WFTW Body: 

ಇತರ ಧರ್ಮಗಳು ಮತ್ತು ಇತರ ಧರ್ಮೀಯರು ಆರಾಧಿಸುವ ವಿಗ್ರಹಗಳ ವಿರುದ್ಧವಾಗಿ ನಾವು ಟೀಕೆ ಮಾಡದಿರುವಂತೆ ಎಚ್ಚರಿಕೆ ವಹಿಸಬೇಕು. ಅವುಗಳ ಬಗ್ಗೆ ಹಾಸ್ಯ ಮಾಡುವುದನ್ನು ಸಹ ನಾವು ನಿಲ್ಲಿಸಬೇಕು. ಯೇಸುವು ಯಾವತ್ತೂ ಇಂತಹ ವಿಷಯಗಳ ಕುರಿತು ಏನೂ ಹೇಳಲಿಲ್ಲ. ನಿಜದೇವರನ್ನು ತಾವು ಅರಿತಿದ್ದೇವೆಂದು ಹೇಳಿಕೊಳ್ಳುತ್ತಿದ್ದ ಜನರ ಕಪಟತನವನ್ನು ಅವರು ಹೆಚ್ಚಾಗಿ ಎತ್ತಿ ತೋರಿಸಿದರು.

ಅಪೊಸ್ತಲ ಪೌಲನ ಉದಾಹರಣೆಯನ್ನು ತೆಗೆದುಕೊಳ್ಳಿರಿ. ಆತನು ಎಫೆಸ ಪಟ್ಟಣದಲ್ಲಿ ಸತ್ಯವನ್ನು ಮರೆಮಾಚದೆ ಬೋಧಿಸಿದಾಗ, ಅಲ್ಲಿ ದೊಡ್ಡ ಗಲಿಬಿಲಿ ಉಂಟಾಯಿತು. ಕಡೆಗೆ ಆ ಪಟ್ಟಣದ ಪ್ರಮುಖ ಆಡಳಿತಾಧಿಕಾರಿಯು ಜನರನ್ನು ಒಟ್ಟಾಗಿ ಸೇರಿಸಿ ಅವರಿಗೆ, ಈ ಮನುಷ್ಯನು ನಮ್ಮ ಮಹಾದೇವಿ ಡಯಾನಾಳನ್ನು ದೂಷಿಸಲಿಲ್ಲ," ಎಂದು ಹೇಳಿದನು (ಅ.ಕೃ. 19:37). ಪೌಲನು ಕ್ರಿಸ್ತನನ್ನು ಸಾರಿದನು. ಆದರೆ ಆತನು ಎಫೆಸದ ಜನರು ಆರಾಧಿಸುತ್ತಿದ್ದ ಅನ್ಯದೇವತೆಗಳನ್ನು ಖಂಡಿಸಲಿಲ್ಲ. ಆತನ ಸಂದೇಶವು ಸಕಾರಾತ್ಮಕವಾಗಿತ್ತು - ಕ್ರಿಸ್ತನು ಅವರನ್ನು ಅವರ ಪಾಪಗಳಿಂದ ರಕ್ಷಿಸಬಲ್ಲನು, ಎಂಬುದಾಗಿತ್ತು. ಅದು ಆ ಜನರ ಸುಳ್ಳುದೇವತೆಗಳನ್ನು ಮತ್ತು ಅವರ ವಿಗ್ರಹಗಳನ್ನು ಖಂಡಿಸುವ ನಕಾರಾತ್ಮಕ ಸಂದೇಶವಾಗಿರಲಿಲ್ಲ. ಆತನಲ್ಲಿ ದೈವಿಕ ಜ್ಞಾನವಿತ್ತು. ಒಬ್ಬ ವ್ಯಕ್ತಿಯು ಕ್ರಿಸ್ತನನ್ನು ಕಂಡುಕೊಂಡ ನಂತರ, ಸ್ವತಃ ಕರ್ತನೇ ಅವನನ್ನು ವಿಗ್ರಹಗಳಿಂದ ಬಿಡುಗಡೆಗೊಳಿಸುವ ಕಾರ್ಯವನ್ನು ಮಾಡುವನು.

