WFTW Body: 

ಚಿಕ್ಕ ಮಕ್ಕಳಂತೆ ಇರುವವರಿಗೆ ಪ್ರಾರ್ಥನೆ ಮಾಡುವುದು ಬಹಳ ಸುಲಭ, ಏಕೆಂದರೆ ದೇವರ ಮುಂದೆ ನಮ್ಮ ಅಸಹಾಯಕತೆ ಮತ್ತು ನಿರ್ಬಲತೆಯನ್ನು ಒಪ್ಪಿಕೊಳ್ಳುವುದೇ ಪ್ರಾರ್ಥನೆಯಾಗಿದೆ. ಚತುರ ವಯಸ್ಕರಿಗೆ ಇದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತದೆ. ನಾವು ಚಿಕ್ಕ ಮಕ್ಕಳಂತೆ ಇರಬೇಕೆಂದು ಯೇಸುವು ಹೇಳಲು ಇದೇ ಕಾರಣವಾಗಿತ್ತು. ನಾವು ನಮ್ಮ ವಿಚಾರ ಶಕ್ತಿ ಮತ್ತು ನಮ್ಮ ಬುದ್ಧಿವಂತಿಕೆಯನ್ನು ಎಷ್ಟು ಹೆಚ್ಚಾಗಿ ಆತುಕೊಳ್ಳುತ್ತೇವೋ, ನಮ್ಮ ಪ್ರಾರ್ಥನೆಯು ಅದೇ ಪ್ರಮಾಣದಲ್ಲಿ ಕುಗ್ಗುತ್ತದೆ ಮತ್ತು ದೇವರು ನಮಗೆ ಅರ್ಥವಾಗದ ರೀತಿಯಲ್ಲಿ ಏಕೆ ಕಾರ್ಯ ಸಾಧಿಸುತ್ತಾರೆ ಎಂದು ನಾವು ಅವರನ್ನು ಪ್ರಶ್ನಿಸುತ್ತೇವೆ.

ದೇವರು ನಮ್ಮಿಂದ ಬಯಸುವ ವಿಧೇಯತೆ "ತಾರ್ಕಿಕವಾದ (ವಿಚಾರ ಶಕ್ತಿಯ ಮೂಲಕ ಪಡೆಯುವ) ವಿಧೇಯತೆ"ಯಲ್ಲ, ಆದರೆ "ನಂಬಿಕೆಯ ವಿಧೇಯತೆ" ಆಗಿರುತ್ತದೆ (ರೋಮಾ. 1:5). ದೇವರು ಆದಾಮನಿಗೆ ಒಳ್ಳೇದರ ಮತ್ತು ಕೆಟ್ಟದ್ದರ ತಿಳುವಳಿಕೆಯನ್ನು ಉಂಟುಮಾಡುವ ಮರದ ಹಣ್ಣನ್ನು ತಿನ್ನಬಾರದೆಂದು ಏಕೆ ಹೇಳಿದರೆಂದು ಅವರು ವಿವರಿಸಿ ಹೇಳಲಿಲ್ಲ. ಆದಾಮನಿಗೆ ದೇವರು ತನ್ನನ್ನು ಪ್ರೀತಿಸುತ್ತಾರೆ ಮತ್ತು ಅವರ ಆಜ್ಞೆಗಳು (ಅವುಗಳ ಉದ್ದೇಶ ಅರ್ಥವಾಗದಿದ್ದರೂ ಕೂಡ) ತನಗೆ ಅತ್ಯುತ್ತಮವಾದವುಗಳು ಎಂದು ತಿಳಿದಿದ್ದರೆ ಸಾಕಿತ್ತು. "ಪೂರ್ಣಮನಸ್ಸಿನಿಂದ ಕರ್ತನಲ್ಲಿ ಭರವಸವಿಡು, ಸ್ವಬುದ್ಧಿಯನ್ನೇ ಆಧಾರ ಮಾಡಿಕೊಳ್ಳಬೇಡ" (ಜ್ಞಾನೋಕ್ತಿಗಳು 3:5). ಆದುದರಿಂದ ಆದಾಮನ ವಿಫಲತೆಯು, ಪ್ರಾಥಮಿಕವಾಗಿ ದೇವರ ಪ್ರೀತಿ ಮತ್ತು ಅವರ ವಿವೇಕದಲ್ಲಿ ನಂಬಿಕೆಯಿಲ್ಲದ ವಿಫಲತೆಯಾಗಿತ್ತು. ನಾವು ಕೂಡ ಹೀಗೆಯೇ ಸೋಲುತ್ತೇವೆ.

