WFTW Body: 

ದೇವರ ದೃಷ್ಟಿಯಲ್ಲಿ ಒಬ್ಬ ವಿಶ್ವಾಸಿಯು ದೇವಭಕ್ತಿಯಲ್ಲಿ ಶ್ರದ್ಧೆಯಿಲ್ಲದವನಾಗಿದ್ದರೆ, ಅಥವಾ ಅವನು ಇತರರ ಟೀಕೆಗೆ ಭಯಪಟ್ಟು ಸತ್ಯದ ಪರವಾಗಿ ನಿಲ್ಲಲು (ಅವನು ದೇವರ ವಾಕ್ಯದಲ್ಲಿ ನೋಡಿರುವ ಸತ್ಯ) ಹೆದರುವಂತ ಒಬ್ಬ ಹೇಡಿಯಾಗಿದ್ದರೆ, ಆಗ ದೇವರು ಅವನಿಂದ ಈ ಸತ್ಯವನ್ನು ಮರೆಮಾಡುತ್ತಾರೆ - ಅದಕ್ಕಾಗಿ ಇದನ್ನು "ದೇವಭಕ್ತಿಯ ರಹಸ್ಯ"ವೆಂದು ಕರೆಯಲಾಗಿದೆ (1 ತಿಮೊ. 3:16). ದೇವರು ತನಗೆ ಭಯಪಡುವವರಿಗೆ ಮಾತ್ರ ತನ್ನ ರಹಸ್ಯಗಳನ್ನು ಬಹಿರಂಗಪಡಿಸುತ್ತಾರೆ (ಕೀರ್ತ. 25:14). ದೇವರ ವಿಷಯದಲ್ಲಿ ಹೇಡಿಯಾಗಿರುವುದು ಅಪಾಯಕಾರಿಯಾಗಿದೆ, ಏಕೆಂದರೆ ’ ಪ್ರಕಟನೆ 21:8'ರಲ್ಲಿ ಕೊಟ್ಟಿರುವ ಬೆಂಕಿಯ ಕೆರೆಗೆ ಕಳುಹಿಸಲ್ಪಡುವ ವ್ಯಕ್ತಿಗಳ ಪಟ್ಟಿಯಲ್ಲಿ "ಹೇಡಿಗಳು" ಮೊದಲನೆಯವರು ಆಗಿದ್ದಾರೆ. ಈ ಪಟ್ಟಿಯಲ್ಲಿ "ಕೊಲೆಗಾರರು, ಅನೀತಿವಂತರು, ಮಾಟಗಾರರು ಮತ್ತು ವಿಗ್ರಹಾರಾಧಕರು" ಇವರೆಲ್ಲರೂ ಬರುವುದು ಇವರ ನಂತರವೇ!

ಮಾರ್ಟಿನ್ ಲೂಥರ್‌ರವರು ಹೇಳಿದ ಮಾತು, "ನಾನು ದೇವರ ಸತ್ಯದ ಪ್ರತಿಯೊಂದು ಭಾಗವನ್ನು ನಂಬುತ್ತೇನೆಂದು ಎಲ್ಲರೆದುರು ಬಹಿರಂಗವಾಗಿ ಘೋಷಿಸಿ, ಈ ಸಮಯದಲ್ಲಿ ಸೈತಾನನು ವಿರೋಧಿಸಿ ದಾಳಿಮಾಡುತ್ತಿರುವ ಒಂದು ನಿರ್ದಿಷ್ಟ ಸತ್ಯದ ಬಗ್ಗೆ ಮೌನವಾಗಿದ್ದರೆ, ಆಗ ನಾನು ನಿಜವಾಗಿ ಕ್ರಿಸ್ತನನ್ನು ಅರಿಕೆಮಾಡುತ್ತಿಲ್ಲ. ಒಬ್ಬ ಸೈನಿಕನ ನಿಷ್ಠೆಯು ಈ ಸಮಯದಲ್ಲಿ ಯುದ್ಧಭೂಮಿಯ ಅತ್ಯಂತ ಉಗ್ರ ಹೋರಾಟ ನಡೆಯುತ್ತಿರುವ ಕ್ಷೇತ್ರದಲ್ಲಿ ಪರೀಕ್ಷಿಸಲ್ಪಡುತ್ತದೆ. ಒಬ್ಬ ಸೈನಿಕನು ಈ ಕ್ಷಣ ಘರ್ಷಣೆ ನಡೆಯುತ್ತಿರುವ ಜಾಗದಲ್ಲಿ ದೃಢವಾಗಿ ನಿಂತು ಹೋರಾಡದಿದ್ದರೆ, ಆತನು ಯುದ್ಧಭೂಮಿಯ ಇತರ ಎಲ್ಲಾ ಕ್ಷೇತ್ರಗಳಲ್ಲಿ ತೋರಿಸುವ ನಿಷ್ಠೆಯು ಅಯೋಗ್ಯವೂ ಮತ್ತು ಅವಮಾನಕರವೂ ಆಗಿದೆ."

