WFTW Body: 

1 ಥೆಸ. 4:13-18 ರಲ್ಲಿ ಅಪೊಸ್ತಲ ಪೌಲನು, ಕ್ರಿಸ್ತನ ಬರುವಿಕೆಯು ಯಾವ ರೀತಿ ನಡೆಯಲಿದೆ ಎಂಬುದನ್ನು ತಿಳಿಸುತ್ತಾನೆ. "ಕರ್ತನಲ್ಲಿ ನಿದ್ರೆ ಹೋಗುವವರ ಗತಿ ಏನೆಂದು ನೀವು ತಿಳಿಯದೆ ಇರುವುದು ನಮ್ಮ ಮನಸ್ಸಿಗೆ ಒಪ್ಪುವುದಿಲ್ಲ." ಇದು ಕ್ರಿಸ್ತನಲ್ಲಿ ಇದ್ದುಕೊಂಡು ಮರಣ ಹೊಂದಿದವರ ಬಗ್ಗೆ ಹೇಳಿದ ಮಾತಾಗಿದೆ. ಯೇಸುವು ಮರಣ ಹೊಂದಿ ಮತ್ತೆ ಜೀವಿತನಾಗಿ ಎದ್ದು ಬಂದನು; ಹಾಗೆಯೇ ಕ್ರಿಸ್ತನಲ್ಲಿ ಮರಣ ಹೊಂದಿದವರು ಸಹ ಮತ್ತೆ ಜೀವಿತರಾಗಿ ಏಳುವರು. ಯೇಸುವು ಹಿಂದಿರುಗುವಿಕೆಯ ದಿನದಲ್ಲಿ, ನಮ್ಮಲ್ಲಿ ಜೀವಿತರಾಗಿ ಇರುವಂಥವರು, ಕ್ರಿಸ್ತನಲ್ಲಿ ಇದ್ದುಕೊಂಡು ಮೊದಲೇ ಸತ್ತಿರುವ ಭಕ್ತರಿಗಿಂತ ಮೊದಲು ಮೇಲಕ್ಕೆ ಒಯ್ಯಲ್ಪಡುವುದಿಲ್ಲ. ಅವರು ಸಮಾಧಿಗಳಿಂದ ಎಬ್ಬಿಸಲ್ಪಡುವರು - ಅದು ಪ್ರಥಮ ಪುನರುತ್ಥಾನವು. ಆ ಮೇಲೆ ನಾವು ಅವರೊಂದಿಗೆ ಕರ್ತನನ್ನು ಎದುರುಗೊಳ್ಳಲು ಫಕ್ಕನೆ ಒಯ್ಯಲ್ಪಡುವೆವು. ಆದರೆ ಅವಿಶ್ವಾಸಿಗಳು ಇನ್ನೂ ಸಾವಿರ ವರ್ಷಗಳು ತೀರುವ ತನಕ ಜೀವಿತರಾಗಿ ಏಳುವುದಿಲ್ಲ - ಅವರು ಜೀವಿತರಾಗಿ ಏಳುವದು ಎರಡನೆಯ ಪುನರುತ್ಥಾನದಲ್ಲಿ.

