ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಸಭೆ ಶಿಷ್ಯಂದಿರಿಗೆ
WFTW Body: 

ಕ್ರಿಸ್ತನು ಪರಲೋಕಕ್ಕೆ ಏರಲ್ಪಟ್ಟಾಗ, ಆತನು ಸಭೆಗೆ ವರಗಳನ್ನು ಕೊಟ್ಟನು. ಆ ವರಗಳು ಜನರಾಗಿದ್ದಾರೆ. ಕ್ರಿಸ್ತನು ಸಭೆಗೆ ಅಪೊಸ್ತಲರನ್ನು, ಪ್ರವಾದಿಗಳನ್ನು, ಸುವಾರ್ತಿಕರನ್ನು, ಸಭಾ ಪಾಲಕರನ್ನು (ಕುರುಬರು) ಮತ್ತು ಉಪದೇಶಕರನ್ನು (ಬೋಧಕರು) ಅನುಗ್ರಹಿಸಿದ್ದಾನೆ (ಎಫೆಸ 4:11). ಈ ವರಗಳನ್ನು ಹೊಂದಿರುವಂತ ವ್ಯಕ್ತಿಗಳು ಎಲ್ಲಾ ವಿಶ್ವಾಸಿಗಳಿಗೆ ಕ್ರಿಸ್ತನ ದೇಹವನ್ನು ಕಟ್ಟಲು ಸಜ್ಜುಗೊಳಿಸುತ್ತಾರೆ. ಇದನ್ನು ಗುರುತಿಸುವಂತದ್ದು ಬಹು ಮುಖ್ಯವಾಗಿದೆ. ಈ ವರಗಳನ್ನು ಹೊಂದಿರುವಂತ ಜನರು ಸ್ವತ: ತಾವೇ ಸಭೆಯನ್ನು ಕಟ್ಟಲು ಆಗುವುದಿಲ್ಲ. ಅವರು ವಿಶ್ವಾಸಿಗಳನ್ನು ಸಜ್ಜುಗೊಳಿಸಿದಾಗ, ವಿಶ್ವಾಸಿಗಳು ಕ್ರಿಸ್ತನ ದೇಹವನ್ನು ಕಟ್ಟುತ್ತಾರೆ. ಪ್ರತಿಯೊಬ್ಬ ವಿಶ್ವಾಸಿಯು ಕ್ರಿಸ್ತನ ದೇಹವನ್ನು ಕಟ್ಟಲು ಪಾಲನ್ನು ಹೊಂದಿದ್ದಾನೆ. ಆದರೆ ಇಂತಹ ಕೆಲಸವನ್ನು ಇಂದು ನಾವು ನೋಡುವುದು ಬಹಳ ವಿರಳವಾಗಿದೆ.

ವರವನ್ನು ಹೊಂದಿದ ವ್ಯಕ್ತಿಗಳಲ್ಲಿ ಮೊದಲನೆಯದವರು ''ಅಪೊಸ್ತಲರಾಗಿದ್ದಾರೆ''. ಇವರು ಮೊದಲ ಹನ್ನೆರೆಡು ಮಂದಿ ಅಪೊಸ್ತಲರು ಅಷ್ಟೇ ಅಲ್ಲ. ಏಕೆಂದರೆ ಇಲ್ಲಿ ಹೇಳಿರುವುದೇನೆಂದರೆ, ಕ್ರಿಸ್ತನು ಪರಲೋಕಕ್ಕೆ ಏರಿದ ಮೇಲೆ ಅವರನ್ನು ಸಭೆಗೆ ಕೊಟ್ಟನು. ಅಪೊಸ್ತಲರ ಕೃತ್ಯಗಳಲ್ಲಿ ನಾವು ಓದುವುದೇನೆಂದರೆ, ಪೌಲ ಮತ್ತು ಬಾರ್ನಬರು ಸಹ ಅಪೊಸ್ತಲರಾಗಿ ಕರೆಯಲ್ಪಟ್ಟರು ಮತ್ತು ಪ್ರಕಟಣೆ 2:2 ರಲ್ಲಿ ನಾವು ಓದುವುದೇನೆಂದರೆ, 12 ಜನ ಅಪೊಸ್ತಲರಲ್ಲಿ ಆ ಸಮಯದಲ್ಲಿ ಜೀವಿಸುತ್ತಿದ್ದ ಒಬ್ಬ ಅಪೋಸ್ತಲನು ಯೋಹನನಾಗಿದ್ದನು ಹಾಗೂ ದೇವರು ಎಫೆಸ ಸಭೆಗೆ ಬರೆಯುವುದೇನೆಂದರೆ - "ಅಪೊಸ್ತಲರಲ್ಲದಿದ್ದರೂ ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು