WFTW Body: 

ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ತುಂಬಿಸುವ ಬಗ್ಗೆ ಯೇಸುವು ಹೇಳಿದರು (ಲೂಕ. 5:37). ಹೊಸ ದ್ರಾಕ್ಷಾರಸವು ಯೇಸುವಿನ ಜೀವವಾಗಿದೆ ಮತ್ತು ಹೊಸ ಬುದ್ದಲಿಯು ಯೇಸುವು ಕಟ್ಟುವಂತ ಸಭೆಯಾಗಿದೆ. ಯೇಸುವು ಕಾನಾ ಊರಿನ ಮದುವೆಗೆ ಹೋಗಿದ್ದಾಗ, ಅಲ್ಲಿ ಹಳೆಯ ದ್ರಾಕ್ಷಾರಸವು ಸಾಲದೆ ಹೋಯಿತು. ಹಳೆಯ ದ್ರಾಕ್ಷಾರಸ ಮನುಷ್ಯನ ಅನೇಕ ವರ್ಷಗಳ ಪ್ರಯಾಸದಿಂದ ತಯಾರಾಗಿತ್ತು - ಆದರೆ ಅದು ಅಂದಿನ ಅವಶ್ಯಕತೆಗೆ ಸಾಕಾಗಲಿಲ್ಲ. ಈ ಸಾಮ್ಯವು ಧರ್ಮಶಾಸ್ತ್ರದ ಕೆಳಗಿನ ಜೀವಿತಕ್ಕೆ ಸಂಬಂಧಿಸಿದೆ - ಅಂದರೆ ಹಳೆಯ ಒಡಂಬಡಿಕೆ. ಹಳೆಯ ದ್ರಾಕ್ಷಾರಸವು ಮುಗಿದು ಹೋಗುತ್ತದೆ; ಮತ್ತು ಹಳೆಯದು ಕೊನೆಗೊಳ್ಳುವ ವರೆಗೆ ಕರ್ತರು ಕಾಯುತ್ತಾರೆ, ಆ ಮೇಲೆ ನಮಗೆ ಹೊಸ ದ್ರಾಕ್ಷಾರಸವನ್ನು ಕೊಡುತ್ತಾರೆ.

ನಮ್ಮ ಖಾಸಗಿ ಜೀವಿತದಲ್ಲಿ, ನಮ್ಮ ಕುಟುಂಬದ ಜೀವಿತದಲ್ಲಿ ಅಥವಾ ನಮ್ಮ ಸಭೆಯ ಜೀವಿತದಲ್ಲಿ ದ್ರಾಕ್ಷಾರಸವು ಸಾಲದೇ ಹೋಗಿದೆಯೇ? ಹಾಗಾದರೆ ಈಗ ಕರ್ತರ ಮುಖವನ್ನು ಹುಡುಕಿ, ನಮಗಿರುವ ಅವಶ್ಯಕತೆಯನ್ನು ಯಥಾರ್ಥವಾಗಿ ಅರಿಕೆಮಾಡುವ ಸಮಯ ಬಂದಿದೆ. ನಮಗೆ ಹೊಸ ದ್ರಾಕ್ಷಾರಸವನ್ನು ಅವರು ಮಾತ್ರ ಕೊಡಬಲ್ಲರು! ಕಾನಾ ಊರಿನಲ್ಲಿ ಹೊಸ ದ್ರಾಕ್ಷಾರಸವು ಮನುಷ್ಯ ಪ್ರಯಾಸದಿಂದ ಉಂಟಾಗಲಿಲ್ಲ. ಅದು ದೇವರು ಮಾಡಿದ ಅದ್ಭುತ ಕಾರ್ಯವಾಗಿತ್ತು. ನಮ್ಮ ಜೀವನದಲ್ಲಿಯೂ ಇದು ನಡೆಯಲು ಸಾಧ್ಯವಿದೆ. ಅವರು ನಮ್ಮ ಹೃದಯದಲ್ಲಿ ಮತ್ತು ಮನಸ್ಸಿನಲ್ಲಿ ತನ್ನ ಆಜ್ಞೆಗಳನ್ನು ಬರೆದು, ನಮ್ಮಲ್ಲಿ ಅವರ ಸುಚಿತ್ತವನ್ನು ನೆರವೇರಿಸುವ ಉದ್ದೇಶವನ್ನು ಮತ್ತು ಪ್ರಯತ್ನವನ್ನು ಉಂಟುಮಾಡುವರು (ಇಬ್ರಿ. 8:10, ಫಿಲಿ. 