ದೇವರು ನಮ್ಮನ್ನು ಅತೀ ಹೆಚ್ಚಾಗಿ ಪ್ರೀತಿಸುತ್ತಾರೆ ಮತ್ತು ನಮಗೆ ಯಾವುದು ಬಹಳ ಒಳ್ಳೆಯದೆಂದು - ನಮಗಿಂತಲೂ ಎಷ್ಟೋ ಹೆಚ್ಚಾಗಿ - ಅವರಿಗೆ ತಿಳಿದಿದೆಯೆಂದೂ ಮತ್ತು ಸರ್ವಶಕ್ತರಾದ ದೇವರು ಈ ಲೋಕದ ಎಲ್ಲಾ ಆಗುಹೋಗುಗಳನ್ನು ತಮ್ಮ ಹತೋಟಿಯಲ್ಲಿ ಇರಿಸಿಕೊಳ್ಳುತ್ತಾರೆಂದೂ ನಾವು ನಂಬಿದಾಗ, ನಾವು ಸಂತೋಷದಿಂದ ಅವರ ಪ್ರತಿಯೊಂದು ಆಜ್ಞೆಗೆ ವಿಧೇಯರಾಗುತ್ತೇವೆ, ಮತ್ತು ನಮ್ಮ ಜೀವಿತದ ಎಲ್ಲಾ ಸಂಗತಿಗಳನ್ನು ಅವರಿಗೆ ಒಪ್ಪಿಸಿಕೊಟ್ಟು, ಇನ್ನು ಮುಂದೆ ಅವರ ಚಿತ್ತವನ್ನೇ ನೆರವೇರಿಸಲು ಸಿದ್ಧರಾಗುತ್ತೇವೆ, ಮತ್ತು ನಮಗೆ ತಕ್ಷಣ ಉತ್ತರ ಸಿಗದಿದ್ದರೂ ಸಹ ಪ್ರಾರ್ಥಿಸುವುದನ್ನು ನಾವು ನಿಲ್ಲಿಸುವುದಿಲ್ಲ, ಮತ್ತು ಅವರು ನಮಗಾಗಿ ಸಂಕಲ್ಪಿಸಿರುವ ಎಲ್ಲಾ ಸಂಗತಿಗಳನ್ನು ಸ್ವೀಕರಿಸಿ, ನಾವು ಅಪನಂಬಿಕೆಯಿಂದ ಅವರನ್ನು ಪ್ರಶ್ನಿಸುವುದಿಲ್ಲ. ದೇವರ ಜ್ಞಾನ, ಪ್ರೀತಿ ಮತ್ತು ಅವರ ಬಲದಲ್ಲಿ ನಮಗೆ ನಂಬಿಕೆ ಇಲ್ಲದಿದ್ದರೆ, ನಾವು ಈ ಮೇಲಿನ ಯಾವುದನ್ನೂ ಮಾಡುವುದಿಲ್ಲ.