ನೀನು ಪರೀಕ್ಷಿಸಿ ಅವರನ್ನು ಸುಳ್ಳುಗಾರರೆಂದು ಕಂಡುಕೊಂಡಿ". ಇದು ಸೂಚಿಸುವುದೇನೆಂದರೆ - ಅಲ್ಲಿ ಇನ್ನೂ ಬೇರೆ ನಿಜವಾದ ಅಪೊಸ್ತಲರು ಆ ಸಮಯದಲ್ಲಿ ಜೀವಿಸುತ್ತಿದ್ದರು. ಇಲ್ಲವಾದಲ್ಲಿ, ಅಪೊಸ್ತಲರು ಎಂದು ಹೇಳಿಕೊಳ್ಳುವವರನ್ನು ಪರೀಕ್ಷೆ ಮಾಡುವ ಅಗತ್ಯತೆ ಇರಲಿಲ್ಲ. ಇಂದೂ ಸಹ ಅಪೊಸ್ತಲರು ಇದ್ದಾರೆ. ಅಪೊಸ್ತಲರು ಎಂದರೆ ಅವರು ಕೇವಲ ಶಾಸ್ತ್ರವನ್ನು ಬರೆಯುವವರಾಗಿರಬೇಕಾಗಿಲ್ಲ. ಆಂದ್ರೆಯ ಮತ್ತು ಪ್ರಾರಂಭದಲ್ಲಿದ್ದ 12 ಜನ ಅಪೊಸ್ತಲರಲ್ಲಿ ಬಹು ಮಂದಿ ಯಾವುದೇ ವೇದವಾಕ್ಯವನ್ನು ಬರೆಯಲಿಲ್ಲ. ಆದರೆ ಅಪೊಸ್ತಲರಲ್ಲದಂತ ಲೂಕ ಮತ್ತು ಮಾರ್ಕ ಇಬ್ಬರೂ ವೇದವಾಕ್ಯವನ್ನು ಬರೆದರು. ಅಪೊಸ್ತಲರು ದೇವರ ನಿಯೋಜಿತ ಕಾರ್ಯಗಳನ್ನು ಮಾಡಲು ದೇವರಿಂದಲೇ ಕಳುಹಿಸಲ್ಪಟ್ಟವರಾಗಿದ್ದಾರೆ. ''ಅಪೊಸ್ತಲ'' ಎಂಬ ಪದದ ಅರ್ಥ ''ಕಳುಹಿಸಲ್ಪಟ್ಟವರು''. ಅಂದರೆ ಒಬ್ಬ ಮನುಷ್ಯನು ನಿರ್ದಿಷ್ಟ(ತಕ್ಕ) ಸ್ಥಳಕ್ಕೆ ಮತ್ತು ತಕ್ಕ ಸಮಯಕ್ಕೆ ದೇವರಿಂದ ಕಳುಹಿಸಲ್ಪಟ್ಟವನಾಗಿದ್ದಾನೆ. ಅವರು ಸ್ಥಳೀಯ ಸಭೆಗಳನ್ನು ಅನೇಕ ಸ್ಥಳಗಳಲ್ಲಿ ಕಟ್ಟಿ ಬೆಳೆಸುವವರಾಗಿದ್ದಾರೆ ಮತ್ತು ಆ ಸ್ಥಳೀಯ ಸ್ಥಳಗಳಲ್ಲಿ ಸಭಾ ಹಿರಿಯರನ್ನು ನೇಮಕ ಮಾಡುವವರಾಗಿದ್ದಾರೆ. ನಂತರ ಈ ಅಪೊಸ್ತಲರು ಆ ಸಭೆಯ ಹಿರಿಯರಿಗೆ ನಾಯಕರಾಗಿರುತ್ತಾರೆ ಮತ್ತು ಅವರಿಗೆ ಮಾರ್ಗದರ್ಶನ ನೀಡುವವರಾಗಿರುತ್ತಾರೆ. ಇವರು ಸಭೆಯ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಮತ್ತು ಆ ಹಿರಿಯರನ್ನು ಪ್ರಬುದ್ಧತೆಗೆ ನಡೆಸುತ್ತಾರೆ. ಅದರ ಜೊತೆಗೆ ಒಬ್ಬ ಅಪೊಸ್ತಲನು ತನ್ನ ಮೂಲ ಸಭೆಯನ್ನ ಹೊಂದಿರಬಹುದು, ಆದರೆ ಆ ಸ್ಥಳೀಯ ಸಭೆಯ ಸದಸ್ಯರ ಮೇಲೆ ಯಾವುದೇ ಜಬಾಬ್ದಾರಿಯನ್ನು ಹೊಂದಿರುವುದಿಲ್ಲ. ಆತನ ಜವಾಬ್ದಾರಿಯು ಕೇವಲ ಸಭೆಗಳ ಹಿರಿಯರ ಮೇಲೆ ಇರುತ್ತದೆ.

