WFTW Body: 

ದೇವರನ್ನು ಹೆಚ್ಚು ಹೆಚ್ಚಾಗಿ ತಿಳಿದುಕೊಳ್ಳುವುದರಲ್ಲಿ ನಮಗೆ ತೀವ್ರವಾದ ಆಸಕ್ತಿಯಿರಬೇಕು, ಏಕೆಂದರೆ ಅದೇ ನಿತ್ಯಜೀವವಾಗಿದೆ. ಇಡೀ ನಿತ್ಯತ್ವದಲ್ಲಿ ನಾವು ದೇವರನ್ನು ಇನ್ನೂ ಚೆನ್ನಾಗಿ ಅರಿತುಕೊಳ್ಳುವೆವು. ಹಾಗಾಗಿ ದೇವರನ್ನು ತಿಳಿದುಕೊಳ್ಳುವ ಅತ್ಯಾಸಕ್ತಿ ಯಾರಲ್ಲಿ ಇದೆಯೋ, ಅವರಿಗೆ ನಿತ್ಯತ್ವವು ಬೇಸರವನ್ನು ಉಂಟುಮಾಡುವುದಿಲ್ಲ. ಇಂತಹ ಮನೋಭಾವ ನಮ್ಮಲ್ಲಿದ್ದರೆ ನಮ್ಮ ಭೂಲೋಕದ ಜೀವಿತವೂ ಸಹ ಸಪ್ಪೆ ಎನಿಸುವುದಿಲ್ಲ. ನಾವು ಆದಿಕಾಂಡ 2ನೇ ಅಧ್ಯಾಯದಲ್ಲಿ ದೇವರು ಆದಾಮನೊಡನೆ ವ್ಯವಹರಿಸಿದ ರೀತಿಯನ್ನು ನೋಡಿಕೊಂಡು, ದೇವರ ಜೀವನ ಹಾಗೂ ಅವರ ಕಾರ್ಯವಿಧಾನಗಳ ಬಗ್ಗೆ ಕೆಲವು ಸಂಗತಿಗಳನ್ನು ಕಲಿತುಕೊಳ್ಳೋಣ. ನಾವು ಅಲ್ಲಿ ನೋಡುವಂತೆ, ಆದಾಮನಿಗೆ ಪತ್ನಿಯ ಅವಶ್ಯಕತೆ ಇದೆಯೆಂದು ದೇವರು ಗಮನಿಸಿದರು ಮತ್ತು ಆ ಅವಶ್ಯಕತೆಯನ್ನು ಪೂರೈಸಲು ಆತನಿಗಾಗಿ ಒಬ್ಬ ಪತ್ನಿಯನ್ನು ಉಂಟುಮಾಡಿದರು. ಈ ನಿದರ್ಶನದಿಂದ ದೇವರ ಸ್ವಭಾವ ಎಂಥದ್ದೆಂದು ನಮಗೆ ತಿಳಿಯುತ್ತದೆ. ದೇವರು ಯಾವಾಗಲೂ ಜನರ ಅವಶ್ಯಕತೆಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಾರೆ ಮತ್ತು ಅವುಗಳನ್ನು ಪೂರೈಸಲು ತಾನು ಮಾಡಬಹುದಾದ ಪ್ರತಿಯೊಂದನ್ನೂ ಮಾಡುತ್ತಾರೆ. ನಾವು ಈ ದೈವಿಕ ಸ್ವಭಾವದಲ್ಲಿ ಸಹಭಾಗಿಗಳಾದಾಗ, ನಾವು ಸಹ ಇದನ್ನೇ ಮಾಡುತ್ತೇವೆ - ಯಾವಾಗಲೂ ನಮ್ಮ ಸುತ್ತ ಮುತ್ತಲಿನ ಜನರ ಅವಶ್ಯಕತೆಗಳು ಹಾಗೂ ಸಮಸ್ಯೆಗಳನ್ನು ತಿಳಿದುಕೊಂಡು, ಆ ಅವಶ್ಯಕತೆಗಳ ಪೂರೈಕೆಗೆ ನಮ್ಮಿಂದ ಸಾಧ್ಯವಾದ ಎಲ್ಲವನ್ನು ಮಾಡುವುದು! ಅನೇಕ ವೇಳೆ ನಾವು ಇದನ್ನು ಮಾಡಲು ಬಹಳಷ್ಟು ತ್ಯಾಗವನ್ನು ಮಾಡಬೇಕಾಗುತ್ತದೆ. ಹಾಗಾಗಿ ನಾವು ನಮ್ಮನ್ನೇ ಪ್ರಶ್ನಿಸಿಕೊಳ್ಳ ಬೇಕಾದದ್ದು ಏನೆಂದರೆ, ದೇವರ ಸ್ವಭಾವದಲ್ಲಿ ಸಹಭಾಗಿಗಳಾಗುವುದಕ್ಕೆ ಕೊಡಬೇಕಾದ ಬೆಲೆಯನ್ನು ಕೊಡಲು ನಾವು ಸಿದ್ಧರಿದ್ದೇವೆಯೇ, ಎಂಬುದಾಗಿ.

