WFTW Body: 

ಯೇಸುವು ಕ್ರೈಸ್ತಸಭೆಯ ಕುರಿತಾಗಿ ಮಾತನಾಡಿದ್ದು ಕೇವಲ ಎರಡು ಸಂದರ್ಭಗಳಲ್ಲಿ ಮಾತ್ರ - ಮತ್ತಾಯ 16:18 ಮತ್ತು ಮತ್ತಾಯ 18:17-20ರಲ್ಲಿ. ಇವೆರಡು ಸಂದರ್ಭಗಳಲ್ಲೂ ಯೇಸು, ಸೈತಾನನು ಸಭೆಯ ವಿರುದ್ಧ ಹೋರಾಡುವ ವಿಷಯವನ್ನು ಪ್ರಸ್ತಾಪಿಸಿದರು. ಮೊದಲನೆಯ ಸಂದರ್ಭದಲ್ಲಿ, ಸೈತಾನನು ಪಾತಾಳಲೋಕದ ಬಲದಿಂದ - ದುರಾತ್ಮಗಳನ್ನು ಕಳುಹಿಸಿ - ಸಭೆಯ ಮೇಲೆ ನೇರವಾಗಿ ದಾಳಿ ಮಾಡುತ್ತಾನೆಂದು ಹೇಳಿದರು. ಎರಡನೇ ಬಾರಿ ಸೈತಾನನು ಪರೋಕ್ಷವಾಗಿ, ಒಬ್ಬ ಸಹೋದರನನ್ನು ವಂಚನೆಯ ಮೂಲಕ ತನ್ನ ಅಧಿಕಾರಕ್ಕೆ ಒಳಪಡಿಸಿಕೊಂಡು, ಅವನಿಗೆ ಅರಿವಿಲ್ಲದಂತೆ ಅವನನ್ನು ತನ್ನ ದಳ್ಳಾಳಿಯಾಗಿ ಬಳಸಿಕೊಂಡು, ಸಭೆಯನ್ನು ಭ್ರಷ್ಟಗೊಳಿಸಲು ಪ್ರಯತ್ನಿಸುತ್ತಾನೆ, ಎಂದು ಯೇಸುವು ವಿವರಿಸಿದರು. ಆದರೆ ಸೈತಾನನು ಯಾವುದೇ ವಿಧಾನವನ್ನು ಬಳಸಿಕೊಂಡರೂ, ಆತನ ಕಾರ್ಯಗಳನ್ನು ಕಟ್ಟಿಹಾಕಿ, ಆತನ ಸೆರೆಯಾಳುಗಳನ್ನು ಉರುಲಿನಿಂದ ಬಿಡಿಸುವ ಅಧಿಕಾರವನ್ನು ಕರ್ತರು ನಮಗೆ ನೀಡಿದ್ದಾರೆ (ಮತ್ತಾ. 16:19;ಮತ್ತಾ.18:18; 2 ತಿಮೊ. 2:26). ನಾವು ಈ ಅಧಿಕಾರವನ್ನು ದೇವಸಭೆಯಲ್ಲಿ ಸಂಪೂರ್ಣ ನಿರ್ಭೀತಿಯಿಂದ ಚಲಾಯಿಸಬೇಕು.

ಯೇಸುವು ತಾನು ಕಟ್ಟುವ ಸಭೆಯಲ್ಲಿ ಗುರುತಿಸ ಬಹುದಾದ ಒಂದು ಲಕ್ಷಣ ಇರುವುದಾಗಿ ಹೇಳಿದರು: ಆ ಸಭೆಯು ಪಾತಾಳಲೋಕದ ದ್ವಾರವನ್ನು (ಆತ್ಮಿಕ ಮರಣದ ಬಲವನ್ನು) ಮಣಿಸುತ್ತದೆ. ಮತ್ತೊಂದು ಕಡೆ, ಒಂದು ಸಭೆಯು ಸ್ವತಃ ತಾನೇ ಆತ್ಮಿಕ ಮರಣದ ಶಕ್ತಿಗಳಿಗೆ ಸೋತುಹೋದರೆ - ಅಂದರೆ, ಹೊಟ್ಟೆಕಿಚ್ಚು, ಅಥವಾ ಕಲಹ, ಅಥವಾ ಪೈಪೋಟಿಯ ಆತ್ಮ, ಅಥವಾ ಸ್ವ-ಮಾನ್ಯತೆಯನ್ನು ಹುಡುಕುವಂಥದ್ದು, ಅಥವಾ ಜಾರತ್ವ, ಅಥವಾ ಹಣದಾಸೆ, ಅಥವಾ ಲೌಕಿಕತನ, ಅಥವಾ ವಿಷಭರಿತ ಸ್ವಭಾವ, ಅಥವಾ ಹೆಮ್ಮೆ, ಅಥವಾ ಗರ್ವ, ಅಥವಾ ಫರಿಸಾಯಿತನ, ಇತ್ಯಾದಿಗಳಿಂದ ಸೋಲಿಸಲ್ಪಟ್ಟರೆ, ಅದು ಯೇಸುವು ಕಟ್ಟುತ್ತಿರುವ ಸಭೆಯಲ್ಲವೆಂದು ನಾವು ಖಂಡಿತವಾಗಿ ಹೇಳಬಹುದು.