ನಾವು ಚಿಕ್ಕ ಮಕ್ಕಳ ಹಾಗಿದ್ದರೆ, ನಾವು ಸರಳವಾದ ನಂಬಿಕೆಯೊಂದಿಗೆ ದೇವರ ಬಳಿಗೆ ಬರುತ್ತೇವೆ ಮತ್ತು ಸುಲಭವಾಗಿ ದೇವರಾತ್ಮನ ಸಂಪೂರ್ಣತೆಯನ್ನು ನಮ್ಮ ಹೃದಯಗಳಲ್ಲಿ ಅನುಭವಿಸುತ್ತೇವೆ (ಲೂಕ. 11:13). ನಾವು ಇದಕ್ಕಾಗಿ ಶುದ್ಧ ಮನಸ್ಸಾಕ್ಷಿಯೊಂದಿಗೆ (ನಮಗೆ ತಿಳಿದಿರುವ ಪ್ರತಿಯೊಂದು ಪಾಪವನ್ನು ದೇವರಿಗೂ ಮತ್ತು ಮನುಷ್ಯನಿಗೂ ಅರಿಕೆ ಮಾಡಿಕೊಂಡು), ಪವಿತ್ರಾತ್ಮನ ತುಂಬುವಿಕೆಗಾಗಿ ಹಸಿವು ಮತ್ತು ಬಾಯಾರಿಕೆಯಿಂದ ಹಂಬಲಿಸಿ, ನಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ನಮಗೆ ತಿಳಿದಿರುವಷ್ಟು ಮಟ್ಟಿಗೆ ಅವರಿಗೆ ಸಂಪೂರ್ಣ ವಿಧೇಯರಾಗುವುದು, ಮತ್ತು ನಮ್ಮ ಪ್ರೀತಿಯುಳ್ಳ ತಂದೆಯು ನಾವು ಬೇಡಿಕೊಂಡಿರುವ ಪ್ರತಿಯೊಂದನ್ನೂ ನಿಶ್ಚಯವಾಗಿ ದಯಪಾಲಿಸುತ್ತಾರೆ ಎಂಬ ನಂಬಿಕೆ ಇರಿಸಿಕೊಳ್ಳುವುದು, ಇಷ್ಟು ಮಾತ್ರ ನಮ್ಮಲ್ಲಿ ಇರಬೇಕಾದ ಸಂಗತಿಗಳಾಗಿವೆ. ತರುವಾಯ ನಾವು ದೇವರನ್ನು ಬೇಡಿಕೊಳ್ಳಬಹುದು - ಆಗ ತಕ್ಷಣ ಯಾವುದೇ ಅನಿಸಿಕೆಗಳು ಅಥವಾ ಅನುಭವಗಳು ಉಂಟಾಗದಿದ್ದರೂ, ದೇವರು ನಮ್ಮ ಬೇಡಿಕೆಯನ್ನು ದಯಪಾಲಿಸಿದ್ದಾರೆ ಎಂದು ನಾವು ನಂಬಬಹುದು. ಕಣ್ಣಿಗೆ ಕಾಣಿಸುವಂತೆ ಕಾರ್ಯಸಿದ್ಧಿಯಾಗಲು ಸಮಯ ಹಿಡಿಯುತ್ತದೆ. ಹಾಗಾಗಿ ನಾವು ಚಿಕ್ಕ ಮಕ್ಕಳಂತೆ ಇರಬೇಕು.

ನಾವು ನಂಬಿಕೆಯಿಂದ ’ರಕ್ಷಣೆಯನ್ನು’ ಪಡೆದುಕೊಂಡ ಹಾಗೆ ’ಪಾಪದ ಮೇಲೆ ಜಯವನ್ನು’ ಪಡೆದುಕೊಳ್ಳಲು ಸಾಧ್ಯವೇ?