ಅಪೊಸ್ತಲನಾದ ನಂತರ ಬರುವದು ''ಪ್ರವಾದಿಗಳು''. ಇವರು ಸಭೆಯಲ್ಲಿನ ಸಮಸ್ಯೆಗಳನ್ನು ಕಂಡುಹಿಡಿಯುವ(ಪತ್ತೆ ಹಚ್ಚುವ) ಸೂಕ್ಷ್ಮಗ್ರಹಿಕೆಯನ್ನು ಹೊಂದಿರುತ್ತಾರೆ. ಅವರು ಒಳ್ಳೆಯ ವೈದ್ಯರ ರೀತಿಯಲ್ಲಿದ್ದುಕೊಂಡು, ರೋಗಿಗಳ ಕಾಯಿಲೆಯನ್ನು ಕಂಡುಹಿಡಿದು, ಆತನಿಗೆ ಸರಿಯಾದ ಔಷಧಿಯನ್ನು ಕೊಟ್ಟು, ಅಥವಾ ಅವಶ್ಯವಿದ್ದಲ್ಲಿ ಅಗತ್ಯವಿರುವ ಆತ್ಮಿಕ ಶಸ್ತ್ರಚಿಕಿತ್ಸೆಯ ಮೂಲಕ ವಿಶ್ವಾಸಿಗಳಲ್ಲಿನ ಆತ್ಮೀಕ ಕ್ಯಾನ್ಸರ್ ನ್ನು ತೆಗೆದುಹಾಕಿ, ಸ್ವಸ್ಥರನ್ನಾಗಿಸುತ್ತಾರೆ. ಪ್ರವಾದಿಗಳು ಜನಪ್ರಿಯರಾಗಿರುವುದಿಲ್ಲ, ಏಕೆಂದರೆ ಅವರು ಪ್ರತಿ ಸಭೆಯಲ್ಲೂ ಪಾಪವೆಂಬ ಕ್ಯಾನ್ಸರ್ ನ್ನು ತೋರಿಸುತ್ತಿರುತ್ತಾರೆ. ಅನೇಕ ಜನರು ತಮ್ಮ ದೇಹದ ಪರೀಕ್ಷೆಯ ಫಲಿತಾಂಶವನ್ನು ನೋಡುವಾಗ ಸಂತೋಷಿತರಾಗಿರುವುದಿಲ್ಲ. ಅದೇ ಪ್ರಕಾರ ಪ್ರವಾದಿಗಳು ಸಭೆಯಲ್ಲಿನ ಜನರ ಅಂತರಾಳದ ಪಾಪದ ಸ್ಥಿತಿಯ ಬಗ್ಗೆ ಹೇಳುವಾಗ, ಅನೇಕ ವಿಶ್ವಾಸಿಗಳು ಸಹ ಸಂತೋಷಗೊಳ್ಳುವುದಿಲ್ಲ. ಆದರೆ ಇದು ಸ್ಥಳೀಯ ಸಭೆಯಲ್ಲಿ ಬಹುಮುಖ್ಯವಾದ ಸೇವೆಯಾಗಿದೆ. ಯಾವುದೇ ಸಭೆಯು ಆತ್ಮೀಕ ಜೀವಿತದಲ್ಲಿ ಉಳಿಯಬೇಕೆಂದರೆ, ಅವರ ಪ್ರತಿಯೊಂದು ಕೂಟಗಳಲ್ಲಿ ಜನರಲ್ಲಿನ ಪಾಪವನ್ನು ತೋರಿಸುವಂತ ಪ್ರವಾದಿಗಳನ್ನು ಹೊಂದಿರಬೇಕು. ಆಗ ಜನರು ತಮ್ಮ ಗುಪ್ತವಾದ ಪಾಪಗಳನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಈ ಕೂಟದಲ್ಲಿ ದೇವರು ಇದ್ದಾನೆ ಎಂದು ಅರಿಕೆ ಮಾಡಿ, ಆತನ ಕಡೆ ತಿರುಗಿಕೊಳ್ಳುತ್ತಾರೆ (1 ಕೊರಿಂಥ 14:24,25). ಇಂದಿನ ಕ್ರೈಸ್ತತ್ವದಲ್ಲಿರುವಂತ ಸುಳ್ಳು ಪ್ರವಾದಿಗಳ ಗುಂಪನ್ನು ನಾನು ಉಲ್ಲೇಖಿಸುತ್ತಿಲ್ಲ. ಅವರು ಜನರಿಗೆ ಎಲ್ಲಿಗೆ ಹೋಗಬೇಕು ಅಥವಾ ಯಾರನ್ನು ಮದುವೆ ಆಗಬೇಕು ಅಥವಾ ಜನರನ್ನು ತೀರ್ಪು ಮಾಡುವುದರೊಂದಿಗೆ ಅವರನ್ನು ಹಿಂಸಿಸುತ್ತಾರೆ. ಇದು ನಕಲಿತನದ ಪ್ರವಾದನೆಯಾಗಿದೆ. ನಿರ್ದೇಶಿಸುವಂತ(ನೀವು ಹೀಗೆಯೆ ಮಾಡಬೇಕೆಂದು) ಪ್ರವಾದನೆಯು ಹೊಸ ಒಡಂಬಡಿಕೆಯಲ್ಲಿ ಎಲ್ಲಿಯೂ ಕಾಣಬರುವುದಿಲ್ಲ. ಅದು ಹಳೆ ಒಡಂಬಡಿಕೆ ಸೇವೆಯಾಗಿದೆ. ಆ ಸಮಯದಲ್ಲಿ ಪ್ರವಾದಿಗಳು ಮಾತ್ರ ಪವಿತ್ರಾತ್ಮನನ್ನು ಹೊಂದಿರುತ್ತಿದ್ದರು. ಆದರೆ ಇಂದು ಆ ರೀತಿಯಾಗಿಲ್ಲ.

ನಂತರ ಬರುವಂತವರು ''ಸುವಾರ್ತಿಕರು''. ಈ ವಿಶ್ವಾಸಿಗಳು ಸುವಾರ್ತೆಯನ್ನು ಕೇಳದೇ ಇರುವಂತವರ ವಿಷಯವಾಗಿ ಭಾರವನ್ನು ಹೊಂದಿರುತ್ತಾರೆ ಮತ್ತು ಅವರನ್ನು ಕ್ರಿಸ್ತನ ಕಡೆಗೆ ತರುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅದು ವೈಯಕ್ತಿಕ ಸುವಾರ್ತೆಯಿಂದಾಗಿರಬಹುದು ಅಥವಾ ಸುವಾರ್ತಾ ಕೂಟಗಳ ಮೂಲಕವಾದರೂ ಆಗಿರಬಹುದು. ಸುವಾರ್ತಿಕನೆಂದರೆ- ಆತನು ದೇಹದ ಕೈ ಇದ್ದಂತೆ, ಮತ್ತು ಆ ಕೈ ಸ್ವಲ್ಪ ರೊಟ್ಟಿಯ ತುಂಡನ್ನು ತೆಗೆದುಕೊಂಡು(ರೊಟ್ಟಿಯ ತುಂಡು ಅವಿಶ್ವಾಸಿಗೆ ಹೊಲಿಕೆಯಾಗಿದೆ) ಬಾಯೊಳಗೆ ಹಾಕುವಂತೆ ಹೋಲುತ್ತದೆ. ಪ್ರವಾದಿಗಳು ನಂತರದಲ್ಲಿ ಹಲ್ಲಿನ ರೀತಿಯಲ್ಲಿ ಇದ್ದುಕೊಂಡು, ಆ ರೊಟ್ಟಿಯನ್ನು ಜಗಿಯುತ್ತಾರೆ ಮತ್ತು ಸಣ್ಣ ಸಣ್ಣದಾಗಿ ಮಾಡುತ್ತಾರೆ ಹಾಗೂ ಹೊಟ್ಟೆಯು ಆಮ್ಲವನ್ನು ಅದರ ಮೇಲೆ ಸುರಿಸಿ, ಅದರ ಗಾತ್ರವನ್ನು ಕಡಿಮೆ ಮಾಡಿ, ಕೊನೆಯದಾಗಿ ದೇಹದ ಭಾಗವನ್ನಾಗಿ ಮಾಡುತ್ತದೆ. ಆಮ್ಲವನ್ನು ಸುರಿಸುವ ಸೇವೆಗಿಂತ, ಮೃದುವಾಗಿ(ಕೋಮಲವಾಗಿ) ತುಂಡನ್ನು ಎತ್ತಿಕೊಳ್ಳುವ ಸೇವೆಗೆ ಹೆಚ್ಚು ಮೆಚ್ಚುಗೆ ಕೊಡಲ್ಪಡುತ್ತದೆ. ಆದರೆ ರೊಟ್ಟಿಯ ತುಂಡು ದೇಹದ ಭಾಗವಾಗಬೇಕಾದರೆ ಇವೆರಡೂ ಸೇವೆಗಳ ಅಗತ್ಯತೆ ಇದೆ. ಹಾಗಾಗಿ ಸುವಾರ್ತಿಕ ಮತ್ತು ಪ್ರವಾದಿ ಇಬ್ಬರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು.

ನಂತರ ಬರುವಂತದ್ದು ''ಸಭಾ ಪಾಲಕರು (ಕುರುಬರು)''. ಗ್ರೀಕ್ ಪದವಾದ ಪೊಐ ಮೆನ್ (ನಾಮಪದ) ಮತ್ತು ಪೊಐ ಮೈನೊ (ಕ್ರಿಯಾಪದ) ಇವು ಹೊಸ ಒಡಂಬಡಿಕೆಯಲ್ಲಿ 29 ಬಾರಿ ಉಪಯೋಗಿಸಲ್ಪಟ್ಟಿದೆ ಮತ್ತು ಯಾವಾಗಲೂ ''ಕುರುಬರು" ಎಂದು ಅನುವಾದಗೊಂಡಿದೆ. ಅಂದರೆ ಪ್ರತಿಯೊಂದು ಸ್ಥಳದಲ್ಲಿ ''ಕುರುಬರಾಗಿರುವುದು''. ಇಲ್ಲಿ ಮಾತ್ರ ''ಪಾಸ್ಟರ್'' ಎಂಬುದಾಗಿ ಅನುವಾದಗೊಂಡಿದೆ. ಕ್ರೈಸ್ತತ್ವದಲ್ಲಿ ಈ ಒಂದು ಸೇವೆಯು ಬಹಳಷ್ಟು ತಪ್ಪಾಗಿ ಅರ್ಥೈಸಲ್ಪಟ್ಟಿದೆ. ಕುರುಬರು ಕುರಿಗಳನ್ನು ನೋಡಿಕೊಳ್ಳುವವರಾಗಿದ್ದಾರೆ ಮತ್ತು ಕುರಿಗಳು ಗಾಯಗೊಂಡಾಗ, ಇಲ್ಲವೆ ಹಸಿದಾಗ ಅದರ ಬಗ್ಗೆ ಕಾಳಜಿಯನ್ನು ಹೊಂದಿದವರಾಗಿದ್ದಾರೆ. ಒಬ್ಬ ಕುರುಬನ ಕೆಲಸ ಕುರಿಯನ್ನ ಪಾಲನೆ ಮಾಡುವದು, ಚಿಕ್ಕ ಮರಿಗಳನ್ನು (ಕುರಿಮರಿ) ಮೃದುವಾಗಿ ನೋಡಿಕೊಳ್ಳುವದು ಮತ್ತು ಅವುಗಳು ಖಚಿತವಾಗಿ ಪ್ರಬುದ್ಧತೆಗೆ ಬರಲು ನೋಡಿಕೊಳ್ಳುವುದಾಗಿದೆ. ಪ್ರತಿಯೊಂದು ಸಭೆಗೆ ಕುರುಬರ ಅಗತ್ಯತೆ ಇದೆ. ಕೇವಲ ಪಾಸ್ಟರ್ ಗಳಲ್ಲ. ಯೇಸು ಕೇವಲ 12 ಮಂದಿಗೆ ಮಾತ್ರ ಕುರುಬನಾಗಿದ್ದನು. ಹಾಗಾಗಿ ಒಂದು ಸಭೆಯು 120 ಜನರನ್ನು ಹೊಂದಿದ್ದರೆ, ಅವರನ್ನು ನೋಡಿಕೊಳ್ಳಲು 10 ಮಂದಿ ಕುರುಬರ ಅಗತ್ಯತೆ ಇದೆ. 10 ಪೂರ್ಣಾವಧಿ ವೇತನಕ್ಕೆ ಕೆಲಸ ಮಾಡುವ ''ಪಾಸ್ಟರ್'' ಶಿರೋನಾಮೆಯನ್ನು(ಪದವಿ) ಹೊಂದಿದವರ ಬಗ್ಗೆ ಇಲ್ಲಿ ನಾನು ಉಲ್ಲೇಖಿಸುತ್ತಿಲ್ಲ. ಇವರು ಲೌಕಿಕ ಕೆಲಸವನ್ನು ಹೊಂದಿಕೊಂಡವರು ಕೂಡ ಆಗಿರಬಹುದು, ಆದರೆ ತಮಗಿಂತ ಚಿಕ್ಕವವರನ್ನ ಹುಡುಕಿ ಪ್ರೋತ್ಸಾಹ ಕೊಡುವವರಾಗಿರುತ್ತಾರೆ. 25 ವರುಷದ ಯೌವನಸ್ಥನು ಸಭೆಯಲ್ಲಿರುವ ತನಗಿಂತ ಚಿಕ್ಕವರನ್ನೆಲ್ಲಾ ಪ್ರೋತ್ಸಾಹಿಸಬಹುದು ಮತ್ತು ಅವರಿಗೆ ಕುರುಬನಾಗಿರಬಹುದು. ಇಂತಹ ಅನೇಕರು ಸಭಾ ಹಿರಿಯರಿಗೆ ದೊಡ್ಡ ಸಹಾಯಕರುಗಳಾಗಿರುತ್ತಾರೆ. ಸಭೆಯ ಗಾತ್ರವು ಬೆಳೆಯುವಾಗ, ಹೆಚ್ಚು ಕುರುಬರ ಅವಶ್ಶಕತೆಯು ಸಹ ಇರುತ್ತದೆ. ದೊಡ್ಡ ಸಭೆಗಳು ಕ್ರಿಸ್ತನ ದೇಹಕ್ಕಾಗಿ ದೇವರ ಯೋಜನೆಯನ್ನು ಹೊಂದಿರುವುದಿಲ್ಲ, ಆದರೆ ಸಣ್ಣ ಸಭೆಗಳು ತಂದೆಯ ಹೃದಯವನ್ನು ಹೊಂದಿರುವಂತ ಕುರುಬರನ್ನು ಹೊಂದಿರುತ್ತವೆ. ದೊಡ್ಡ ದೊಡ್ಡ ಸಭೆಗಳು ನಿಜವಾಗಿ ''ಬೋಧನಾ ಕೇಂದ್ರ''ವಾಗಿರುತ್ತದೆ ಅಷ್ಟೆ. ಅಲ್ಲಿ ಜನರು ಮನೋರಂಜನೆ ತೆಗೆದುಕೊಳ್ಳಲು ಮತ್ತು ವಿದ್ಯಾವಂತರಾಗಲು ಮಾತ್ರ ಬರುತ್ತಾರೆ ಹೊರತು, ಕೃಪೆಯಲ್ಲಿ ಬೆಳೆಯಲು ಅಲ್ಲ. ಇಂತಹ ಸಭೆಗಳಲ್ಲಿನ ನಾಯಕರು ಒಳ್ಳೇಯ ಆಡಳಿತಗಾರರು ಮತ್ತು ಬೋಧಕರು/ಉಪದೇಶಕರು ಆಗಿರುತ್ತಾರೆ, ಆದರೆ ಕುರುಬರಾಗಿರುವುದಿಲ್ಲ.