ಕಳೆದ 47 ವರ್ಷಗಳಿಂದ,"ಕ್ರಿಸ್ತನು ನಮ್ಮಂತೆಯೇ ಶೋಧನೆಗೆ ಗುರಿಯಾದನು, ಪಾಪ ಮಾತ್ರ ಮಾಡಲಿಲ್ಲ," ಎಂಬ ಸತ್ಯದ ಸುತ್ತ ಭಾರತದಲ್ಲಿರುವ ನಮ್ಮ ಕ್ರೈಸ್ತಸಭೆಗಳ ವಿರುದ್ಧವಾಗಿ ಅತಿ ತೀವ್ರವಾದ ಕಾಳಗ ನಡೆದಿದೆ. ಆದಾಗ್ಯೂ ನಮ್ಮ ಸಭೆಗಳು ಈ ಸತ್ಯಕ್ಕೆ "ಆಧಾರಸ್ತಂಭವೂ ಸಾಕ್ಷಿಯೂ ಆಗಿ" ನಿಂತಿವೆ (1 ತಿಮೊ. 3:15) ಮತ್ತು ನಾವು ಈ ಸತ್ಯವನ್ನು ಧೈರ್ಯವಾಗಿ, ಸಂಕೋಚವಿಲ್ಲದೆ ಘೋಷಿಸಿದ್ದೇವೆ. ಮತ್ತು ಇದರ ಫಲವಾಗಿ ಹಲವಾರು ಜನರ ಜೀವನಗಳಲ್ಲೂ ರೂಪಾಂತರ ಉಂಟಾಗಿರುವುದನ್ನು ನಾವು ನೋಡಿದ್ದೇವೆ.

1 ತಿಮೊ 3:16 ರಲ್ಲಿ ಉಲ್ಲೇಖಿಸಿರುವ ’ದೇವಭಕ್ತಿಯ ರಹಸ್ಯ’ವು, "ಕ್ರಿಸ್ತನು ಶರೀರಧಾರಿಯಾಗಿ ಬಂದನು" ಎಂಬ ಸಿದ್ಧಾಂತವಲ್ಲ, ಆದರೆ "ಒಬ್ಬ ಮನುಷ್ಯನಾಗಿ ಜೀವಿಸಲು ಕ್ರಿಸ್ತನು ಮಾನವಶರೀರದಲ್ಲಿ ಬಂದನು" ಎಂಬ ನಿಜಾಂಶ, ಎಂಬುದನ್ನು ಗಮನಿಸಿರಿ. ಈ ವಾಕ್ಯದಲ್ಲಿ ಸ್ವತಃ ಕ್ರಿಸ್ತನು ಒಬ್ಬ ಮಾನವನಾಗಿ ಪ್ರಕಟವಾಗಿರುವುದನ್ನು ನೋಡುವುದರ ಬದಲಾಗಿ, ಅನೇಕರು ಇದನ್ನು ಒಂದು ಸಿದ್ಧಾಂತದ ರೂಪದಲ್ಲಿ ನೋಡುವ ಮೂಲಕ ತಾವೇ ಫರಿಸಾಯರಾಗಿದ್ದಾರೆ. ದೇವರ ನಿಯಮವನ್ನು "ಅಕ್ಷರಶಃ ಓದಿಕೊಳ್ಳುವುದು (ಸರಿಯಾದ ಸಿದ್ಧಾಂತವನ್ನು ಸಹ) ಕೊಲ್ಲುತ್ತದೆ. ದೇವರಾತ್ಮನು ಮಾತ್ರ ಆ ನಿಯಮಕ್ಕೆ ಜೀವವನ್ನು ಕೊಡುತ್ತಾನೆ" (2 ಕೊರಿ. 3:6) . ನಾವು ಜನರನ್ನು ಸ್ವತಃ ಯೇಸುವಿನ ಕಡೆಗೆ ತಿರುಗಿಸಬೇಕು ಮತ್ತು ಯಾವುದೋ ಸಿದ್ಧಾಂತದ ಕಡೆಗೆ ಅಲ್ಲ.