2:13). ದೇವರು ನಮ್ಮ ಹೃದಯದ ’ಸುನ್ನತಿ’ ಮಾಡಿ, ನಾವು ಅವರನ್ನು ಪ್ರೀತಿಸುವಂತೆ ಮತ್ತು ಅವರ ಆಜ್ಞೆಗಳಿಗೆ ವಿಧೇಯರಾಗಿ ನಡೆಯುವಂತೆ ಮಾಡುವರು (ಧರ್ಮೋ. 30:6, ಯೆಹೆ. 36:27). ಹೇಗೆ ಕಾನಾ ಊರಿನಲ್ಲಿ ದ್ರಾಕ್ಷಾರಸವನ್ನು ಮಾಡಿದ್ದು ಅವರ ಕೆಲಸವಾಗಿತ್ತೋ, ಹಾಗೆಯೇ ಈ ಕೆಲಸವೂ ಅವರದ್ದೇ ಆಗಿದೆ. ’ಕೃಪೆ’ ಎಂಬ ಪದದ ಅರ್ಥ ಇದೇ ಆಗಿದೆ. ನಾವು ಯೇಸುವಿನ ಜೀವವನ್ನು ಉಂಟುಮಾಡಲಾರೆವು - ಜೀವಿತವಿಡೀ ಶ್ರಮಿಸಿದರೂ ಅದು ಅಸಾಧ್ಯವಾದದ್ದು. ಆದರೆ ನಾವು ನಮ್ಮ ದೇಹದಲ್ಲಿ "ಯೇಸುವಿನ ಮರಣಾವಸ್ಥೆಯನ್ನು" ಅನುಭವಿಸುವುದಾದರೆ (ಪ್ರತಿ ದಿನ ಶಿಲುಬೆಯನ್ನು ಹೊತ್ತುಕೊಳ್ಳುವುದು, ನಮ್ಮನ್ನು ನಿರಾಕರಿಸಿ ನಮ್ಮ ಅಹಂಭಾವ, ನಮ್ಮ ಸ್ವ-ಇಚ್ಛೆ ಹಾಗೂ ನಮ್ಮ ಹಕ್ಕುಗಳು ಮತ್ತು ಘನತೆಗಳನ್ನು ಬಿಟ್ಟುಕೊಡುವುದು), ನಮ್ಮಲ್ಲಿ ಯೇಸುವಿನ ಜೀವವೆಂಬ ಹೊಸ ದ್ರಾಕ್ಷಾರಸವನ್ನು ಉಂಟುಮಾಡುವುದಾಗಿ ದೇವರು ವಾಗ್ದಾನ ಮಾಡುತ್ತಾರೆ (2 ಕೊರಿ. 4:10).

ಹೊಸ ದ್ರಾಕ್ಷಾರಸವನ್ನು ಪಡೆಯಲು, ನಾವು ’ಪಾಪದ’ ವಿರುದ್ಧ ಹೋರಾಡುತ್ತೇವೆ. ಆದರೆ ಹೊಸ ಬುದ್ದಲಿಯನ್ನು ಪಡೆಯಲು, ನಾವು ದೇವರ ವಾಕ್ಯವನ್ನು ಅಲ್ಲಗಳೆಯುವ ’ಧಾರ್ಮಿಕ ಸಂಪ್ರದಾಯಗಳ’ ವಿರುದ್ಧ ಹೋರಾಡ ಬೇಕಾಗುತ್ತದೆ. ಅನೇಕ ಜನರಿಗೆ ಮಾನವ ಸಂಪ್ರದಾಯಗಳಿಂದ ಬಿಡಿಸಿಕೊಳ್ಳುವುದು ಪಾಪದಿಂದ ಬಿಡಿಸಿಕೊಳ್ಳುವುದಕ್ಕಿಂತ ಬಹಳ ಹೆಚ್ಚು ಕಷ್ಟಕರ ಎನ್ನಿಸುತ್ತದೆ! ಆದರೆ ದೇವರ ರಾಜ್ಯವು, ಬಲಾತ್ಕಾರವಾಗಿ ನುಗ್ಗಿ ಸ್ವಾಧೀನ ಪಡಿಸುವ ಜನರಿಗೆ ಮಾತ್ರ ದೊರೆಯುತ್ತದೆ (ಮತ್ತಾ. 11:12). ಧಾರ್ಮಿಕ ಸಂಪ್ರದಾಯಗಳನ್ನು ಕಿತ್ತುಹಾಕಲು ಬಲಾತ್ಕಾರವಾಗಿ ಶ್ರಮಿಸುವುದರ ವಿನಾ ಬೇರೆ ದಾರಿಯಿಲ್ಲ.

