗ, ಇಸ್ಕರಿಯೋತ ಯೂದನು ಆತನ ಹಣವನ್ನು ಕದ್ದಾಗ, ಜನರು ಆತನ ಮೇಲೆ ಉಗುಳಿದಾಗ, ಜನರು ಯೇಸುವಿಗೆ ಕಾನೂನು-ಬಾಹಿರವಾಗಿ ಹುಟ್ಟಿದವನೆಂದು (ಮರಿಯಳ ಮಗನೆಂದು) ಕರೆದಾಗ, ಜನರು ಆತನನ್ನು ಅವಮಾನಿಸಿದಾಗ, ಆತನಿಂದ ಕದ್ದಾಗ, ಆತನನ್ನು ನಿಂದಿಸಿದಾಗ, ಆತನು ಬೋಧಿಸುವುದನ್ನು ನಿಲ್ಲಿಸುವಂತೆ ಹೇಳಿದಾಗ, ಮತ್ತು ಸಭೆಯಿಂದ ಆತನನ್ನು ಹೊರಗೆ ಹಾಕಿದಾಗ, ಯೇಸು ಹೇಗೆ ಪ್ರತಿಕ್ರಿಯಿಸಿದರು? ಯೇಸು ಮನುಷ್ಯನ ಗೌರವಕ್ಕೆ, ಘನತೆಗೆ, ಖ್ಯಾತಿಗೆ ಮತ್ತು ಹಿರಿಮೆಗೆ ಮತ್ತು ತನ್ನ ಸ್ವಂತ ಚಿತ್ತಕ್ಕೆ ಸತ್ತರು. ಅದೇ 'ಯೇಸುವಿನ ಮರಣವಾಗಿದೆ''. ನೀವು ಮತ್ತು ನಾನು ಶಿಲುಬೆಯ ಮೇಲೆ ಯೇಸುವಿನ ಮರಣದಲ್ಲಿ ಯಾವುದೇ ಪಾಲನ್ನು ಹೊಂದಿಲ್ಲ. ನಾವು ಲೋಕದ ಪಾಪಗಳಿಗಾಗಿ ಸಾಯಲು ಆಗುವುದಿಲ್ಲ. ಆದರೆ ಆತನ ಜೀವಿತದಲ್ಲಿ ಸಾಯುವಿಕೆಯು ಪ್ರತಿದಿನವೂ ನಡೆಯುತ್ತಿತ್ತು. ಆ ಮರಣದಲ್ಲಿ ನಾವು ಪಾಲುದಾರರಾಗಬೇಕು.

"ಯೇಸುವಿನ ಮರಣ" ಎಂದು ಯಾಕೆ ಅದು ಕರೆಯಲ್ಪಟ್ಟಿದೆ? ಏಕೆಂದರೆ, ಸ್ವಾರ್ಥಕ್ಕೆ ಮತ್ತು ಲೋಕದ ಸಂಗತಿಗಳಿಗೆ ಸಾಯುವುದಕ್ಕೆ ಯೇಸುವೇ ಮೊದಲಿಗರಾಗಿದ್ದಾರೆ . ಆತನು ಮನುಷ್ಯನಕ್ಕೆ (ಮನುಷ್ಯ ಸ್ವಭಾವಕ್ಕೆ) ಸತ್ತನು, ಅದರ ಮೂಲಕ ಯೇಸು ತಂದೆಯ ಮಹಿಮೆಯನ್ನು ತೋರ್ಪಡಿಸಿದನು. ನೀವು ಮತ್ತು ನಾನು ಯೇಸುವಿನ ಹೆಜ್ಜೆ ಜಾಡಿನಲ್ಲಿ ನಡೆಯುವುದಕ್ಕೆ ಕರೆಯಲ್ಪಟ್ಟವರಾಗಿದ್ದೇವೆ. 2 ಕೊರಿಂಥ 4:17,18ರಲ್ಲಿ ಪೌಲನು ಈ ರೀತಿಯಾಗಿ ಹೇಳುತ್ತಾನೆ - ''ಕ್ಷಣ ಮಾತ್ರವಿರುವ ನಮ್ಮ ಹಗುರವಾದ ಸಂಕಟವು ಅತ್ಯಂತಾಧಿಕವಾದ ಪ್ರತಿಫಲವನ್ನು ಉಂಟು ಮಾಡಿ ನಮಗೆ ನಿರಂತರವಾಗಿರುವ ಗೌರವವಾದ ಪ್ರಭಾವವನ್ನು ದೊರಕಿಸುತ್ತದೆ''. ಆದರೆ ಈ ಒಂದು ಪ್ರಭಾವವು ನಮ್ಮೊಳಗೆ ಬರುವುದು ಯಾವಾಗ ಎಂದರೆ - ''ನಾವು ಕಾಣುವಂಥದನ್ನು ಲಕ್ಷಿಸದೆ ಕಾಣದಿರುವಂಥದನ್ನು ಲಕ್ಷಿಸುವವರಾದಾಗ ಮಾತ್ರ'' (2 ಕೊರಿಂಥ4:18). ಅದರ ಅರ್ಥ ನಾವು ನಮ್ಮ ಯಾವುದೇ ಬಾಧೆಗಳನ್ನು ಮನುಷ್ಯರ ದೃಷ್ಠಿಕೋನದಿಂದ ನೋಡಬಾರದು, ಆದರೆ ದೈವಿಕ ದೃಷ್ಠಿಯಿಂದ ನೋಡಬೇಕು. ಈ ಒಂದು ಪ್ರಭಾವವು ಸಂಕಟಗಳ ಮೂಲಕ ನಮ್ಮ ಜೀವಿತದೊಳಗೆ ಕಾರ್ಯ ಮಾಡುತ್ತದೆ ಮತ್ತು ಯೇಸುವಿನ ಹೃದಯದೊಂದಿಗಿನ ಅನ್ಯೋನ್ಯತೆಗೆ ಹೆಚ್ಚು ಹತ್ತಿರವಾಗುತ್ತೇವೆ. ಅದಕ್ಕಾಗಿ ನಾವು ಪ್ರೋತ್ಸಾಹಿಸಲ್ಪಟ್ಟಿದ್ದೇವೆ; ಮತ್ತು ಇದೇ ಮಾರ್ಗವಾಗಿ ನಾವು ಸೇವಾಕಾರ್ಯವಾನ್ನು ಪಡೆದುಕೊಳ್ಳುತ್ತೇವೆ. ಕೇವಲ ದೇವರ ವಾಕ್ಯವನ್ನು ಅಭ್ಯಸಿಸುವುದರಿಂದ ಮಾತ್ರ ನಾವು ಸೇವೆಯನ್ನು ಪಡೆದುಕೊಳ್ಳಲಾಗುವುದಿಲ್ಲ.