ಕೊನೆಯದಾಗಿ, ನಾವು ''ಉಪದೇಶಕರನ್ನು'' ಹೊಂದಿದ್ದೇವೆ. ಇವರು ದೇವರ ವಾಕ್ಯವನ್ನು ವಿವರಿಸುವಂತವರು ಮತ್ತು ಅದನ್ನು ಸರಳವಾಗಿ ಜನರಿಗೆ ಅರ್ಥ ಮಾಡಿಸುವವರಾಗಿದ್ದಾರೆ. ಕ್ರೈಸ್ತತ್ವದಲ್ಲಿ ಅನೇಕ ಒಳ್ಳೇ ಬೋಧಕರುಗಳು ಇಲ್ಲ. ಅದರಂತೆ ಪ್ರತಿಯೊಂದು ಸಭೆಯು ಉಪದೇಶಕರನ್ನು ಹೊಂದುವ ಅಗತ್ಯವೂ ಇಲ್ಲ. ಸುತ್ತ ಪ್ರಯಾಣ ಮಾಡಿ 20 ಅಥವಾ 30 ಸಭೆಗಳಿಗೆ ಬೋಧಿಸಲು ಒಬ್ಬ ಉಪದೇಶಕ ಸಾಕು ಮತ್ತು ಇತ್ತೀಚಿನ ದಿನಗಳಲ್ಲಿ ಸಿ.ಡಿ, ಡಿ.ವಿ.ಡಿ ಗಳ ಮತ್ತು ಅಂತರ್ಜಾಲದ ಮುಖಾಂತರ ಒಬ್ಬ ಬೋಧಕನು ನೂರಾರು ಸಭೆಗಳನ್ನು ಸಂಧಿಸಬಹುದು. ಅದೇ ರೀತಿಯಾಗಿ, ಪ್ರತಿಯೊಂದು ಸಭೆಯು ಸುವಾರ್ತಿಕನನ್ನು ಹೊಂದುವ ಅಗತ್ಯತೆಯಿಲ್ಲ. ಏಕೆಂದರೆ ಸುವಾರ್ತಿಕನು ಜನರನ್ನು ಕ್ರಿಸ್ತನ ಬಳಿಗೆ ತರುತ್ತಾನೆ ಮತ್ತು ಬೇರೆ ಕಡೆ ಚಲಿಸುತ್ತಾನೆ. ಆದರೆ ಪ್ರತಿಯೊಂದು ಸಭೆಗೆ ಅಗತ್ಯವಿರುವಂತದ್ದು ಪ್ರವಾದಿಗಳು ಮತ್ತು ಕುರುಬರು.