ಸೈತಾನನು ಪ್ರತಿ ಕ್ಷಣವೂ ಸಭೆಯನ್ನು ನಾಶಗೊಳಿಸಲು ಪ್ರಯತ್ನಿಸುತ್ತಾ ಇದ್ದಾನೆ. ಮತ್ತು ಆತನು ಹೆಚ್ಚಾಗಿ ತನ್ನ ದಳ್ಳಾಳಿಗಳ ಮೂಲಕ ಸಭೆಯೊಳಗೆ ಹೊಕ್ಕಲು ಪ್ರಯತ್ನಿಸುತ್ತಾನೆ. ಯೂದನು "ಕೆಲವು ಜನರು ಸಭೆಯಲ್ಲಿ ಕಳ್ಳತನದಿಂದ ಹೊಕ್ಕಿದ್ದಾರೆ," ಎಂದು ಹೇಳುತ್ತಾನೆ (ಯೂದ. 4). ಗಿಬ್ಯೋನಿನ ನಿವಾಸಿಗಳು ಯೆಹೋಶುವನನ್ನು ವಂಚಿಸಿದಂತೆ (ಯೆಹೋ. 9), ಇಂದು ಹಲವರು ಸಭಾಹಿರಿಯರನ್ನು ವಂಚಿಸಿದ್ದಾರೆ ಮತ್ತು ಶಿಷ್ಯರಂತೆ ನಟನೆ ಮಾಡಿ, ಯಾರ ಗಮನಕ್ಕೂ ಬಾರದಂತೆ ಸಭೆಗಳ ಮಧ್ಯದಲ್ಲಿ ಸೇರಿಕೊಂಡಿದ್ದಾರೆ. ಆದರೆ ಇವರು ಸಭಾಹಿರಿಯರನ್ನು ಹೇಗೆ ವಂಚಿಸಿದರು? ಬಹುಶಃ ಹಿರಿಯರು ಇವರ ಐಶ್ವರ್ಯ ಅಥವಾ ಲೌಕಿಕ ಸ್ಥಾನಮಾನಗಳನ್ನು ನೋಡಿ ಅವಾಕ್ಕಾಗಿರಬಹುದು ಅಥವಾ ಅದರಿಂದ ಆಮಿಷಕ್ಕೆ ಒಳಗಾಗಿರಬಹುದು. ಲೌಕಿಕ ಹುದ್ದೆ ಅಥವಾ ಸಂಪತ್ತನ್ನು ಹೊಂದಿರುವ ಜನರು ಬಾಬೆಲಿಗೆ ಸೇರಿದ ಎಲ್ಲಾ ಕ್ರೈಸ್ತ ಪಂಗಡಗಳಲ್ಲಿ ಸಭಾಹಿರಿಯರು ಆಗದೇ ಇದ್ದರೂ, ಅವರು ತಮ್ಮ ಪಂಗಡಗಳ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಸಮರ್ಥರಾಗಿದ್ದಾರೆ. ಆದರೆ ನಮ್ಮ ನಡುವೆ ಎಂದಿಗೂ ಹೀಗೆ ಆಗಬಾರದು. ನಾವು ಎಚ್ಚರಿಕೆ ವಹಿಸದೇ ಹೋದರೆ, ಸಭೆಯೊಳಗೂ ಗಿಬ್ಯೋನ್ಯರು ಪ್ರವೇಶಿಸುತ್ತಾರೆ.

ಸೈತಾನನ ಇಂತಹ ದಾಳಿಗಳಿಂದ ನಮ್ಮನ್ನು ಸಂರಕ್ಷಿಸಲು ಕರ್ತನು ನಿರಂತರವಾಗಿ ನಮ್ಮ ಮೇಲೆ ಗಮನ ಇಟ್ಟಿರುವುದಕ್ಕಾಗಿ, ನಾವು ಆತನಿಗೆ ಸ್ತೋತ್ರ ಸಲ್ಲಿಸುತ್ತೇವೆ. "ಕರ್ತನು ಪಟ್ಟಣವನ್ನು ಕಾಯದಿದ್ದರೆ, ಕಾವಲುಗಾರರು ಅದನ್ನು ಕಾಯುವುದು ವ್ಯರ್ಥ" (ಕೀರ್ತ. 127:1). ಸಹೋದರರು ಐಕ್ಯತೆಯಿಂದ ಜೊತೆ ಸೇರಿದಾಗ ಮಾತ್ರ ಕರ್ತನು ತನ್ನ ಆಶೀರ್ವಾದವನ್ನು ಆಜ್ಞಾಪಿಸಲು ಸಾಧ್ಯವಿದೆ (ಕೀರ್ತ. 133:1) - ಮತ್ತು ಐಕ್ಯತೆಯಿಂದ ಮುಂದುವರಿಯುವ ಒಂದು ಸಭೆಯು ಮಾತ್ರ ಪಾತಾಳಲೋಕದ ಬಲದ ಮೇಲೆ ಜಯ ಗಳಿಸುತ್ತದೆ. ಹಾಗಾಗಿ ನಮ್ಮಲ್ಲಿ ಇಂತಹ ಐಕ್ಯತೆಯನ್ನು ಕಾಪಾಡುವುದಕ್ಕಾಗಿ, ಪವಿತ್ರಾತ್ಮನು ನಮ್ಮ ನಡುವೆ ಬಲವಾದ ಕಾರ್ಯವನ್ನು ಮಾಡುತ್ತಾನೆ.

ಪ್ರಕಟನೆ ಪುಸ್ತಕದಲ್ಲಿ ಕಂಡುಬರುವ ಪರಲೋಕದ 7 ಕಿರುನೋಟಗಳಲ್ಲಿ ಪ್ರತಿಯೊಂದರಲ್ಲೂ, ಪರಲೋಕ ನಿವಾಸಿಗಳು ದೇವರನ್ನು ಎಡೆಬಿಡದೆ ಮಹಾ ಶಬ್ದದಿಂದ ಕೊಂಡಾಡುವುದನ್ನು ನಾವು ನೋಡುತ್ತೇವೆ - ಕೆಲವೊಮ್ಮೆ ಆ ಶಬ್ದವು ಗಟ್ಟಿಯಾದ ಗುಡುಗಿನ ಶಬ್ದದಂತೆಯೂ, ಜಲಪ್ರವಾಹ ಘೋಷದಂತೆಯೂ ಕೇಳಿಸುತ್ತದೆ. ಪರಲೋಕದ ವಾತಾವರಣವು ಇಂಥದ್ದಾಗಿದೆ - ಅಲ್ಲಿ ಅವಿರತ ಸ್ತೋತ್ರ ಇರುತ್ತದೆ, ಯಾವ ಗುಣಗುಟ್ಟುವಿಕೆ ಅಥವಾ ಹಕ್ಕು ಸಾಧನೆಯೂ ಅಲ್ಲಿ ಇರುವುದಿಲ್ಲ. ಇದೇ ವಾತಾವರಣವನ್ನು ಪವಿತ್ರಾತ್ಮನು ನಮ್ಮ ಹೃದಯಗಳಿಗೆ, ನಮ್ಮ ಮನೆಗಳಿಗೆ ಮತ್ತು ನಮ್ಮ ಸಭೆಗಳಿಗೆ ತರಲು ಬಯಸುತ್ತಾನೆ. ಈ ರೀತಿಯಾಗಿ ಇವೆಲ್ಲಾ ಜಾಗಗಳಿಂದ ಸೈತಾನನು ಹೊರತಳ್ಳಲ್ಪಡುತ್ತಾನೆ.