ನಮ್ಮೊಳಗಿರುವ ಆದಾಮನ ಸ್ವಭಾವವು ಈ ದೇವರ ಸ್ವಭಾವಕ್ಕೆ ಸಂಪೂರ್ಣ ವಿರುದ್ಧವಾದದ್ದಾಗಿದೆ. ಆದಾಮನಿಗೆ ಸಂಬಂಧಿಸಿದ ಜೀವಿತವು ಅತೀ ಸ್ವಾರ್ಥಪರವಾಗಿದೆ, ಮತ್ತು ಅದು ನಮ್ಮ ಸ್ವಂತ ಅವಶ್ಯಕತೆಗಳು ಮತ್ತು ನಮ್ಮ ಸ್ವಂತ ಕುಟುಂಬದ ಸದಸ್ಯರ ಅವಶ್ಯಕತೆಗಳು ಇದ್ದಾಗ ಮಾತ್ರ ಸ್ಪಂದಿಸುವಂತೆ ನಮ್ಮನ್ನು ಎಚ್ಚರಿಸುತ್ತದೆ. ಅದರಲ್ಲಿ ಎಷ್ಟು ಸ್ವಾರ್ಥತನ ಮತ್ತು ಅಸೂಯೆ ಇದೆಯೆಂದರೆ, ಬೇರೆಯವರ ಅವಶ್ಯಕತೆಗಳನ್ನು ಇತರರು ಪೂರೈಸುವುದು ಸಹ ಅದಕ್ಕೆ ಹಿಡಿಸುವುದಿಲ್ಲ. ಅಷ್ಟೇ ಅಲ್ಲದೆ, ಇತರರು ತೊಂದರೆಯಲ್ಲಿ ಬೀಳುವುದನ್ನು ನೋಡಿ ಅದು ಹರ್ಷಿಸುತ್ತದೆ.

ಮಾನವನು ಪಾಪ ಮಾಡಿದಾಗ, ದೇವರು ಜೀವವೃಕ್ಷದ ದಾರಿಯನ್ನು ಕಾಯುವುದಕ್ಕಾಗಿ ಕೆರೂಬಿಯರನ್ನೂ, ಧಗಧಗನೆ ಪ್ರಜ್ವಲಿಸುತ್ತಾ ಸುತ್ತುವ ಕತ್ತಿಯನ್ನೂ ಇರಿಸಿದರು. ಜೀವವೃಕ್ಷವು ನಿತ್ಯಜೀವದ - ದೇವರನ್ನು ತಿಳಕೊಳ್ಳುವುದರ - ಪ್ರತೀಕವಾಗಿದೆ. ಅದರ ಮುಂದೆ ಇರಿಸಲಾದ ಕತ್ತಿಯ ಮೂಲಕ ದೇವರು ಆದಾಮನಿಗೆ ತೋರಿಸಿದ್ದು ಏನೆಂದರೆ, ಈಗ ಯಾರಾದರೂ ಜೀವದಾಯಕ ವೃಕ್ಷದ ಹಣ್ಣನ್ನು ತಿನ್ನಲು ಬಯಸಿದರೆ, ಆತನು ಮೊದಲು ತನ್ನ ಸ್ವಂತ ಸ್ವಾರ್ಥದ ಜೀವಿತವು ಕತ್ತಿಯ ಮೂಲಕ ನಾಶಗೊಳ್ಳುವ ಅನುಭವವನ್ನು ಪಡೆಯಬೇಕು, ಎಂಬುದಾಗಿ. ಆದಿಕಾಂಡ 3:21ರಲ್ಲಿ ನಾವು ಓದುವಂತೆ, ಆದಾಮ ಮತ್ತು ಹವ್ವಳು ಪಾಪ ಮಾಡಿದೊಡನೆಯೇ, ದೇವರು ಏದನ್ ತೋಟದಲ್ಲಿ ಒಂದು ಪಶುವನ್ನು ಕೊಂದರು ಮತ್ತು ಅದರ ಚರ್ಮದಿಂದ ಅವರಿಗೆ ಅಂಗಿಗಳನ್ನು ಮಾಡಿ ತೊಡಿಸಿದರು. ಇದರಲ್ಲೂ ಸಹ ದೇವರು ಅವರಿಗೆ ಅದೇ ಪಾಠವನ್ನು ಕಲಿಸಿದರು - ಈಗ ಉಡುಪನ್ನು ಹೊಂದುವುದಕ್ಕೆ ಅವರಿಗೆ ತ್ಯಾಗ ಮತ್ತು ಮರಣದ ದಾರಿ ಮಾತ್ರವೇ ಇದೆ, ಎಂಬುದಾಗಿ. ಇದಕ್ಕೆ ಮುಂಚೆ ಆದಾಮ ಮತ್ತು ಹವ್ವರು "ಮರಣ"ವಿಲ್ಲದೆ ತಮ್ಮನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿದ್ದರು - ಬರೀ ಅಂಜೂರದ ಎಲೆಗಳನ್ನು ಹೊಲಿದುಕೊಳ್ಳುವ ಮೂಲಕ. ಆದರೆ ದೇವರು ಈ ಎಲೆಗಳನ್ನು ಎಸೆದು ಬಿಟ್ಟರು ಮತ್ತು ಸರಿಯಾದ ಉಡುಪನ್ನು ತೊಡುವುದು ಹೇಗೆಂದು ಅವರಿಗೆ ತೋರಿಸಿದರು. ಹಾಗಾಗಿ ಮಾನವನು ದೇವರೊಂದಿಗೆ ಅನ್ಯೋನ್ಯತೆ ಹೊಂದುವುದಕ್ಕೆ ಮತ್ತು ದೇವರ ಸ್ವಭಾವವೆಂಬ ಉಡುಪನ್ನು ತೊಡುವದಕ್ಕೆ ಸೂಕ್ತವಾದ ವಿಧಾನ ತ್ಯಾಗದ ಮೂಲಕವಾಗಿದೆ, ಎಂಬುದನ್ನು ದೇವರು ಆದಿಕಾಲದಿಂದಲೂ ಒತ್ತಿ ಹೇಳುವುದನ್ನು ನಾವು ನೋಡುತ್ತೇವೆ.

ದೇವರು ಕಾಯಿನನಿಗೆ ಆತನ ಮೂಲ ಸಮಸ್ಯೆಯನ್ನು ತೋರಿಸಿ ತಿಳಿಸಿದ್ದೇನೆಂದರೆ - ಆತನು ತನ್ನ ತಮ್ಮನಾದ ಹೇಬೆಲನ ಕುರಿತಾಗಿ "ಒಳ್ಳೆಯ ಆಲೋಚನೆ ಮಾಡಲಿಲ್ಲ" (ಆದಿ. 4:7ರ ಟಿಪ್ಪಣಿ). ಯೂದನು "ಕಾಯಿನನ ಮಾರ್ಗವನ್ನು ಹಿಡಿದವರು," ಎಂಬ ಶಬ್ದಗಳ ಮೂಲಕ ಕೆಲವರನ್ನು ಉಲ್ಲೇಖಿಸುತ್ತಾನೆ (ಯೂದ. 11). ಇವರು ಯಾರು? ಇವರು ತಮ್ಮ ಸಹೋದರರ ಕುರಿತಾಗಿ ಒಳ್ಳೆಯ ಯೋಚನೆಯನ್ನು ಮಾಡದಂತ ಜನರು. ಈ ವಿಷಯದ ಕುರಿತಾಗಿ ನಾವೆಲ್ಲರೂ ಒಂದು ಆತ್ಮಿಕ ತಪಾಸಣೆ ಮಾಡಿಕೊಳ್ಳುವುದು ಒಳ್ಳೆಯದು. ನಿಮ್ಮ ಸ್ಥಳೀಯ ಕ್ರೈಸ್ತಸಭೆಯ ಎಲ್ಲಾ ಸಹೋದರರು ಮತ್ತು ಸಹೋದರಿಯರು ಹಾಗೂ ಅವರ ಕುಟುಂಬಗಳ ಕುರಿತಾಗಿ ಹೇಳುವುದಾದರೆ, ಅವರಿಗಾಗಿ ನೀವು ಅತ್ಯುತ್ತಮವಾದುದನ್ನೇ ಇಚ್ಛಿಸುತ್ತೀರೆಂದು ಯಥಾರ್ಥವಾಗಿ ಹೇಳಬಲ್ಲಿರಾ? ಹಾಗೆಯೇ ಇತರ ಕ್ರೈಸ್ತ ಪಂಗಡಗಳಲ್ಲಿರುವ ನಿಮ್ಮ ಪರಿಚಿತ ವಿಶ್ವಾಸಿಗಳ ಕುರಿತಾಗಿಯೂ ಸಹ, ಅವರಿಗಾಗಿ ನೀವು ಅತ್ಯುತ್ತಮವಾದುದನ್ನೇ ಬಯಸುತ್ತೀರೆಂದು ಹೇಳಲು ನಿಮಗೆ ಸಾಧ್ಯವಿದೆಯೇ? ಇದರ ನಂತರ ಈ ವೃತ್ತವನ್ನು ಇನ್ನೂ ಹೆಚ್ಚಾಗಿ ವಿಸ್ತರಿಸಿರಿ ಮತ್ತು ನಿಮ್ಮನ್ನು ಈ ರೀತಿಯಾಗಿ ಪ್ರಶ್ನಿಸಿಕೊಳ್ಳಿರಿ: ನಿಮ್ಮ ಸಂಬಂಧಿಕರು, ನಿಮ್ಮ ವೈರಿಗಳು ಮತ್ತು ನಿಮಗೆ ಯಾವುದೇ ರೀತಿಯ ಹಾನಿಯನ್ನು ಮಾಡಿರುವಂತ ಜನರೂ ಸೇರಿದಂತೆ ನಿಮ್ಮ ಪರಿಚಿತರಾದ ಎಲ್ಲಾ ಜನರ ಬಗ್ಗೆ, ಅವರಿಗಾಗಿ ನೀವು ಅತ್ಯುತ್ತಮವಾದುದನ್ನೇ ಬಯಸುತ್ತೀರೆಂದು ಹೇಳಬಲ್ಲಿರಾ? ಬೇರೊಬ್ಬ ವ್ಯಕ್ತಿಗೆ ಅಥವಾ ಆತನ ಮಕ್ಕಳಿಗೆ ಏನೋ ಒಳ್ಳೆಯ ವಿಷಯ ಸಂಭವಿಸಿದಾಗ, ನಿಮ್ಮ ಹೃದಯದಲ್ಲಿ ಒಂದು ಆತಂಕ ಉಂಟಾಗುವುದನ್ನು ನೀವು ಗಮನಿಸಿದರೆ (ಸಂತೋಷಿಸುವುದರ ಬದಲಾಗಿ), ಅಥವಾ ಆ ವ್ಯಕ್ತಿಗೆ ಅಥವಾ ಆತನ ಕುಟುಂಬದಲ್ಲಿ ಒಂದು ದುರ್ಘಟನೆ ಸಂಭವಿಸಿದಾಗ, ನಿಮ್ಮ ಹೃದಯದಲ್ಲಿ ಹಿಗ್ಗುವಿಕೆಯ ಅನುಭವ ನಿಮಗೆ ಆಗಿದ್ದರೆ (ದುಃಖಿಸುವುದರ ಬದಲಾಗಿ), ಇಂತಹ ಮನೋಭಾವ ಏನನ್ನು ಸೂಚಿಸುತ್ತದೆ? ಕೇವಲ ಇಷ್ಟನ್ನು, ನಿಮ್ಮಲ್ಲಿ ಆದಾಮನ ಪ್ರವೃತ್ತಿಯು ಜೀವಿತವಾಗಿದೆ ಮತ್ತು ಸಕ್ರಿಯವಾಗಿದೆ.

