ಬರೆದಿರುವವರು :   ಝ್ಯಾಕ್ ಪೂನನ್
WFTW Body: 

ಅಬ್ರಹಾಮನು ತನ್ನ ಜೀವಿತವನ್ನು ಮುಗಿಸುವ ಮೊದಲು, ಆತನಿಗೆ ತನ್ನ ಮಗನ ಬಗ್ಗೆ ಕಾಳಜಿಯಿರುವುದನ್ನು ಆದಿಕಾಂಡ 24ರಲ್ಲಿ ನಾವು ಓದಬಹುದು. ಅಬ್ರಹಾಮನು ತನ್ನ ಮಗನಿಗಾಗಿ ವಧುವನ್ನು ಹುಡಕಲು, ಸೇವಕನನ್ನು ಕಳುಹಿಸಿದನು. ಸತ್ಯವೇದದಲ್ಲಿ ಅನೇಕ ಮದುವೆಗಳು ಉಲ್ಲೇಖಿಸಲ್ಪಟ್ಟಿವೆ. ಆದರೆ ಕೇವಲ ಎರಡು ಮದುವೆಗಳನ್ನು ಮಾತ್ರ ದೇವರೇ ಏರ್ಪಡಿಸಿದರು ಎಂಬುದಾಗಿ ನಾವು ಸ್ಪಷ್ಟವಾಗಿ ನೋಡುತ್ತೇವೆ. ಒಂದು ಆದಾಮನದು. ಹವ್ವಳು ಖಂಡಿತವಾಗಿ ದೇವರ ಆಯ್ಕೆಯಾಗಿದ್ದಳು. ಮತ್ತೊಂದು ಇಸಾಕನ ಮದುವೆ. ರೆಬೆಕ್ಕಳೂ ಸಹ ದೇವರ ಆಯ್ಕೆಯಾಗಿದ್ದಳು. ಜನರು ನನ್ನನ್ನು ಹೀಗೆ ಕೇಳುತ್ತಾರೆ - "ನಿಶ್ಚಯಿಸಿದಂತಹ ಮದುವೆಗಳಲ್ಲಿ ನಿಮಗೆ ನಂಬಿಕೆಯಿದೆಯೇ?" ಎಂಬುದಾಗಿ. ನಾನು ಅವರಿಗೆ "ಹೌದು" ಎಂಬುದಾಗಿ ಹೇಳುತ್ತೇನೆ. ದೇವರು ನಿಶ್ಚಯಿಸಿದ ಮದುವೆಗಳಲ್ಲಿ ನನಗೆ ನಂಬಿಕೆಯಿದೆ. ದೇವರು, ಮದುವೆಯನ್ನು ಪೋಷಕರ ಮೂಲಕ ಏರ್ಪಡಿಸಬಹುದು (ಇಸಾಕನಲ್ಲಿ ಆದ ಹಾಗೆ) ಅಥವಾ ಪೋಷಕರ ಹೊರತಾಗಿಯೂ ಏರ್ಪಡಿಸಬಹುದು (ಆದಾಮನಲ್ಲಿ ಆದ ಹಾಗೆ). ಇಲ್ಲಿ ಮುಖ್ಯವಾದ ವಿಷಯವೇನೆಂದರೆ, ದೇವರಿಂದ ನಡೆಸಲ್ಪಡುವುದಾಗಿದೆ.

ನೀನೊಬ್ಬ ದೈವಿಕ ತಂದೆಯಾಗಿದ್ದರೆ, ನೀನು ನಿನ್ನ ಮಕ್ಕಳ ಮದುವೆಯ ಬಗ್ಗೆ ಕಾಳಜಿವಹಿಸುತ್ತೀಯ (ಚಿಂತಿಸುತ್ತೀಯ). ನೀನೊಬ್ಬ ಯೌವನಸ್ಥನಾಗಿದ್ದು, ನಿನಗೊಬ್ಬ ದೈವಿಕ ತಂದೆ ಇದ್ದರೆ, ನಾನು ನಿನಗೆ ಹೇಳುವುದೇನೆಂದರೆ, ನೀನು ನಿನ್ನ ತಂದೆಯ ಸಲಹೆಯನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಬೇಕು. ಇಂತಹ ಒಬ್ಬ ತಂದೆಯು, ನೀನು ಮದುವೆಯಾಗಬಯಸುವವರನ್ನು "ಬೇಡ" ಎಂದು ಹೇಳಿದರೆ, ನೀನು ಸ್ವಲ್ಪ ಸಮಯ ಕಾಯು. ದೇವರು ನಿನ್ನನ್ನು ಇಲ್ಲಿ ಪರೀಕ್ಷಿಸುತ್ತಿರಬಹುದು. ನಿನ್ನ ತಂದೆಯು "ಬೇಡ" ಎನ್ನುವುದು ಸ್ವಲ್ಪ ಸಮಯಕ್ಕೆ ಮಾತ್ರವಿರಬಹುದು. ನಿನ್ನ ತಂದೆಯ ಸಲಹೆಯನ್ನು ಗೌರವಿಸುವುದಕ್ಕೆ ನಿನಗಿರುವ ಮನಸ್ಸನ್ನು ನೋಡಿದ ನಂತರ, ದೇವರು ನಿನಗೆ ತಾನೇ ಆರಿಸಿದಂತಹ ಸಂಗಾತಿಯನ್ನು ಕೊಡುತ್ತಾನೆ.