ಕ್ರೈಸ್ತರಾದ ನಾವು, ಯೆಹೂದ್ಯ ಜನಾಂಗದ ಹಳೆಯ ಬುದ್ದಲಿಯನ್ನು ತ್ಯಜಿಸಿದ್ದೇವೆ ಮತ್ತು ಕ್ರೈಸ್ತ ಸಭೆಯೆಂಬ ಹೊಸ ಬುದ್ದಲಿಯನ್ನು ಹೊಂದಿದ್ದೇವೆ ಎಂದು ನಾವು ಅಂದುಕೊಳ್ಳಬಹುದು. ಆದರೆ ನೀವು ನಿಮ್ಮ ಕ್ರೈಸ್ತ ಸಭೆಯೆಂದು ಕರೆಯುವಂಥದ್ದನ್ನು ಸೂಕ್ಷ್ಮವಾಗಿ ನೋಡಿದರೆ, ಅದರಲ್ಲಿ ಹಲವಾರು ಹಳೆ-ಒಡಂಬಡಿಕೆಯ ಗುಣಲಕ್ಷಣಗಳು ಇರುವುದನ್ನು ನೋಡಿ ನಿಮಗೆ ಆಶ್ಚರ್ಯವಾಗಬಹುದು. ಇಂತಹ ಅನೇಕ ಲಕ್ಷಣಗಳು ಇವೆ, ಆದರೆ ಮೂರು ಉದಾಹರಣೆಗಳನ್ನು ಮಾತ್ರ ಪರಿಗಣಿಸಿರಿ.

ಮೊದಲನೆಯದಾಗಿ, ಯೆಹೂದ್ಯರಲ್ಲಿ ಯಾಜಕರಾಗಿ ಕಾರ್ಯ ನಿರ್ವಹಿಸಲು ಒಂದು ವಿಶೇಷ ಕುಲವಿತ್ತು (’ಲೇವಿಯರು’) ಮತ್ತು ಅವರು ಎಲ್ಲಾ ಧಾರ್ಮಿಕ ಸೇವೆಯನ್ನು ಮಾಡುತ್ತಿದ್ದರು. ಎಲ್ಲಾ ಯೆಹೂದ್ಯರು ಯಾಜಕರಾಗಲು ಸಾಧ್ಯವಿರಲಿಲ್ಲ. ಆದರೆ ಹೊಸ ಒಡಂಬಡಿಕೆಯ ಕೆಳಗೆ, ಎಲ್ಲಾ ವಿಶ್ವಾಸಿಗಳೂ ಯಾಜಕ ವರ್ಗಕ್ಕೆ ಸೇರಿದವರು ಆಗಿದ್ದಾರೆ (1 ಪೇತ್ರ. 2:5; ಪ್ರಕ. 1:6). ಈ ಸತ್ಯಾಂಶವನ್ನು ಹೆಚ್ಚಿನ ವಿಶ್ವಾಸಿಗಳು ಸಿದ್ಧಾಂತ ರೂಪದಲ್ಲಿ ಅಂಗೀಕರಿಸಿದರೂ, ವಾಸ್ತವಿಕವಾಗಿ ಬಹಳ ಕೆಲವೇ ಮಂದಿ ಇದನ್ನು ಆಚರಿಸುತ್ತಾರೆ. ಹೆಚ್ಚುಕಡಿಮೆ ಪ್ರತಿಯೊಂದು ಕ್ರೈಸ್ತ ಪಂಗಡವೂ, ಹಳೆಯ ಕಾಲದ ’ಲೇವಿಯರನ್ನು’ ಸಂಪೂರ್ಣವಾಗಿ ಹೋಲುವಂತ ತಮ್ಮತಮ್ಮ ’ಪಾದ್ರಿ’ ಅಥವಾ ’ಪಾಸ್ಟರ್’ ಅಥವಾ ’ದೇವ ಸೇವಕ’ ಅಥವಾ ’ಪೂರ್ಣಾವಧಿ ಕಾರ್ಯಕರ್ತ’ರನ್ನು ಹೊಂದಿದ್ದಾರೆ, ಮತ್ತು ಇವರು ದೇವಜನರು ಮಾಡುವ ಆರಾಧನೆಯಲ್ಲಿ ನಾಯಕತ್ವವನ್ನು ವಹಿಸುತ್ತಾರೆ. ಈ "ಲೇವಿಯರು" ಮಾತ್ರ ಹೊಸದಾಗಿ ಮಾನಸಾಂತರ ಹೊಂದಿದವರಿಗೆ ದೀಕ್ಷಾಸ್ನಾನ ಮಾಡಿಸಬಹುದು ಮತ್ತು ರೊಟ್ಟಿಯನ್ನು ಮುರಿಯಬಹುದು. ಮತ್ತು ಈ ’ಲೇವಿಯರು’ ದೇವಜನರ ದಶಮಾಂಶದಿಂದ ಜೀವಿಸುತ್ತಾರೆ. ಸಭಾಕೂಟಗಳಲ್ಲಿ, ಈ ’ಲೇವಿಯರು’ ಮುಖ್ಯ ಪಾತ್ರ ವಹಿಸುತ್ತಾರೆ, ಮತ್ತು ’ದೇಹ’ಕ್ಕೆ ಸೇವೆ ಮಾಡುವ ಅವಕಾಶವನ್ನು ಕೊಡುವುದಿಲ್ಲ. ಒಂಟಿ ಭಾಷಣಕಾರನ ಪ್ರದರ್ಶನವು ಹಳೆಯ ಬುದ್ದಲಿಗೆ ಸೇರಿದ್ದಾಗಿದೆ.

ಹೊಸ ಒಡಂಬಡಿಕೆಯ ಕೆಳಗೆ, ಪ್ರತಿಯೊಬ್ಬ ವಿಶ್ವಾಸಿಯು ಹೊಸ ದ್ರಾಕ್ಷಾರಸವನ್ನು ಕುಡಿಯಬಹುದು, ಪವಿತ್ರಾತ್ಮನಿಂದ ಅಭಿಷೇಕಿಸಲ್ಪಡಬಹುದು ಮತ್ತು ಪವಿತ್ರಾತ್ಮನಿಂದ ಉಂಟಾಗುವ ವರಗಳನ್ನು ಹೊಂದಬಹುದು. ಇಬ್ಬರು ಅಥವಾ ಮೂವರು ಪ್ರವಾದಿಗಳು ಕೂಟವನ್ನು ಆರಂಭಿಸಬೇಕು, ಒಬ್ಬರು ಅಥವಾ ಇಬ್ಬರು ವಾಣಿಯನ್ನು (ಅನ್ಯಭಾಷೆಗಳನ್ನು) ಆಡಬಹುದು (ಪ್ರತಿಯೊಂದು ವಾಣಿಯ ಅರ್ಥವನ್ನು ವಿವರಿಸುವವರು ಇರಬೇಕು) ಮತ್ತು ಪ್ರತಿಯೊಬ್ಬ ವಿಶ್ವಾಸಿಯು ಸಭೆಯನ್ನು ಬಲಪಡಿಸುವುದಕ್ಕಾಗಿ ಕೂಟದಲ್ಲಿ ಪ್ರವಾದಿಸುವುದಕ್ಕೆ ಆತಂಕಗಳು ಇರಬಾರದು. ಇದೇ ಹೊಸ ಬುದ್ದಲಿಯಾಗಿದೆ (1 ಕೊರಿ. 14:26-31). ಹೊಸ ದ್ರಾಕ್ಷಾರಸವನ್ನು 1 ಕೊರಿಂಥ 13ರಲ್ಲಿ ವಿವರಿಸಲಾಗಿದೆ - ಅದು ಪ್ರೀತಿಯ ಜೀವಿತ. ಹೊಸ ಬುದ್ದಲಿಯನ್ನು 1 ಕೊರಿಂಥ 12 ಮತ್ತು 14ನೇ ಅಧ್ಯಾಯಗಳಲ್ಲಿ ವಿವರಿಸಲಾಗಿದೆ. ಆದರೆ ಎಷ್ಟು ಜನ ವಿಶ್ವಾಸಿಗಳು ದೇವರ ಕ್ರಮದ ಪ್ರಕಾರ ಕೆಲಸ ಮಾಡಲು ಬಯಸುತ್ತಾರೆ? ಅಯ್ಯೋ, ಬಹಳ ಕಡಿಮೆ ಜನರು ಮಾತ್ರ. ಹೆಚ್ಚಿನವರು ತಮ್ಮ ಹಳೆಯ ಬುದ್ದಲಿಯಲ್ಲಿ, ಮತ್ತು ತಮ್ಮ ಸಂಬಳ ಪಡೆಯುವ ’ಲೇವಿಯರಲ್ಲಿ’ ತೃಪ್ತರಾಗಿದ್ದಾರೆ.