ಸೈತಾನನು ಕ್ರೈಸ್ತರಲ್ಲಿ ಬಹುತೇಕ ಜನರನ್ನು ಶಕ್ತಿಹೀನರನ್ನಾಗಿ ಮಾಡಿ, ಅವರು ತನ್ನ ವಿರುದ್ಧ ಹೋರಾಡಲು ನಿಷ್ಪ್ರಯೋಜಕರು ಆಗುವಂತೆ ಮಾಡಿರುವುದು ಹೇಗೆಂದರೆ, ಆತನು ಅವರಲ್ಲಿ ಗುಣಗುಟ್ಟುವ ಮತ್ತು ತಪ್ಪು ಹೊರಿಸುವ ಆತ್ಮದ ರೋಗವನ್ನು, ತಮ್ಮ ಸಹೋದರ ಸಹೋದರಿಯರ ವಿರುದ್ಧವಾಗಿ, ತಮ್ಮ ಸಂಬಂಧಿಕರು ಮತ್ತು ನೆರೆಹೊರೆಯವರ ವಿರುದ್ಧವಾಗಿ, ತಮ್ಮ ಪರಿಸ್ಥಿತಿಗಳ ವಿರುದ್ಧವಾಗಿ, ಮತ್ತು ಸ್ವತಃ ದೇವರ ವಿರುದ್ಧವಾಗಿಯೂ ಸಹ, ಯಶಸ್ವಿಯಾಗಿ ಹರಡಿಸಿದ್ದಾನೆ.

ಪ್ರಕಟನೆ 12:8ರಲ್ಲಿ ಬರೆಯಲ್ಪಟ್ಟಿರುವ ಒಂದು ಅದ್ಭುತವಾದ ವಾಕ್ಯವು ಹೀಗಿದೆ: "ಸೈತಾನ ಮತ್ತು ಅವನ ದೆವ್ವಗಳಿಗೆ ಪರಲೋಕದಲ್ಲಿ ಸ್ಥಾನವು ತಪ್ಪಿಹೋಯಿತು". ನಮ್ಮ ಜೀವಿತಗಳಲ್ಲೂ ಸಹ- ನಮ್ಮ ಹೃದಯಗಳಲ್ಲಿ, ನಮ್ಮ ಮನೆಗಳಲ್ಲಿ ಮತ್ತು ನಮ್ಮ ಸಭೆಗಳಲ್ಲಿ - ಇದು ನಿಜವಾಗಬೇಕು. ಈ ಪ್ರತಿಯೊಂದು ಜಾಗದಲ್ಲಿ ಸೈತಾನ ಮತ್ತು ಆತನ ದೂತರಿಗೆ ಯಾವುದೇ ಸ್ಥಳಾವಕಾಶ ಇರಬಾರದು.

ಸೈತಾನನನ್ನು ಸೋಲಿಸುವುದಕ್ಕಾಗಿ ನಾವು ಪಾಲಿಸ ಬೇಕಾದ ಕೆಲವು ಪ್ರೋತ್ಸಾಹದಾಯಕ ಬೋಧನೆಗಳು ಇಲ್ಲಿವೆ: ನಿಮ್ಮ ಹೃದಯಗಳಲ್ಲಿ ಕ್ರಿಸ್ತನಿಂದ ಉಂಟಾಗುವ ಸಮಾಧಾನವು ನೆಲೆಗೊಳ್ಳಲಿ; ನೀವು ’ಒಂದೇ ದೇಹಕ್ಕೆ ಸೇರಿದವರಾಗಿ’ ಸಮಾಧಾನದಿಂದ ಇರಲಿಕ್ಕಾಗಿ ಕರೆಯಲ್ಪಟ್ಟಿದ್ದೀರಿ; ಇದಲ್ಲದೆ ಕೃತಜ್ಞತೆಯುಳ್ಳವರಾಗಿರಿ (ಕೊಲೊ. 3:15). ಎಲ್ಲಾ ಮನುಷ್ಯರಿಗಾಗಿ ಕೃತಜ್ಞತಾ ಸ್ತುತಿಗಳನ್ನು ಮಾಡಬೇಕೆಂದು ಬೋಧಿಸುತ್ತೇನೆ (1 ತಿಮೊ. 2:1). ಯಾವಾಗಲೂ, ಎಲ್ಲಾ ಕಾರ್ಯಗಳಿಗೋಸ್ಕರ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ತಂದೆಯಾದ ದೇವರಿಗೆ ಸ್ತೋತ್ರ ಮಾಡಿರಿ (ಎಫೆ. 