'1 ಯೋಹಾ 5:4'ರಲ್ಲಿ ಹೇಳಿರುವ ಪ್ರಕಾರ, "ಲೋಕವನ್ನು ಜಯಿಸಿದಂಥದ್ದು ನಮ್ಮ ನಂಬಿಕೆಯೇ" - ಹಾಗಿದ್ದಲ್ಲಿ, "ಲೋಕ" ಎಂದರೆ ಯಾವುದೆಂದು ದೇವರ ವಾಕ್ಯವು ಈ ರೀತಿಯಾಗಿ ತೋರಿಸಿಕೊಡುತ್ತದೆ: "ಶರೀರದಾಶೆ, ಕಣ್ಣಿನಾಶೆ, ಬದುಕುಬಾಳಿನ ಡಂಬ"(1 ಯೋಹಾ 2:16). ಹಾಗಾದರೆ ಇದು ನಮಗೆ ಕಲಿಸುವುದು ಏನೆಂದರೆ, ನಂಬಿಕೆಯ ಮೂಲಕವೇ ಇವೆಲ್ಲಾ ವಿಷಯಗಳ ಮೇಲೆ ಜಯ ಸಾಧಿಸಬಹುದು. ಆ ನಂಬಿಕೆ ಹೇಗಿರಬೇಕು? ’ದೇವರ ಪರಿಪೂರ್ಣ ಪ್ರೀತಿ, ಹಾಗೂ ಅವರ ಶಕ್ತಿಯಲ್ಲಿ ಕದಲಿಸಲಾರದ ನಂಬಿಕೆಯ ಮೂಲಕ ನಮ್ಮ ಸಂಪೂರ್ಣ ವ್ಯಕ್ತಿತ್ವವು ದೇವರನ್ನೇ ಆಶ್ರಯಿಸುವುದು."’ಯೋಹಾನನು 1:12 ವಚನವು ಸ್ಪಷ್ಟವಾಗಿ ತಿಳಿಸಿರುವಂತೆ, ನಾವು ಏನನ್ನು ನಂಬುತ್ತೇವೊ ಅದನ್ನೇ ಪಡೆಯುವವರಾಗಿದ್ದೇವೆ. ’ಇದು ವಿಚಾರಶಕ್ತಿಯ ಮೂಲಕ ಪ್ರಾಪ್ತವಾಗುವ ನಂಬಿಕೆಯಲ್ಲ. ಹಾಗಾದರೆ ದೇವರಲ್ಲಿ ನಂಬಿಕೆಯಿಡುವುದು ಎಂದರೆ, ದೇವರ ಚಿತ್ತವೇ ನಾವು ನಡೆಯಬೇಕಾದ ಅತ್ಯುತ್ತಮ ಮಾರ್ಗವೆಂದು ಅದನ್ನು ಹೊಂದುವುದು (ಸ್ವೀಕರಿಸುವುದು). ನಾವು ನಮ್ಮ ಸ್ವೇಚ್ಛಾಮಾರ್ಗವನ್ನು ತ್ಯಜಿಸುವ ನಿರ್ಣಯವನ್ನು ಮಾಡುತ್ತೇವೆ. "ಶರೀರದ ಆಶಾಪಾಶಗಳನ್ನು ಶಿಲುಬೆಗೆ ಹಾಕುವುದು" (ಗಲಾ. 5:24) ಎಂಬ ಹೇಳಿಕೆಯ ಅರ್ಥ ಇದೇ ಆಗಿದೆ. ಇದನ್ನು ಕೈಗೊಳ್ಳಲು (ನಮ್ಮ ಸ್ವೇಚ್ಛೆಯನ್ನು ನಿರಾಕರಿಸಲು) ನಮಗೆ ಕೃಪೆಯ ಅವಶ್ಯಕತೆಯಿದೆ.