ಎರಡನೆಯದಾಗಿ, ಯೆಹೂದ್ಯರು ವಿವಿಧ ವಿಷಯಗಳಲ್ಲಿ ದೇವರ ಚಿತ್ತವನ್ನು ಕಂಡುಕೊಳ್ಳಲು ಅವರ ನಡುವೆ ಇದ್ದ ಪ್ರವಾದಿಗಳ ಬಳಿಗೆ ಹೋಗುತ್ತಿದ್ದರು - ಏಕೆಂದರೆ ಪ್ರವಾದಿಗಳಲ್ಲಿ ಮಾತ್ರ ದೇವರಾತ್ಮನು ಇದ್ದನು. ಆದರೆ ಹೊಸ ಒಡಂಬಡಿಕೆಯ ಕೆಳಗೆ, ಪ್ರವಾದಿಗಳ ಕರ್ತವ್ಯವು ಸಂಪೂರ್ಣವಾಗಿ ವಿಭಿನ್ನವಾಗಿದೆ - ಕ್ರಿಸ್ತನ ದೇಹವನ್ನು ಅಭಿವೃದ್ಧಿ ಗೊಳಿಸುವುದು (ಎಫೆ. 4:11,12). ಈಗ ಎಲ್ಲಾ ವಿಶ್ವಾಸಿಗಳು ಪವಿತ್ರಾತ್ಮನನ್ನು ಪಡೆದುಕೊಳ್ಳಲು ಸಾಧ್ಯವಿರುವುದರಿಂದ, ಅವರು ಯಾರೋ ಒಬ್ಬ ಪ್ರವಾದಿಯ ಬಳಿಗೆ ಹೋಗಿ, ತಮಗಾಗಿ ದೇವರ ಚಿತ್ತ ಏನೆಂದು ಕೇಳುವ ಅವಶ್ಯಕತೆ ಇಲ್ಲ (ಇಬ್ರಿ. 8:11, 1 ಯೊಹಾ. 2:27). ಆದಾಗ್ಯೂ ಅನೇಕ ಮಂದಿ ವಿಶ್ವಾಸಿಗಳು ಹಳೆಯ ಬುದ್ದಲಿಯ ಜೀವನವನ್ನು ಜೀವಿಸಿ, ಒಬ್ಬ ದೇವಮನುಷ್ಯನ ಬಳಿಗೆ ಹೋಗಿ, ತಾವು ಏನು ಮಾಡಬೇಕು, ಯಾರನ್ನು ವಿವಾಹ ಮಾಡಿಕೊಳ್ಳಬೇಕು, ಇತ್ಯಾದಿಗಳನ್ನು ತಿಳಕೊಳ್ಳಲು ಬಯಸುತ್ತಾರೆ.

ಮೂರನೆಯದಾಗಿ, ಯೆಹೂದ್ಯರು ವಿಸ್ತಾರವಾದ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನರ ಒಂದು ದೊಡ್ಡ ಪಂಗಡವಾಗಿದ್ದರು, ಆದರೆ ಅವರಿಗೆ ಒಂದು ಕೇಂದ್ರೀಯ ರಾಜಧಾನಿಯಾದ ಯೆರೂಸಲೇಮ್ ಪಟ್ಟಣವಿತ್ತು ಮತ್ತು ಒಬ್ಬ ಭೌತಿಕ ನಾಯಕನಾದ ಮಹಾಯಾಜಕನಿದ್ದನು. ಹೊಸ ಒಡಂಬಡಿಕೆಯ ಕೆಳಗೆ, ನಮಗೆ ಯೇಸುವು ಒಬ್ಬನೇ ಮಹಾಯಾಜಕನಾಗಿದ್ದಾನೆ ಮತ್ತು ನಮಗೆ ದೇವರ ಸಿಂಹಾಸನವೊಂದೇ ರಾಜಧಾನಿಯಾಗಿದೆ. ಯೆಹೂದ್ಯರಿಗೆ ಏಳು ಕೊಂಬೆಗಳಿದ್ದ ಒಂದು ದೀಪಸ್ತಂಭವಿತ್ತು, ಆ ಕೊಂಬೆಗಳು ನಡುವಿನ ಕಾಂಡದಿಂದ ಕವಲೊಡೆದಿದ್ದವು (ವಿಮೋ. 25:31,32). ಇದು ಹಳೆಯ ಬುದ್ದಲಿಯ ವಿನ್ಯಾಸವಾಗಿತ್ತು.

