WFTW Body: 

ಯೇಸು ತನ್ನ ಅಪೊಸ್ತಲರಾಗುವುದಕ್ಕಾಗಿ ಬಹಳ ಎಳೆವಯಸ್ಸಿನ ಯುವಕರನ್ನು ಕರೆದರು. ಅಪೊಸ್ತಲರಾಗುವುದಕ್ಕೆ ಸೂಕ್ತ ವಯಸ್ಸು 60 ಅಥವಾ 65 ಎಂಬುದಾಗಿ ಅನೇಕ ಜನರ ಅಭಿಪ್ರಾಯವಾಗಿದೆ. ಆದರೆ ಯೇಸು ತನ್ನ ಮೊದಲ ಅಪೊಸ್ತಲರಾಗುವುದಕ್ಕಾಗಿ 30 ವಯಸ್ಸಿನ ಯುವಕರನ್ನು ಆರಿಸಿಕೊಂಡರು. ಸ್ವತಃ ಯೇಸು ಮರಣ ಹೊಂದಿದಾಗ ಕೇವಲ 33 1/2 ವಯಸ್ಸಿನವರಾಗಿದ್ದರು ಮತ್ತು ಆತನ ಎಲ್ಲಾ ಅಪೊಸ್ತಲರು ಆತನಿಗಿಂತ ಚಿಕ್ಕ ವಯಸ್ಸಿನವರಾಗಿದ್ದರು - ಏಕೆಂದರೆ, ಯೆಹೂದ್ಯರ "ರಬ್ಬಿ"ಗಳು (ಗುರುಗಳು) ಯಾವಾಗಲೂ ತಮಗಿಂತ ಚಿಕ್ಕ ವಯಸ್ಸಿನವರನ್ನು ಶಿಷ್ಯರಾಗಿ ಆರಿಸಿಕೊಳ್ಳುತ್ತಿದ್ದರೆಂದು ನಮಗೆ ತಿಳಿದಿದೆ. ಯೋಹಾನನಿಗೆ ಪಂಚಾಶತ್ತಮ ದಿನದಂದು ವಯಸ್ಸು ಕೇವಲ 30 ಇದ್ದಿರಬಹುದು.

ಯೇಸು ಈ ಯೌವನಸ್ಥರನ್ನು ಕರೆದಾಗ, ಅವರು ಎಷ್ಟು ಅನುಭವವನ್ನು ಹೊಂದಿದ್ದರೆಂದು ನೋಡದೆ, ಅವರು ಪೂರ್ಣ ಹೃದಯವುಳ್ಳವರಾಗಿದ್ದಾರೆಯೇ ಎಂಬುದನ್ನು ಮಾತ್ರ ನೋಡಿದರು. ಈ ಯುವಕರು ಪಂಚಾಶತ್ತಮ ದಿನದಂದು ಪವಿತ್ರಾತ್ಮನಿಂದ ಅಭಿಷೇಕಿಸಲ್ಪಟ್ಟರು ಮತ್ತು ದೇವರು ಮಹತ್ಕಾರ್ಯದ ಮೂಲಕ ಅವರನ್ನು ರ‍್ತನ ಅಪೊಸ್ತಲರನ್ನಾಗಿ ಸಜ್ಜುಗೊಳಿಸಿದರು. ಆ ಯೌವನಸ್ಥರು ಅನುಭವ ಮತ್ತು ಪರಿಪಕ್ವತೆಯನ್ನು ಆ ಮೇಲೆ ಪಡೆದುಕೊಂಡರು. ತಿಮೊಥೆಯನೂ ಸಹ ಬಹಳ ಎಳೆಯ ಯುವಕನಾಗಿದ್ದಾಗಲೇ ಒಬ್ಬ ಅಪೊಸ್ತಲನಾದನು (1 ತಿಮೊ 4:12).

ಈ ದಿನವೂ ಸಹ ದೇವರು ತನ್ನ ಸೇವೆಗೆ ಯೌವನಸ್ಥರನ್ನು ಕರೆಯುತ್ತಾರೆ. ಆದರೆ ಯೌವನಸ್ಥರು ದೀನತೆಯನ್ನು ಕಾಪಾಡಿಕೊಳ್ಳಬೇಕು. ದೇವರಿಂದ ಕರೆಯಲ್ಪಟ್ಟ ಪ್ರತಿಯೊಬ್ಬ ಯೌವನಸ್ಥನಿಗೆ ಎದುರಾಗುವ ದೊಡ್ಡ ಅಪಾಯ ಯಾವುದೆಂದರೆ, ಅದು ’ಆತ್ಮಿಕ ಅಹಂಕಾರ’ವಾಗಿದೆ.

ದೇವರ ಸೇವಕರಾಗಿ ದೇವರಿಂದ ಕರೆಯಲ್ಪಟ್ಟ ಯುವಕರು, ತಮ್ಮ ಕರೆಯಿಂದ ಹಿಂಜಾರಿ ದೂರ ಸರಿದ ಅನೇಕ ದುರಂತ ಕತೆಗಳನ್ನು ನಾನು ಭಾರತದಲ್ಲಿ ನೋಡಿದ್ದೇನೆ. ಕೆಲವು ಪ್ರಕರಣಗಳಲ್ಲಿ, ದೇವರು ಯಾವುದೋ ರೀತಿಯಲ್ಲಿ ಅವರನ್ನು ಉಪಯೋಗಿಸಿಕೊಳ್ಳಲು ಪ್ರಾರಂಭಿಸಿದ ಕೂಡಲೇ ಅವರು ತಮ್ಮಲ್ಲಿ ತಾವೇ ಹೆಮ್ಮೆ ಪಟ್ಟು ಉಬ್ಬಿಕೊಂಡಾಗ, ದೇವರು ಅವರನ್ನು ಪಕ್ಕಕ್ಕೆ ಸರಿಸಬೇಕಾಯಿತು, ಏಕೆಂದರೆ ದೇವರಿಗೆ ಸಲ್ಲಬೇಕಾದ ಮಹಿಮೆಯನ್ನು ಅವರು ತಾವೇ ಪಡೆದುಕೊಂಡರು. ಇನ್ನು ಕೆಲವು ಪ್ರಕರಣಗಳಲ್ಲಿ, ಅವರು ಲೌಕಿಕ ಸುಖಸೌರ‍್ಯಗಳನ್ನು ಬಯಸಿದರು, ಮತ್ತು ಪಾಶ್ಚಿಮಾತ್ಯ ಕ್ರೈಸ್ತ ಸಂಸ್ಥೆಗಳಿಂದ ಉತ್ತಮ ಸಂಬಳದ ಹುದ್ದೆಯನ್ನು ಪಡೆದು ಕೆಲಸಗಾರರಾಗಿ ಕೊನೆಗೊಂಡರು. ಹೀಗೆ ಅವರು ಬಿಳಾಮನಂತೆ ತಪ್ಪು ದಾರಿಯಲ್ಲಿ ಸಾಗಿದರು. ಇನ್ನೂ ಕೆಲವು ಪ್ರಕರಣಗಳಲ್ಲಿ, ಸಂಸೋನನು ಸುಂದರಿಯಾದ ದೆಲೀಲಳ ಆಕರ್ಷಣೆಯಿಂದಾಗಿ ತನ್ನ ಅಭಿಷೇಕವನ್ನು ಕಳೆದುಕೊಂಡ ಹಾಗೆ, ಯೌವನಸ್ಥರು ಸುಂದರಿಯರ ಆಕರ್ಷಣೆಯಿಂದ ತಮ್ಮ ಅಭಿಷೇಕವನ್ನು ಕಳೆದುಕೊಂಡರು. ಹೀಗೆ ಈ ಉತ್ತಮ ಯೌವನಸ್ಥರು, ಮನುಷ್ಯರ ಗೌರವ ಮತ್ತು ಸಂಪತ್ತಿಗಾಗಿ ಅಥವಾ ಸುಂದರ ಯುವತಿಯರ ಮೇಲಿನ ವ್ಯಾಮೋಹದ ಸಲುವಾಗಿ, ದೇವರ ಕರೆಯನ್ನು ಮತ್ತು ತಮ್ಮ ಅಭಿಷೇಕವನ್ನು ಬಲಿ ಕೊಟ್ಟರು.