ದೇವರ ಮೇಲಿನ ನಂಬಿಕೆಯಿಂದಲೇ ಇವೆಲ್ಲವು ಪ್ರಾರಂಭವಾಗುತ್ತವೆ. ನಮ್ಮ ಬಾಳಿನ ಎಲ್ಲಾ ಕಾರ್ಯಗಳಿಗೆ ದೇವರ ಚಿತ್ತವೇ ಅತ್ಯುತ್ತಮವೆಂದು ನಾವು ನಂಬದೇ ಇದ್ದಲ್ಲಿ, ನಾವು ಸ್ವಂತ ಇಚ್ಛೆಯನ್ನು ಮರಣಕ್ಕೆ ಈಡಾಗಿಸಲು ಬಯಸುವುದೇ ಇಲ್ಲ. ಉದಾಹರಣೆಗೆ, ನಾವು ದೂರದರ್ಶನವನ್ನು ವೀಕ್ಷಿಸುವ ಸಂದರ್ಭವನ್ನು ತೆಗೆದುಕೊಳ್ಳಿ. ಆ ಸಂದರ್ಭದಲ್ಲಿ ಯೇಸುವು ಏನು ಮಾಡುತ್ತಿದ್ದರೋ, ಆ ಆಯ್ಕೆಯೇ ಅತ್ಯುತ್ತಮವೆಂದು ನೀವು ನಂಬುತ್ತೀರೋ - ಅಂದರೆ, ಅನಾವಶ್ಯಕವಾದಂತ ಅಥವಾ ಲೈಂಗಿಕವಾಗಿ ಉದ್ರೇಕಿಸುವಂತ ಕಾರ್ಯಕ್ರಮಗಳನ್ನು ಮತ್ತು ಚಲನಚಿತ್ರಗಳನ್ನು ನೀವು ನೋಡದೇ ಇರುತ್ತೀರೋ? ಅಥವಾ ನಿಮ್ಮ ಕಾಮದಾಸೆಗಳನ್ನು ಸಂತೋಷಪಡಿಸುವ ಕಾರ್ಯಕ್ರಮಗಳು ಉತ್ತಮವೆಂದು ನೀವು ನಂಬುತ್ತೀರೋ? ದೇವರ ಚಿತ್ತ ನಿಮ್ಮ ಬಾಳಿನಲ್ಲಿ ನಿಮಗೆ ಅತ್ಯುತ್ತಮವೆಂದು ನೀವು ನಂಬುತ್ತೀರೋ ಇಲ್ಲವೋ ಎಂಬುದರ ಮೇಲೆ ಅದು ಅವಲಂಬಿಸಿದೆ. ನಂಬಿಕೆಯಿಲ್ಲದೆ ಜಯಿಸುವುದು ಅಸಾಧ್ಯವಾಗಿದೆ.

ಸದಾಕಾಲವೂ ಯೇಸುವನ್ನು ನೆನಸಿಕೊಂಡು ಅವರ ಉದಾಹರಣೆಯನ್ನು ಅನುಸರಿಸಿರಿ. ನಿಮ್ಮ ಮಾಂಸವು (ಶರೀರವು) ಬಲಹೀನವೆಂದು ನೀವು ಎಂದೂ ಮರೆಯಬಾರದು. ಯೇಸುವು ತನ್ನ ತಂದೆಯ ಬಳಿ ನಿರಂತರವಾಗಿ ಕೂಗಿಕೊಂಡು ಸಹಾಯಕ್ಕಾಗಿ ಪ್ರಾರ್ಥಿಸಿದರು. ನೀವೂ ಸಹ ಅದನ್ನೇ ಮಾಡಬೇಕು. ನೀವು ನೆನಪಿಟ್ಟುಕೊಳ್ಳಬೇಕಾಗಿರುವುದೇನೆಂದರೆ, ದಾಳಿ ಮಾಡಲ್ಪಟ್ಟಾಗ ಯೇಸುವಿನ ನಾಮವು ಬಲವಾದ ಬುರುಜು ಅಥವಾ ಕೋಟೆಯಾಗಿದೆ (ಜ್ಞಾನೋಕ್ತಿಗಳು 18:10). ಆ ಹೆಸರಿನಲ್ಲಿ ನೀವು ನಿಮ್ಮ ತಂದೆಯ ಬಳಿ ಏನನ್ನು ಕೇಳಿದರೂ, ನೀವು ಯಾವುದೇ ತೊಂದರೆಯನ್ನು ಎದುರಿಸುವಾಗಲೂ, ನೀವು ಈ ಭೂಮಿಯ ಯಾವುದೇ ಮೂಲೆಯಲ್ಲಿದ್ದರೂ, ಯಾವಾಗಲೂ ಉತ್ತರ ಸಿಗುತ್ತದೆ.