ಈ ಎಲ್ಲಾ ಸೇವೆಗಳ ಉದ್ದೇಶವು ಕ್ರಿಸ್ತನ ದೇಹವನ್ನು ಕಟ್ಟುವುದಾಗಿದೆ. ಸುವಾರ್ತಿಕನು ವಿಶ್ವಾಸಿಗಳನ್ನು ತಮ್ಮ ಇಷ್ಟಪಡುವಂತ ಸಭೆಗಳಿಗೆ ತೆರಳುವಂತೆ ಅಥವಾ ತಮ್ಮ ಹಳೆ ನಿರ್ಜೀವ ಸಭೆಗಳಿಗೆ ಹಿಂತಿರುಗುವಂತೆ ಹೇಳುವುದೇಯಾದರೆ ಅಂತ: ಆತ್ಮಗಳನ್ನು ಕ್ರಿಸ್ತನ ಬಳಿಗೆ ತರಬಾರದು. ಎಫೆಸ 4 ರಲ್ಲಿ ಇಂತಹ ಸುವಾರ್ತಿಕರ ಬಗ್ಗೆ ಮಾತನಾಡಿಲ್ಲ. ಆದರೆ ದೌರ್ಭಾಗ್ಯವೇನೆಂದರೆ, ಇವತ್ತು ನಾವು ಅವರ ಸೇವೆಗೆ ಸ್ವಂತ ಹೆಸರನ್ನು ಜೋಡಿಸಿರುವ ಸುವಾರ್ತಿಕರನ್ನು ನೋಡುತ್ತೇವೆ. ಅವರು ಕೂಟಗಳನ್ನು ಏರ್ಪಡಿಸುತ್ತಾರೆ ಮತ್ತು ಜನರು ರಕ್ಷಣೆ ಹೊಂದುತ್ತಾರೆ (ಆಶಿಸುತ್ತೇನೆ). ನಂತರ ಅವರು ನೀವು ನಿಮ್ಮ ನಿರ್ಜೀವ ಸಭೆಗಳಿಗೆ ತೆರಳಿರಿಂದು ಹೇಳುತ್ತಾರೆ, ಆ ನಿರ್ಜೀವ ಸಭೆಗಳಲ್ಲಿ ಅವರನ್ನು ಸತ್ಯಕ್ಕೆ ನಡೆಸುವಂತ ಕುರುಬರಾಗಲಿ ಅಥವಾ ಉಪದೇಶಕರಾಗಲಿ ಇರುವುದಿಲ್ಲ. ಎಫೆಸ 4 ರಲ್ಲಿ ನಾವು ಓದುವುದೇನೆಂದರೆ - ಸುವಾರ್ತಿಕರು ಅಪೊಸ್ತಲರೊಟ್ಟಿಗೆ, ಪ್ರವಾದಿಗಳೊಟ್ಟಿಗೆ, ಕುರುಬರೊಟ್ಟಿಗೆ ಮತ್ತು ಉಪದೇಶಕರೊಟ್ಟಿಗೆ ಕಾರ್ಯನಿರ್ವಹಿಸುತ್ತಿರುತ್ತಾರೆ. ಸುವಾರ್ತಿಕನು ಪರಿವರ್ತನೆ ಹೊಂದಿದಂತವರನ್ನು ಒಳ್ಳೆಯ ಸಭಾ ಪಾಲಕರ ಕೈಗೆ ಒಪ್ಪಿಸಿಕೊಡಬೇಕು. ಕ್ರಿಸ್ತನ ದೇಹದಲ್ಲಿ ಈ ರೀತಿಯ ಸಹಕಾರದ ಅಗತ್ಯತೆಯಿದೆ. ಪ್ರಾರಂಭದ ದಿನಗಳಲ್ಲಿ ಸಭೆಯಲ್ಲಿ ಈ ರೀತಿಯಾಗಿಯೇ ಇತ್ತು. ಫಿಲಿಪ್ಪನು ಸುವಾರ್ತಿಕನಾಗಿದ್ದನು, ಆದರೆ ಅಪೊಸ್ತಲನಾಗಲಿ ಅಥವಾ ಕುರುಬನಾಗಲಿ ಆಗಿರಲಿಲ್ಲ (ಅ.ಕೃತ್ಯಗಳು 8). ಹಾಗಾಗಿ ಸಮರ್ಯಾದಲ್ಲಿನ ಇತರರು ಫಿಲಿಪ್ಪನಿಂದ ಜವಾಬ್ದಾರಿಯನ್ನು ತೆಗೆದುಕೊಂಡು, ಆ ಪರಿವರ್ತನೆ ಹೊಂದಿದಂತವರನ್ನು ದೇವರ ಸತ್ಯದ ಕಡೆಗೆ ಮುನ್ನೆಡೆಸುತ್ತಿದ್ದರು. ಫಿಲಿಪ್ಪನು ವಿಶ್ವಾಸಕ್ಕೆ ಬಂದಂತವರನ್ನ ಅಲ್ಲಿ ಇಲ್ಲಿ ಅಲೆದಾಡಲಿಕ್ಕೆ ಬಿಡಲಿಲ್ಲ.