ಮನುಷ್ಯನಾಗಿ ಬಂದ ಯೇಸುವನ್ನು ನಮ್ಮ ಆತ್ಮದಲ್ಲಿ ಸ್ವೀಕರಿಸಿ ಅರಿಕೆಮಾಡುವುದು (ಕೇವಲ ನಮ್ಮ ಮನಸ್ಸಿನ ವಿಚಾರಶಕ್ತಿಯಲ್ಲಿ ಒಪ್ಪಿಕೊಳ್ಳುವುದಲ್ಲ - 1 ಯೋಹಾ 4:2) ಎಂದರೆ, ಎಲ್ಲಕ್ಕಿಂತ ಹೆಚ್ಚಾಗಿ, ನಾವು ಹೃದಯದ ಅಂತರಾಳದಲ್ಲಿ ಈ ರೀತಿಯಾಗಿ ನಂಬುವುದು: ಯೇಸುವು ನಾವು ಶೋಧಿಸಲ್ಪಡುವ ಹಾಗೆಯೇ ಶೋಧಿಸಲ್ಪಟ್ಟನು, ಆತನಿಗೆ ನಮಗೆ ಸಿಗುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪವಿತ್ರಾತ್ಮನ ಬಲವು ಸಿಗಲಿಲ್ಲ, ಮತ್ತು ನಾವು ಹೃತ್ಪೂರ್ವಕವಾಗಿ ಜೀವಿಸುವುದಾದರೆ, ಆತನು ನಡೆದಂತೆಯೇ ನಾವೂ ನಡೆಯಬಹುದು (1 ಯೋಹಾ. 2:6) .