ನಮ್ಮ ಕರ್ತನು ಹಿಂದಿರುಗಿ ಬರುವಾಗ, ಆಜ್ಞಾಘೋಷದೊಡನೆಯೂ, ಪ್ರಧಾನ ದೂತನ ಶಬ್ದದೊಡನೆಯೂ. ದೇವರ ತುತೂರಿ ಧ್ವನಿಯೊಡನೆಯೂ, ಆಕಾಶದಿಂದ ಇಳಿದು ಬರುವನು. ಆಗ ಸಮಸ್ತ ಭಕ್ತರೂ ಅಂತರಿಕ್ಷದಲ್ಲಿ ಮೇಘವಾಹನರಾಗಿ ಕರ್ತನನ್ನು ಎದುರುಗೊಳ್ಳುವರು. ಯೇಸುವು ತನ್ನ ಶಿಷ್ಯರಿಗೆ ತಾನು ಪ್ರತ್ಯಕ್ಷನಾಗುವ ಬಗ್ಗೆ ತಿಳಿಸಿದಾಗ, ಇವೇ ವಿಷಯಗಳನ್ನು ಹೇಳಿದನು. ಅವನು ಹೇಳಿದ ಮಾತು, "ಯಾರಾದರೂ ನಿಮಗೆ, ’ಅಗೋ, ಕ್ರಿಸ್ತನು ಇಲ್ಲಿದ್ದಾನೆ’ ಅಥವಾ ’ಆತನು ಅಲ್ಲಿದ್ದಾನೆ’ ಅಥವಾ ’ಆತನು ರಹಸ್ಯವಾಗಿ ಬಂದಿದ್ದಾನೆ’ ಎಂದು ಹೇಳಿದರೆ ನಂಬಬೇಡಿರಿ," ಎಂದಾಗಿತ್ತು (ಮತ್ತಾ. 24:26) . ಆತನು ಹೇಳಿದ್ದು ಏನೆಂದರೆ, ಆತನ ಬರುವಿಕೆಯು ಇಂದು ಅನೇಕರು ನಂಬುತ್ತಿರುವ ರೀತಿಯಲ್ಲಿ ರಹಸ್ಯವಾಗಿ ಜರಗುವುದಿಲ್ಲ. ಹೇಗೆ ಮಿಂಚು ಮೂಡಣದಲ್ಲಿ ಹುಟ್ಟಿ ಪಡುವಣದ ವರೆಗೂ ಕಾಣಿಸುತ್ತದೋ, ಹಾಗೆಯೇ ಆತನ ಪ್ರತ್ಯಕ್ಷತೆಯು ಇರುತ್ತದೆ. ಎಲ್ಲರ ಕಣ್ಣುಗಳು ಆತನನ್ನು ಕಾಣುವವು.

ಕ್ರಿಸ್ತನ ಬರುವಿಕೆಯು ಯಾವಾಗ ನೆರವೇರುತ್ತದೆ? ಯೇಸುವು ಈ ಪ್ರಶ್ನೆಯನ್ನೂ ಸಹ ಉತ್ತರಿಸಿದನು: "ಆ ದಿನಗಳ ಸಂಕಟವು ತೀರಿದ ಕೂಡಲೆ ನೆರವೇರುತ್ತದೆ" (ಮತ್ತಾ. 24:29) . ಅನೇಕರು ನಂಬುವದು ಏನೆಂದರೆ, ಸಂಕಟಕಾಲಕ್ಕೆ ಮೊದಲು ಕ್ರಿಸ್ತನು ತನ್ನ ಭಕ್ತರನ್ನು ರಹಸ್ಯವಾಗಿ ಮೇಲೆತ್ತುತ್ತಾನೆ ("Rapture"), ಎಂಬುದಾಗಿ. ಆದರೆ ಇಡೀ ಸತ್ಯವೇದದಲ್ಲಿ ಈ ಬೋಧನೆ ಒಂದೇ ಒಂದು ವಚನದಲ್ಲೂ ಕಾಣಿಸುವುದಿಲ್ಲ: ಇದೊಂದು ಮಾನವ ಕಲ್ಪಿತ ಬೋಧನೆಯಾಗಿದೆ. ಯೇಸುವು ಸ್ಪಷ್ಟವಾದ ಮಾತಿನಿಂದ ತಿಳಿಸಿದ್ದು ಏನೆಂದರೆ, ಆತನ ಬರುವಿಕೆಯು ಸಂಕಟಕಾಲದ ನಂತರ ನಡೆಯುತ್ತದೆ. ಇಲ್ಲಿ 1 ಥೆಸ. 4:16-17 ರಲ್ಲಿ ನಮೂದಿಸಲಾದ ಘಟನೆಗಳನ್ನು, ಯೇಸುವು ಸರಿಯಾಗಿ ಅದೇ ವಿವರದೊಂದಿಗೆ, ಮತ್ತಾ. 24:30-31 ದಲ್ಲಿ ನಮೂದಿಸಿದ್ದಾನೆ: ಯೇಸುವು ಆಕಾಶದ ಮೋಡಗಳ ಮೇಲೆ, ದೇವದೂತರ ಶಬ್ದದೊಡನೆಯೂ ದೇವರ ತುತೂರಿಯ ಧ್ವನಿಯೊಡನೆಯೂ ಇಳಿದು ಬರುವನು, ಮತ್ತು ದೇವಭಕ್ತರು ಆತನನ್ನು ಎದುರುಗೊಳ್ಳಲು ಅಲ್ಲಿಗೆ ಒಯ್ಯಲ್ಪಡುವರು.