ಈ ವಿವೇಕವು ನಮಗೂ ಅವಶ್ಯವಾಗಿದೆ. ನಾವು ಯಾವುದೇ ಧರ್ಮವನ್ನಾಗಲೀ, ಅದರ ನಂಬಿಕೆಗಳನ್ನಾಗಲೀ ಅಥವಾ ಅದರ ಆಚಾರ-ಪದ್ಧತಿಗಳನ್ನಾಗಲೀ ಟೀಕಿಸಬಾರದು. "ಇದು ನಮ್ಮ ಸಂದೇಶವಲ್ಲ. ನಾವು ಕ್ರಿಸ್ತನನ್ನು ಮಾತ್ರ ಬೋಧಿಸುತ್ತೇವೆ - ನಮ್ಮ ಪಾಪಗಳ ನಿಮಿತ್ತ ಶಿಲುಬೆಗೆ ಹಾಕಲ್ಪಟ್ಟು, ಸತ್ತವರೊಳಗಿನಿಂದ ಎಬ್ಬಿಸಲ್ಪಟ್ಟು, ಈ ದಿನ ಪರಲೋಕದಲ್ಲಿ ಜೀವಿತನಾಗಿರುವಂತ ಮತ್ತು ಈ ಲೋಕದ ನ್ಯಾಯತೀರ್ಪು ಮಾಡುವುದಕ್ಕಾಗಿ ಬೇಗನೆ ಹಿಂದಿರುಗಿ ಬರಲಿರುವ ಯೇಸು ಕ್ರಿಸ್ತನನ್ನು ಬೋಧಿಸುತ್ತೇವೆ." ಇದೇ ನಮ್ಮ ಸಂದೇಶವಾಗಿದೆ - ಮತ್ತು ಎಲ್ಲರೂ ತಮ್ಮ ಪಾಪಗಳಿಂದ ತಿರುಗಿಕೊಂಡು, ಕ್ರಿಸ್ತನನ್ನು ತಮ್ಮ ಕರ್ತನಾಗಿಯೂ ರಕ್ಷಕನಾಗಿಯೂ ಸ್ವೀಕರಿಸುವಂತೆ ನಾವು ಕರೆ ನೀಡುತ್ತೇವೆ. ಆದರೆ ಇದಕ್ಕಾಗಿ ನಾವು ಯಾರನ್ನೂ ಬಲಾತ್ಕಾರಪಡಿಸುವುದಿಲ್ಲ. ಇದೇ ನಮ್ಮ ಸಂದೇಶವಾಗಿರಬೇಕು - ಚಿಕ್ಕ ಮಕ್ಕಳಿಗೂ ಇದನ್ನೇ ಬೋಧಿಸಬೇಕು. ಅವರು ಕ್ರಿಸ್ತನನ್ನು ಸ್ವೀಕರಿಸುವಂತೆ ನಾವು ಅವರನ್ನು ಆಹ್ವಾನಿಸಬೇಕು, ಆದರೆ ಒತ್ತಾಯಿಸುವುದು ಸರಿಯಲ್ಲ. ದೇವರು ಎಲ್ಲರಿಗೂ ಸ್ವಾತಂತ್ರ್ಯವನ್ನು ಕೊಡುತ್ತಾರೆ. ನಾವು ಸಹ ಜನರಿಗೆ ಸ್ವಾತಂತ್ರ್ಯವನ್ನು ನೀಡಬೇಕು. ಜನರು ತಮ್ಮ ಜೀವಿತದಲ್ಲಿ ಕ್ರಿಸ್ತನನ್ನು ಯಥಾರ್ಥವಾಗಿ ಅಂಗೀಕರಿಸಿದಾಗ, ಕ್ರಮೇಣವಾಗಿ ಅವರ ಜೀವಿತದಿಂದ ಇತರ ಎಲ್ಲಾ ಸುಳ್ಳು ಸಂಗತಿಗಳು ಒಂದೊಂದಾಗಿ ಅಳಿಸಲ್ಪಡುತ್ತವೆ, ಯಾಕೆಂದರೆ ಪವಿತ್ರಾತ್ಮನು ಅವರಿಗೆ ಪಾಪದ ಮನವರಿಕೆಯನ್ನು ನೀಡುತ್ತಾನೆ.