ಈ ನಂಬಿಕೆಯ ಇನ್ನೊಂದು ಫಲವೆಂದರೆ, ನಮ್ಮ ಆತ್ಮವು ಆತನ ಹೆಜ್ಜೆಯನ್ನು ಅನುಸರಿಸಿ ನಡೆಯಲು ಹಂಬಲಿಸುತ್ತದೆ - ಸ್ವಂತ ಲಾಭವನ್ನು ಎಂದಿಗೂ ಬಯಸದೇ, ಯಾವತ್ತೂ ನಮ್ಮ ಸ್ವಚಿತ್ತವನ್ನು ಅನುಸರಿಸದೇ ಇರುವುದು. ಯೇಸುವು ತನ್ನ ಭೂಲೋಕದ ಜೀವಿತದಲ್ಲಿ ಶೋಧನೆಗಳ ಮೂಲಕ ಹೇಗೆ ವಿದ್ಯಾಭ್ಯಾಸವನ್ನು ಪಡೆದನೆಂದು (ತನ್ನ ತಂದೆಗೆ ವಿಧೇಯನಾಗಿ) ಅರಿತುಕೊಳ್ಳುವುದಕ್ಕೆ ನಮಗೆ ಪವಿತ್ರಾತ್ಮನಿಂದ ಪ್ರಕಟನೆ ಸಿಗಬೇಕಾಗುತ್ತದೆ. ದೇವರ ವಾಕ್ಯದಲ್ಲಿ ಹೀಗೆ ಬರೆಯಲ್ಪಟ್ಟಿದೆ: "ಆತನು ಮಗನಾಗಿದ್ದರೂ, ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು" (ಇಬ್ರಿ. 5:8) . ಆತನು ಅತ್ಯಂತ ನಂಬಿಗಸ್ತನಾಗಿದ್ದು, ಪ್ರತಿಯೊಂದು ಶೋಧನೆಯನ್ನು ವಿರೋಧಿಸಿ ಹೋರಾಡಿದನು. ಅದಲ್ಲದೆ ಆತನು ನಂಬಿಗಸ್ತಿಕೆಯಿಂದ ತನ್ನ "ಸ್ವೇಚ್ಛಾ-ಜೀವನವನ್ನು ಧಾರೆಯೆರೆದು ಮರಣಕ್ಕೆ ಒಪ್ಪಿಸಿದನು" (ಯೆಶಾ. 53:12 - KJV ಅನುವಾದ). ಈ ರೀತಿಯಾಗಿ ಅವನ ಲೌಕಿಕ ಜೀವಿತದಲ್ಲಿ ದೇವರ ಸ್ವಭಾವವು ಸಂಪೂರ್ಣವಾಗಿ ಪ್ರಕಟವಾಯಿತು. ಬಹಳ ಕಡಿಮೆ ಜನರು ತಾವು ಪರಿಶುದ್ಧರಾಗಲು ಮಾಡುವ ಪ್ರಯತ್ನದಲ್ಲಿ, ತಮ್ಮ ಸ್ವೇಚ್ಛಾ-ಜೀವನವನ್ನು ಧಾರೆಯೆರೆದು ಮರಣಕ್ಕೆ ಒಪ್ಪಿಸುವ ಮಟ್ಟವನ್ನು ತಲಪುತ್ತಾರೆ; ಇದಕ್ಕೆ ಕಾರಣವೇನೆಂದರೆ, ಮೊಟ್ಟಮೊದಲಿಗೆ, ಬಹಳ ಕಡಿಮೆ ಜನರು ತಮ್ಮ ಜೀವನದಲ್ಲಿ ತಮಗೆ ತಿಳಿದಿರುವ ಎಲ್ಲಾ ಪಾಪಗಳ ವಿರುದ್ಧ ಹೋರಾಡುವಾಗ, ದೇವರು ಬಯಸುವ ಮಟ್ಟದ ಪ್ರಾಮಾಣಿಕತೆಯನ್ನು ತೋರಿಸುತ್ತಾರೆ.

ಅನೇಕ ವಿಶ್ವಾಸಿಗಳು ಅವರ ಜೀವನದಲ್ಲಿ ದೇವರ ಚಿತ್ತವನ್ನು ಕಂಡುಕೊಳ್ಳುವುದಿಲ್ಲ, ಏಕೆಂದರೆ ಯೇಸುವು ತನ್ನ ಶರೀರದ ಇಚ್ಛೆಗಳನ್ನು ಸಾಯಿಸುವ ಮೂಲಕ ನಮಗಾಗಿ ಜೀವವುಳ್ಳ ಹೊಸ ದಾರಿಯನ್ನು ಸಿದ್ಧಪಡಿಸಿದನೆಂಬ ಈ ಸತ್ಯತೆಯನ್ನು ಅವರು ಅರಿತಿಲ್ಲ (ಇಬ್ರಿ. 10:20) . ಯೇಸುವು ಹೇಳಿರುವಂತೆ, ನಾವು ಸತ್ಯವನ್ನು ಮೊದಲು ತಿಳಿದುಕೊಳ್ಳಬೇಕು ಮತ್ತು ಆಗ "ಸತ್ಯವು ನಮ್ಮನ್ನು ಬಿಡುಗಡೆ ಮಾಡುತ್ತದೆ" (ಯೋಹಾ. 8:32).