ಅಬ್ರಹಾಮನು ತನ್ನ ಮಗ ಇಸಾಕನಿಗೆ ವಧುವನ್ನು ಹುಡುಕಲು ತನ್ನ ಸೇವಕನನ್ನು ಕಳುಹಿಸುವುದು - ತಂದೆಯಾದ ದೇವರು ತನ್ನ ಮಗನಾದ ಯೇಸುಕ್ರಿಸ್ತನಿಗೆ ವಧುವನ್ನು ಹುಡುಕಲು ಪವಿತ್ರಾತ್ಮನನ್ನು ಈ ಲೋಕಕ್ಕೆ ಕಳುಹಿಸಿದ ಚಿತ್ರಣವಾಗಿದೆ. ಇಂದೂ ಭೂಲೋಕದಲ್ಲಿ ಸುವಾರ್ತೆ ಸಾರಲ್ಪಡುವಾಗ ಇದೇ ನಡೆಯುತ್ತದೆ. ಆ ಅಧ್ಯಾಯವನ್ನು ನೀವು ಓದಿದಾಗ, ಅನೇಕ ಹೋಲಿಕೆಗಳನ್ನು/ಚಿತ್ರಣಗಳನ್ನು ನೀವಲ್ಲಿ ನೋಡುತ್ತೀರಿ.

ಆ ಸೇವಕನು ಒಂದು ರೀತಿಯಲ್ಲಿ ಆಕೆಯನ್ನು ಪರೀಕ್ಷಿಸಿದ್ದು ಹೇಗೆಂದರೆ - ಆ ಹುಡುಗಿಯು ತನ್ನ ಒಂಟೆಗೆ ನೀರು ಕೊಡಲು ಮನಸ್ಸು ಮಾಡುವಳೋ ಎಂಬುದಾಗಿ. ನಿಮಗೆ ಗೊತ್ತಿರಬಹುದೇನೋ, ಒಂಟೆಗಳು ಬಹಳಷ್ಟು ನೀರನ್ನು ಕುಡಿಯುತ್ತವೆ. ಅಬ್ರಹಾಮನ ಸೇವಕನು ಬಯಸಿದ್ದೇನೆಂದರೆ - ಆಕೆಯು ತುಂಬಾ ದಯಾಳುವಾಗಿದ್ದು, ಕಠಿಣವಾಗಿ ಕೆಲಸ ಮಾಡುವ ಹುಡುಗಿಯಾಗಿರಬೇಕು ಎಂಬುದಾಗಿ. ರೆಬೆಕ್ಕಳು ಅಂತಹ ಹುಡುಗಿಯಾಗಿದ್ದಳು. ಹಾಗೂ ಆಕೆಯು ಸರಳವಾಗಿದ್ದಳು. ಆದಿಕಾಂಡ 24:16ರಲ್ಲಿ ಅದು ಸ್ಪಷ್ಟವಾಗಿದೆ. ಅದೇನೆಂದರೆ ಅಪರಿಚಿತ ಮನುಷ್ಯನನ್ನು ದಿಟ್ಟಿಸಿ ನೋಡುವುದರಲ್ಲಿ (ಅಬ್ರಹಾಮನ ಸೇವಕನು ಆ ಬಾವಿಯ ಹತ್ತಿರ ನಿಂತಿರುವಾಗ) ಆಕೆಗೆ ಆಸಕ್ತಿಯಿರಲಿಲ್ಲ. ಅಬ್ರಹಾಮನ ಸೇವಕನು ಒಂಟೆಗೆ ನೀರು ಕೊಡುವೆಯಾ ಎಂಬ ಕೋರಿಕೆಯನ್ನು ಮಾಡಿದಂತಹ ಸಂದರ್ಭದಲ್ಲಿ, ಆಕೆಯು ತನ್ನ ಕೊಡವನ್ನು ನೀರಿನಿಂದ ತುಂಬಿಸಿ, ಮನೆಗೆ ಹೊರಡುವುದಕ್ಕೆ ಸಿದ್ದವಾಗಿದ್ದಳು. ನಿನಗೆ ಈ ರೀತಿಯ ಹೆಂಡತಿಯ ಅವಶ್ಯಕತೆಯಿದೆ.