5:20). ಮೊದಲನೆಯದಾಗಿ, ದೇವರು ಕ್ರಿಸ್ತನ ದೇಹಕ್ಕೆ ಕರೆದಿರುವ ಎಲ್ಲರಿಗಾಗಿ ಕೃತಜ್ಞತೆಯನ್ನು ಸಲ್ಲಿಸುವಂತೆ ನಮ್ಮನ್ನು ಪ್ರೋತ್ಸಾಹಿಸಲಾಗಿದೆ. ಜನರನ್ನು ಕರೆಯುವ ಸ್ವಾತಂತ್ರ್ಯ ನಮ್ಮ ಕೈಯಲ್ಲಿ ಇದ್ದಿದ್ದರೆ, ದೇವರು ಕರೆದಿರುವ ಅನೇಕರನ್ನು ನಾವು ಬಹುಶಃ ಕರೆಯುತ್ತಿರಲಿಲ್ಲ - ವಿಶೇಷವಾಗಿ ನಮ್ಮ ಪಂಗಡದವರಲ್ಲದ ಬೇರೆ ಪಂಗಡದ ಜನರನ್ನು!!! ಆದರೆ ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವಾಗಿದೆಯೋ, ದೇವರ ಜ್ಞಾನವು ನಮ್ಮ ಜ್ಞಾನಕ್ಕಿಂತ ಅಷ್ಟು ಉನ್ನತವಾಗಿ ಇರುವುದರಿಂದ, ಈ ಜನರ ವಿಚಾರವಾಗಿ ದೇವರ ಅಭಿಪ್ರಾಯ ನಮ್ಮ ಅಭಿಪ್ರಾಯಕ್ಕಿಂತ ವಿಭಿನ್ನವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ನಾವು ಜ್ಞಾನಿಗಳಾಗಿದ್ದರೆ, ನಾವು ನಮ್ಮ ಆಲೋಚನೆಗಳನ್ನು ದೇವರ ಆಲೋಚನೆಗೆ ಹೊಂದಿಸುತ್ತೇವೆ. ನಾವು ಕ್ರಿಸ್ತನ ದೇಹದಲ್ಲಿ ಇರುವಂತ ನಮ್ಮ ಸಹೋದರರು ಮತ್ತು ಸಹೋದರಿಯರಿಗಾಗಿ ಕೃತಜ್ಞರಾಗುವುದನ್ನು ಕಲಿತುಕೊಂಡ ನಂತರ, ನಾವು ಎಲ್ಲಾ ಮನುಷ್ಯರಿಗಾಗಿ ಹಾಗೂ ಅದರ ನಂತರ ನಮ್ಮ ಎಲ್ಲಾ ಪರಿಸ್ಥಿತಿಗಳಿಗಾಗಿ ಸ್ತೋತ್ರ ಸಲ್ಲಿಸುವುದನ್ನು ಕಲಿತುಕೊಳ್ಳ ಬೇಕಾಗುತ್ತದೆ. ಪರಲೋಕದಲ್ಲಿರುವ ನಮ್ಮ ತಂದೆಯು ಎಲ್ಲಾ ಜನರನ್ನು ಮತ್ತು ಎಲ್ಲಾ ಪರಿಸ್ಥಿತಿಗಳನ್ನು ಅವರ ಸರ್ವಶ್ರೇಷ್ಠ ಸಂಕಲ್ಪದಂತೆ ನಿಯಂತ್ರಿಸುತ್ತಾರೆ ಎಂಬುದನ್ನು ನಾವು ಅರಿತಿದ್ದೇವೆ. ಇದನ್ನು ನಾವು ನಿಜವಾಗಿ ನಂಬಿದರೆ, ನಾವು ಎಲ್ಲಾ ವೇಳೆಯಲ್ಲಿ ನಿಶ್ಚಯವಾಗಿ ದೇವರಿಗೆ ಸ್ತೋತ್ರವನ್ನು ಸಲ್ಲಿಸುತ್ತೇವೆ, ಮತ್ತು ಅದರ ಮೂಲಕ ನಾವು ಪರಲೋಕ ರಾಜ್ಯಕ್ಕೆ ಸೇರಿದವರು ಮತ್ತು ಇಹಲೋಕ ರಾಜ್ಯದವರಲ್ಲ, ಎಂಬುದನ್ನು ರುಜುವಾತು ಪಡಿಸುತ್ತೇವೆ. ಆಗ ಸೈತಾನನು ನಮ್ಮ ಮೇಲೆ ಹೊಂದಿರುವ ಹಿಡಿತವನ್ನು ಕಳಕೊಳ್ಳುತ್ತಾನೆ. ಹಾಗೆ ಆದಾಗ ಮಾತ್ರ ನಾವು ಆತನ ವಿರುದ್ಧ ಮಾಡುವ ಹೋರಾಟದಲ್ಲಿ ಸಫಲರಾಗಲು ಸಾಧ್ಯವಾಗುತ್ತದೆ.