ನೀವು ನಿಮ್ಮನ್ನು ಪ್ರಾಮಾಣಿಕವಾಗಿ ಪರೀಕ್ಷಿಸಿ ನೋಡುವುದಾದರೆ, ನೀವು ಕಾಯಿನನ ಮಾರ್ಗದಲ್ಲಿ ನಡೆಯುತ್ತಿದ್ದೀರೋ ಅಥವಾ ಇಲ್ಲವೋ, ಎಂಬುದು ನಿಮಗೆ ಶೀಘ್ರವೇ ಅರಿವಾಗುತ್ತದೆ. ನಿಮ್ಮ ಮೇಲೆ ದೇವರ ಅಗ್ನಿ ಮತ್ತು ಪವಿತ್ರಾತ್ಮನ ಅಭಿಷೇಕ ಶಾಶ್ವತವಾಗಿ ನೆಲೆಸಬೇಕೆಂಬ ಇಚ್ಛೆ ನಿಮ್ಮಲ್ಲಿದ್ದರೆ, ಆ ಆದಾಮನ ಪ್ರವೃತ್ತಿಯು ನಿಮ್ಮೊಳಗೆ ಕಂಡುಬಂದಾಗ, ಅದನ್ನು ಒಡನೆಯೇ ಸಾಯಿಸುವುದಕ್ಕೆ ನೀವು ಸಿದ್ಧರಾಗಿರಬೇಕು.

ಗೋಧಿಯ ಕಾಳು ಭೂಮಿಯಲ್ಲಿ ಬಿದ್ದು "ಸಂಪೂರ್ಣವಾಗಿ ಸತ್ತರೆ" ಮಾತ್ರ, ಬಹಳ ಫಲ ಸಿಗುತ್ತದೆ. ಒಬ್ಬನು ತನ್ನ ಸ್ವಭಾವಕ್ಕೆ ಸಂಪೂರ್ಣವಾಗಿ ಸತ್ತ ಪಕ್ಷದಲ್ಲಿ, ಆತನಿಗೆ ಬೇರೆಯವರು ಏನನ್ನು ಮಾಡಿದರೂ ಅಥವಾ ಮಾಡದೇ ಇದ್ದರೂ ಸಹ, ಆತನು ಬೇಸರಗೊಳ್ಳುವುದಕ್ಕೆ ಅವಕಾಶವೇ ಇರುವುದಿಲ್ಲ. ಆತನು ಎಲ್ಲರ ವಿಷಯವಾಗಿ ಯಾವಾಗಲೂ ಒಳ್ಳೆಯ ಆಲೋಚನೆ ಮಾಡುತ್ತಾನೆ. ಆತನು ತನ್ನ ಸ್ವಂತದ ಸಂಗತಿಗಳ ಕುರಿತಾಗಿ ಯಾವತ್ತೂ ಸಿಟ್ಟಾಗುವುದಿಲ್ಲ ಮತ್ತು ಆತನು ಇತರರೊಂದಿಗೆ ಜಗಳಾಡುವುದೇ ಇಲ್ಲ. ಆತನು ತನಗಾಗಿ ಮರುಕಗೊಳ್ಳುವುದಿಲ್ಲ ಮತ್ತು ತನಗಾಗಿ ಒಂದು ಹನಿ ಕಣ್ಣೀರನ್ನೂ ಸುರಿಸುವುದಿಲ್ಲ - ಏಕೆಂದರೆ, ನಿಶ್ಚಯವಾಗಿ ಸತ್ತಿರುವವರು ತಮ್ಮ ಸಮಾಧಿಗಳಲ್ಲಿ ಅಳುವುದಿಲ್ಲ!!