ಹೊಸ ಒಡಂಬಡಿಕೆಯ ಅಡಿಯಲ್ಲಿ, ಪ್ರತಿಯೊಂದು ಸ್ಥಳೀಯ ಸಭೆಯು ಒಂದು ಪ್ರತ್ಯೇಕ ದೀಪಸ್ತಂಭವಾಗಿದೆ - ಅದಕ್ಕೆ ಶಾಖೆಗಳು ಇರುವುದಿಲ್ಲ. ಇದನ್ನು ನೀವು ಪ್ರಕಟನೆ 1:12,20ರಲ್ಲಿ ಸ್ಪಷ್ಟವಾಗಿ ಕಾಣುತ್ತೀರಿ, ಅಲ್ಲಿ ಆಸ್ಯಸೀಮೆಯ ಏಳು ಸ್ಥಳೀಯ ಸಭೆಗಳು ಏಳು ಪ್ರತ್ಯೇಕ ದೀಪಸ್ತಂಭಗಳ ಮೂಲಕ ನಿರೂಪಿಸಲ್ಪಟ್ಟಿವೆ - ಇವು ಯೆಹೂದ್ಯರ ದೀಪಸ್ತಂಭಕ್ಕಿಂತ ವಿಭಿನ್ನವಾಗಿದ್ದವು. ಸಭೆಗಳ ಶಿರಸ್ಸಾದ ಯೇಸುವು, ಆ ದೀಪಸ್ತಂಭಗಳ ಮಧ್ಯದಲ್ಲಿ ತಿರುಗಾಡುತ್ತಿದ್ದಾರೆ. ಆಗಿನ ಕಾಲಾವಧಿಯಲ್ಲಿ ಭೂಲೋಕದ ಯಾವುದೇ ಕ್ರೈಸ್ತ ಪಂಗಡಕ್ಕೂ ’ಪೋಪ್’ ಅಥವಾ ’ಜನರಲ್ ಸೂಪರಿಂಟೆಂಡೆಂಟ್’ ಅಥವಾ ’ಅಧ್ಯಕ್ಷ’ ಅಂತ ಇರಲಿಲ್ಲ. ಸಭೆಯ ಅಂತಿಮ ನಿರ್ಣಾಯಕನಾಗಿ ’ಮುಖ್ಯ ಹಿರಿಯ ಸಹೋದರ’ ಎಂಬಾತನೂ ಸಹ ಭೂಲೋಕದಲ್ಲಿ ಎಲ್ಲಿಯೂ ಇರಲಿಲ್ಲ. ಪ್ರತಿಯೊಂದು ಸ್ಥಳೀಯ ಸಭೆಯು ಸ್ಥಳೀಯ ಹಿರಿಯ ಸಹೋದರರ ನಿರ್ವಹಣೆಗೆ ಒಳಪಟ್ಟಿತ್ತು. ಈ ಹಿರಿಯರು ಅವರ ಶಿರಸ್ಸಾಗಿದ್ದ ಕರ್ತ ಯೇಸುವಿಗೆ ನೇರವಾಗಿ ಹೊಣೆಗಾರರಾಗಿದ್ದರು. ಆದರೆ ಈ ದಿನ ನಮ್ಮ ಸುತ್ತಮುತ್ತಲು ದೊಡ್ಡ ಸಂಖ್ಯೆಯ ಕ್ರೈಸ್ತ ಸಮುದಾಯವು, ಪಂಗಡಗಳ ('denominations') ಪದ್ಧತಿಗೆ (ಹಳೆಯ ಬುದ್ದಲಿ) ಒಳಗಾಗಿರುವುದನ್ನು ನಾವು ನೋಡುತ್ತೇವೆ, ಇಂತಹ ಪಂಗಡಕ್ಕೆ ಒಂದು ಹೆಸರು ಇರಬಹುದು ಅಥವಾ ಹೆಸರಿಲ್ಲದೆಯೂ ಇರಬಹುದು - ಏಕೆಂದರೆ ಕೆಲವು ಗುಂಪುಗಳು ತಾವು ಯಾವ ಕ್ರೈಸ್ತ ಪಂಗಡಕ್ಕೂ ಸೇರಿಲ್ಲವೆಂದು ಹೇಳಿಕೊಳ್ಳುತ್ತಾರೆ, ಹಾಗಿದ್ದರೂ ಅವರಲ್ಲಿ ಒಂದು ಪಂಗಡದಲ್ಲಿರುವ ಎಲ್ಲಾ ವೈಶಿಷ್ಟ್ಯತೆಗಳು ಕಾಣಿಸುತ್ತವೆ. ಇವೆಲ್ಲವೂ ಹಳೆಯ ಬುದ್ದಲಿಗೆ ಸೇರಿದವುಗಳಾಗಿವೆ.