ಇಂದು ಭಾರತದಲ್ಲಿ ದೇವರ ವಾಕ್ಯವನ್ನು ನಿರ್ಭಯವಾಗಿ ಘೋಷಿಸುವಂತ, ಮತ್ತು ಹಣಕ್ಕಾಗಲೀ, ಅಥವಾ ಸುಂದರ ಸ್ತ್ರೀಯರ ವ್ಯಾಮೋಹ ಅಥವಾ ಜನರ ಮೆಚ್ಚುಗೆಗಾಗಲೀ ಹಾತೊರೆಯದೇ ಇರುವಂತ ದೇವರ ಪ್ರವಾದಿಗಳು ಎಲ್ಲಿದ್ದಾರೆ? ಇಂಥವರು ಸಿಗುವುದು ಅಪರೂಪ. ದೇವರಿಂದ ಇದಕ್ಕಾಗಿ ಕರೆಯಲ್ಪಟ್ಟವರಲ್ಲಿ ಹೆಚ್ಚಿನವರು ನಡುದಾರಿಯಲ್ಲೇ ಎಡವಿ ಬಿದ್ದಿದ್ದಾರೆ.

ಮುರಿಯಲ್ಪಟ್ಟ ಮತ್ತು ಮಾನಸಾಂತರಪಟ್ಟ ಆತ್ಮವೇ ದೇವರಿಗೆ ಇಷ್ಟಯಜ್ಞವಾಗಿದೆ. ನಾವು ಮುರಿಯಲ್ಪಟ್ಟು, ದೀನ ಮನಸ್ಸನ್ನು ಹೊಂದಿದ್ದರೆ, ದೇವರು ಸದಾ ನಮ್ಮನ್ನು ಉಪಯೋಗಿಸಿಕೊಳ್ಳುವರು. ಆದರೆ ನಾವು ಪಡೆದಿರುವ ಶ್ರೇಷ್ಠ ಪ್ರಕಟನೆಗಳಿಂದಾಗಿ, ಅಥವಾ ದೇವರು ನಮಗೆ ಕೊಟ್ಟಿರುವ ಅಪಾರ ಸೇವೆಯ ನಿಮಿತ್ತವಾಗಿ, ನಾವು ಗಣ್ಯ ವ್ಯಕ್ತಿಗಳಾಗಿದ್ದೇವೆ ಎಂದು ಹಿಗ್ಗಿದರೆ, ನಾವು ಆ ಕ್ಷಣದಲ್ಲೇ ಹಿಂಜಾರಿ ಬೀಳಲು ಪ್ರಾರಂಭಿಸುತ್ತೇವೆ. ಆಗ ದೇವರು ನಮ್ಮನ್ನು ಪಕ್ಕಕ್ಕೆ ತಳ್ಳುತ್ತಾರೆ.

ನಾವು ಯಾವುದೋ ಒಂದು ಸಭೆಯಲ್ಲಿ ಹಿರಿಯರು ಎಂಬ ಸ್ಥಾನವನ್ನು ಇನ್ನೂ ಉಳಿಸಿಕೊಳ್ಳಬಹುದು. ಆದರೆ ನಾವು ಸಮಯವನ್ನು ಹಾಳು ಮಾಡಿದೆವೆಂದು ನಮಗೆ ನಿತ್ಯತ್ವದಲ್ಲಿ ಮನವರಿಕೆಯಾಗುತ್ತದೆ.