ಕಾಯಿನನು ತನ್ನ ತಮ್ಮನ ವಿಚಾರವಾಗಿ ಒಳ್ಳೆಯ ಆಲೋಚನೆಯನ್ನು ಮಾಡದೇ ಇದ್ದುದರಿಂದ, ಆತನ ಮೋರೆಯು ಬಾಡಿಹೋಗಿ ಮಂಕಾಗಿತ್ತು (ಆದಿ. 4:6). ಇದನ್ನು ನಾವು ಗಮನಿಸದೇ ಇರಬಹುದು, ಆದರೆ ಅನೇಕ ವೇಳೆ ನಮ್ಮ ಹೃದಯಗಳಲ್ಲಿ ಅಡಗಿರುವ ಮನೋಭಾವವು ನಮ್ಮ ಮುಖಗಳಲ್ಲಿ ಗೋಚರಿಸುತ್ತದೆ. ನೀವು ಎಲ್ಲರಿಗಾಗಿ ಒಳ್ಳೆಯದನ್ನು ಬಯಸಿದರೆ, ನಿಮ್ಮ ಮುಖದಲ್ಲಿ ಯಾವಾಗಲೂ ಕರ್ತನ ಆನಂದವು ಹೊಳೆಯುತ್ತಿರುತ್ತದೆ. ಅನೇಕ ವಿಶ್ವಾಸಿಗಳು ಕಾಯಿನನ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಅವರ ಹುಸಿನಗೆಗಳು ಮತ್ತು "ಕರ್ತನಿಗೆ ಸ್ತೋತ್ರವಾಗಲಿ" ಎಂಬ ತುಟಿಯ ಉದ್ಗಾರಗಳ ಹಿಂದೆ, ತಮ್ಮ ಸಹ-ವಿಶ್ವಾಸಿಗಳ ಕುರಿತಾದ ತಪ್ಪಾದ ಮನೋಭಾವಗಳು ಇರುತ್ತವೆ. ಜನರು ನಿಮ್ಮ ವಿರುದ್ಧವಾಗಿ ತಿರುಗಿಕೊಂಡು ನಿಮಗೆ ಕೇಡನ್ನು ಮಾಡುವಾಗ, ದೇವರು ಅವರನ್ನು ಉಪಯೋಗಿಸಿಕೊಂಡು ನಿಮಗೆ ನಿಮ್ಮ ಹೃದಯದ ನಿಜಸ್ಥಿತಿಯನ್ನು ಪರಿಚಯ ಮಾಡಿಸುತ್ತಾರೆ. ನಿಮಗೆ ಅವರನ್ನು ಪ್ರೀತಿಸಲು ಸಾಧ್ಯವಾಗದಿದ್ದರೆ, ನೀವು "ದೇವರ ಸ್ವಭಾವದಲ್ಲಿ ಸಹಭಾಗಿಗಳಾಗಿಲ್ಲವೆಂದು" ನಿಮ್ಮ ಹೃದಯದ ಸೂಕ್ಷ್ಮ-ಪರೀಕ್ಷೆಯಲ್ಲಿ ಕಂಡುಬರುತ್ತದೆ, ಏಕೆಂದರೆ ದೇವರ ಸ್ವಭಾವವು ಅವರ ವೈರಿಗಳನ್ನು ಸಹ ಪ್ರೀತಿಸುತ್ತದೆ. ಯೇಸುವು ಇಸ್ಕರಿಯೋತ ಯೂದನ ವಿಚಾರವಾಗಿಯೂ ಒಳ್ಳೆಯ ಆಲೋಚನೆಯನ್ನೇ ಮಾಡಿದರು.

ದೇವರು ಎಲ್ಲಾ ಜನರಿಗಾಗಿ ಅತ್ಯುತ್ತಮವಾದುದನ್ನು ಬಯಸುತ್ತಾರೆ. ಈ ಸ್ವಭಾವವನ್ನು ನಾವು ಸಹ ಪಡೆಯಬಹುದು ಎಂಬುದು ಸುವಾರ್ತೆಯ ಸಂದೇಶವಾಗಿದೆ. ಸುವಾರ್ತೆಯಲ್ಲಿರುವ ಈ ಅಂಶವನ್ನು ಅರ್ಥ ಮಾಡಿಕೊಳ್ಳದೇ ಇರುವವರು ಸುವಾರ್ತೆಯನ್ನು ಗ್ರಹಿಸಿಕೊಂಡೇ ಇಲ್ಲ.