ದೇವರು, ಭ್ರಷ್ಟತೆಯು ಹರಡುವುದನ್ನು ತಡೆಯುವುದಕ್ಕಾಗಿ ಹೊಸ ಬುದ್ದಲಿಯಾದ ಸ್ಥಳೀಯ ಸಭೆಯನ್ನು ಪ್ರತಿಷ್ಠಿಸಿದ್ದಾರೆ. ಆಸ್ಯಸೀಮೆಯ ಎಲ್ಲಾ ಏಳು ಸಭೆಗಳು ಒಂದಕ್ಕೊಂದರ ಶಾಖೆಗಳಾಗಿದ್ದರೆ, ಆಗ ಬಿಳಾಮನ ಮತ್ತು ನಿಕೊಲಾಯಿತರ ಭ್ರಷ್ಟ ದುರ್ಬೋಧನೆಗಳು ಮತ್ತು ಯೆಜೆಬೇಲಳ ಸುಳ್ಳು ಪ್ರವಾದನೆಗಳು (ಪ್ರಕ. 2:14,15,20) ಎಲ್ಲಾ ಏಳು ಸಭೆಗಳಿಗೆ ಹರಡುತ್ತಿದ್ದವು. ಆದರೆ ಅವುಗಳೆಲ್ಲವೂ ಪ್ರತ್ಯೇಕ ದೀಪಸ್ತಂಭಗಳು ಆಗಿದ್ದುದರಿಂದ, ’ಸ್ಮುರ್ನ’ ಮತ್ತು ’ಫಿಲದೆಲ್ಫಿಯ’ದ ಎರಡು ಸಭೆಗಳು ತಮ್ಮನ್ನು ಪರಿಶುದ್ಧತೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವಾಯಿತು. ಹಾಗಾಗಿ ನೀವು ನಿಮ್ಮ ಸಭೆಯನ್ನು ಶುದ್ಧತೆಯಲ್ಲಿ ಇರಿಸಿಕೊಳ್ಳಲು ಬಯಸಿದರೆ, ಹಳೆಯ ಬುದ್ದಲಿಯಾದ ಪಂಗಡಗಳ ಪದ್ಧತಿಯನ್ನು ತೆಗೆದು ಹಾಕಿರಿ. ಬಹಳಷ್ಟು ಜನರನ್ನು ಗುಲಾಮತನದಲ್ಲಿ ಇರಿಸಿಕೊಂಡಿರುವ ಮಾನವ ಸಂಪ್ರದಾಯಗಳನ್ನು ಬಿರುಸಾಗಿ ಎದುರಿಸಿ ಪರಾಜಯ ಗೊಳಿಸಲು ಸಿದ್ಧರಾಗಿರುವ ಅನೇಕರನ್ನು (ಮತ್ತಾ. 11:12) ನಮ್ಮ ನಾಡಿನಲ್ಲಿ ಕರ್ತರು ಮೇಲಕ್ಕೆ ಎಬ್ಬಿಸಲಿ; ಮತ್ತು ಅವರು ಪ್ರತಿಯೊಂದು ಸ್ಥಳದಲ್ಲಿ ಕ್ರಿಸ್ತನ ದೇಹವನ್ನು ಕಟ್ಟಲಿ.