ನಾವು 1 ಥೆಸ. 5:2 ರಲ್ಲಿ ಓದುವಂತೆ, "ಕಳ್ಳನು ರಾತ್ರಿಕಾಲದಲ್ಲಿ ಹೇಗೆ ಬರುತ್ತಾನೋ, ಹಾಗೆಯೇ ಕರ್ತನ ದಿನವು ಬರುವದು." ಒಬ್ಬ ಕಳ್ಳನು ತಾನು ಬರುವುದನ್ನು ಘೋಷಿಸುವುದಿಲ್ಲ, ಆದರೆ ಅನಿರೀಕ್ಷಿತವಾಗಿ ಬರುತ್ತಾನೆ. ಹೀಗೆ, ಕರ್ತನ ಬರುವಿಕೆಯು ಪ್ರತಿಯೊಬ್ಬ ಅವಿಶ್ವಾಸಿಯನ್ನು ಬೆರಗಾಗಿಸುತ್ತದೆ. ಆದಾಗ್ಯೂ, ಬೆಳಕಿನ ಸಂತಾನದವರಾದ ನಾವು, ನಮ್ಮ ಕರ್ತನು ಬರುವುದನ್ನು ಎದುರು ನೋಡುತ್ತಿದ್ದೇವೆ (1 ಥೆಸ. 5:4) . ನಾವು ಕತ್ತಲೆಯಲ್ಲಿ ಜೀವಿಸುವುದಿಲ್ಲ. ಹಾಗಾಗಿ ನಾವು ಆತ್ಮಿಕ ವಿಷಯಗಳಲ್ಲಿ ನಿದ್ರೆ ಹೋಗಬಾರದು, ಆದರೆ ಸ್ವಸ್ಥಚಿತ್ತರು ಆಗಿರಬೇಕು (1 ಥೆಸ. 5:6) .

ನಾವು ನಿದ್ದೆ ಹೋಗಿದ್ದೇವೋ ಅಥವಾ ಎಚ್ಚರವಾಗಿದ್ದೇವೋ ಎಂದು ಹೇಗೆ ತಿಳಕೊಳ್ಳಬಹುದು? ಒಬ್ಬ ಮನುಷ್ಯನು ನಿದ್ರಿಸುವಾಗ, ಸುತ್ತಮುತ್ತಲು ತನ್ನ ಕೊಠಡಿಯಲ್ಲಿ ನಡೆಯುವ ನಿಜವಾದ ಸಂಗತಿಗಳು ಅವನಿಗೆ ಕಾಣಿಸುವುದಿಲ್ಲ; ಆದರೆ ಅವನಿಗೆ ಅವನ ಭ್ರಾಂತಿಯ (ಕನಸಿನ ಲೋಕದ) ಸಂಗತಿಗಳು ನಿಜವಾಗಿರುವಂತೆ ಕಾಣಿಸುತ್ತವೆ. ಇದೇ ತರಹ, ಒಬ್ಬ ವಿಶ್ವಾಸಿಯು ಆತ್ಮಿಕವಾಗಿ ನಿದ್ರಿಸಿದಾಗ, ಅವನಿಗೆ ನಿತ್ಯತ್ವದ ಸತ್ಯಾಂಶಗಳು ಕಾಲ್ಪನಿಕ ಸಂಗತಿಗಳಂತೆ ಕಾಣಿಸುತ್ತವೆ, ಆದರೆ ಈ ಲೋಕದ ಹೊರತೋರಿಕೆಯ ಸಂಗತಿಗಳು ಅವನ ಗಮನ ಸೆಳೆಯುತ್ತಿರುತ್ತವೆ. ಪರಲೋಕ ಹಾಗೂ ನಿತ್ಯತ್ವದ ಸತ್ಯಾಂಶಗಳ ಹೋಲಿಕೆಯಲ್ಲಿ, ಈ ಲೋಕದ ಸಮಸ್ತ ಸಂಗತಿಗಳು ಕಾಲ್ಪನಿಕ ಕನಸಿನ ಸಂಗತಿಗಳಾಗಿವೆ. ಪರಲೋಕದ ಸಂಗತಿಗಳು ನಿಜವಾದ ಶಾಶ್ವತ ಸಂಗತಿಗಳಾಗಿವೆ. ನಿದ್ರೆ ಹೋಗಿರುವ ವಿಶ್ವಾಸಿಗಳ ಜೀವನದಲ್ಲಿ, ಕರ್ತನು ನಿಶ್ಚಯವಾಗಿ ಒಬ್ಬ ಕಳ್ಳನಂತೆ ರಾತ್ರಿ ವೇಳೆಯಲ್ಲಿ ಬರುವನು. ಆದರೆ ನಾವು ಆ ದಿನಕ್ಕಾಗಿ ಎದುರು ನೋಡಬೇಕೆಂದು ಪೌಲನು ತಿಳಿಸುತ್ತಾನೆ ಮತ್ತು ನಾವು ಆತನ ಬರೋಣಕ್ಕಾಗಿ ಕಾತರದಿಂದ ಕಾದಿದ್ದೇವೆ.