ಭೂಲೋಕದಲ್ಲಿಯೂ ಸಹ ಈ ರೀತಿಯ ವಧುವನ್ನೇ ತಂದೆಯು ಕ್ರಿಸ್ತನಿಗಾಗಿ ಎದುರು ನೋಡುತ್ತಿದ್ದಾನೆ. ತನ್ನ ಸಾರ್ವಭೌಮತ್ವದಲ್ಲಿ, ದೇವರು ಅಬ್ರಹಾಮನ ಸೇವಕನನ್ನು ಸರಿಯದ ವ್ಯಕ್ತಿಯಾದ ರೆಬೆಕ್ಕಳ ಕಡೆಗೆ ನಡೆಸಿದನು. ಆ ಸೇವಕನು ರೆಬೆಕ್ಕಳನ್ನು ಅತೀ ದೂರವಾದ 700 ಕಿ.ಮೀ ಗಳ ಅಪಾಯಕರವಾದ ಪ್ರಯಾಣಕ್ಕೆ ಕರೆದುಕೊಂಡು ಹೋದನು (ಬಹುಶ: ಅದು ಒಂದು ತಿಂಗಳ ಪ್ರಯಾಣವಾಗಿದ್ದಿರಬಹುದು - ಮೆಸೊಪೊಟಮೀಯದಿಂದ ಕಾನನ್ವರೆಗೆ). ಇದು ಭೂಲೋಕದಲ್ಲಿ ಕ್ರಿಸ್ತನ ವಧುವಾಗಿರುವ ನಮ್ಮ ಪ್ರಯಾಣದ ಚಿತ್ರಣವಾಗಿದೆ.

ಆ ದೂರದ ಪ್ರಯಾಣದ ಅವಧಿಯಲ್ಲಿ, ರೆಬೆಕ್ಕಳ ಜೊತೆ ಸೇವಕನು ಏನು ಮಾತಾಡಿದ್ದಿರಬಹುದೆಂದು ನೀವು ಯೋಚಿಸುತ್ತೀರಿ? ಆತನು ಇಸಾಕನ ಬಗ್ಗೆಯೇ ಮಾತಾಡಿದ್ದಿರಬಹುದು ಎಂದು ನಾನು ತಿಳಿದಿದ್ದೇನೆ. ಅದೇ ರೀತಿಯಾಗಿ, ಈ ದೂರದ ಪ್ರಯಾಣದಲ್ಲಿ ಪವಿತ್ರಾತ್ಮನು ನಮ್ಮೊಟ್ಟಿಗೆ ಏನನ್ನು ಮಾತನಾಡಲು ಬಯಸುತ್ತಾನೆ ಎಂಬುದಾಗಿ ನೀವು ಯೋಚಿಸುತ್ತೀರಿ? ಯೇಸುವಿನ ಬಗ್ಗೆ. ಸಿದ್ಧಾಂತಗಳ ಬಗ್ಗೆಯಲ್ಲ, ಪರಲೋಕದ ಬಗ್ಗೆಯಲ್ಲ. ಬದಲಾಗಿ, ಕರ್ತನಾದ ಯೇಸುವಿನ ಬಗ್ಗೆ. ಅದೆ ರೀತಿ, ರೆಬೆಕ್ಕಳು ಕೂಡ ಇಸಾಕನ ಬಗ್ಗೆ ಕೇಳಿಸಿಕೊಳ್ಳಲು (ತಿಳಿದುಕೊಳ್ಳಲು) ಕಾತುರದಿಂದಿದ್ದಳು ಎಂಬುದಾಗಿ ನಾನು ತಿಳಿದುಕೊಂಡಿದ್ದೇನೆ.

ಆತನನ್ನು ಮುಖಾಮುಖಿಯಾಗಿ ನೋಡುವವರೆಗೆ (ರೆಬೆಕ್ಕಳು ಇಸಾಕನನ್ನು ನೋಡಿದಂತೆ), ಈ ದೂರದ ಪ್ರಯಾಣದ ಅವಧಿಯಲ್ಲಿ ಪವಿತ್ರಾತ್ಮನ ಮೂಲಕ ನಾನು ನನ್ನ ಅದ್ಭುತಕರವಾದ ರಕ್ಷಕನ ಬಗ್ಗೆ ಹೆಚ್ಚೆಚ್ಚಾಗಿ ಅರಿತುಕೊಳ್ಳಲು (ತಿಳಿದುಕೊಳ್ಳಲು) ಬಯಸುತ್ತೇನೆ. ನಂತರ ಒಂದು ದಿನ, ರೆಬೆಕ್ಕಳ ರೀತಿ, ನಾನು ಸಹ ನನ್ನ ಕರ್ತನ ಹೆಂಡತಿಯಾಗಿ ಆತನ ಗುಡಾರವನ್ನು ಪ್ರವೇಶಿಸುತ್ತೇನೆ. ನೀವು ಈ ರೀತಿಯ ಬಯಕೆಯನ್ನು ಹೊಂದಿರುವಿರಾ?