ಕ್ರಿಸ್ತನೊಬ್ಬನೇ ಈ ಲೋಕದ ರಕ್ಷಕನೆಂದು ಸಾರುವುದಕ್ಕಾಗಿ ನಾವು ಕರೆಯಲ್ಪಟ್ಟಿದ್ದೇವೆ. ನಾವು ಪಾಪದ ವಿರುದ್ಧವಾಗಿ ಧ್ವನಿಯೆತ್ತಬೇಕು ಮತ್ತು ನಮ್ಮನ್ನು ನಾವೇ ನ್ಯಾಯತೀರ್ಪು ಮಾಡಿಕೊಳ್ಳಬೇಕು ಮತ್ತು ನಮ್ಮ ಮಧ್ಯದಲ್ಲಿರುವ ಕಪಟತನವನ್ನು ಮೊದಲು ಬಯಲು ಮಾಡಬೇಕು. ಕೆಲವೊಮ್ಮೆ ಉತ್ಸಾಹಭರಿತರಾಗಿದ್ದರೂ ಅವಿವೇಕಿಗಳಾಗಿರುವ ಅನೇಕ ಸಹೋದರ ಸಹೋದರಿಯರು ತಮ್ಮ ಸಂಭಾಷಣೆಗಳಲ್ಲಿ ಮತ್ತು ಪ್ರಾರ್ಥನೆಗಳಲ್ಲಿ ಅನಾವಶ್ಯಕವಾಗಿ ಅನ್ಯಧರ್ಮಗಳ ಹೆಸರನ್ನು ಉಲ್ಲೇಖಿಸುತ್ತಾರೆ. ಇಂತಹ ಜನರು ತಮ್ಮ ಮಾತಿನ ಬಗ್ಗೆ ಕಾಳಜಿವಹಿಸುವಂತೆ ನಾವು ಅವರನ್ನು ಎಚ್ಚರಿಸಬೇಕು. ಯಾವುದೇ ನಿರ್ದಿಷ್ಟ ಧರ್ಮದ ಹೆಸರನ್ನು ಎತ್ತುವುದಕ್ಕಿಂತ "ಕ್ರೈಸ್ತರಲ್ಲದವರು ಅಥವಾ ಅನ್ಯಧಾರ್ಮಿಕರು" ಎಂದು ಹೇಳುವುದು ಉತ್ತಮ. ’ದೇವರು ತನ್ನ ಮಗನ ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು ಆತನನ್ನು ಕಳುಹಿಸಿಕೊಟ್ಟನೇ ಹೊರತು, ತೀರ್ಪು ಮಾಡಲಿಕ್ಕಾಗಿ ಕಳುಹಿಸಲಿಲ್ಲ" (ಯೋಹಾನನು 3:17). ಯೇಸುವಿನ ಮಾದರಿಯನ್ನು ಹಿಂಬಾಲಿಸುವುದು ನಮಗೆ ಕೊಡಲ್ಪಟ್ಟಿರುವ ಕರೆಯಾಗಿದೆ; ಹಾಗಿರುವಾಗ ನಾವು ಇತರರನ್ನು ರಕ್ಷಿಸಲು ಉತ್ಸುಕರಾಗಿರಬೇಕು, ಅವರನ್ನು ತೀರ್ಪು ಮಾಡುವುದಕ್ಕೆ ಅಲ್ಲ.