ನಮ್ಮ ಸುತ್ತಮುತ್ತಲಿನ ಜನರು, "ಎಲ್ಲೆಲ್ಲೂ ಸಮಾಧಾನ ಮತ್ತು ನಿರ್ಭಯತೆ ಇದೆ," ಎಂಬುದಾಗಿ ಭಾವಿಸುವರು (1 ಥೆಸ. 5:3). ಆದರೆ ಅವರ ಮೇಲೆ ನಾಶನವು ಫಕ್ಕನೆ ಬರುತ್ತದೆ. ಈ ನಾಶನದ ವಿವರಣೆ ಹೇಗಿದೆಯೆಂದರೆ, ಹಠಾತ್ತಾಗಿ "ಗರ್ಭಿಣಿಗೆ ಪ್ರಸವ ವೇದನೆ ಬರುವ ಪ್ರಕಾರ" ಬರಲಿದೆ (1 ಥೆಸ. 5:3) . ಯೇಸುವೂ ಸಹ ಕೊನೆಯ ದಿನಗಳನ್ನು ಹೀಗೆಯೇ ವಿವರಿಸಿದನು (ಮತ್ತಾ. 24:8 ನೋಡಿರಿ) . ಒಬ್ಬ ಸ್ತ್ರೀಯು ಒಂದು ಮಗುವಿಗೆ ಜನ್ಮ ನೀಡುವುದಕ್ಕೆ ಮುಂಚೆ ಹಲವು ಗಂಟೆಗಳ ಕಾಲ ಹೆರಿಗೆಯ ನೋವನ್ನು ಅನುಭವಿಸಬೇಕು, ಎಂದು ಪ್ರತಿಯೊಬ್ಬ ಮಹಿಳೆಯೂ ಅರಿತಿದ್ದಾಳೆ (ಕೆಲವು ತಾಯಂದಿರಿಗೆ ಆ ನೋವು ಎಷ್ಟು ವಿಪರೀತವಾಗಿ ಇರುತ್ತದೆಂದರೆ, ಅವರಿಗೆ ಸಾವು ಸಮೀಪಿಸಿದ ಭಾವನೆ ಉಂಟಾಗುತ್ತದೆ). ಇದರ ನಂತರವೇ ಮಗು ಜನಿಸುತ್ತದೆ.

ಈ ಚಿತ್ರಣವು ಕ್ರಿಸ್ತನ ಬರುವಿಕೆಗೆ ಮುಂಚಿತವಾಗಿ ಬರುವ ಸಂಕಟಕರ ಸಮಯವನ್ನು ತೋರಿಸುತ್ತದೆ. ಅಂತಹ ಪ್ರಸವ ವೇದನೆ ಇಲ್ಲದೆ ಯಾವ ಮಗುವೂ ಜನಿಸುವುದಿಲ್ಲ. ಮತ್ತು ಈ ಕಷ್ಟಕರ ಸಂಕಟಕ್ಕೆ ಮುಂಚಿತವಾಗಿ ಕರ್ತನ ಬರುವಿಕೆಯು ನೆರವೇರುವುದಿಲ್ಲ. ನಾವು ಆ ಕಾಲದ ಬಗ್ಗೆ ಭಯಭೀತರಾಗಿಲ್ಲ. ನಾವು ಕರ್ತನ ಸಾಕ್ಷಿಗಳಾಗಿ ಇಲ್ಲಿ ಇದ್ದುಕೊಂಡು, ಸುವಾರ್ತೆಯ ಪರವಾಗಿ ನಮ್ಮ ಜೀವವನ್ನು ಅರ್ಪಿಸಲು ಕರ್ತನು ಅನುಮತಿಸಿದರೆ, ನಮಗೆ ಅದೊಂದು ಶ್ರೇಷ್ಠ ಸಮ್ಮಾನವಾಗಿರುತ್ತದೆ.